Tag: ಮುನಿರಾಬಾದ್

  • ಹತ್ತಿರದಲ್ಲೇ ನಗರವಿದ್ದರೂ ಕೊರೊನಾ ನಿಯಂತ್ರಣ – ದೇಶದ ಗಮನ ಸೆಳೆದ ಮುನಿರಾಬಾದ್ ಗ್ರಾಮ

    ಹತ್ತಿರದಲ್ಲೇ ನಗರವಿದ್ದರೂ ಕೊರೊನಾ ನಿಯಂತ್ರಣ – ದೇಶದ ಗಮನ ಸೆಳೆದ ಮುನಿರಾಬಾದ್ ಗ್ರಾಮ

    ಕೊಪ್ಪಳ: ಮುನಿರಾಬಾದ್ ಗ್ರಾಮ ಪಂಚಾಯತ್ ಕೊರೊನಾ ಸಂದರ್ಭದಲ್ಲಿ ನಿಯಂತ್ರಣ, ಮುಂಜಾಗ್ರತಾ ಕ್ರಮಗಳಿಂದಾಗಿ ಕೇಂದ್ರ ಪಂಚಾಯತ್ ರಾಜ್ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದೆ.

    ಮಹಾಮಾರಿ ಕೊರೊನಾದಿಂದ ಗ್ರಾಮ ಗ್ರಾಮಗಳು ತತ್ತರಿಸಿ ಹೋಗಿವೆ. ಗ್ರಾಮಗಳಲ್ಲಿ ವಕ್ಕರಿಸಿದ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತಗಳು ಹರಸಾಹಸ ಪಟ್ಟವು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮ ಪಂಚಾಯತ್ ಕೊರೊನಾ ಸಂದರ್ಭದಲ್ಲಿ ನಿಯಂತ್ರಣ, ಮುಂಜಾಗ್ರತಾ ಕ್ರಮಗಳಿಂದಾಗಿ ಗಮನ ಸೆಳೆದಿದೆ.

    ತುಂಗಭದ್ರಾ ಆಣೆಕಟ್ಟು ಪ್ರದೇಶ ಹೊಂದಿರುವ ಕೊಪ್ಪಳ ತಾಲೂಕಿನ ಮುನಿರಾಬಾದ್ ಯೋಜನಾ ಪ್ರದೇಶವಾಗಿದ್ದು ಇಲ್ಲಿ ಬಹುತೇಕ ಅಧಿಕಾರಿಗಳಿದ್ದಾರೆ. ಇಲ್ಲಿಂದ ಕೇವಲ 6 ಕಿಮೀ ದೂರದಲ್ಲಿ ಹೊಸಪೇಟೆ ನಗರವಿದೆ. ಸುಮಾರು 9 ಸಾವಿರ ಜನಸಂಖ್ಯೆ ಹೊಂದಿರುವ ಮುನಿರಾಬಾದ್ ನಲ್ಲಿ ಮೊದಲು ಅಲೆ ಹಾಗೂ ಎರಡನೆಯ ಅಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೊದಲು ಅಲೆಯಲ್ಲಿ 163 ಜನರಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಎರಡನೆಯ ಅಲೆಯಲ್ಲಿ 263 ಜನರಿಗೆ ಸೋಂಕು ತಗುಲಿತ್ತು. ಸೋಂಕಿನಿಂದ 12 ಜನರು ಸಾವನ್ನಪ್ಪಿದ್ದಾರೆ.

    ನಿತ್ಯ ಜನ ಸಂಚಾರವಿರುವ ಮುನಿರಾಬಾದ್ ನಲ್ಲಿ ಕೊರೊನಾ ನಿಯಂತ್ರಣ ಮಾಡುವುದು ದೊಡ್ಡ ಸಾಹಸವೇ ಆಗಿತ್ತು. ಇಂಥ ಸಂದರ್ಭದಲ್ಲಿ ಮುನಿರಾಬಾದ್ ಗ್ರಾಮ ಪಂಚಾಯತ್ ಕೊರೊನಾ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಕೇಂದ್ರ ಪಂಚಾಯತ್ ರಾಜ್ ಇಲಾಖೆಯು ಪ್ರಶಂಸೆ ವ್ಯಕ್ತಪಡಿಸಿದೆ.

    ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಸರ್ವೇ ಮಾಡಿದ ಪಂಚಾಯತ್ ರಾಜ್ ಇಲಾಖೆಯು ರಾಜ್ಯ ಮೂರು ಪಂಚಾಯತ್ ಗಳು ಉತ್ತಮ ಕೆಲಸ ಮಾಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿವೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ, ಕೊಡಗು ಜಿಲ್ಲೆಯ ಹೊದ್ದೂರು ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸೇರಿವೆ. ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟ – ದೇಶದ ಗಮನ ಸೆಳೆಯಿತು ದಕ್ಷಿಣ ಕನ್ನಡದ ಗ್ರಾಮ

    ಕೊರೊನಾ ಸಂದರ್ಭದಲ್ಲಿ ಜನರ ಓಡಾಟ ನಿಯಂತ್ರಣ, ಅವಶ್ಯವಿರುವವರಿಗೆ ಆಹಾರ ವಿತರಣೆ, ಬಡವರಿಗೆ ವೈದ್ಯಕೀಯ ಸೇವೆ ನೀಡುವ ಮುಖಾಂತರ ರಾಷ್ಟ್ರದ ಗಮನ ಸೆಳೆದಿದೆ. ಕೊರೊನಾ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ, ಸದಸ್ಯರು ಟಾಸ್ಕ್ ಫೋರ್ಸ್‍ನಂತೆ ಸೇವೆ ಮಾಡಿದ್ದು ಸಾಕಷ್ಟು ನಿಯಂತ್ರಣಕ್ಕೆ ಯತ್ನಿಸಿದ್ದಾರೆ.

    ನಿತ್ಯ ಸಾವಿರಾರು ಜನರಿಗೆ ಆಹಾರವನ್ನು ನೀಡಿದ್ದಾರೆ. ಅದರಲ್ಲಿ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ನಿತ್ಯ 400 ಜನರಿಗೆ ಆಹಾರ ನೀಡಿದ್ದಾರೆ. ಇದರೊಂದಿಗೆ ಪೊಲೀಸರು ಸಹ ಹಸಿದವರಿಗೆ ಊಟ ನೀಡಿದ್ದಾರೆ. ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಿದ್ದು ಅಲ್ಲದೆ ಸೋಂಕಿತರನ್ನು ಪ್ರತ್ಯೇಕಿಸಿ ಅವರಿಗೆ ಆರೋಗ್ಯ ಸೇವೆ ಮಾಡಿದ್ದರಿಂದ ಈಗ ಮುನಿರಾಬಾದ್ ಕೊರೊನಾ ಮುಕ್ತವಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯತ್ ಪಿಡಿಒ ಜಯಲಕ್ಷ್ಮಿ.

    ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮುನಿರಾಬಾದ್ ನಲ್ಲಿ ಕೊರೊನಾ ನಿಯಂತ್ರಣ ಕಷ್ಟ ಸಾಧ್ಯವಾಗಿತ್ತು, ಮೊದಲು ಅಲೆ ಬಂದಾಗ ಹೊಸಪೇಟೆ ನಗರ ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಕಾವಲಿದ್ದು ಕೊರೊನಾ ಸೋಂಕು ವ್ಯಾಪಕವಾಗದಂತೆ ಕ್ರಮ ಕೈಗೊಂಡಿದ್ದು ಅಲ್ಲದೆ ಸೋಂಕಿತರ ಆರೈಕೆ ಮಾಡಿದ್ದಾರೆ. ಸಾಕಷ್ಟು ಜನ ದಾನಿಗಳು ಗ್ರಾಮದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ.

    ಮೊದಲು ಅಲೆ ಬಂದಾಗ ಜನರಲ್ಲಿ ಭಯವಿತ್ತು. ಸರಕಾರ ಸಹ ಬೇಗ ಲಾಕ್ ಡೌನ್ ಸೀಲ್‍ಡೌನ್ ಹಾಗೂ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಎರಡನೆಯ ಅಲೆಯಲ್ಲಿ ಸೋಂಕಿತರು ಹೋಂ ಐಸೋಲೇಷನ್‍ಗೆ ಅವಕಾಶ ನೀಡಿದ್ದರಿಂದ ಮೊದಲು ಸೋಂಕು ನಿಯಂತ್ರಣಕ್ಕೆ ಕಷ್ಟ ಪಡ ಬೇಕಾಯಿತು, ನಂತರದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಕಾಳಜಿಯಿಂದಾಗಿ ಅವರನ್ನು ಕ್ವಾರಂಟೈನ್ ಮಾಡಿದ್ದರಿಂದ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ, ಮೊದಲು ಅಲೆಯಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಮುನಿರಾಬಾದ್ ಗ್ರಾಮ ಪಂಚಾಯತ್ ಎರಡನೆಯ ಅಲೆಯಲ್ಲಿ ಸಾಕಷ್ಟು ಕಾಳಜಿ ವಹಿಸಿದೆ.

  • ಕಿತ್ತು ಹೋಯ್ತು ಕಾಲುವೆ ಗೇಟ್ – ಊರಿಗೆ ನುಗ್ಗಿದ ಜಲಾಶಯದ ನೀರು

    ಕಿತ್ತು ಹೋಯ್ತು ಕಾಲುವೆ ಗೇಟ್ – ಊರಿಗೆ ನುಗ್ಗಿದ ಜಲಾಶಯದ ನೀರು

    ಕೊಪ್ಪಳ: ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದ್ದರಿಂದ ಕಾಲುವೆಯ ನೀರು ಊರಿನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

    ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದೆ. ಹೀಗಾಗಿ ನಿನ್ನೆಯಿಂದ ಕಾಲುವೆ ಗೇಟ್ ರಿಪೇರಿ ಕಾರ್ಯವನ್ನು ಜಲಾಶಯದ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ನೀರಿನ ರಭಸದ ಹಿನ್ನಲೆಯಲ್ಲಿ ರಿಪೇರಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ಕಾಲುವೆಯ ಗೇಟ್ ಇನ್ನೂ ರಿಪೇರಿ ಆಗಿಲ್ಲ.

    ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಕಾಲುವೆ ಮೂಲಕ ಅಪಾರ ಪ್ರಮಾಣದ ನೀರು ಹೊರ ಬರುತ್ತಿದ್ದು, ಪಂಪಾವನ ಜಲಾವೃತಗೊಂಡಿದೆ. ಅಲ್ಲದೆ ಮುನಿರಾಬಾದ್ ನ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಡಾರ್ಮೆಟರಿ, ರೈಲ್ವೆ ಕ್ವಾಟ್ರಾಸ್, ಉಸ್ಮಾನ್ ಶೇಖ್ ಕ್ಯಾಂಪ್ ಸೇರಿದಂತೆ ಅನೇಕ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ.

    ಕೊಪ್ಪಳ ತಾಲೂಕಿನ ಮಟ್ಟಿ ಮುದ್ಲಾಪುರ ಗ್ರಾಮದ ಬಳಿಯ ನೂರಾರು ಎಕರೆ ಜಮೀನು ಕೂಡ ನೀರಿನಲ್ಲಿ ಮುಳುಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು 300ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

  • ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

    ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

    ಕೊಪ್ಪಳ: ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹುಲಿಗಿ ಗ್ರಾಮದಲ್ಲಿ ಪೊಲಿಸರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಹುಲಗಪ್ಪ (32) ಎನ್ನುವ ವ್ಯಕ್ತಿ ಪರಾರಿಯಾದ್ದಾನೆ. ಈತ ಗಲಾಟೆ ಮಾಡಿಕೊಂಡು ಪೊಲೀಸೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಠಾಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಿಯೊಂದಿಗೆ ಮಾತನಾಡುತ್ತ ಕುಳಿತಿದ್ದ ಹುಲಗಪ್ಪ ಪ್ರಕರಣ ದಾಖಲಾಗುತ್ತದೆ ಎಂದು ಗೊತ್ತಾಗುತ್ತಲೇ ಠಾಣೆಯಿಂದ ಓಡಿ ಹೋಗಿದ್ದಾನೆ.

    ಫೋಲೀಸರು ಬೆನ್ನಟ್ಟಿದರೂ ಕೂಡಾ ಕೈಗೆ ಸಿಗದೇ ಹುಲಗಪ್ಪ ಪರಾರಿಯಾಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಹುಲಗಪ್ಪನಿಗಾಗಿ ಹುಡುಕಾಟ ನಡೆದಿದೆ.