Tag: ಮುನಿರಾಜು ಗೌಡ

  • ಮುನಿರತ್ನಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ಮುನಿರತ್ನಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ನವದೆಹಲಿ: ಈ ಹಿಂದೆ 17 ಶಾಸಕರಿಗೆ ಕೊಟ್ಟ ಮಾತಿನಂತೆ ಬಿಜೆಪಿ ನಡೆದುಕೊಂಡಿದೆ. ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಮುನಿರತ್ನ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಆರ್.ಆರ್. ನಗರ ಉಪಚುನಾವಣೆಯ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ.

    ಇವತ್ತು ಆರ್ ಆರ್ ನಗರ ಉಪ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, ಬಿಜೆಪಿ ಹೈಕಮಾಂಡ್ ಮುನಿರತ್ನ ಹೆಸರನ್ನು ಫೈನಲ್ ಮಾಡಿ ಅಭ್ಯರ್ಥಿ ಪಟ್ಟಿ ಪ್ರಕಟಿಸಿತು. ನಾಳೆ ಬೆಳಗ್ಗೆ 11.00 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು, ಟಿಕೆಟ್ ಘೋಷಣೆಯ ಸುದ್ದಿಯಿಂದ ಮುನಿರತ್ನ ನಿರಾಳರಾಗಿದ್ದಾರೆ.

    ಅಕ್ರಮ ಮತಚೀಟಿ ಪತ್ತೆ ಪ್ರಕರಣದಲ್ಲಿ ಸಿಲುಕಿ ಕಳೆದೊಂದು ವರ್ಷದಿಂದ ನೋವುಂಡಿದ್ದ ಮುನಿರತ್ನಗೆ ಸುಪ್ರೀಂಕೋರ್ಟ್ ಇಂದು ಮಧ್ಯಾಹ್ನ ಬಿಗ್ ರಿಲೀಫ್ ನೀಡಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಆಯ್ಕೆ ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ವಜಾ ಮಾಡಿತು.

    ಉಪ ಚುನಾವಣೆಗೆ ತಡೆ ನೀಡಲು ಕೂಡ ನಿರಾಕರಿಸಿ ಉಪಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿತು. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಮುನಿರತ್ನ ರಿಲೀಫ್ ಆದರು. ನಕಲಿ ಮತಚೀಟಿ ಕಳಂಕದಿಂದಲೂ ಮುನಿರತ್ನ ಮುಕ್ತರಾದರು.

    ಸುಪ್ರೀಂ ತೀರ್ಪಿನಲ್ಲಿ ಏನಿದೆ?
    ರಾಜರಾಜೇಶ್ವರಿ ನಗರ ಕ್ಷೇತ್ರ ಒಂದು ವರ್ಷದಿಂದ ಖಾಲಿ ಇದೆ. ಜನಪ್ರತಿನಿಧಿ ಇಲ್ಲ. ಸಂವಿಧಾನದ ಪ್ರಕಾರ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಜನಪ್ರತಿನಿಧಿ ಆಯ್ಕೆ ಮಾಡದಿರುವುದು ಆ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದಂತೆ.

    ಚುನಾವಣಾ ಅಕ್ರಮ ಆರೋಪಕ್ಕೆ ಪೂರಕ ಸಾಕ್ಷ್ಯಗಳಿಲ್ಲ. ದೂರುದಾರರು ಹೈಕೋರ್ಟ್‍ಗೂ ದಾಖಲೆಗಳನ್ನು ಸಲ್ಲಿಸಿಲ್ಲ. ಹತ್ತಿರದ ಪ್ರತಿಸ್ಪರ್ಧಿಯನ್ನು ಶಾಸಕ ಎಂದು ಪರಿಗಣಿಸುವುದು ಸಮಂಜಸ ಅಲ್ಲ. (ಡಿ.ಕೆ. ಶರ್ಮಾ ವರ್ಸಸ್ ರಾಮ್ ಶರಣ್ ಯಾದವ್ ಪ್ರಕರಣದ ಆದೇಶವನ್ನು ಇಲ್ಲಿ ಪರಿಗಣಿಸಲಾಗಿದೆ. ಈ ಪ್ರಕರಣದಲ್ಲಿ ಎರಡು ಅಭ್ಯರ್ಥಿಗಳಿಗಿಂತ ಹೆಚ್ಚು ಇರುವ ಕ್ಷೇತ್ರದಲ್ಲಿ ಒಂದೇ ಅನುಪಾತವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಪ್ರಕಾಶ್ ಖಂಡ್ರೆ ವರ್ಸಸ್ ಡಾ. ವಿಜಯ್ ಕುಮಾರ್ ಖಂಡ್ರೆ ಆದೇಶದಲ್ಲೂ ಇದೇ ಅಂಶವನ್ನು ಪುನರುಚ್ಚರಿಸಲಾಗಿದೆ)

    ನಿಗದಿ ಆಗಿರುವ ಉಪ ಚುನಾವಣೆ ಮುಂದೂಡುವುದು ಸಮಂಜಸವಲ್ಲ. ಹತ್ತಿರ ಪ್ರತಿಸ್ಪರ್ಧಿ, ಶಾಸಕರು ಪಡೆದ ಮತಗಳ ನಡುವಿನ ಅಂತರ ದೊಡ್ಡದು. ಅಕ್ರಮ ಎನ್ನಲಾದ ಎಲ್ಲ ಮತ ಅರ್ಜಿದಾರರಿಗೆ ವರ್ಗಾವಣೆಯಾಗಿದ್ದರೂ ಗೆಲುವು ಅಸಾಧ್ಯ. 14 ಅಭ್ಯರ್ಥಿಗಳಿಗೆ ಮತಗಳ ವರ್ಗಾವಣೆ ಹೇಗೆ ಆಗುತ್ತಿತ್ತು? ಅಂದಾಜಿಸುವುದು ಅಸಾಧ್ಯ. ಹೀಗಾಗಿ ಆರ್ ಆರ್ ನಗರಕ್ಕೆ ಉಪ ಚುನಾವಣೆ ಮಾಡುವುದು ಉತ್ತಮ ಮಾರ್ಗ. ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯಲ್ಲಿ ಗಮನಾರ್ಹ ಸಂಗತಿಗಳಿಲ್ಲ.