Tag: ಮುನಿಯಪ್ಪ

  • ನೀವು ಬೇಕಾದರೆ ಮುನಿಯಪ್ಪರನ್ನು ಲವ್ ಮಾಡಿ- ರಮೇಶ್ ಕುಮಾರ್

    ನೀವು ಬೇಕಾದರೆ ಮುನಿಯಪ್ಪರನ್ನು ಲವ್ ಮಾಡಿ- ರಮೇಶ್ ಕುಮಾರ್

    ಬೆಂಗಳೂರು: ಎಚ್. ಮುನಿಯಪ್ಪರನ್ನು ನೀವು ಬೇಕಾದರೆ ಲವ್ ಮಾಡಿ. ಅವರ ಮಾತಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಮೇಶ್ ಕುಮಾರ್ ಕಳ್ಳ ಎಂದು ಮುನಿಯಪ್ಪ ಗರಂ ಆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ನಾನು ಕಳ್ಳನೇ. ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಜನರ ಜ್ವಲಂತ ಸಮಸ್ಯೆಗಳು ಸಾಕಾಷ್ಟಿವೆ. ಎಷ್ಟು ದಿನ ಬದುಕಿರ್ತಿನೋ ಗೊತ್ತಿಲ್ಲ, ಇರುವಷ್ಟು ದಿನ ಜನರ ಕೆಲಸ ಮಾಡುತ್ತೇನೆ. ನಾನು ಕಳ್ಳನೇ, ಹೋಗಿ ದೂರು ಕೊಡಲು ಹೇಳಿ ಎಂದು ಗರಂ ಆಗಿದ್ದಾರೆ.

    ಪರ್ಯಾಯ ಕೋಡೋಕೆ ಜನ ರೆಡಿ ಇದ್ದಾರೆ. ಬದಲಾವಣೆ ಮಾಡೋಕೆ ನಾವು (ರಾಜಕಾರಣಿಗಳು) ರೆಡಿ ಇಲ್ಲ. ಯಾವುದೇ ಪಕ್ಷಗಳು ತಯಾರಿಲ್ಲ. ರಾಜಕಾರಣಿಗಳಾದ ನಮಗೆ ಎರಡು ಮುಖಗಳಿವೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿದಿದೆ. ನನ್ನ ಹೇಳಿಕೆ ಸಹಿಸದಿದ್ದರೆ ನನ್ನ ಪಾರ್ಟಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ರಾಜಕೀಯ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂದರೆ ಹೊರಗೆ ಜನರಿಗೆ ಹೇಗೆ ನ್ಯಾಯ ಕೊಡೋಕೆ ಆಗುತ್ತದೆ ಎಂದರು.

    ಕಾಂಗ್ರೆಸ್ ಸಿಡಬ್ಲ್ಯೂಸಿ(ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಅತ್ಯಂತ ಸರ್ವೊಚ್ಛ ಸಮಿತಿ. ಸಿಡಬ್ಲ್ಯೂಸಿ ನಲ್ಲಿ ಚಂದ್ರಶೇಖರ್ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರು. ಅದು ಚಂದ್ರಶೇಖರ್ ಗುಣವನ್ನ ತೋರಿಸುತ್ತದೆ. ಆದರೆ ಮಾಧ್ಯಮಗಳು ವಿಲನ್‍ರನ್ನ ಹೀರೋ ಮಾಡುತ್ತಾರೆ. ಹೀರೋಗಳನ್ನ ವಿಲನ್ ಮಾಡುತ್ತಾರೆ. ಮಾಧ್ಯಮಗಳಿಗೆ ಅದೇ ಕೆಲಸ, ಬೇರೆ ಕೆಲಸ ಇಲ್ಲ. ನಮ್ಮ ಬಗ್ಗೆ ಏನಾದ್ರೂ ಬರೆದುಕೊಳ್ಳಿ ನಂಗೇನೂ ಚಿಂತೆ ಇಲ್ಲ. ಒಂದು ದಿನ ಓದುತ್ತಾರೆ, ಮರುದಿನ ಎಳೆ ಮಕ್ಕಳು ಇರುತ್ತಾರೆ. ಏನಾಕ್ಕಾದರೂ ಬಳಸಿಕೊಳ್ತಾರೆ ಎಂದು ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

    ಮುನಿಯಪ್ಪ ಏನು ಹೇಳಿದ್ದರು..?
    ಇತ್ತೀಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮುನಿಯಪ್ಪ ಗರಂ ಆಗಿದ್ದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  • ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಕೋಲಾರ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾನ ಮರ್ಯಾದೆ ಇದ್ದರೆ ಅವರು ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಅವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಕಾಲಿಡಬಾರದು. ಇದನ್ನು ನಾನು ಗಂಭಿರವಾಗಿಯೇ ಪರಿಗಣಿಸಿ ಹೇಳುತ್ತಿದ್ದೇನೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡೆ ಬಿಜೆಪಿಗೆ ಬೆಂಬಲಿಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಾರಾಯಣಸ್ವಾಮಿ, ವಿ. ಮುನಿಯಪ್ಪ, ಎಚ್.ನಾಗೇಶ್, ನಜೀರ್ ಅಹ್ಮದ್ ವಿರುದ್ಧ ಹೈ ಕಮಾಂಡ್‍ಗೆ ದೂರು ನೀಡಲಾಗಿದೆ. ಅದರಂತೆ ಇಂದಿನ ಸತ್ಯ ಶೋಧನ ಸಮಿತಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಕಾಂಗ್ರೆಸ್ಸಿಗೆ ದ್ರೋಹ ಮಾಡಿದ ಜನ ಪಕ್ಷಕ್ಕೆ ಬೇಡ. ಮೈತ್ರಿ ಸರ್ಕಾರ ರಚಿಸಲು ಜನತಾ ದಳ ಕೂಡ ನಮ್ಮ ಜೊತೆ ನಿಂತರು, ಆದರೆ ಎರಡು ಪಕ್ಷದ ಕಾರ್ಯಕರ್ತರು ಒಂದಾಗಲಿಲ್ಲ. ಇದರ ಪರಿಣಾಮವಾಗಿ ಎಂದಿಗೂ ಸಂಸತ್ತಿನಲ್ಲಿ ಇಲ್ಲದ ಪರಿಸ್ಥಿತಿಯನ್ನು ಇಂದು ನೋಡಬೇಕಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು, ನಾಯಕರು ಮಾಡಿರುವ ತಪ್ಪು ಕೆಲಸಕ್ಕೆ ಕ್ರಮ ಕೈಗೊಳ್ಳಲೇಬೇಕು. ಅದು ಪಕ್ಷದ ಜವಾಬ್ದಾರಿ, ಶಿಸ್ತಿನ ಸಿಪಾಯಿಗಳಂತೆ ನಮಗೆ ಬೆಂಬಲಿಸಿದ ಜನರಿಗೆ ನಾವು ಗೌರವ ನೀಡಬೇಕು. ಮತ್ತೆ ಕಾಂಗ್ರೆಸ್ಸನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.

  • ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

    ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಎಂಬಿಬಿಎಸ್ ಪಾಸ್ ಮಾಡಿದ್ದಾನೋ ಇಲ್ಲವೋ ಎಂಬ ಅನುಮಾನ ಇದೆ. ಸುಧಾಕರ್ ಗೆ ಕೋಟ್ಯಂತರ ರೂಪಾಯಿ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿ ಶಿಡ್ಲಘಟ್ಟ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.

    ಶಿಡ್ಲಘಟ್ಟ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಟ್ಡಿರುವ ದೊಡ್ಡ ಕಟ್ಟಡಕ್ಕೆ ತೆರಿಗೆ ಕಟ್ಟಿಲ್ಲ. ಕೋಟಿ ಕೋಟಿ ಖರ್ಚು ಮಾಡುವ ಸುಧಾಕರ್ ಗೆ ಹಣ ಎಲ್ಲಿಂದ ಬರುತ್ತದೆ. ಆದಾಯದ ಮೂಲವನ್ನ ಸುಧಾಕರ್ ಹೇಳಬೇಕು ಎಂದು ಆಗ್ರಹಿಸಿದರು.

    20 ವರ್ಷದ ಹಿಂದೆ ಕಾಲೇಜು ಕಟ್ಟಿದರೂ ನಾನು ಈಗಲೂ ಹೀಗೆಯೇ ಇದ್ದೇನೆ. 2 ವರ್ಷದಲ್ಲಿ ಸುಧಾಕರ್ ದೊಡ್ಡ ಕಾಲೇಜು ನಿರ್ಮಿಸಿದ್ದು ಹೇಗೆ? ಸುಧಾಕರ್ ಇಡೀ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಬೆಂಗಳೂರಿನಲ್ಲಿನ ಕುಟುಂಬ ಸದಸ್ಯರನ್ನೆಲ್ಲಾ ಗಣಿಗಾರಿಕೆಗೆ ಬಿಟ್ಟಿದ್ದಾರೆ. 100 ವರ್ಷದ ಗಣಿ ಸಂಪನ್ಮೂಲಗಳನ್ನು 2-3 ವರ್ಷಗಳಲ್ಲೇ ಬಾಚಿಕೊಂಡು ಹೋಗುತ್ತಿದ್ದಾರೆ. ಗಣಿಗಾರಿಕೆ ಮಾಡುವ ಪ್ರತಿಯೊಬ್ಬರು ಸುಧಾಕರ್ ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಸುಧಾಕರ್ ಗೆ ಕೊಡಲೇಬೇಕು. ಇಂತಹ ಸುಧಾಕರ್ ನೈತಿಕತೆ ಬಗ್ಗೆ ಮಾತನಾಡೋದು ಎಷ್ಟು ಸರಿ ಬ್ಲಾಕ್ ಮೇಲ್ ಮಾತುಗಳನ್ನು ಮಾತಾಡೋದು ಸುಧಾಕರ್ ಬಿಡಬೇಕು. ಬ್ಲಾಕ್ ಮೇಲ್ ಮಾಡೋವರು ಎಲ್ಲರೂ ಮುಂದೆ ತೇಲಿ ಹೋಗಲಿದ್ದು, ಈಗಾಗಲೇ ಸುಧಾಕರ್ ಎಲ್ಲರ ಮುಂದೆ ತೇಲಿ ಹೋಗಿದ್ದಾರೆ ಎಂದು ಹೇಳಿ ಕಿಡಿ ಕಾರಿದರು.

    ಯಡಿಯೂರಪ್ಪ ಒನ್ ಮ್ಯಾನ್ ಶೋ ಎಂಬಂತಾಗಿದ್ದು, ನೆರೆ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆಯಿಂದಾದ ಆಸ್ತ-ಪಾಸ್ತಿ ಹಾಗೂ ಪ್ರಾಣ ಹಾನಿ ಸೇರಿದಂತೆ ನೀರು ವ್ಯರ್ಥವಾಗುತ್ತಿರುವುದು ನೋಡಿದರೆ ನೋವಾಗುತ್ತದೆ. ಯಡಿಯೂರಪ್ಪ ಒಬ್ಬರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ದೆಹಲಿಗೆ ಹೋದರು. ನಂತರ ಬಂದ ಯಡಿಯೂರಪ್ಪ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನೇ ಪಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

    ಸಾರ್ವಜನಿಕರು ನೀಡುತ್ತಿರುವ ವಸ್ತುಗಳನ್ನು ಸಂತ್ರಸ್ತರಿಗೆ ನೀಡುತ್ತಾ ಸರ್ಕಾರ ಕಾಲ ಕಳಿಯುತ್ತಿದೆ. ಸರ್ಕಾರದ ಅನುದಾನವನ್ನು ಬಳಸುತ್ತಿಲ್ಲ. ಯಡಿಯೂರಪ್ಪ ಒನ್ ಮ್ಯಾನ್ ಶೋ ಮಾಡುತ್ತಿದ್ದಾರೆ. ಇಂತಹ ಸರ್ಕಾರದ ನಡೆ ಕಾರ್ಯವೈಖರಿ ಬಗ್ಗೆ ನನಗೆ ಬಹಳ ನೋವು ತಂದಿದೆ ಎಂದು ಹೇಳಿದರು.

  • ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು: ಶಾಸಕ ನಾಗೇಶ್ ಪಟ್ಟು

    ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು: ಶಾಸಕ ನಾಗೇಶ್ ಪಟ್ಟು

    ಬೆಂಗಳೂರು: ನನಗೆ ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು ಎಂದು ಮುಳುಬಾಗಿಲು ಪಕ್ಷೇತರ ಶಾಸಕ ನಾಗೇಶ್ ಸಿಎಂ ಕುಮಾರಸ್ವಾಮಿ ಅವರಲ್ಲಿ ಒತ್ತಾಯಿಸಿದ್ದಾರೆ.

    ಆಪರೇಷನ್ ಕಮಲದ ಆತಂಕದಲ್ಲಿ ಇರುವ ಸಿಎಂ ಕುಮಾರಸ್ವಾಮಿ ಅವರು ಇಂದು ಒಬ್ಬಬ್ಬರೇ ಅತೃಪ್ತ ಶಾಸಕರನ್ನು ಕರೆದು ಮಾತನಾಡಿಸಿದರು. ಸಚಿವ ಡಿ.ಕೆ.ಶಿವಕುಮಾರ್ ಜೊತೆ ಆಗಮಿಸಿದ ಶಾಸಕ ನಾಗೇಶ್ ಅವರ ಜೊತೆಗೆ ಸಿಎಂ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು.

    ಸಿಎಂ ಕುಮಾರಸ್ವಾಮಿಯವರ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಶ್ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ನನಗೆ ನಿಗಮ ಮಂಡಳಿ ಸ್ಥಾನ ಬೇಕಾಗಿಲ್ಲ. ಇದನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ಅವರು ಕೂಡ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಎರಡು ಬಾರಿ ನನಗೆ ಸಚಿವ ಸ್ಥಾನ ತಪ್ಪಿತ್ತು. ಈ ಬಾರಿ ಮಂತ್ರಿಗಿರಿ ನೀಡುವ ಭರವಸೆ ಇದೆ ಎಂದು ತಿಳಿಸಿದರು.

    ಬಿಜೆಪಿಗೆ ನಾನು ಬೆಂಬಲ ನೀಡಿರಲಿಲ್ಲ. ಅಸಮಾಧಾನ ಆಗಿದ್ದಕ್ಕೆ ಹೋಗಿದ್ದೆ ಅಷ್ಟೇ. ಈಗಲೂ ನನ್ನ ಬೆಂಬಲ ಸಮ್ಮಿಶ್ರ ಸರ್ಕಾರಕ್ಕಿದೆ. ಕುಮಾರಸ್ವಾಮಿ ಅವರು ವಿಶ್ವಾಸ ನೀಡಿದ್ದು, ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

    ಬಿಜೆಪಿಯವರು ನನ್ನನ್ನು ಈಗ ಕರೆದಿಲ್ಲ. ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅವರಿಗೆ ತಿಳಿಯುತ್ತಿದೆ. ಹೀಗಾಗಿ ಮತ್ತೆ ಸಂಪರ್ಕ ಮಾಡಿಲ್ಲ. ಎರಡು ದೋಣಿ ಮೇಲೆ ನಾನು ಕಾಲು ಇಡುವುದಿಲ್ಲ. ನನ್ನ ಜೊತೆ ಶಾಸಕ ಶಂಕರ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

    ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಿಡ್ಲಘಟ್ಟ ಶಾಸಕ ಮುನಿಯಪ್ಪ ಬಹಿರಂಗವಾಗಿ ಹೇಳಿದ್ದಾರೆ. ಸಚಿವ ಸ್ಥಾನಕ್ಕಾಗಿ ಇಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ಹಿರಿತನ ಆಧಾರಿಸಿ ನನಗೂ ಕೂಡ ಸಚಿವ ಸ್ಥಾನ ಕೊಡಬೇಕು. ಮಂತ್ರಿಗಿರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಬಳಿ ಚರ್ಚೆ ಮಾಡಿದ್ದೇನೆ. ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

  • ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಕೋಲಾರ: ಸತತ 7 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮೋದಿ ಅಲೆಯಿಂದಾಗಿ ಸೋತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಳೆದ 7 ಬಾರಿ ಗೆಲುವನ್ನು ಸಾಧಿಸಿದಂತೆ ಈ ಬಾರಿ ಕೂಡ ಜಯವನ್ನು ಸಲೀಸಾಗಿ ಪಡೆಯಬಹುದು ಎಂದುಕೊಂಡಿದ್ದ ಮುನಿಯಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮುನಿಯಪ್ಪ ಅವರ ವಿರೋಧಿ ಅಲೆ ಹಾಗೂ ಮೋದಿ ಅಲೆಯಿಂದ ಎಸ್. ಮುನಿಸ್ವಾಮಿ 2,09,704 ಮತಗಳ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಮುನಿಸ್ವಾಮಿ ಅವರು 7,07,863 ಮತಗಳನ್ನು ಗಳಿಸಿದ್ದರೆ, ಮುನಿಯಪ್ಪ ಅವರು 4,98,159 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ.

    ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಬೆಂಬಲಿಗರ ಲೆಕ್ಕಾಚಾರದ ಪ್ರಕಾರ ಎಂದಿನಂತೆ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದರು. ಪ್ರತಿ ಬಾರಿ ಇದೆ ರೀತಿಯ ಪೈಪೋಟಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನಡೆಯುತ್ತಿತ್ತು. ಮೈತ್ರಿ ನಾಯಕರ ಪ್ರಕಾರ ಕೆ.ಎಚ್. ಮುನಿಯಪ್ಪ ಗೆಲುವು ನಿಶ್ಚಯವಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 1 ಲಕ್ಷದವರೆಗೂ ಲೀಡ್ ಬರುವ ಅತಿಯಾದ ಆತ್ಮ ವಿಶ್ವಾಸದಲ್ಲಿದ್ದರು.

    ಮುನಿಯಪ್ಪ ಸೋಲು ಕಂಡಿದ್ದು ಯಾಕೆ?
    ಕೆಜೆಎಫ್ ಬಿಜಿಎಂಎಲ್ ಸಮಸ್ಯೆಯನ್ನು 18 ವರ್ಷಗಳಿಂದ ಜೀವಂತವಾಗಿಟ್ಟಿರುವುದು, ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಶುಂಕುಸ್ಥಾಪನೆ ಬಿಟ್ಟರೆ ಉಳಿದಂತೆ ಯಾವುದೇ ಕಾಮಗಾರಿ ನಡೆಯದೆ ಇರುವುದು ಮುನಿಯಪ್ಪ ಸೋಲಿಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ನೀರಾವರಿ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದೇ ಇರುವುದು, ಕ್ಷೇತ್ರದಲ್ಲಿ ಈ ಬಾರಿ ದಲಿತ ಮುಖಂಡರ ಮತ್ತು ಜನಪ್ರತಿನಿಧಿಗಳ ವಿರೋಧವಾಗಿರುವುದರಿಂದ ಈ ಬಾರಿ ಸೋಲನ್ನು ಅನುಭವಿಸುವಂತಾಗಿದೆ.

    ಮುನಿಯಪ್ಪ ಅವರ ಇದೇ ಮೈನಸ್ ಪಾಯಿಂಟ್ ಬಿಜೆಪಿ ಅಭ್ಯರ್ಥಿಗೆ ಗೆಲುವಿನತ್ತ ಸಾಗಲು ದಾರಿ ಮಾಡಿಕೊಟ್ಟಿದೆ. ಅಲ್ಲದೆ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ನಾಯಕರು ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದು ಹಾಗೂ 7 ಬಾರಿ ಗೆದ್ದವನಿಗೆ 8ನೇ ಗೆಲ್ಲುವುದು ಕಷ್ಟವೇನಲ್ಲ ಎಂಬ ಅತೀಯಾದ ವಿಶ್ವಾಸವೇ ಬಿಜೆಪಿಗೆ ಜಯ ತಂದುಕೊಟ್ಟಿದೆ.

  • ನನ್ನ ಯಾರೂ, ಏನೂ ಮಾಡಲು ಸಾಧ್ಯವಿಲ್ಲ- ಮುನಿಯಪ್ಪಗೆ ಮಂಜುನಾಥ್ ಟಾಂಗ್

    ನನ್ನ ಯಾರೂ, ಏನೂ ಮಾಡಲು ಸಾಧ್ಯವಿಲ್ಲ- ಮುನಿಯಪ್ಪಗೆ ಮಂಜುನಾಥ್ ಟಾಂಗ್

    ಕೋಲಾರ: ಲೋಕಸಭಾ ಚುನಾವಣೆ ಮುಗಿದ ಮೇಲೂ ಕೋಲಾರದಲ್ಲಿ ಸಂಸದ ಮುನಿಯಪ್ಪ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ನಡುವಿನ ಗುದ್ದಾಟ ಮುಂದುವರಿದಿದೆ.

    ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ತಮ್ಮ ಬೆಂಬಲಿಗ ರಾಜೇಂದ್ರಗೌಡ ನಾಪಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಂಸದ ಮುನಿಯಪ್ಪಗೆ ಟಾಂಗ್ ಕೊಟ್ಟರು. ನಾನು ಕೊತ್ತೂರು ಮಂಜು, ಫುಟ್‍ಪಾತ್ ಮಂಜು ಅಲ್ಲ. ಕೊತ್ತೂರು ಮಂಜು ಏನು ಎಂದು ಎಲ್ಲರಿಗೂ ಗೊತ್ತಿದೆ. ನ್ಯಾಯ-ನೀತಿ-ಧರ್ಮ ಪಾಲನೆ ಮಾಡುವವನು. ನಾನು ಯಾರಿಗೂ ಮೋಸ ಮಾಡಿಲ್ಲ. ಕೆಟ್ಟದ್ದೂ ಬಯಸಿಲ್ಲ. ಹಾಗಾಗಿ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.

    ಚುನಾವಣೆಯಲ್ಲಿ ಒಬ್ಬರ ಪರ ಕೆಲಸ ಮಾಡಬೇಕು. ನೋಡಿಕೊಳ್ಳುತ್ತೇನೆ ಅಂದ್ರೆ, ನಾವು ನೋಡಿಕೊಳ್ಳುತ್ತೀವಿ. ಅವರು ನೋಡಿ ಆದ ಮೇಲೆ ನಾವು ನೋಡಿಕೊಳ್ಳುತ್ತೇವೆ ಎಂದು ಚುನಾವಣೆಗೆ ಮುನ್ನ, 18ರ ನಂತರ ಎಲ್ಲರನ್ನು ನೋಡಿಕೊಳ್ಳುವೆ ಎಂದಿದ್ದ ಸಂಸದ ಮುನಿಯಪ್ಪಗೆ ನೇರವಾಗಿ ತಿರುಗೇಟು ನೀಡಿದರು.

    ಈಗಾಗಲೇ ಮೈತ್ರಿ ಧರ್ಮ ಪಾಲನೆ ಮಾಡದೆ 10 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ವಿರುದ್ಧ ಕೆಪಿಸಿಸಿಗೆ ದೂರು ನೀಡಿ ಸಸ್ಪೆಂಡ್ ಬೆದರಿಕೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಡಿಸಿ-ಎಸಿ ಕೆಲಸ ಅಲ್ಲ. ಸಸ್ಪೆಂಡ್ ಮಾಡೋದಾದ್ರೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‍ಗೆ ಸವಾಲೆಸೆದರು.

    ಸರ್ಕಾರಕ್ಕೆ ಎರಡು ವರದಿ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತವಾಗಿದೆ. ನಾವೂ ಕೂಡ ದೈವ ಭಕ್ತರು. ನಾವೂ ಸಾಕಷ್ಟು ದೇವಾಲಯಗಳನ್ನ ಕಟ್ಟಿದ್ದೇವೆ. 500 ವೋಟ್‍ನಲ್ಲಿ ಆದರೂ ಬಿಜೆಪಿ ಅಭ್ಯರ್ಥಿಯನ್ನು ಗದ್ದೇ ಗೆಲ್ಲುತ್ತಾರೆ ಎಂದು ಅವರು ಹೇಳಿದರು.

  • ಮೂವರು ಘಟಾನುಘಟಿ ‘ಕೈ’ ನಾಯಕರ ನಡುವೆ ಪುತ್ರ-ಪುತ್ರಿ ವಾತ್ಸಲ್ಯದ ಬಿಗ್ ಫೈಟ್!

    ಮೂವರು ಘಟಾನುಘಟಿ ‘ಕೈ’ ನಾಯಕರ ನಡುವೆ ಪುತ್ರ-ಪುತ್ರಿ ವಾತ್ಸಲ್ಯದ ಬಿಗ್ ಫೈಟ್!

    ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ಆಯ್ತು, ಖಾತೆ ಹಂಚಿಕೆಯೂ ಆಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಮಕ್ಕಳಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಈ ಬಾರಿಯ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಕೋಲಾರ ಸಂಸದ ಮುನಿಯಪ್ಪರ ಪುತ್ರಿ ರೂಪಾ ಶಶಿಧರ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ಮುನಿಯಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮೇಲೆ ಮುನಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಮುನಿಯಪ್ಪರ ಪುತ್ರಿ ಈ ಬಾರಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಮೊದಲ ಸಚಿವ ಸಂಪುಟದಲ್ಲಿ ಪುತ್ರಿಗೆ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಎರಡನೇ ಸುತ್ತಿನಲ್ಲಾದ್ರೂ ಮಗಳಿಗೆ ಸಚಿವ ಸ್ಥಾನ ನೀಡುವಂತೆ ಮುನಿಯಪ್ಪ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಲಿತ ಎಡಗೈ ಕೋಟಾದಡಿ ಮಗಳನ್ನು ಸಚಿವರನ್ನಾಗಿ ಮಾಡಬೇಕೆಂದು ಮುನಿಯಪ್ಪ ಪಟ್ಟು ಹಿಡಿದಿದ್ದಾರೆ ಎಂದು ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜೆಡಿಎಸ್‍ನಲ್ಲೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟ

    ನಿಮ್ಮ ಮಕ್ಕಳಿಗಾದ್ರೆ ಸಚಿವ ಸ್ಥಾನ ನೀಡ್ತಾರೆ, ಆದರೆ ನಮಗೆ ಏಕೆ ಕೊಡಲ್ಲ ಅಂತಾ ಪರೋಕ್ಷವಾಗಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಅಸಮಾಧಾನ ಹಾಕಿದ್ದಾರಂತೆ. ಇತ್ತ ಸಿದ್ದರಾಮಯ್ಯ ಎರಡನೇ ಸುತ್ತಿನಲ್ಲಿ ವರುಣಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಯತೀಂದ್ರರಿಗೆ ಸಚಿವ ಸ್ಥಾನ ಕೊಡಿಸುವ ಯತ್ನದಲ್ಲಿದ್ದೀರಾ ಎಂದು ಮುನಿಯಪ್ಪ ಅಸಮಾಧಾನ ಹೊರ ಹಾಕಿದ್ದಾರೆ.  ಇದನ್ನೂ ಓದಿ: ಎಂಬಿ ಪಾಟೀಲ್ ಬಣದಲ್ಲಿರೋ 19 ಶಾಸಕರು ಯಾರು? ಇಲ್ಲಿದೆ ಪಟ್ಟಿ