ಧಾರವಾಡ: ಯಾವತ್ತೂ ಧಾರವಾಡದ ಪೊಲೀಸ್ ಠಾಣೆ ಎದುರಲ್ಲೇ ಇರುವ ಶ್ವಾನವೊಂದು, ಕೊರೊನಾ ಸೊಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ಕೊರೊನಾ ವಾರಿಯರ್ ಗೆ ಸ್ವಾಗತ ಮಾಡಿಕೊಂಡಿದೆ.
ಕಳೆದ 15 ದಿನಗಳ ಹಿಂದೆ ನಗರದ ಶಹರ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕೊರೊನಾ ಸೊಂಕು ತಗುಲಿತ್ತು. ಗುಣಮುಖರಾಗಿ ಇವತ್ತು ಮುಖ್ಯ ಪೇದೆ ಕರ್ತವ್ಯಕ್ಕೆ ಹಾಜರಾಗಲು ಠಾಣೆಗೆ ಬಂದಾಗ ಎಸಿಪಿ ಅನುಷಾ ಮುಖ್ಯ ಪೇದೆಯನ್ನು ಸ್ವಾಗತಿಸಿಕೊಂಡರು. ಇದೇ ವೇಳೆ ಸ್ಥಳದಲ್ಲಿದ್ದ ಈ ಶ್ವಾನ ತನ್ನ ಸ್ನೇಹಿತೆ ಮುಖ್ಯ ಪೇದೆಯನ್ನು ಸ್ವಾಗತ ಮಾಡಿಕೊಂಡಿದೆ. ಹಲವು ವರ್ಷಗಳಿಂದ ಈ ಶ್ವಾನ ಠಾಣೆಯ ಎದುರಲ್ಲೇ ಇರುತ್ತೆ. ಇದಕ್ಕೆ ಸಾಕಿದವರು ಇದೇ ಠಾಣೆಯ ಪೇದೆಗಳು.
ಈ ಹಿನ್ನೆಲೆ ಪೇದೆಗಳು ಠಾಣೆಗೆ ಬರುತ್ತಿದ್ದಂತೆಯೇ ಅವರ ಅಕ್ಕ ಪಕ್ಕದಲ್ಲೇ ಈ ಶ್ವಾನ ಓಡಾಡಿಕೊಂಡು ಇರುತ್ತೆ. ಕಳೆದ 15 ದಿನಗಳಿಂದ ಈ ಮಹಿಳಾ ಮುಖ್ಯ ಪೇದೆ ಕಂಡಿರಲೇ ಇಲ್ಲ. ಇವತ್ತು ಠಾಣೆಗೆ ಮುಖ್ಯ ಪೇದೆ ಬರುತಿದ್ದಂತೆಯೇ ತನ್ನ ಬಾಲ ಅಲ್ಲಾಡಿಸುತ್ತ ಅಕ್ಕ ಪಕ್ಕಕ್ಕೆ ಬಂದು ನಿಂತಿದೆ. ಅಲ್ಲದೇ ಎಲ್ಲರೂ ಫೋಟೋಗೆ ಪೋಸ್ ಕೊಟ್ಟ ವೇಳೆ ತಾನೂ ಪೋಸ್ ಕೊಟ್ಟು ನಿಂತಿದೆ.
– ಕರ್ನಾಟಕದಲ್ಲಿ ಕೊರೊನಾ ಮರಣ ಮೃದಂಗ
– ಹಾಸನ, ಮಂಗಳೂರು, ಬಾಗಲಕೋಟೆಯಲ್ಲಿ ಕೋವಿಡ್ ರಣಕೇಕೆ
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗಯವಂತೆ ಕಾಣುತ್ತಿಲ್ಲ. ಇಂದು ಕೂಡ ಡೆಡ್ಲಿ ಕೋವಿಡ್-19 ವೈರಸ್‍ಗೆ ಬೆಂಗಳೂರು, ಹಾಸನ, ಮಂಗಳೂರು, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಸಾವು ಸಂಭವಿಸಿದೆ.
ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಕೊರೊನಾಗೆ ಬಲಿಯಾಗಿದ್ದಾರೆ. ಸೋಂಕು ದೃಢಪಡುತ್ತಿದ್ದಂತೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಇತ್ತ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಎಎಸ್‍ಐ ಕೂಡ ಕೊರೊನಾ ವೈಸರ್ ತಗುಲಿ ಸಾವನ್ನಪ್ಪಿದ್ದಾರೆ. ಎಎಸ್‍ಐ ಮೊನ್ನೆ ರಾತ್ರಿ ಮನೆಯ ಟಾಯ್ಲೆಟ್ ನಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಮನೆಯವರು ಆಸ್ಪತ್ರೆಗೆ ಸಾಗಿಸಿದ್ದರೂ ಬದುಕುಳಿಸಿರಲಿಲ್ಲ. ಕೊರೊನಾ ಶಂಕೆ ವ್ಯಕ್ತಪಡಿಸಿದ ವೈದ್ಯರು ಎಎಸ್‍ಐ ಗಂಟಲು ದ್ರವವನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಿದ್ದರು. ಸದ್ಯ ರಿಪೋರ್ಟ್ ಆರೋಗ್ಯ ಅಧಿಕಾರಿಗಳ ಕೈ ಸೇರಿದ್ದು, ಪಾಸಿಟಿವ್ ಬಂದಿದೆ. ಇದಕ್ಕೂ ಮುನ್ನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಲ್ವರು ಪೊಲೀಸರು ಕೊರೊನಾಗೆ ಬಲಿಯಾಗಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸುರತ್ಕಲ್ ಮೂಲದ 31 ವರ್ಷದ ಯುವಕ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಸಾವನ್ನಪ್ಪಿದರೆ, ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್‍ಗೆ ಮತ್ತೊಂದು ಬಲಿಯಾಗಿದೆ. ತೀವ್ರ ಉಸಿರಾಟ ತೊಂದರೆ ಇಂದ ಬಳಲುತ್ತಿದ್ದ 52 ವರ್ಷದ ಪುರುಷ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ರೋಗಿ-10,642 ಎಂದು ಗುರುತಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಮೃತ ವ್ಯಕ್ತಿ ಬಾಗಲಕೋಟೆ ತಾಲೂಕಿನ ಮುಡಪುಲಜೀವಿ ಗ್ರಾಮದ ನಿವಾಸಿ. ಕೆಲ ದಿನಗಳಿಂದ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ತಾನೇ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೋವಿಡ್ ನಿಯಾಮವಳಿ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು. ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು: ಕೊರೊನಾ ಶಂಕಿತ ನಗರದ 40 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ವ್ಯಕ್ತಿಯು ಬೆಂಗಳೂರಿನಿಂದ ತುಮಕೂರಿಗೆ ವಾಪಸ್ ಆಗಿದ್ದರು. ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳಿಸಿರುವ ವೈದ್ಯರು ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ.
ಹಾಸನ: ನಗರದ 65 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಅವರು ಜೂನ್ 17ರಂದು ಮುಂಬೈನಿಂದ ಹಾಸನಕ್ಕೆ ಆಗಮಿಸಿದ್ದರು. ಬಳಿಕ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆ ಕಂಡಿದೆ. ಇದಕ್ಕೂ ಮುನ್ನ 65 ವರ್ಷದ ವೃದ್ಧ ಡೆಡ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು.
ಚಾಮರಾಜನಗರ: ಬೆಂಗಳೂರಿನಿಂದ ಜಿಲ್ಲೆಯ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದು ಹೋಗಿದ್ದ ಪೇದೆಯ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರ ಆತಂಕ ದೂರವಾಗಿದೆ.
ಬೇಗೂರು ಠಾಣೆಯ ಮುಖ್ಯಪೇದೆ ಕುಟುಂಬ ಸಮೇತ ಬೆಳ್ತೂರಿಗೆ ಬಂದಿದ್ದ ವೇಳೆ ಕೊರೊನಾ ಪಾಸಿಟಿವ್ ಸಂಬಂಧ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ಈಗ ಅವರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರನ್ನು ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದ 22 ಜನರನ್ನು ಚಾಮರಾಜನಗರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ, ಕೊರೊನಾ ಶಂಕಿತ ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರ ಗಂಟಲು ದ್ರವವನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಅದರ ವರದಿ ನೆಗೆಟಿವ್ ಎಂದು ಬಂದಿದೆ. ಉಳಿದ 22 ಜನರ ಫಲಿತಾಂಶದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ನೆಗೆಟಿವ್ ಎಂದು ವರದಿ ಬಂದಿರುವ 16 ಜನರನ್ನು ಬೆಳ್ತೂರಿಗೆ ಕಳುಹಿಸಿಕೊಡಲಾಗುತ್ತಿದೆ. ಅವರಿಗೆ ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ ಇರುವಂತೆ ತಿಳಿಸಲಾಗಿದೆ ಎಂದರು.
ಇದಲ್ಲದೇ ಬೆಳ್ತೂರು ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಡಿಸಿ ಎಂ.ಆರ್.ರವಿ, ಎಸ್‍ಪಿ ಆನಂದ್ ಕುಮಾರ್, ಶಾಸಕ ನರೇಂದ್ರ ಭೇಟಿ ನೀಡಿದ ಗ್ರಾಮಸ್ಥರದಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪೊಲೀಸ್ ಪೇದೆ ಸೃಷ್ಟಿಸಿದ್ದ ಆತಂಕದಿಂದ ಗಡಿ ಜಿಲ್ಲೆ ನಿರಾಳವಾಗಿದ್ದು, ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಚಾಮರಾಜನಗರ ಮತ್ತೆ ಮುಡಿಗೇರಿಸಿಕೊಂಡಿದೆ.
ಬೆಂಗಳೂರು: ಶಿಸ್ತು, ಶಾಂತಿಗೆ ಇನ್ನೊಂದು ಹೆಸರೇ ಕರ್ನಾಟಕ ಪೊಲೀಸ್ ಎನ್ನುವ ಹೆಸರಿದೆ. ಆದರೂ ಜನಸಾಮಾನ್ಯರಲ್ಲಿ, ಪೊಲೀಸ್ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ಇದರ ನಡುವೆಯೂ ಹೆಡ್ ಕಾನ್ಸ್ ಸ್ಟೇಬಲ್ ವಿದೇಶಿಗನೊಬ್ಬನ ನೋವಿಗೆ ಸ್ಪಂದಿಸಿದ ಅಪರೂಪದ ಘಟನೆ ನಡೆದಿದೆ.
25 ವರ್ಷದ ಇಸ್ರೇಲ್ ರೈತ ಯೀಡೋ ಕಳೆದ ನವೆಂಬರ್ 24ರಂದು ಸೌಂದರ್ಯ ಸವಿಯುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು. ನಗರದ ಕಬ್ಬನ್ ಪಾರ್ಕಿನ ತಂಪಾದ ಗಾಳಿಗೆ ಮೈಮರೆತು ಮಲಗಿದ್ದಾಗ, ಅವರ ಬಳಿಯಿದ್ದ 20 ಸಾವಿರ ರೂ. ಹಣ, ಐಫೋನ್, ಶ್ರೀಲಂಕಾ ಏರ್ ಇ- ಟಿಕೆಟ್, ಬಟ್ಟೆ ಬ್ಯಾಗ್ ಗಳನ್ನು ಕಳ್ಳರು ಕದ್ದಿದ್ದಾರೆ. ನಂತರ ಹಸಿದ ಹೊಟ್ಟೆಯಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‍ಗೆ ಬಂದು ದೂರು ನೀಡಿದ್ದಾರೆ. ಆಗ ದೂರು ಸ್ವೀಕರಿಸಿದ ಮುಖ್ಯಪೇದೆ ಅತೀಕ್ ಅಹ್ಮದ್ ನೆರವಿನ ಹಸ್ತ ಚಾಚಿದ್ದಾರೆ.
ಅದೃಷ್ಟವಶಾತ್ ಯೀಡೋ ಬರ್ಮುಡಾದ ಜೇಬಿನಲ್ಲಿ ಪಾಸ್‍ಪೋರ್ಟ್ ಹಾಗೂ ವೀಸಾ ಮಾತ್ರ ಸೇಫ್ ಆಗಿತ್ತು. ಈ ನೋವನ್ನು ಆಲಿಸಿದ ಪೊಲೀಸರು ಸಹಾಯ ಮಾಡಲು ನಿರ್ಧರಿಸಿ, ಡೂಪ್ಲಿಕೇಟ್ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ, ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರ ಸಹಾಯದಿಂದ ಶ್ರೀಲಂಕಾ, ಪಾಂಡಿಚೇರಿ ತಲುಪಿಸಿದ್ದಾರೆ. ಹೋಗುವಾಗ ಮುಖ್ಯಪೇದೆ ಅತೀಕ್ 1,500 ರೂ. ಕೊಟ್ಟಿದ್ದಾರೆ. ನಂತರ ಯೀಡೋ ಇಸ್ರೇಲ್ ತಲುಪಿದ್ದು, ಗುರುವಾರ ಮತ್ತೆ ಬೆಂಗಳೂರಿಗೆ ಯೀಡೋ ವಾಪಾಸ್ ಬಂದು ಅತೀಕ್ ಗೆ ಹಣ ತಲುಪಿಸಿದ್ದಾರೆ. ಮುಖ್ಯ ಪೇದೆ ಈ ಮಾನವೀಯತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಯೀಡೋ ಭಾರತವನ್ನು ಪವಿತ್ರ ಭೂಮಿಯಂತೆ ಪೂಜಿಸಿ, ಇಲ್ಲಿ ಕಾಲಿಗೆ ಚಪ್ಪಲಿ ಹಾಕದೇ ಓಡಾಡಿದ್ದಾರೆ. ಮಾಂಸಹಾರ ತ್ಯಜಿಸಿದ್ದಾರೆ.
ದಾವಣಗೆರೆ: ಸವಾರರಿಂದ ಹಣ ಪೀಕುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್‍ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಾಗೂ ಎಎಸ್‍ಐ ಜಯಣ್ಣ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಪೇದೆ ರವಿ ಹಣ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಎಸ್‍ಪಿ ಹನುಮಂತರಾಯ ಅವರು, ಪೇದೆ ರವಿ ಹಾಗೂ ಇದಕ್ಕೆ ಸಹಕಾರ ನೀಡಿದ್ದ ಎಎಸ್‍ಐ ಜಯಣ್ಣ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ನಗರದ ಬಿ.ಪಿ. ರಸ್ತೆಯಲ್ಲಿ ಪೇದೆ ರವಿ ಸಂಚಾರ ನಿಯಮ ಉಲ್ಲಂಘಿಸಿ ಸವಾರರಿಗೆ ದಂಡ ಹಾಕದೆ, ಹಣ ಪಡೆಯುತ್ತಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಸವಾರರು ಸರ್ ನಮ್ಮ ಬಳಿ ಹಣ ಇಲ್ಲ. ಇಷ್ಟೇ ಇರೋದು ದಯವಿಟ್ಟು ತೆಗೆದುಕೊಳ್ಳಿ ಎಂದಿದ್ದರು. ಪೇದೆ ರವಿ ಮಾತ್ರ ಇಷ್ಟು ಸಾಕಾಗಲ್ಲ, ಪರ್ಸ್ ಚೆಕ್ ಮಾಡು, ತೋರಿಸು. ಹಣ ಇದೆ ಅಲ್ವಾ ಕೊಡು ಎಂದು ಪೀಡಿಸುವ ಮೂಲಕ ಸಾರ್ವಜನಿಕವಾಗಿ ಹಣ ಪಡೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮುಖ್ಯ ಪೇದೆ ರವಿ ಪ್ರತಿನಿತ್ಯ ಇದೇ ರೀತಿ ಸವಾರರಿಂದ ಹಣ ವಸೂಲಿ ಮಾಡುತ್ತಾರೆ. ಹಣ ಪಡೆದಿದ್ದಕ್ಕೆ ಯಾವುದೇ ರಶೀದಿ ಸಹ ನೀಡಲ್ಲ. ದಂಡಕ್ಕೆ ರಶೀದಿ ಕೇಳಿದರೆ ಸಬೂಬು ಹೇಳಿ ಸವಾರರು ಕಳುಹಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಸೂಕ್ತ ದಾಖಲೆಗಳು ಇರಲಿಲ್ಲ. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋಯಿಂದ ಪೇದೆ ರವಿ ಸಿಕ್ಕಿ ಹಾಕಿಕೊಂಡಿದ್ದರು. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಎಎಸ್‍ಐ ಜಯಣ್ಣ ಸಾಥ್ ನೀಡಿರುವುದು ತಿಳಿಸದು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಎಸ್‍ಪಿ ಹನುಮಂತರಾಯ ಅವರು ಅಮಾನತು ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಯಲ್ಲಿಯೇ ಮುಖ್ಯಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮುಖ್ಯಪೇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ವಿಶ್ರಾಂತಿ ಕೊಠಡಿಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಂಜುನಾಥ್ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಆತ್ಮಹತ್ಯೆಯ ಅಸಲಿ ಕಾರಣವೇನೆಂದು ತಿಳಿದುಬಂದಿಲ್ಲ. ಹೀಗಾಗಿ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಪಿಐ ಶೇಷಾದ್ರಿ ಅವರನ್ನು ನೇಮಕ ಮಾಡಲಾಗಿದೆ. ತನಿಖೆಯ ನಂತರವಷ್ಟೇ ಆತ್ಮಹತ್ಯೆಯ ಆಸಲಿ ಸತ್ಯ ತಿಳಿಯಲಿದೆ ಅಂತಾ ಹೇಳಿದ್ದಾರೆ.