Tag: ಮುಖ್ಯಮಂತ್ರಿಗಳು

  • ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    -ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮೂಲಸೌಕರ್ಯ, ಮಾನವಶಕ್ತಿ ಹೆಚ್ಚಿಸಿ
    -ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಉತ್ತೇಜಿಸಿ
    -ಕೇಂದ್ರ, ರಾಜ್ಯ ಸರ್ಕಾರಗಳು ಒಂದಾಗಿ ಕೊರೊನಾ ನಿಭಾಯಿಸಬೇಕು

    ನವದೆಹಲಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನು ಉಂಟು ಮಾಡುತ್ತವೆ. ನಾವು ಜಾಗರೂಕರಾಗಿಬೇಕು ಎಂದು ಪ್ರಧಾನಿ ಮೋದಿ ಅವರು ಎಚ್ಚರಿಸಿದರು.

    ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಜ್ಯಗಳಲ್ಲಿ ಲಸಿಕೆ ಅಭಿಯಾನ ಚುರುಕು ಮಾಡಿ. ಬೂಸ್ಟರ್ ಡೋಸ್ ಬಗ್ಗೆ ರಾಜ್ಯಗಳು ಗಮನ ಕೊಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಕೊಡಲು ಶೀಘ್ರವಾಗಿ ಕ್ರಮವಹಿಸಬೇಕು. ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಬೇಕು. ಸೋಂಕಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಎಲ್ಲಾ ರಾಜ್ಯದ ಸಿಎಂಗಳಿಗೆ ಸೂಚನೆ.

    ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಿ. ಸೋಂಕು ಕಡಿಮೆ ಇದೆ ಅಂತ ಟೆಸ್ಟಿಂಗ್ ಕಡಿಮೆ ಮಾಡಬೇಡಿ. ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡಿ ಸೋಂಕಿತರನ್ನ ಬೇಗ ಟ್ರೇಸ್ ಮಾಡಬೇಕು ಎಂದು ತಿಳಿಸಿದರು.

    3ಟಿ ಸೂತ್ರ ಮತ್ತೆ ಪ್ರಸ್ತಾಪ ಮಾಡಿದ ಪ್ರಧಾನಿ, ಪ್ರತಿ ರಾಜ್ಯಗಳು 3ಟಿ ಸೂತ್ರ ಅಳವಡಿಸಿಕೊಳ್ಳಬೇಕು. ಈ ಮೂಲಕ 4ನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಹಿಸಬೇಕು. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‌ಮೆಂಟ್ ನಿಯಮ ಅನುಷ್ಠಾನ ಮಾಡಿ. ವೇಗವಾಗಿ ಟೆಸ್ಟಿಂಗ್ ಮಾಡಿ, ಸೋಂಕಿತರನ್ನು ಕೂಡಲೇ ಟ್ರೇಸ್ ಮಾಡಿ. ಸೋಂಕಿತರನ್ನು ಪತ್ತೆ ಹಚ್ಚಿ ಟ್ರೀಟ್‌ಮೆಂಟ್ ಕೊಡಿ ಎಂದು ಸಲಹೆ ನೀಡಿದರು.

    ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಔಷಧಿಗಳು, ಆಕ್ಸಿಜನ್ ವ್ಯವಸ್ಥೆ ಸಿದ್ಧ ಮಾಡಿಕೊಳ್ಳಿ. 4ನೇ ಅಲೆ ಅಪಾಯಕಾರಿಯಲ್ಲದೇ ಇದ್ದರೂ ಎಚ್ಚರಿಕೆ ಇರಲಿ. ರೂಪಾಂತರ ತಳಿ ಬಗ್ಗೆ ನಿರ್ಲಕ್ಷ್ಯ ಮಾಡೋದು ಬೇಡ. ಬೇರೆ ದೇಶಗಳಲ್ಲಿ 4ನೇ ಅಲೆ ಬಂದಿದ್ದರೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ವರದಿ ಆಗಿಲ್ಲ. ಆದರೂ ರಾಜ್ಯಗಳು ಮೈಮರೆಯುವುದು ಬೇಡ. ಆಸ್ಪತ್ರೆ ವ್ಯವಸ್ಥೆ ಸಿದ್ಧವಾಗಿ ಇರಿಸಿಕೊಳ್ಳಿ. ಆಕ್ಸಿಜನ್ ಕೊರತೆ ಆಗದಂತೆ ಕ್ರಮವಹಿಸಿ. ಆಸ್ಪತ್ರೆಗಳು, ಬೆಡ್‌ಗಳು, ಔಷಧಿಗಳ ಕೊರತೆ ಆಗದಂತೆ ಎಚ್ಚರಿಕೆವಹಿಸಿ ಎಂದು ಹೇಳಿದರು.

    ವ್ಯಾಕ್ಸಿನ್ ದೊಡ್ಡ ಕವಚವಾಗಿದೆ. ವ್ಯಾಕ್ಸಿನ್ ಪಡೆಯುವುದರಿಂದ ಅಪಾಯದಿಂದ ರಕ್ಷಣೆ ಸಿಗಲಿದೆ. ಶಾಲಾ ಮಕ್ಕಳಲ್ಲೂ ಸೋಂಕು ಕಂಡು ಬಂದಿತ್ತು. ಈಗ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಹೆಚ್ಚು ಮಕ್ಕಳಿಗೆ ವ್ಯಾಕ್ಸಿನ್ ನೀಡುವುದು ನಮ್ಮ ಆದ್ಯತೆ. ಶಾಲೆಗಳಲ್ಲಿ ವಿಶೇಷ ವ್ಯಾಕ್ಸಿನ್ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.

    ಮುನ್ನೆಚ್ಚರಿಕೆ ಡೋಸ್ ಪಡೆಯುವುದು ಉತ್ತಮ. ಮೂರನೇ ಅಲೆಯಲ್ಲಿ ನಿತ್ಯ ಮೂರು ಲಕ್ಷ ಪ್ರಕರಣಗಳು ವರದಿಯಾಗಿದೆ. ಆಗಲೂ ನಮ್ಮ ರಾಜ್ಯಗಳು ಪರಿಸ್ಥಿತಿ ನಿಭಾಯಿಸಿವೆ. ಈಗಲೂ ನಮ್ಮ ತಜ್ಞರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎಂದರು.

    COVID HIKE 2

    ಇವತ್ತಿನ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ಮಾಡಿದೆ. ಈಗಾಗಲೇ ಸಾಕಷ್ಟು ಸುಧಾರಣೆಯಾಗಿದೆ. ಆಕ್ಸಿಜನ್, ವೆಂಟಿಲೇಟರ್ ವಿಚಾರಣದಲ್ಲಿ ನಾವು ಅಭಿವೃದ್ಧಿ ಸಾಧಿಸಿದ್ದೇವೆ. ಕೊರೊನಾ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ. ಈ ದೀರ್ಘ ಹೋರಾಟದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕೊರೊನಾದಿಂದ ಆಗುವ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಭಾಯಿಸಬೇಕು. ಈ ಹಿಂದೆಯೂ ಎರಡು ಸರ್ಕಾರಗಳು ಇಂತಹ ಪ್ರಯತ್ನ ಮಾಡಿವೆ. ಆರ್ಥಿಕ ನಿರ್ಧಾರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೊಂದಾಣಿಕೆ ಅವಶ್ಯಕತೆ ಇದೆ. ಇದೊಂದು ಯುದ್ಧದ ಪರಿಸ್ಥಿತಿ ಇದ್ದಂತೆ. ಇಂತಹ ದಿನಗಳಲ್ಲಿ ಎರಡು ಸರ್ಕಾರಗಳ ಮಧ್ಯೆ ಹೊಂದಾಣಿಕೆ ಮುಖ್ಯ ಎಂದು ಆಶಯ ವ್ಯಕ್ತಪಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿಗಳ ನೇತೃತ್ವದಲ್ಲಿ ಇದು 24ನೇ ಕೋವಿಡ್ ಸಭೆ. ಈಗಾಗಲೇ ಪ್ರಧಾನಿಗಳ ನೇತೃತ್ವದಲ್ಲಿ ಮೂರು ಅಲೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅದರಂತೆ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ತಿಳಿಸಿದರು.

    ತಜ್ಞರ ಸಲಹೆಗಳ ಆಧಾರದಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜನರು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಮಾಡಬೇಕು. ಕಾಲ ಕಾಲಕ್ಕೆ ಅಗತ್ಯ ಕ್ರಮಗಳೊಂದಿಗೆ ನಾಲ್ಕನೇ ಅಲೆ ನಿಯಂತ್ರಣ ಮಾಡಬೇಕು ಎಂದರು.

    ಇದೇ ವೇಳೆ ಕರ್ನಾಟಕದ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕಾಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು. ಈ ವೇಳೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಸಿಎಸ್ ರವಿಕುಮಾರ್ ಉಪಸ್ಥಿತರಿದ್ದರು.

  • ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್‌ʼ ಸಭೆ

    ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಪ್ರಧಾನ ಮಂತ್ರಿ ಕಚೇರಿ (PMO) ಪ್ರಕಾರ, ವರ್ಚುವಲ್ ಸಭೆಯು ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಲೈಂಗಿಕ ದೌರ್ಜನ್ಯ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    covid india

    ಪ್ರಧಾನ ಮಂತ್ರಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆಯಾ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

    ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಕೋವಿಡ್‌ ವಿಷಯವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,483 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬುಲೆಟಿನ್ ಪ್ರಕಾರ, ಸಕ್ರಿಯ ಪ್ರಕರಣ 15,636 ಇದ್ದರೆ, ಪಾಸಿಟಿವಿಟಿ ದರ ಶೇ.0.55 ಆಗಿದೆ.

    ಭಾನುವಾರದ ‘ಮನ್ ಕಿ ಬಾತ್’ ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿ ಅವರು, ಹಬ್ಬದ ಋತುವಿನಲ್ಲಿ ಕೋವಿಡ್‌ ವಿಚಾರವಾಗಿ ಜಾಗರೂಕರಾಗಿರಿ ಎಂದು ಜನರಿಗೆ ತಿಳಿಸಿದ್ದರು. ಕೋವಿಡ್ ನಿಯಂತ್ರಣಕ್ಕಾಗಿ ಜನರು ಮಾಸ್ಕ್ ಧರಿಸಿ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದ್ದರು.

  • ಸಿಎಂ ಸಂಚರಿಸುವ ಕಡೆ ರೋಡ್ ಹಂಪ್ಸ್ ತೆರವು: ಸಾರ್ವಜನಿಕರ ಆಕ್ರೋಶ

    ಸಿಎಂ ಸಂಚರಿಸುವ ಕಡೆ ರೋಡ್ ಹಂಪ್ಸ್ ತೆರವು: ಸಾರ್ವಜನಿಕರ ಆಕ್ರೋಶ

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೆ ಇಂದು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಸಿಎಂ ಅಗಮನ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಹಂಪ್ಸ್ ರಹಿತ ಸಂಚಾರ ಒದಗಿಸುವ ನಿಟ್ಟಿನಲ್ಲಿ ಸಿಎಂ ಸಂಚರಿಸುವ ಮಾರ್ಗದೆಲ್ಲೆಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ.

    ಸಿಎಂ ಹಾಗೂ ಸಚಿವರು ಬರುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಹಂಪ್ಸ್ ತೆರವುಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಸಂಕೇಶ್ವರ, ಹುಕ್ಕೇರಿ, ಬಡಕುಂದ್ರಿ ಮಾರ್ಗದ 50ಕ್ಕೂ ಹೆಚ್ಚು ಕಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಶಾಲಾ ಕಾಲೇಜುಗಳ ಬಳಿ ಅಳವಡಿಸಿದ್ದ ರೋಡ್ ಹಂಪ್ಸ್‍ಗಳನ್ನು ಸಹ ತೆರವುಗೊಳಿಸಲಾಗಿದೆ. ಸ್ಪೀಡ್ ಬ್ರೇಕರ್ ತೆರವಿನಿಂದ ಅಪಘಾತಗಳು ಸಂಭವಿಸಿದರೇ ಯಾರು ಹೊಣೆ? ಜನಸಾಮಾನ್ಯರಿಗೆ ಒಂದು ನ್ಯಾಯ ಸಿಎಂ ಹಾಗೂ ಸಚಿವರಿಗೆ ಒಂದು ನ್ಯಾಯನಾ ಎಂದು ಲೋಕೋಪಯೋಗಿ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ರಾಜ್ಯದ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಸ್ತೆ ರೀಪೇರಿ ಮಾಡುವುದು. ರೋಡ್ ಹಂಪ್ಸ್ ತೆರುವುಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಹಣದಲ್ಲಿ ಅಧಿಕಾರಿಗಳು ಹಾಗೂ ಸಚಿವರು ದರ್ಬಾರ್ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

  • ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

    ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

    – ಮುಖ್ಯಮಂತ್ರಿಗಳಿಂದ 5 ಲಕ್ಷ ಲಸಿಕೆಗೆ ಬೇಡಿಕೆ

    ಬೆಂಗಳೂರು: ರಾಜ್ಯಾದ್ಯಂತ ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ರಾಜ್ಯಾದ್ಯಂತ ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದ್ದು, ಕೊರೊನಾ ಲಸಿಕೆ ಪಡೆದಿರುವ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಮಾತ್ರ ಕಾಲೇಜು ಹಾಜರಾತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕೋವಿಡ್ ನಿರ್ವಹಣೆಗಾಗಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ:
    ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ವೈದ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ಮೇಲಿನವರೆಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮಧ್ಯಮ, ಹಿರಿಯ ವಯಸ್ಸಿನವರಿಗೆ ನೀಡುವ ಚಿಕಿತ್ಸೆಯನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಈ ವಯೋಮಾನದವರಿಗೆ ಸೋಂಕು ಬಂದರೆ ಮಕ್ಕಳ ತಜ್ಞರ ಬಳಿಯೇ ಹೋಗಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದರು.

    ತರಬೇತಿಯನ್ನು ವಿಷಯ ತಜ್ಞರು ನೀಡುತ್ತಿದ್ದು, ಇದನ್ನು ದಾಖಲೆಯಾಗಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಇಲ್ಲಿ ನೀಡುವ ತರಬೇತಿಯನ್ನು ವೀಡಿಯೋ ರೆಕಾರ್ಡ್ ಮಾಡಿಸಿ ದಾಖಲಿಸಬೇಕು. ಇತರೆ ವೈದ್ಯರಿಗೂ ಈ ವಿಷಯ ತಿಳಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

    ಡಾ.ದೇವಿಶೆಟ್ಟಿ ಸಮಿತಿ ಮೂರನೇ ಅಲೆ ಸಿದ್ಧತೆಗೆ ವರದಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಿದ್ದು, ಮುಂದುವರಿದ ದೇಶಗಳು ಕೂಡ ಎಡವಿದೆ. ಮೊದಲ ಅಲೆಯಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಎರಡನೇ ಅಲೆಗೆ ಮುನ್ನ ಮೂಲಸೌಕರ್ಯ ಹೆಚ್ಚಿಸಲಾಗಿದೆ. 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

    ಕೇರಳ, ಮಹಾರಾಷ್ಟ್ರ ಗಡಿ ಹಂಚಿಕೊಳ್ಳುವುದರಿಂದ ಕೋವಿಡ್ ಬಗ್ಗೆ ಎಚ್ಚರವಾಗಿರಬೇಕು. ಸೋಂಕು ಇನ್ನೂ ಇರುವುದರಿಂದ ಸುರಕ್ಷತಾ ಕ್ರಮ ವಹಿಸಬೇಕು. ಬೆಂಗಳೂರು ನಗರ ಜಿಲ್ಲೆ ಕೋವಿಡ್ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ ಎಲ್ಲ ಸಿಬ್ಬಂದಿಗೆ ಧನ್ಯವಾದ ಎಂದರು.

    ಮಕ್ಕಳಿಗೆ ಚಿಕಿತ್ಸೆ:
    ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಆರೈಕೆಗಾಗಿ ವಿಶೇಷ ವಿಭಾಗ ಆರಂಭಿಸಲಾಗುತ್ತಿದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸಲಾಗಿದೆ. ಹಲವು ದೇಶಗಳಲ್ಲಿ ಮೂರನೇ ಅಲೆ ಬಂದಿದೆ. ಮೈಮರೆತರೆ ಮೂರನೇ ಅಲೆ ನಾವೇ ಉಂಟುಮಾಡಿದಂತಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಕನಿಷ್ಠ ಶೇ.70 ಜನಸಂಖ್ಯೆಗೆ ಲಸಿಕೆ ನೀಡುವವರೆಗೂ ಎಚ್ಚರ ಅಗತ್ಯ ಎಂದರು.

    ಪ್ರಧಾನಿಗಳು, ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ನಮ್ಮ ಮುಖ್ಯಮಂತ್ರಿಗಳು ದಿನಕ್ಕೆ 5 ಲಕ್ಷ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ. ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈಗಾಗಲೇ 2.40 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ ಎಂದು ಸಿಎಂ ಮನವಿ ಮಾಡಿದ್ದಾರೆ. ಈ ತಿಂಗಳಲ್ಲೇ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ ಎಂದರು.

    ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ಲಸಿಕೆ ಹೆಚ್ಚು ನೀಡಲು ಹಾಗೂ ಕಂಟೇನ್ ಮೆಂಟ್ ನಿಯಮ ಪಾಲಿಸಲು ಸೂಚಿಸಿದ್ದಾರೆ. ಈಗಾಗಲೇ ಮೂಲಸೌಕರ್ಯ ಹೆಚ್ಚಳಕ್ಕೆ 23 ಸಾವಿರ ಕೋಟಿ ರೂ. ಅನ್ನು ಕೇಂದ್ರ ನೀಡಿದೆ. ಇದನ್ನು ಗ್ರಾಮೀಣ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಬಳಸಲು ಸಲಹೆ ನೀಡಲಾಗಿದೆ ಎಂದರು.

  • ನಾಳೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

    ನಾಳೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಸೇರಿದಂತೆ ವಿವಿಧ ಕ್ರಮ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಧಾನಿ ಸಭೆಯಲ್ಲಿ ಚರ್ಚಿಸಲಿದ್ದಾರೆ. ಮೇ 17ರಂದು ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯವಾಗಲಿದೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು, ರಾಜ್ಯದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂಬ ವಿಚಾರವಾಗಿ ಸಲಹೆ ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮೂಲಗಳ ಪ್ರಕಾರ, ಕೊರೊನಾ ಸೋಂಕಿತರ ಸಂಖ್ಯೆ ಆಧಾರದ ಮೇಲೆ ಮಾಡಿರುವ ರೆಡ್, ಆರೇಂಜ್ ಹಾಗೂ ಗ್ರೀನ್ ಝೋನ್ ನಿಯಮಗಳ ಬಗ್ಗೆ ಅನೇಕ ರಾಜ್ಯಗಳು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿವೆ. ಜೊತೆಗೆ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಹೋಗಲು ನೀಡಿದ ಎಡವಟ್ಟಿನಿಂದ ಗ್ರೀನ್ ಝೋನ್ ಪ್ರದೇಶಗಳು ಕೂಡ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿವೆ ಎಂಬುದು ಅನೇಕ ರಾಜ್ಯಗಳ ಆರೋಪವಾಗಿದೆ.

    ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಮೀಷನರ್ ಜೊತೆಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಮುಂದಿನ ನಡೆಯ ಬಗ್ಗೆ ಸಲಹೆಯನ್ನು ಪಡೆಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

  • ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಕೊರೊನಾ ವೈರಸ್ ಸೋಂಕು ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಚರ್ಚೆ ಮಾಡಲಿದ್ದಾರೆ. ಈ ಹಿಂದೆ ಲಾಕ್‍ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯ ವಿಚಾರವಾಗಿ ಎರಡು ಬಾರಿ ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಮೊದಲ ಬಾರಿಗೆ ಮಾರ್ಚ್ 20ರಂದು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದು ಮಾರ್ಚ್ 24ರಂದು ದೇಶಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಯ್ತು.

    ಮಾಚ್ 24ರ ಬಳಿಕ 21 ದಿನಗಳ ಲಾಕ್‍ಡೌನ್ ಮುಕ್ತಾಯವಾಗುವುದಕ್ಕೂ ಮುನ್ನವೇ ಎರಡನೇ ವಿಡಿಯೋ ಕಾನ್ಫರೆನ್ಸ್ ಅನ್ನು ಏಪ್ರಿಲ್ 11ರಂದು ನಡೆಸಿ, ಏಪ್ರಿಲ್ 14ಕ್ಕೆ ಮುಗಿಯಬೇಕಿದ್ದ ಲಾಕ್‍ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಯಿತು.

    ಸದ್ಯ ಏಪ್ರಿಲ್ 20ರ ಬಳಿಕ ಕೇಂದ್ರದ ನಿರ್ದೇಶನದ ಪ್ರಕಾರವೇ ಕೆಲವು ರಾಜ್ಯಗಳು ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿವೆ. ಹೀಗಾಗಿ ಈ ಬಗ್ಗೆ ಚರ್ಚೆ, ಮಾಹಿತಿ ಪಡೆಯಲು ಏಪ್ರಿಲ್ 27ರಂದು ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

    ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,486 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 49 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈವರೆಗೆ ಭಾರತದಲ್ಲಿ 20,471 ಮಂದಿಗೆ ಸೋಂಕು ತಗುಲಿದ್ದು, 3,960 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 652 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

  • ರಾಮನಗರ ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿಯಾದವರಿಗೆ ಪೂರ್ಣಾವಧಿ ಭಾಗ್ಯವೇ ಇಲ್ಲ

    ರಾಮನಗರ ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿಯಾದವರಿಗೆ ಪೂರ್ಣಾವಧಿ ಭಾಗ್ಯವೇ ಇಲ್ಲ

    ರಾಮನಗರ: ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿ ಜವಾಬ್ದಾರಿ ಹೊತ್ತ ಯಾರೊಬ್ಬರಿಗೂ ಪೂರ್ಣಾವಧಿ ಭಾಗ್ಯ ಸಿಕ್ಕಿಲ್ಲ.

    ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಪೈಕಿ ಒಟ್ಟು ನಾಲ್ವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಅವರಲ್ಲಿ ಯಾರೊಬ್ಬರೂ 5 ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಲೇ ಇಲ್ಲ. ಅಷ್ಟೇ ಅಲ್ಲದೆ ಎರಡು ಬಾರಿ ಆಯ್ಕೆಯಾದರೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣಗೊಳ್ಳುವ ಮುನ್ನವೇ ಪತನಗೊಂಡಿದೆ.

    ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಸಿಎಂ ಆಗಿದ್ದರು. ಆದರೆ ನಾಲ್ವರಲ್ಲಿ ಒಬ್ಬರೇ ಒಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕುಮಾರಸ್ವಾಮಿ ಅವರು ಮೊದಲ ಬಾರಿ 20 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದ್ದರು. 2018ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದ ಸಿಎಂ 14 ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

    ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಅಧಿಕಾರ ನಡೆಸಿದ್ದರೆ, ರಾಮಕೃಷ್ಣ ಹೆಗಡೆ 12 ತಿಂಗಳು ಅಧಿಕಾರದಲ್ಲಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 17 ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು.

  • ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

    ನೀತಿ ಆಯೋಗದ ಐದನೇ ಆಡಳಿತ ಮಂಡಳಿ ಸಭೆ ಶನಿವಾರ ನಡೆದಿದ್ದು, ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಯಗಳಿಸಿ ಅಧಿಕಾರದ ಗದ್ದುಗೆಯನ್ನೇರಿದ ಎನ್‍ಡಿಎ ಸರ್ಕಾರದ ಮೊದಲ ನೀತಿ ಆಯೋಗದ ಸಭೆಯನ್ನು ಮೂವರು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಮುಖ ನಾಯಕರು, ಅಧಿಕಾರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಭಾಗವಹಿಸಿದ್ದರು.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹವಾಮಾನದ ವೈಪರಿತ್ಯದಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಮರಿಂದರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆಗೂ ಗೈರಾಗಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟಿಆರ್‍ಎಸ್ ನಾಯಕ ಹಾಗೂ ಮಾಜಿ ಸಂಸದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ ಗುರುವಾರದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಕುರಿತು ಕೆಸಿಆರ್ ಖಚಿತಪಡಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತಬಂಧು ಯೋಜನೆ ಕುರಿತು ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆಯಲು ತಯಾರಾಗಿದ್ದರು. ಈ ಯೋಜನೆ ವಿವಿಧ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಸಹ ಹೇಳಿದ್ದರು. ಆದರೆ, ದಿಢೀರನೆ ನೀತಿ ಆಯೋಗದ ಸಭೆಯನ್ನು ಕೆಸಿಆರ್ ತಿರಸ್ಕರಿಸಲು ಕಾರಣ ಏನೆಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಧಾನಿಗಳ ಭೇಟಿಗೆ ಅನುಮತಿ ಕೋರಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅನುಮತಿ ದೊರೆಯದ ಹಿನ್ನೆಲೆ ಕೆಸಿಆರ್ ಅವರು ಅಸಮಾಧಾನಗೊಂಡು ನೀತಿ ಆಯೋಗದ ಸಭೆಗೆ ಗೈರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದು, ನೀತಿ ಆಯೋಗದ ಸಭೆಯಿಂದ ಏನೂ ಫಲಪ್ರದವಿಲ್ಲ. ರಾಜ್ಯದ ಯೋಜನೆಗಳಿಗೆ ಹಣ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ ಎಂದು ದೂರಿದ್ದಾರೆ.