Tag: ಮುಖಂಡರು

  • ಪೌರ ಕಾರ್ಮಿಕರಿಗೆ ಬಿರಿಯಾನಿ ನೀಡಿ, ಪಾದ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡರು

    ಪೌರ ಕಾರ್ಮಿಕರಿಗೆ ಬಿರಿಯಾನಿ ನೀಡಿ, ಪಾದ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡರು

    ಕೋಲಾರ: ಜಿಲ್ಲೆಯ ಬಿಜೆಪಿ ಮುಖಂಡರು ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಚಿಕನ್ ಬಿರಿಯಾನಿ ವಿತರಿಸುವುದರ ಜೊತೆಗೆ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದರು.

    ಕೆಜಿಎಫ್ ನಗರದಲ್ಲಿ ಪೌರಕಾರ್ಮಿಕರಿಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಹೀಗೆ ವಿಭಿನ್ನವಾಗಿ ಗೌರವ ಸಲ್ಲಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ಆಹಾರ ಪದಾರ್ಥ ಹಾಗೂ ಊಟವನ್ನ ನೀಡುತ್ತಿದ್ದ ತಾಲೂಕು ಬಿಜೆಪಿ ಮುಖಂಡರು ಮಂಗಳವಾರ ಪೌರಕಾರ್ಮಿಕರಿಗೆ ಪಾದ ಪೂಜೆ ಸಲ್ಲಿಸಿ, ಆಹಾರ ಪದಾರ್ಥಗಳೊಂದಿಗೆ ಚಿಕನ್ ಬಿರಿಯಾನಿ ನೀಡಿದರು.

    ಕೆಜಿಎಫ್ ನಗರವನ್ನ ಸ್ವಚ್ಛಗೊಳಿಸುವ ಮೂಲಕ ಮಾರಕ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪೌರ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಹೀಗಾಗಿ ಅವರ ಪಾದ ಪೂಜೆ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

    ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ನಾರಾಯಣ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ಬಿರಿಯಾನಿ ಹಂಚಿಕೆ ಮಾಡಿದ್ದು, ಕೆಜಿಎಫ್ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ಹಾಜರಿದ್ದರು.

  • ಬಿಜೆಪಿ, ಕಾಂಗ್ರೆಸ್ಸಿಗೆ ಹೋಗ್ತಾರಾ ಅಸಮಾಧಾನಿತರು- ಜೆಡಿಎಸ್ ಸಭೆಯಲ್ಲಿ ನಿರ್ಧಾರ

    ಬಿಜೆಪಿ, ಕಾಂಗ್ರೆಸ್ಸಿಗೆ ಹೋಗ್ತಾರಾ ಅಸಮಾಧಾನಿತರು- ಜೆಡಿಎಸ್ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ವರಿಷ್ಠರ ಮೇಲೆ ಸಿಟ್ಟಾಗಿರೋ ಜೆಡಿಎಸ್ ಅಸಮಾಧಾನಿತ ಮುಖಂಡರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

    ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಅಸಮಾಧಾನಿತ ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ನಂತರವೂ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಗೌರವ ಕೊಡ್ತಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.

    ಹೀಗಾಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಮಾಡಲು ಸಭೆ ಸೇರುತ್ತಿದ್ದಾರೆ. ಜೆಡಿಎಸ್‍ನಲ್ಲೇ ಮುಂದುವರಿಯಬೇಕಾ ಅಥವಾ ಬೇರೆ ಪಕ್ಷಕ್ಕೆ ಹೋಗಬೇಕಾ ಎಂಬುದರ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇಂದಿನ ಸಭೆ ಬಳಿಕ ನವೆಂಬರ್ ನಲ್ಲಿ ಮತ್ತೊಂದು ಸಭೆ ಸೇರಲು ನಿರ್ಧಾರ ಮಾಡಿದ್ದಾರೆ.

    ಬಹುತೇಕ ಅಸಮಾಧಾನಿತ ಮುಖಂಡರು ಉಪ ಚುನಾವಣೆ ಬಳಿಕ ಮಹತ್ವ ನಿರ್ಧಾರ ತೆಗೆದುಕೊಳ್ಳುವ ಚಿಂತನೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿವೆ. ಇದೆಲ್ಲ ನಿಜನಾ ಅನ್ನೋದು ಇಂದಿನ ಸಭೆಯಲ್ಲಿ ಗೊತ್ತಾಗಲಿದೆ.

  • ಎಲ್ಲರಿಗೂ ಜ್ಞಾನೋದಯವಾಗಿದೆ, ಮೈತ್ರಿ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ – ಜಿ.ಟಿ ದೇವೇಗೌಡ

    ಎಲ್ಲರಿಗೂ ಜ್ಞಾನೋದಯವಾಗಿದೆ, ಮೈತ್ರಿ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ – ಜಿ.ಟಿ ದೇವೇಗೌಡ

    ಮಂಡ್ಯ: ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ಸರ್ಕಾರದ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ. ಎಲ್ಲಾ ನಾಯಕರಿಗೂ ಜ್ಞಾನೋದಯವಾಗಿದೆ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರು ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಾಟ್ಟಾಗಿದ್ದು ಒಂದೇ ತಟ್ಟೆಯಲ್ಲಿ ಊಟ ಮಾಡುವವರು ಎಂದು ಬುದ್ದಿ ಹೇಳಿದ್ದಾರೆ. ಇನ್ನು ಮುಂದೆ ಮೈತ್ರಿ ನಾಯಕರ ವಾಕ್ಸಮರ ನಿಲ್ಲುತ್ತದೆ ಎಂದು ಹೇಳಿದ್ದಾರೆ.

    ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ದೇಶದ ಫಲಿತಾಂಶ ಏನಾಗುತ್ತೆ ಎಂದು ಮೇ 23ರ ತನಕ ಕಾಯುತ್ತಾ ಇದ್ದಾರೆ. ದೇಶದಲ್ಲಿ ಏನಾಗುತ್ತೆ ಯಾರು ಪ್ರಧಾನಿಯಾಗುತ್ತಾರೆ ಎಂದು ಆ ದಿನ ತೀರ್ಮಾನವಾಗುತ್ತದೆ. ಅದನ್ನು ಬಿಟ್ಟರೆ ರಾಜ್ಯದ ರಾಜಕೀಯದ ಮೇಲೆ ಈ ಫಲಿತಾಂಶದಿಂದ ಏನೂ ಆಗುವುದಿಲ್ಲ ಎಂದರು.

    ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನೂ ನಾಲ್ಕು ವರ್ಷದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುತ್ತೆ ಹಾಗೆಯೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಕುಮಾರಸ್ವಾಮಿ ಕರೆಯಬೇಕಿತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಈಗಾಗಲೇ ಚುನಾವಣೆ ಮುಗಿದು ಹೋಗಿದೆ. ಅದೆಲ್ಲಾ ಮುಗಿದ ವಿಚಾರ ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.

  • ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಮೈಸೂರು: ಮೂವರು ಮಹಿಳಾ ಅಡುಗೆ ಕೆಲಸಗಾರರಿಗೆ ಊರಿನ ಮುಖಂಡರು ತಮ್ಮ ಮಾತು ಕೇಳದೆ ಇದ್ದಿದ್ದಕ್ಕೆ ಕಿರುಕುಳ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

    ಸವ್ವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ, ದೇವಮ್ಮ, ಸಿದ್ದಮ್ಮ ಕಿರುಕುಳಕ್ಕೆ ಒಳಗಾದ ಮಹಿಳೆಯರು. ಶಾಲೆಯ ಆಂತರಿಕ ವಿಚಾರಕ್ಕೆ ಗ್ರಾಮದ ಮುಖಂಡರು ತಲೆ ಹಾಕಿದ್ದರು. ಇದರಿಂದಾಗಿ ಮೂವರು ಅಡುಗೆಯವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಹಿಳೆಯರು ನಮ್ಮ ಶಾಲೆಯ ವಿಚಾರಕ್ಕೆ ಬರದಂತೆ ಮನವಿ ಕೂಡ ಮಾಡಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡು ಗ್ರಾಮದ ಮುಖಂಡರು ಈ ಕೃತ್ಯವನ್ನು ಎಸಗಿದ್ದಾರೆ.

    ಮಂಗಳವಾರ ಶಾಲೆಗೆ ನುಗ್ಗಿ ಗಲಾಟೆ ನಡೆಸಿರುವ ಕೆಲ ಗ್ರಾಮಸ್ಥರು ಅಡುಗೆ ಮಾಡುತ್ತಿದ್ದ ಮೂವರು ಅಡುಗೆಯವರನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಮೂವರಿಗೂ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

    ಬೆಂಕಿ ಬಿಸಿನೀರು ಕೊಡದಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಎಲ್ಲಾ ದೃಶ್ಯಗಳು ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ. ಸದ್ಯಕ್ಕೆ ಅಡುಗೆ ತಯಾರಕರನ್ನು ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲೆಕ್ಷನ್ ಹೊತ್ತಲ್ಲೇ ಡೀಲ್‍ಗಿಳಿದ್ರಾ ಬಿಜೆಪಿ ಮುಖಂಡರು?

    ಎಲೆಕ್ಷನ್ ಹೊತ್ತಲ್ಲೇ ಡೀಲ್‍ಗಿಳಿದ್ರಾ ಬಿಜೆಪಿ ಮುಖಂಡರು?

    ರಾಮನಗರ: ಮಾಗಡಿ ಶಾಸಕ ಎ ಮಂಜುನಾಥ್ ರಿಂದ ತೆರವಾಗಿದ್ದ ಕುದೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳಲು ಡೀಲ್ ನಡೆದಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

    ಕುದೂರು ಜಿ.ಪಂ ನ ಬಿಜೆಪಿ ಅಭ್ಯರ್ಥಿಯಾಗಿ ಹೇಮಂತ್ ನಾಮಪತ್ರ ಸಲ್ಲಿಸಿದ್ರು. ಆದ್ರೆ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಹಾಗೂ ತಾಲೂಕು ಅಧ್ಯಕ್ಷ ರಂಗಧಾಮಯ್ಯ ಒತ್ತಡ ಹೇರಿ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವಂತೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.

    ನಾಮಪತ್ರ ಸಲ್ಲಿಸುವುದು ಬೇಡ ಎಂದು ಜೆಡಿಎಸ್ ಮುಖಂಡರು ಧಮ್ಕಿ ಕೂಡ ಹಾಕಿದ್ರು. ಆನಂತರ ರುದ್ರೇಶ್ ಹಾಗೂ ರಂಗಧಾಮಯ್ಯ ಕಾಂಗ್ರೆಸ್- ಜೆಡಿಎಸ್ ನಾಯಕರ ಜೊತೆ ಡೀಲ್ ಮಾಡಿಕೊಂಡಿದ್ದಾರೆ. ಹಣ ನೀಡುವುದು ಬೇಡ ನಾನು ಬರಿಗೈನಲ್ಲೆ ಮತಯಾಚನೆ ಮಾಡುತ್ತೇನೆ ಎಂದರೂ ಬಿಡಲಿಲ್ಲ. ಹೀಗಾದ್ರೆ ಯಾಕೆ ಬೇಕು ಬಿಜೆಪಿ ಸಹವಾಸ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ದೂರ ಉಳಿಯುವುದಾಗಿ ನಾಮಪತ್ರ ಸಲ್ಲಿಸಿದ್ದ ಹೇಮಂತ್ ಸ್ನೇಹಿತನೋರ್ವನ ಬಳಿ ಅಳಲು ತೋಡಿಕೊಂಡಿದ್ದಾರೆ.

    ಇದೀಗ ಇಬ್ಬರು ಡೀಲ್ ವಿಚಾರದ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಬೆಂಗಳೂರು: ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಪಕ್ಷಗಳ ಮುಖಂಡರುಗಳಲ್ಲಿ ಕೈ ಮುಗಿದು ಕೇಳಿಕೊಂಡರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಹಿತ ಕಾಪಾಡಲು, ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದು, ಮಹದಾಯಿಗಾಗಿ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ಕುರಿತು ಎಲ್ಲಾ ಪಕ್ಷದ ಮುಖಂಡರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಹಾದಾಯಿಗಾಗಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕಾಗಿದೆ. ಒಂದು ತೊಟ್ಟು ನೀರನ್ನು ಉಳಿಸಿಕೊಳ್ಳಲು, ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಐ-ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲಿ ಹಿರಿಯ ಅಧಿಕಾರಿಗಳ ತಂಡದ ಜೊತೆ ಮಹಾದಾಯಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಬೇರೆ ರಾಜ್ಯದ ನಡೆ ನಮಗೆ ಬೇಡದ ವಿಚಾರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಶ್ನೆ ಕೇಳುತ್ತಲೇ ಸ್ಥಳದಿಂದ ತರಾತುರಿಯಲ್ಲಿ ಸಚಿವರು ಹೊರಟು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಅಸ್ಥಿ ಬಿಡುವ ವೇಳೆ ನದಿಗೆ ಬಿದ್ದ ಬಿಜೆಪಿ ಮುಖಂಡರು

    ವಾಜಪೇಯಿ ಅಸ್ಥಿ ಬಿಡುವ ವೇಳೆ ನದಿಗೆ ಬಿದ್ದ ಬಿಜೆಪಿ ಮುಖಂಡರು

    ಲಕ್ನೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಉತ್ತರ ಪದೇಶದ ಬಸ್ತಿ ಜಿಲ್ಲೆಯ ನದಿಗೆ ಬಿಡುವ ವೇಳೆ ಕೆಲವು ಬಿಜೆಪಿ ಮುಖಂಡರು ಬೋಟ್‍ನಿಂದ ಜಾರಿ ನೀರಿಗೆ ಬಿದ್ದಿದ್ದಾರೆ.

    ಉತ್ತರ ಪ್ರದೇಶದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ರಾಮಪತಿ ರಾಮ್ ತ್ರಿಪಾಟಿ, ಸಂಸದ ಹರೀಶ್ ದ್ವಿವೇದಿ, ಶಾಸಕ ರಾಮ್ ಚೌದರಿ, ಕೆಲವು ಹಿರಿಯ ಮುಖಂಡರು ಮತ್ತು ಪೊಲೀಸ್ ಅದೀಕ್ಷಕ ದಿಲಿಪ್ ಕುಮಾರ್ ಆಯತಪ್ಪಿ ಬೋಟ್‍ನಿಂದ ನೀರಿಗೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ನೀರಿಗೆ ಹಾರಿ ಎಲ್ಲರನ್ನೂ ರಕ್ಷಿಸಿದ್ದಾರೆ.

    ಬೋಟ್ ಮೇಲೆ ನಿಲ್ಲಲು ಮಾಡಿದ್ದ ವೇದಿಕೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದಾಗಿ ಬೋಟ್ ವಾಲಿ ಅನೇಕರು ನದಿಗೆ ಬಿದ್ದಿದ್ದಾರೆ. ನದಿಯ ದಂಡೆಯಲ್ಲಿಯೇ ಘಟನೆ ಸಂಭವಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನದಿಗೆ ಕೆಲವರು ಬೀಳುತ್ತಿದ್ದಂತೆ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಬತ್ತಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರಾಜಶೇಖರ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳೆ ಸಾಲಮನ್ನಾ ಕೇವಲ ರೈತರ ಮೂಗಿಗೆ ತುಪ್ಪಸವರುವಂತಿದೆ: ಕೋಡಿಹಳ್ಳಿ ಚಂದ್ರಶೇಖರ್

    ಬೆಳೆ ಸಾಲಮನ್ನಾ ಕೇವಲ ರೈತರ ಮೂಗಿಗೆ ತುಪ್ಪಸವರುವಂತಿದೆ: ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪಸವರುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

    ಸಂಪೂರ್ಣ ಸಾಲಮನ್ನಾ ಕುರಿತು ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಸಾಲಮನ್ನಾ ಹೇಳಿಕೆಯು ಲೋಕಸಭೆ ಚುನಾವಣೆಯ ಗಿಮಿಕ್ ಎನ್ನುವುದು ನಮಗೆ ಈಗ ಅರ್ಥವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿಎಂ ಸಾಲ ಮನ್ನಾದ ವಿಚಾರ ಪ್ರಸ್ತಾಪವಾದಗೆಲ್ಲ ಸಿಡಿಮಿಡಿಗೊಳ್ಳುತ್ತಾರೆ. ಕೊಪ್ಪಳದಲ್ಲಿ ರೈತ ಮುಖಂಡರಿಗೆ ತರಾಟೆಗೆ ತೆಗೆದುಕೊಂಡು, ಇವರು ವೋಟ್ ಹಾಕಿಲ್ಲ ಸಾಲ ಮನ್ನಾ ಮಾಡಿ ಅಂತಾ ಕೇಳುತ್ತಾರೆ ಎಂದು ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಬಗ್ಗೆ ಮಾತಾನಾಡೋಕೆ ನನಗೆ ಯಾವ ಭಯವೂ ಇಲ್ಲ, ಅವರು ನನ್ನ ಚಿಕ್ಕಪ್ಪನ ಮಗನೂ ಅಲ್ಲ, ದೊಡ್ಡಪ್ಪನೂ ಮಗನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಮೊದಲು ಸಾಲ ಮನ್ನಾದ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾದಾಗ ಸಾಕಷ್ಟು ಸತಾಯಿಸಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನನ್ನ ಜೊತೆ ಸಿಟ್ಟಿನಲ್ಲಿ ಮಾತಾನಾಡಿದ್ದರು. ರೈತರಿಗೆ ವೋಟು ಹಾಕೋವಾಗ ಈ ಜ್ಞಾನ ಇರಲ್ವಾ? ಸಾಲ ಮನ್ನಾಕ್ಕೆ ಕೇಳೋಕೆ ಬರ್ತೀರಾ ಅಂತಾ ನನ್ನನ್ನೆ ಪ್ರಶ್ನಿಸಿದ್ದರು. ನಾನು ಅವರ ಮನವೊಲಿಕೆ ಮಾಡಿದ ನಂತರ ಸಿಎಂ ನಾನು ನಿಮ್ಮ ಬಗ್ಗೆ ಮಾತಾಡಿಲ್ಲ ಅಂತ ಹೇಳಿದ್ದರು. ಹಾಗಾದರೆ ಅವರು ಬೇರೆ ರೈತ ಮುಖಂಡರ ಬಗ್ಗೆ ಟಾರ್ಗೆಟ್ ಮಾಡಿ ನನ್ನನ್ನು ನಿಂದಿಸಿ ಮಾತನಾಡಿದ್ದಾರೆ. ಸಿಎಂ ಬಹಳ ದಂದ್ವ ನೀತಿಯಲ್ಲಿ ಇರುವಂತಿದೆ ಎಂದು ರೈತರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

    ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಘೋಷಣೆ ಬಳಿಕವು, ವಿಮೆ ಕಡಿತ ಸೇರಿದಂತೆ ಸಾಲ ಪಾವತಿಗಾಗಿ ಬ್ಯಾಂಕುಗಳು ಪದೇ ಪದೇ ನೋಟಿಸ್ ಕಳುಹಿಸುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ರೈತರು ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ!

    ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ!

    ಕೊಪ್ಪಳ: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಉಳಿದಿದೆ ಅನ್ನೋದಕ್ಕೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರು ಕಾರಣವಾಗಿದ್ದಾರೆ.

    ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿಯ ನೂತನ ಶಾಸಕರಾಗಿ ಇದೇ ಮೊದಲ ಬಾರಿಗೆ ಬಸವರಾಜ ದಡೆಸುಗುರು ಜಯಶಾಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಶಾಸಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಾಗಿ ಇಂದು ಕನಕಗಿರಿ ಕ್ಷೇತ್ರದ ಗುಂಡೂರು ಗ್ರಾಮದಲ್ಲಿ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವ ನೆಪದಲ್ಲಿ ಬಿಜೆಪಿ ಮುಖಂಡರು, ಶಾಸಕರಿಗೆ ಅವಮಾನ ಮಾಡಿದ್ದಾರೆ. ಗಣ್ಯರಿಗೆ ಕುಳಿತುಕೊಳ್ಳಲು ವೇದಿಕೆಯಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ಅದರಲ್ಲಿ ವಿಶೇಷವಾಗಿ 2 ದರ್ಬಾರ್ ಕುರ್ಚಿಗಳನ್ನು ವೇದಿಕೆಯ ಮಧ್ಯಭಾಗದಲ್ಲಿ ಹಾಕಲಾಗಿದೆ. ಆ ದರ್ಬಾರ್ ಕುರ್ಚಿಗಳಲ್ಲಿ ಬಿಜೆಪಿ ಮುಖಂಡರಾದ ಸಾಲೋಣಿ ನಾಗಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಕೂತಿದ್ದರು. ಅವರ ಪಕ್ಕದಲ್ಲೇ ಬೇರೆ ಕುರ್ಚಿಯಲ್ಲಿ ಕ್ಷೇತ್ರದ ಶಾಸಕರನ್ನು ಕೂರಿಸಲಾಗಿತ್ತು.

    ಶಾಸಕ ಬಸವರಾಜ ದಡೆಸುಗುರು ಅವರು ದಲಿತರು ಎಂಬ ಕಾರಣಕ್ಕಾಗಿ ಅವರನ್ನು ಬೇರೆ ಕುರ್ಚಿಯನ್ನು ಹಾಕಿ ಕೂರಿಸಲಾಗಿತ್ತು. ಬಿಜೆಪಿ ಮುಖಂಡರ ಈ ತಾರತಮ್ಯ ನೀತಿ, ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಎದ್ದು ಕಾಣುವಂತಿತ್ತು.

  • ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ್ಕೆ ಈಗ ತಿರುವು ಸಿಗುತ್ತದೆ. ಮಹಾರಾಷ್ಟ್ರ ಕ್ಯಾಬಿನೆಟ್‍ನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ ಇದೆ. ಆದರೆ ಕರ್ನಾಟಕದಲ್ಲಿ ಯಾಕಿಲ್ಲ ಎಂದು ಧಾರ್ಮಿಕ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರ್ಕಾರ 2014 ರಲ್ಲೇ ಒಪ್ಪಿಗೆ ಸೂಚಿಸಿದೆ. ಒಪ್ಪಿಗೆ ಸೂಚಿಸುವ ಮುಂಚೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಒಂದು ಕ್ಯಾಬಿನೆಟ್ ಸಮಿತಿ ರಚನೆ ಮಾಡಿದ್ದು, ನಂತರ ಗ್ರೀನ್ ಸಿಗ್ನಲ್ ನೀಡಿತ್ತಂತೆ. ಅಂದಿನ ಮಹಾರಾಷ್ಟ್ರದ ಸರ್ಕಾರದ ಗ್ರೀನ್ ಸಿಗ್ನಲ್ ಆಧಾರವಾಗಿಟ್ಟುಕೊಂಡು ಕರ್ನಾಟಕದಲ್ಲೂ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಲಿಂಗಾಯತ ಸಮುದಾಯದ ಮುಖಂಡರು ಹಠಕ್ಕೆ ಬಿದ್ದಿದ್ದಾರೆ.

    ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ 10 ಮಂದಿ ತಜ್ಞರ ಸಮಿತಿ ರಚನೆಗೆ ಲಿಂಗಾಯಿತ ಮುಖಂಡರು ಪುನಃ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪದೇ ಪದೇ ಸಮಿತಿಗಳ ರಚನೆಯಿಂದ ಯಾವುದೇ ಅಂತಿಮ ನಿರ್ಧಾರ ಹೊರಬರುವುದಿಲ್ಲ. ಆದ್ದರಿಂದ ಅಂತಿಮ ನಿರ್ಧಾರವನ್ನು ಸರ್ಕಾರದ ಮುಂದೆ ಇಡಬೇಕು ಎಂದು ಸಮುದಾಯಗಳ ಮುಖಂಡರು ವಾದಿಸಿದ್ದಾರೆ.

    ಲಿಂಗಾಯುತ ಧರ್ಮದ ಮುಖಂಡರು ಈ ಹೊಸ ದಾಖಲೆಯನ್ನು ಹುಡುಕಿ ಎಲ್ಲರ ಮುಂದೆ ಇಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉಪಪಂಗಡಗಳನ್ನು ಒಟ್ಟಾಗಿ ಸೇರಿಸಿ ಕ್ಯಾಬಿನೆಟ್‍ನಲ್ಲಿ ಒಂದು ನೋಟ್ ರೆಡಿ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾಕೆ ಈ ರೀತಿ ಮಾಡುತ್ತಿಲ್ಲ ಎಂದು ಇದರ ಮೂಲಕ ಹೋರಾಟ ಮಾಡಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ವೀರಶೈವ ಲಿಂಗಾಯತ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎರಡು ಬಾರಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಲಿಂಗಾಯತ ಧರ್ಮ ಅಂತ ಹೋಗುವುದು ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.