Tag: ಮುಕೇಶ್ ಅಂಬಾರಿ

  • ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ನವದೆಹಲಿ: ರಿಲಯನ್ಸ್ ಜಿಯೋ ಆಫರ್‍ಗಳಿಂದಾಗಿ 7 ವರ್ಷದಲ್ಲಿ ಮೊದಲ ಬಾರಿಗೆ 9 ಟೆಲಿಕಾಂ ಕಂಪೆನಿಗಳ ಆದಾಯ 2016-17ರಲ್ಲಿ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ಲೈವ್‍ಮಿಂಟ್ ವರದಿ ಮಾಡಿದೆ.

    ಟೆಲಿಕಾಂ ಕಂಪೆನಿಗಳು 2015- 16ನೇ ಸಾಲಿನಲ್ಲಿ 19.3 ಲಕ್ಷ ಕೋಟಿ ರೂ. ಆದಾಯಗಳಿಸಿದ್ದರೆ, ಮುಂದಿನ ವರ್ಷಗಳಲ್ಲಿ ಈ ಆದಾಯ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ 18.7 ಲಕ್ಷ ಕೋಟಿ ರೂ. ಆದಾಯ ಬರಬಹುದೆಂದು ಈ ಹಿಂದೆ ಲೆಕ್ಕಾಚಾರ ಹಾಕಲಾಗಿತ್ತಾದರೂ ಅದೂ ಸಹ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಮುಕ್ತಾಯವಾದ ತ್ರೈಮಾಸಿಕ ಅವಧಿಯಲ್ಲಿ 9 ದೂರಸಂಪರ್ಕ ಕಂಪೆನಿಗಳ ಆದಾಯ ಶೇ. 1.1ರಷ್ಟು ಕುಸಿತವಾಗಿತ್ತು. ಇದು ಕಳೆದ 6 ತ್ರೈಮಾಸಿಕಗಳಲ್ಲೇ ದಾಖಲಾಗಿರುವ ಕಡಿಮೆ ಲಾಭದ ಪ್ರಮಾಣ ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‍ಟೆಲ್ ಆದಾಯದಲ್ಲಿ ಶೇ. 10.4ರ ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 10.8ರಷ್ಟು ಇಳಿಕೆಯಾಗಿತ್ತು ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಮೆಸೇಜ್, ಕರೆ, ಆಪ್ ಗಳನ್ನು ಉಚಿತವಾಗಿ ನೀಡಿ, ಡೇಟಾಗೆ ಮಾತ್ರ ಜಿಯೋ ದರ ನಿಗದಿ ಪಡಿಸಿದ ಕಾರಣ ಟೆಲಿಕಾಂ ಕಂಪೆನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋಗೆ ಸ್ಪರ್ಧೆ ನೀಡಲು ಫೆಬ್ರವರಿಯಲ್ಲಿ ಏರ್‍ಟೆಲ್ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿತ್ತು. ಮಾರ್ಚ್‍ನಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್  ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

    ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿದ್ದ ಜಿಯೋ ಆರಂಭದಲ್ಲಿ ಡಿಸೆಂಬರ್ ವರೆಗೆ ಗ್ರಾಹಕರಿಗೆ ವೆಲಕಂ ಆಫರ್ ನೀಡಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ 99 ರೂ. ನೀಡಿ ಪ್ರೈಮ್ ಸದಸ್ಯರಾದವರಿಗೆ ಸಮ್ಮರ್ ಸರ್‍ಪ್ರೈಸ್ ಆಫರನ್ನು ಪ್ರಕಟಿಸಿ ಬಳಿಕ ಟ್ರಾಯ್ ನಿರ್ದೇಶನ ಮೇಲೆ ಈ ಆಫರ್‍ಗಳನ್ನು ಜಿಯೋ ಹಿಂದಕ್ಕೆ ಪಡೆದುಕೊಂಡಿದೆ. ಇದಾದ ಬಳಿಕ ಏಪ್ರಿಲ್ 11 ರಂದು ಧನ್ ಧನ ಧನ್ ಹೆಸರಿನಲ್ಲಿ ಮೂರು ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್‍ಗಳನ್ನು ಪರಿಚಯಿಸಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಇದನ್ನೂ ಓದಿ: ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್