Tag: ಮುಕುಲ್ ವಾಸ್ನಿಕ್

  • 60ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕೈ’ ನಾಯಕ

    60ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕೈ’ ನಾಯಕ

    – ಮುಕುಲ್ ವಾಸ್ಮಿಕ್, ರವೀನಾ ಖುರಾನಾ ವಿವಾಹ

    ನವದೆಹಲಿ: ಕಾಂಗ್ರೆಸ್ಸಿನ 60 ವರ್ಷದ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಅವರು ತಮ್ಮ ಇಳಿ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮುಕುಲ್ ವಾಸ್ನಿಕ್ ತಮ್ಮ ಬಹು ಕಾಲದ ಸ್ನೇಹಿತೆ ರವೀನಾ ಖುರಾನಾ ಅವರನ್ನೇ ಶನಿವಾರ ವರಿಸುವ ಮೂಲಕ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕರ್ನಾಟಕದ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಸೇರಿದಂತೆ ಇತರರು ಭೇಟಿ ನೀಡಿ ಶುಭ ಕೋರಿದ್ದಾರೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಮುಕುಲ್, ಪಂಚತಾರಾ ಹೋಟೆಲಿನಲ್ಲಿ ವಿವಾಹವಾಗಿದ್ದಾರೆ. ಮುಕುಲ್, ಕಾಂಗ್ರೆಸ್ಸಿನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಬಾಲಕೃಷ್ಣ ಅವರ ಪುತ್ರರಾಗಿದ್ದಾರೆ.

    ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿವಾಹದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಶುಭ ಕೋರಿದ್ದು, ಮುಕುಲ್ ವಾಸ್ನಿಕ್ ಹಾಗೂ ರವೀನಾ ಖುರಾನಾ ಅವರಿಗೆ ಹೃದಯಪೂರ್ವಕ ಶುಭಾಶಯಗಳು. ದಂಪತಿಯಾಗಿ ಹೊಸ ಪ್ರಯಾಣ ಆರಂಭಿಸುತ್ತಿರುವ ನಿಮ್ಮ ಮುಂಬರುವ ವರ್ಷಗಳು ಸಂತೋಷವಾಗಿರಲಿವೆ ಎಂಬುದನ್ನು ಸಾಬೀತುಪಡಿಸಿ ಎಂದು ಹಾರೈಸಿದ್ದಾರೆ.

    ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕ ಮನೀಶ್ ತಿವಾರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಮುಕುಲ್ ವಾಸ್ನಿಕ್ ಹಾಗೂ ರವೀನಾ ಖುರಾನಾ ಅವರು ವಿವಾಹವಾಗಿರುವುದು ತುಂಬಾ ಸಂತಸ ತಂದಿದೆ. ನಾನು 1984ರಲ್ಲಿ ಮುಕುಲ್ ವಾಸ್ನಿಕ್ ಅವರನ್ನು ಹಾಗೂ 1985ರಲ್ಲಿ ರವೀನಾ ಅವರನ್ನು ಭೇಟಿ ಮಾಡಿದ್ದೆ. ಅಲ್ಲದೆ ನಾವೆಲ್ಲರೂ ಯುವಜನ ಮತ್ತು ವಿದ್ಯಾರ್ಥಿಗಳ ಉತ್ಸವಕ್ಕೆಂದು ಮಾಸ್ಕೋಗೆ ಹೋಗಿದ್ದೆವು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ಇಬ್ಬರೂ ವಿವಾಹವಾಗಿರುವುದು ಸಂತಸ ತಂದಿದೆ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಶುಭ ಕೋರಿದ್ದಾರೆ.

  • ‘ಕೈ’ ಅಧ್ಯಕ್ಷರ ಪಟ್ಟಿ ನಾಳೆ ನಿರ್ಧಾರ- ಮುಂಚೂಣಿಯಲ್ಲಿದೆ ಮುಕುಲ್ ವಾಸ್ನಿಕ್ ಹೆಸರು

    ‘ಕೈ’ ಅಧ್ಯಕ್ಷರ ಪಟ್ಟಿ ನಾಳೆ ನಿರ್ಧಾರ- ಮುಂಚೂಣಿಯಲ್ಲಿದೆ ಮುಕುಲ್ ವಾಸ್ನಿಕ್ ಹೆಸರು

    – ಎರಡು ದಶಕಗಳ ಬಳಿಕ ಕಾಂಗ್ರೆಸ್‍ಗೆ ಗಾಂಧಿಯೇತರ ಅಧ್ಯಕ್ಷ

    ನವದೆಹಲಿ: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಆಯ್ಕೆ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ದೆಹಲಿಯ ಸೋನಿಯಾ ಗಾಂಧಿ ಅವರ ಮನೆಯಲ್ಲಿ ಇಂದು ಕೆಲ ನಾಯಕರು ಮಾತುಕತೆ ನಡೆಸಿದ್ದು, ಗುರುವಾರ ಕಾಂಗ್ರೆಸ್ ಕಾರ್ಯಕಾರಿ ಸಭೆ ಕರೆಯಲು ನಿರ್ಧರಿಸಿದ್ದಾರೆ. ನಾಳೆ ನಡೆಯಲಿರುವ ಮಹತ್ವದ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆಯೂ ಆಗಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ ಪಟ್ಟಿಯಲ್ಲಿ ಕೇಂದ್ರ ಮಾಜಿ ಸಚಿವ ಮುಕುಲ್ ವಾಸ್ನಿಕ್ ಅವರ ಹೆಸರು ಮುಂಚೂಣಿಯಲ್ಲಿದ್ದು, ಅವರನ್ನೇ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

    ಕಾಂಗ್ರೆಸ್ ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಅಹ್ಮದ್ ಪಟೇಲ್ ಹಾಗೂ ವೇಣುಗೋಪಾಲ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಧ್ಯಕ್ಷರ ಆಯ್ಕೆಯ ಕುರಿತು ಪ್ರಸ್ತಾಪಿಸಿರುವ ನಾಯಕರು, ಮುಂದಿನ ಅಧ್ಯಕ್ಷರ ಆಯ್ಕೆಯನ್ನು ವಿಳಂಬ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ಮೂಲಕ ಎರಡು ದಶಕ ಬಳಿಕ ಗಾಂಧಿಯೇತರ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುತ್ತಿದ್ದಾರೆ. 59 ವರ್ಷದ ಮುಕುಲ್ ವಾಸ್ನಿಕ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಅಷ್ಟೇ ಅಲ್ಲದೆ ಮುಕುಲ್ ಅವರು ತಮ್ಮ 25ನೇ ವಯಸ್ಸಿಗೆ ಸಂಸತ್ ಪ್ರವೇಶ ಮಾಡಿದ್ದರು. ಈ ಮೂಲಕ 1984ರಲ್ಲಿ ಸಂಸತ್ ಪ್ರವೇಶ ಮಾಡಿದ ಅತ್ಯಂತ ಕಿರಿಯ ಸಂಸದರು ಎಂಬ ಹೆಮ್ಮೆಗೆ ಮುಕುಲ್ ಪಾತ್ರರಾಗಿದ್ದರು.

    ಮುಕುಲ್ ವಾಸ್ನಿಕ್ ಅವರಿಗೆ 40 ವರ್ಷಗಳ ರಾಜಕೀಯ ಅನುಭವವಿದ್ದು, ಪಕ್ಷದ ಎಲ್ಲಾ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜೊತೆಗೆ ಅವರು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ದಲಿತ ನಾಯಕನಾಗಿದ್ದಾರೆ. ಮುಕುಲ್ ಅವರ ಮೇಲೆ ಯಾವುದೇ ಗುಂಪುಗಾರಿಗೆ ಅಥವಾ ಭ್ರಷ್ಟಾಚಾರದ ಆರೋಪಗಳಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮುಕುಲ್ ವಾಸ್ನಿಕ್ ಅವರು ಉಸ್ತುವಾರಿ ವಹಿಸಿದ್ದ ತಮಿಳುನಾಡು, ಪುದುಚೇರಿ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮುಕುಲ್ ವಾಸ್ನಿಕ್ ಅವರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನಮೋಹನ್ ಸಿಂಗ್(86) ಅವರ ಹೆಸರನ್ನು ಪಕ್ಷದ ಕೆಲವು ಹಿರಿಯ ನಾಯಕರು ಬೆಂಬಲಿಸಿದ್ದರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ನಾಲ್ಕು ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ನಾಲ್ವರನ್ನು ಕಾರ್ಯನಿರತ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಧರಿಸಿದ್ದರು. ಆದರೆ ಮನಮೋಹನ್ ಸಿಂಗ್ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಾಯಕರು ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ಮುಕುಲ್ ವಾಸ್ನಿಕ್ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿ, ಸುಶೀಲ್ ಕುಮಾರ್ ಶಿಂಧೆ, ಜ್ಯೋತಿರಾದಿತ್ಯ ಸಿಂಧಿಯಾ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕೆಲವು ನಾಯಕರ ಹೆಸರುಗಳೂ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯಲ್ಲಿ ಕೇಳಿ ಬಂದಿದ್ದವು.