Tag: ಮುಕುಲ್ ರೊಹ್ಟಗಿ

  • ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

    ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

    ಮುಂಬೈ: ಆರ್ಯನ್ ಖಾನ್ ಬಳಿಯಿಂದ ಯಾವುದೇ ಮಾದಕ ವಸ್ತುಗಳನ್ನು ಜಪ್ತಿ ಮಾಡಿಲ್ಲ, ಅವರು ಡ್ರಗ್ಸ್ ಸೇವಿಸಿದ್ದರು ಎನ್ನುವುದಕ್ಕೆ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ ಹೀಗಾಗಿ ಅವರನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಮಾಜಿ ಅಟಾರ್ನಿ ಜನರಲ್, ಹಿರಿಯ ವಕೀಲ ಮುಕುಲ್ ರೊಹ್ಟಗಿ ವಾದಿಸಿದ್ದಾರೆ.

    ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಕೋರಿ ಮುಂಬೈ ಹೈಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ವೇಳೆ ಮುಕುಲ್ ರೊಹ್ಟಗಿ ಜಾಮೀನು ನೀಡುವಂತೆ ಮನವಿ ಮಾಡಿದರು.

    ಎನ್‍ಸಿಬಿ ವಿಚಾರಣೆ ವೇಳೆ ಆರ್ಯನ್ ಖಾನ್ ನಿಂದ ವಶಪಡಿಸಿಕೊಂಡಿರುವ ವಾಟ್ಸಪ್‌  ಚಾಟ್‍ಗೂ ಇಡೀ ಇಡೀ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಮತ್ತು ಎನ್‍ಸಿಬಿ ತನಿಖಾಧಿಕಾರಿ ಸಮೀರ್ ವಾಂಖೆಡೆ, ಎನ್‍ಸಿಪಿಯ ನವಾಬ್ ಮಲಿಕ್ ಮತ್ತು ಪ್ರಕರಣದ ಸಾಕ್ಷಿ ಪ್ರಭಾಕರ್ ಸೈಲ್ ಅವರ ವಿರುದ್ಧದ ಆರೋಪಕ್ಕೂ ಆರ್ಯನ್ ಖಾನ್‍ಗೂ ಯಾವುದೇ ಸಂಬಂಧವಿಲ್ಲ ಎಂದು ರೊಹ್ಟಗಿ ಹೇಳಿದರು. ಇದನ್ನೂ ಓದಿ: ಬೆತ್ತಲಾಗಿ ಕಳ್ಳತನ – ಅಂತರಾಜ್ಯ ಕಳ್ಳ ದಂಪತಿ ಅರೆಸ್ಟ್

    ಆದರೆ ಆರ್ಯನ್ ಖಾನ್ ಪ್ರಭಾವಿ ವ್ಯಕ್ತಿಯಾಗಿದ್ದು, ವಿಚಾರಣೆ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ, ಅವರಿಗೆ ಜಾಮೀನು ನೀಡಿದರೇ ಸಾಕ್ಷಿಗಳ ಪ್ರಭಾವ ಬೀರಬಹುದು ಈ ಹಿನ್ನಲೆ ಜಾಮೀನು ನೀಡದಂತೆ ಎನ್‍ಸಿಬಿ ಪರ ವಕೀಲರು ವಾದ ಮಂಡಿಸಿದರು.

    ಇದಕ್ಕೆ ಆಕ್ಷೇಪಿಸಿದ ಮುಕುಲ್ ರೊಹ್ಟಗಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯ ತರಲು ಹೊರಟಿರುವ ತಿದ್ದುಪಡಿಯ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರವೇ ಮಾದಕ ವಸ್ತುಗಳ ಸೇವನೆಯನ್ನು ಅಧರಿಸಿ ಜೈಲು ಶಿಕ್ಷೆ ನೀಡುವುದು ವ್ಯವಸ್ಥೆ ಬದಲಿಸಲು ಹೊರಟಿದ್ದು ಆರ್ಯನ್ ಖಾನ್ ಜಾಮೀನು ನಿರಾಕರಿಸುವಂತಿಲ್ಲ ಎಂದರು.

    ನಟಿ ರಾಗಿಣಿ ದ್ವಿವೇದಿ ಪ್ರಕರಣವನ್ನು ಉಲ್ಲೇಖಿಸಿದ ಅವರು, ಪಾರ್ಟಿ ಮತ್ತು ಇತರ ಕಾರ್ಯಕ್ರಮದಲ್ಲಿ ರಾಗಿಣಿ ಅವರ ಮೇಲೆ ಡ್ರಗ್ಸ್ ಪೂರೈಸಿದ ಆರೋಪ ಇದ್ದರೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

    ಮಾದಕ ದ್ರವ್ಯಗಳ ಅಕ್ರಮ ಸಾಗಾಟಕ್ಕೆ ಆರ್ಯನ್ ಹಣಕಾಸು ಒದಗಿಸಿದ್ದಾನೆ ಎಂಬುದನ್ನು ತೋರಿಸಲು ಯಾವುದೇ ವಸ್ತುವಿಲ್ಲ. ಆರ್ಯನ್ ಖಾನ್ ಸ್ನೇಹಿತರ ಬಳಿಕ ಸಣ್ಣ ಪ್ರಮಾಣದ ಮಾದಕ ವಸ್ತುಗಳು ಲಭ್ಯವಾಗಿದೆ ಹಾಗಂತ ಅವರನ್ನು ಶಿಕ್ಷಿಸುವುದಲ್ಲ ಅವರಿಗೆ ತಪ್ಪು ತಿದ್ದಿಕೊಳ್ಳಲು ಅವಕಾಶ ಇದೆ ಎಂದರು. ಅಲ್ಲದೇ ಪ್ರಕರಣಕ್ಕೂ ಆರ್ಯನ್ ಖಾನ್ ಸಂಬಂಧ ಇಲ್ಲದ ಕಾರಣ ಅವರನ್ನು ಪ್ರಕರಣದಿಂದ ದೂರ ಇಡುವಂತೆ ಕೋರ್ಟ್ ಗೆ ಮನವಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ

    ಆರ್ಯನ್ ಖಾನ್ ಪರ ವಕೀಲರ ವಾದ ಆಲಿಸಿದ ಪೀಠ ಕೋರ್ಟ್ ಸಮಯ ಅಂತ್ಯವಾದ ಹಿನ್ನಲೆ ನಾಳೆ ಮಧ್ಯಾಹ್ನದ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿ ವಿಚಾರಣೆ ಮುಂದೂಡಿದೆ.

  • ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ನವದೆಹಲಿ: “ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್” ಎಂದು ಹೇಳುವ ಮೂಲಕ ಸಿಬಲ್ ಕೋರ್ಟ್ ಹಾಲ್‍ನಲ್ಲಿ ವ್ಯಂಗ್ಯವಾಗಿ ವಾದವನ್ನು ಮಂಡಿಸಿದ ಪ್ರಸಂಗ ಇಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಿತು.

    ಶ್ರೀಮಂತ ಪಾಟೀಲ್ ಬಗ್ಗೆ ವಾದ ಆರಂಭಿಸಿದ ಅವರು, ರಾತ್ರೋರಾತ್ರಿ ಶ್ರೀಮಂತ ಪಾಟೀಲ್ ಮುಂಬೈಗೆ ತೆರಳಿದ್ದರು. ಹಾರ್ಟ್ ಅಟ್ಯಾಕ್ ಆಗಿದೆ ಚಿಕಿತ್ಸೆಗೆ ತೆರಳಿದ್ದರು ಅಂತ ಹೇಳಿದ್ದಾರೆ. ಕೆಲವು ದಾಖಲೆ ಮತ್ತು ಫೋಟೋಗಳನ್ನು ಕಳುಹಿಸಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಧಾನಸಭೆಗೆ ಅನರ್ಹರಾದವರು ಲೋಕಸಭೆಗೆ ಸ್ಪರ್ಧೆ ಮಾಡಬಹುದೇ – ಸಿಬಲ್‍ಗೆ ಸುಪ್ರೀಂ ಪ್ರಶ್ನೆ

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಮಂತ ಪಾಟೀಲ್ ಪರ ವಕೀಲ ವಿ.ಗಿರಿ, ಆಸ್ಪತ್ರೆಯಲ್ಲಿ ಯಾರನ್ನೂ ಭೇಟಿಗೆ ಬಿಟ್ಟಿಲ್ಲ ಎಂದು ವಾದ ಮಂಡಿಸಿದರು. ಆಗ ಸಿಬಲ್ ಅವರು, ಶ್ರೀಮಂತ ಪಾಟೀಲ್ ಹಾರ್ಟ್ ಅಟ್ಯಾಕ್‍ನಿಂದ ಚೇತರಿಸಿಕೊಂಡಿದ್ದು ಸಂಜೀವಿನಿಯಿಂದ ಎಂದು ತಮಾಷೆಯಾಗಿ ವಾದಿಸಿದರು.

    ವಾದ ಮುಂದುವರಿಸಿದ ಕಪಿಲ್ ಸಿಬಲ್ ಅವರು, ಅಲ್ಲಿ ಯಾವ ವೈದ್ಯರೂ ಇರಲಿಲ್ಲ. ವೈದ್ಯರ ಹೆಸರಿಲ್ಲ, ಅವರ ಸಹಿ ಇಲ್ಲ. ಸ್ಪೀಕರ್ ಇವರ ವಿಷಯದಲ್ಲಿ ಏನು ಮಾಡಬೇಕಿತ್ತು ಹೇಳಿ ಎಂದು ನ್ಯಾಯಮೂರ್ತಿಗಳನ್ನು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ಅನರ್ಹ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡರ ಅವರು ರಾಜೀನಾಮೆ ನೀಡಲು ಸಕಾರಣಗಳೇ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ. ಜುಲೈ 7ರಂದು ಬೇರೆಯವರೊಂದಿಗೆ ರಾಜ್ಯಪಾಲರ ಬಳಿ ಇದ್ದರು. ಇವರು ಕೂಡ ಮುಂಬೈ ಪ್ರವಾಸ ಕೈಗೊಂಡಿದ್ದರು ಎಂದು ಕಪಿಲ್ ಸಿಬಲ್ ಕೋರ್ಟಿಗೆ ಮಾಹಿತಿ ನೀಡಿದರು.

    ಅನರ್ಹರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಡಬಾರದು. ಇವರಿಗೆ ಅವಕಾಶ ಕೊಟ್ಟರೆ ಏನು ಬೇಕಾದರೂ ಮಾಡಿ ಜೈಸಿಕೊಳ್ಳಬಹುದು ಎಂಬ ಸಂದೇಶ ಹೋಗಲಿದೆ. ಇದು ಸಂಪೂರ್ಣ ಸಂವಿಧಾನ ಬಾಹಿರವಾದ ಕ್ರಮವಾಗಲಿದೆ ಎಂದು ಸಿಬಲ್ ವಾದವನ್ನು ಅಂತ್ಯಗೊಳಿಸಿದರು.

    ಸ್ಪೀಕರ್ ಪರ ವಕೀಲರ ವಾದ:
    ಸ್ಪೀಕರ್ ಕಾಗೇರಿ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡನೆ ಆರಂಭಿಸಿ, ಕಾಂಗ್ರೆಸ್ ಪರ ವಕೀಲರು ರಾಜೀನಾಮೆ ಕೊಟ್ಟ ದಿನಾಂಕಗಳನ್ನು ಮತ್ತೆ ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ಬಳಿಕ ಮತ್ತೊಮ್ಮೆ ರಾಜೀನಾಮೆ ನೀಡಿದ್ದರು. ಯಾವುದೇ ಅಧಿಕೃತ ಆದೇಶ ಸ್ಪೀಕರ್ ಕಚೇರಿಯಲ್ಲಿಲ್ಲ. ಕೆಪಿಜೆಪಿ ವಿಲೀನದ ಆದೇಶದ ಪ್ರತಿ ಇಲ್ಲ ಎಂದರು.

    ಚುನಾವಣಾ ಆಯೋಗ:
    ಚುನಾವಣಾ ಆಯೋಗ ಪರ ವಾದ ಮಂಡಿಸಿದ ರಾಕೇಶ್ ದ್ವಿವೇದಿ, ಖಾಲಿಯಾಗಿರುವ ಕ್ಷೇತ್ರಕ್ಕೆ ಚುನಾವಣಾ ನಡೆಸುವುದು ನಮ್ಮ ಕೆಲಸ. ಅದಕ್ಕಾಗಿ ಚುನಾವಣೆ ಘೋಷಣೆ ಮಾಡಿದ್ದೇವೆ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇಲ್ಲಿ ರಾಜೀನಾಮೆ ತಿರಸ್ಕರಿಸಿ ಅನರ್ಹ ಮಾಡಿದ್ದಾರೆ. ಏನಾದ್ರೂ ಆಗಲಿ ಆ ಕ್ಷೇತ್ರ ಖಾಲಿ ಉಳಿಯಲಿದೆ ಎಂದು ತಿಳಿಸಿದರು.

    ಈಗ ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಠಿಯಾಗಲಿದೆ. ಚುನಾವಣೆ ನಿಲ್ಲಿಸಿದರೆ ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಹಾಗೇ ಚುನಾವಣೆ ಆದರೆ ಬೇರೆ ಜನಪ್ರತಿನಿಧಿ ಆಯ್ಕೆ ಆಗುತ್ತಾರೆ. ಪ್ರಕರಣ ಇತ್ಯರ್ಥ ಆದ ಬಳಿಕ ಶಾಸಕರು ಅರ್ಹರಾದರೆ ಸಾಂವಿಧಾನಿಕ ಬಿಕ್ಕಟ್ಟು ಆರಂಭ ಆಗಲಿದೆ ಎಂದು ವಾದಿಸಿದರು.

    ರಾಕೇಶ್ ದ್ವಿವೇದಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸಂಜಯ್ ಖನ್ನಾ ಅವರು, ಹಾಗಾಂತ ಚುನಾವಣೆ ಅಧಿಸೂಚನೆಗೆ ತಡೆ ನೀಡಲು ಸಾಧ್ಯವಿಲ್ಲ. ಪ್ರಕರಣವನ್ನು ಮೂರು ನಾಲ್ಕು ದಿನ ವಿಚಾರಣೆ ನಡೆಸಬೇಕಿದೆ. ತಾರ್ಕಿಕ ಅಂತ್ಯ ಕಾಣಬೇಕು. ಹಲವು ವಿಷಯಗಳ ಬಗ್ಗೆ ಇನ್ನು ವಿಚಾರಣೆ ನಡೆಯಬೇಕಿದೆ. ಚುನಾವಣೆ ಮುಂದೆ ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಕೇಸ್ ಮುಗಿದ ಮೇಲೆ ಚುನಾವಣೆ ನಡೆಯಬಹುದು ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು. ಆಗ ನ್ಯಾ. ರಮಣ ಅವರು, ಬೇರೆ ಯಾವುದಾದರು ವಿಚಾರಣೆ ಮುಂದುವರಿಯಲಿ ಎಂದರು. ಈ ವೇಳೆ ಕಾಂಗ್ರೆಸ್, ಪ್ರಕರಣವು ಸಂವಿಧಾನಿಕ ಪೀಠಕ್ಕೆ ಹೋಗಲಿ ಎಂದು ಕೇಳಿಕೊಂಡಿತು. ಇದಕ್ಕೆ ಉತ್ತರ ನೀಡಿದ ನ್ಯಾ.ರಮಣ ಅವರು, ಅವಶ್ಯಕತೆ ಬಂದರೆ ಬೇರೆ ಪೀಠಕ್ಕೆ ವರ್ಗಾ ಮಾಡುತ್ತೇವೆ. ಮುಂದಿನ ತಿಂಗಳ 22ರ ಬಳಿಕ ವಿಚಾರಣೆ ನಡೆಯಲಿದೆ ಎಂದು ವಿಚಾರಣೆಯನ್ನು ಮುಂದೂಡಿದರು.

  • ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ನವದೆಹಲಿ: ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಅವರು ಇಂದು ದೀರ್ಘವಾಗಿ ಒಂದೊಂದೇ ವಿಚಾರವನ್ನು ಎತ್ತಿ ಕೋರ್ಟ್ ಮುಂದೆ ಇಡುತ್ತಿದ್ದರು.

    ಅನರ್ಹ ಶಾಸಕರ ವಿರುದ್ಧ ಸ್ಪೀಕರ್ ಕೈಗೊಂಡ ನಿರ್ಧಾರವನ್ನು ಆರಂಭದಲ್ಲಿ ಸಮರ್ಥಿಸಿಕೊಂಡ ಅವರು ನಂತರ ಶಂಕರ್ ಅವರನ್ನು ಅನರ್ಹತೆ ಮಾಡುವಲ್ಲೂ ರಮೇಶ್ ಕುಮಾರ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಕೆಪಿಜೆಪಿ ಕಾಂಗ್ರೆಸ್‍ನೊಂದಿಗೆ ವಿಲೀನ ಆಗಿದೆ. ವೀಲಿನದ ಬಳಿಕ ಕಾಂಗ್ರೆಸ್ ಪಕ್ಷದಿಂದ ಶಂಕರ್ ಸಚಿವರಾಗಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನೊಂದಿಗೆ ವಿಲೀನ ಆದ ಹಿನ್ನೆಲೆ ಅನರ್ಹ ಮಾಡಬಹುದು. ವಿಲೀನದ ಬಗ್ಗೆ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್.ಶಂಕರ್ ಪತ್ರ ನೀಡಿದ್ದರು. ಆದರೆ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ ಅಂತ ಹೇಳುತ್ತಿದ್ದಾರೆ ಎಂದು ಸಿಬಲ್ ವಾದಿಸಿದರು. ತಮ್ಮ ಕೇಸ್ ಬರುದ್ದಂತೆ ಆರ್.ಶಂಕರ್ ಎದ್ದು ನಿಂತು ವಾದ ಆಲಿಸುತ್ತಿದ್ದರು.

    ಶಂಕರ್ ಯಾರಿಗೆ ಪತ್ರ ನೀಡಿದ್ದರು ಎಂದು ನ್ಯಾ.ಸಂಜಯ್ ಖನ್ನಾ ಪ್ರಶ್ನಿಸಿದರು. ಬಳಿಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಗೆ ಪತ್ರ ನೀಡಿದ್ದರು. ಈ ಪತ್ರದ ಆಧಾರದ ಮೇಲೆ ಸ್ಪೀಕರ್ ಅನರ್ಹ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‍ಗೆ ಕೆಪಿಜೆಪಿ ವಿಲೀನವಾದ ಪ್ರಕ್ರಿಯೆಗಳ ವಿವರಣೆ, ಕುಮಾರಸ್ವಾಮಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರತಿನಿಧಿಯಾಗಿ ಬೆಂಬಲ ನೀಡಿದ್ದರು. ಸಚಿವರೂ ಕೂಡ ಆಗಿದ್ದರು, ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ಬುಧವಾರ ಸ್ಪೀಕರ್ ಪರ ವಕೀಲರು ವಿಲೀನದ ಯಾವುದೇ ದಾಖಲೆಗಳಿಲ್ಲ ಎಂದಿದ್ದರು ಅಲ್ವಾ ಎಂದು ನ್ಯಾಯಪೀಠವು ಪ್ರಶ್ನಿಸಿತು. ಈ ವೇಳೆ ಫೋಟೋ ಪ್ರದರ್ಶನ ಮಾಡಿದ ಸಿಬಲ್, ಆರ್.ಶಂಕರ್ ಕಾಂಗ್ರೆಸ್ ಸೇರಿದ ಹಲವು ದಾಖಲೆಗಳಿವೆ ಎಂದರು. ಆಗ ಸಿಬಲ್ ವಾದಕ್ಕೆ ಪ್ರತಿವಾದ ಮಂಡಿಸಿದ ಶಂಕರ್ ಪರ ವಕೀಲರು, ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಕೆಪಿಜೆಪಿಯಲ್ಲಿ ಉಳಿದಿದ್ದರು. ಕಾಂಗ್ರೆಸ್ ಕೆಪಿಜೆಪಿ ವಿಲೀನ ಆಗಿರಲಿಲ್ಲ. ಸ್ಪೀಕರ್ ಕಚೇರಿ ಕೂಡ ಯಾವುದೇ ಧೃಢಿಕರಣ ನೀಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿಲ್ಲ, ಕೆಪಿಜೆಪಿಯಿಂದಲೇ ಸಚಿವರಾಗಿದ್ದು, ಪಕ್ಷದ ಅಧ್ಯಕ್ಷರು ವಿಲೀನಕ್ಕೆ ಪತ್ರ ನೀಡಬೇಕು ಎಂದು ಹೇಳಿದರು.

    ಡಾ.ಸುಧಾಕರ್ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಕಚೇರಿಯಿಂದ ತೆರಳಿದ್ದೇ ಬಿಜೆಪಿ ನಾಯಕರ ಜೊತೆಗೆ. ಅವರು ರಾಜೀನಾಮೆ ನೀಡುವಾಗ ಸ್ಪೀಕರ್ ಕಚೇರಿ ಎದುರು ಗದ್ದಲವಾಗುತ್ತಿತ್ತು. ಆಗಲೂ ಅವರು ಗುರುತಿಸಿಕೊಂಡಿದ್ದು ಬಿಜೆಪಿ ನಾಯಕರ ಜೊತೆಗೆ. ಇವು ಪಕ್ಷಾಂತರ ಕಾಯಿದೆ ವ್ಯಾಪ್ತಿಗೆ ಬರುತ್ತವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಗೈರಾಗಿದ್ದರು ಸಿಬಲ್ ವಾದಿಸಿದರು.

  • ವಿಧಾನಸಭೆಗೆ ಅನರ್ಹರಾದವರು ಲೋಕಸಭೆಗೆ ಸ್ಪರ್ಧೆ ಮಾಡಬಹುದೇ – ಸಿಬಲ್‍ಗೆ ಸುಪ್ರೀಂ ಪ್ರಶ್ನೆ

    ವಿಧಾನಸಭೆಗೆ ಅನರ್ಹರಾದವರು ಲೋಕಸಭೆಗೆ ಸ್ಪರ್ಧೆ ಮಾಡಬಹುದೇ – ಸಿಬಲ್‍ಗೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಅಹರ್ನ ಶಾಸಕರ ಪ್ರಕರಣ ಇತ್ಯರ್ಥವಾದ ಬಳಿಕ ಉಪ ಚುನಾವಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಆದೇಶದಿಂದ ಅನರ್ಹ ಶಾಸಕರು ಹಾಗೂ ಬಿಜೆಪಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೊಹ್ಟಗಿ, ವಿ.ಗಿರಿ, ಸಿ.ಎ. ಸುಂದರಂ, ಕೆ.ವಿ. ವಿಶ್ವನಾಥನ್, ಸಜ್ಜನ್ ಪೂವಯ್ಯ ಅವರು ಬುಧವಾರ ವಾದ ಮಂಡಿಸಿದ್ದರು. ಜೊತೆಗೆ ಸ್ಪೀಕರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಕಾಂಗ್ರೆಸ್ ಪರ ದೇವದತ್ತ ಕಾಮತ್ ವಾದಿಸಿದ್ದರು.

    ವಿಚಾರಣೆಯನ್ನು ಗುರುವಾರ ಮುಂದೂಡಿದ್ದ ಕೋರ್ಟ್ ಕಾಂಗ್ರೆಸ್ ಪರ ಕಪಿಲ್ ಸಿಬಲ್ ವಾದ ಮಂಡಿಸಲು ಅವಕಾಶ ನೀಡಿತ್ತು. ಈ ನಿಟ್ಟಿನಲ್ಲಿ ಕಪಿಲ್ ಸಿಬಲ್ ಅವರು ಇಂದು ಸುದೀರ್ಘ ವಾದ ಮಂಡಿಸಿದರು.

    ಕಪಿಲ್ ಸಿಬಲ್ ವಾದ ಹೀಗಿತ್ತು:
    ಅನರ್ಹ ಶಾಸಕರು ಅವಸರದಲ್ಲಿ ರಾಜೀನಾಮೆ ನೀಡಿ, ಬಳಿಕ ರಾಜ್ಯಪಾಲರ ಬಳಿ ತೆರಳಿ ಭೇಟಿಯಾಗಿದ್ದರು. ಅಲ್ಲಿಂದ ಹೊರ ಬಂದ ಅನರ್ಹ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು. ಖಾಸಗಿ ಹೋಟೆಲ್‍ನಲ್ಲಿ ಎಲ್ಲ ಅನರ್ಹ ಶಾಸಕರು ಉಳಿದುಕೊಂಡಿದ್ದರು. ಆದರೆ ಕಾಂಗ್ರೆಸ್ ನೀಡಿದ ನೋಟಿಸ್‍ಗೆ ಯಾವುದೇ ಉತ್ತರ ಕೊಡಲಿಲ್ಲ.

    ಅನರ್ಹ ಶಾಸಕರಿಗೆ ಸ್ಪೀಕರ್ ಕೂಡ ನೋಟಿಸ್ ಜಾರಿ ಮಾಡಿದ್ದರು. ರಾಜೀನಾಮೆ ನೀಡಿದ ಬಳಿಕ ಅನರ್ಹರ ಜೊತೆಗೆ ಬಿಜೆಪಿ ನಾಯಕರು ಗುರುತಿಸಿಕೊಂಡಿದ್ದರು. ಎಲ್ಲರೂ ಒಂದೇ ದಿನ ರಾಜೀನಾಮೆ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂಬುದು ಮುಖ್ಯ. ಇದನ್ನು ಪ್ರಶ್ನಿಸುವ ಅಧಿಕಾರ ಹಾಗೂ ಪರಿಶೀಲನೆ ನಡೆಸುವ ಹಕ್ಕು ಸ್ಪೀಕರ್ ಅವರಿಗೆ ಇದೆ.

    ರಾಜೀನಾಮೆ ಸ್ವಯಂಪ್ರೇರಿತ ಮತ್ತು ನೈಜವಾಗಿದೆಯೇ ಎಂಬುದನ್ನು ಸ್ಪೀಕರ್ ಪರಿಶೀಲನೆ ನಡೆಸಬೇಕು. ಅವರು ಎಲ್ಲವನ್ನು ಪರಿಶೀಲನೆ ನಡೆಸಿಯೇ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಶಾಸಕರು ನಿಜವಾಗಿಯೂ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರಾ? ಸರ್ಕಾರದ ಮೇಲೆ ನಿಜಕ್ಕೂ ಅಸಮಾಧಾನ ಇತ್ತಾ ಅಥವಾ ಬೇರೆ ಉದ್ದೇಶಗಳಿದ್ವಾ ಎಂಬ ವಿಚಾರಗಳನ್ನು ತಿಳಿಯಲು ಸ್ಪೀಕರ್ ಮೂರು ದಿನ ಅವಕಾಶ ಕೊಟ್ಟರೂ ಅನರ್ಹರು ವಿಚಾರಣೆ ಹಾಜರಾಗಲಿಲ್ಲ. ಅನರ್ಹರು ಕೋರ್ಟ್ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ.

    ಸ್ಪೀಕರ್ ಆದೇಶ ಬೇಕಾದ ಹಾಗೇ ಬದಲಿಸಲು ಸಾಧ್ಯವಿಲ್ಲ. ರಾಜೀನಾಮೆ ಸ್ವಯಂಪ್ರೇರಿತ ಮತ್ತು ನೈಜ ಹೌದಾ ಅಲ್ಲವೂ ಎಂಬುದು ಪರಿಶೀಲನೆ ನಡೆಸುವ ಹಕ್ಕು ಸ್ಪೀಕರ್ ಅವರಿಗೆ ಇದೆ. ರಾಜೀನಾಮೆ ಕೊಟ್ಟು ಮುಂಬೈ ಹೋಗುತ್ತಾರೆ, ಸುಪ್ರೀಂಕೋರ್ಟ್ ಬರುತ್ತಾರೆ. ಆದರೆ ಬೆಂಗಳೂರಿಗೆ ಬರುವುದಿಲ್ಲ. ಇದನ್ನೇಲ್ಲ ನೋಡಿ ಸ್ಪೀಕರ್ ಏನೆಂದು ಪರಿಗಣಿಸಬೇಕು? ಸುಪ್ರೀಂಕೋರ್ಟ್ ನಿಂದ ನೆರವು ಪಡೆದು ಪಾರಾಗುವ ತಂತ್ರ ಅನರ್ಹ ಶಾಸಕರದ್ದು. ಶಾಸಕರು ರಾಜೀನಾಮೆಗೂ ವಿಶ್ವಾಸಮತಕ್ಕೂ ಸಂಬಂಧವಿದೆ. ವಿಶ್ವಾಸ ಮತ ಇದ್ದ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ವಾಸ್ತವದಲ್ಲಿ ಏನು ನಡೆದಿದೆ ಎಂಬದುನ್ನು ಅರ್ಥ ಮಾಡಿಕೊಳ್ಳಬೇಕು.

    ಕಾಂಗ್ರೆಸ್ ಪಕ್ಷದಲ್ಲಿ ಉಳಿದಿದ್ದೇವೆ ಎನ್ನುವ ಮೂಲಕ ಅಪಾಯದಿಂದ ಪಾರಾಗಲು ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ನೇರವಾಗಿ ಬಂದು ಸುಪ್ರೀಂಕೋರ್ಟಿಗೆ ಹೇಳುತ್ತೆ ಅಂದ್ರೆ ಏನು ಅರ್ಥ? ಚುನಾವಣಾ ಆಯೋಗ ಅನರ್ಹ ಮಾಡಿಲ್ಲ. ಚುನಾವಣಾ ಆಯೋಗ ಬಂದು ಅನರ್ಹರು ಸ್ಪರ್ಧೆ ಮಾಡಬಹುದು ಎಂದು ಹೇಳುವುದು ಎಷ್ಟು ಸರಿ? ಯಾವುದು ಮಧ್ಯಂತರ ಆದೇಶದ ಅವಶ್ಯಕತೆ ಇಲ್ಲ ಎಂದು ಚುನಾವಣಾ ಆಯೋಗ ಹೇಳಿಕೆ ವಿರೋಧಿಸಿದರು.

    ನ್ಯಾ. ವೆಂಕಟಾಚಲ ಹೆಗಡೆ ಹೇಳಿದ್ದಾರೆ ಇಂತಹ ಪ್ರಕರಣಗಳಲ್ಲಿ ಮಧ್ಯಂತರ ಆದೇಶ ನೀಡಬಾರದು. ಕೆಪಿಜೆಪಿ ಕಾಂಗ್ರೆಸ್ ವಿಲೀನವಾಗಿದೆ ಎಂದು ಕಪಿಲ್ ಸಿಬಲ್ ಹೇಳಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದರು. ರಾಜೀನಾಮೆ ನೀಡಿರುವ ಬಗ್ಗೆ ದಿನಾಂಕಗಳ ಸಹಿತ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

    ರಾಜೀನಾಮೆ ನೀಡಿದ ದಿನಾಂಕ, ಅನರ್ಹ ತೆಗೆ ಮನವಿ ಮಾಡಿದ ದಿನಾಂಕ, ನೋಟಿಸ್ ನೀಡಿದ ದಿನಾಂಕ ಪ್ರಕರಣ ಪ್ರಮುಖ ಘಟ್ಟಗಳನ್ನು ಕಪಿಲ್ ಸಿಬಲ್ ವಿವರಣೆ ನೀಡಿದರು. ಎಲ್ಲ ಅನರ್ಹ ಶಾಸಕರು ಒಟ್ಟಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾರು ಕೂಡ ಕ್ಷೇತ್ರದ ಜನರ ಅಭಿಪ್ರಾಯ ಕೇಳಿಲ್ಲ ಎಂದು ಕೋರ್ಟಿಗೆ ತಿಳಿಸಿದರು.

    ಕೆಪಿಜೆಪಿ ಪಕ್ಷೇತರ ಅಭ್ಯರ್ಥಿಯೇ? 13+1 ಒಟ್ಟು 14 ಮಂದಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿ ರಾಜೀನಾಮೆ ನೀಡಿದ್ದಾರೆ. ಕೆಪಿಜೆಪಿಯಿಂದ ಆಯ್ಕೆಯಾದ ಒಬ್ಬರು ಕಾಂಗ್ರೆಸ್ ಜೊತೆ ವಿಲೀನ ಆಗಿದ್ದಾರಾ ಎಂದು ಅನರ್ಹ ಶಾಸಕ ಆರ್.ಶಂಕರ್ ಬಗ್ಗೆ ನ್ಯಾಯಾಧೀಶ ಎನ್.ವಿ.ರಮಣ ಅವರು, ಕಪಿಲ್ ಸಿಬಲ್ ಅವರಿಗೆ  ಪ್ರಶ್ನೆ ಕೇಳಿದರು.

    ಯಾವ್ಯಾವ ಪಕ್ಷದಿಂದ ಎಷ್ಟು ಮಂದಿ ರಾಜೀನಾಮೆ ನೀಡಿದ್ದಾರೆ ಸ್ಪಷ್ಟವಾಗಿ ಹೇಳಿ. ಜೆಡಿಎಸ್ ನಿಂದ ಮೂವರು ರಾಜೀನಾಮೆ ನೀಡಿದ್ದಾರೆ ಎಂದು ನ್ಯಾಯಾಧೀಶರಾದ ರಮಣ ಕೇಳಿದರು. ರಾಜೀನಾಮೆ ನೀಡಿದ್ದ ಶಾಸಕರನ್ನು ಅನರ್ಹ ಮಾಡಲು ಮನವಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ, ಕೆಪಿಜೆಪಿ ಕಾಂಗ್ರೆಸ್ ಜೊತೆಗೆ ವಿಲೀನದ ನಿಯಮಗಳ ವಿವರಣೆಯನ್ನು ನ್ಯಾಯಧೀಶರಾದ ಎನ್.ವಿ.ರಮಣ, ಕೃಷ್ಣ ಮುರಳಿ ಹಾಗೂ ಸಂಜಯ್ ಖನ್ನಾ ನ್ಯಾಯಪೀಠವು ಪರಿಶೀಲಿಸಿತು.

    ಮುಂಬೈನಲ್ಲಿ ಅನರ್ಹ ಶಾಸಕರಿಗೆ ಮಹಾರಾಷ್ಟ್ರ ಸರ್ಕಾರದಿಂದ ಹೈ ಸೆಕ್ಯುರಿಟಿ ನೀಡಲಾಗಿತ್ತು. ಬಿಜೆಪಿಯು ಶಾಸಕರಿಗೆ ಮಂತ್ರಿ ಸ್ಥಾನದ ಆಮಿಷ ಒಡ್ಡಿದೆ, ಹಣಕಾಸಿನ ಆಸೆಗಳನ್ನು ಹುಟ್ಟಿಸಿದೆ. ಎಲ್ಲ ಸತ್ಯಾಂಶಗಳನ್ನು ಪರಿಗಣಿಸಬೇಕು. ರಾಜೀನಾಮೆ ನೀಡಿದ ಶಾಸಕರಿಗೆ ಅಭಿಪ್ರಾಯ ತಿಳಿಸಲು ಇಷ್ಟು ದಿನ ಕಾಲ ಮೀತಿ ನೀಡಬೇಕು ಎಂದು ನಿಯಮವಿಲ್ಲ. ಸ್ಪೀಕರ್ ನಿರ್ಧಾರಕ್ಕೆ ಯಾರು ಸೂಚನೆ ನೀಡುವಂತಿಲ್ಲ. ರಾಜೀನಾಮೆಯೇ ಮೊದಲು ಅಂಗೀಕರಿಸಿ ಎಂದು ಸೂಚಿಸುವಂತಿಲ್ಲ ಎಂಬ ವಿವರಣೆಯನ್ನು ನ್ಯಾಯಾಧೀಶರು ಪರಿಶೀಲಿಸಿದರು.

    ಸ್ಪೀಕರ್ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು. ಸ್ಪೀಕರ್ ಪ್ರಕರಣ ಪರಿಶೀಲಿಸಿ ಅನರ್ಹತೆ ಮಾಡಿದ್ದಾರೆ. ಅನರ್ಹ ಶಾಸಕರ ಜೊತೆ ಮಹಾರಾಷ್ಟ್ರ ಸರ್ಕಾರದ ಸಚಿವರು ರಾಜಕಾರಣಿಗಳು ಗುರುತಿಸಿಕೊಂಡಿದ್ದರು. ಬೆಂಗಳೂರಿನಿಂದ ಬಿಜೆಪಿ ನಾಯಕರು ಮುಂಬೈ ತೆರಳಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್, ಡಿಸಿಎಂ ಅಶ್ವಥ್ ನಾರಾಯಣ್ ಅನರ್ಹ ಶಾಸಕರ ಜೊತೆ ಕಾಣಿಸಿಕೊಂಡಿದ್ದಾರೆ. ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನ ಬಳಕೆಯಾಗಿದೆ. ರಾಜೀವ್ ಚಂದ್ರಶೇಖರ್ ಬಿಜೆಪಿ ರಾಜ್ಯಸಭಾ ಸದಸ್ಯರು ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

    ಪಕ್ಷ ವಿರೋಧಿ ಚಟುವಟಿಕೆ ನಡೆದ ಬಗ್ಗೆ ವಿವರಣೆ ನೀಡಿದ ಕಪಿಲ್ ಸಿಬಲ್ ಅವರು, ಅನರ್ಹ ಶಾಸಕರ ಪೈಕಿ ಕೆಲವರು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಇದನೆಲ್ಲ ಏನೆಂದು ಕರಿಯಬೇಕು ಎಂದು ಸಿಬಲ್ ನ್ಯಾಯಾಧೀಶರಲ್ಲಿ ಕೇಳಿದರು.

    ರಾಜೀನಾಮೆ ಪರಿಶೀಲನೆ ನಡೆಸುವುದು ಸ್ಪೀಕರ್ ಸಂವಿಧಾನಿಕ ಕೆಲಸ. ರಾಜೀನಾಮೆ ಕೊಟ್ಟ ಬಳಿವೂ ನಾನು ಕಾಂಗ್ರೆಸ್‍ನಲ್ಲಿದ್ದೇವೆ ಎಂದು ಅನರ್ಹರು ಬುಧವಾರ ಹೇಳಿದ್ದಾರೆ. ಜುಲೈ 10ರಂದು ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. 10 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅಂತಿಮ. ಜುಲೈ 9ರಂದು ಅನರ್ಹ ಶಾಸಕರು ಬಿಜೆಪಿ ನಾಯಕರ ಜೊತೆ ಸಭೆ ಮಾಡಿದ್ದಾರೆ. ಅನರ್ಹರ ಜೊತೆಗೆ ಬಹಿರಂಗವಾಗಿ ಅಶ್ವಥ್ ನಾರಾಯಣ ಮತ್ತು ಸಂತೋಷ್ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಂಡಿದ್ದರೆ ಪಕ್ಷದ ಸಭೆಗಳಿಗೆ ತೆರಳಬೇಕಿತ್ತು. ಯಾಕೆ ಹೋಗಲಿಲ್ಲ? ಹೀಗಾಗಿ ಸ್ಪೀಕರ್ ತಮ್ಮ ವಿವೇಚನಾಧಿಕಾರ ಬಳಸಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

    ಈ ವೇಳೆ ತಮಿಳುನಾಡು ಪ್ರಕರಣ, ಹಳೆಯ ಪ್ರಕರಣಗಳ ವಿವರಣೆಯನ್ನು ಕಪಿಲ್ ಸಿಬಲ್ ಕೋರ್ಟಿಗೆ ಸಲ್ಲಿಸಿದರು. ಆ ಪ್ರಕರಣದಲ್ಲಿ ಕೋರ್ಟ್ ಸ್ಪೀಕರ್ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಂತ ಹೇಳಿದೆ ಎಂದರು.

    ಪ್ಯಾರಾ ಉಲ್ಲೇಖಿಸಿ ಓದಿ ಎಂದು ನ್ಯಾಯಾಧೀಶ ರಮಣ ಕೇಳಿದರು. ಆಗ ಕಪಿಲ್ ಸಿಬಲ್, ರಾಜ್ಯಪಾಲರ ಭೇಟಿಯಾಗಿದ್ದು ಮಹತ್ವದ ಅಂಶ ಗಮನಿಸಬೇಕು. ಅನರ್ಹ ಶಾಸಕರು ರಾಜೀನಾಮೆ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದರು. ಸ್ಪೀಕರ್ ವ್ಯಾಪ್ತಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬಹುದೇ ಎಂದು ರಾಜ್ಯಪಾಲರು ಸ್ಪೀಕರ್ ಗೆ ನಿರ್ದೇಶನ ಮಾಡಿದ ಬಗ್ಗೆ ವಿವರಣೆ ನೀಡಿದರು.

    ಸ್ಪೀಕರ್ ಕಚೇರಿಯಲ್ಲಿ ನಡೆದ ವಾದ ಪ್ರತಿ ವಾದಗಳ ಬಗ್ಗೆ ವಿವರಣೆ ನೀಡುತ್ತಾ ವಾದ ಮುಂದುವರಿಸಿದ ಕಪಿಲ್ ಸಿಬಲ್ ಅವರು, ಅನರ್ಹ ಶಾಸಕರು ಸ್ಪೀಕರ್ ಕಚೇರಿಗೆ ಬರುವ ಬಗ್ಗೆ ಮಾಹಿತಿ ಕೊಡಲಿಲ್ಲ. ಕಚೇರಿ ಫೋನ್‍ಗೆ ಕನಿಷ್ಠ ಒಂದು ಕರೆ ಮಾಡಿ ಹೇಳಬಹುದಿತ್ತು. ಎಲ್ಲವೂ ಲೆಕ್ಕಾಚಾರ ಹಾಕಿ ಮಾಡಿದ್ದಾರೆ. ಎಲ್ಲರನ್ನೂ ದಾರಿ ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ಪರ ಬ್ಯಾಟ್ ಬೀಸಿದರು.

    ಸ್ಪಿಕರ್ ಕೆಲಸ ಮಾಡದಾಗ ಅನರ್ಹ ಶಾಸಕರು ರಾಜ್ಯಪಾಲರ ಬಳಿ ಹೋಗಿದ್ದರು ಎಂದು ಅನರ್ಹರ ಪರ ವಕೀಲ ಮುಕುಲ್ ರೊಹ್ಟಗಿ ಮಧ್ಯಪ್ರವೇಶ ಮಾಡಿದರು. ಸ್ಪೀಕರ್ ಇಲ್ಲ ಅಂತ ಅಲ್ಲ, ಅವರು ಸರಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎಂದರು. ಇದರಿಂದ ಕೋಪಗೊಂಡ ಕಪಿಲ್ ಸಿಬಲ್, ಅದಕ್ಕೆ ರಾಜೀನಾಮೆ ನೀಡಿ ಹಿಂದೆ ಬಾಗಿಲಿನಿಂದ ಓಡಿದರು ಎಂದರು.

    ರಾಜೀನಾಮೆ ಪತ್ರಗಳು ಸರಿಯಾದ ಮಾದರಿಯಲ್ಲಿ ಇರಲಿಲ್ಲ. ಬಳಿಕ ಮಾದರಿಯಂತೆ ಪ್ರಕಾರ ಪಡೆಯಲಾಯಿತು. ರಾಜ್ಯಪಾಲರ ಭೇಟಿ ಮಾಡುವ ಮೂಲಕ ಸ್ಪೀಕರ್ ಮೇಲೆ ಒತ್ತಡ ಹಾಕಿದರು ಎಂದರು.

    ಸುಪ್ರೀಂಕೋರ್ಟ್ ಹೇಳಿದ ಬಳಿಕ ಮತ್ತೆ ವಿಶೇಷ ವಿಮಾನದಲ್ಲಿ ಬಂದು ರಾಜೀನಾಮೆ ನೀಡಿದರು. ರಾಜೀನಾಮೆ ಕೊಟ್ಟ ಬಳಿಕ ಏಕಾಏಕಿ ಅಂಗಿಕರಿಸಬೇಕಿಲ್ಲ. ರಾಜೀನಾಮೆ ನೀಡಿದ ಬಳಿಕವೂ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದರು. ಈ ನಡೆ ಅನುಮಾನ ಮೂಡಿಸಿದೆ ಎಂದು ಕಪಿಲ್ ಸಿಬಲ್ ಕೋರ್ಟಿಗೆ ತಿಳಿಸಿದರು.

    ಭದ್ರತೆಯಲ್ಲಿ ಬಂದು ಭಧ್ರತೆಯಲ್ಲಿ ಹೋದರು. ಸುಪ್ರೀಂಕೋರ್ಟಿಗೆ ಮನವಿಯ ಅರ್ಜಿ ಏನನ್ನು ಸೂಚಿಸುತ್ತದೆ. ಸ್ಪೀಕರ್ ಮೇಲೆ ತೀವ್ರ ಒತ್ತಡ ಹೇರುವ ಪ್ರಯತ್ನವೇ ಎಂದು ಪ್ರಶ್ನಿಸಿ, ಸುಪ್ರೀಂಕೋರ್ಟ್ ಕೂಡ ಈ ಪ್ರಕರಣದಲ್ಲಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ರೊಹ್ಟಗಿ ಸಿಬಲ್ ವಾದದಲ್ಲಿ ಸುಳ್ಳು ಸೇರಿದೆ ಎಂದರು. ಇದೆಲ್ಲದರ ಬಗ್ಗೆ ಮಾಹಿತಿ ದಾಖಲೆ ಇದೆ. ಇದನ್ನು ಸುಳ್ಳು ಎನ್ನುವುದಾದರೆ ನಿಮ್ಮ ಅರ್ಜಿಯಲ್ಲಿ ಸುಳ್ಳು ಎಂದು ಎಲ್ಲೂ ಹೇಳಿಲ್ಲ ಎಂದು ಸಿಬಲ್, ರೊಹ್ಟಗಿಗೆ ತಿರುಗೇಟು ನೀಡಿದರು.

    ವಿಶ್ವಾಸ ಮತ ಸಂದರ್ಭದಲ್ಲಿ ಕಡ್ಡಾಯವಾಗಿ ಶಾಸಕರು ಹಾಜರಿರಬೇಕು. ಇದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ. ಹಾಗಾಗಿ ವಿಪ್ ನೀಡಲು ಪಕ್ಷಕ್ಕೆ ಅಧಿಕಾರವಿದೆ. ವಿಪ್ ನೀಡುವ ಉದ್ದೇಶವೇ ಹಾಜರಾತಿಗಾಗಿ. ಅದನ್ನು ಈ ಎಲ್ಲಾ ಶಾಸಕರು ಉಲ್ಲಂಘನೆ ಮಾಡಿದ್ದಾರೆ

    ಈ ವೇಳೆ ಎಷ್ಟು ಪ್ರತ್ಯೇಕ ಆದೇಶಗಳಿವೆ? ಸ್ಪೀಕರ್ ನೀಡಿದ ಆದೇಶಗಳು. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರಿಗೆ ಪ್ರತ್ಯೇಕ ಆದೇಶಗಳಿವೆ ಎಂದು ಅನರ್ಹ ಶಾಸಕರ ಪರ ವಕೀಲರು ಹೇಳಿದರು.

    ಎಲ್ಲವೂ ಕೂಡ ಸತ್ಯವಾಗಿದೆ. ರಾಜ್ಯಪಾಲರ ಬಳಿ ಹೋಗಿದ್ದು ಸುಳ್ಳಾ ಎಂದು ಸಿಬಲ್ ಜೋರು ಧ್ವನಿಯಲ್ಲಿ ಪ್ರಶ್ನಿಸಿದರು. ಮಾಧ್ಯಮಗಳು ಅನರ್ಹ ಶಾಸಕರ ಹೇಳಿಕೆ ಪ್ರಸಾರ ಮಾಡಿವೆ. ಎಲ್ಲ ಸಂಗತಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮುಂಬೈಗೆ ಹೋಗಿಲ್ಲ ಬಿಜೆಪಿ ನಾಯಕರ ಜೊತೆಗೆ ಗುರುಸಿಕೊಂಡಿಲ್ಲ ಅಂತ ಹೇಳಲಿ ಎಂದು ಗಟ್ಟಿಯಾಗಿ ವಾದ ಮಂಡಿಸಿದರು.

    ವಿಶೇಷ ವಿಮಾನ ಸೇರಿದ್ದು, ಅನರ್ಹ ಶಾಸಕರ ಜೊತೆ ಯಾರಿದ್ದರು, ಎಲ್ಲಿಗೆ ಹೋಗಿದ್ದರು. ಎಲ್ಲವೂ ಸತ್ಯ ಅಲ್ಲವೇ ನಾನು ಅದನ್ನೇ ಹೇಳುತ್ತಿದ್ದೇನೆ ಎಂದರು. ಆರಂಭದಲ್ಲಿ ಸ್ಪೀಕರ್ ಗೆ ನೇರವಾಗಿ ರಾಜೀನಾಮೆ ಪತ್ರ ನೀಡಿರಲಿಲ್ಲ. ಸ್ಪೀಕರ್ ಕಡೆಯಿಂದ ಸಮಯ ಪಡೆದಿರಲಿಲ್ಲ. ಸುಪ್ರೀಂಕೋರ್ಟ್ ಸೂಚನೆ ನೀಡಿದ ಬಳಿಕ ಸ್ಪೀಕರ್ ಕೈಗೆ ರಾಜೀನಾಮೆ ಪತ್ರ ನೀಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಮನ ಬಂದಂತೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡುವುದಕ್ಕೂ ಕೆಲವು ಪ್ರಕ್ರಿಯೆಗಳಿವೆ ಅದನ್ನು ಎಲ್ಲರೂ ಪಾಲಿಸಬೇಕು ಎಂದರು.

    ಶಾಸಕರು ಪಕ್ಷ ಬಿಡುವುದಕ್ಕೆ ಬೇರೆ ಬೇರೆ ದಾರಿಗಳಿದ್ದವು. ಎಲ್ಲರೂ ಒಟ್ಟಾಗಿ ಕೊಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಮ್ಮಲೇ ನಿರ್ಧಾರ ಮಾಡಿ ಬಂದು ರಾಜೀನಾಮೆ ನೀಡಿದ್ದಾರೆ. ಇದು ಇನ್ ಮಾರೇಲ್ ಬಿಹ್ವೇವ್. ಸಂವಿಧಾನದ ನೈತಿಕತೆಯನ್ನು ಗೌರಿಸಬೇಕಲ್ವೆ? ಈಗ ಮಧ್ಯಂತರ ಆದೇಶ ನೀಡಬಾರದು ಎಂದು ಕೋರ್ಟಿಗೆ ಸಿಬಲ್ ಮನವಿ ಮಾಡಿಕೊಂಡರು.

    ನೀವೂ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಬೇಕು ಎಂದ ಸಿಬಲ್ ಅವರಿಗೆ ಪ್ರಶ್ನಿಸಿದ ನ್ಯಾ.ಸಂಜಯ್ ಖನ್ನಾ ಅವರು, ಮಧ್ಯಂತರ ಆದೇಶ ನೀಡದೇ ಬೇರೆನು ಮಾಡಬಹುದು? ಬೇರೆ ಅವಕಾಶಗಳಿದ್ದರೆ ಹೇಳಿ. ಚುನಾವಣಾ ಆಯೋಗ ಸ್ಪರ್ಧೆಗೆ ಅವಕಾಶ ಎಂದು ಹೇಳಿದೆ. ಸುಪ್ರೀಂಕೋರ್ಟ್ ಯಾವ ಆದೇಶ ನೀಡದಿದ್ದರೆ ಚುನಾವಣೆ ನಡೆಯುತ್ತದೆ ಎಂದು ಕೇಳಿದರು.

    ಬೇರೆನು ಅವಕಾಶಗಳಿಲ್ಲ. 10 ಶೆಡ್ಯೂಲ್ ಅಡಿ ಅವರನ್ನು ಈಗಾಗಲೇ ಅನರ್ಹ ಮಾಡಲಾಗಿದೆ. ಅವರು ಈಗ ಸದನದ ಸದಸ್ಯರಲ್ಲ ಎಂದು ಸಿಬಲ್ ಕೋರ್ಟ್ ಗೆ ಉತ್ತರಿಸಿದರು.

    ವೈಟ್ ಟ್ಯಾಪಿಂಗ್ ಬೇಡ ಅಂತ ನಾವು ಹೇಳಿದ್ದೇವೆ. ಆದರೆ ಈಗ ಮತ್ತೆ ಮುಂದುವರಿಸುತ್ತಿದ್ದಾರೆ. ಬೆಂಗಳೂರು ಶಾಸಕರು ಸೇರಿ ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ. ಬಿಬಿಎಂಪಿ, ವಿಧಾನಸೌಧದಲ್ಲೂ ಹೋರಾಟ ಮುಂದುವರಿಸುತ್ತೇವೆ, ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಹಾಕುತ್ತೇವೆ. ಸ್ಪೀಕರ್ ಆದೇಶ ಎತ್ತಿ ಹಿಡಿಯುವುದು ಕೊನೆಯ ಅವಕಾಶ ಎಂದು ಸಿಬಲ್ ಹೇಳಿದರು.

    ಈಗ ಅನರ್ಹ ಶಾಸಕರು ಚುನಾವಣೆ ಸ್ಪರ್ಧೆಗೆ ವಿನಾಯಿತಿ ಕೊಳ್ಳುತ್ತಿದ್ದಾರಲ್ಲಾ ಎಂದು ನ್ಯಾಯಾಧೀಶರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು ಅಷ್ಟೇ. ಸ್ಪರ್ಧೆ ಮಾಡಿವ ಬಗ್ಗೆ ಹೇಳುವಂತಿಲ್ಲ. ವಿಧಾನಸಭೆ ಅಂತ್ಯದವರೆಗೂ ಅನರ್ಹ ಮಾಡಿದೆ ಎಂದರು.

    ಸಾಕಷ್ಟು ಅಂಶಗಳು ವಿಚಾರಣೆ ನಡೆಯಬೇಕಿದೆ. ಸ್ಪೀಕರ್ ಪರಮಾಧಿಕಾರ ಮತ್ತು ಕರ್ತವ್ಯ ನಿರ್ವಹಣೆಯಂತಹ ವಿಷಯವು ಗಂಭೀರವಾದ ಅಂಶ ಒಳಗೊಂಡಿದೆ. ಸಾಂವಿಧಾನಿಕ ಪೀಠದೆದುರು ವಿಚಾರಣೆ ನಡೆಯಬೇಕು. ಸ್ಪೀಕರ್ ಕಾರ್ಯವೈಖರಿಗೆ ಕೋರ್ಟ್ ಹಸ್ತಕ್ಷೇಪ ಮಾಡಬಾರದು. ಸ್ಪೀಕರ್ ತಮ್ಮದೇ ಆದ ಕಾರ್ಯ ವ್ಯಾಪ್ತಿ ಹೊಂದಿದ್ದಾರೆ. ಸ್ಪೀಕರ್ ಹುದ್ದೆಗೆ ತನ್ನದೆಯಾದ ಮೂಲಭೂತ ಹಕ್ಕುಗಳಿವೆ ಎಂದು ಸಿಬಲ್ ತಿಳಿಸಿದರು.

    ದಾಖಲೆ ಪರಿಶೀಲನೆ ಮಾಡುವುದು, ರಾಜೀನಾಮೆ ಅಂಗಿಕರಿಸುವುದು ಸ್ಪೀಕರ್ ಮೇಲೆ ಅವಲಂಬಿಸಿದೆ. ಸ್ಪೀಕರ್ ಕಾರ್ಯ ವ್ಯಾಪ್ತಿಯಲ್ಲಿ ನ್ಯಾಯಾಂಗ ಮಧ್ಯ ಪ್ರವೇಶ ಮಾಡಿದರೆ ಪ್ರಕರಣ ಮತ್ತುಷ್ಟು ದೊಡ್ಡದಾಗಲಿದೆ. ರಾಜೀನಾಮೆಯ ಅಷ್ಟೂ ಪ್ರಕ್ರಿಯೆಯನ್ನು ಸ್ಪೀಕರ್ ರೆಕಾರ್ಡ್ ಮಾಡಿದ್ದಾರೆ. ಅದನ್ನೂ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಅದಕ್ಕಾಗಿ ತಜ್ಞರ ವರದಿ ತರಿಸಿಕೊಳ್ಳಬೇಕಾಗುತ್ತದೆ. ಶಾಸಕರಿಗೆ ಒತ್ತಾಯ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳುತ್ತದೆ. ಕಲಾಪಕ್ಕೆ ಹಾಜರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 17ಕ್ಕೆ ಈ ಆದೇಶ ನೀಡಿತ್ತು. ಕೆಲವು ಯೋಜನೆ ಮತ್ತು ಕಾನೂನು ಜಾರಿ ತರಬೇಕಾದ ಸಂದರ್ಭದಲ್ಲಿ ಸಂವಿಧಾನ ಅಡಿ ಶಾಸಕರು ಸದನದಲ್ಲಿ ಹಾಜರರಿಬೇಕು. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡುತ್ತದೆ. ಆದ್ದರಿಂದಲೇ ವಿಶ್ವಾಸಮತ ಯಾಚನೆ ದಿನ ವಿಪ್ ಜಾರಿ ಮಾಡಿದೆ. ಸರ್ಕಾರ ಬೀಳುವಂತ ಪರಿಸ್ಥಿತಿಯಲ್ಲಿ ಶಾಸಕರು ಸದನಕ್ಕೆ ಬಾರದಿದ್ರೆ ಹೇಗೆ? ಆಯ್ಕೆಯಾದ ಪಕ್ಷವೇ ವಿಶ್ವಾಸ ಮತ ಯಾಚನೆ ಮಾಡಿದರೆ ಶಾಸಕರು ಬರಲೇ ಬೇಕು ಎಂದು ವಾದಿಸಿದರು.

    ಅದು ಬಜೆಟ್ ಅಂಗೀಕರಿಸುವ ಅಧಿವೇಶನವೂ ಕೂಡ ಆಗಿತ್ತು. ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವ ಸಂದರ್ಭ ಸದನದಲ್ಲಿತ್ತು. ಆದರೆ ಶಾಸಕರು ಬೇರೆ ಪಕ್ಷದ ನಾಯಕರ ಮಾತು ಕೇಳಿ ಸದನಕ್ಕೆ ಗೈರಾಗಿದ್ದರು. ಶಾಸಕರು ಸದನದ ನಿಯಮಗಳಿಗೆ ತಕ್ಕಂತೆ ವರ್ತಿಸಬೇಕು. ಒಂದು ಪಕ್ಷವನ್ನು ಪ್ರತಿನಿಧಿಸಿ ಶಾಸಕರಾದಾಗ ವಿಶ್ವಾಸಮತ ಯಾಚನೆ ವೇಳೆ ಕಲಾಪಕ್ಕೆ ಹಾಜರಾಗಬೇಕು. ವಿಪ್ ಜಾರಿ ಮಾಡಿದ್ದಾರೆ ಎಂಬ ಕಾರಣದಿಂದ ಅಲ್ಲ. ಸರ್ಕಾರ ರಕ್ಷಣೆಗಾಗಿ ಹಾಜರಾಗಬೇಕು. ಆದರೆ ಆಯಾ ಪಕ್ಷಗಳ ಸದಸ್ಯರಾಗಿದ್ದೇವೆ ಎಂದು ಹೇಳುತ್ತಿರುವ ಅನರ್ಹರು ಸರ್ಕಾರ ಬೀಳುವ ಸಂದರ್ಭ ಕಲಾಪಕ್ಕೆ ಗೈರಾಗಿದ್ದೇಕೆ? ವಿಧಾನಸಭೆ ಅವಧಿ ಮುಗಿದಾಗ ಮಾತ್ರ ಅನರ್ಹತೆಯ ಅವಧಿಯು ಮುಗಿಯುತ್ತದೆ ಎಂದು ತಿಳಿಸಿದರು.

    ಶಾಸಕರಾದವರು ಪಕ್ಷ ಬಿಡಬೇಕು ಅಥವಾ ಬದಲಿಸಬೇಕೆಂದರೆ ಅವರಾಗಿ ಅವರೇ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಅನರ್ಹಗೊಳಿಸಬೇಕು. ಈ ಪ್ರಕರಣದಲ್ಲಿ ರಾಜೀನಾಮೆಯನ್ನು ನೀಡಲಾಗಿದೆ. ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇದಕ್ಕೆ ಪ್ರಕರಣದಲ್ಲಿ ಏನು ಮಾಡಬೇಕು ಎಂದು ನ್ಯಾ.ಸಂಜೀವ್ ಖನ್ನಾ ಅವರು ಕಪಿಲ್ ಸಿಬಲ್ ಅವರಗೆ ಪ್ರಶ್ನಿಸಿದರು.

    ಕರ್ನಾಟಕದಿಂದ ಸ್ವರ್ಧೆ ಸಾಧ್ಯ ಇಲ್ಲ. ಬೇರೆ ರಾಜ್ಯದ ವಿಧಾನಸಭೆಯಿಂದ ಸ್ಪರ್ಧೆ ಮಾಡಬಹುದಾ? ವಿಧಾನಸಭಾ ಅನರ್ಹರಾಗಿರುವವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದಾ ಎಂದು ರಮಣ ಪ್ರಶ್ನೆ ಮಾಡಿದರು. ಇದಕ್ಕೆ ಕಪಿಲ್ ಸಿಬಲ್ ಸ್ಪರ್ಧಿಸಬಹುದು ಎಂದು ಉತ್ತರಿಸಿದರು.

    ಸಂವಿಧಾನಸ 191/1 ವಿಧಿ ಉಲ್ಲೇಖಿಸಿ ಉತ್ತರ ನೀಡಿದ ಕಪಿಲ್ ಸಿಬಲ್, 191/1 ಪ್ರಕಾರ ಅನರ್ಹ ಮಾಡಿದರೆ ಚುನಾವಣೆಗೆ ಸ್ವರ್ಧೆ ಸಾಧ್ಯವಿಲ್ಲ. ಲೋಕಸಭೆ ಅಥವಾ ವಿಧಾನಸಭೆ ಎಲ್ಲಿ ಅನರ್ಹ ಆಗಿರುತ್ತಾರೆ ಅಲ್ಲಿ ಆ ಅವಧಿಗೆ ಸ್ಪರ್ಧೆ ಸಾಧ್ಯವಿಲ್ಲ ಎಂದರು.

    ಉಪ ಚುನಾವಣೆ ಹೊಸ ಎಲೆಕ್ಷನ್ ಅಲ್ಲ ಎಂದು ಸಿಬಲ್ ಹೇಳಿದರು. ಆಗ ನ್ಯಾ.ರಮಣ ಅವರು, ಅನರ್ಹ ಶಾಸಕರು ಸ್ವರ್ಧೆಗೆ ಒಂದು ಸರ್ಕಾರದ ಅವಧಿ ಮುಗಿಬೇಕು, ಇಲ್ಲ ಸರ್ಕಾರ ವಿಸರ್ಜನೆ ಬೇಕೇ ಎಂದು ಪ್ರಶ್ನಿಸಿದರು. ಉತ್ತರ ನೀಡಿದ ಸಿಬಲ್, ಇದನ್ನ ಮಾತ್ರ ಫ್ರೆಶ್ ಎಲೆಕ್ಷನ್ ಎನ್ನಬಹುದು. ಆ ಅವಧಿಯ ವಿಧಾನಸಭಾ ಮುಗಿಯುವವರೆಗೂ ಅನರ್ಹರು ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಜೊತೆಗೆ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ ಎಂದರು.

    ಶಾಸಕರನ್ನು ಅನರ್ಹಗೊಳಿಸಿದ ಕ್ಷೇತ್ರಗಳಿಗೆ ಚುನಾವಣೆ ಬರಲೇ ಬೇಕಲ್ವಾ? ಆರು ತಿಂಗಳ ಒಳಗೆ ಚುನಾವಣೆ ಬರಲೇ ಬೇಕು. ಆಗ ಅನರ್ಹರು ಸ್ಪರ್ಧೆ ಮಾಡಲು ಏನು ತೊಂದರೆ ಎಂದು ಸಿಬಲ್‍ಗೆ ನ್ಯಾ. ಸಂಜೀವ್ ಖನ್ನಾ ಪ್ರಶ್ನೆ ಮಾಡಿದರು.

    ನ್ಯಾಯಾಧೀಶರ ಪ್ರಶ್ನೆಗೆ ಉತ್ತರ ನೀಡಿದ ಸಿಬಲ್ ಅವರು, ಶಾಸಕರನ್ನು ಅನರ್ಹಗೊಳಿಸಿರುವುದು ವಿಧಾನಸಭೆಯ ಅವಧಿ ಮುಗಿಯುವವರೆಗೆ ಹೊರತು ಅವರ ಕ್ಷೇತ್ರದಲ್ಲಿ ಚುನಾವಣೆ ಬರುವರೆಗೆ ಮಾತ್ರವಲ್ಲ. ವಿಧಾನಸಭೆ ಪೂರ್ಣ ಅವಧಿ ಚುನಾವಣಾ ಸ್ಪರ್ಧೆ ಸಾಧ್ಯವಿಲ್ಲ ಎಂದರು.

    ಆರ್ಟಿಕಲ್ 192 ಬಗ್ಗೆ ನ್ಯಾಯಧೀಶರು ಪರಿಶೀಲನೆ ನಡೆಸಿದರು. ಈ ವೇಲೆ ಪ್ರಶ್ನೆ ಎತ್ತಿದ ನ್ಯಾ. ಸಂಜೀವ್ ಖನ್ನಾ ಅವರು, ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ ಮೇಲೆ ಚುನಾವಣೆ ಆಗಲೇ ಬೇಕಲ್ಲವೇ ಎಂದು ಕೇಳಿದರು. ಆಗ ಕಪಿಲ್ ಸಿಬಲ್, ಸ್ಪೀಕರ್ ಕಚೇರಿ ಸಂವಿಧಾನದತ್ತ ಸ್ವಾಯತ್ತ ಸಂಸ್ಥೆ. ಅನರ್ಹಗೊಳಿಸುವಾಗ ಅವಧಿ ನಿಗದಿಗೊಳಿಸುವ ಅಧಿಕಾರ ಸ್ಪೀಕರ್ ಗೆ ಇದೆ ಎಂದು ಉತ್ತರಿಸಿದರು.

    ಸ್ಪೀಕರ್ ಆದೇಶವನ್ನು ರದ್ದುಗೊಳಿಸಿದರೆ 10ನೇ ಷೆಡ್ಯೂಲ್ ದುರ್ಬಲ ಆಗುತ್ತದೆ. ಇದು ಸಾಕಷ್ಟು ಪ್ರಕರಣಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಸಂಸದ ಉಮೇಶ್ ಜಾಧವ್ ರಾಜೀನಾಮೆ ಪಡೆದು ಉಳಿದವರವನ್ನು ಅನರ್ಹ ಗೊಳಿಸಲಾಗಿದೆ ಎಂದು ವಾದ ಮಾಡಿದ್ದಾರೆ. ಆದರೆ ಜಾಧವ್ ತಾವೇ ಖುದ್ದಾಗಿ ಬಂದು ರಾಜೀನಾಮೆ ನೀಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ ಎಂದು ಸಿಬಲ್ ಕೋರ್ಟಿಗೆ ತಿಳಿಸಿದರು.