Tag: ಮುಂಬೈ ಹೈ ಕೋರ್ಟ್

  • ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಮುಂಬೈ: ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ತೆಗೆದುಹಾಕಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

    ಮಹಾರಾಷ್ಟ್ರದ ಮುಂಬೈನ ಅಂಧೇರಿ ಪ್ರದೇಶದ ನಿವಾಸಿ ಹಿಮಾಂಶು ಅಗರ್‌ವಾಲ್ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಗರ್‌ವಾಲ್, ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುವುದರಿಂದ ರಾಜ್ಯ ಹಾಗೂ ತೆರಿಗೆ ಪಾವತಿದಾರರಿಗೆ ಹೊರೆಯಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಅಂಬಾನಿ ಪರ ವಕೀಲರು ಸ್ಪಷ್ಟಪಡಿಸಿ, ಕುಟುಂಬವೂ ಭದ್ರತೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ. ಹೀಗಾಗಿ ತೆರಿಗೆ ಪಾವತಿಸುವವರ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದು ವಾದಿಸಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ರಂಜಿತ್ ಮೋರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.

    ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಭದ್ರತಾ ಪಡೆ (ಎಸ್‍ಪಿಜಿ)ಯಿಂದ ಭದ್ರತೆ ನೀಡಲಾಗಿದ್ದು, ಉಳಿದಂತೆ ಬೆದರಿಕೆ ಇರುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಝಡ್ ಪ್ಲಸ್ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ನೀಡುತ್ತದೆ. ಎಂಪಿ5 ಬಂದೂಕುಗಳು, ಅಧುನಿಕ ಗ್ಯಾಜೆಟ್‍ಗಳು, ಬೆಂಗಾವಲು ವಾಹನಗಳನ್ನು ಹೊಂದಿದೆ ಎಂದು ಅಗರ್‌ವಾಲ್ ಅವರ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಮುಕೇಶ್ ಅಂಬಾನಿಯವರ ಕುಟುಂಬ ರಾಜಕೀಯದಲ್ಲಿ ಭಾಗವಹಿಸದಿರುವುದರಿಂದ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಹೀಗಾಗಿ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣಗಳಿಲ್ಲ. ಅಲ್ಲದೆ ಅಂಬಾನಿಯವರ ಮೇಲೆ ಈವರೆಗೆ ದಾಳಿ ನಡೆಸಿರುವ ಹಾಗೂ ದಾಳಿ ನಡೆಸಲು ಪ್ರಯತ್ನಿಸಿರುವ ಪ್ರಕರಣಗಳಿಲ್ಲ. ದೊಡ್ಡ ಬುಸಿನೆಸ್ ಕಂಪನಿ ಸಿಇಓ ಆಗಿರುವವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೆ ಎಂದು ಅಗರ್‍ವಾಲ್ ತಿಳಿಸಿದ್ದಾರೆ.

    ಜನಸಾಮಾನ್ಯರಿಗೆ ಹೋಲಿಸಿದರೆ ಪೊಲೀಸರ ಅನುಪಾತ ಕಡಿಮೆ ಇದೆ. ಹೀಗಾಗಿ ಭದ್ರತೆಯನ್ನು ತೆಗೆಯಬೇಕು. ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. 666 ಜನರಿಗೆ ಒಬ್ಬ ಪೊಲೀಸ್ ಹಾಗೂ ಪ್ರತಿ ವಿಐಪಿಗೆ ಮೂವರು ಪೊಲೀಸರಿದ್ದಾರೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಕೋರಿದ್ದರು. ನ್ಯಾಯಾಲಯ ಅರ್ಜಿದಾರರ ವಾದವನ್ನು ಮಾನ್ಯ ಮಾಡದೇ ತಿರಸ್ಕರಿಸಿದೆ.

  • ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    -ತನಿಖೆ ವೇಳೆ ಮಹಿಳೆಯ ಕಟ್ಟು ಕಥೆ ಬಹಿರಂಗ
    -ಮಹಿಳೆಗೆ ಬೆಂಬಲಿಸಿದ್ದ ವಕೀಲನ ಬಂಧನ

    ಮುಂಬೈ: ನಟ ಕರಣ್ ಓಬೇರಾಯ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಪೂರ್ವ ನಿಯೋಜಿತವಾಗಿದ್ದು, ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ಸುಳ್ಳು ಆರೋಪ ಮಾಡಿದ್ದು, ಇದಕ್ಕೆ ತಕ್ಕಂತೆ ಕಥೆಯನ್ನೂ ಹೆಣೆಯುವ ಮೂಲಕ ಒಬೇರಾಯ್ ವಿರುದ್ಧ ಸುಳ್ಳು ಆರೋಪವನ್ನು ಸಾಬೀತು ಪಡಿಸಲು ಮುಂದಾಗಿದ್ದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪ ಸಾಬೀತು ಪಡಿಸಲು ಮಹಿಳೆ ವಿವಿಧ ರೀತಿಯ ಕಥೆ ಹೆಣೆದಿದ್ದು, ಇದೆಲ್ಲವೂ ಪೊಲೀಸ್ ತನಿಖೆ ವೇಳೆ ರಿವೀಲ್ ಆಗಿದೆ.

    ಪ್ರಕರಣ ಹಿಂಪಡೆಯುವಂತೆ ಇಬ್ಬರು ವ್ಯಕ್ತಿಗಳು ನನಗೆ ಬೆದರಿಕೆ ಒಡ್ಡಿದ್ದರು ಎಂದು ಇತ್ತೀಚೆಗೆ ಮಹಿಳೆ ದೂರಿದ್ದರು. ಇದೆಲ್ಲವೂ ಕಟ್ಟು ಕಥೆ ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ರೀತಿಯ ತಂತ್ರವನ್ನು ಹೆಣೆಯಲಾಗಿದೆ. ಇಂತಹ ನಕಾರಾತ್ಮಕ ಸುದ್ದಿಗಳಿಂದ ನಟ ಕರಣ್ ಒಬೇರಾಯ್ ಅವರ ಮಾನಹಾನಿಯಾಗಿದೆ ಎಂದು ತನಿಖೆ ನಂತರ ತಿಳಿದು ಬಂದಿದೆ.

    ಓಶಿವಾರ ಠಾಣೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಶೈಲೇಶ್ ಪಾಸಲ್ವಾಡ್ ಪ್ರಕರಣದ ಕುರಿತು ಮಾಹಿತಿ ನೀಡಿ, ತಪ್ಪೊಪ್ಪಿಗೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಒಬೇರಾಯ್ ವಿರುದ್ಧ ಆರೋಪ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಶೀಘ್ರವೇ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸುಳ್ಳು ಹೇಳಿದ್ದ ಮಹಿಳೆ:
    ಮೇ.25ರಂದು ಓಶಿವಾರಾ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕರಣ್ ಒಬೇರಾಯ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ನನಗೆ ಖಿನ್ನತೆಯ ರೋಗವಿದ್ದು, ಪ್ರತಿ ದಿನ ಬೆಳಗಿನ ಜಾವ ವಾಕಿಂಗ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ನಿತ್ಯ ಬೆಳಗ್ಗೆ ವಾಕಿಂಗ್‍ಗೆ ತೆರಳುತ್ತಿದ್ದೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಏಕಾಏಕಿ ದಾಳಿ ಮಾಡಿ, ಕರಣ್ ಒಬೇರಾಯ್ ವಿರುದ್ಧದ ಅತ್ಯಾಚಾರ ಕುರಿತ ದೂರನ್ನು ಹಿಂಪಡೆಯದಿದ್ದರೆ ಆಸಿಡ್ ದಾಳಿ ಮಾಡುವ ಕುರಿತು ಬೆದರಿಕೆ ಹಾಕಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.

    ನಟನ ಮಾನಹಾನಿಗೆ ಸಂಚು:
    ಆರಂಭಿಕ ತನಿಖೆ ವೇಳೆ ಪೊಲೀಸರು ಮಹಿಳೆಯ ವಕೀಲನ ದೂರದ ಸಂಬಂಧಿಗಳಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ವಕೀಲನೂ ಸಹ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿ, ವಕೀಲ ಖಾನ್ ಅವರನ್ನು ಪೊಲೀಸರು ವಿವರವಾದ ವಿಚಾರಣೆ ನಡೆಸಿದ್ದು, ಈ ವೇಳೆ ಅಪರಾಧದ ಕುರಿತು ವಕೀಲ ಖಾನ್ ತಪ್ಪೊಪ್ಪಿಕೊಂಡಿದ್ದಾರೆ.

    ಅಲ್ಲದೆ, ಬೆಳಗಿನ ಜಾವ ವಾಕಿಂಗ್‍ಗೆ ತರಳಿದಾಗ ಸಂತ್ರಸ್ತ ಮಹಿಳೆಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು ಎಂದು ಪೊಲೀಸರ ಮುಂದೆ ವಕೀಲ ಖಾನ್ ಬಾಯ್ಬಿಟ್ಟಿದ್ದಾನೆ. ಈ ಪ್ಲಾನ್ ಮಾಡುವಲ್ಲಿ ಸಂತ್ರಸ್ತ ಮಹಿಳೆಯು ಭಾಗಿಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಈ ಎಲ್ಲದರ ಕುರಿತು ಮಹಿಳೆಗೂ ತಿಳಿದಿದೆ. ಇದು ಪಕ್ಕಾ ಪ್ಲಾನ್ ಮಾಡಿ ಮಾಡಲಾದ ಆರೋಪ ಎಂದು ಲಾಯರ್ ಖಾನ್ ಬಾಯ್ಬಿಟ್ಟಿದ್ದಾರೆ.

    ಮಹಿಳೆಯ ಆರೋಪವೇನು?
    ಕರಣ್ ವಿರುದ್ಧದ ಸಂತ್ರಸ್ತ ಮಹಿಳೆಯ ಪ್ರಕರಣದ ಕುರಿತು ಓಶಿವಾರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕರಣ್ ಒಬೇರಾಯ್ ಅವರು ಮದುವೆಯಾಗುವಂತೆ ನನ್ನ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಇಟ್ಟುಕೊಂಡು ಕರಣ್ ಅವರು ನನ್ನನ್ನು ಬ್ಲ್ಯಾಕ್‍ಮೇಲ್ ಮಾಡಿ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಕರಣ್ ಒಬೇರಾಯ್ ಅವರು ಆರೋಪವನ್ನು ಅಲ್ಲಗಳೆದು ನನ್ನನ್ನು ಬಂಧಿಸಲು ಹಾಗೂ ಮಾನಹಾನಿ ಉಂಟು ಮಾಡಲು ವಿನಾಕಾರಣ ಅತ್ಯಾಚಾರದ ಕಾನೂನನ್ನು ಮಹಿಳೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದರು. ಇದಕ್ಕೆ ಅವರ ಸ್ನೇಹಿತರೂ ಸಹ ಬೆಂಬಲ ಸೂಚಿಸಿದ್ದರು. ಈ ಸ್ಪಷ್ಟೀಕರಣವನ್ನೂ ಮೀರಿ ಕರಣ್ ಒಬೇರಾಯ್ ಅವರನ್ನು ಮೇ 5 ರಂದು ಬಂಧಿಸಲಾಗಿತ್ತು. ನಂತರ ಮೇ 7 ರಂದು ಮುಂಬೈ ಹೈ ಕೋರ್ಟ್‍ನ ಬೇಲ್ ನೀಡಿತ್ತು.