Tag: ಮುಂಡಗೋಡು

  • ಮುಂಡಗೋಡು: ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಕಿಡ್ನ್ಯಾಪ್

    ಮುಂಡಗೋಡು: ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಕಿಡ್ನ್ಯಾಪ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇಂದು ರಾತ್ರಿ ಕಾರಿನಲ್ಲಿ ಬಂದ ಆಗಂತುಕರು ಸಿನಿಮೀಯ ರೀತಿಯಲ್ಲಿ ಉದ್ಯಮಿಯನ್ನು ಅಪಹರಿಸಿದ ಘಟನೆ ನಡೆದಿದೆ.

    ಮುಂಡಗೋಡು ಪಟ್ಟಣದ ಜಮೀರಅಹ್ಮದ್ ದರ್ಗಾವಾಲೆ ಎಂಬಾತ ಅಪಹರಣಕ್ಕೊಳಗಾದ ವ್ಯಕ್ತಿ. ಪಟ್ಟಣ ಮಾದರಿ ಶಾಲೆಯ ಎದುರು ಸ್ಕೂಟಿಯಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಬಿಳಿ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಈತನನ್ನು ಬೀಳಿಸಿದ್ದಾರೆ.

    ಬಿದ್ದಾಗ ಈತನ ಮೇಲೆ ಹಲ್ಲೆ ಮಾಡಿ ಕಾರಿನೊಳಗೆ ಹಾಕಿಕೊಂಡಿದ್ದು, ಇನ್ಬೊಬ್ಬನಿಗೆ ಚಾಕು ತೋರಿಸಿ ಓಡಿಸಿದ್ದಾರೆ‌. ನಂತರ ಹಾವೇರಿ ಮಾರ್ಗವಾಗಿ ಟೋಲ್ ದಾಟಿ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

    ಅಪಹರಣಕ್ಕೊಳಗಾದ ಜಮೀರಅಹ್ಮದ್ ದರ್ಗಾವಾಲೆ ಬಡ್ಡಿ ವ್ಯವಹಾರ ಹಾಗೂ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದು ಕ್ರಿಕೆಟ್ (cricket) ಬೆಟ್ಟಿಂಗ್ ಸಹ ಮಾಡುತಿದ್ದ ಎನ್ನಲಾಗಿದ್ದು, ಈತ ನಾಳೆ ಕ್ರಿಕೆಟ್ ಕ್ರೀಡಾಕೂಟ ಸಹ ಆಯೋಜಿಸಿದ್ದು ತಂಡ ಸಹ ಸಿದ್ಧಪಡಿಸಿದ್ದನು.

    ಈತನನ್ನು ಅಪಹರಣ ಮಾಡಲು ಕಾರಣ ತಿಳಿಯಬೇಕಿದ್ದು, ಅಪಹರಣ ಮಾಡಿದವರು ಹಾವೇರಿ ಭಾಗದವರೆಂದು ಶಂಕಿಸಲಾಗಿದೆ. ಪೊಲೀಸರು ಸಹ ವಾಹನದ ಟ್ರಾಕ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಗನಬಾವು ಸೋಂಕು 125ಕ್ಕೆ ಏರಿಕೆ – ಶಾಲೆಗೆ 3 ದಿನ ರಜೆ ಘೋಷಣೆ

    ಮಂಗನಬಾವು ಸೋಂಕು 125ಕ್ಕೆ ಏರಿಕೆ – ಶಾಲೆಗೆ 3 ದಿನ ರಜೆ ಘೋಷಣೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡು (Mundagodu) ತಾಲೂಕಿನ ಇಂದಿರಾಗಾಂಧಿ ವಸತಿ ನಿಲಯದ ಮಕ್ಕಳಲ್ಲಿ ಮಂಗನಬಾವು ಸೋಂಕು ಉಲ್ಬಣಿಸಿದ್ದು, ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

    ಈ ಹಿನ್ನೆಲೆಯಲ್ಲಿ ಮುಂಡಗೋಡು ಇಂದಿರಾಗಾಂಧಿ ವಸತಿ ಶಾಲೆಗೆ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ.ಇದನ್ನೂ ಓದಿ: BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ

    ಇಂದಿರಗಾಂಧಿ ವಸತಿ ನಿಲಯದಲ್ಲಿ ಒಟ್ಟು 210 ಮಕ್ಕಳಿದ್ದಾರೆ. ನ.16 ರಂದು ಐದು ವಿದ್ಯಾರ್ಥಿಗಳಲ್ಲಿ ಮಾತ್ರ ಸೋಂಕು ಕಾಣಿಸಿತ್ತು. ಅದಾದ ಮೂರು ದಿನದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೋಂಕು ಕಾಣಿಸಿಕೊಂಡಿತ್ತು. ಇದೀಗ 125 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ವೈದ್ಯಕೀಯ ತಂಡವೊಂದನ್ನು ಮುಂಡಗೋಡು ವಸತಿ ನಿಲಯಕ್ಕೆ ನಿಯೋಜನೆ ಮಾಡಲಾಗಿದ್ದು, ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಅಘಾಡಿಗೆ ಆಪರೇಷನ್‌ ಭೀತಿ – ಮತ್ತೆ ರೆಸಾರ್ಟ್‌ ಪಾಲಿಟಿಕ್ಸ್‌ , ಕರ್ನಾಟಕಕ್ಕೆ ಶಾಸಕರು?

  • ಮುಂಡಗೋಡು ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೋಂಕು

    ಮುಂಡಗೋಡು ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೋಂಕು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ವಸತಿ ಶಾಲೆಯಲ್ಲಿ ಒಂದೇ ದಿನದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಯಿಲೆ ಕಾಣಿಸಿಕೊಂಡು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮುಂಡಗೋಡಿನ ಶಿರಸಿ ರಸ್ತೆಯಲ್ಲಿರುವ ಬೃಂದಾವನ ವಸತಿ ಬಡಾವಣೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ 205 ವಿದ್ಯಾರ್ಥಿಗಳಿದ್ದಾರೆ.

    ಇವರ ಪೈಕಿ ಬುಧವಾರ 25 ಜನರಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದೀಗ ಮಂಗನಬಾವು ಕಾಯಿಲೆ ಇತರೆ ವಿದ್ಯಾರ್ಥಿಗಳಿಗೂ ಹಬ್ಬಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ.

    ಒಟ್ಟು 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಈ ಮಂಗನಬಾವು ಕಾಣಿಸಿಕೊಂಡಿದ್ದು, ಸದ್ಯ ಕೆಲವು ಮಕ್ಕಳಿಗೆ ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಏಕಾಏಕಿ ಸೋಂಕು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದ್ದು, ಆರೋಗ್ಯವಂತ ವಿದ್ಯಾರ್ಥಿಗಳು ಈ ಮಕ್ಕಳಿಂದ ದೂರ ಇರಲು ಸೂಚಿಸಲಾಗಿದೆ.

  • ಒಡೆದು ಹೋಯ್ತು ಚಿಗಳ್ಳಿ ಚೆಕ್ ಡ್ಯಾಮ್ – 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಸಾಧ್ಯತೆ

    ಒಡೆದು ಹೋಯ್ತು ಚಿಗಳ್ಳಿ ಚೆಕ್ ಡ್ಯಾಮ್ – 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಸಾಧ್ಯತೆ

    ಕಾರವಾರ: ಮಳೆಯಿಂದಾಗಿ ಉತ್ತರಕನ್ನಡದ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್‍ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದ ಬಂದ ಕಾರಣಕ್ಕೆ ಡ್ಯಾಮ್ ಒಡೆದು ಹೋಗಿದ್ದು, 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆಯಿದೆ.

    ಭತ್ತ, ಜೋಳ ಬೆಳದಿರುವ ಮುಂಡಗೋಡಿನ 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆ ಇದೆ. 2009ರಲ್ಲಿ ಈ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿತ್ತು. ಆ ನಂತರ ಅದನ್ನು ಸರಿಪಡಿಸಲಾಗುತ್ತು. ಆದರೆ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾದ ಹಿನ್ನೆಲೆ ನೀರಿನ ಒತ್ತಡಕ್ಕೆ ಎರಡನೇ ಬಾರಿ ಚಿಗಳ್ಳಿ ಡ್ಯಾಮ್ ಒಡೆದಿದೆ.

    ಚೆಕ್ ಡ್ಯಾಮ್ ಆಸುಪಾಸಿನ ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಈಗಾಗಲೇ ಚೆಕ್ ಡ್ಯಾಮ್‍ನ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

    ಈ ಬಗ್ಗೆ ಡಿಸಿ ಡಾ. ಹರೀಶ್ ಕುಮಾರ್.ಕೆ ಅವರು ಪ್ರತಿಕ್ರಿಯಿಸಿ, ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿರುವ ಬಗ್ಗೆ ಪ್ರಾಥಮಿಕ ವರದಿಯನ್ನು ತಹಶಿಲ್ದಾರ್ ಹಾಗೂ ಎಸಿ ಅವರಿಂದ ಪಡೆದಿದ್ದೇನೆ. ಈಗಾಗಲೇ ಅಲ್ಲಿನ ಸುತ್ತಮುತ್ತಲ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚಿಸಿದ್ದೇವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ ಅಪಾರ ಪ್ರಮಾಣದಲ್ಲಿ ಕೃಷಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಡ್ಯಾಮ್‍ನಿಂದ ಹರಿದ ನೀರು ಬೇಡ್ತಿ ನದಿಯನ್ನು ಸೇರುತ್ತದೆ. ಹೀಗಾಗಿ ಜನರು ಆತಂಕ ಪಡಬೇಡಿ, ಸುಳ್ಳು ವದಂತಿಗಳಿಗೆ ಕವಿಕೊಡಬೇಡಿ, ಏನಾದರೂ ತೊಂದರೆಯಾದರೆ ನೋಡಿಕೊಳ್ಳಲು ರಕ್ಷಣಾ ತಂಡ ಈ ಪ್ರದೇಶ ಸುತ್ತಮುತ್ತಲೇ ಇದೆ ಎಂದು ಧೈರ್ಯ ಹೇಳಿದ್ದಾರೆ.

  • ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರವಾರ: ಸೇವಾದಳದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ದೈಹಿಕ ಶಿಕ್ಷಕರೊಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಸುಮಾರು 10 ಕಿ.ಮೀ ದೂರ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಮನೆ ಸೇರಿರುವ ಘಟನೆ ಜಿಲ್ಲೆಯ ಮುಂಡಗೋಡು ಪಟ್ಟಣದ ಕಾತೂರು ತಾಲೂಕಿನಲ್ಲಿ ನಡೆದಿದೆ.

    ಕಾತೂರಿನಲ್ಲಿ ತಾಲೂಕು ಮಟ್ಟದ ಸೇವಾದಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜಿನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂದು ಹೋಗಿದ್ದರು. ಹೋಗುವಾಗ ಮಕ್ಕಳನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕ, ವಾಪಾಸ್ ಬರುವಾಗ ಮಕ್ಕಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾರೆ.

    ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಮಕ್ಕಳ ಶಿಕ್ಷಕರ ಬಳಿ ಊಟದ ಚೀಟಿಯನ್ನು ನೀಡಲಾಗಿತ್ತು. ಆದ್ರೆ ದೀಪಕ್ ಅವರು ಮಕ್ಕಳ ಊಟದ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾರ್ಯಕ್ರಮದಿಂದ ಹಾಗೆಯೇ ಮುಂಡಗೋಡಿಗೆ ತೆರೆಳಿದ್ದಾರೆ. ಇತ್ತ ಮಕ್ಕಳು ಊಟವನ್ನೂ ಮಾಡದೆ ಶಿಕ್ಷಕರು ಬರುತ್ತಾರೆ ಎಂದು ಕಾದು ಕೂತಿದ್ದಾರೆ. ಆದ್ರೆ ಸಂಜೆಯಾದರೂ ಶಿಕ್ಷಕ ಬರದಿದ್ದಾಗ ಮಕ್ಕಳು ಆತಂಕಗೊಂಡಿದ್ದಾರೆ.

    ಬಳಿಕ ಮನೆ ಸೇರಲು ಬಸ್ಸಿಗೆ ಹೋಗಲು ಕೈಯಲ್ಲಿ ಹಣವಿಲ್ಲದೆ ನಡೆದುಕೊಂಡೇ ಸುಮಾರು 10 ಕಿ.ಮೀ ದೂರ ಬಂದಿದ್ದಾರೆ. ಬಳಿಕ ಮಕ್ಕಳನ್ನು ನೋಡಿದ ಗ್ರಾಮಸ್ಥರೊಬ್ಬರು ಹಣ ನೀಡಿ ಎಲ್ಲರನ್ನೂ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದಂತೆ ಶಿಕ್ಷಕರ ಮೇಲೆ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮರುದಿನ ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv