Tag: ಮುಂಡಗಾರು ಲತಾ

  • Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

    Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

    ಬೆಂಗಳೂರು: `ಬಂದೂಕಿನ ಮೂಲಕ ನ್ಯಾಯ’ ಪಡೆಯಲು ಪಶ್ಚಿಮ ಘಟ್ಟದಲ್ಲಿ ದಶಕಗಳ ಕಾಲ ಹೋರಾಟ ನಡೆಸಿದ್ದ 6 ನಕ್ಸಲರು ಶಸ್ತ್ರತ್ಯಾಗ ಮಾಡಿದ್ದಾರೆ. ಮುಖ್ಯವಾಹಿನಿಗೆ ಬರಲು ನಿರ್ಧರಿಸಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖದಲ್ಲೇ ಶರಣಾಗಿದ್ದಾರೆ.

    ನಕ್ಸಲರಾದ ಮುಂಡಗಾರು ಲತಾ (Mundagaru Latha), ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ್, ಜಿಶಾ ಶರಣಾಗಿದ್ದು, ಸಿಎಂ ಎಲ್ಲರಿಗೂ ಸಂವಿಧಾನ ಪುಸ್ತಕ ನೀಡಿದ್ದಾರೆ. ಈ ವೇಳೆ, ಹಲವು ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಸಿಎಂಗೆ ನೀಡಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಸಂಪುಟದಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ. ಈ ಹೊತ್ತಿನಲ್ಲಿ ಶರಣಾಗತರಾದ ನಕ್ಸಲರು ಹೋರಾಟಕ್ಕೆ ಧುಮುಕಿದ್ದು ಹೇಗೆ ಅನ್ನೋ ರೋಚಕ ಸಂಗತಿಗಳನ್ನು ತಿಳಿಯಲೇಬೇಕಿದೆ. ಅದಕ್ಕಾಗಿ ಮುಂದೆ ಓದಿ…

    ಮುಂಡಗಾರು ಲತಾ

    ಮೂಲತಃ ಕೊಪ್ಪ ತಾಲೂಕು ಬುಕಡಿಬೈಲು ಮುಂಡಗಾರು ಗ್ರಾಮದ ಮಹಿಳೆ. ಲೋಕಮ್ಮ, ಶ್ಯಾಮಲಾ ಎಂದೂ ಗುರುತಿಸಿಕೊಂಡಿದ್ದ ಈಕೆ ಮಲೆನಾಡು ಭಾಗಗಳಲ್ಲಿ ಲತಾ ಎಂದು ಗುರುತಿಸಿಕೊಂಡಿದ್ದಾರೆ. ಮೋಸ್ಟ್ ವಾಂಟೆಡ್ ಲಿಸ್ಟ್‌ ನಲ್ಲಿದ್ದ ನಕ್ಸಲರ ಪೈಕಿ ಮುಂಡಗಾರು ಲತಾ ಕೂಡ ಒಬ್ಬಾಕೆ. ಶೃಂಗೇರಿಯಲ್ಲಿ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ನಕ್ಸಲ್ ನಾಯಕಿಯಾಗಿ ಗುರುತಿಸಿಕೊಂಡರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಪ್ರಕಾರ ಮನೆ ಕಳೆದುಕೊಳ್ಳುವ ಸ್ಥಿತಿ ಬಂದಾಗ, 2000ನೇ ಇಸವಿಯಲ್ಲಿ ಮಾವೋವಾದಿ ಚಳವಳಿಗೆ ಧುಮುಕಿದರು. ಕರ್ನಾಟಕ, ಕೇರಳದಲ್ಲಿ ಮಾವೋವಾದಿ ದಳದಲ್ಲಿದ್ದು, ಇತ್ತೀಚೆಗೆ ನಕ್ಸಲ್ ತಂಡದ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಪೊಲೀಸ್ ದಾಳಿ ಸಂದರ್ಭದಲ್ಲಿ ಹಲವು ಬಾರಿ ತಪ್ಪಿಸಿಕೊಂಡಿದ್ದ ಲತಾ ಈಗ ಮುಖ್ಯವಾಹಿನಿಗೆ ಬರಲು ನಿರ್ಧರಿಸಿ, ಶರಣಾಗಿದ್ದಾರೆ.

    ಸುಂದರಿ ಕುತ್ಲೂರು

    ಸುಂದರಿ ಕುತ್ಲೂರು ಮೂಲತಃ ಆದಿವಾಸಿ ಮಹಿಳೆ. ಬಡತನ ಹಾಗೂ ಶಾಲೆ ದೂರವಿದ್ದುದರಿಂದ 3ನೇ ತರಗತಿಯ ನಂತರ ಶಾಲೆ ತೊರೆದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ಇವರ ಕುಟುಂಬ ಇದ್ದ ನೆಲೆಯನ್ನೂ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿತ್ತು. ಪ್ರಜಾಸತ್ತಾತ್ಮಕ ಚಳುವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವು ಯುವಜನರಂತೆ ಸುಂದರಿಯೂ ಸಹ ಆಯುಧ ಕೈಗೆತ್ತಿಕೊಂಡರು. ತನ್ನ 19ನೇ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಪಕ್ಷದ ಸದಸ್ಯರಾಗಿದ್ದು ಅಂದಿನಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದಳದ ಭಾಗವಾಗಿದ್ದರು. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದರು. ಇನ್ಮುಂದೆ ಪ್ರಜಾತಾಂತ್ರಿಕ ಚಳುವಳಿಯ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.

    ವನಜಾಕ್ಷಿ

    ಎಸ್‌ಎಸ್‌ಎಲ್‌ಸಿ ವರೆಗೂ ಓದಿರುವ ವನಜಾಕ್ಷಿ ಈ ತಂಡದ ಅತಿ ಹಿರಿಯ ಸದಸ್ತೆ. 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 8 ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಜನಿಸಿದ್ದ ಈಕೆ, ಹೊಲಿಗೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದರು. ರಾಜಕೀಯವಾಗಿ ಸಕ್ರಿಯವಾಗಿದ್ದರು ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡುಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾದ. ಅಲ್ಲದೇ ಸುತ್ತಮುತ್ತ ಇದ್ದ ಹಲವು ಕುಟುಂಬಗಳು ಸಹ ತಮ್ಮಂತೆ ಬಡತನ ಶೋಷಣೆಗಳಿಗೆ ಬಲಿಯಾಗುತ್ತಿದ್ದುದ್ದನ್ನು ಕಂಡ ವನಜಾಕ್ಷಿ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರು. ಸಶಸ್ತ್ರ ಹೋರಾಟವೇ ದಾರಿ ಎಂಬ ನಿರ್ಧಾರಕ್ಕೂ ಬಂದ ಇವರು, ಆ ಕಾಲದಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಳುವಳಿಗೆ ಧುಮುಕಿದರು. 2000ನೇ ಇಸವಿಯಿಂದ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಯ ಭಾಗವಾಗಲು ಸಿದ್ಧರಾಗಿದ್ದಾರೆ.

    ಜಯಣ್ಣ ಅರೋಲಿ

    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಜಯಣ್ಣ ದ್ವಿತೀಯ ಬಿ.ಎ ವರೆಗೆ ವ್ಯಾಸಂಗ ಮಾಡಿರುವ ದಲಿತ ಯುವಕ. ಕಾಲೇಜಿನಲ್ಲಿರುವಾಗಲೇ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳುವಳಿಯ ಕಡೆ ಆಕರ್ಷಿತರಾದರು. ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್‌ಕೌಂಟರ್‌ ಆಘಾತ ಉಂಟುಮಾಡಿತು. ಬಳಿಕ 2000ನೇ ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ದಳದ ಭಾಗವಾದರು. ಅಂದಿನಿಂದ ಕೇರಳ, ಕರ್ನಾಟಕಗಳಲ್ಲಿ ಇವರ ಹೋರಾಟದ ಚಟುವಟಿಕೆಗಳು ನಡೆದಿದೆ. 2018 ರಲ್ಲಿ ಮತ್ತೆ ಸಶಸ್ತ್ರ ಚಳುವಳಿಗೆ ಮರಳಿದರು. ಇದೀಗ ಜನರ ಜೊತೆ ಸೇರಿ ಜನಪರ ಹೋರಾಟಗಳನ್ನು ನಡೆಸಲು ಬಯಸಿದ್ದಾರೆ. ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.

    ವಸಂತ್ ಆರ್ಕಾಟ್

    ತಮಿಳುನಾಡಿನ ವೆಲ್ಲೂರು ಮೂಲದ ವಸಂತ್ ಬಿ-ಟೆಕ್ ಪದವೀಧರ. ವೆಲ್ಲೂರು ಜಿಲ್ಲೆಯ ಆರ್ಕಾಟ್ ಅವರ ಊರು. ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಾ, ಬೆಳೆದವರು 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಸಶಸ್ತ್ರ ಹೋರಾಟದ ಭಾಗವಾಗಿ ಚಳವಳಿಗೆ ಧುಮುಕಿದರು. ಅಂದಿನಿಂದಲೂ ಕೇರಳ, ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆಯಾಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೇ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿ ಸೇರಬಯಸಿದ್ದಾರೆ.

    ಜಿಶ

    ಜಿಶ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಕೇರಳದ ಜಿಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ. 8ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದ ಈಕೆ 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು, 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದರು.

  • ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಎ.ಎನ್.ಎಫ್. ಪೊಲೀಸರ ಒಂದೇ ಒಂದು ಎನ್ ಕೌಂಟರ್‌ಗೆ ಕೆಂಪು ಉಗ್ರರಲ್ಲಿ ನಡುಕ ಹುಟ್ಟಿದೆ. ಎರಡು ದಶಕಗಳ ಕಾಲ ಹೋರಾಡ್ದೋರು-ಹಾರಾಡ್ದೋರು ಒಂದೇ ಒಂದು ಎನ್‌ಕೌಂಟರ್‌ಗೆ ಫುಲ್ ಸೈಲೆಂಟ್.

    ಕೇರಳದಿಂದ ಬಂದು ಕಾಫಿನಾಡ ಕಾಡಲ್ಲಿ ಪಸರಿಸಿದ್ದ ನಕ್ಸಲರು ವಿಕ್ರಂಗೌಡ ಹತನಾದ ಬಳಿಕ ಎ.ಎನ್.ಎಫ್. ಕೂಂಬಿಂಗ್ ಮಾಡಿದ್ರು ಸಿಕ್ಕಿರಲಿಲ್ಲ. ಆದರೀಗ, ಮೋಸ್ಟ್ ವಾಂಟೆಡ್ ನಕ್ಸಲ್ ಮುಂಡಗಾರು ಲತಾ ಸೇರಿ 6 ಜನ ಸಮಾಜದ ಮುಖ್ಯ ವಾಹಿನಿ ಹೆಸರಲ್ಲಿ ಶರಣಾಗತಿಯಾಗೋಕೆ ಮುಂದಾಗಿದ್ದಾರೆ. ಪೊಲೀಸರ ಕೂಂಬಿಂಗ್ ಚುರುಕು. ಮಲೆನಾಡಿಗರ ಬೆಂಬಲವೂ ಇಲ್ಲ. ಸೋ, ಸಿಎಂ ಗ್ರೀನ್ ಸಿಗ್ನಲ್ ದಾರಿ ಕಾಯ್ತಿದ್ದ ನಕ್ಸಲರು ಇದೀಗ ಶರಣಾಗತಿಯಾಗೋಕೆ ಮುಂದಾಗಿದ್ದಾರಂತೆ.

    2014ರ ಬಳಿಕ ಜಿಲ್ಲೆಯ ಕಾಡಲ್ಲಿ ಕೆಂಪು ಉಗ್ರರ ಹೆಜ್ಜೆ ಗುರುತು ಕಂಡಿರಲಿಲ್ಲ. ಪೊಲೀಸರ ಗುಂಡಿನ ಸದ್ದು ಕೇಳಿರ್ಲಿಲ್ಲ. ಆದರೆ, ಮೂರ್ನಾಲ್ಕು ತಿಂಗಳ ಹಿಂದೆ ನಕ್ಸಲರ ಹೆಜ್ಜೆ ಗುರುತು ಕಂಡಿತ್ತು. ಪೊಲೀಸರ ಗುಂಡಿನ ಶಬ್ಧವೂ ಕೇಳಿತ್ತು. ಒಂದು ಎನ್‌ಕೌಂಟರ್ ಕೂಡ ಆಗಿತ್ತು. ಕೇರಳದಿಂದ ಬಂದಿದ್ದ ನಕ್ಸಲರು ಚಿಕ್ಕಮಗಳೂರು-ಉಡುಪಿ ಭಾಗವನ್ನ ಮುಂಡಗಾರು ಲತಾ-ವಿಕ್ರಂ ಗೌಡ ನಾಯಕತ್ವ ವಹಿಸಿದ್ರು. ಆದರೆ, ಉಡುಪಿ ಕಾಡಲ್ಲಿ ಪೊಲೀಸರ ತುಪಾಕಿ ನಳಿಕೆಯಿಂದ ಹಾರಿದ ಗುಂಡು ವಿಕ್ರಂಗೌಡನ ಎದೆ ಸೀಳಿತ್ತು. ಗುಂಡಿನ ಶಬ್ಧಕ್ಕೆ ಮುಂಡಗಾರು ಲತಾ ತಂಡ ಫುಲ್ ಸೈಲೆಂಟ್ ಆಗಿತ್ತು.

    ಆದ್ರೆ, ಎಎನ್‌ಎಫ್ ಪೊಲೀಸರು ಕೂಂಬಿಂಗ್ ಮಾತ್ರ ನಿಲ್ಸಿರ್ಲಿಲ್ಲ. ಮತ್ತಷ್ಟು ಆಕ್ಟೀವ್ ಆಗಿದ್ರು. ಆದ್ರೆ, ಒಂದೇ ಒಂದು ಎನ್‌ಕೌಂಟರ್‌ಗೆ ನಕ್ಸಲರ ಹೆಸರಿಲ್ಲದಂತೆ ನಾಪತ್ತೆಯಾಗಿದ್ರು. ಮತ್ತೆ ಕೇರಳ ಹೋದ್ರಾ ಎಂಬ ಅನುಮಾನಗಳ ಮಧ್ಯೆಯೇ ನಕ್ಸಲರ ಶರಣಾಗತಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆದರೆ, ಖಾಕಿಪಡೆ ಮಾತ್ರ ಶರಣಾಗತಿ ಸುದ್ದಿಯನ್ನ ಸಾರಾಸಗಟಾಗಿ ತಿರಸ್ಕರಿಸಿದೆ. ತೆರೆಮರೆಯ ಕಸರತ್ತನ್ನಂತು ನಡೆಸುತ್ತಿದೆ. ಜೊತೆಗೆ, ಸರ್ಕಾರ ಕೂಡ ವಿವಿಧ ಪ್ಯಾಕೇಜ್ ಘೋಷಿಸಿ ನಕ್ಸಲರಿಗೆ ಶರಣಾಗುವಂತೆ ಸೂಚಿಸಿದೆ.

    ಕಳೆದ ವಾರವಷ್ಟೆ ನಕ್ಸಲರು ಶರಣಾಗತಿಗೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇದರ ಬೆನ್ನಲ್ಲೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಕೂಡ ಅದನ್ನೇ ಪುನರುಚ್ಚರಿಸಿದ್ದರು. ಎಬಿಸಿ ಎಂಬ ಮೂರು ಗುಂಪು ಮಾಡಿದ್ರು. ಅಂದ್ರೆ, ರಾಜ್ಯದವರು, ಹೊರಗಿನವರು ಹಾಗೂ ಸಿಂಪಥೈಸರ್ಸ್ ಗಳಿಗೂ ಸ್ಪೆಷಲ್ ಪ್ಯಾಕೇಜ್ ಆಫರ್ ನೀಡಿದ್ರು.

    ಈ ಶರಣಾಗತಿ ಪ್ರಹಸನದ ಮಧ್ಯೆಯೇ ಆರು ನಕ್ಸಲರು ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರೆಪ್ಪ ಅರೋಲಿ, ವಸಂತ್, ಜೀಶ್ ಹೆಸರು ಕೇಳಿ ಬರ್ತಿದೆ. ವಾರದಲ್ಲಿ ಆಗ್ತಾರೋ ತಿಂಗಳಾಗುತ್ತೋ, ಆಗೋದೇ ಇಲ್ವೋ ಗೊತ್ತಿಲ್ಲ. ಆದ್ರೆ, ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ಅಥವ ಮಲೆನಾಡ ಎಡಪಂಥೀಯ ಮುಖಂಡರು ಸಂಪರ್ಕ ಮಾಡಿರುವ ಸಾಧ್ಯತೆಯಿದೆ. ನಕ್ಸಲರ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ಯಂತ. ಆದರೆ, ಶರಣಾಗತಿಯಾದ ಮೇಲೆ ಆಗಬಹುದಾದ ಕೆಲ ಸಮಸ್ಯೆಗಳನ್ನ ಅರಿತು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

    ಕರ್ನಾಟಕದಲ್ಲಿ ಇದ್ದದ್ದೇ ಎಂಟತ್ತು ನಕ್ಸಲರು. ಅವರು ಕೇರಳ ಹೋದ ಮೇಲೆ ಕಾಡು ಕ್ಲೀನ್ ಆಗಿತ್ತು. ಇದೀಗ ಮತ್ತೆ ಬಂದ ಬಳಿಕ ಒಂದು ಎನ್ ಕೌಂಟರ್ ಆಗಿದೆ. ಜನರ ಬೆಂಬಲವೂ ಇಲ್ಲ. ಕೂಂಬಿಂಗ್ ಚುರುಕು ಅನ್ನೋ ಕಾರಣಕ್ಕೆ ಭವಿಷ್ಯ ಇಲ್ಲ ಅಂತ ನಕ್ಸಲರಿಗೆ ಅನ್ನಿಸಿರಬೇಕು. ಅದಕ್ಕೆ ಶರಣಾಗತಿಗೆ ಮನಸ್ಸು ಮಾಡಿದ್ದಾರೆ. ಒಂದು ವೇಳೆ, ಎಲ್ಲರೂ ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬಂದರೆ ಕೆಂಪು ಉಗ್ರರ ಹೆಜ್ಜೆ ಸದ್ದು-ಪೊಲೀಸರ ಗುಂಡಿನ ಸದ್ದಿನಿಂದ ಕರುನಾಡ ಕಾಡು ಮುಕ್ತವಾಗಲಿದೆ.

  • ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?

    ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?

    ಚಿಕ್ಕಮಗಳೂರು: ಕೇರಳದಲ್ಲಿ (Kerala) ಉಳಿಯೋದು ಕಷ್ಟ ಎಂದು ಕಾಫಿನಾಡಿಗೆ ಬಂದಿದ್ದ ಕೆಂಪು ಉಗ್ರರು ಒಂದೇ ಒಂದು ಎನ್‌ಕೌಂಟರ್‌ಗೆ ಮತ್ತೆ ಕೇರಳ ಸೇರಿಕೊಂಡಿರುವ ಅನುಮಾನ ಮೂಡಿದೆ.

    ಕಾಫಿನಾಡು-ಕೃಷ್ಣನಗರಿಯಲ್ಲಿ ನಕ್ಸಲರ ಹೆಜ್ಜೆಗುರುತು ಸಿಕ್ಕ 15-20 ದಿನದಲ್ಲೇ ನಕ್ಸಲ್ ನಾಯಕ ವಿಕ್ರಂಗೌಡ (Vikram Gowda) ಎಎನ್‌ಎಫ್ (ANF) ಗುಂಡಿಗೆ ಕಾಡಲ್ಲೇ ಹತನಾದ. ಕಾಫಿನಾಡ ಕಾಡಲ್ಲಿ ಕಣ್ಮರೆಯಾದ ಮುಂಡಗಾರು ಲತಾ ಆ್ಯಂಡ್ ಟೀಂ ಪತ್ತೆಯೇ ಇಲ್ಲ. ಇತ್ತ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಜೊತೆಗಿದ್ದ ಸಹಚರರ ಸುಳಿವೂ ಇಲ್ಲ. ಹಾಗಾದರೇ ನಕ್ಸಲರು ಜೀವಭಯದಲ್ಲಿ ಮತ್ತೆ ಕೇರಳ ಸೇರಿಕೊಂಡರಾ ಎಂಬ ಅನುಮಾನ ಬಲವಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಾಕ್ ಪ್ರಜೆಗಳ ಬಂಧನ ಕೇಸ್‌ – 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಕಾಫಿನಾಡಲ್ಲಿ ಕಳೆದೊಂದು ದಶಕದಿಂದ ನಕ್ಸಲರ ಹೆಜ್ಜೆ ಗುರುತುಗಳೇ ಇರಲಿಲ್ಲ. ದಶಕಗಳ ಬಳಿಕ ಕೆಂಪು ಉಗ್ರರು ಕಾಫಿನಾಡು ಕಾಡಲ್ಲಿ ಓಡಾಡಿದ್ದರು. ಎರಡೇ ತಿಂಗಳಿಗೆ ಮತ್ತೆ ಇಲ್ಲದಂತಾಗಿರೋದು ನಿಜಕ್ಕೂ ಆಶ್ಚರ್ಯ. ಆದರೆ ದಶಕದಿಂದ ನಕ್ಸಲರು ಇಲ್ಲದ ಕಾರಣ ಕಾರ್ಕಳದ ಎಎನ್‌ಎಫ್ ಕ್ಯಾಂಪನ್ನು ಮಡಿಕೇರಿಗೆ ವರ್ಗಾಯಿಸೋ ಮಾತುಗಳು ಕೇಳಿ ಬಂದಿದ್ದವು. ಆದರೆ ಹಿಟ್‌ಲಿಸ್ಟ್ ನಕ್ಸಲರು ಸಿಗದ ಕಾರಣ ಆ ಪ್ರಸ್ತಾವನೆ ಹಾಗೇ ಉಳಿದಿತ್ತು. ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ ಉಡುಪಿಯಲ್ಲಿ ಎನ್‌ಕೌಂಟರ್ ಆದ. ಅದಾದ ಬಳಿಕ ಎಎನ್‌ಎಫ್ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಕೂಂಬಿಂಗ್ ಚುರುಕುಗೊಳಿಸಿದರು. ಆದರೆ ಮುಂಡಗಾರು ಲತಾ ಟೀಂ ಹಾಗೂ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಸಹಚರರ ಸುದ್ದಿಯೇ ಇಲ್ಲದಂತಾಗಿರೋದು ಜೀವ ಭಯದಿಂದ ನಕ್ಸಲರು ಮತ್ತೆ ಕೇರಳ ಕಾಡು ಸೇರಿಕೊಂಡಿರಬಹುದಾ ಎಂಬ ಪ್ರಶ್ನೆ ಮೂಡಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ | ಬಸ್ ಪಲ್ಟಿ – 12 ಮಂದಿ ಸಾವು, 30 ಜನರಿಗೆ ಗಾಯ

    ಈ ರೀತಿಯ ಜಿಜ್ಞಾಸೆಯೊಂದು ನಕ್ಸಲರನ್ನು ಕಾಡತೊಡಗಿದೆ. ಏಕೆಂದರೆ 10 ವರ್ಷಗಳ ಬಳಿಕ ಕರ್ನಾಟಕಕ್ಕೆ ಬಂದ ಎರಡೇ ತಿಂಗಳಿಗೆ ಅತ್ತ ಉಡುಪಿ-ಇತ್ತ ಚಿಕ್ಕಮಗಳೂರಲ್ಲಿ ಪೊಲೀಸರು ನಕ್ಸಲರ ಬೆನ್ನು ಬಿದ್ದಿದ್ದಾರೆ. ಅಂದರೆ ಅಲ್ಲಿಗೆ ಮಲೆನಾಡಿಗರೇ ಬೆಂಬಲ ಇಲ್ಲ ಎಂದೇ ಅರ್ಥ. ಹಾಗಾಗಿಯೇ ಅವರು ಬಂದ ಒಂದೂವರೆ ತಿಂಗಳಿಗೆ ಒಂದು ಎನ್‌ಕೌಂಟರ್ ಆಗಿದೆ. ವಿಕ್ರಂಗೌಡ ಎನ್‌ಕೌಂಟರ್ ಆದ ಬೆನ್ನಲ್ಲಿ ಮತ್ತೆ ನಕ್ಸಲರ ವದಂತಿಗಳೇ ಇಲ್ಲದಂತಾಗಿದೆ. ಹಾಗಾಗಿ ಎನ್‌ಕೌಂಟರ್ ಬಳಿಕ ನೋ ಸರೆಂಡರ್ ಎಂದು ಎಎನ್‌ಎಫ್ ಕೂಂಬಿಂಗ್ ಕಂಡು ನಕ್ಸಲರು ಜೀವ ಭಯದಲ್ಲಿ ಮತ್ತೆ ಕೇರಳದತ್ತ ಹೆಜ್ಜೆ ಹಾಕಿರಬಹುದು ಎಂಬ ಅನುಮಾನ ಬಲವಾಗಿವೆ. ಇದನ್ನೂ ಓದಿ: ಪಕ್ಕದ ಮನೆಗೆ ಕನ್ನ ಹಾಕಿ ಪೊಲೀಸರ ಅತಿಥಿಯಾದ ಬೆಂಗ್ಳೂರು ನೆಂಟ!

    ಒಟ್ಟಾರೆ, 2002ರಿಂದ 2013-14ರವರೆಗೆ ನಿರಂತರವಾಗಿದ್ದ ನಕ್ಸಲ್ ಚಟುವಟಿಕೆ 2014ರ ಬಳಿಕ ಸಂಪೂರ್ಣ ನಿಂತೇ ಹೋಗಿತ್ತು. ನಕ್ಸಲರೆಲ್ಲಾ ಕೇರಳ ಸೇರಿಕೊಂಡಿದ್ದರು. ಆದರೆ 2024ರಲ್ಲಿ ಕರ್ನಾಟಕಕ್ಕೆ ಬಂದ ಒಂದೂವರೆ-ಎರಡು ತಿಂಗಳಲ್ಲೇ ಒಂದು ಎನ್‌ಕೌಂಟರ್ ನಕ್ಸಲರ ನಿದ್ದೆಗೆಡಿಸಿ, ಜೀವಭಯ ತರಿಸಿದಂತೆ ಕಾಣುತ್ತಿದೆ. ಹಾಗಾಗಿ ಮತ್ತೆ ಕೇರಳದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ