Tag: ಮುಂಗಾರು ಸಾಂಸ್ಕೃತಿಕ ಹಬ್ಬ

  • ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲೆಗುಂಪು: ಶ್ರೀಶೈಲ ಜಗದ್ಗುರು ಟೀಕೆ

    ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲೆಗುಂಪು: ಶ್ರೀಶೈಲ ಜಗದ್ಗುರು ಟೀಕೆ

    ರಾಯಚೂರು: ಸ್ವಾಮೀಜಿಗಳಿಗೇನು ಗೊತ್ತು ಗೋಮಾಂಸ ರುಚಿ ಎಂದು ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲೆಗುಂಪಾಗಿದ್ದಾರೆ. ಅವರ ಪಾಪದ ಫಲವನ್ನ ಈಗ ಅನುಭವಿಸುತ್ತಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಹೇಳದೆ ಟೀಕಿಸಿದ್ದಾರೆ.

    ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಕಾರ್ಯಕ್ರಮಕ್ಕೆ ಜಗದ್ಗುರುಗಳು ಚಾಲನೆ ನೀಡಿದರು. ಬಳಿಕ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮಿಜಿ ಗೋಹತ್ಯೆ ಕುರಿತು ಮಾತನಾಡುತ್ತ ಮಾಜಿ ಸಿಎಂ ವಿಷಯ ಪ್ರಸ್ತಾಪಿಸಿದ್ದಾರೆ. ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲಗುಂಪಾಗಿದ್ದಾರೆ. ಅವರ ಪಾಪದ ಫಲವನ್ನ ಈಗ ಅನುಭವಿಸುತ್ತಿದ್ದಾರೆ. ಈ ಹಿಂದೆ ಗೋಹತ್ಯೆ ನಿಷೇಧದ ಬಗ್ಗೆ ಅಂದಿನ ಸ್ವಾಮಿಜಿಗಳು ಮನವಿ ಮಾಡಿದ್ದಾಗ, ಸ್ವಾಮೀಜಿಗಳಿಗೇನು ಗೊತ್ತು ಗೋಮಾಂಸ ರುಚಿ ಎಂದಿದ್ದರು ಟೀಕಿಸಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಶ್ರೀಶೈಲ ಜಗದ್ಗುರುಗಳು ಮಾತಿನ ಚಾಟಿ ಬೀಸಿದ್ದಾರೆ.

    ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಯಾರೋ ಇಬ್ಬರು ಮಠಾಧೀಶರು ರಾಜಕೀಯ ಹೇಳಿಕೆ ನೀಡದ ಮಾತ್ರಕ್ಕೆ ಎಲ್ಲಾ ಮಠಾಧೀಶರು ರಾಜಕೀಯ ಮಾಡುತ್ತಾರೆ ಎನ್ನುವುದು ತಪ್ಪು ಹೇಳಿಕೆ. ಸ್ವಾಮೀಜಿಗಳು ರಾಜಕೀಯ ಮಾಡುವಾಗ ನಾವು ಏಕೆ ರಾಜಕೀಯ ಮಾಡಬಾರದು ಎನ್ನುವ ಸಾಹಿತಿಗಳ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.

    ಕಾಲಕಾಲಕ್ಕೆ ಮಠಾಧೀಶರು ರಾಜರ ಕಾಲದಿಂದಲೂ ಆಡಳಿತದಲ್ಲಿರುವವರಿಗೆ ಸಲಹೆ, ಸೂಚನೆ ನೀಡುತ್ತಾ ಬಂದಿದ್ದಾರೆ. ಅದನ್ನು ಈಗ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಠಾಧೀಶರು ಯಾವುದೇ ಜಾತಿ, ಪಕ್ಷಕ್ಕೆ ಸೀಮಿತವಾಗಿಲ್ಲ. ಜನಸಮುದಾಯಕ್ಕೆ ಒಳ್ಳೆಯದನ್ನು ಬಯಸುವ ಕೆಲಸವನ್ನು ಮಾಡುತ್ತಾರೆ. ಲಿಂಗಾಯತ ಪ್ರತೇಕ ಧರ್ಮ ವಿಚಾರ ಮುಗಿದ ಕಥೆ. ಆ ಬಗ್ಗೆ ವಿಮರ್ಶೆ ಅಗತ್ಯವಿಲ್ಲ. ಯಾರೂ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿಕೊಂಡರು.

  • ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ ಕೊಟ್ಟ ರಾಯಚೂರು ಮಂದಿ

    ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ ಕೊಟ್ಟ ರಾಯಚೂರು ಮಂದಿ

    ರಾಯಚೂರು: ಕಳೆದ 19 ವರ್ಷಗಳಿಂದ ಕಾರಹುಣ್ಣಿಮೆ ಹಿನ್ನೆಲೆ ಪ್ರತೀವರ್ಷ ರಾಯಚೂರಿನಲ್ಲಿ ವಿಜೃಂಭಣೆಯಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಮುಂಗಾರು ಹಬ್ಬಕ್ಕೆ ರಾಯಚೂರು ಮಂದಿ ಅದ್ಧೂರಿ ಚಾಲನೆ ಕೊಟ್ಟು ಆಚರಿಸುತ್ತಿದ್ದಾರೆ.

    ನಗರದ ರಾಜೇಂದ್ರ ಗಂಜ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಈ ವಿಶೇಷ ಹಬ್ಬಕ್ಕೆ ಸೋಮವಾರಪೇಟೆ ಮಠದ ಶ್ರೀಗಳು ಹಾಗೂ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಚಾಲನೆ ನೀಡಿದರು.

    300 ಕಾಪು ಸಮಾಜದವರು ಹಬ್ಬವನ್ನ ಆಯೋಜನೆ ಮಾಡುತ್ತಿದ್ದು, ಅವರ ಕುಲದೇವತೆ ಲಕ್ಷ್ಮಮ್ಮ ದೇವಿ ಮೆರವಣಿಗೆಯನ್ನ ನಾಳೆ ನಗರದಲ್ಲಿ ಅದ್ಧೂರಿಯಾಗಿ ನಡೆಸಲಿದ್ದಾರೆ. ಕಾರಹಣ್ಣಿಮೆ ಹಿನ್ನೆಲೆ ಮುಂಗಾರು ಹೊಸ್ತಿಲಲ್ಲಿ ರೈತರಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಈ ಸಾಂಸ್ಕೃತಿಕ ಹಬ್ಬವನ್ನ ಆಚರಿಸಲಾಗುತ್ತಿದೆ.

    ಅಲ್ಲದೆ ವಿವಿಧ ರಾಜ್ಯಗಳಿಂದ ಆಗಮಿಸಿದ ಬೃಹದಾಕಾರದ ಜೋಡಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಕುಸ್ತಿ, ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಜಾನಪದ ಕ್ರೀಡೆಗಳು ಮುಂಗಾರು ಹಬ್ಬದಲ್ಲಿ ನಡೆಯಲಿದ್ದು, ಈ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ಹಬ್ಬ ನಡೆಯುವ ಮೂರು ದಿನಗಳು ಕೂಡ ಸಂಜೆ ವಿವಿಧ ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಲಿದೆ.

    ಅಷೇ ಅಲ್ಲದೆ ಈ ವಿಶೇಷ ಹಬ್ಬದಲ್ಲಿ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಅವರ ಜನ್ಮದಿನ ಇದ್ದಿದ್ದರಿಂದ ಕಾರ್ಯಕ್ರಮ ಆಯೋಜಕರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.