Tag: ಮೀನುಗಾರಿಗೆ

  • ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಕಾರವಾರ: ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ಘಟನೆ ನಡೆದಿದ್ದು, ಅಚ್ಚರಿ ರೀತಿಯಲ್ಲಿ 7 ಮೀನುಗಾರರನ್ನು ರಕ್ಷಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಘಟನೆ ನಡೆದಿದೆ. ತಾಲೂಕಿನ ಮಾನೀರ್ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಈ ಅವಘಡ ಸಂಭವಿಸಿದ್ದು, ದೋಣಿಯಲ್ಲಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರರ ಮೀನುಗಾರರೇ ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದ್ದಾರೆ. ಸದ್ಯ ಯಾವುದೇ ದುರ್ಘಟನೆ ನಡೆಯದಂತೆ ಪಾರಾಗಿದ್ದಾರೆ.

    ತಾಲೂಕಿನ ದೀವಗಿಯ ನಿತ್ಯ ಅಂಬಿಗ ಅವರಿಗೆ ಸೇರಿದ ದೋಣಿ ಇದಾಗಿದ್ದು, ಬೆಳಗ್ಗೆ ಎಂದಿನಂತೆ ಮರಳುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯ ಮೇಲೆ ಭಾರ ಹೆಚ್ಚಾದ ಪರಿಣಾಮ ನದಿಯಲ್ಲಿ ಮಗುಚಿದೆ. ಈ ವೇಳೆ ದೋಣಿಯಲ್ಲಿದ್ದ 7 ಜನ ನದಿಯಲ್ಲಿ ಬಿದ್ದಿದ್ದಾರೆ. ಇದನ್ನು ಕಂಡ ಹತ್ತಿರದ ಮತ್ತೊಂದು ದೋಣಿಯ ಮೀನುಗಾರರು ತಕ್ಷಣವೇ ಎಚ್ಚೆತ್ತುಕೊಂಡು ದೋಣಿಯಲ್ಲಿ ಒಟ್ಟು 7 ಜನ ಮೀನುಗಾರರನ್ನು ರಕ್ಷಿಸಿದ್ದಾರೆ. ಇದರಿಂದಾಗಿ ದೋಣಿಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ರಾಜ್ಯಕ್ಕೆ 50 ಕೋಟಿ ಮೀನು ಮರಿಗಳ ಅವಶ್ಯಕತೆ ಇದೆ: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯಕ್ಕೆ 50 ಕೋಟಿ ಮೀನು ಮರಿಗಳ ಅವಶ್ಯಕತೆ ಇದೆ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ರಾಜ್ಯದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿ ಬೆಳೆಯಲು ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮತ್ತು ಜಲಕೃಷಿಯ ಅಭಿವೃದ್ಧಿಯ ಕುರಿತು ನೀಲನಕ್ಷೆ ತಯಾರಿಸಲು ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಕಾಸಸೌಧದಲ್ಲಿ ಪರಿಣಿತರ ಸಭೆ ನಡೆಸಿದರು.

    ಮೀನುಗಾರರ ಕಲ್ಯಾಣಕ್ಕಾಗಿ 1957 ರಲ್ಲಿ ಸ್ಥಾಪನೆಯಾದ ಮೀನುಗಾರಿಕೆ ಇಲಾಖೆ 1993ರಲ್ಲಿ ತಂದ ಪೂರಕ ಕಾಯ್ದೆ, 2003ರಲ್ಲಿ ತಂದಿರುವ ತಿದ್ದುಪಡಿಗಳು ಸಂಬಂಧಿಸಿದಂತೆ ಸೂಕ್ತ ನಿಯಮಗಳು ರೂಪಿಸಲಾಗದಿರುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಸಭೆ, ಹಲವು ವಿಚಾರಗಳನ್ನು ವಿಮರ್ಶಿಸಿ, ಇನ್ನೆರಡು ತಿಂಗಳಲ್ಲಿ ನಿಯಮಗಳನ್ನು ರೂಪಿಸಿ ಸಚಿವ ಸಂಪುಟಕ್ಕೆ ಮಂಡಿಸುವಂತೆ ಸಚಿವ ಕೋಟ ಆದೇಶ ನೀಡಿದರು.

    ದೇಶದಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದ್ದು, ಮೀನು ಉತ್ಪಾದನೆ ಹೆಚ್ಚಿಸುವುದು, ಸುಧಾರಿತ, ತಾಂತ್ರಿಕ ವಿಧಾನಗಳನ್ನು ವಿಸ್ತರಿಸುವುದೂ ಸೇರಿದಂತೆ ಹಲವು ಆಯಾಮಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ನೀಲನಕ್ಷೆ ತಯಾರಿ ಮಾಡಲು ಸಭೆ ನಿರ್ಣಯಿಸಿತು.

    ಮರಿಗಳ ಉತ್ಪಾದನೆ, ಕೊಳಗಳ ನಿರ್ಮಾಣವೂ ಸೇರಿದಂತೆ ಈಗಿರುವ 26 ಸಾವಿರ ಕೆರೆಗಳ ಪೈಕಿ ಮೀನುಗಾರಿಕೆಗೆ ಸಿದ್ಧವಾದ ಕೆರೆಗಳ ಕುರಿತು ಅಧ್ಯಯನ ವರದಿಯೊಂದನ್ನು ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

    ಒಳನಾಡು ಮೀನುಗಾರಿಕೆಯಲ್ಲಿ ಹೊಸ ತಳಿಗಳ ಸಂಶೋಧನೆ, 2.5 ಲಕ್ಷ ಹೆಕ್ಟೇರ್ ಸವಳು – ಜವಳು ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದು, ಮೀನುಗಾರರ ತರಬೇತಿ ಕೇಂದ್ರಗಳಿಗೆ ಕಾಯಕಲ್ಪ ಒದಗಿಸುವುದೂ ಸೇರಿದಂತೆ ಪ್ರವಾಸೋದ್ಯಮ ಹಾಗೂ ಕ್ರೀಡಾ ಮೀನುಗಾರಿಕೆಯನ್ನು ಅಳವಡಿಸಿಕೊಳ್ಳುವುದರ ಕುರಿತು ಸುದೀರ್ಘ ಚರ್ಚೆ ನಡೆದು ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಭಾಗಗಳಲ್ಲಿ ಮೀನುಗಾರಿಕೆ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಗಾಳ ಹಾಕಿ ಮೀನು ಹಿಡಿಯುವ ಪದ್ಧತಿಯನ್ನು ಜನಪ್ರಿಯಗೊಳಿಸಲು ಸಭೆ ಸಹಮತ ನೀಡಿತು.

    ಶ್ರೀಅಂಬಿಗರ ಚೌಡಯ್ಯ ನಿಗಮದ ವತಿಯಿಂದ ಮೀನುಗಾರಿಕೆ ತರಬೇತಿ ಹಾಗೂ ಮೀನು ಸಾಕಣಿಕೆಯ ಬಗ್ಗೆ ಹಲವಾರು ನಿರ್ಣಯವನ್ನು ಸಭೆ ಕೈಗೊಂಡಿತು. ಕೋಟ ಶ್ರೀನಿವಾಸ ಪೂಜಾರಿ ಅವರು ಈಗಿರುವ ಸ್ಥಿತಿಯಲ್ಲಿ 50 ಕೋಟಿ ಮೀನು ಮರಿಗಳ ಅವಶ್ಯಕತೆಯಿದ್ದು, ಶೇಕಡಾ 50 ರಷ್ಟು ಮಾತ್ರ ಮೀನು ಮರಿಗಳ ಪೂರೈಕೆ ಆಗುತ್ತಿದ್ದು, ಹೆಚ್ಚುವರಿ ಉತ್ಪಾದನೆಗೆ ಅಗತ್ಯ ಯೋಜನೆ ರೂಪಿಸಬೇಕಾಗಿ ಸೂಚಿಸಿದರು.

    ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಬಹುತೇಕ ಹಿರಿಯ ನಿವೃತ್ತ ಅಧಿಕಾರಿಗಳು, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್, ನಿರ್ದೇಶಕರಾದ ಶ್ರೀ ಪ್ರಭುಲಿಂಗ ಕಾವಳಿಕಟ್ಟಿ, ಮೀನುಗಾರಿಕೆ ಕಾಲೇಜು ಡೀನ್ ಶ್ರೀ ಸೇಂಥಿಲ್ ವೇಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಗೋವಾದಲ್ಲಿ ಕರಾವಳಿ ಮೀನುಗಳಿಗಿಲ್ಲ ಎಂಟ್ರಿ- ಕುಸಿತ ಕಂಡ ದರ, ಮೀನುಗಾರರಿಗೆ ಸಂಕಷ್ಟ..!

    ಗೋವಾದಲ್ಲಿ ಕರಾವಳಿ ಮೀನುಗಳಿಗಿಲ್ಲ ಎಂಟ್ರಿ- ಕುಸಿತ ಕಂಡ ದರ, ಮೀನುಗಾರರಿಗೆ ಸಂಕಷ್ಟ..!

    ಮಂಗಳೂರು: ನೀರಿನ ವಿಚಾರದಲ್ಲಿ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಕ್ಕದ ರಾಜ್ಯ ಗೋವಾ, ಇದೀಗ ಮೀನಿನ ವಿಚಾರದಲ್ಲಿಯೂ ಕಾಲು ಕೆರೆದುಕೊಂಡಿದೆ. ಮೀನಿನಲ್ಲಿ ಕೆಮಿಕಲ್ ಇದೆಯೆಂಬ ವದಂತಿಯನ್ನೇ ನಂಬಿ ಕರ್ನಾಟಕದ ಕರಾವಳಿಯಿಂದ ಗೋವಾಕ್ಕೆ ಪೂರೈಕೆ ಆಗ್ತಿದ್ದ ಮೀನುಗಳಿಗೆ ನಿಷೇಧದ ಬರೆ ಹಾಕಿದೆ. ಇದರಿಂದಾಗಿ ಕರಾವಳಿಯ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ.

    ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಯೇ ದೊಡ್ಡ ಉದ್ಯಮ. ಕರಾವಳಿ ಭಾಗದ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಯ ಮೂಲವೇ ಮೀನುಗಾರಿಕೆ. ಆದ್ರೆ ಕರ್ನಾಟಕದಿಂದ ಪೂರೈಕೆಯಾಗುವ ಮೀನುಗಳಿಗೆ ರಾಸಾಯನಿಕ ಬಳಸ್ತಾರೆಂಬ ವದಂತಿಯಿಂದಾಗಿ ಗೋವಾ ಸರಕಾರ ಕರಾವಳಿ ಮೀನುಗಳಿಗೆ ನಿಷೇಧ ಹೇರಿವೆ. ಜೊತೆಗೆ ಮೀನು ಕೆಡದಂತೆ ಬಳಸುವ ಪಾಮೋಲಿನ್ ಬಳಕೆಯನ್ನು ಪತ್ತೆ ಹಚ್ಚುವ ಯಂತ್ರವನ್ನು ಸ್ಥಾಪಿಸಲಾಗ್ತಿದ್ದು, ಅಲ್ಲಿವರೆಗೆ ನಿಷೇಧ ಮುಂದುವರೆಯಲಿದೆ ಎಂದಿದೆ. ಇದ್ರಿಂದ ಕಳೆದ 15 ದಿನಗಳಿಂದ ಮೀನು ಪೂರೈಕೆ ಸ್ಥಗಿತಗೊಂಡಿದ್ದು, ಮೀನಿನ ದರವೂ ಒಂದೇ ವಾರದಲ್ಲಿ ಇಳಿಕೆಯಾಗಿದೆ ಅಂತ ಮೀನುಗಾರಿಕಾ ಮುಖಂಡ ರಾಜರತ್ನ ಸನಿಲ್ ತಿಳಿಸಿದ್ದಾರೆ.

    ದಿನಂಪ್ರತಿ ಬಳಸುವ ಬಂಗುಡೆ ಮೀನು ಕೆಜಿಗೆ 180 ರಿಂದ 90 ರೂಪಾಯಿ ಇಳಿಕೆ ಕಂಡಿದೆ. ಇದರಿಂದ ಕಾರವಾರ, ಉಡುಪಿ ಜಿಲ್ಲೆಗಳಲ್ಲಿ ಮೀನುಗಾರರು ಪ್ರತಿಭಟಿಸುತ್ತಿದ್ದಾರೆ. ಆದ್ರೆ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಇನ್ನು ಈ ಬಗ್ಗೆ ಸಿಎಂ ಜೊತೆ ಚರ್ಚಿಸುವುದಾಗಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಮೀನುಗಾರಿಕೆಗೆ ಬಿದ್ದ ಹೊಡೆತದಿಂದ ಹಲವು ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಾದ್ರೂ ಗೋವಾ ಸರ್ಕಾರದ ಜೊತೆ ಮಾತುಕತೆ ನಡೆಸದ ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews