Tag: ಮೀನುಗಾರಿಕೆ ಇಲಾಖೆ

  • ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    – ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಸಿಎಂ ಕೊಟ್ಟಿದ್ದೇನು..?

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಕುಮಾರಸ್ವಾಮಿ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ.

    ಮೀನುಗಾರಿಕೆ: ರಾಜ್ಯದ 20,000 ಹೆಕ್ಟೇರ್ ಜಲ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮೀನುಮರಿಗಳನ್ನು ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಉಚಿತವಾಗಿ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ‘ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ’ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ 4 ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

    ಸಹಕಾರ: ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆಯನ್ನು ವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸಿ, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ‘ಕಾಯಕ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ಸ್ವ-ಸಹಾಯ ಗುಂಪುಗಳು ಸಮೂಹ ಮಾದರಿಯಲ್ಲಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಕಾರ ಸಂಸ್ಥೆಗಳ ಮೂಲಕ ಪ್ರತಿ ಗುಂಪಿಗೆ ಗರಿಷ್ಟ 10 ಲಕ್ಷ ರೂ. ಗಳವರೆಗೆ ಸಾಲ ನೀಡಲಾಗುವುದು.

    ‘ಕಾಯಕ’ ಯೋಜನೆಯಡಿ 5 ಲಕ್ಷ ರೂ. ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಹಾಗೂ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ದರ ನಿಗದಿಪಡಿಸಿದ್ದಾರೆ. ಈ ಯೋಜನೆಯಡಿ ಪ್ರಾರಂಭಿಕವಾಗಿ ಒಟ್ಟು 3000 ಸ್ವ ಸಹಾಯ ಗುಂಪುಗಳಿಗೆ ಸಾಲ ಇದಗಿಸಲು 5 ಕೋಟಿ ರೂ. ಅನುದಾನ ನೀಡಲಾಗಿದೆ.

    45. ಬೀದಿ ವ್ಯಾಪಾರಿಗಳು/ ಸಣ್ಣ ವ್ಯಾಪಾರಿಗಳು ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದಲ್ಲಿದ್ದು. ಇವರಿಗೆ ಸಾಂಸ್ಥಿಕ ಹಣಕಾಸು ವ್ಯವಸ್ಥೆ ಇಲ್ಲದೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಇವರ ಕಷ್ಟಗಳಿಗೆ ಸರ್ಕಾರವು ಸ್ಪಂದಿಸಿದ್ದು, ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆಯನ್ನು ಪ್ರಾರಂಭಿಸಲಾಗುವುದು.

  • ಉಡುಪಿಯಲ್ಲಿ ಫಿಶಿಂಗ್ ಸ್ಪರ್ಧೆ: ಗಾಳಕ್ಕೆ ಬಿತ್ತು ಕೆಜಿಗಟ್ಟಲೆ ಮೀನು

    ಉಡುಪಿಯಲ್ಲಿ ಫಿಶಿಂಗ್ ಸ್ಪರ್ಧೆ: ಗಾಳಕ್ಕೆ ಬಿತ್ತು ಕೆಜಿಗಟ್ಟಲೆ ಮೀನು

    ಉಡುಪಿ: ಮೀನುಗಾರಿಕೆ ಇಲಾಖೆಯಿಂದ ನಗರದಲ್ಲಿ ಪ್ರಥಮ ಬಾರಿಗೆ ಫಿಶಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕ ವಿಧಾನಗಳನ್ನು ಬಳಿಸಿ ಮೀನುಗಳನ್ನು ಹಿಡಿಯುವುದು ಈ ಸ್ಪರ್ಧೆಯ ವಿಶೇಷವಾಗಿತ್ತು. ನಗರದ ಹಲವಾರು ಯುವಕರು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಸಾಂಪ್ರದಾಯಿಕ ಎರೆಹುಳು ಗಾಳಗಳ ಜೊತೆ ಆಧುನಿಕ ಗಾಳಗಳು ಕೂಡಾ ಮೀನಿನ ಬೇಟೆಯಲ್ಲಿ ತೊಡಗಿದ್ದವು. ಕೆಲವು ಗಾಳಗಳಿಗೆ ಒಂದೂ ಮೀನು ಬೀಳಲಿಲ್ಲ. ಮತ್ತೆ ಕೆಲವು ಗಾಳಗಳು ಭರ್ಜರಿ ಶಿಖಾರಿ ಮಾಡಿದವು. ದೊಡ್ಡ ದೊಡ್ಡ ಮೀನುಗಳು ಕೆಲವರಿಗೆ ಸಿಕ್ಕವು.

    ನಾಗೇಶ್ ಕುಮಾರ್ ಬರೋಬ್ಬರಿ 1 ಕೆಜಿಯ ಮೀನನ್ನು ಹಿಡಿದು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು. ಮಸ್ಕತ್‍ನಿಂದ ಮೀನಿಗೆ ಗಾಳ ಹಾಕುವ ಸ್ಪರ್ಧೆಗೆ ಬಂದಿದ್ದ ತಬ್ರೇಜ್, ಎರಡು ಮೀನು ಹಿಡಿದು ದ್ವಿತೀಯ ಸ್ಥಾನ ಪಡೆದರು. ತುಕಾರಾಂ ಮೆಂಡನ್ ಮತ್ತು ಜಾನ್ ಎಂಬವರು ಮೂರನೇ ಪ್ರಶಸ್ತಿ ಪಡೆದರು. ಸುಮಾರು 30 ಮಂದಿ ಹವ್ಯಾಸಿಗಳು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಉತ್ಸುಕತೆಯಿಂದ ಇದು ಸಾಧ್ಯವಾಯ್ತು. ಮುಂದಿನ ವರ್ಷದ ರಾಜ್ಯದ ಬೇರೆ ಭಾಗಗಳಲ್ಲೂ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕಿರಣ ಹೇಳಿದರು.

    ವೀಕೆಂಡ್ ಆಗಿದ್ದರಿಂದ ನೂರಾರು ಮಂದಿ ಗಾಳ ಸ್ಪರ್ಧೆ ವೀಕ್ಷಿಸಲು ಬಂದಿದ್ದರು. ದೊಡ್ಡ ದೊಡ್ಡ ಮೀನುಗಳ ಜೊತೆ ಪ್ರಶಸ್ತಿ ನಗದು ಬಹುಮಾನವನ್ನು ಬಾಚಿಕೊಂಡರು. ಬೀಚ್‍ಗೆ ಬಂದಿದ್ದ ಜನರು ಆದಿತ್ಯವಾರ ಸಂಜೆಯನ್ನು ಸಮುದ್ರ ತೀರದಲ್ಲಿ ಕಳೆದರು.