Tag: ಮೀನಿನ ಬಲೆ

  • ಕಪ್ಪೆಯನ್ನು ನುಂಗಲು ಹೋಗಿ ಗಾಳದಲ್ಲಿ ಸಿಲುಕಿ ಒದ್ದಾಡಿದ ನಾಗರಾಜ!

    ಕಪ್ಪೆಯನ್ನು ನುಂಗಲು ಹೋಗಿ ಗಾಳದಲ್ಲಿ ಸಿಲುಕಿ ಒದ್ದಾಡಿದ ನಾಗರಾಜ!

    ಹಾವೇರಿ: ಮೀನಿನ ಗಾಳಕ್ಕೆ ಸಿಕ್ಕಿ ನಾಗರಹಾವು ವಿಲವಿಲ ಒದ್ದಾಡಿದ ಘಟನೆ ಜಿಲ್ಲೆಯ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮೇವಿನ ಬಣವೆ ಬಳಿ ಮೀನಿನ ಗಾಳವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ಮೀನಿನ ಗಾಳದಲ್ಲಿ ಕಪ್ಪೆಯೊಂದು ಸಿಲುಕಿ ಒದ್ದಾಡುತ್ತಿತ್ತು. ಕಪ್ಪೆಯನ್ನು ನೋಡಿದ ಹಾವು ಕಪ್ಪೆಯನ್ನು ನುಂಗಲು ಬಂದು ಗಾಳಕ್ಕೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು.

    ಹಾವು ಮೀನಿನ ಗಾಳದಲ್ಲಿ ಸಿಲುಕಿದ್ದನ್ನು ಕಂಡ ಸ್ಥಳೀಯರು ಉರಗ ತಜ್ಞ ಮಣಿ ಎಂಬವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಣಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಳದಿಂದ ನಾಗರಹಾವನ್ನು ರಕ್ಷಿಸಿದ್ದಾರೆ.

    https://youtu.be/usl_5aKr5sI

  • ಉಡುಪಿ: ಮೀನಿನ ಬಲೆಯಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ

    ಉಡುಪಿ: ಮೀನಿನ ಬಲೆಯಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ

    ಉಡುಪಿ: ಮನೆಯ ಸಮೀಪ ಇಟ್ಟಿದ್ದ ಮೀನಿನ ಬಲೆಯಲ್ಲಿ ಆಕಸ್ಮಿಕವಾಗಿ ಸಿಲುಕಿ ಒದ್ದಾಡುತ್ತಿದ್ದ ಕೇರೆ ಹಾವನ್ನು ರಕ್ಷಿಸಲಾಗಿದೆ.

    ಜಿಲ್ಲೆಯ ಕಾಪು ನಿವಾಸಿ ಹಾಜಬ್ಬ ಎಂಬವರ ಮನೆಯ ಕಂಪೌಂಡ್ ಒಳಗೆ ಬಂದಿದ್ದ ಕೇರೆ ಹಾವು, ಬಿಲದೊಳಗೆ ಅವಿತಿದ್ದ ಇಲಿಯ ಬೇಟೆಗೆ ಇಳಿದಿತ್ತು. ಇಲಿ ಹಿಡಿಯುವ ರಭಸದಲ್ಲಿ ಹಾವು ಕಂಪೌಂಡಿನ ಮೂಲೆಯಲ್ಲಿದ್ದ ಬಲೆಗೆ ಸಿಲುಕಿಕೊಂಡಿತ್ತು.

    ಭಯಗೊಂಡ ಹಾವು ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿದರೂ ಆಗದೆ ಇನ್ನಷ್ಟು ಬಲೆಯ ಒಳಗೆ ಸಿಲುಕಿಕೊಂಡಿತ್ತು. ಒದ್ದಾಡುತ್ತಾ ಹಾವಿನ ಅರ್ಧ ಭಾಗ ಬಲೆಯಲ್ಲಿ ಬಿಗಿದು ಗಾಯಗೊಂಡಿತ್ತು. ಗಾಯದಿಂದ ಇರುವೆಗಳು ಕೂಡ ಹಾವಿನ ಮೇಲೆ ಹರಿದಾಡಿದ್ದವು. ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿ ಸುಸ್ತಾದ ಹಾವು ಅಲ್ಲೇ ಬಿದ್ದುಕೊಂಡಿತ್ತು.

    ಮಧ್ಯಾಹ್ನದ ವೇಳೆ ಮನೆಯವರು ಬಲೆಯಲ್ಲಿ ಸಿಲುಕಿದ ಹಾವನ್ನು ನೋಡಿ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ದೂರವಾಣಿ ಕರೆ ಮಾಡಿ ಹಾವನ್ನು ರಕ್ಷಿಸುವ ಕಾರ್ಯಕ್ಕೆ ಮಾರ್ಗದರ್ಶನ ಪಡೆದರು. ಕೇರೆ ಹಾವನ್ನು ಕೈಯಲ್ಲಿ ಹಿಡಿದು ಬಲೆಯನ್ನು ಕತ್ತರಿಸಿದರು. ಇತರರ ಸಹಾಯದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಡೆಸಿದ ಅವಿರತ ಪ್ರಯತ್ನದಿಂದ ಹಾವನ್ನು ಬಲೆಯಿಂದ ಸಂಪೂರ್ಣವಾಗಿ ಹೊರತೆಗೆದು ರಕ್ಷಿಸಲಾಯಿತು.

    ಹಾವಿನ ಗಾಯಗೊಂಡ ಭಾಗಕ್ಕೆ ಅರಶಿನವನ್ನು ಹಚ್ಚಿ ಆರೈಕೆ ಮಾಡಲಾಯಿತು. ಬಳಿಕ ಗೋಣಿಯಲ್ಲಿ ಹಾಕಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.