Tag: ಮೀನಾ ಬಜಾರ್

  • ಮನಸ್ಸಲ್ಲೇ ಕುಣಿಯುವಂತೆ ಮಾಡುತ್ತಿದೆ ‘ಮೀನಾ ಬಜಾರ್’ ಸಾಂಗ್! 

    ಮನಸ್ಸಲ್ಲೇ ಕುಣಿಯುವಂತೆ ಮಾಡುತ್ತಿದೆ ‘ಮೀನಾ ಬಜಾರ್’ ಸಾಂಗ್! 

    ಪಡ್ಡೆ ಹುಡುಗರು, ಕಾಲೇಜು ಪೋರರು, ಐ.ಟಿ ಉದ್ಯಮದವರು ಹಾಗೂ ಕುಟುಂಬ ಪ್ರೇಕ್ಷಕರ ಮೇಲೂ ಗಮನ ಕೇಂದ್ರೀಕರಿಸಿ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಿಸಿರುವ ‘www.ಮೀನಾ ಬಜಾರ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಪೋಸ್ಟರ್ ರಿಲೀಸ್ ಆದಾಗಿನಿಂದ ಸಖತ್ ಸೌಂಡ್ ಮಾಡುತ್ತಲೇ ಬಂದ ಸಿನಿಮಾ. ಲಿರಿಕಲ್ ಹಾಡಿನಲ್ಲೂ ಎಲ್ಲರ ಚಿತ್ತ ತನ್ನತ್ತ ತಿರುಗಿಸಿಕೊಂಡಿದೆ. ಇದೀಗ ಹುಡುಗರ ನಿದ್ದೆ ಕದಿಯುವಂತ ಸಾಂಗ್ ವೊಂದನ್ನು ಸಿನಿಮಾ ರಿಲೀಸ್ ಮಾಡಿದೆ. ‘ಸಂಜೆಯ ಗೆಳೆಯರೇ ನೀವೂ’ ಎಂಬ ಹಾಡು ಇದೀಗ ಹುಡುಗರನ್ನ ಹಾಗೇ ತೇಲಿಸುತ್ತಿದೆ.

    ರಾಣ ಸುನೀಲ್ ಕುಮಾರ್ ಸಿಂಗ್ ಬರೆದ ಸಾಹಿತ್ಯಕ್ಕೆ ವಿನಯ ಕಾರ್ತೀಕ್ ರಾಜನ್ ಕಂಠ ನೀಡಿದ್ದಾರೆ. ಕ್ಲಾಸಿಕಲ್ ಮ್ಯೂಸಿಕ್‍ನಲ್ಲಿ ಒಂದು ಸುಮಧುರ ಹಾಡೊಂದು ಎಲ್ಲರನ್ನ ಡಿಸ್ಟರ್ಬ್ ಮಾಡುತ್ತಿದೆ. ಹೆಣ್ಣಿನ ವಿರಹ ಗೀತೆಯನ್ನ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಡನ್ನ ಕೇಳ್ತಾ ಇದ್ರೆ ಪರಮ ಶಿವನ ಧ್ಯಾನದಲ್ಲಿ ತೇಲುವಂತೆ ಮಾಡುತ್ತೆ. ಕಣ್ಮುಚ್ಚಿ ಆಲಿಸಿದರೆ ಮನಸ್ಸಲ್ಲೇ ಕುಣಿಯುವಂತೆ ಮಾಡುತ್ತಿದೆ.

    ಕ್ರೈಂ, ಲವ್, ಸೆಂಟಿಮೆಂಟ್ ಹೀಗೆ ಎಲ್ಲಾ ಬಗೆಯ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿ ಮಿಳಿತಗೊಂಡಿವೆ. ರಾಣಾ ಸುನೀಲ್ ಕುಮಾರ್ ಸಿಂಗ್ ಈ ಹಿಂದೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನುಭವಿ. ಮೀನಾ ಬಜಾರ್ ಮೂಲಕ ಸಿನಿಮಾ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೈಭವಿ ಜೋಷಿ, ಶ್ರೀಜಿತಾ ಘೋಷ್, ಆಲಿಷಾ ಆ್ಯಂಡ್ರೇಡ್ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರವಿಂದ್ ರಾವ್, ಜೀವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಗ್ ಸಿನಿಮಾಸ್ ಬ್ಯಾನರ್ ನಡಿ ಸುನೀಲ್ ಕುಮಾರ್ ಸಿಂಗ್ ಸಹೋದರ ನಾಗೇಂದ್ರ ಸಿಂಗ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಮ್ಯಾಥಿವ್, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

  • ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಬೆಂಗಳೂರು: ಕಿರುತೆರೆ ಜಗತ್ತಿನಲ್ಲಿ ಅದ್ದೂರಿತನದ ಸೂಪರ್ ಹಿಟ್ ಮೆಗಾ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ರಾಣಾ ಸುನೀಲ್ ಕುಮಾರ್ ಸಿಂಗ್. ಅವರು ಧಾರಾವಾಹಿ ಲೋಕದಿಂದ ಹಿರಿತೆರೆಯತ್ತ ಮುಖ ಮಾಡಿ ಒಂದಷ್ಟು ವರ್ಷಗಳೇ ಕಳೆದಿವೆ. ಈ ಹಿಂದೆ ‘ಮದುವೆ ಮನೆ’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅವರು ಇದೀಗ ತಮ್ಮ ಜೀವಿತದ ಮಹಾ ಕನಸಿನಂಥಾ ‘www.ಮೀನಾ ಬಜಾರ್.ಕಾಮ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಮೇಕಿಂಗ್ ಸೂಚನೆಗಳೊಂದಿಗೇ ಮನಸೆಳೆದಿರೋ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಇದೀಗ ‘ಮೀನಾ ಬಜಾರ್’ನ ಮೋಹಕವಾದ ಟೀಸರ್ ಬಿಡುಗಡೆಗೊಂಡಿದೆ.

    ಹೇಳಿಕೇಳಿ ರಾಣಾ ಸುನೀಲ್ ಕುಮಾರ್ ಸಿಂಗ್ ಎಂದರೆ ಅದ್ದೂರಿತನ ಎಂಬಂಥಾ ಇಮೇಜ್ ಇದೆ. ಅದಕ್ಕೆ ತಕ್ಕುದಾಗಿಯೇ ಈ ಟೀಸರ್ ರೂಪುಗೊಂಡಿದೆ. ರೋಮಾಂಚಕ ಸನ್ನಿವೇಶಗಳ ಆಳದಲ್ಲಿ ರೌದ್ರ ಲೋಕದ ಕಥೆಯೊಂದಿರೋ ಸುಳಿವಿನೊಂದಿಗೆ ಈ ಟೀಸರ್ ಈಗ ವ್ಯಾಪಕ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಎಲ್ಲವನ್ನೂ ಕಾಣಿಸಿ ಏನೂ ಗೊತ್ತಾಗದಂಥಾ ಭಾವ ಹುಟ್ಟಿಸಿ ಅಚ್ಚರಿ ಮತ್ತು ಸಿನಿಮಾದೆಡೆಗಿನ ಕುತೂಹಲ ಕಾಯ್ದಿಟ್ಟುಕೊಳ್ಳುವ ತಂತ್ರಗಾರಿಕೆಯೊಂದಿಗೆ ಮೂಡಿ ಬಂದಿರೋ ಈ ಟೀಸರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಸಿ.ಎನ್.ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿರೋ ‘ಮೀನಾ ಬಜಾರ್’ ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಅತ್ಯಂತ ಸಾವಕಾಶದಿಂದ ವರ್ಷಗಟ್ಟಲೆ ಸಮಯ ತೆಗೆದುಕೊಂಡೇ ಸುನೀಲ್ ಕುಮಾರ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ಟೀಸರ್‍ನಲ್ಲಿಯೇ ಈ ಸಿನಿಮಾ ಮೂಡಿ ಬಂದಿರೋ ರೀತಿಯೂ ಸ್ಪಷ್ಟವಾಗಿ ಜಾಹೀರಾಗಿದೆ. ಪ್ರತಿ ದೃಶ್ಯಗಳೂ ಕಣ್ಣಿಗೆ ಹಬ್ಬದಂತೆ ಕಾಣಿಸುತ್ತಾ, ಮೋಹಕ್ಕೀಡು ಮಾಡುತ್ತಲೇ ಬೆಚ್ಚಿ ಬೀಳೋ ಹೊಳಹುಗಳನ್ನೂ ನೀಡುವ ಮೂಲಕ ಮೀನಾ ಬಜಾರ್ ಟೀಸರ್ ಇದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.