Tag: ಮೀಟರ್

  • ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಮುಂಬೈ: ಆಟೋ ಚಾಲಕನೊಬ್ಬ ಕೇವಲ 18 ಕಿಲೋಮೀಟರ್ ಪ್ರಯಾಣಿಸಿದ್ದಕ್ಕೆ ಬೆಂಗಳೂರು ಮೂಲದ ಟೆಕ್ಕಿಗೆ 4,300 ರೂ. ಚಾರ್ಜ್ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಬೆಳಗ್ಗೆ 5 ರಿಂದ ಪ್ರಯಾಣ ಆರಂಭಿಸಿದ್ದು, ಪುಣೆಯ ಕತ್ರಜ್‍ನಿಂದ ಯೆರವಾಡಾಕ್ಕೆ ಟೆಕ್ಕಿಗೆ ಆಟೋ ಚಾಲಕ 4,300 ರೂ. ಚಾರ್ಜ್ ಮಾಡಿದ್ದಾನೆ.  ಅಲ್ಲದೆ, ಮೀಟರ್ ಪ್ರಕಾರ ಹಣ ಪಾವತಿಸವುದಾಗಿ ಎಂಜಿನಿಯರ್ ಹೇಳಿದ್ದಾರೆ.

    ಕೆಲಸಕ್ಕಾಗಿ ಟೆಕ್ಕಿ ಬೆಂಗಳೂರಿನಿಂದ ಪುಣೆಗೆ ಬಂದಿದ್ದರು. ಯೆರವಾಡಾ ಪೊಲೀಸ್ ಠಾಣೆ ಬಳಿ ಅವರಿಗೆ ಕಂಪನಿಯಿಂದ ವಸತಿ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಯೆರವಾಡಾಕ್ಕೆ ಆಟೋ ಮಾಡಿಕೊಂಡು ಬಂದಿದ್ದರು.

    ಎಂಜಿನಿಯರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಗ್ಗೆ 5 ಗಂಟೆಗೆ ಕತ್ರಜ್-ದೇಹು ರಸ್ತೆಯ ಬೈಪಾಸ್ ಬಳಿ ಬಸ್ಸಿನಲ್ಲಿ ಇಳಿದೆ. ನಂತರ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದೆ. ಆದರೆ ಯಾವುದೇ ವಾಹನಗಳು ಲಭ್ಯವಿರಲಿಲ್ಲ. ಅಷ್ಟರಲ್ಲಿ, ಆಟೋ ಸಮೀಪಿಸುತ್ತಿರುವುದನ್ನು ಗಮನಿಸಿದೆ. ಒಬ್ಬ ವ್ಯಕ್ತಿ ಆಟೋ ಓಡಿಸುತ್ತಿದ್ದನು. ಆದರೆ ಪ್ರಯಾಣಿಕರ ಸೀಟ್‍ನಲ್ಲಿ ಆಟೋ ಚಾಲಕ ಕುಡಿದು ಕುಳಿತಿದ್ದನು. ಕೇಳಿದ್ದಕ್ಕೆ ಪೊಲೀಸ್ ಠಾಣೆಯನ್ನು ತಪ್ಪಿಸಲು ನನ್ನ ಸ್ನೇಹಿತನಿಗೆ ಆಟೋ ಓಡಿಸಲು ಕೇಳಿಕೊಂಡೆ ಎಂದು ಹೇಳಿದ ಎಂದು ಎಂಜಿನಿಯರ್ ವಿವರಿಸಿದ್ದಾರೆ.

    ಪ್ರಯಾಣ ಪ್ರಾರಂಭಿಸುವುದಕ್ಕೂ ಮೊದಲು ಮೀಟರ್ ಜೀರೋದಲ್ಲಿತ್ತೇ ಎಂಬುದನ್ನು ನಾನು ನೋಡಿರಲಿಲ್ಲ. ಪ್ರಯಾಣ ಮುಗಿದ ನಂತರ ಒಟ್ಟು 4,300 ರೂ. ಚಾರ್ಜ್ ಆಗಿದೆ ಎಂದು ಚಾಲಕ ತಿಳಿಸಿದ. ಅಷ್ಟು ಏಕೆ ಎಂದು ಕೇಳಿದ್ದಕ್ಕೆ ನಗರ ಪ್ರವೇಶಿಸಲು 600 ರೂ. ಪಾವತಿಸಿದ್ದೇವೆ. ನಗರವನ್ನು ತೊರೆಯಲು 600 ರೂ. ಪಾವತಿಸಿದ್ದೇವೆ. ಉಳಿದ 3,100 ರೂ. ಕಿಲೋಮೀಟರ್ ಶುಲ್ಕವಾಗಿದೆ ಒಟ್ಟು 4,300 ರೂ. ಪಾವತಿಸಬೇಕು ಎಂದು ತಿಳಿಸಿದ. ಆದರೆ ಕತ್ರಜ್‍ನಿಂದ ಯೆರವಾಡಾಕ್ಕೆ ಕೇವಲ 18 ಕಿ.ಮೀ.ಮಾತ್ರ ದೂರವಿದೆ ಎಂದು ತಿಳಿಸಿದ್ದಾರೆ.

    ಅಪರಿಚಿತ ಊರು, ರಸ್ತೆಯಲ್ಲಿ ಜನ ಯಾರೂ ಇಲ್ಲದ್ದನ್ನು ಕಂಡು ಎಂಜಿನಿಯರ್ ಭಯಭೀತನಾಗಿ ಆಟೋ ಶುಲ್ಕ ಪಾವತಿಸಿದ್ದಾರೆ. ಅಲ್ಲದೆ ಕುಡಿದಿದ್ದರಿಂದ ಇಬ್ಬರನ್ನೂ ಕಂಡು ಹೆದರಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆಟೋರಿಕ್ಷಾ ನಂಬರ್ ನೀಡಿ ಎಂಜಿನಿಯರ್ ದೂರು ನೀಡಿದ್ದಾರೆ.

    ಈ ಕುರಿತು ಯರವಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದೂರನ್ನು ಸ್ವೀಕರಿಸಿದ್ದೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ. ಶಂಕಿತರನ್ನು ಹುಡುಕಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

  • ನಿಂತಲ್ಲೇ ನಿಂತ್ರೂ ಓಡುತ್ತೆ ಕಾರ್ ಮೀಟರ್-ಸರ್ಕಾರಿ ನೌಕರರಿಂದ ಹೈಟೆಕ್ ಲೂಟಿ

    ನಿಂತಲ್ಲೇ ನಿಂತ್ರೂ ಓಡುತ್ತೆ ಕಾರ್ ಮೀಟರ್-ಸರ್ಕಾರಿ ನೌಕರರಿಂದ ಹೈಟೆಕ್ ಲೂಟಿ

    ಶಿವಮೊಗ್ಗ: ಅಧುನಿಕ ತಂತ್ರಜ್ಞಾನವನ್ನು ವಂಚನೆಗೆ ಬಳಸಿಕೊಳ್ಳುತ್ತಿರುವ ಮಹಾ ಮೋಸದ ಜಾಲ ಇದು. ಸರ್ಕಾರಿ ಅಧಿಕಾರಿಗಳೂ ಹಾಗೂ ಖಾಸಗಿ ವ್ಯಕ್ತಿಗಳು ಸೇರಿ ಮೀಟರ್ ಮೂಲಕ ಪ್ರತಿ ತಿಂಗಳು ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ. ಮೋಸದ ಮೀಟರ್ ದಂಧೆಯ ಒಂದು ಸ್ಯಾಂಪಲ್ ಇಲ್ಲಿದೆ.

    ಏಂ01 ಉ5787 ನಂಬರಿನ ಈ ಟಾಟಾ ಸುಮೋ ಗ್ರ್ಯಾಂಡ್ ಶಿವಮೊಗ್ಗದಲ್ಲಿರುವ ಅಬಕಾರಿ ಜಿಲ್ಲಾ ಅಧಿಕಾರಿಗೆ ಕೊಟ್ಟಿರುವ ಕಾರು. ಇದರಲ್ಲಿ ಇರುವ ಹೊಸ ತಂತ್ರಜ್ಞಾನ ನೋಡಿದ್ರೆ ನೀವು ಬೆಚ್ಚಿ ಬೀಳೋದು ಖಚಿತ. ಈ ಕಾರ್ ನಿಂತಲ್ಲೇ ನೂರಾ ಆರವತ್ತು ಕಿಲೋಮೀಟರ್ ವೇಗದಲ್ಲಿ ಓಡುತ್ತೆ. ನಿಂತಲ್ಲೇ ನೂರಾರು ಕಿಲೋಮೀಟರ್ ರೀಡಿಂಗ್ ತೋರಿಸುತ್ತೆ.

    ಆಗಿರೋದು ಇಷ್ಟೇ. ಮುಂಚೆ ಚಾಲಕ ಆಗಿದ್ದಾತ ಇಲಾಖೆಗೆ ತಿಳಿಯದಂತೆ ಈ ಕಾರಿಗೆ ವಿಶೇಷ ಸಾಧನವೊಂದನ್ನು ಅಳವಡಿಸಿದ್ದಾನೆ. ಈತ ಎಲ್ಲಿಗೆ ಹೋಗಿ ಬಂದರೂ ಒಂದಷ್ಟು ಜಾಸ್ತಿ ಕಿಲೋಮೀಟರ್ ತೋರಿಸಿ ಹೆಚ್ಚು ಡೀಸೆಲ್ ಹಾಕಿಸಿದ ಲೆಕ್ಕ ತೋರಿಸಿ ಹಣ ಹೊಡೆಯುತ್ತಿದ್ದ. ಇದು ಅಬಕಾರಿ ಜಿಲ್ಲಾ ಅಧಿಕಾರಿ ಸಂಚರಿಸುವ ಕಾರು. ಅವರಿಗೆ ಗೊತ್ತಿಲ್ಲದೆ ಈ ಕೃತ್ಯ ನಡೆಯಲು ಸಾಧ್ಯವಿಲ್ಲ. ಸರ್ಕಾರಿ ವಾಹನಕ್ಕೆ ಈ ರೀತಿ ಹೆಚ್ಚುವರಿಯಾಗಿ ಮೋಟಾರ್ ಜೋಡಿಸುವುದು ತಪ್ಪು. ಆದರೂ ಇದುವರೆಗೂ ಈ ಕೃತ್ಯವೆಸಗಿರುವ ಚಾಲಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

    ಇದು ಬೆಳಕಿಗೆ ಬಂದಿರುವ ಒಂದು ವಾಹನದ ವಿಷಯ. ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ಬಿಟ್ಟಿರುವ ಖಾಸಗಿ ಟ್ರಾವೆಲ್ಸ್ ಕಾರುಗಳಲ್ಲೂ ಇಂಥ ಮೋಸದ ಮೀಟರ್ ದಂಧೆ ನಿತ್ಯವೂ ನಡೆಯುತ್ತಿದೆ. ನಿಂತಲ್ಲೇ ನೂರಾರು ಕಿ.ಮೀ. ತೋರಿಸಿ, ಡೀಸೆಲ್, ಟಿಎ, ಡಿಎ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.