– ದಾಳಿ ಹಿಮ್ಮೆಟ್ಟಿಸುವಾಗ ಉಕ್ರೇನ್‌ನ F-16 ಫೈಟರ್ ಪೈಲಟ್ ಸಾವು
ಮಾಸ್ಕೋ/ಕೈವ್: ಅತ್ತ ಇರಾನ್-ಇಸ್ರೇಲ್ ಯುದ್ಧಕ್ಕೆ ಕದನ ವಿರಾಮ ಬಿದ್ದ ಬೆನ್ನಲ್ಲೇ ಇತ್ತ ರಷ್ಯಾ-ಉಕ್ರೇನ್ ನಡುವಿನ ಯುದ್ಧ (Russia Ukraine War) ಮತ್ತಷ್ಟು ತೀವ್ರಗೊಂಡಿದೆ. ರಾತ್ರೋರಾತ್ರಿ ಉಕ್ರೇನ್ ಮೇಲೆ ರಷ್ಯಾ ಅತಿದೊಡ್ಡ ವಾಯುದಾಳಿ ನಡೆಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಬರೋಬ್ಬರಿ 477 ಡ್ರೋನ್‌ಗಳು ಹಾಗೂ 60 ಮಿಸೈಲ್‌ಗಳಿಂದ ರಷ್ಯಾ ದಾಳಿ (Russia Biggest Attack) ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಹೌದು. ಯುದ್ಧ ಆರಂಭವಾದ ಬಳಿಕ ರಷ್ಯಾ ರಾತ್ರೋರಾತ್ರಿ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿ (Air Strike) ಇದಾಗಿದೆ. ಉಕ್ರೇನ್ ಮೇಲೆ ರಷ್ಯಾ 537 ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದು, ಇವುಗಳಲ್ಲಿ 477 ಡೋನ್ (Drone) ಹಾಗೂ 60 ಕ್ಷಿಪಣಿಗಳು ಸೇರಿವೆ. ಆದ್ರೆ ಕ್ಷಿಪಣಿ, ಡ್ರೋನ್ ಸೇರಿದಂತೆ 249 ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸಲಾಗಿದೆ. ಇನ್ನು ಕೆಲವನ್ನು ಎಲೆಕ್ಟ್ರಾನಿಕ್ ಜಾಮರ್ ಮೂಲಕ ತಡೆಹಿಡಿಯಲಾಯಿತು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Volodymyr Zelensky) ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ | ಪ್ರವಾಹದಲ್ಲಿ ಕೊಚ್ಚಿ ಹೋದ 9 ಜನ – 18 ಸದ್ಯಸರ ಕುಟುಂಬದ ದುರಂತ ಪ್ರವಾಸ
ಎಫ್-16 ಪೈಲಟ್ ಸಾವು
ರಷ್ಯಾದ ದಾಳಿಯನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತನ್ನ ದೇಶದ F-16 ಯುದ್ಧ ವಿಮಾನದ ಪೈಲಟ್ ಮ್ಯಾಕ್ಸಿಮ್ ಉಸ್ಟೆಂಕೊ ಸಾವನ್ನಪ್ಪಿರುವುದಾಗಿ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಆದ್ರೆ ಪೈಲಟ್ ಸಾಯುವುದಕ್ಕೂ ಮುನ್ನ 7 ವಾಯುಗುರಿಗಳನ್ನ ನಾಶಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ದಲ್ಲಿ ನಿರ್ನಾಮವಾದ ಉಗ್ರರ ಲಾಂಚ್ ಪ್ಯಾಡ್ ಮರುನಿರ್ಮಾಣ ಮಾಡುತ್ತಿದೆ ಪಾಕ್
ಇರಾನಿ ಡ್ರೋನ್ ಬಳಕೆ
ರಷ್ಯಾವು ಉಕ್ರೇನ್ ಮೇಲೆ ಪ್ರಯೋಗಿಸಿದ 477 ಡ್ರೋನ್‌ಗಳ ಪೈಕಿ ಹೆಚ್ಚಿನವುಗಳು ಇರಾನ್ ನಿರ್ಮಿತ ʻಶಹೇದ್ʼ ಡ್ರೋನ್‌ಗಳಾಗಿವೆ. ದಾಳಿಯಿಂದ ಸ್ಮಿಲಾದಲ್ಲಿನ ವಸತಿ ಕಟ್ಟಡಕ್ಕೆ ಹಾನಿಯಾಗಿದ್ದು, ಪಂದು ಮಗು ಗಾಯಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್ ನೆರವು ಪ್ರಸ್ತಾಪಿಸಿದ ಅಮೆರಿಕ
ಈ ವಾರದಲ್ಲಿ ರಷ್ಯಾ 114ಕ್ಕೂ ಹೆಚ್ಚು ಮಿಸೈಲ್‌ಗಳು, 1,270ಕ್ಕೂ ಹೆಚ್ಚು ಡ್ರೋನ್, 1,100 ಗ್ಲೈಡ್ ಬಾಂಬ್‌ಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿದೆ ಎಂದು ತಿಳಿದುಬಂದಿದೆ. 2022ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ರಷ್ಯಾ ಪ್ರಾರಂಭಿಸಿತ್ತು. ಆ ಬಳಿಕ ನಡೆದ ಅತಿದೊಡ್ಡ ದಾಳಿ ಇದೆನ್ನಲಾಗಿದೆ. ಶಾಂತಿ ಮಾತುಕತೆಗೆ ಸಿದ್ಧವಾಗಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆಯ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ ಉಕ್ರೇನಿನ ಮೂರು ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
– ಸುಮಾರು 19,000 ಕೋಟಿ ಮೌಲ್ಯದ ಒಪ್ಪಂದಕ್ಕೆ ದೊಡ್ಡಣ್ಣ ಅಸ್ತು
ಇತ್ತೀಚೆಗೆ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ಸಂದರ್ಭದಲ್ಲಿ ಪಾಕಿಸ್ತಾನದ ಬೆನ್ನಿಗೆ ನಿಂತ ಟರ್ಕಿಗೆ ಬಹಿಷ್ಕಾರ ಹೇರುವ ಮೂಲಕ ಭಾರತ ಬಿಸಿ ಮುಟ್ಟಿಸಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನಂತರ ಟರ್ಕಿಯಿಂದ ಆಮದಾಗುತ್ತಿದ್ದ ಅಮೃತ ಶಿಲೆಗಳು, ತಾಜಾ ಸೇಬು, ಚಿನ್ನ, ತರಕಾರಿ, ಸುಣ್ಣ, ಸಿಮೆಂಟ್, ಖನಿಜ ತೈಲ ಇತರ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಟರ್ಕಿ ಪ್ರವಾಸೋದ್ಯಮ, ಟರ್ಕಿಯಲ್ಲಿ ಸಿನಿಮಾ ಚಿತ್ರೀಕರಣವನ್ನೂ ನಿಷೇಧಿಸಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ.
ಆದ್ರೆ ಇತ್ತ ನನ್ನಿಂದಲೇ ಭಾರತ-ಪಾಕ್ ನಡುವಿನ ಕದನ ವಿರಾಮ ಏರ್ಪಟ್ಟಿದ್ದು ಅಂತ ಬೊಬ್ಬೆ ಹೊಡೆದುಕೊಳ್ಳುತ್ತಿರೋ ಟ್ರಂಪ್ ಸರ್ಕಾರ ಹಿಂಬಾಗಿಲಿನಿಂದ ಟರ್ಕಿಗೆ ಮಿಲಿಟರಿ ಸಹಾಯ ನೀಡಲು ಮುಂದಾಗಿದೆ. ಹೌದು. ಟರ್ಕಿಗೆ AIM-120C-8 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಮಿಸೈಲ್ (AMRAAMs) ಪೂರೈಸುವ 225 ಮಿಲಿಯನ್ ಡಾಲರ್ (ಸುಮಾರು 19 ಸಾವಿರ ಕೋಟಿ) ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಇದು ಭಾರತದ ಕಳವಳ ಹೆಚ್ಚಿಸಿದೆ.
ಏನಿದು AMRAAN ಮಿಸೈಲ್ ಒಪ್ಪಂದ?
ವರದಿಗಳ ಪ್ರಕಾರ, ಟರ್ಕಿಯು 53 AIM-120C-8 AMRAAM ಕ್ಷಿಪಣಿ ಮತ್ತು 6 AIM-120C-8 AMRAAM ಗೈಡೆನ್ಸ್ ವಿಭಾಗಗಳ ಬೆಂಬಲ ಕೇಳಿದೆ. ಇದರ ವೆಚ್ಚ 225 ಮಿಲಿಯನ್ ಡಾಲರ್ ಆಗಲಿದೆ. ಜೊತೆಗೆ ಒಟ್ಟು 79.1 ಮಿಲಿಯನ್ ಡಾಲರ್ ವೆಚ್ಚದಲ್ಲಿ 60 AIM-9X ಸೈಡ್‌ವೈಂಡರ್ ಬ್ಲಾಕ್-II ಆಲ್ ಅಪ್ ರೌಂಡ್ ಮಿಸೈಲ್ ಮತ್ತು 11 AIM-9X ಬ್ಲಾಕ್-II ಟ್ಯಾಕ್ಟಿಕಲ್ ಗೈಡೆನ್ಸ್ ಯೂನಿಟ್‌ಗಳನ್ನ ಪಡೆಯಲು ಒಪ್ಪಂದ ಮಾಡಿಕೊಂಡಿದೆ.
ಅಮೆರಿಕದ ಬಳಿಕ NATO ಮೈತ್ರಿಕೂಟದಲ್ಲಿ 2ನೇ ಅತಿದೊಡ್ಡ ಸಶಸ್ತ್ರ ಪಡೆಗಳನ್ನು ಹೊಂದಿರುವ ಟರ್ಕಿ ಇದೀಗ ಅತ್ಯಾಧುನಿಕ AIM-120C-8 AMRAAM ಗಳು ಮತ್ತು AIM-9X ಸೈಡ್‌ವೈಂಡರ್‌ಗಳನ್ನ ಉಡಾಯಿಸಬಲ್ಲ ಎಫ್-16 ವಿಮಾನಗಳ ಸಮೂಹವನ್ನೂ ಹೊಂದಿದೆ. AIM-120C-8 ಕ್ಷಿಪಣಿಯು ತನ್ನ ವ್ಯಾಪ್ತಿಗೂ ಮೀರಿದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ಈ ಶಸ್ತ್ರಾಸ್ತ್ರ ಒಪ್ಪಂದವು ಟರ್ಕಿಯ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ.
ನಿರಂತರ ಅಭಿವೃದ್ಧಿ
ಟರ್ಕಿಯ ರಾಜಧಾನಿ ಅಂಕಾರ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸುತ್ತಿದೆ. ಈ ನಡುವೆ ಅಮೆರಿಕ ಜೊತೆಗಿನ ಈ ಮಹತ್ವದ ಒಪ್ಪಂದ ನಡೆದಿದೆ. ಅಮೆರಿಕ ಸರಬರಾಜು ಮಾಡಲಿರುವ ಈ ಕ್ಷಿಪಣಿಗಳು ಅಂಕಾರಾದ ವಾಯುಪ್ರದೇಶವನ್ನ ಸುರಕ್ಷಿತಗೊಳಿಸುವ ಮತ್ತು ತನ್ನ ನೆಲದಲ್ಲಿ ನೆಲೆಸಿರುವ ಯುಎಸ್ ಸಿಬ್ಬಂದಿಯನ್ನ ರಕ್ಷಿಸುವುದಕ್ಕೂ ಸದುಪಯೋಗವಾದಂತಾಗಿದೆ.
2019ರಲ್ಲಿ ಟರ್ಕಿಯು ರಷ್ಯಾ ನಿರ್ಮಿತ ಎಸ್-400 ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿತ್ತು. ಇದರಿಂದ ಕೆರಳಿದ್ದ ಅಮೆರಿಕ ಕಾಟ್ಸಾ (CAATSA) ಕಾಯ್ದೆ ಅಡಿಯಲ್ಲಿ ಟರ್ಕಿಗೆ ನಿರ್ಬಂಧ ಹೇರಿತ್ತು. ಇದರಿಂದ ಟರ್ಕಿಯು ಅಮೆರಿಕದ F-35 ಫೈಟರ್ ಜೆಟ್ ಕಾರ್ಯಕ್ರಮದಿಂದ ಹೊರಗುಳಿಯಬೇಕಾಗಿತ್ತು. ಇದೀಗ ಭಾರತ-ಪಾಕ್ ಉದ್ವಿಗ್ನತೆ ನಡುವೆ ಮತ್ತೆ ಟರ್ಕಿಗೆ ಶಸ್ತ್ರಾಸ್ತ್ರ ಕಳಿಸಿಕೊಡಲು ಅಮೆರಿಕ ಮುಂದಾಗಿರುವುದು ಕಳವಳಕಾರಿಯಾಗಿದೆ.
ಟರ್ಕಿಗೆ ನೀಡಲು ಮುಂದಾಗಿರುವ AMRAAM ಏರ್-ಟು-ಏರ್ ಮಿಸೈಲ್ ವಿಶ್ವದ ಅತ್ಯಂತ ಅತ್ಯಾಧುನಿಕ ವಾಯು ರಕ್ಷಣಾ ಪ್ರಾಬಲ್ಯ ಆಯುಧ ಎಂದು ಬಣ್ಣಿಸಲಾಗಿದೆ. ಇದನ್ನ 4,900ಕ್ಕೂ ಹೆಚ್ಚು ಲೈವ್-ಫೈರ್ ಸನ್ನಿವೇಶಗಳಲ್ಲಿ ಪರೀಕ್ಷಿಸಲಾಗಿದೆ. ಈ ಕ್ಷಿಪಣಿಯನ್ನು F-15, F-16, F/A-18, F-22 ರಾಪ್ಟರ್, ಯೂರೋಫೈಟರ್ ಟೈಫೂನ್, ಗ್ರಿಪೆನ್, ಟೊರ್ನಾಡೊ, ಹ್ಯಾರಿಯರ್ ಮತ್ತು F-35ನ ಎಲ್ಲಾ ರೂಪಾಂತರಗಳು ಸೇರಿದಂತೆ ಬಹು ಯುದ್ಧ ವಿಮಾನಗಳ ಮೂಲಕ ಹಾರಿಸಬಹುದಾಗಿದೆ.
ಭಾರತದ ಮೇಲೆ ಪಾಕ್ ಬಳಸಿದ್ದ ಮಿಸೈಲ್ ಈಗ ಟರ್ಕಿಗೆ
2019ರ ಫೆಬ್ರವರಿ 19ರಂದು ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಸಂದರ್ಭದಲ್ಲಿ ಎಫ್-16 ಫೈಟರ್ ಜೆಟ್ ಮೂಲಕ ಪಾಕಿಸ್ತಾನ ಈಗ ಟರ್ಕಿಗೆ ನೀಡಲು ಮುಂದಾಗಿರುವ AMRAAM ಕ್ಷಿಪಣಿಗಳನ್ನ ಹಾರಿಸಿತ್ತು. ಪಾಕ್ ಈ ಕ್ಷಿಪಣಿ ಬಳಸಿತ್ತು ಎಂಬುದಕ್ಕೆ ಭಾರತ ಅಮೆರಿಕಕ್ಕೆ ಸಾಕ್ಷ್ಯವನ್ನೂ ನೀಡಿತ್ತು. ಇದೀಗ ಅದೇ ಮಿಸೈಲ್ ಅನ್ನು ಟರ್ಕಿಗೆ ಕೊಡಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ.
ಅಮೆರಿಕ – ಟರ್ಕಿ ಸಂಬಂಧ ಹೇಗಿದೆ?
ಅಮೆರಿಕ ಮತ್ತು ಟರ್ಕಿ ನಡುವಿನ ಮಿಲಿಟರಿ ಸಹಕಾರ ಈಗಲೂ ಮುಂದುವರೆದಿದೆ. ಏಕೆಂದರೆ ದಶಕಗಳಿಂದ, ಟರ್ಕಿಯು ಅಮೆರಿಕದ ರಕ್ಷಣಾ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಹಳೆಯ ಎಫ್ -4 ಫ್ಯಾಂಟಮ್‌ಗಳು ಮತ್ತು ಬ್ಲ್ಯಾಕ್ ಹಾಕ್ ಮತ್ತು ಚಿನೂಕ್‌ನಂತಹ ಅಮೆರಿಕನ್ ಚಾಪರ್‌ಗಳ ಜೊತೆಗೆ ಎಫ್-16 ಜೆಟ್‌ಗಳಂತಹ ದೊಡ್ಡ ಯುದ್ಧ ವಿಮಾನಗಳನ್ನೂ ಪಡೆದುಕೊಂಡಿದೆ. ಭೂಮಿ ಮತ್ತು ಸಮುದ್ರದಲ್ಲಿ, M60 ಪ್ಯಾಟನ್ ಯುದ್ಧ ಟ್ಯಾಂಕರ್‌ಗಳು, M113 ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಯುಎಸ್ ನಿರ್ಮಿತ ಉಪಕರಣಗಳನ್ನ ಟರ್ಕಿ ತನ್ನ ಸೇನೆಗೆ ನಿಯೋಜಿಸಿದೆ. ಸೈಡ್‌ವಿಂಡರ್ ಮತ್ತು ಮಾವೆರಿಕ್‌ನಂತಹ ಕ್ಷಿಪಣಿಗಳನ್ನ ವಾಯುಪಡೆಗೆ ನಿಯೋಜಿಸಿದೆ.
ಅಮೆರಿಕವು ಟರ್ಕಿಗೆ C-130 ಹರ್ಕ್ಯುಲಸ್ ಸಾರಿಗೆ ವಿಮಾನ ಮತ್ತು KC-135 ಇಂಧನ ತುಂಬುವ ಟ್ಯಾಂಕರ್‌ಗಳನ್ನ ಸಹ ಪೂರೈಸಿದೆ. ಟರ್ಕಿಯು ಡ್ರೋನ್ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಅದು ಮೊದಲು ಅಮೆರಿಕ ನಿರ್ಮಿತ ಕಣ್ಗಾವಲು UAV ಗಳನ್ನು (Unmanned Aerial Vehicle) ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ವಿಮಾನ ಖರೀದಿಗಾಗಿ ಬೋಯಿಂಗ್ ಜೊತೆಗೆ ಮಾತುಕತೆ ನಡೆಸುತ್ತಿದೆ.
ಒಟ್ಟಾರೆಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ ಇದೀಗ ಟರ್ಕಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಲು ಒಪ್ಪಂದ ಮಾಡಿಕೊಂಡಿರುವುದು ಟ್ರಂಪ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.
ವಾಷಿಂಗ್ಟನ್: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಇರಾನ್ ಪ್ಲ್ಯಾನ್ ಮಾಡಿದೆ. ದೇಶದಲ್ಲಿನ ಸಶಸ್ತ್ರ ಪಡೆಗಳು ಉಡಾವಣೆಗಾಗಿ ದೈತ್ಯ ಕ್ಷಿಪಣಿಗಳನ್ನು (Missiles) ಸಿದ್ಧಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ಅಮೆರಿಕ ವಿರುದ್ಧ ಬೃಹತ್ ಮಟ್ಟದಲ್ಲಿ ವಾಯುದಾಳಿ ನಡೆಸಲು ಇರಾನ್ (Iran) ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಸಿದ್ಧಪಡಿಸಲಾದ ದೈತ್ಯ ಕ್ಷಿಪಣಿಗಳನ್ನು ತನ್ನ ದೇಶಾದ್ಯಂತ ಇರುವ ಭೂಗತ ನೆಲೆಗಳಲ್ಲಿ ಅಡಗಿಸಿಟ್ಟಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅಮೆರಿಕ ಬಾಂಬ್ ದಾಳಿಗೆ (Bomb Attack) ಮುಂದಾದ್ರೆ, ಇರಾನ್ ಸಹ ಪ್ರತಿದಾಳಿ ನಡೆಸಲು ಸಿದ್ಧವಾಗಿದೆ ಎನ್ನುವ ಸಂದೇಶ ಈ ಮೂಲಕ ರವಾನೆಯಾಗಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ
ಸಾಂದರ್ಭಿಕ ಚಿತ್ರ
ಟ್ರಂಪ್ ಹೇಳಿದ್ದೇನು?
ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸಲಾಗುವುದು. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅಲ್ಲದೇ 4 ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್ ಮತ್ತೆ ಹೊಸ ಬಾಂಬ್
2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ
ಶಸ್ತ್ರಾಸ್ತ್ರಗಳನ್ನು ಆಮದು ಮಾಡುಕೊಳ್ಳುವ ಟಾಪ್ ರಾಷ್ಟ್ರಗಳಲ್ಲಿ ಭಾರತ (India) ಮೊದಲನೇಯ ಸ್ಥಾನದಲ್ಲಿದೆ. ಆದರೆ ಈಗ ಭಾರತ ಶಸ್ತ್ರಾಸ್ತ್ರಗಳನ್ನು ರಫ್ತು (Arms Export) ಮಾಡುವ ದೇಶವಾಗಿ ನಿಧಾನವಾಗಿ ಹೊರಹೊಮ್ಮುತ್ತಿದೆ. ಇದರ ಭಾಗವಾಗಿ ಈಗ ಭಾರತ ವಿಶ್ವದ 12 ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು (BrahMos Missile) ರಫ್ತು ಮಾಡಲು ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು ಹೇಗೆ? ಬ್ರಹ್ಮೋಸ್ ಕ್ಷಿಪಣಿ ವಿಶೇಷತೆ ಏನು? ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂ (APJ Abdul Kalam) ಪಾತ್ರ ಏನು? ಪಾಕಿಸ್ತಾನಕ್ಕೆ ಈ ಕ್ಷಿಪಣಿ ಹಾರಿದ್ದು ಹೇಗೆ? 10 ವರ್ಷದ ಹಿಂದೆ ಶಸ್ತ್ರಾಸ್ತ್ರ ರಫ್ತು ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ? ಈ ಎಲ್ಲಾ ವಿಷಯಗಳ ಬಗ್ಗೆ ಕೆಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಶಾಂತಿ ಮಂತ್ರವನ್ನು ಅನುಸರಿಸಿದರೂ ಪಾಕಿಸ್ತಾನ (Pakistan) ಮತ್ತು ಚೀನಾದ (China) ಮಧ್ಯೆ ಯುದ್ಧ ನಡೆಸಬೇಕಾಯಿತು. 1947, 1965, 1971 ರಲ್ಲಿ ಪಾಕಿಸ್ತಾನದ ಜೊತೆ 1962 ರಲ್ಲಿ ಚೀನಾದ ಜೊತೆ ಯುದ್ಧ ಮಾಡಬೇಕಾಯಿತು. ಪಾಕಿಸ್ತಾನ ಜೊತೆಗಿನ ಮೂರು ಯುದ್ಧದಲ್ಲಿ ಭಾರತ ಗೆದ್ದರೆ ಚೀನಾದ ವಿರುದ್ಧ ಭಾರತ ಸೋತಿತ್ತು. ಗಡಿಯಲ್ಲಿರುವ ಈ ದೇಶಗಳ ಕಿರಿಕಿರಿ ಜಾಸ್ತಿ ಆಗುತ್ತಿದ್ದಂತೆ ಭಾರತ ಸರ್ಕಾರ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅಷ್ಟೇ ಅಲ್ಲದೇ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಲು ಮುಂದಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲೇ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ. ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು. ಕ್ಷಿಪಣಿ ಮನುಷ್ಯ ಅಬ್ಧುಲ್ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPOM ನಡುವಿನ ಜಂಟಿ ಉದ್ಯಮವಾಗಿದೆ. ಬಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು ಶೇ.50.5 ಇದ್ದರೆ ರಷ್ಯಾದ ಪಾಲು ಶೇ.49.5 ಇದೆ. ಇದನ್ನೂ ಓದಿ: ನೀಲಿ ಬಣ್ಣದ ಜೀನ್ಸ್ ಬ್ಯಾನ್, ಆತ್ಮಹತ್ಯೆಗೈದ್ರೆ ಕುಟುಂಬಕ್ಕೆ ಶಿಕ್ಷೆ – ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ.
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.
ಬ್ರಹ್ಮೋಸ್ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಾಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್ ಕರೆನ್ಸಿ ಆಗುತ್ತಾ?
ಯಾವೆಲ್ಲ ದೇಶಗಳು ಆಸಕ್ತಿ ತೋರಿಸಿವೆ?
ಫಿಲಿಪೈನ್ಸ್ ಬ್ರಹ್ಮೋಸ್ ನೆವಿ ಮಿಸೈಲ್ ಖರೀದಿ ಸಂಬಂಧ 375 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ 2022ರಲ್ಲಿ ಸಹಿ ಹಾಕಿದೆ. ಈ ವರ್ಷದ ಅಂತ್ಯಕ್ಕೆ ಕ್ಷಿಪಣಿ ರಫ್ತು ಆಗುವ ಸಾಧ್ಯತೆಯಿದೆ. ಈಗಾಗಲೇ 12 ದೇಶಗಳ ಜೊತೆ ಭಾರತ ಬ್ರಹ್ಮೋಸ್ ಕ್ಷಿಪಣಿ ರಫ್ತು ಸಂಬಂಧ ಮಾತುಕತೆ ನಡೆಸುತ್ತಿದೆ. ಈ ಜುಲೈ ತಿಂಗಳಿನಲ್ಲಿ ಅರ್ಜೆಂಟೀನಾ ರಕ್ಷಣಾ ಸಚಿವರ ಜೊತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದಾರೆ.
ಬ್ರಹ್ಮೋಸ್ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. ಬ್ರಹ್ಮೋಸ್ ಭಾರತದಲ್ಲಿ ಪ್ರಯೋಗ ಯಶಸ್ವಿಯಾಗಿದ್ದು ಈಗಾಗಲೇ ಮೂರು ಸೇನೆಗೆ ಸೇರ್ಪಡೆಯಾಗಿದೆ. ನಿಖರವಾಗಿ ಗುರಿಯನ್ನು ಹೊಡೆಯುವುದು ಅಲ್ಲದೇ ಬೆಲೆಯೂ ಕಡಿಮೆ. ಅಧಿಕೃತವಾಗಿ ಈ ಕ್ಷಿಪಣಿಯ ಬೆಲೆ ಎಷ್ಟು ಎಂಬುದನ್ನು ಸರ್ಕಾರ ತಿಳಿಸದೇ ಇದ್ದರೂ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಒಂದು ಕ್ಷಿಪಣಿಯ ಬೆಲೆ 35 ಕೋಟಿ ರೂ. ಇದೆಯಂತೆ.. ಇದರ ಜೊತೆ ಭಾರತದ ವಿಜ್ಞಾನಿಗಳ ಬಗ್ಗೆ ನಂಬಿಕೆ ಈಗ ವಿಶ್ವಕ್ಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿವೆ.
ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್
ಈ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನವ್ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.
ಶಸ್ತ್ರಾಸ್ತ ರಫ್ತು ಹೆಚ್ಚಳ
ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಕಾರಣ ಈಗ ಶಸ್ತ್ರಾಸ್ತ್ರಗಳನ್ನು ಭಾರತ ಹೆಚ್ಚು ರಫ್ತು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2014-15 – 1,941 ಕೋಟಿ ರೂ., 2017-18 – 4,682 ಕೋಟಿ ರೂ., 2018-19- 10,746 ಕೋಟಿ ರೂ., 2021-22- 12,815 ಕೋಟಿ ರೂ., 2022-23 – 15,918 ಕೋಟಿ ರೂ. ಮೊತ್ತದ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಫ್ತು ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್, ಅಶ್ರುವಾಯು ಲಾಂಚರ್, ಟಾರ್ಪಿಡೊ-ಲೋಡಿಂಗ್ ಮೆಕ್ಯಾನಿಸಂ, ಅಲಾರ್ಮ್ ಮಾನಿಟರಿಂಗ್ ಮತ್ತು ಕಂಟ್ರೋಲ್, ನೈಟ್ ವಿಷನ್ ಮಾನೋಕ್ಯುಲರ್ ಮತ್ತು ಬೈನಾಕ್ಯುಲರ್, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸ್ತ್ರಸಜ್ಜಿತ ರಕ್ಷಣಾ ವಾಹನ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ರಾಡಾರ್, ಹೈ ಫ್ರಿಕ್ವೆನ್ಸಿ ರೇಡಿಯೊ ಇತ್ಯಾದಿಗಳನ್ನು ರಫ್ತು ಮಾಡಿವೆ. ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳು ರಫ್ತು ಲಿಸ್ಟ್‌ನಲ್ಲಿವೆ.
2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಗುರಿಯನ್ನು ತಲುಪಬೇಕಾದರೆ ಸರ್ಕಾರ ಬಹಳ ಶ್ರಮಪಡಬೇಕಾದ ಅಗತ್ಯವಿದೆ.
ಬೀದರ್: ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು ಹಾಗೂ ಬಾಂಬ್ ಗಳು ಸ್ಫೋಟವಾಗುತ್ತಿದ್ದು, ನಮ್ಮ ಮಕ್ಕಳು ಆತಂಕದಲ್ಲಿ ಇದ್ದಾರೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಸದ್ಯ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನಲ್ಲಿ ಬೀದರ್ ಮೂಲದ 6 ಜನ ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪ್ರತಿ ಕ್ಷಣ ಭಯದಲ್ಲಿ ಬದುಕುತ್ತಿದ್ದಾರೆ. ವಿದ್ಯಾರ್ಥಿ ಅಮಿತ್ ಮೆಟ್ರೋ ಸ್ಟೇಷನ್ ಬಂಕರ್‍ನಲ್ಲಿ ರಕ್ಷಣೆ ಪಡೆಯುತ್ತಿದ್ದರೆ ಉಳಿದ ಐದು ಜನ ಹಾಸ್ಟೆಲ್ ಬಂಕರ್‍ನಲ್ಲಿ ವಾಸವಾಗಿ ರಕ್ಷಣೆ ಪಡೆಯುತ್ತಿದ್ದಾರೆ. ಆದರೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರು ಸಿಗದೇ ನಗರದ ವಿದ್ಯಾರ್ಥಿಗಳು ಕ್ಷಣ ಕ್ಷಣಕ್ಕೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು
ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು, ಬಾಂಬ್‍ಗಳು ಸ್ಪೋಟವಾಗುತ್ತಿವೆ. ಖಾರ್ಕಿವ್‍ನಲ್ಲಿರುವ ನಮ್ಮ ಮಕ್ಕಳು ಕಷ್ಟದಲ್ಲಿದ್ದು ಸರ್ಕಾರ ಮೊದಲು ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಿ. ಖಾರ್ಕಿವ್‍ನಲ್ಲಿ ಸದ್ಯ ಪರಿಸ್ಥಿತಿ ಭಯಾನಕವಾಗಿದ್ದು, ಅಷ್ಟೇ ಭಯಂಕರವಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ