Tag: ಮಿಷನ್ ಶಕ್ತಿ

  • ಮಿಶನ್ ಶಕ್ತಿ ಸಾಧನೆ ವಿಜ್ಞಾನಿಗಳದ್ದು, ಮೋದಿಯದ್ದಲ್ಲ: ಸಿಎಂ ಎಚ್‍ಡಿಕೆ

    ಮಿಶನ್ ಶಕ್ತಿ ಸಾಧನೆ ವಿಜ್ಞಾನಿಗಳದ್ದು, ಮೋದಿಯದ್ದಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ‘ಮಿಶನ್ ಶಕ್ತಿ’ ಮೋದಿ ಮಾಡಿದ ಸಾಧನೆ ಅಲ್ಲ. ಅಷ್ಟಕ್ಕೂ ಉಪಗ್ರಹವನ್ನು ನರೇಂದ್ರ ಮೋದಿ ಹಾರಿಸಿದ್ದಲ್ಲ. ಮೋದಿ ಸಾಧನೆ ಎಂದು ಸುಮ್ಮನೆ ಬಿಂಬಿಸಲಾಗ್ತಿದೆ. ವಿಜ್ಞಾನಿಗಳು ತಮ್ಮ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ನರೇಂದ್ರ ಮೋದಿಯವರ ಮಿಶನ್ ಶಕ್ತಿ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 50 ವರ್ಷಗಳ ಹಿಂದೆ ಚಾಲನೆ ಸಿಕ್ಕಿದ್ದನ್ನು ಇವತ್ತು ಮೋದಿ ಉದ್ಘಾಟನೆ ಮಾಡಿದ್ದಾರೆ. ಅದನ್ನ ತಾವೇ ಮಾಡಿರುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಮಹತ್ವ ಕೊಡುವಂತದ್ದೇನಲ್ಲ. ನರೇಂದ್ರ ಮೋದಿ ಮಾಡಿರೋದು ಎಂದು ಬಿಂಬಿಸೋದು ಸರಿಯಲ್ಲ. ಇದು ದೊಡ್ಡ ಸಾಧನೆಯೂ ಅಲ್ಲ. ಇದನ್ನ ಬಳಸಿಕೊಂಡು ಮೋದಿ ವೋಟ್ ಪಡೆಯುತ್ತಿದ್ದಾರೆ. ಯಾರೇ ಪ್ರಧಾನಿ ಆಗಿದ್ದರೂ ವಿಜ್ಞಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಮೋದಿ ಯಾವುದೇ ಸಾಧನೆ ಮಾಡಿಲ್ಲ. ಸುಮ್ಮನೆ ಮೋದಿಗೆ ಪ್ರಚಾರ ನೀಡುತ್ತಿದ್ದೀರಿ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

    ವಿಜ್ಞಾನಿಗಳ ಸಾಧನೆ ಬಗ್ಗೆ ಹೇಳಲು ಮೋದಿ ಅರ್ಧ ಗಂಟೆ ಕಾಯಿಸಿ ದೊಡ್ಡ ಸಾಧನೆ ಎಂದು ಹೇಳುತ್ತಿದ್ದಾರೆ. ವಿಜ್ಞಾನಿಗಳ ತಂಡ ಯಾರೇ ಅಧಿಕಾರದಲ್ಲಿದ್ದರೂ ಕೆಲಸ ಮಾಡುತ್ತಾರೆ. ಅನೇಕ ಇಲಾಖೆಯಲ್ಲಿ ಯಾರೇ ಅಧಿಕಾರದಲ್ಲಿ ಇದ್ದರೂ ಕೆಲಸ ಮಾಡ್ತಾರೆ. ಇದು ಸರ್ಕಾರದ ಸಾಧನೆ ಅಲ್ಲ. ಮಾಧ್ಯಮಕ್ಕೆ ಮಾತ್ರ ಇದು ದೊಡ್ಡದು ಎಂದು ಗರಂ ಆದರು.

    ಸುಮಲತಾಗೆ ಟಾಂಗ್:
    ನನ್ನ ದುಡಿಮೆ ಹೆಸರಲ್ಲಿ ನಾನು ಮತ ಕೇಳುತ್ತಿದ್ದೇನೆ. ನಾನು ಅಂಬರೀಶ್ ಹೆಸರು ಹೇಳಿ ಎಲ್ಲಿಯೂ ಪ್ರಚಾರ ಮಾಡಿಲ್ಲ. ಸುಮಲತಾ ಅವರು ಅಂಬರೀಶ್ ಹೆಸರು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾನೇನೂ ಅವರ ಹೆಸರು ಬಳಸಿಕೊಂಡು ಪ್ರಚಾರಕ್ಕಿಳಿದಿಲ್ಲ ಅಂದ ಅವರು, ನೀವು ವೋಟ್ ಹಾಕಿದ್ರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತೆ ಅನ್ನೋ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ ಆ ಹೇಳಿಕೆ ನಾನು ಹೇಳಿದ್ದಲ್ಲ. ಡಿಕೆ ಶಿವಕುಮಾರ್ ಹೇಳಿದ್ದು ಅವರನ್ನೆ ಕೇಳಿಕೊಳ್ಳಿ ಎಂದು ಹೇಳಿದ್ರು.

    ದಾಸನಿಗೂ ಸಿಎಂ ಟಾಂಗ್:
    ಇದೇ ವೇಳೆ `ಡಿ ಬಾಸ್’ ಎಂದು ಜನರು ಕೊಟ್ಟ ಭಿಕ್ಷೆ ಅನ್ನೋ ನಟ ದರ್ಶನ್ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಎಲ್ಲಾ ನಟರಿಗೂ ಅವರ ಅಭಿಮಾನಿಗಳು ಹೆಸರು ಕೊಟ್ಟಿರುತ್ತಾರೆ. ಆರೂವರೆ ಕೋಟಿ ಜನ ಬಿರುದು ಕೊಟ್ಟಿಲ್ಲ. ಯಾರೋ ನಾಲ್ಕೈದು ಜನ ಮಾತ್ರ ಹೆಸರು ಕೊಡುತ್ತಾರೆ ಅಷ್ಟೆ. ನನ್ನ ಮಗನಿಗೂ `ಯುವರಾಜ’ ಎಂದು ನಾಲ್ಕೈದು ಜನ ಹೆಸರು ಕೊಟ್ಟಿದ್ದಾರೆ. ಹಾಗಂತ ಅವನು ಯುವರಾಜನಾ?. ಹೆಸರು ಕೊಟ್ಟಿದ್ದಾರೆ ಎಂದು ಮೆರೆಯೋಕೆ ಆಗುತ್ತಾ ಎಂದು ಹೇಳುವ ಮೂಲಕ ದರ್ಶನ್ ಗೆ ಸಿಎಂ ಟಾಂಗ್ ಕೊಟ್ಟರು.