ನವದೆಹಲಿ: ಭಾರತದ ಅಭಿವೃದ್ಧಿ ಸಹಿಸಲಾಗದೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭಾರತದ ‘ಮಿಶನ್ ಶಕ್ತಿ’ ಯಶಸ್ಸಿನ ಬಗ್ಗೆ ದೂರುತ್ತಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಸಾರಸ್ವತ್ ಹೇಳಿದ್ದಾರೆ.
ಭಾರತ ನೆಲದಿಂದ ಕ್ಷಿಪಣಿ ಪ್ರಯೋಗಿಸಿ ಉಪಗ್ರಹವನ್ನು ಹೊಡೆದು ಹಾಕಿದ್ದು ನಾಸಾವನ್ನು ಈಗಾಗಲೇ ಕೆರಳಿಸಿದೆ. ಇದಕ್ಕೆ ಪೂರಕ ಎಂಬಂತೆ ಡಿಆರ್‌ಡಿಒದ ಪ್ರಯೋಗಿಕ ಪರೀಕ್ಷೆ ಭಯಾನಕವಾಗಿದ್ದು, ಇದರಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಅಪಾಯವಾಗಲಿದೆ ಎಂದು ನಾಸಾ ಮುಖ್ಯಸ್ಥ ಜೆಮ್ ಬ್ರಿಡೆನ್ ಸ್ಟೈನ್ ಹೇಳಿದ್ದಾರೆ.

ಭಾರತದ ಉಪಗ್ರಹ 400 ಚೂರಾಗಿದ್ದು, ಇವುಗಳಲ್ಲಿ 60 ಚೂರುಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಇದರಿಂದ ಬಾಹ್ಯಾಕಾಶದಲ್ಲಿ ಕಸ ಹೆಚ್ಚಾಗಿದೆ ಎಂದು ಎಂದು ನಾಸಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾರಸ್ವತ್, ಭಾರತ ಅಭಿವೃದ್ಧಿಯನ್ನು ಸಹಿಸದೇ ಟಿಪಿಕಲ್ ಅಮೆರಿಕ ಮಾದರಿಯ ಹೇಳಿಕೆಯನ್ನು ನಾಸಾ ನೀಡಿದೆ. ಭಾರತ ಹೊಡೆದು ಉರುಳಿಸಿದ ಉಪಗ್ರಹದ ಚೂರುಗಳು ಜಾಸ್ತಿ ಸಮಯದ ಬಾಹ್ಯಾಕಾಶದಲ್ಲಿ ಇರಲು ಸಾಧ್ಯವೇ ಇಲ್ಲ. ಈ ಚೂರುಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಭಸ್ಮವಾಗಿ ಬಿಡುತ್ತದೆ. ಹೀಗಾಗಿ ಕಸ ಅಲ್ಲೇ ಇರಲು ಸಾಧ್ಯವಿಲ್ಲ ಎಂದು ಹೇಳಿ ನಾಸಾ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

ಲಕ್ಷಕ್ಕೂ ಅಧಿಕ ಉಪಗ್ರಹದ ಅವಶೇಷಗಳು ಬಾಹ್ಯಾಕಾಶದಲ್ಲಿ ಸುತ್ತುತ್ತಿವೆ. ವರ್ಷ ವರ್ಷ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಉಪಗ್ರಹಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಪ್ರತಿಯೊಂದರಿಂದಲೂ ಬಾಹ್ಯಾಕಾಶದಲ್ಲಿ ಅವಶೇಷ ಸೃಷ್ಟಿಯಾಗುತ್ತದೆ. ಹೀಗಾಗಿ ಭಾರತದ ಎಸ್ಯಾಟ್ ಪ್ರಯೋಗಿಕ ಪರೀಕ್ಷೆಯಿಂದ ಕಸ ಹೆಚ್ಚಾಗಿದೆ ಎನ್ನುವ ಹೇಳಿಕೆಯೇ ಅರ್ಥಹೀನ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?
ಡಿಆರ್‌ಡಿಒದ ಮಾಜಿ ವಿಜ್ಞಾನಿ ರವಿ ಗುಪ್ತ ಪ್ರತಿಕ್ರಿಯಿಸಿ, ನಾಸಾ ಮುಖ್ಯಸ್ಥರು ಬೇಜವಾಬ್ದಾರಿಯಾಗಿ ತನ್ನ ಹೇಳಿಕೆಯನ್ನು ನೀಡಿದ್ದಾರೆ. ಭಾರತ 300 ಕಿ.ಮೀ ಎತ್ತರದಲ್ಲಿ ತನ್ನ ಪ್ರಯೋಗ ನಡೆಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಅದಕ್ಕಿಂತ ಭಾರೀ ಎತ್ತರದಲ್ಲಿ ಇದೆ. ಅಮೆರಿಕದ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಎಸ್ಯಾಟ್ ಪ್ರಯೋಗ ನಡೆಸಿದೆ. ಈ ಪ್ರಯೋಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಅವಶೇಷ ಉತ್ಪಾದನೆಯಾಗಿತ್ತು. ರಷ್ಯಾ ಮತ್ತು ಚೀನಾ ಸಹ ಈ ರೀತಿ ಪ್ರಯೋಗ ಮಾಡಿದೆ. ಹೀಗಾಗಿ ಭಾರತವನ್ನು ಮಾತ್ರ ದೂಷಿಸುವುದು ಎಷ್ಟು ಸರಿ? ಇದೊಂದು ತಾರತಮ್ಯದ ಹೇಳಿಕೆಯಾಗಿದೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.




