Tag: ಮಿಲಿಟರಿ

  • 3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ

    3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ

    – ಸೇನೆ ಸೇರುವ ಮಂದಿಗೆ ಸುವರ್ಣಾವಕಾಶ
    – ಟೂರ್ ಆಫ್ ಡ್ಯೂಟಿ ಜಾರಿಗೆ ಗಂಭೀರ ಚಿಂತನೆ

    ನವದೆಹಲಿ: ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಯುವ ಜನತೆಯಲ್ಲಿರುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ಈ ಆಸೆ ಈಡೇರುವುದಿಲ್ಲ. ಆದರೆ ಈಗ 3 ವರ್ಷಗಳ ಕಾಲ ತಾತ್ಕಾಲಿಕ ಉದ್ಯೋಗ ನೀಡುವ ಬಗ್ಗೆ ಭಾರತೀಯ ಸೇನೆ ಗಂಭೀರ ಚಿಂತನೆ ನಡೆಸಿದೆ.

    ಹೌದು, ಮಿಲಿಟರಿ ಸೇರಿದರೆ ನಿವೃತ್ತಿಯಾಗುವರೆಗೆ ಕರ್ತವ್ಯ ಮಾಡಬೇಕಾಗುತ್ತದೆ. ಆದರೆ ಈಗ ಮೂರು ವರ್ಷಗಳ ಕಾಲ ‘ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಯುವಜನತೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅನುಮತಿ ನೀಡಲು ಮುಂದಾಗಿದೆ. ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರನ್ನು ಉತ್ತೇಜಿಸಲು ಈ ಯೋಜನೆಗೆ ಕೈ ಹಾಕಿದೆ.

    ಒಂದು ವೇಳೆ ಈ ಪ್ರಸ್ತಾಪಕ್ಕೆ ಅನುಮತಿ ಸಿಕ್ಕರೆ ಆರಂಭದಲ್ಲಿ 100 ಅಧಿಕಾರಿಗಳು ಮತ್ತು 1 ಸಾವಿರ ಸೈನಿಕರ ನೇಮಕವಾಗಲಿದೆ. ಈ ಸಂಬಂಧ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಪ್ರತಿಕ್ರಿಯಿಸಿ, ವಿವಿಧ ಸೇನಾ ಕಮಾಂಡ್ ಗಳ ಪ್ರತಿಕ್ರಿಯೆ ಪಡೆಯಲಾಗಿದೆ. ಟೂರ್ ಆಫ್ ಡ್ಯೂಟಿಯನ್ನು ಪ್ರಯೋಗಿಕವಾಗಿ ಆರಂಭಿಸಲಾಗುತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನೇಮಕವಾಗಲಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

    26/ 27 ವಯಸ್ಸಿನ ಯುವಜನತೆಗೆ ತರಬೇತಿ ನೀಡಿ ಉದ್ಯೋಗ ನೀಡಿದಾಗ ತಾತ್ಕಲಿಕವಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿ ಸೇವೆ ಸಲ್ಲಿಸಿದ ಬಳಿಕ ಪ್ರಮಾಣಪತ್ರ ನೀಡಲಾಗುತ್ತದೆ. ಒಂದು ವೇಳೆ ಸೇನೆಯಲ್ಲಿ ಮುಂದುವರಿಯಲು ಆಸಕ್ತಿ ತೋರಿಸಿದರೆ ಅವರನ್ನು ಮುಂದುವರಿಸಲಾಗುತ್ತದೆ. ಟೂರ್ ಆಫ್ ಡ್ಯೂಟಿಯನ್ನು ಪೂರ್ಣಗೊಂಡ ಬಳಿಕ ಆ ಸೈನಿಕರು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಅವರ ಇಷ್ಟದ ಉದ್ಯೋಗಕ್ಕೆ ಸೇರಬಹುದು ಎಂಬ ನಂಬಿಕೆಯನ್ನು ಸೇನೆ ಇಟ್ಟುಕೊಂಡಿದೆ.

    ಯುವಜನತೆಗೆ ಸೇನೆ ಸೇರಬೇಕೆಂಬ ಆಸೆ ಇರುತ್ತದೆ. ಆದರೆ ಪೂರ್ಣಾವಧಿಗೆ ಸೇರಬೇಕೆಂಬ ಆಸೆ ಇರುವುದಿಲ್ಲ. ಸೇನೆಯ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರ ಭಕ್ತಿ ತೋರಿಸಲು, ಸಾಹಸ, ಅನುಭವ ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.

    ನಾಗರಿಕರಿಗೆ ಮೂರು ವರ್ಷಗಳ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಈಗಾಗಲೇ ಇಸ್ರೇಲಿನಲ್ಲಿದೆ. ಭಾರತದಲ್ಲಿ ಆಸಕ್ತರಿಗೆ ಮಾತ್ರ ಅವಕಾಶ ನೀಡುತ್ತಿದ್ದು ಇಸ್ರೇಲಿನಲ್ಲಿ ಇದು ಕಡ್ಡಾಯ. ಇಸ್ರೇಲ್ ಸುತ್ತ 7 ರಾಷ್ಟ್ರಗಳು ಇರುವ ಅಗತ್ಯಬಿದ್ದಾಗ ಜನರ ನೆರವನ್ನು ಪಡೆಯಲು ಸೇನಾ ತರಬೇತಿಯನ್ನು ನೀಡುತ್ತದೆ. 18 ವರ್ಷ ಮೇಲ್ಪಟ್ಟ ಯುವಕರು 36 ತಿಂಗಳ ಕಾಲ, ಯುವತಿಯು 24 ತಿಂಗಳ ಕಾಲ ಸೇನಾ ತರಬೇತಿ ಪಡೆಯುವುದನ್ನು ಇಸ್ರೇಲ್ ಕಡ್ಡಾಯಗೊಳಿಸಿದೆ.

     

  • ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನ

    ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನ

    ಶಿಮ್ಲಾ: ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನರಾದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ರೋಹಿಣಿ(29) ನಿಧನರಾದ ಕ್ಯಾಪ್ಟನ್. ರೋಹಿಣಿ ಆರ್ಮಿ ಕ್ಯಾಂಪ್ ಜಲಂಧರ್ ನಲ್ಲಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕ್ಯಾಪ್ಟನ್ ಆಗಿದ್ದರು. ರೋಹಿಣಿ ತನ್ನ ಸ್ಕೂಟಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ಸ್ಕೂಟಿಯಲ್ಲಿ ರೋಹಿಣಿ ಕೆಲಸಕ್ಕೆ ತೆರಳುತ್ತಿದ್ದಾಗ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ರೋಹಿಣಿ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಪರಿಣಾಮ ಅವರು ಕೋಮಾಗೆ ಜಾರಿದ್ದರು. ಬುಧವಾರ ರೋಹಿಣಿ ಕೊನೆಯುಸಿರೆಳೆದಿದ್ದಾರೆ.

    ಇಂದು ಕ್ಯಾಪ್ಟನ್ ರೋಹಿಣಿ ಅವರ ಅಂತಿಮ ಸಂಸ್ಕಾರವನ್ನು ಕುಲುವಿನ ಪಟ್ಲಿಕುಹಾಲ್‍ನಲ್ಲಿರುವ ಡುವಾಡಾದಲ್ಲಿ ಮಾಡಲಾಗಿದೆ. ಲಾಹೌಲ್ ಬುಡಕಟ್ಟು ಪ್ರದೇಶದ ಗೌಶಾಲ್ ಗ್ರಾಮದಲ್ಲಿ ರೋಹಿಣಿ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ.

    ಯುವ ಕ್ಯಾಪ್ಟನ್ ರೋಹಿಣಿ ಸಾವಿನ ಸುದ್ದಿ ತಿಳಿದ ಲಾಹೌಲ್ ಕಣಿವೆ ಶೋಕದಲ್ಲಿ ಮುಳುಗಿದೆ.

  • ಅಫ್ಘಾನ್ ವಿರುದ್ಧ ದಾಳಿ ನಡೆಸಲು ಕತ್ತೆ ಬಾಂಬ್ ಬಳಸಿದ ಉಗ್ರರು

    ಅಫ್ಘಾನ್ ವಿರುದ್ಧ ದಾಳಿ ನಡೆಸಲು ಕತ್ತೆ ಬಾಂಬ್ ಬಳಸಿದ ಉಗ್ರರು

    ಕಾಬೂಲ್: ಇದುವರೆಗೆ ಮಾನವ ಬಾಂಬ್, ಕಾರ್ ಬಾಂಬ್ ಬಳಸಿ ದಾಳಿ ನಡೆಸುತ್ತಿದ್ದ ಉಗ್ರರು ಪ್ರಸ್ತುತ ಕತ್ತೆ ಬಾಂಬ್ ಬಳಕೆ ಮಾಡಲು ಆರಂಭಿಸಿದ್ದಾರೆ.

    ಅಫ್ಘಾನಿಸ್ತಾನ ಕುನಾರ್ ಪ್ರದೇಶದಲ್ಲಿ ತಲಿಬಾನ್ ಉಗ್ರರು ಈ ಹೊಸ ಕತ್ತೆ ಬಾಂಬ್ ಬಳಿಸಿದ್ದು, ಈ ದಾಳಿಯಲ್ಲಿ ಇಬ್ಬರು ರಕ್ಷಣಾ ಪಡೆಯ ಯೋಧರು ಗಾಯಗೊಂಡಿದ್ದಾರೆ.

    ಕತ್ತೆಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಿ ರಕ್ಷಣಾ ಪಡೆ ವಾಹನ ಚಲಿಸುವ ದಾರಿ ಅಡ್ಡವಾಗಿ ಕಳುಹಿಸಿ ನಂತರ ಅವುಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಕಡಿಮೆ ಮೊತ್ತಕ್ಕೆ ಖರೀದಿ ಮಾಡಿದ ಕತ್ತೆಗಳನ್ನು ಕೃತ್ಯಕ್ಕೆ ಬಳಕೆ ಮಾಡಲಾಗಿದೆ. ಕಡಿಮೆ ಹಣಕ್ಕೆ ಖರೀದಿ ಮಾಡಿ ಈ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಈ ತಂತ್ರವನ್ನು ಇಸ್ರೇಲ್ ನಲ್ಲಿ ಈಗಾಗಲೇ ಉಗ್ರರು ಬಳಕೆ ಮಾಡಿ ರಕ್ಷಣಾ ಪಡೆಯ ವಿರುದ್ಧ ದಾಳಿ ನಡೆಸಿದ್ದರು.

    ಇದೇ ಮೊದಲಲ್ಲ: ಅಫ್ಘಾನಿಸ್ತಾನದಲ್ಲಿ ಉಗ್ರರು ಈ ರೀತಿ ಕತ್ತೆಗಳನ್ನು ಬಳಕೆ ಮಾಡುತ್ತಿರುವುದು ಇದೇ ಮೊದಲ್ಲ. ಈ ಹಿಂದೆ 2009 ಮತ್ತು 2014 ರಲ್ಲಿ ಕತ್ತೆಗಳನ್ನು ಬಳಸಿ ದಾಳಿ ನಡೆಸಲು ಯತ್ನಿಸಿದ್ದರು. ಆದರೆ ಈ ವೇಳೆ ರಕ್ಷಣಾ ಪಡೆಯತ್ತ ಬರುತ್ತಿದ್ದ ಕತ್ತೆಗಳನ್ನು ಶೂಟ್ ಮಾಡಿ ಸಾಯಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.

  • ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಬೆಂಗಳೂರು: ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪ್ರತಿದಿನ ಗಡಿಯಲ್ಲಿ 5-6 ಉಗ್ರರು ಹತ್ಯೆಯಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

    ಪಾಕಿಸ್ತಾನ ಪದೇ-ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ನೆರೆಯ ದೇಶಗಳು ನಿರಂತರವಾಗಿ ಭಾರತದ ಗಡಿಯೊಳಗೆ ಉಗ್ರಗಾಮಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರ ಗುಂಡಿಗೆ ಪ್ರತಿ ದಿನ 5-6 ಉಗ್ರರು ಸಾಯುತ್ತಿದ್ದಾರೆ ಎಂದು ತಿಳಿಸಿದರು.

    ನೀವಾಗಿಯೇ ಮೊದಲು ಗುಂಡನ್ನು ಹಾರಿಸಬೇಡಿ, ಒಂದು ವೇಳೆ ಪಾಕಿಸ್ತಾನದಿಂದ ಒಂದು ಗುಂಡು ನಮ್ಮ ಗಡಿ ಪ್ರದೇಶವನ್ನು ದಾಟಿದರೂ, ಪ್ರತ್ಯುತ್ತರವಾಗಿ ಅಸಂಖ್ಯಾತ ಗುಂಡುಗಳನ್ನು ಹಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.

    ಇದೇ ಸಂದರ್ಭದಲ್ಲಿ ಚೀನಾದೊಂದಿಗಿನ ಡೋಕ್ಲಾಂ ಗಡಿ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತದ ದುರ್ಬಲ ದೇಶವಲ್ಲ, ಡೋಕ್ಲಾಂ ಸಂಘರ್ಷವನ್ನು ಚೀನಾದೊಂದಿಗೆ ಬಗೆಹರಿಸಿದ ವಿಧಾನವೇ ಭಾರತದ ಬಲವನ್ನು ತಿಳಿಸುತ್ತದೆ. ವಿಶ್ವ ಹಲವು ಜನರು ಆಸಕ್ತಿಯಿಂದ ಚೀನಾ ಮತ್ತು ಭಾರತದ ನಡುವಿನ ಸಂಘರ್ಷವನ್ನು ಗಮನಿಸುತ್ತಿದ್ದರು ಎಂದು ತಿಳಿಸಿದರು.

    ಒಂದು ವೇಳೆ ಭಾರತವು ದುರ್ಬಲ ರಾಷ್ಟ್ರವಾಗಿದ್ದಾರೆ ಚೀನಾದೊಡನೆ ಇದ್ದ ಸಂಘರ್ಷವನ್ನು ಪರಿಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.