Tag: ಮಿನಿ ವಿಮಾನ ನಿಲ್ದಾಣ

  • ಕೊಡಗಿನಲ್ಲಿ ಮಿನಿ ಏರ್‌ಪೋರ್ಟ್‌ಗೆ  ಸರ್ಕಾರ ಚಿಂತನೆ – ಸ್ಥಳ ಪರಿಶೀಲನೆ

    ಕೊಡಗಿನಲ್ಲಿ ಮಿನಿ ಏರ್‌ಪೋರ್ಟ್‌ಗೆ  ಸರ್ಕಾರ ಚಿಂತನೆ – ಸ್ಥಳ ಪರಿಶೀಲನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿಲು ರಾಜ್ಯ ಸರ್ಕಾರ ಮಿನಿ ವಿಮಾನ ನಿಲ್ದಾಣ ಅಥವಾ ಹೆಲಿಪೋರ್ಟ್ ನಿರ್ಮಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಸ್ಥಳವನ್ನು ಗುರುತು ಮಾಡಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಪರಿಶೀಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆ ಸ್ಥಳದಲ್ಲೇ ಮಿನಿ ವಿಮಾನ ನಿಲ್ದಾಣ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಚೇತರಿಕೆ ಕಾಣುವ ಎಲ್ಲಾ ಅಂಶಗಳು ಕಂಡು ಬರುತ್ತಿದೆ.

    ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸೈನಿಕ ಶಾಲೆಯ ಪಕ್ಕದಲ್ಲಿರುವ 49.5 ಎಕರೆ ಕೃಷಿ ಇಲಾಖೆಯ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಅಥವಾ ಹೆಲಿಪೋರ್ಟ್ ನಿರ್ಮಿಸಲಾಗುವುದು ಎಂದು ಕೆಲವು ದಿನಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಮತ್ತು ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್‌ಐಐಡಿಸಿ) ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಂಆರ್ ರವಿ, ಡಿ.ಎಂ. ಪೂರ್ವಿಮಠ್(ವಿಎಸ್‌ಎಂ), ಕೆಎಸ್‌ಐಐಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪ್ರಾಜೆಕ್ಟ್ ತಾಂತ್ರಿಕ ಸಲಹೆಗಾರ ಬ್ರಿಗ್ ಹೀಗೆ ಮತ್ತಿತರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟದಲ್ಲಿದ್ದಿದ್ದರೆ ನಿಮ್ಮ ಸಂತೋಷದಲ್ಲಿ ನಾನೂ ಭಾಗಿಯಾಗ್ತಿದ್ದೆ: ಮೋದಿ

    ಪರಿಶೀಲನೆ ನಡೆಸಿರುವ ಭೂಮಿ ಚಿಕ್ಕತ್ತೂರು ಗ್ರಾಮದಲ್ಲಿದ್ದು, 20 ಆಸನಗಳ ವಿಮಾನಗಳು ಇಳಿಯಬಹುದಾದ ಮಿನಿ ವಿಮಾನ ನಿಲ್ದಾಣ ಅಥವಾ ಮೈಸೂರು, ಹಂಪಿ ಹಾಗೂ ಚಿಕ್ಕಮಗಳೂರಿನ ಯೋಜಿತ ಹೆಲಿ-ಪೋರ್ಟ್‌ಗಳನ್ನು ಸಂಪರ್ಕಿಸುವ ಹೆಲಿ-ಪೋರ್ಟ್ ಅನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಎರಡೂ ಯೋಜನೆಗಳು ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿವೆ.

    ಭಾರತದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸರ್ಕ್ಯೂಟ್ ಪ್ರವಾಸಕ್ಕೆ ಬರುವ ವಿದೇಶಿ ಪ್ರವಾಸಿಗರನ್ನು ಒಳಗೊಂಡಿರುತ್ತದೆ ಅಲ್ಲದೆ ಕೆಎಸ್‌ಐಐಡಿಸಿ ಕರ್ನಾಟಕದಾದ್ಯಂತ ಏರ್‌ಸ್ಟ್ರಿಪ್‌ಗಳ ಅಭಿವೃದ್ಧಿಗೆ ನೋಡಲ್ ಏಜೆನ್ಸಿಯಾಗಿದೆ. 950 ಮೀಟರ್ ಅಥವಾ 1.5 ಕಿಮೀ ಪಟ್ಟಿಯು ಏರ್‌ಸ್ಟ್ರಿಪ್, ಭದ್ರತಾ ಪೋಸ್ಟ್ನೊಂದಿಗೆ ಟರ್ಮಿನಲ್, ಫೆನ್ಸಿಂಗ್ ಮತ್ತು ಸ್ಥಳೀಯ ಪೋಲೀಸ್‌ನಿಂದ ಭದ್ರತೆಯಂತಹ ಮೂಲಭೂತ ಕನಿಷ್ಠ ಸೌಲಭ್ಯಗಳನ್ನು ಹೊಂದಿರುತ್ತದೆ. ಇದೀಗ ವಿಮಾನ ಸಂಪರ್ಕವನ್ನು ಖಾತ್ರಿಪಡಿಸಿದರೆ, ಪ್ರತಿ ವಾರಾಂತ್ಯದಲ್ಲಿ 20,000 ರಿಂದ 50,000 ಪ್ರವಾಸಿಗರಿಗೆ ಅವಕಾಶವಿರುತ್ತದೆ. ಇದನ್ನೂ ಓದಿ: ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

    ಕೊಡಗಿನಲ್ಲಿ ಪೂರ್ಣ ಪ್ರಮಾಣದ ಏರ್‌ಸ್ಟ್ರಿಪ್ ಅಥವಾ ಹೆಲಿ-ಪೋರ್ಟ್ ಅನ್ನು ಅಭಿವೃದ್ಧಿಪಡಿಸಲು 120 ಕೋಟಿ ರೂ. ಅಗತ್ಯವಿದೆ ಎಂದು ಡಾ. ರವಿ ತಿಳಿಸಿದ್ದಾರೆ. ಭೂಮಿಯನ್ನು ಸಮತಟ್ಟು ಮಾಡಲು ಮುಂದಿನ ತಿಂಗಳುಗಳಲ್ಲಿ ಹಾರಂಗಿ ಅಣೆಕಟ್ಟಿನಿಂದ ತೆಗೆಯಲಾಗುವ ಹೂಳನ್ನು ಏರ್‌ಸ್ಟ್ರಿಪ್‌ನಲ್ಲಿ ಸುರಿಯಲಾಗುವುದು. ಇಡೀ ಪ್ರದೇಶವನ್ನು ಹೂಳು ಹಾಗೂ ಮಣ್ಣಿನಿಂದ ನೆಲಸಮಗೊಳಿಸಲಾಗುತ್ತದೆ. ಕೊಡಗಿನ ಪ್ರವಾಸೋದ್ಯಮಕ್ಕೆ ಈ ವಿಮಾನ ನಿಲ್ದಾಣ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಶಾಸಕ ರಂಜನ್ ತಂಡಕ್ಕೆ ತಿಳಿಸಿದರು.

    ಒಟ್ಟಿನಲ್ಲಿ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣವಾದರೆ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವ ಇಲ್ಲಿನ ಜನರಿಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದೆ ಹಾಗೂ ಇದು ಜಿಲ್ಲೆಯ ಜನರ ಆಶಯವಾಗಿದೆ.

  • ರೈಲ್ವೇ ಸಂಪರ್ಕವಿಲ್ಲದ ಕೊಡಗಿಗೆ ಮಿನಿ ವಿಮಾನ ನಿಲ್ದಾಣ

    ರೈಲ್ವೇ ಸಂಪರ್ಕವಿಲ್ಲದ ಕೊಡಗಿಗೆ ಮಿನಿ ವಿಮಾನ ನಿಲ್ದಾಣ

    – ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದಿಂದ ತಾತ್ವಿಕ ಒಪ್ಪಿಗೆ

    ಮಡಿಕೇರಿ: ಇಂದಿಗೂ ರೈಲ್ವೇ ಸಂಪರ್ಕವಿಲ್ಲದ ರಾಜ್ಯದ ಏಕೈಕ ಜಿಲ್ಲೆ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಸಮಯ ಬಂದಿದೆ.

    ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ ಪ್ರವಾಸೋದ್ಯಮ, ಕಾಫಿ ಹಾಗೂ ಕಾಳುಮೆಣಸು ಬೆಳೆ. ಈ ಎರಡರ ಅಭಿವೃದ್ಧಿಗೆ ಸಾರಿಗೆ ಬಹುಮುಖ್ಯ. ಹಲವು ವರ್ಷಗಳಿಂದಲೂ ಜಿಲ್ಲೆಗೆ ರೈಲ್ವೇ ಸಂಪರ್ಕ ಕಲ್ಪಿಸುವುದಕ್ಕೆ ಶತಪ್ರಯತ್ನ ನಡೆಯುತ್ತಲೇ ಇದೆ. ಜೊತೆಗೆ ವಿಮಾನ ನಿಲ್ದಾಣಕ್ಕೂ ಕಳೆದ ಹತ್ತು ವರ್ಷಗಳಿಂದಲೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿರಲಿಲ್ಲ.

    ಒಂದೆಡೆ ರೈಲ್ವೇ ಸಂಪರ್ಕಕ್ಕೆ ಒಪ್ಪಿಗೆ ದೊರೆಯುತ್ತಿದ್ದರೆ, ಮತ್ತೊಂದೆಡೆ ಮಿನಿ ವಿಮಾನ ನಿಲ್ದಾಣಕ್ಕೂ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯಲ್ಲಿರುವ ಕೃಷಿ ಇಲಾಖೆಯ ಕೃಷಿ ಫಾರಂ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಈ ಜಾಗದಲ್ಲಿ ವಿಮಾನ ನಿಲ್ದಾಣ ಸಾಧ್ಯವಿದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ.

    ಈ ಹಿಂದೆಯೂ ವಿಮಾನ ನಿಲ್ದಾನಕ್ಕೆ ಮಾದಾಪುರ, ಹೆಬ್ಬಾಲೆ ಸೇರಿದಂತೆ ವಿವಿಧ ಸ್ಥಳಗಳನ್ನು ತೋರಿಸಲಾಗಿತ್ತು. ಆದರೆ ಆ ಸ್ಥಳಗಳು ಸೂಕ್ತವಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳಿಂದ ಒಪ್ಪಿಗೆ ದೊರೆತಿರಲಿಲ್ಲ. ಇದೀಗ ಕೂಡಿಗೆಯಲ್ಲಿರುವ 65 ಎಕರೆ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಿದೆ. ರನ್ ವೇ ನಿರ್ಮಾಣ ಮಾಡಲು ಬೇಕಾಗಿರುವ 900 ಮೀಟರ್ ಜಾಗವೂ ಇಲ್ಲಿ ಸೂಕ್ತವಾಗಿದೆ ಎಂದು ಏರ್‌ಪೋರ್ಟ್‌ ಆಫ್ ಅಥಾರಿಟಿ ಅಧಿಕಾರಿಗಳು ವರದಿ ನೀಡಿದ್ದಾರೆ. ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ದೊರೆಯುತ್ತಿರುವುದು ಜನರಿಗೆ ಸಂತಸ ತಂದಿದೆ. ಜೊತೆಗೆ ಇದರಿಂದ ಜಿಲ್ಲೆ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.