Tag: ಮಿಜೋರಂ

  • ರಣಜಿಯಲ್ಲಿ ವಿನಯ್ ಕುಮಾರ್ ಚಾರಿತ್ರಿಕ ದಾಖಲೆ

    ರಣಜಿಯಲ್ಲಿ ವಿನಯ್ ಕುಮಾರ್ ಚಾರಿತ್ರಿಕ ದಾಖಲೆ

    ಮಿಜೋರಂ: ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಅನುಭವಿ ವೇಗಿ ವಿನಯ್ ಕುಮಾರ್ ಚಾರಿತ್ರಿಕ ದಾಖಲೆಯನ್ನು ಬರೆದಿದ್ದು, ದೇಶಿಯ ಕ್ರಿಕೆಟ್ ವೇಗದ ಬೌಲರ್ ವಿಭಾಗದಲ್ಲಿ ಅತಿ ಹೆಚ್ಚು ಪಡೆದ ದಾಖಲೆಯನ್ನು ಬರೆದಿದ್ದಾರೆ.

    ಮಿಜೋರಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ವಿನಯ್ ಒಟ್ಟು 412 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಆ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಗಳ ಪಟ್ಟಿಯಲ್ಲಿ ಪಂಕಜ್ ಸಿಂಗ್‍ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಪಂಕಾಜ್ ಸಿಂಗ್ 409 ವಿಕೆಟ್‍ಗಳೊಂದಿಗೆ ನಂ.1 ಸ್ಥಾನ ಪಡೆದಿದ್ದರು.

    ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಹರಿಯಾಣದ ಎಡಗೈ ಸ್ಪಿನ್ನರ್ ರಾಜೀಂದರ್ ಗೋಯೆಲ್ 637 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಎಸ್.ವೆಂಕಟರಘವನ್ 530 ವಿಕೆಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ವಿನಯ್ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

    ಕಳೆದ ತಿಂಗಳಿನಲ್ಲಿ ರಣಜಿ ಟೂರ್ನಿಯಲ್ಲಿ ವಿನಯ್ ಕುಮಾರ್ 400 ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದರು. 397 ವಿಕೆಟ್ ಗಳನ್ನು ಕರ್ನಾಟಕ ಪರ ಆಡಿ ಪಡೆದಿದ್ದರೆ, 3 ವಿಕೆಟ್ ಗಳನ್ನು ಪುದುಚೇರಿ ಪರ ಪಡೆದಿದ್ದರು. ಪುದುಚೇರಿ ತಂಡದ ಪರ ಆಡಿದ ವಿನಯ್ ಕುಮಾರ್‍ಗೆ ಪಂದ್ಯದ ಬಳಿಕ ಸಹ ಆಟಗಾರರು ಗೌರವ ವಂದನೆಯನ್ನು ನೀಡಿದ್ದರು. ಈ ಪಂದ್ಯವನ್ನು ಪದುಚೇರಿ ತಂಡ ಇನ್ನಿಂಗ್ಸ್ ಮತ್ತು 272 ರನ್ ಗಳ ಅಂತರದಿಂದ ಗೆಲುವು ಪಡೆದಿತ್ತು.

    34 ವರ್ಷದ ವಿನಯ್ ಕುಮಾರ್ 2004ರಲ್ಲಿ ಕರ್ನಾಟಕದ ಪರ ರಣಜಿ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 15 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ 133 ಪಂದ್ಯಗಳಿಂದ ವಿನಯ್ 474 ವಿಕೆಟ್ ಗಳಿಸಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಂತಿಮ ಪಂದ್ಯವನ್ನಾಡಿದ್ದರು. ಒಟ್ಟಾರೆ ಟೀಂ ಇಂಡಿಯಾ ಪರ ವಿನಯ್ 1 ಟೆಸ್ಟ್, 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 1, 38, 10 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ 105 ಪಂದ್ಯಗಳಿಂದ 8.39ರ ಎಕಾನಮಿಯಲ್ಲಿ 105 ವಿಕೆಟ್ ಪಡೆದಿದ್ದಾರೆ.