Tag: ಮಿಚೆಲ್ ಮಾರ್ಷ್

  • World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    ಬೆಂಗಳೂರು: ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್‌ ಮಾರ್ಷ್‌ (Mitchell Marsh) ಹಾಗೂ ಡೇವಿಡ್‌ ವಾರ್ನರ್‌ (David Warner) ಆರಂಭಿಕ ಜೋಡಿ ಭರ್ಜರಿ ಶತಕಗಳನ್ನು ಸಿಡಿಸುವ ಜೊತೆಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ (Australia) ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 367 ರನ್‌ ಗಳಿಸುವ ಮೂಲಕ ಎದುರಾಳಿ ಪಾಕ್‌ (Pakistan) ತಂಡಕ್ಕೆ 368 ರನ್‌ಗಳ ಗುರಿ ನೀಡಿದೆ. ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2011ರ ಮಾರ್ಚ್‌ 16ರಂದು ಬ್ರಾಡ್ ಹ್ಯಾಡಿನ್ ಮತ್ತು ಶೇನ್ ವ್ಯಾಟ್ಸನ್ ಜೋಡಿ ಕೆನಡಾ ವಿರುದ್ಧ ಮೊದಲ ವಿಕೆಟ್‌ಗೆ 183 ರನ್‌ಗಳ ಜೊತೆಯಾಟ ನೀಡಿತ್ತು. ಇದು ಆಸೀಸ್‌ ಪರ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಜೊತೆಯಾಟ ನೀಡಿದ್ದ ಜೋಡಿಯಾಗಿತ್ತು. 259 ರನ್‌ಗಳ ಜೊತೆಯಾಟ ನೀಡುವ ಮೂಲಕ ವಾರ್ನರ್‌ ಹಾಗೂ ಮಾರ್ಚ್‌ ಜೋಡಿ ಈ ದಾಖಲೆಯನ್ನು ಮುರಿದಿದೆ.

    ಅಲ್ಲದೇ ಆಸೀಸ್‌ ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ ಡೇವಿಡ್‌ ವಾರ್ನರ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 33.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 259 ರನ್‌ ಬಾರಿಸುವ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಬಾರಿಸಿದ 2ನೇ ಜೋಡಿ ಎಂಬ ವಿಶೇಷ ಸಾಧನೆ ಮಾಡಿದೆ. 2011ರ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ 282 ರನ್‌ಗಳ ಜೊತೆಯಾಟ ನೀಡಿದ್ದ ಶ್ರೀಲಂಕಾ ತಂಡದ ತರಂಗ, ದಿಲ್ಶಾನ್‌ ಜೋಡಿ ಮೊದಲ ಸ್ಥಾನದಲ್ಲಿದೆ.

    ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್‌ ಮಾರ್ಷ್‌ ಹಾಗೂ ಡೇವಿಡ್‌ ವಾರ್ನರ್‌ ಜೋಡಿ ಆರಂಭದಿಂದಲೇ ಪಾಕ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. 13 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು. ಮಿಚೆಲ್‌ ಮಾರ್ಷ್‌ 108 ಎಸೆತಗಳಲ್ಲಿ 121 ರನ್‌ (10 ಬೌಂಡರಿ, 9 ಸಿಕ್ಸರ್‌) ಬಾರಿಸಿದರೆ, 124 ಎಸೆತಗಳನ್ನು ಎದುರಿಸಿದ ಡೇವಿಡ್‌ ವಾರ್ನರ್‌ 14 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 163 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಜೊತೆಗೆ ಆಸೀಸ್‌ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 400 ರನ್‌ಗಳನ್ನು ಬಾರಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಲಿಯಾ 367 ರನ್‌ಗಳಿಗೆ ತೃಪ್ತಿಪಟ್ಟುಕೊಂಡಿತು.

    ಉಳಿದಂತೆ ಸ್ಟೀವ್‌ ಸ್ಮಿತ್‌ 7 ರನ್‌, ಮಾರ್ಕಸ್‌ ಸ್ಟೋಯ್ನಿಸ್‌ 21 ರನ್‌, ಜೋಶ್ ಇಂಗ್ಲಿಸ್ 13 ರನ್‌, ಮಾರ್ನಸ್‌ ಲಾಬುಶೇನ್‌ 8 ರನ್‌, ಮಿಚೆಲ್‌ ಸ್ಟಾರ್ಕ್‌ 2 ರನ್‌ ಗಳಿಸಿದ್ರೆ, ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಜೋಶ್‌ ಹ್ಯಾಜಲ್‌ವುಡ್‌ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಪ್ಯಾಟ್‌ ಕಮ್ಮಿನ್ಸ್‌ 6 ರನ್‌ ಹಾಗೂ ಆಡಂ ಝಂಪಾ 1 ರನ್‌ ಗಳಿಸಿ ಅಜೇಯರಾಗುಳಿದರು.

    ಶಾಹೀನ್‌ ಶೈನ್‌: ಆರಂಭದಲ್ಲಿ ರನ್‌ ಚಚ್ಚಿಸಿಕೊಂಡಿದ್ದ ಪಾಕಿಸ್ತಾನ ಬೌಲರ್‌ಗಳು ಡೆತ್‌ ಓವರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಮಾರಕ ಬೌಲಿಂಗ್‌ ದಾಳಿ ನಡೆಸಿದ ಶಾಹೀನ್‌ ಶಾ ಅಫ್ರಿದಿ (Shaheen Shah Afridi) 10 ಓವರ್‌ಗಳಲ್ಲಿ 5 ವಿಕೆಟ್‌ ಕಿತ್ತರೆ, ಹ್ಯಾರಿಸ್‌ ರೌಫ್‌ 3 ವಿಕೆಟ್‌ ಹಾಗೂ ಉಸ್ಮಾನ್‌ ಮಿರ್‌ 1 ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • WorldCup ಟೂರ್ನಿಗೆ ಆಸೀಸ್‌ ಬಲಿಷ್ಠ ತಂಡ ಪ್ರಕಟ – ಸ್ಟಾರ್‌ ಆಲ್‌ರೌಂಡರ್‌ಗೆ T20 ನಾಯಕತ್ವದ ಹೊಣೆ

    WorldCup ಟೂರ್ನಿಗೆ ಆಸೀಸ್‌ ಬಲಿಷ್ಠ ತಂಡ ಪ್ರಕಟ – ಸ್ಟಾರ್‌ ಆಲ್‌ರೌಂಡರ್‌ಗೆ T20 ನಾಯಕತ್ವದ ಹೊಣೆ

    ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ (World Cup) ಟೂರ್ನಿಗೆ ಆಸ್ಟ್ರೇಲಿಯಾ (Australia) ಬಲಿಷ್ಠ ತಂಡ ಪ್ರಕಟಿಸಿದೆ. ಈ ಬಾರಿ ಭಾರತದ ಪೂರ್ಣಾತಿಥ್ಯದಲ್ಲಿ ಆಯೋಜನೆಗೊಂಡಿರುವ ಏಕದಿನ ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ.

    ಈ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ಯಾಟ್‌ ಕಮ್ಮಿನ್ಸ್‌ (Pat Cummins) ನಾಯಕತ್ವದಲ್ಲಿ 18 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಆದ್ರೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ತಂಡದಿಂದ ಹೊರಗುಳಿದಿದ್ದು, ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಹೀಗಿದೆ:
    ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್‌ ಗ್ರೀನ್‌, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್‌, ಮಿಚೆಲ್ ಮಾರ್ಷ್, ಗ್ಲೇನ್‌ ಮ್ಯಾಕ್ಸ್‌ವೆಲ್‌, ತನ್ವೀರ್ ಸಂಘ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಆಡಂ ಝಂಪಾ.

    ಟಿ20 ನಾಯಕತ್ವದಲ್ಲಿ ಬದಲಾವಣೆ:
    ಇನ್ನೂ 2024ರ ಟಿ20 ವಿಶ್ವಕಪ್‌ ಟೂರ್ನಿಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಆಸ್ಟ್ರೇಲಿಯಾ ಟಿ20 ನಾಯಕತ್ವ ಬದಲಾವಣೆ ಮಾಡಿದೆ. ಸ್ಟಾರ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ಗೆ (Mitchell Marsh) ಟಿ20 ತಂಡದ ನಾಯಕತ್ವ ನೀಡಲಾಗಿದೆ. ಇದೇ ಆಗಸ್ಟ್‌ 30 ರಿಂದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ, 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಟಿ20 ಹಾಗೂ ಏಕದಿನ ತಂಡವನ್ನೂ ಪ್ರಕಟಿಸಿದ್ದು, ಮಿಚೆಲ್‌ ಮಾರ್ಚ್‌ಗೆ ಟಿ20 ತಂಡದ ನಾಯತ್ವ ಜವಾಬ್ದಾರಿ ನೀಡಲಾಗಿದೆ.

    ಇದುವರೆಗೆ 46 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಮಿಚೆಲ್ ಮಾರ್ಷ್, 1,086 ರನ್ ಗಳಿಸುವುದರ ಜೊತೆಗೆ 15 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿರುವ ಮಾರ್ಷ್ 6 ಅರ್ಧಶತಕ ಸಿಡಿಸಿದ್ದಾರೆ. ಇದರಲ್ಲಿ 86 ಬೌಂಡರಿಗಳು ಹಾಗೂ 45 ಸಿಕ್ಸರ್‌ಗಳು ಸೇರಿವೆ. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಸೀಸ್‌ ತಂಡ:
    ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್.

    ಏಕದಿನ ಪಂದ್ಯಗಳು:
    ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್‌ ಗ್ರೀನ್‌, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಂ ಝಂಪಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ನವದೆಹಲಿ: ಫಿಲ್ ಸಾಲ್ಟ್ ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (DelhiCapitals) ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. 182 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 16.4 ಓವರ್‌ಗಳಲ್ಲೇ 187ರನ್‌ ಸಿಡಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: IPLನಲ್ಲಿ 7 ಸಾವಿರ ರನ್‌ ಸಿಡಿಸಿ ದಾಖಲೆ ಬರೆದ ರನ್‌ ಮಿಷಿನ್‌ ಕೊಹ್ಲಿ

    ಗೆಲುವಿಗೆ 182 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಶುರು ಮಾಡಿತು.‌ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (Phil Salt) ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರಿಂದ ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿಯನ್ನು ಡೆಲ್ಲಿ ನಿರಾಯಾಸವಾಗಿ ತಲುಪಿತು. ಡೇವಿಡ್‌ ವಾರ್ನರ್‌ (David Warner) 22 ರನ್‌ (14 ಎಸೆತ, 3 ಬೌಂಡರಿ, 1 ಸಿಕ್ಸರ್)‌, ಮಿಚೆಲ್‌ ಮಾರ್ಷ್‌ (Mitchell Marsh) 26 ರನ್‌ (17 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿದ ಫಿಲ್ ಸಾಲ್ಟ್ 45 ಎಸೆತಗಳಲ್ಲಿ ಸ್ಫೋಟಕ 87 ರನ್‌ (8 ಬೌಂಡರಿ, 6 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ರಿಲೀ ರೋಸೌವ್ 22 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 1 ಬೌಂಡರಿ), ಅಕ್ಷರ್‌ ಪಟೇಲ್‌ 3 ಎಸೆತಗಳಲ್ಲಿ 8 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 182 ರನ್‌ಗಳ ಗುರಿಯನ್ನು ನೀಡಿತು.

    ಆರ್‌ಸಿಬಿ ಪರ ಆರಂಭಿಕರಾಗಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದರು. ಡುಪ್ಲೆಸಿಸ್ 32 ಎಸೆತಗಳಲ್ಲಿ 45 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 55 ರನ್ ಬಾರಿಸಿದರು. ಇನ್ನುಳಿದಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ಔಟ್ ಆದರೆ, ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 11 ರನ್ ಗಳಿಸಿ ಮತ್ತೆ ಪರದಾಡಿದರು. ಇದರಿಂದ ಆರ್‌ಸಿಬಿ 150ರನ್‌ಗಳ ಗಡಿ ದಾಟುವುದು ಕಷ್ಟವಾಗಿತ್ತು.

    ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ (Mahipal Lomror) ಈ ಬಾರಿಯ ಇದೇ ಮೊದಲ ಬಾರಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಆಸರೆಯಾಗುವಂತಹ ಇನ್ನಿಂಗ್ಸ್ ಆಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿದರು. ಅನುಜ್ ರಾವತ್ 3 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    ಲಕ್ನೋ: ಕೇಲ್‌ ಮೇಯರ್ಸ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capital) ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಶುಭಾರಂಭ ಪಡೆದುಕೊಂಡಿದೆ.

    ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ಸಿಡಿಸಿತ್ತು. 194 ರನ್‌ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ ಪತನಕ್ಕೆ 4.3 ಓವರ್‌ಗಳಲ್ಲಿ 41 ರನ್‌ ಕಲೆಹಾಕಿತ್ತು. ಆ ನಂತರ ತಂಡದ ಒಂದೊಂದೇ ವಿಕೆಟ್‌ ಪತನಗೊಂಡಿತು.

    ಡೆಲ್ಲಿ ತಂಡದಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಡೇವಿಡ್‌ ವಾರ್ನರ್‌ 48 ಎಸೆತಗಳಲ್ಲಿ 56 ರನ್‌ (7 ಬೌಂಡರಿ), ರಿಲೀ ರೋಸೌವ್ 20 ಎಸೆತಗಳಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರು ಹೆಚ್ಚುವರಿ ರನ್‌ ಕೊಡುಗೆ ನೀಡಲಿಲ್ಲ. ಇದರಿಂದ ತಂಡ ಹೀನಾಯ ಸೋಲಿಗೆ ಗುರಿಯಾಯಿತು.

    ಪೃಥ್ವಿ ಶಾ 12 ರನ್‌, ಸರ್ಫರಾಜ್‌ ಖಾನ್‌ 4 ರನ್‌, ರೋಮ್ನನ್‌ ಪೋವೆಲ್‌ 1 ರನ್‌, ಅಮಮಾನ್‌ ಹಕೀಮ್‌ ಖಾನ್‌ 4 ರನ್‌ ಗಳಿಸಿದರೆ, ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಮಿಚೆಲ್‌ ಮಾರ್ಚ್‌ (Mitchell Marsh) ಶೂನ್ಯಕ್ಕೆ ಔಟಾಗಿ ಕೈಕೊಟ್ಟರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 16 ರನ್‌, ಚೇತನ್‌ ಸಕಾರಿಯಾ 4 ರನ್‌ ಗಳಿಸಿ ಔಟಾದರು. ಕುಲ್‌ದೀಪ್‌ ಯಾದವ್‌ 6 ರನ್‌, ಮುಕೇಶ್‌ ಕುಮಾರ್‌ ಯಾವುದೇ ರನ್‌ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.

    ಮಿಂಚಿದ ಮಾರ್ಕ್‌:
    16ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಾರ್ಕ್‌ ವುಡ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಮಾರ್ಕ್‌ ವುಡ್‌ (Mark Wood) 5 ವಿಕೆಟ್‌ ಕಿತ್ತರೆ, ಅವೇಶ್‌ ಖಾನ್‌, ರವಿ ಬಿಷ್ಣೋಯ್ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಫೋಟಕ ಪ್ರದರ್ಶನ ನೀಡಿ ಮಿಂಚಿದರು. ಆರಂಭದಲ್ಲಿ ಕೆ.ಎಲ್‌ ರಾಹುಲ್‌ ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆ ನಂತರ ಕೇಲ್ ಮೇಯರ್ಸ್ ಅಬ್ಬರ ಶುರುವಾಯಿತು.

    ಆರಂಭಿಕ ಆಟಗಾರ ಕೇಲ್ ಮೇಯರ್ಸ್ (Kyle Mayers) ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಿದರು. 2ನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟ ಆಡಿದರು. ಈ ನಡುವೆ ದೀಪಕ್‌ ಹೂಡಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮೇಯರ್ಸ್‌ ಸಹ 38 ಎಸೆತಗಳಲ್ಲಿ 73 ರನ್ (7 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು.

    ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 36 ರನ್‌ಗಳ ಕೊಡುಗೆ ನೀಡಿದರು. ಯುವ ಆಟಗಾರ ಆಯುಷ್ ಬದೋನಿ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿ, ತಂಡದ ಮೊತ್ತ 193ಕ್ಕೆ ತಂದು ನಿಲ್ಲಿಸಿದರು. ಆಯುಷ್ ಬದೋನಿ 2 ಭರ್ಜರಿ ಸಿಕ್ಸರ್‌, 1 ಬೌಂಡರಿಯೊಂದಿಗೆ 7 ಎಸೆತಗಳಲ್ಲಿ 18 ರನ್‌ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಭಾರತ ಕಳಪೆ ಬೌಲಿಂಗ್‌, ಬ್ಯಾಟಿಂಗ್‌ – ಆಸ್ಟ್ರೇಲಿಯಾಗೆ 10 ವಿಕೆಟ್‌ಗಳ ಭರ್ಜರಿ ಜಯ

    ಭಾರತ ಕಳಪೆ ಬೌಲಿಂಗ್‌, ಬ್ಯಾಟಿಂಗ್‌ – ಆಸ್ಟ್ರೇಲಿಯಾಗೆ 10 ವಿಕೆಟ್‌ಗಳ ಭರ್ಜರಿ ಜಯ

    ಅಮರಾವತಿ: ಮಿಚೆಲ್‌ ಸ್ಟಾರ್ಕ್‌ (Mitchell Starc) ಮಾರಕ ಬೌಲಿಂಗ್‌ ದಾಳಿ, ಮಿಚೆಲ್‌ ಮಾರ್ಷ್‌ (Mitchell Marsh) ಹಾಗೂ ಟ್ರಾವಿಸ್‌ ಹೆಡ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತದ (Team India) ವಿರುದ್ಧ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1 ರಲ್ಲಿ ಗೆದ್ದು ಸಮಬಲ ಸಾಧಿಸಿದೆ.

    ವಿಶಾಖಪಟ್ಟಣದ ವೈ.ಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ (Australia), ರೋಹಿತ್‌ (Rohit Sharma) ಪಡೆಯನ್ನ 26 ಓವರ್‌ಗಳಲ್ಲಿ 117 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 118 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ಟಿ20 ಶೈಲಿಯಲ್ಲಿ ಬ್ಯಾಟಿಂಗ್‌ ನಡೆಸಿ 11 ಓವರ್‌ಗಳಲ್ಲಿ 121 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: 750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌ ವಿಕೆಟ್‌ ಬಿಟ್ಟುಕೊಡದಂತೆ ಟೀಂ ಇಂಡಿಯಾ ಬೌಲರ್‌ಗಳನ್ನ ಬೆಂಡೆತ್ತಿದರು. ಮಾರ್ಷ್‌ 36 ಎಸೆತಗಳಲ್ಲಿ ಸ್ಫೋಟಕ 66 ರನ್‌ (6 ಸಿಕ್ಸರ್‌, 6 ಬೌಂಡರಿ) ಗಳಿಸಿದ್ರೆ, ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ 10‌ ಬೌಂಡರಿಯೊಂದಿಗೆ 51 ರನ್‌ ಚಚ್ಚಿ ಜಯದ ಹಾದಿ ತಲುಪಿಸಿದರು.

    ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಆಸ್ಟ್ರೇಲಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ ನಡೆಸಿ, ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದರಿಂದ ಮೊದಲ ಪಂದ್ಯದಲ್ಲಿ 188 ರನ್‌ಗಳಿಗೆ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಿದ್ದ ಭಾರತ, 2ನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಬೇಕಾಯಿತು. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಮೊದಲ ಓವರ್‌ನ 3ನೇ ಎಸೆತದಲ್ಲಿಯೇ ಶುಭಮನ್‌ ಗಿಲ್ ಔಟಾದರು. ಈ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) 2ನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾದರು. ಕಳೆದ ಪಂದ್ಯದಲ್ಲಿ ಮ್ಯಾಚ್‌ ವಿನ್ನರ್‌ ಆಗಿದ್ದ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿದರೆ, ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ (31 ರನ್‌ ಗಳಿಸಿ) ಸಹ ನಥನ್ ಎಲ್ಲಿಸ್‌ಗೆ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ಉಪನಾಯಕ ಹಾರ್ದಿಕ್ ಪಾಂಡ್ಯ 1 ರನ್, ರವೀಂದ್ರ ಜಡೇಜಾ 16 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 29 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ತಲುಪಿಸುವಲ್ಲಿ ಯಶಸ್ವಿಯಾದರು.

    ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ 8 ಓವರ್‌ಗಳಲ್ಲಿ 53 ರನ್ ನೀಡಿ 5 ವಿಕೆಟ್‌ ಕಿತ್ತರೆ, ಸೀನ್ ಅಬೋಟ್ 6 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು. ನಥನ್ ಎಲ್ಲಿಸ್ 5 ಓವರ್‌ಗಳಲ್ಲಿ 13 ರನ್ ನೀಡಿ ಉಳಿದ 2 ವಿಕೆಟ್ ಕಬಳಿಸಿದರು.

  • ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಮೊನ್ನೆ ತಾನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‌ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದೆ.

    ಈ ಸಂಬಂಧ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ ಪುಣೆಗೆ ತೆರಳಲು ಡಿಸಿ ತಮ್ಮ ಪ್ರಯಾಣದ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಇಡೀ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಆಸ್ಟ್ರೇಲಿಯನ್ ಆಲ್ ರೌಂಡರ್ ಆದ ಅವರಿಗೆ ಕೊರೊನಾದ ಕೆಲವು ರೋಗಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿದುಬಂದಿದೆ.

    corona

    ಮಿಚೆಲ್ ಮಾರ್ಷ್ ಅವರು ಇತ್ತಿಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿದೆ ಎಂದು ಶಂಕೆ ವ್ಯಕ್ತವಾಗಿದೆ.

    ಡಿಸಿ ಇಂದು ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ ಈಡೀ ತಂಡದ ಆಟಗಾರರನ್ನು ಆಯಾ ಕೊಠಡಿಗಳಲ್ಲಿ ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ತಿಳಿಸಲಾಗಿದೆ. ಕೊರೊನಾವು ಏಕಾಏಕಿ ಹೇಗೆ ಸಂಭವಿಸಿತು ಹಾಗೂ ಪ್ಯಾಟ್ರಿಕ್ ಫರ್ಹಾರ್ಟ್ ಅವರ ಪ್ರತ್ಯೇಕ ಪ್ರಕರಣವೇ ಇದಕ್ಕೆಲ್ಲಾ ಮೂಲಕಾರಣವಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ತಂಡದ ಪ್ರತೀ ಆಟಗಾರರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಬಿಸಿಸಿಐ ಮೂಲವು ಸೋಮವಾರ ತಿಳಿಸಿದೆ.

    ಈಗಾಗಲೇ ತಂಡದ ಮತ್ತೋರ್ವ ಸಹಾಯಕ ಸಿಬ್ಬಂದಿಯ ಸದಸ್ಯನಿಗೆ ಕೊರೊನಾದ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಆರ್‌ಟಿಪಿಸಿಆರ್ ಫಲಿತಾಂಶಗಳಿಗೆ ಕಾಯಲಾಗುತ್ತಿದೆ. ಐಪಿಎಲ್‍ನ ಎಲ್ಲಾ ತಂಡಗಳು ಪುಣೆಯ ಕಾನ್ರಾಡ್ ಹೋಟೆಲ್‍ನಲ್ಲಿ ಉಳಿದುಕೊಂಡಿವೆ. ಹೋಟೆಲ್‍ನಲ್ಲಿ ಬಿಸಿಸಿಐ ಕೋವಿಡ್ ಸಲುವಾಗಿ ಬಯೋ ಬಬಲ್ ಅನ್ನು ರಚಿಸಿದೆ. ದೆಹಲಿ ತಂಡವು ಇವತ್ತಿಗಾಗಲೇ ಪುಣೆಯಲ್ಲಿರಬೇಕಾಗಿತ್ತು. ಆದರೆ ಕೋವಿಡ್‍ನಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

  • ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಅಬುಧಾಬಿ: ಐಪಿಎಲ್ ಆರಂಭದಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್‍ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದಾರೆ.

    ಕಳೆದ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುವ ವೇಳೆ ಹೊಸ ಶೂ ಧರಿಸಿದ್ದ ಕಾರಣ ಅವರ ಪಾದಕ್ಕೆ ಗಾಯವಾಗಿತ್ತು. ಈಗ ಇದೇ ಸಮಸ್ಯೆಯಿಂದ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದು, ಹೈದರಾಬಾದ್ ತಂಡಕ್ಕೆ ಆರಂಭಿಕ ಹಿನ್ನೆಡೆಯಾಗಿದೆ.

    ಈ ವಿಚಾರವಾಗಿ ತನ್ನ ಅಧಿಕೃತ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಿಚೆಲ್ ಮಾರ್ಷ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಅವರು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ. ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಜೇಸನ್ ಹೋಲ್ಡರ್ ಅವರು ಅವರ ಜಾಗಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ.

    ಸೋಮವಾರ ನಡೆದ ಆರ್‍ಸಿಬಿ ವಿರುದ್ಧ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರು ಐದನೇ ಓವರ್ ಬೌಲಿಂಗ್ ಮಾಡಿದ್ದರು. ಈ ಓವರಿನ ಎರಡನೇ ಬಾಲ್ ಎಸೆದಾಗ ಫಿಂಚ್ ಅವರು ಅದನ್ನು ನೇರವಾಗಿ ಹೊಡೆದರು, ಈ ವೇಳೆ ಇದನ್ನು ತಡೆಯಲು ಹೋಗಿ ಮಾರ್ಷ್ ಅವರು ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ನಂತರವೂ ಕೂಡ ಎರಡು ಬಾಲ್ ಬೌಲ್ ಮಾಡಿದ ಮಾರ್ಷ್ ನಂತರ, ಪಾದದ ನೋವಿನಿಂದ ಮೈದಾನದಿಂದ ಹೊರಬಂದಿದ್ದರು.

    ಕೇವಲ ನಾಲ್ಕು ಬಾಲ್ ಬೌಲ್ ಮಾಡಿ ಮಾರ್ಷ್ ಹೊರಬಂದರು, ಇದಾದ ನಂತರ ವಿಜಯ್ ಶಂಕರ್ ಅವರು ಉಳಿದ ಎರಡು ಬಾಲನ್ನು ಹಾಕಿದ್ದರು. ನಂತರ ಹೈದರಾಬಾದ್ ಬ್ಯಾಟಿಂಗ್ ವೇಳೆ ಕೂಡ ಗಾಯವಾಗಿದ್ದರೂ ಮಿಚೆಲ್ ಮಾರ್ಷ್ ತಂಡಕ್ಕಾಗಿ ಬ್ಯಾಟಿಂಗ್ ಬೀಸಲು ಬಂದಿದ್ದರು. ಆದರೆ ಮೊದಲ ಬಾಲಿನಲ್ಲೇ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ನಿಲ್ಲಲೂ ಆಗದ ಸ್ಥಿತಿಯಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಬ್ಯಾಟಿಂಗ್ ಮಾಡಲು ಬಂದ ಮಾರ್ಷ್‍ಗೆ ಅಪಾರ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿತ್ತು.

  • ಗೋಡೆಗೆ ಪಂಚ್ ಕೊಟ್ಟು ಆಸ್ಪತ್ರೆ ಸೇರಿದ ಆಸೀಸ್ ಕ್ರಿಕೆಟರ್

    ಗೋಡೆಗೆ ಪಂಚ್ ಕೊಟ್ಟು ಆಸ್ಪತ್ರೆ ಸೇರಿದ ಆಸೀಸ್ ಕ್ರಿಕೆಟರ್

    ಪರ್ತ್: ಇತ್ತೀಚೆಗೆ ನಡೆದ ಆ್ಯಶಸ್ ಟೆಸ್ಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ 5 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದ ಆಸೀಸ್ ಆಟಗಾರ ಮಿಚೆಲ್ ಮಾರ್ಷ್, ಸ್ವತಃ ಮಾಡಿದ ಎಡವಟ್ಟಿನಿಂದ ಆಸ್ಪತ್ರೆ ಸೇರಿದ್ದಾರೆ.

    ಶೆಫಿಲ್ಡ್ ಶೀಲ್ಡ್ ಟೂರ್ನಿಯ ಭಾಗವಾಗಿ ವೆಸ್ಟರ್ನ್ ಆಸ್ಟೇಲಿಯಾ ತಂಡದ ನಾಯಕತ್ವ ವಹಿಸಿಕೊಂಡಿರುವ ಮಿಚೆಲ್ ಮಾರ್ಷ್, ಪರ್ತ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ಧ ಅರ್ಧ ಶತಕ ಗಳಿಸಿ ಮಿಂಚಿದ್ದರು. ಆದರೆ ಪಂದ್ಯ ಅಂತಿಮವಾಗಿ ಡ್ರಾದಲ್ಲಿ ಅಂತ್ಯವಾಗಿತ್ತು.

    ಪಂದ್ಯ ಡ್ರಾ ಆದ ಅಸಮಾಧಾನದಿಂದ ಆಟಗಾರರ ಕೊಠಡಿಗೆ ತೆರಳಿದ್ದ ಮಾರ್ಷ್ ತನ್ನ ಬಲಗೈಯಿಂದ ಗೋಡೆಗೆ ಪಂಚ್ ನೀಡಿದ್ದು, ಪರಿಣಾಮ ಅವರ ಕೈಗೆ ತೀವ್ರ ಪೆಟ್ಟಾಗಿತ್ತು. ನೋವಿನಿಂದ ಬಳಲುತ್ತಿದ್ದ ಮಾರ್ಷ್ ರನ್ನು ತಂಡದ ಮ್ಯಾನೇಜ್‍ಮೆಂಟ್ ಆಸ್ಪತ್ರೆಗೆ ದಾಖಲು ಮಾಡಿದೆ.

    ಮಾರ್ಷ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಅವರ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣದಿಂದ ಸದ್ಯ ಅವರು ಟೂರ್ನಿಯ ಕೆಲ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ವಕ್ತಾರರು, ಮಾರ್ಷ್ ಮುಂದಿನ ಆಡುತ್ತಾರಾ ಎಂಬ ಬಗ್ಗೆ ವೈದ್ಯರ ಸಲಹೆಗೆ ಕಾದು ನೋಡುತ್ತಿದ್ದೇವೆ. ಅವರಿಗೆ ಆಗಿರುವ ಗಾಯದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಲು ಇನ್ನು ಕೆಲ ಸಮಯದ ಬೇಕಿದೆ ಎಂದಿದ್ದಾರೆ.

    ಈಗಾಗಲೇ ಹಲವು ಬಾರಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಮಾರ್ಷ್ ಇತ್ತೀಚೆಗಷ್ಟೇ ಕಮ್ ಬ್ಯಾಕ್ ಮಾಡಿದ್ದರು. ಅಲ್ಲದೇ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಈ ನಡುವೆಯೇ ಸ್ವಂತ ತಪ್ಪಿನಿಂದ ತಂಡದಿಂದ ಹೊರಗುಳಿಯುವ ಸ್ಥಿತಿಗೆ ತಲುಪಿದ್ದಾರೆ.