Tag: ಮಿಗ್-17 ಹೆಲಿಕಾಪ್ಟರ್

  • ಮಿಗ್-17 ಹೆಲಿಕಾಪ್ಟರ್ ಪತನ ದೊಡ್ಡ ತಪ್ಪು, ಮುಂದೆ ಈ ರೀತಿ ಆಗಲ್ಲ- ಐಎಎಫ್ ಮುಖ್ಯಸ್ಥ ಭದೌರಿಯಾ

    ಮಿಗ್-17 ಹೆಲಿಕಾಪ್ಟರ್ ಪತನ ದೊಡ್ಡ ತಪ್ಪು, ಮುಂದೆ ಈ ರೀತಿ ಆಗಲ್ಲ- ಐಎಎಫ್ ಮುಖ್ಯಸ್ಥ ಭದೌರಿಯಾ

    ನವದೆಹಲಿ: ಜಮ್ಮು-ಕಾಶ್ಮೀರದ ಬದ್ಗಾಮ್ ಪ್ರದೇಶದಲ್ಲಿ ಫೆಬ್ರವರಿ 27ರಂದು ನಡೆದ ಮಿಗ್-17 ಹೆಲಿಕಾಪ್ಟರ್ ಅಪಘಾತವು ವಾಯುಪಡೆಯ ದೊಡ್ಡ ತಪ್ಪು ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಮುಖ್ಯಸ್ಥ ರಾಕೇಶ್ ಕುಮಾರ್ ಭದೌರಿಯಾ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ವಾಯು ಪಡೆಯ ಮುಖ್ಯಸ್ಥ ಭದೌರಿಯಾ, ನ್ಯಾಯಾಲಯವು ವಿಚಾರಣೆ ಪೂರ್ಣಗೊಂಡಿದೆ ಮತ್ತು ನಮ್ಮ ಕ್ಷಿಪಣಿ ನಮ್ಮದೇ ಹೆಲಿಕಾಪ್ಟರ್ ಅನ್ನು ಹೊಡೆದಿದ್ದು ನಮ್ಮ ತಪ್ಪು. ಈ ಸಂಬಂಧ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇದು ನಮ್ಮ ದೊಡ್ಡ ತಪ್ಪು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಜೊತೆಗೆ ಭವಿಷ್ಯದಲ್ಲಿ ಅಂತಹ ಅನಾಹುತ ಪುನರಾವರ್ತಿಸುವುದಿಲ್ಲವೆಂದು ಖಚಿತಪಡಿಸುತ್ತೇವೆ ಎಂದರು. ಇದನ್ನೂ ಓದಿ: ಅಂತ್ಯಕ್ರಿಯೆಯ ವೇಳೆ ಕಲ್ಲಿನಂತೆ ನಿಂತ್ರು ಹುತಾತ್ಮ ಪೈಲಟ್ ಸಿದ್ದಾರ್ಥ್ ಪತ್ನಿ

    ರಫೇಲ್ ಮತ್ತು ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಭದೌರಿಯಾ ತಿಳಿಸಿದರು. ಇದೇ ವೇಳೆ ಬಾಲಾಕೋಟ್ ದಾಳಿಗೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿದರು.

    ಭಾರತೀಯ ವಾಯುಪಡೆ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಬಾಲಾಕೋಟ್‍ನ ಉಗ್ರರ ನೆಲೆಯ ಮೇಲೆ ದಾಳಿ ಮಾಡಿತ್ತು. ಪಾಕಿಸ್ತಾನ ಪ್ರತಿ ದಾಳಿ ನಡೆಸಬಹುದು ಎಂಬ ಉದ್ದೇಶದಿಂದ ಗಸ್ತು ತಿರುಗುತ್ತಿದ್ದ ಮಿಗ್-17 ಹೆಲಿಕಾಪ್ಟರ್ ಪತನಗೊಂಡು ಬದ್ಗಾಮ್ ಪ್ರದೇಶದಲ್ಲಿ ಬಿದ್ದಿತ್ತು. ಈ ದುರಂತದಲ್ಲಿ ಪೈಲೆಟ್ ಸಿದ್ಧಾರ್ಥ್ ವಶಿಷ್ಠ ಸೇರಿದಂತೆ 6 ಜನರು ಹುತಾತ್ಮರಾಗಿದ್ದರು.

    ಹೆಲಿಕಾಪ್ಟರ್‌‌ನಲ್ಲಿರುವ ‘ಫ್ರೆಂಡ್ ಅಥವಾ ವೈರಿಗಳ ಗುರುತಿಸುವಿಕೆ’ (ಐಎಫ್‍ಎಫ್) ವ್ಯವಸ್ಥೆಯನ್ನು ಸ್ವಿಚ್ ಆಫ್ ಮಾಡಲಾಗಿತ್ತು. ನಿರ್ವಹಣಾ ಘಟಕದ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ ಸಿಬ್ಬಂದಿ ನಡುವೆ ಸಂವಹನ ಮತ್ತು ಸಮನ್ವಯದಲ್ಲಿ ಪ್ರಮುಖ ಅಂತರ ಕಂಡುಬಂದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಉನ್ನತ ಮಟ್ಟದ ತನಿಖೆಯಲ್ಲಿ ಅಪಘಾತಕ್ಕೆ ಕನಿಷ್ಠ ನಾಲ್ಕು ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಿದೆ.