ಹುಬ್ಬಳ್ಳಿ: ನಗರದಲ್ಲಿ ಇಂದು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಚಿವ ಆರ್ ಅಶೋಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹುಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುವ ಮುನ್ನ ಕಂದಾಯ ಸಚಿವ ಅಧಿಕಾರಿಗಳ ಬಳಿ ಸಚಿವರು ಮಾಹಿತಿ ಕೇಳಿದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಚಿವರಿಗೆ ಸಮರ್ಪಕವಾದ ಮಾಹಿತಿ ನೀಡಲಿಲ್ಲ. ಹೀಗಾಗಿ ಅಧಿಕಾರಿಗಳ ಬಳಿ ಮಾಹಿತಿ ಪಡೆಯಲು ಸಚಿವ ಅಶೋಕ್ ಸುಮಾರು ಅರ್ಧ ಗಂಟೆ ಕಾಲ ಕಾದು ಬಳಿಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಕ್ಯಾಮೆರಾ ಕಣ್ಣು ತಪ್ಪಿಸಿ ಪ್ರವಾಸಿ ಮಂದಿರದಲ್ಲಿ ವಾಕಿಂಗ್ ಮಾಡುತ್ತಲೇ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸರಿಯಾದ ಮಾಹಿತಿ ನೀಡದ ಜಂಟಿ ಕೃಷಿ ನಿರ್ದೇಶಕ ಅಬೀದ್‍ರಿಗೆ, ಸರಿಯಾದ ಮಾಹಿತಿ ತೆಗೆದುಕೊಂಡು ಬರಬೇಕು. ನೋಡು ನಿನ್ನ ಫೋನ್ ಹೇಗಿದೆ. ನನ್ನ ಬಳಿ ಹೇಗಿದೆ ಫೋನ್ ಎಂದು ತಮ್ಮ ಬಳಿಯಿರುವ ಸಾದಾ ಫೋನ್ ತೋರಿಸುವ ಮೂಲಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಪ್ರವಾಹ ಪರಿಸ್ಥಿತಿ ನಿರ್ವಹಣೆ ಹಾಗೂ ಪರಿಹಾರ ವಿತರಣೆಗೆ ಕೇಂದ್ರ ಸರ್ಕಾರ ನಿಯಮಾವಳಿಗಳ ಬಗ್ಗೆ ಅಧಿಕಾರಿಗಳ ಬಳಿ ದಾಖಲೆ, ಮಾಹಿತಿ ಕೇಳಿದರು. ಈ ವೇಳೆ ಅಧಿಕಾರಿಗಳು ಇಲ್ಲ ಎಂದಾಗ ಸಚಿವ ಅಶೋಕ್ ಎಲ್ಲ ತೆಗೆದುಕೊಂಡು ಬರಬೇಕು, ಸರಿಯಾದ ಮಾಹಿತಿ ಇಟ್ಟುಕೊಳ್ಳಬೇಕು ಎಂದು ಗರಂ ಆದರು. ಈ ವೇಳೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸಚಿವ ಅಶೋಕರಿಗೆ ಮಾಹಿತಿ ನೀಡಿ ಸುದ್ದಿಗೋಷ್ಠಿಗೆ ಕರೆದುಕೊಂಡು ಹೋದರು.
ನವದೆಹಲಿ: ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ ಭಾರತದ ಕೈಸೇರಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಡೆಗೆ ಮಹತ್ವದ ಮುನ್ನಡೆ ಲಭಿಸಿದೆ.
ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದಿರುವ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಿಕೊಳ್ಳಲಿದ್ದು, ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿದೆ.
ಭಾರತ ಸೇರಿದಂತೆ ವಿಶ್ವದ 75 ರಾಷ್ಟ್ರಗಳು ತಮ್ಮ ತಮ್ಮ ದೇಶಗಳ ಜನರು ಸ್ವಿಸ್ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಲು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಮಾಹಿತಿಯನ್ನು ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ವ್ಯವಸ್ಥೆ ಅಡಿ ನೀಡಲಾಗಿದೆ. ಇದರಂತೆ ಭಾರತ ಮಾತ್ರವಲ್ಲದೇ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟೇಷನ್ (ಎಫ್ಟಿಎ) ಅಡಿ 75 ರಾಷ್ಟ್ರಗಳ ಒಟ್ಟು 3.1 ಮಿಲಿಯನ್ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಸ್ವಿಸ್ ಆಯಾ ದೇಶಗಳಿಗೆ ನೀಡಿದೆ.
ಸದ್ಯ ಮೊದಲ ಪಟ್ಟಿ ಲಭ್ಯವಾಗಿದ್ದು ಮುಂದಿನ ಪಟ್ಟಿಯನ್ನು ನಿಮಯಗಳ ಅನ್ವಯ 2020 ಸೆಪ್ಟೆಂಬರ್ ನಲ್ಲಿ ನೀಡುವುದಾಗಿ ಎಫ್ಟಿಎ ವಕ್ತಾರರು ತಿಳಿಸಿದ್ದಾರೆ.
ಭಾರತಕ್ಕೆ ಇದೇ ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಲಭ್ಯವಾಗಿದ್ದು, ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟಕ್ಕೆ ಬಹುದೊಡ್ಡ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ವಿಸ್ ನೀಡಿರುವ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಪಟ್ಟಿಯಲ್ಲಿ ನಿಯಮಗಳ ಅನ್ವಯ ತೆರಿಗೆ ಪಾವತಿ ಮಾಡಿ ಉದ್ಯಮ ನಡೆಸಲು ತೆರಳಿದ ವ್ಯಕ್ತಿಗಳ ಮಾಹಿತಿಯೂ ಇದ್ದು, ಸರ್ಕಾರ ಈ ಮಾಹಿತಿಯನ್ನು ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಿ ಮುಂದಿನ ಕ್ರಮಗೊಳ್ಳಬೇಕಿದೆ.
ಸದ್ಯ ಲಭಿಸಿರುವ ಪಟ್ಟಿಯಲ್ಲಿ ಹಣಕಾಸಿನ ಸಂಸ್ಥೆಯ ಹೆಸರು, ಗುರುತಿನ ಚೀಟಿ ಮಾಹಿತಿ, ಖಾತೆಯ ಹಣಕಾಸಿನ ವಿವರ, ಹೆಸರು, ವಿಳಾಸ, ರಾಜ್ಯ ಮತ್ತು ತೆರಿಗೆ ಸೇರಿದಂತೆ ಖಾತೆಯ ಹಣಕಾಸಿನ ಸ್ಥಿತಿ, ಖಾತೆಯಲ್ಲಿನ ಹಣದ ಮೊತ್ತ ಹಾಗೂ ಆದಾಯದ ಕುರಿತ ಮಾಹಿತಿಗಳನ್ನು ನೀಡಲಾಗಿದೆ. ಅಲ್ಲದೇ ಸದ್ಯ ಬ್ಯಾಂಕ್ನಲ್ಲಿ ಸಕ್ರಿಯವಾಗಿರುವ ಹಾಗೂ 2018 ರಲ್ಲಿ ರದ್ದಾದ ಖಾತೆಗಳ ಮಾಹಿತಿಯನ್ನು ನೀಡಲಾಗಿದೆ.
ಸ್ವಿಜರ್ಲೆಂಡ್ ಸರ್ಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹಾಗೂ ಗಡಿಯಾಚೆಗಿನ ತೆರಿಗೆಯನ್ನು ತಪ್ಪಿಸಲು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಸ್ವಿಜ್ ವಿದೇಶಾಂಗ ಸಚಿವಾಲಯ ಹೇಳಿದೆ.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಪ್ಪುಹಣ ವಾಪಸ್ ತರಲಾಗುತ್ತದೆ ಎಂದಿದ್ದರು. ಆದರೆ ಈ ಕುರಿತು ಮೋದಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. 2018ರ ಚುನಾವಣೆಯ ಸಂದರ್ಭದಲ್ಲಿ ಈ ಅಂಶವನ್ನೇ ವಿಪಕ್ಷಗಳು ಅಸ್ತ್ರವಾಗಿ ಬಳಕೆ ಮಾಡಿದ್ದರು. ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಆರೋಪ ಕೂಡ ಕೇಳಿ ಬಂದಿತ್ತು.
ಮೈಸೂರು: ಮಾಧ್ಯಮಗಳಿಗೆ ಮಾಹಿತಿ ನೀಡಿದರೆ ಅಮಾನತು ಮಾಡುತ್ತೇವೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಕೆ.ಟಿ. ಬಾಲಕೃಷ್ಣ ಲಿಖಿತ ರೂಪದಲ್ಲಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ರಾಜ್ಯ ಸರ್ಕಾರದ ಮಾಧ್ಯಮ ನಿಮಯದ ಪ್ರಕಾರ ಎಸ್ಪಿ, ಪೊಲೀಸ್ ಆಯುಕ್ತರು ಮತ್ತು ವಲಯ ಐಜಿಪಿಯವರು ಅಥವಾ ಇವರಿಂದ ಅನುಮೋದನೆಗೊಂಡ ನೋಡೆಲ್ ಅಧಿಕಾರಿಗಳು ಮಾತ್ರ ಮಾಧ್ಯಮಕ್ಕೆ ಮಾಹಿತಿ ಕೊಡಬೇಕು.
ಈ ನಿಯಮದ ಪ್ರಕಾರ ಮೈಸೂರು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅನುಮತಿ ಇಲ್ಲದೆ ಇಲಾಖೆಯ ಯಾವುದೇ ವಿವರಗಳನ್ನು ಮಾಧ್ಯಮಗಳಿಗೆ ನೀಡುವಂತಿಲ್ಲ. ಒಂದು ವೇಳೆ ನೀಡಿದರೆ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತು ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಪೊಲೀಸ್ ಆಯುಕ್ತರ ಈ ಆದೇಶದಿಂದ ಇಡೀ ಪೊಲಿಸ್ ಇಲಾಖೆಯೇ ಬೆಸ್ತು ಬಿದ್ದಿದೆ.
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು ಈ ಯೋಜನೆಗೆ ಯಾವೆಲ್ಲ ರೈತರು ಅರ್ಹರಾಗುತ್ತಾರೆ? ಕೊನೆಯ ದಿನ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅರ್ಹತೆಗಳು ಏನು?
2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಪಿಎಂ-ಕಿಸಾನ್ ಯೋಜನೆಗೆಂದು ಕೇಂದ್ರ ಸರ್ಕಾರ pmkisan.nic.in ವೆಬ್‍ಸೈಟ್ ತೆರೆದಿದೆ. ಈ ಯೋಜನೆಗೆ ಅರ್ಹತೆ ಪಡೆದ ರೈತರು ಈ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಪಿಎಂ-ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು. ಆನ್‍ಲೈನ್ ಮೂಲಕ ಈ ವೆಬ್‍ಸೈಟ್ ನಲ್ಲಿ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ರೈತರು ತಮ್ಮ ಹೆಸರನ್ನು ಹಾಗೂ ವಿವರಗಳನ್ನು ನೊಂದಾಯಿಸಲು ಫೆ. 25 ಕೊನೆಯ ದಿನಾಂಕವಾಗಿದೆ.
ಯಾವ ದಾಖಲೆಗಳು ಬೇಕು?
ಸರ್ಕಾರದಿಂದ ಅನುಮೋದಿಸಿದ ಐಡಿ ಪುರಾವೆಗಳು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ, ಕೃಷಿ ಭೂವಿಯ ದಾಖಲೆಗಳು ರೈತರ ಬಳಿ ಇರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.
ಈ ಯೋಜನೆಯಲ್ಲಿ ಗ್ರಾಮೀಣ ಕೃಷಿ ಭೂಮಿ ಅಥವಾ ನಗರ ಕೃಷಿ ಭೂಮಿಯೆಂದು ತಾರತಮ್ಯ ಮಾಡುವುದಿಲ್ಲ. ಗ್ರಾಮೀಣ ಹಾಗೂ ನಗರ ವ್ಯಾಪ್ತಿಗೆ ಬರುವ ಎರಡು ಕೃಷಿ ಭೂಮಿಗಳ ರೈತರು ಈ ಯೋಜನೆಗೆ ಅರ್ಹರು. ನಗರದಲ್ಲಿರುವ ಕೃಷಿ ಭೂಮಿಯನ್ನು ಪ್ರಸ್ತುತ ಈಗ ಕೃಷಿಗೆ ಚಟುವಟಿಕೆಗೆ ಬಳಸುತ್ತಿದ್ದರೆ ಮಾತ್ರ ಯೋಜನೆಯ ಫಲವನ್ನು ಪಡೆಯಬಹುದು.
ಎಷ್ಟು ಹಣ ಬರುತ್ತದೆ?
2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ 6 ಸಾವಿರ ರೂ. ಮೊತ್ತವನ್ನು 2 ಸಾವಿರ ರೂ. ನಂತೆ ಮೂರು ಕಂತುಗಳಲ್ಲಿ ಜಮೆ ಮಾಡುವ `ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಕರೆಯಲಾಗುವ ಯೋಜನೆಯನ್ನು ಹಣಕಾಸು ಸಚಿವ ಪಿಯೂಶ್ ಗೋಯಲ್ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದರು.
ಈ ಯೋಜನೆಯಿಂದ 12 ಕೋಟಿಯಷ್ಟು ಸಣ್ಣ ಮತ್ತು ಬಡರೈತರಿಗೆ ಪ್ರಯೋಜನವಾಗಲಿದ್ದು, 2019-20ರ ಸಾಲಿನಲ್ಲಿ ಸರ್ಕಾರಕ್ಕೆ 75 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಕೃಷಿ ಸಂಬಂಧಿ ಇತರ ಚಟುವಟಿಕೆಗಳಿಗೆ ಈ ಹಣ ನೆರವಾಗಲಿದೆ. ರೈತರು ಗೌರವಯುತ ಜೀವನ ಸಾಗಿಸಲು ಇದರಿಂದ ಸಾಧ್ಯವಾಗುತ್ತದೆ. 2018-19ರ ಸಾಲಿನಲ್ಲಿ ಪರಿಷ್ಕೃತ ಅಂದಾಜು ವಿಭಾಗದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ. 2018ರ ಡಿಸೆಂಬರ್ ಪೂರ್ವಾನ್ವಯದಂತೆ ಈ ಯೋಜನೆ ಜಾರಿಯಾಗಲಿದೆ ಎಂದು ಗೋಯಲ್ ತಿಳಿಸಿದ್ದರು.
ಚುನಾವಣೆಗೆ ಮೊದಲು ಬೀಳುತ್ತೆ ಹಣ:
ಲೋಕಸಭಾ ಚುನಾವಣೆಯ ಒಳಗಡೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4 ಸಾವಿರ ರೂ. ಜಮೆಯಾಗುವ ಸಾಧ್ಯತೆಯಿದೆ. ಈ ಯೋಜನೆ ಅನ್ವಯ ಮೊದಲ ಕಂತನ್ನು ಮಾರ್ಚ್ 31ರ ಒಳಗಡೆ ಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಇದರ ಜೊತೆಯಲ್ಲೇ ಎರಡನೇ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ಒಳಗಡೆ ಜಮೆ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಕೃಷಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ರೈತರ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದೆ.
ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಗೆ 51 ಮಹಿಳೆಯರು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದ ಕೇರಳ ಸರ್ಕಾರ ಇಂದು ಯು ಟರ್ನ್ ಹೊಡೆದಿದ್ದು, ದೇವಾಲಯಕ್ಕೆ ಇಬ್ಬರು ಮಾತ್ರ ಪ್ರವೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.
ಕೇರಳ ಸರ್ಕಾರ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದುವರೆಗೂ ಇಬ್ಬರು ಮಹಿಳೆಯರು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರದಿ ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ನೀಡಿದ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಯ್ಯಪ್ಪ ಸನ್ನಿಧಿಗೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ವೇಳೆ ಶ್ರೀಲಂಕಾ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳ ಪೊಲೀಸರು ಅಯ್ಯಪ್ಪ ಸನ್ನಿಧಿ ದರ್ಶನ ಪಡೆಯಲು ಇಷ್ಟಪಟ್ಟ ಮಹಿಳೆಯರಿಗೆ ಬಿಗಿ ಭದ್ರತೆ ನೀಡುವುದಾಗಿ ತಿಳಿಸಿದರು. ಇದರಂತೆ ಜನವರಿಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದರು.
ಈ ಹಿಂದ ಕೇರಳ ಸರ್ಕಾರದ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿ 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ಆದರೆ ಈ ವರದಿಯನ್ನು ಘನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಮಾಹಿತಿಯಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ದರ್ಶನ ಪಡೆದಿದ್ದಾಗಿ ವಿವರಿಸಲಾಗಿತ್ತು. ಅಲ್ಲದೇ ದೇಗುಲ ಪ್ರವೇಶ ಮಾಡಲು ಸುಮಾರು 16 ಸಾವಿರ ಮಂದಿ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದರು ಹಾಗೂ ಆದರಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಸಂಖ್ಯೆ 7,500 ಇತ್ತು ಎಂದು ಮಾಹಿತಿಯಲ್ಲಿ ನೀಡಲಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮಹಿಳೆಯಲ್ಲಿ 51 ಮಂದಿ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ದೊರೆಯುವ ದೇವಾಲಯದ ಟಿಕೆಟ್ ಪಡೆದು, ಆಧಾರ್ ಮಾಹಿತಿ ನೀಡಿಯೇ ದರ್ಶನ ಪಡೆದಿದ್ದಾರೆ. ಆದರೆ ಭಕ್ತರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.
ಜೈಪುರ್: ರಾಜಸ್ಥಾನದ ಇಬ್ಬರು ಆರ್‌ಟಿಐ ಕಚೇರಿಗೆ ಪ್ರಶ್ನೆಯೊಂದಕ್ಕೆ ಉತ್ತರಬೇಕೆಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಪೋಸ್ಟ್ ಮೂಲಕ ಬಳಿಸಿದ್ದ ಕಾಂಡೋಮ್ ಗಳು ಬಂದಿದ್ದು, ಇದರಿಂದ ಇಬ್ಬರು ಶಾಕ್ ಆಗಿದ್ದಾರೆ.
ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಎಂಬವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಇವರಿಬ್ಬರು ರಾಜಸ್ಥಾನದ ಹನುಮಾಂಗಢ್ ಜಿಲ್ಲೆಯ ಭದ್ರಾ ತೆಹ್ಸಿಲ್ ನಲ್ಲಿನ ಚನಿ ಬಡಿ ನಿವಾಸಿಗಳಾಗಿದ್ದು, ಏಪ್ರಿಲ್ 16 ರಂದು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಇಬ್ಬರು 2001 ರಿಂದ ಕೈಗೊಂಡ ಅಭಿವೃದ್ಧಿ ಯೋಜನೆಗಳ ವಿವರಗಳು ಬೇಕೆಂದು ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗೂ ಉತ್ತರವಾಗಿ ಬಳಸಿದ ಕಾಂಡೋಮ್‍ಗಳನ್ನು ರಾಜ್ಯ ಮಾಹಿತಿ ಆಯೋಗದ ನಿರ್ದೇಶನದಲ್ಲಿ ಗ್ರಾಮ ಪಂಚಾಯತ್ ಅವರು ಕಳುಹಿಸಿದ್ದಾರೆ.
ನಾನು ಮೊದಲ ಎನ್ವಲಪ್ ತೆಗೆದು ನೋಡಿದಾಗ ಅದರಲ್ಲಿ ಹಳೆಯ ಪತ್ರಿಕೆಯಿಂದ ಸುತ್ತವರಿದಿದ್ದ ಕಾಂಡೋಮ್ ಗಳು ಪತ್ತೆಯಾದವು. ನಾನು ತುಂಬಾ ಆಶಯದಿಂದ ಕೇಳಿದ್ದ ಮಾಹಿತಿ ಬಂದಿರುತ್ತದೆ ಅಂದುಕೊಂಡಿದ್ದೆ. ಆದರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು. ಬಳಿಕ ಕೆಲವು ಪ್ರಮುಖ ಗ್ರಾಮದ ಸದಸ್ಯರ ಉಪಸ್ಥಿತಿಯಲ್ಲಿ ಮತ್ತೊಬ್ಬರಿಗೆ ಬಂದಿದ್ದ ಎನ್ವಲಪ್ ತೆಗೆಯಲಾಗಿದೆ. ಅದರಲ್ಲೂ ಇದೇ ರೀತಿಯಾಗಿ ಹಳೆಯ ಪತ್ರಿಕೆಯಲ್ಲಿ ಮುಚ್ಚಿ ಬಳಸಿದ ಕಾಂಡೋಮ್ ಕಳುಹಿಸಿದ್ದಾರೆ. ಈ ಬಾರಿ ಪ್ಯಾಕ್ ತೆಗೆದು ನೋಡುವಾಗ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವಿಕಾಸ್ ಚೌಧರಿ ತಿಳಿಸಿದ್ದಾರೆ.
ಈ ಘಟನೆಯಿಂದ ವಿಕಾಸ್ ಚೌಧರಿ ಖಿನ್ನತೆಯಿಂದ ಮಾನಸಿಕವಾಗಿ ಬಳಲುತ್ತಿದ್ದಾರೆ. ಪಂಚಾಯತ್ ಹೇಗೆ ಕೆಲಸ ಮಾಡುತ್ತಿದೆ? ಒಂದು ನಾಗರಿಕ ಸಂಸ್ಥೆಯಾಗಿ ಈ ರೀತಿ ಉತ್ತರ ನೀಡಿದೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ. ಆರ್‌ಟಿಐ ಪ್ರತ್ಯುತ್ತರವನ್ನು ಸ್ವೀಕರಿಸಿದ ನಂತರ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಲಾಲ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಷದ್‍ನ CEO ನವನೀತ್ ಕುಮಾರ್, ಅಪರಿಚಿತ ವ್ಯಕ್ತಿಗಳು ಈ ರೀತಿ ಆರ್‌ಟಿಐ ಅಡಿ ಉತ್ತರವಾಗಿ ಕಾಂಡೋಮ್ ಗಳನ್ನು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಇದು ವಿಷಾದನೀಯ ಮತ್ತು ಕಾನೂನುಬಾಹಿರವಾದ ಕಾರ್ಯವಾಗಿದ್ದು, ಶೀಘ್ರವೇ ಈ ಕುರಿತು ತನಿಖೆ ನಡೆಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ತುಮಕೂರು: ಸಿದ್ದಗಂಗಾ ಶ್ರೀಗಳಿಗೆ ತೀವ್ರವಾಗಿ ನಿಶ್ಯಕ್ತಿ ಕಾಡುತ್ತಿರುವ ಪರಿಣಾಮ ಅವರಿಗೆ ಉಸಿರಾಡಲು ತೊಂದರೆಯಾಗುತ್ತಿದೆ ಆದ್ದರಿಂದ ಶ್ರೀಗಳ ಆರೋಗ್ಯ ಸುಧಾರಿಸುವವರೆಗೆ ಮಠಕ್ಕೆ ಶಿಫ್ಟ್ ಮಾಡಲ್ಲ ಅಂತ ಡಾ. ಪರಮೇಶ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳಿಗೆ ನಿಶಕ್ತಿ ಕಾಡುತ್ತಿದೆ. ಹಾಗಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಾರೆ. ಕೇವಲ ಅರ್ಧಗಂಟೆಕಾಲ ಅಷ್ಟೇ ಶ್ರೀಗಳು ಸಹಜವಾಗಿ ಉಸಿರಾಡುತ್ತಿದ್ದಾರೆ. ಬಳಿಕ ಪುನಃ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಶ್ರೀಗಳ ಶ್ವಾಸಕೋಶದ ಸೋಂಕು ಸಂಪೂರ್ಣ ಕಡಿಮೆಯಾಗಿದ್ದು, ಶ್ವಾಸಕೋಶದ ನೀರು ನಿನ್ನೆ ತೆಗೆದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವೂ 2.9 ಮಿಲಿ ಗ್ರಾಮ್‍ಗೆ ಏರಿಕೆಯಾಗಿದೆ. ನಿಶ್ಯಕ್ತಿ ಹೊರತುಪಡಿಸಿದರೆ ಬೇರೆ ಯಾವುದೇ ಏರುಪೇರು ಇಲ್ಲ. ಆದ್ರೆ ಸದ್ಯ ಸಿದ್ದಗಂಗಾ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡುವ ಯಾವುದೇ ಆಲೋಚನೆ ಇಲ್ಲ. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಡಾ. ಪರಮೇಶ್ ಸ್ಪಷ್ಟಪಡಿಸಿದರು.
80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ ರಸ್ತೆಗಳಿಗೆ ಇಳಿಯಲು ಸಿದ್ಧವಾಗಿದೆ. ಕಳೆದ ಗುರುವಾರ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಮೂರು ನೂತನ ಜಾವಾ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಬೈಕುಗಳು ತನ್ನ ಗತಕಾಲದ ವೈಭವವನ್ನೇ ಹೋಲುವ ರೀತಿಯಲ್ಲಿ ತಯಾರಾಗಿದೆ. ನೂತನ ಬೈಕುಗಳಾದ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಆವೃತ್ತಿಗಳು ಜಾವಾ ಪ್ರಿಯರ ನಿದ್ದೆಗೆಡಿಸಿದೆ.
ತನ್ನ ಹಳೆಯ ವಿನ್ಯಾಸದ ಹೋಲಿಕೆ:
ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಗಳಲ್ಲಿ ತನ್ನ ಹಳೆಯ ವಿನ್ಯಾಸವನ್ನೇ ಜಾವಾ ಕಂಪನಿ ಮುಂದುವರಿಸಿದೆ. ಪೆಟ್ರೋಲ್ ಟ್ಯಾಂಕ್, ಸ್ಪೀಡೋ ಮೀಟರ್, ಡ್ಯೂಮ್ ಕ್ಲಾಸಿಕ್ ಲುಕ್ ಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದೆ.
ಹಳೇ ಜಾವಾಕ್ಕಿಂತಲೂ ವೇಗ ಜಾಸ್ತಿ ತೂಕ ಕಡಿಮೆ:
ಜಾವಾದ ಹಳೆಯ 500 ಸಿಸಿ ಮಾದರಿಯಲ್ಲಿನ ವೇಗಕ್ಕಿಂತಲೂ 293 ಸಿಸಿ ಎಂಜಿನ್ನಿನ ವೇಗ ಹೆಚ್ಚಿದೆ. ನೂತನ ಬೈಕುಗಳಲ್ಲಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಜೊತೆಗೆ 6ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಒಟ್ಟಾರೆ ಬೈಕಿನ ತೂಕ ಹಳೆಯ ಬೈಕಿಗೆ ಹೋಲಿಸಿದರೆ ಕಡಿಮೆಯಿದೆ.
ಆನಂದ್ ಮಹೀಂದ್ರರವರ ಹುಟ್ಟುಹಬ್ಬ ಸೂಚಿಸುವ ಬೈಕ್ ದರ:
ಮಹೀಂದ್ರದ ಮಾಲೀಕರಾಗಿರುವ ಆನಂದ್ ಮಹೀಂದ್ರರ ಹುಟ್ಟು ಹಬ್ಬವನ್ನೇ ಹೋಲಿಕೆಯಾಗುವ ರೀತಿಯಲ್ಲಿ ಜಾವಾ 42 ಬೈಕಿನ ಬೆಲೆಯನ್ನು ನಿಗದಿಪಡಿಸಿದೆ. ಮತ್ತೊಮ್ಮೆ ಭಾರತದಲ್ಲಿ ಜಾವಾ ಬೈಕುಗಳನ್ನು ಪರಿಚಯಿಸಲು ಕಾರಣವಾಗಿರುವ ಆನಂದ್ ಅವರಿಗೆ ಜಾವಾ ಈ ಮೂಲಕ ಗೌರವ ಸೂಚಿಸಿದೆ. ಆನಂದ್ ಮಹೀಂದ್ರಾ 1955ರ ಮೇ 1(01/05/1955) ರಂದು ಜನಿಸಿದ್ದರು. ಹೀಗಾಗಿ ಜಾವಾ 42 ಬೈಕಿನ ಬೆಲೆಯನ್ನು 1.55 ಲಕ್ಷ ರೂಪಾಯಿ ನಿಗದಿಪಡಿಸಿದೆ.
ನೂತನ ಜಾವಾ ಪರ್ಫಾರ್ಮೆನ್ಸ್ ಹೆಚ್ಚು:
ಜಾವಾ 42 ಬೈಕ್ 170 ಕೆಜಿ ತೂಕದೊಂದಿಗೆ 27 ಬಿಎಚ್‍ಪಿ ಜೊತೆ 29 ಎನ್‍ಎಂ ಟಾರ್ಕ್ ಉತ್ಪಾದಿಸುವ ಮೂಲಕ 158.8 ಬಿಎಚ್‍ಪಿ ಶಕ್ತಿಯನ್ನು ಹೊಂದಿದೆ. ಬಜಾಜ್‍ನ ಆರ್‍ಎಸ್200 160 ಕೆಜಿ ಹೊಂದಿದ್ದು, 24.5 ಬಿಎಚ್‍ಪಿಯೊಂದಿಗೆ 149.3 ಶಕ್ತಿಯನ್ನು ಮಾತ್ರ ಉತ್ಪಾದಿಸುತ್ತದೆ. ಯಾವುದೇ ರಾಯಲ್ ಎನ್‍ಫೀಲ್ಡ್ ಬೈಕುಗಳು ಇಷ್ಟು ವೇಗವನ್ನು ಪಡೆಯುವುದಿಲ್ಲ. ಇದನ್ನೂ ಓದಿ: ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?
ಜಾವಾ ಹೆಸರು ಬದಲಿಸದ ಮಹೀಂದ್ರ:
ಭಾರತದಲ್ಲಿ ಹೆಸರು ಮಾಡಿದ್ದ ಜಾವಾವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿರುವ ಮಹೀಂದ್ರ ನೂತನ ಬೈಕುಗಳಲ್ಲಿ ತನ್ನ ಹೆಸರನ್ನೇ ನಮೂದಿಸದೇ, ಹಳೆಯ ಮಾದರಿಯ ಹೆಸರನ್ನೇ ನೂತನ ಬೈಕುಗಳಿಗೆ ಮುಂದುವರಿಸಿಕೊಂಡು ಬಂದಿದೆ. ಬಿಡುಗಡೆಯ ಸಂದರ್ಭದಲ್ಲಿ ಮಹೀಂದ್ರ ಕಂಪನಿಯ ಸಿಇಒ ಆನಂದ್ ಹಾಗೂ ಜಾವಾದ ಅನುಪಮ್ ಥರೇಜಾ ಇದೇ ಹೆಸರನ್ನು ಸೂಚಿಸಿದ್ದಾರೆ.
ರಾಯಲ್ ಎನ್‍ಫೀಲ್ಡ್ ನ ಮಾಜಿ ನೌಕರರೇ ನೂತನ ಜಾವಾದ ರುವಾರಿಗಳು:
ಜಾವಾದ ಮುಖ್ಯಸ್ಥರಾಗಿರುವ ಅನುಪಯ್ ಥರೇಜಾ ಸೇರಿದಂತೆ ಆಶಿಶ್ ಜೋಶಿಯವರನ್ನು ಒಳಗೊಂಡ ಅನೇಕರು ರಾಯಲ್ ಎನ್‍ಫೀಲ್ಡ್ ಕಂಪನಿಯ ಮಾಜಿ ನೌಕರರಾಗಿದ್ದಾರೆ. ಅಲ್ಲದೇ ಆಶಿಶ್ ಜೋಶಿಯವರು ಕ್ಲಾಸಿಕ್ ಮಾದರಿಯ ಬೈಕ್ ಬಿಡುಗಡೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿಕೊಂಡಿದ್ದವರು.
ವಿಂಟೇಜ್ ಜಾವಾದ ನೂತನ ಮಾದರಿಯೇ ಪೆರಾಕ್:
ಜಾವಾ ಪೆರಾಕ್ ಅತಿ ಕಡಿಮೆ ಬೆಲೆಯ ಬಾಬಾರ್ ಮಾದರಿ ಬೈಕುಗಳಾಗಿದೆ. ಇದಲ್ಲದೇ ಜಾವಾದ ವಿಂಟೇಜ್ ಮಾದರಿಯನ್ನು ಪೆರಾಕ್ ಹೋಲುತ್ತಿದೆ. ಈ ಮಾದರಿಯನ್ನು ಜಾವಾ ಕೇವಲ ಅನಾವರಣಗೊಳಿಸಿದೆ. ಆದರೆ ಈ ಮಾದರಿಯ ಬೈಕುಗಳು 2019ರ ವೇಳೆಗೆ ಗ್ರಾಹಕರ ಕೈ ಸೇರಲಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?
ಜಾವಾ ಮತ್ತೆ ಎಂಟ್ರಿ ಕೊಟ್ಟಿದ್ದು ಹೇಗೆ?
22 ವರ್ಷಗಳ ನಂತರ ಯೆಜ್ಡಿ ಜಾವಾ ಮೋಟಾರ್‍ಸೈಕಲ್ ಕಂಪನಿ, ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಮತ್ತೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ, ಉದ್ಯಮಿ ಅನುಪಮ್ ಥರೇಜಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೊಮನ್ ಇರಾನಿಯವರ ಮೂವರು ತಂಡದಿಂದ ಜಾವಾ ಮತ್ತೆ ಭಾರತದಲ್ಲಿ ಅಬ್ಬರಿಸಲು ಮುಂದಾಗಿದೆ. ಅನುಪಮ್ ಥರೇಜಾ 2005 ರಿಂದ 2008ರವರೆಗೆ ರಾಯಲ್ ಎನ್‍ಫೀಲ್ಡ್‍ನಲ್ಲಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಇದಾದ ನಂತರ ಅವರು ಜಾವಾದ ಬೈಕುಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಹಿತಿಗಳ ಪ್ರಕಾರ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯಲ್ಲಿ ಒಟ್ಟಾರೆ ಶೇ.60ರಷ್ಟು ಶೇರನ್ನು ಮಹೀಂದ್ರ ಕಂಪನಿ ಹೊಂದಿದ್ದರೆ, ಉಳಿದ ಷೇರನ್ನು ಅನುಪಮ್ ಹಾಗೂ ಇರಾನಿ ಹೊಂದಿದ್ದಾರೆ. ಜಾವಾ ಬೈಕುಗಳು ಮಹೀಂದ್ರಾ ಘಟಕಗಳಲ್ಲೇ ನಿರ್ಮಾಣವಾಗುತ್ತಿದ್ದು, ಎಲ್ಲಾ ಸಂಶೋಧನೆ ಹಾಗೂ ತಂತ್ರಜ್ಞಾನಗಳು ಮಹೀಂದ್ರದ ಅಡಿಯಲ್ಲೇ ಸಿದ್ಧವಾಗಿದೆ.
ನವದೆಹಲಿ: ಒಂದೂವರೆ ದಶಕಗಳ ವರೆಗೆ ಮಧ್ಯಮ ಕುಟುಂಬದ ಪ್ರೀತಿಗೆ ಪಾತ್ರವಾಗಿದ್ದ ಹ್ಯುಂಡೈನ ಸ್ಯಾಂಟ್ರೋ ಈಗ ಮತ್ತೆ ಹೊಸ ಅವತರಣೆಯಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹೌದು, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಂಪೆನಿಯು, 1998 ರ ಸೆಪ್ಟೆಂಬರ್ 23 ರಲ್ಲಿ ತನ್ನ ಮೊದಲನೇ ಮಾದರಿಯ ಹ್ಯುಂಡೈ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯ ಬಳಿಕ ಸ್ಯಾಂಟ್ರೋ ಸುಮಾರು ಒಂದೂವರೆ ದಶಕಗಳವರೆಗೆ ಭಾರತದ ಮಾರುಕಟ್ಟೆಯಲ್ಲಿ ತನ್ನ ಆಧಿಪತ್ಯ ಸಾಧಿಸಿತ್ತು. ಅಲ್ಲದೇ ಮಧ್ಯಮ ಕುಟುಂಬದ ಪ್ರೀತಿಗೂ ಸಹ ಪಾತ್ರವಾಗಿತ್ತು. ಎಲ್ಲರೂ ಕ್ಯೂಟ್ ಫ್ಯಾಮಿಲಿಗೆ, ಕ್ಯೂಟ್ ಕಾರೆಂದೇ ಕರೆಯುತ್ತಿದ್ದರು. ಇದೀಗ ಹ್ಯುಂಡೈ ಮತ್ತೆ ನೂತನ ಅವತರಣೆಯಲ್ಲಿ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನೂತನ ಸ್ಯಾಂಟ್ರೋ ಕಾರ್ ಹಳೆಯ ಸ್ಯಾಂಟ್ರೋಗಿಂತ ಸಂಪೂರ್ಣ ವಿಭಿನ್ನವಾಗಿದ್ದು, ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಅಲ್ಲದೇ ನೂತನ ಸ್ಯಾಂಟ್ರೋ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಟಾಟಾ ಟಿಯೋಗೋ, ಮಾರುತಿ ಸುಜುಕಿಯ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಸಹ ಹೇಳಲಾಗುತ್ತಿದೆ.
ಹೊಸ ಸ್ಯಾಂಟ್ರೊ ಕಾರಿನ ವೈಶಿಷ್ಟ್ಯಗಳೇನು? ಎಂಜಿನ್ ಹಾಗೂ ಸಾಮರ್ಥ್ಯ:
1.1 ಲೀಟರ್ ಪೆಟ್ರೋಲ್ ಎಪ್ಸಿಲಾನ್ ಶ್ರೇಣಿಯ 4 ಸಿಲಿಂಡರಿನ 1,086 ಸಿಸಿ ಎಂಜಿನ್ ಹೊಂದಿದ್ದು, 68 ಬಿಎಚ್‍ಪಿ, 99 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. 5 ಸ್ಪೀಡ್ ಎಂಟಿ(ಮ್ಯಾನುವಲ್ ಟ್ರಾನ್ಸ್‌ಮಿಷಿನ್) ಹಾಗೂ ಸ್ಮಾರ್ಟ್ ಎಎಂಟಿ(ಆಟೋಮ್ಯಾಟಿಕ್ ಟ್ರಾನ್ಸ್‌ಮಿಷಿನ್) ಹೊಂದಿದೆ. ಇದರ ಜೊತೆ 1.1 ಲೀಟರ್ ಸಿಎನ್‍ಜಿ ಎಂಜಿನ್ ಹೊಂದಿದ್ದು, 58 ಬಿಎಚ್‍ಪಿ ಹಾಗೂ 99 ಎನ್‍ಎಂ ಟಾರ್ಕ್ ಹೊಂದಿದೆ. ಇದರ ಜೊತೆ ಕಂಪನಿ ಫಿಟ್ಟೆಡ್ 8ಕೆಜಿಯ ಎಲ್‍ಪಿಜಿ ಗ್ಯಾಸ್ ಟ್ಯಾಂಕ್ ಕೂಡ ಇದೆ.
ಸುತ್ತಳತೆ ಹಾಗೂ ಗ್ರೌಂಡ್ ಕ್ಲಿಯರೆನ್ಸ್:
ಉದ್ದ 3,610 ಎಂಎಂ, ಅಗಲ 1,645 ಎಂಎಂ, ಎತ್ತರ 1,560 ಎಂಎಂ ಇದೆ. ವೀಲ್ ಬೇಸ್ 2,400 ಎಂಎಂ ಇದೆ. ಅಲ್ಲದೇ ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಇದೆ.
ಸುರಕ್ಷತೆ:
ಹೊಸ ಸ್ಯಾಂಟ್ರೋದ ಬಾಡಿಯನ್ನು ಬಲಿಷ್ಟ ಸ್ಟೀಲ್‍ನಿಂದ ರಚಿಸಲಾಗಿತ್ತು, ಶೇ.63 ರಷ್ಟು ಸಂರಚಚನೆಯನ್ನು ಹೊಂದಿದೆ. ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್‍ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ವ್ಯವಸ್ಥೆ ಇದೆ. ಮುಂಭಾಗದಲ್ಲಿ ಪ್ರಯಾಣಿಕ ಹಾಗೂ ಚಾಲಕನಿಗಾಗಿ ಎರಡು ಫ್ರಂಟ್ ಏರ್‍ಬ್ಯಾಗ್ ನ್ನು ಸಹ ಹೊಂದಿದೆ.
ಹೊರ ವಿನ್ಯಾಸ:
ಬಾಡಿ ಕಲರ್ಡ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಟೋನ್ ಬಂಪರ್, ಪವರ್ ವಿಂಡೋಸ್, ಮೈಕ್ರೋ ಆ್ಯಂಟಿನಾ, ಆರ್14 ಸ್ಟೀಲ್ ವೀಲ್ ಜೊತೆ ವೀಲ್ ಕವರ್, ಹಾಗೂ 14 ಇಂಚ್ ಅಲಾಯ್ ವೀಲ್, ಕೀಲೆಸ್ ಎಂಟ್ರಿ, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್ ಹೊಂದಿದೆ.
ಒಳ ವಿನ್ಯಾಸ:
ವಿಶಾಲ ಹಾಗೂ ನೂತನ ಡ್ಯಾಶ್‍ಬೋರ್ಡ್ ವಿನ್ಯಾಸ, ಆಡಿಯೋ ರಿಮೋಟ್ ಕಂಟ್ರೋಲ್, ಮಿರರ್ ಲಿಂಕ್ ಮತ್ತು ಸ್ಮಾರ್ಟ್ ಫೋನ್ ಆ್ಯಪ್, ಆಂಡ್ರಾಯ್ಡ್ ಆಟೋ/ ಆ್ಯಪಲ್ ಕಾರ್ ಪ್ಲೇ ವ್ಯವಸ್ಥೆ ಹೊಂದಿದೆ. 17.64 ಸೆಂ.ಮೀ.ನ ಟಚ್‍ಸ್ಕ್ರೀನ್ ಆಡಿಯೋ ವಿಡಿಯೋ ಸಿಸ್ಟಂ, ರಿಯರ್ ಪಾರ್ಸೆಲ್ ಟ್ರೇ, ರಿಯರ್ ಸೀಟ್ ಬೆಂಚ್ ಫೋಲ್ಡಿಂಗ್, ಪವರ್ ಪೋರ್ಟ್, ಯುಎಸ್‍ಬಿ ಪೋರ್ಟ್ ಇದೆ.
ಬ್ರೇಕ್, ಸಸ್ಪೆನ್‍ಷನ್ ಹಾಗೂ ಇಂಧನ ಸಾಮರ್ಥ್ಯ:
ಮುಂದುಗಡೆ ಡಿಸ್ಕ್ ಬ್ರೇಕ್, ಮೆಕ್‍ಫೆರ್ಸನ್ ಸ್ಟ್ರಟ್ ಸಸ್ಪೆನ್‍ಷನ್ ಹೊಂದಿದ್ದರೆ, ಹಿಂದುಗಡೆ ಡ್ರಮ್ ಬ್ರೇಕ್ ವ್ಯವಸ್ಥೆ ಹಾಗೂ ಕಪಲ್ಡ್ ಟಾರ್ಷನ್ ಬೀಮ್ ಆಕ್ಸೆಲ್ ಸಸ್ಪೆನ್‍ಷನ್, ಒಟ್ಟು 35 ಲೀಟರ್ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.
ಇತರೆ ಫೀಚರ್ ಗಳು:
ಆರಾಮವಾಗಿರುವ ಸೀಟುಗಳು, ರೀಯರ್ ಎಸಿ ವೆಂಟ್ಸ್, ರಿಯರ್ ವೈಫರ್, ಸ್ಟೀಯರಿಂಗ್‍ನಲ್ಲೇ ಆಡಿಯೋ, ಬ್ಲೂಟೂತ್ ನಿಯಂತ್ರಣ ವ್ಯವಸ್ಥೆ, ಎಲೆಕ್ಟ್ರಾನಿಕ್ ಔಟ್‍ಸೈಡ್ ರಿಯರ್ ವಿವ್ಯೂ ಮಿರಸ್, ವಾಯ್ಸ್ ರೆಕಗ್ನೈಸಿಂಗ್ ಬಟನ್, ಫುಲ್ ಎರ್ ಕಂಟ್ರೋಲರ್ ಸಿಸ್ಟಮ್, ಪ್ಯಾಸೆಂಜರ್ ವ್ಯಾನಿಟಿ ಮಿರರ್ ಸಹ ಒಳಗೊಂಡಿದೆ.
ಮೈಲೇಜ್ ಎಷ್ಟು?
ಆಟೋಮೇಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‍ಎಐ) ಪರೀಕ್ಷೆಯ ವರದಿಗಳ ಪ್ರಕಾರ ಪ್ರತಿ ಲೀಟರ್‍ಗೆ 20.3 ಕಿ.ಮೀ ಮೈಲೇಜ್ ನೀಡುತ್ತದೆ.
ಯಾವ ಬಣ್ಣಗಳಲ್ಲಿ ಲಭ್ಯವಿದೆ?
ನೂತನ ಸ್ಯಾಂಟ್ರೋ ಇಂಪಿರಿಯಲ್ ಬೀಜ್, ಮರಿನಾ ಬ್ಲ್ಯೂ, ಫಿಯರಿ ರೆಡ್, ತೈಫೂನ್ ಸಿಲ್ವರ್, ಪೊಲಾರ್ ವೈಟ್, ಸ್ಟಾರ್ ಡಸ್ಟ್ ಮತ್ತು ಡಯಾನಾ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬೆಲೆ ಎಷ್ಟು?
ಸ್ಯಾಂಟ್ರೋ ಕಾರಿನ ಪೆಟ್ರೋಲ್ ಮಾದರಿಯ ಅಂದಾಜು ಬೆಲೆ ಆವೃತ್ತಿಗಳ ಮ್ಯಾನುವಲ್ ಟ್ರಾನ್ಸ್‍ಮಿಷನ್ ಪೈಕಿ, ಡಿ-ಲೈಟ್ 3,89,900 ರೂ. ಎರ್ರಾ 4,24,900 ರೂ. ಮ್ಯಾಗ್ನ 4,57,900 ರೂ. ಸ್ಪೋರ್ಟ್ಸ್ 4,99,900 ಹಾಗೂ ಆ್ಯಸ್ತಾ 5,45,900 ರೂಪಾಯಿ ಇರಲಿದೆ.
ಸಿಎನ್‍ಜಿ ಮಾದರಿ ಮ್ಯಾನುವಲ್ ಟ್ರಾನ್ಸ್‍ಮಿಷನ್ ಆವೃತ್ತಿಗಳ ಪೈಕಿ ಮ್ಯಾಗ್ನಾ 5,18,900 ರೂ. ಹಾಗೂ ಸ್ಪೋರ್ಟ್ಸ್ 5,46,900 ಇದೆ. ಪೆಟ್ರೋಲ್ ಮಾದರಿಯ ಸ್ಮಾರ್ಟ್ ಆಟೋಮ್ಯಾಟಿಕ್ ಆವೃತ್ತಿಯ ಮ್ಯಾಗ್ನಾಗೆ 5,23,900 ರೂ. ಹಾಗೂ ಸ್ಪೋರ್ಟ್ಸ್ ಮಾದರಿಗೆ 5,64,900 ರೂ. ಆಗಿರಲಿದೆ.
ಭಾರತದ ನಾಗರೀಕರೇ ಆಗಲಿ ಅಥವಾ ಅನಿವಾಸಿ ಭಾರತೀಯರೇ(ಎನ್‍ಆರ್‍ಐ) ಆಗಿದ್ದರೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯವಶ್ಯಕ. ಇಂದಿನ ದಿನಗಳಲ್ಲಿ ಪಾನ್‍ಕಾರ್ಡ್ ಕೇವಲ ಆದಾಯ ತೆರಿಗೆ ಪಾವತಿಗೆ ಮಾತ್ರವಲ್ಲದೇ, ಅನೇಕ ರೀತಿಯ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾದರೇ ಈ ಪಾನ್ ಕಾರ್ಡ್ ಎಂದರೇನು? ಅದರಿಂದ ಏನು ಉಪಯೋಗ? ಪಾನ್ ಕಾರ್ಡ್ ನಂಬರ್ ಹೇಗೆ ರಚಿಸಲ್ಪಡುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪಾನ್ ಕಾರ್ಡ್ ಎಂದರೇನು?
ಭಾರತದ ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳುಳ್ಳ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಸಂಕ್ಷಿಪ್ತವಾಗಿ ಪಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಪಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ. ಇದೊಂದು ಶಾಶ್ವತ ನಂಬರ್ ಆಗಿದ್ದು, ಒಂದು ವೇಳೆ ನಿಮ್ಮ ವಿಳಾಸ ಬದಲಾವಣೆ ಆದರೂ ಸಹ ಯಾವುದೇ ಪರಿಣಾಮ ಬೀರುವುದಿಲ್ಲ.
ಪಾನ್ ಕಾರ್ಡನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಇದು ಯುನಿವರ್ಸಲ್ ಗುರುತಿನ ಚೀಟಿಯ ಹಾಗೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿ ಹಾಗೂ ಹಣಕಾಸು ವ್ಯವಹಾರಗಳು ಈ ಖಾತೆ ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತದೆ. ಸದ್ಯ ಪಾನ್ ಕಾರ್ಡ್ ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕಡ್ಡಾಯವಾಗಿ ಬೇಕಾಗಿದೆ.
ಏನೇನು ಇರುತ್ತದೆ?
ಪಾನ್ ಕಾರ್ಡಿನ ಮೊದಲನೇ ಸಾಲಿನಲ್ಲಿ ವ್ಯಕ್ತಿಯ ಸಂಪೂರ್ಣ ಹೆಸರು, ಎರಡನೇ ಸಾಲಿನಲ್ಲಿ ಆಕೆಯ/ಆತನ ತಂದೆ ಹಾಗೂ ಪೋಷಕರ ಹೆಸರು. ಮೂರನೇ ಸಾಲಿನಲ್ಲಿ ಜನ್ಮದಿನಾಂಕ. ನಾಲ್ಕನೇ ಸಾಲಿನಲ್ಲಿ 10 ಅಂಕಿಗಳ ಪರ್ಮನೆಂಟ್ ಅಕೌಂಟ್ ನಂಬರ್ ಹಾಗೂ ಐದನೇ ಸಾಲಿನಲ್ಲಿ ಪಾನ್ ಕಾರ್ಡ್ ಅರ್ಜಿದಾರರ ಸಹಿ ಹಾಗೂ ಅವರ ಭಾವಚಿತ್ರ ಮುದ್ರಿತವಾಗಿರುತ್ತದೆ. ಇದಲ್ಲದೇ ಆದಾಯ ತೆರಿಗೆ ಇಲಾಖೆಯ ಹಾಲೋಗ್ರಾಮ್ ಸಹ ಇರುತ್ತದೆ. ಒಂದು ವೇಳೆ ಸಂಸ್ಥೆಗಳು ಪಾನ್ ಕಾರ್ಡ್ ಪಡೆದುಕೊಂಡಿದ್ದರೆ, ಅದರಲ್ಲಿ ಸಂಸ್ಥೆಯ ಹೆಸರು, ನೋಂದಣಿ ದಿನಾಂಕ ಹಾಗೂ ಇತರೆ ಮಾಹಿತಿಗಳು ಮುದ್ರಿತವಾಗಿರುತ್ತವೆ.
ಪಾನ್ ಕಾರ್ಡ್ ಸಲ್ಲಿಸಲು ಏನೇನು ಬೇಕು?
ಇತ್ತೀಚಿನ ಎರಡು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ರೇಶನ್ ಕಾರ್ಡ್, ಚಾಲನಾ ಪರವಾನಗಿ, ಮತದಾನ ಗುರುತಿನ ಚೀಟಿ, ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಳು ಬೇಕು. ಅಲ್ಲದೇ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮೇಲ್ಕಂಡ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇ ಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಪಾನ್ ಕಾರ್ಡ್ ಅನ್ನು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆ ಬರುವುದಿಲ್ಲ. ಒಂದು ವೇಳೆ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಬೇಕಾದರೆ ಪೋಷಕರ ರುಜು ಕಡ್ಡಾಯವಾಗಿರುತ್ತದೆ. ಪಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆದಾಯ ತೆರಿಗೆಯ ಜಾಲತಾಣ (www.tin-nsdl.com) ಹಾಗೂ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ಸಂಸ್ಥೆಗಳ ಮೂಲಕ ಆನ್‍ಲೈನ್ ಅಥವಾ ಆಪ್‍ಲೈನ್ ಮೂಲಕ ಅರ್ಜಿಸಲ್ಲಿಸಬಹುದು.
10 ಸಂಖ್ಯೆಗಳು ಏನನ್ನು ಸೂಚಿಸುತ್ತವೆ?
ಪಾನ್ ಕಾರ್ಡಿನ ಮೊದಲ 5 ಇಂಗ್ಲೀಷಿನ ಅಕ್ಷರಗಳನ್ನು ಕೋರ್ ಗುಂಪುಗಳೆಂದು ಕರೆಯುತ್ತಾರೆ. ಇದರಲ್ಲಿನ ಮೊದಲನೇ 3 ಅಕ್ಷರಗಳು `ಎ’ ಇಂದ `ಝೆಡ್’ ವರೆಗೆ ಸಾಮಾನ್ಯವಾಗಿ ಇರುತ್ತವೆ. 4ನೇ ಅಕ್ಷರವು ಪಾನ್ ಕಾರ್ಡ್ ಯಾವುದಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ತೋರಿಸುತ್ತದೆ. ಸಿ-ಕಂಪನಿ, ಪಿ- ವ್ಯಕ್ತಿ, ಎಚ್-ಹಿಂದೂ ಅವಿಭಕ್ತ ಕುಟುಂಬ, ಎಫ್- ವಿಭಾಗ, ಎ-ವ್ಯಕ್ತಿಗಳ ಗುಂಪು, ಟಿ-ಟ್ರಸ್ಟ್, ಬಿ-ವ್ಯಕ್ತಿಯ ಗುರುತು, ಎಲ್-ಸ್ಥಳೀಯ ಸಂಸ್ಥೆಗಳು, ಜೆ-ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸಿರುವುದು, ಜಿ-ಸರ್ಕಾರ ಆಗಿರುತ್ತದೆ. ಅಲ್ಲದೇ 5ನೇ ಅಕ್ಷರ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವಾಗಿರುತ್ತದೆ. ಇದಲ್ಲದೇ 6 ರಿಂದ 9ನೇ ಸ್ಥಾನದಲ್ಲಿ ಬರುವ ಅಂಕಿಗಳು 0001 ರಿಂದ 9999ರವರೆಗಿನ ಸರಣಿ ಸಂಖ್ಯೆಗಳಾಗಿರುತ್ತವೆ. ಕೊನೆಯ ಇಂಗ್ಲೀಷಿನ ಸಂಖ್ಯೆ ಅಂಕಿಗಳನ್ನು ಪ್ರತಿನಿಧಿಸುವ ಅಕ್ಷರವಾಗಿರುತ್ತದೆ.
ಉದಾಹರಣೆಗೆ ABCPS1234A ಆಗಿದೆ.
ಪಾನ್ ಕಾರ್ಡಿನ ಉಪಯೋಗವೇನು?
ಪಾನ್ ಕಾರ್ಡ್ ನ್ನು ಬ್ಯಾಂಕ್ ಖಾತೆ ತೆರೆಯಲು, ಐಟಿ ರಿಟರ್ನ್ಸ್, ಆಸ್ತಿ ಮತ್ತು ವಾಹನ ಮಾರಾಟ ಹಾಗೂ ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್‍ಗಳಲ್ಲಿ ಹಣ ಹೂಡಿಕೆ ಮಾಡುವ ವೇಳೆ ಹಾಗೂ ಇನ್ನೂ ಅನೇಕ ಸಂದರ್ಭದಲ್ಲಿ ಉಪಯೋಗ ಮಾಡಿಕೊಳ್ಳಬಹುದು. ಇದಲ್ಲದೇ ಪಾನ್ ಕಾರ್ಡನ್ನು ಗುರುತಿನ ಚೀಟಿಯಾಗಿರೂ ಸಹ ಬಳಕೆ ಮಾಡಬಹುದಾಗಿದೆ.
ಪಾನ್ ಕಾರ್ಡ್ ಮೇಲೆ ಜನರಲ್ಲಿರುವ ಅಪನಂಬಿಕೆಗಳೇನು?
ಜನರು ಪಾನ್ ಕಾರ್ಡನ್ನು ಕೇವಲ ತೆರಿಗೆ ಪಾವತಿ ಮಾಡಲು ಬಳಸುತ್ತಾರೆ ಎನ್ನುವ ಅಪನಂಬಿಕೆಯನ್ನು ಹಲವರು ನಂಬಿಕೊಂಡಿದ್ದಾರೆ.
ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಒಂದು ಬಾರಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಈ ಕಾರ್ಡ್ ಮಾಡಿಸಿದರೆ, ಮುಂದಿನ ದಿನಗಳಲ್ಲಿ ಈ ಕಾರ್ಡ್ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.