Tag: ಮಾಹಿತಿ ಸಂಗ್ರಹ

  • ಆರ್‌ಎಸ್‌ಎಸ್ ನಾಯಕರ ಸಂಪೂರ್ಣ ಮಾಹಿತಿ ಕಲೆಹಾಕಿ – ಪೊಲೀಸರ ಪತ್ರ ವೈರಲ್

    ಆರ್‌ಎಸ್‌ಎಸ್ ನಾಯಕರ ಸಂಪೂರ್ಣ ಮಾಹಿತಿ ಕಲೆಹಾಕಿ – ಪೊಲೀಸರ ಪತ್ರ ವೈರಲ್

    ಪಾಟ್ನಾ: ಆರ್‌ಎಸ್‌ಎಸ್ ನ ರಾಜ್ಯದ ಎಲ್ಲ ಜಿಲ್ಲೆಯ ಕಾರ್ಯಕಾರಣಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವಂತೆ ಬಿಹಾರ ಪೊಲೀಸ್ ವಿಶೇಷ ತಂಡ ಜಿಲ್ಲಾ ಪೊಲೀಸರಿಗೆ ಸೂಚಿಸಿದೆ.

    ಮೇ 28ರಂದು ಈ ಕುರಿತ ಪತ್ರವನ್ನು ಎಲ್ಲ ಜಿಲ್ಲಾ ಪೊಲೀಸರಿಗೆ ಕಳುಹಿಸಲಾಗಿದ್ದು, ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ರದಲ್ಲಿ ಬಿಹಾರ ಪೊಲೀಸ್ ವಿಶೇಷ ತಂಡದ ಎಸ್‍ಪಿ ಅವರ ಸಹಿ ಇದ್ದು, ಜಿಲ್ಲಾ ಡೆಪ್ಯೂಟಿ ಎಸ್‍ಪಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.

    ಪತ್ರದಲ್ಲಿ ವಿಶೇಷ ತಂಡದ ಎಲ್ಲ ಡಿಎಸ್‍ಪಿಗಳು ಆರ್‌ಎಸ್‌ಎಸ್ ಹಾಗೂ ಅದರ ಸಂಯೋಜಕತ್ವದ ಇತರ 19 ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಸೇರಿದಂತೆ ಇತರ ಕಾರ್ಯಕಾರಣಿ ಸದಸ್ಯರ ಹೆಸರು, ವಿಳಾಸ, ಫೋನ್ ನಂಬರ್ ಹಾಗೂ ಇತರ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ.

    ಆರ್‌ಎಸ್‌ಎಸ್ ಸೇರಿದಂತೆ ಅದರ ಸಂಯೋಜಕತ್ವದ ಇತರ 19 ಸಂಘಟನೆಗಳ ನಾಯಕರ ಹೆಸರು, ವಿಳಾಸ, ಫೋನ್ ನಂಬರ್ ಹಾಗೂ ವಾಣಿಜ್ಯ ವ್ಯಾಪಾರ ಸಂಘಟನೆಗಳ ಸಂಪರ್ಕದ ಕುರಿತು ವಾರದೊಳಗೆ ಮಾಹಿತಿ ಸಲ್ಲಿಸುವಂತೆ ಬಿಹಾರ ಪೊಲೀಸ್ ವಿಶೇಷ ತಂಡ ಪತ್ರದಲ್ಲಿ ತಿಳಿಸಿದೆ.

    ಆರ್‌ಎಸ್‌ಎಸ್ ಸಂಯೋಜಕತ್ವದ ಇತರ 19 ಸಂಘಟನೆಗಳ ಹೆಸರನ್ನೂ ಉಲ್ಲೇಖಿಸಿದ್ದು, ಭಜರಂಗ ದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ್ ಸಮಿತಿ, ಧರ್ಮ ಜಾಗರಣ ಸಮನ್ವಯ ಸಮಿತಿ, ಹಿಂದೂ ರಾಷ್ಟ್ರ ಸೇನಾ, ರಾಷ್ಟ್ರೀಯ ಸೇವಿಕಾ ಸಮಿತಿ, ಶಿಕ್ಷಾ ಭಾರತಿ, ಮುಸ್ಲಿಂ ರಾಷ್ಟ್ರೀಯ ಮಂಚ್, ದುರ್ಗಾ ವಾಹಿನಿ, ಸ್ವದೇಶಿ ಜಾಗರಣ್ ಮಂಚ್, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ಭಾರತೀಯ ರೈಲು ಸಂಘ, ಎಬಿವಿಪಿ, ಅಖಿಲ ಭಾರತೀಯ ಶಿಕ್ಷಕ ಮಹಾಸಂಘ, ಹಿಂದೂ ಮಹಾಸಭಾ, ಹಿಂದೂ ಯುವ ವಾಹಿನಿ ಹಾಗೂ ದಿ ಹಿಂದೂ ಪುತ್ರ ಸಂಘಗಳ ನಾಯಕರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವಂತೆ ತಂಡ ತಿಳಿಸಿದೆ.

    ಇದನ್ನು ಮಹತ್ವದ ಕೆಲಸವನ್ನಾಗಿ ಪರಿಗಣಿಸಬೇಕಿದೆ ಎಂದು ಅಧಿಕಾರಿಯೊಬ್ಬರು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಪತ್ರದ ಮೂಲಕ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಜೂ.3 ರಂದು ಈ ಪ್ರವನ್ನು ಬರೆದಿದ್ದು, ಆದಷ್ಟು ಬೇಗನೇ ಕೆಲಸ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.