Tag: ಮಾಹಿತಿ ತಂತ್ರಜ್ಞಾನ

  • ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ನವದೆಹಲಿ: ಕೇಂದ್ರದ ಹೊಸ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಅಮೆರಿಕದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟ್ಟರ್ ವಿರುದ್ಧ ಕೇಸ್ ದಾಖಲಾಗಿದೆ.

    ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಮುಸ್ಲಿಂ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿತ್ತು. ಕೋಮು ಭಾವನೆ ಕೆರಳಿಸುವಂತೆ ಪ್ರಚೋದಿಸಿದ ಆರೋಪದ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಟ್ವಿಟ್ಟರ್ ಸೇರಿದಂತೆ ಕೆಲ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಟ್ವಿಟ್ಟರ್ ಮೇಲೆ ಕೇಸ್ ಬಿದ್ದಿದ್ದು ಹೇಗೆ?
    ಭಾರತದಲ್ಲಿ ಮೇ 25ರಿಂದ ಹೊಸ ಡಿಜಿಟಲ್ ನಿಮಯಗಳು ಜಾರಿಗೆ ಬಂದಿದೆ. ಈ ನಿಯಮಗಳ ಸೂಚನೆಯನ್ನು ಟ್ವಿಟ್ಟರ್ ಪಾಲಿಸಿರಲಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಟ್ವಿಟ್ಟರ್ ಗೆ  ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ನೀಡಿದ ಬಳಿಕವೂ ನಿಯಮ ಜಾರಿ ಮಾಡದ ಹಿನ್ನೆಲೆಯಲ್ಲಿ ಈಗ ಕೇಸ್ ದಾಖಲಾಗಿದೆ.

    ಟ್ವಿಟ್ಟರ್ ನಿಯಮಗಳನ್ನು ಪಾಲನೇ ಮಾಡದ ಕಾರಣ ಈ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ. ಹೀಗಾಗಿ ಯಾವುದೇ ಪ್ರಕಾಶಕರು ಮೇಲೆ ಹೇಗೆ ಭಾರತದ ಕಾನೂನುಗಳ ಅಡಿ ಕ್ರಮಗಳನ್ನು ನಡೆಸಲಾಗುತ್ತದೋ ಅದೇ ರೀತಿಯ ಕ್ರಮಕ್ಕೆ ಟ್ವಿಟ್ಟರ್ ಸಂಸ್ಥೆ ಕೂಡ ಹೊರತಲ್ಲ ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ :ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಭಾರತದಲ್ಲಿ ದೂರು ಬಂದಾಗ ಸಂವಹನ ನಡೆಸಲು ಅಧಿಕಾರಿಯನ್ನು ನೇಮಿಸಬೇಕು ಸರ್ಕಾರ ಸೂಚಿಸಿತ್ತು. ಫೇಸ್‍ಬುಕ್, ಗೂಗಲ್ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಒಪ್ಪಿ ಪಾಲಿಸುವುದಾಗಿ ಹೇಳಿದ್ದರೆ ಟ್ವಿಟ್ಟರ್ ನೇಮಕ ಮಾಡಿರಲಿಲ್ಲ. ಹೀಗಾಗಿ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ.

    ಏನಿದು ಪ್ರಕರಣ?
    ವೃದ್ಧ ಮುಸ್ಲಿಂ ವ್ಯಕ್ತಿ ಅಬ್ದುಲ್ ಸಮದ್ ಎಂಬುವವರ ಮೇಲೆ ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಆರು ಮಂದಿಯಿಂದ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಸಮದ್ ಅವರ ಗಡ್ಡವನ್ನು ಕತ್ತರಿಸುವ, ‘ವಂದೇ ಮಾತರಂ’ ಮತ್ತು ‘ಜೈ ಶ್ರೀರಾಮ್’ ಎಂದು ಪಠಿಸುವಂತೆ ಬಲವಂತ ಪಡಿಸುವ ದೃಶ್ಯ ವಿಡಿಯೋದಲ್ಲಿತ್ತು. ಈ ವಿಡಿಯೋ ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದೆ ಎಂದು ಬರೆದು ಜನ ಟ್ವೀಟ್ ಮಾಡಿದ್ದರು.

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆಗೆ ಇಳಿದಾಗ ಸತ್ಯ ಪ್ರಕಟವಾಗಿತ್ತು. ಈ ಗಲಾಟೆ ಕೋಮು ವಿಚಾರ ನಡೆದ ಗಲಾಟೆಯಲ್ಲ. ಆಮ್ಲೇಟ್ ವಿಚಾರಕ್ಕೆ ಈ ಗಲಾಟೆ ನಡೆದಿತ್ತು. ಅಬ್ದುಲ್ ಸಮದ್ ಮೇಲೆ ಹಲ್ಲೆ ನಡೆಸಿದವರಲ್ಲಿ ಎರಡೂ ಸಮುದಾಯದವರಿದ್ದರು. ಇದರಲ್ಲಿ ಯಾವ ಕೋಮು ಆಯಾಮ ಇಲ್ಲ ಎಂದು ಪೊಲೀಸರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

    ಯಾರ ಮೇಲೆ ಎಫ್‍ಐಆರ್?
    ಗಾಜಿಯಾಬಾದ್‍ನ ಲೋನಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪತ್ರಕರ್ತಕರಾದ, ಸಬಾ ನಕ್ವಿ, ರಾಣಾ ಅಯ್ಯುಬ್, ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಜೊತೆಗೆ ಜತೆಗೆ ಆನ್‍ಲೈನ್ ಮಾಧ್ಯಮ ‘ದಿ ವೈರ್’, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮೆದ್ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಘಟನೆಗೆ ಕೋಮುಬಣ್ಣ ಹಚ್ಚಿದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೋಮು ಭಾವನೆಯನ್ನು ಕೆರಳಿಸುವ ಟ್ವೀಟ್ ಆಗಿದ್ದರೂ ಅದನ್ನ ಅಳಿಸದ ಕಾರಣ ಟ್ವಿಟ್ಟರ್ ಕಂಪನಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.

    ಅಧಿಕಾರಿ ನೇಮಕ:
    ಭಾರತದಲ್ಲಿ ಮಧ್ಯಂತರ ಮುಖ್ಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ಟ್ವಿಟ್ಟರ್ ಮಂಗಳವಾರ ಸಂಜೆ ತಿಳಿಸಿತ್ತು. ಕೂ, ಗೂಗಲ್, ಫೇಸ್‍ಬುಕ್ ಕಂಪನಿಗಳು ಭಾರತ ಕಾನೂನುಗಳನ್ನು ಪಾಲಿಸುವುದಾಗಿ ಹೇಳಿದೆ. ಆದರೆ ಭಾರತ ಸರ್ಕಾರ ನೋಟಿಸ್ ಜಾರಿ ಮಾಡಿದ್ದರೂ ಟ್ವಿಟ್ಟರ್ ನಿಯಮಗಳನ್ನು ಪಾಲನೆ ಮಾಡಿರಲಿಲ್ಲ.

  • ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ಬೆಂಗಳೂರು: ಅಂತಾರಾಷ್ಟ್ರೀಯ ತಾಯ್ನುಡಿ ದಿನ- 2021ರ ಸಂದರ್ಭಕ್ಕೆ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಶನಿವಾರದಂದು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರವನ್ನು ನಡೆಯಲಿದೆ. ತಂತ್ರಜ್ಞಾನ ಜಗತ್ತನ್ನು ಕುರಿತು ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ ‘ಬೆರಳ ತುದಿಯ ಬೆರಗು’ ಕೃತಿ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.

    ಸುರಾನಾ ಕಾಲೇಜಿನ ಕನ್ನಡ ವಿಭಾಗವು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಕುರಿತ ಕಾರ್ಯಾಗಾರಗಳನ್ನು ಹಲವು ವರ್ಷಗಳಿಂದ ಆಯೋಜಿಸುತ್ತಿದ್ದು, ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಸಂಸ್ಥೆಯ ಟಿ. ಜಿ. ಶ್ರೀನಿಧಿ ಹಾಗೂ ಅಭಿಷೇಕ್ ಜಿ. ಎಸ್. ಅವರು ನಡೆಸಿಕೊಡಲಿರುವ ಈ ಕಾರ್ಯಾಗಾರವು ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡ ತಂತ್ರಾಂಶಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡಲಿದೆ.

    ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುರಾನಾ ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟೀ ಡಾ. ಅರ್ಚನಾ ಸುರಾನಾ, ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್, ಇಜ್ಞಾನ ಟ್ರಸ್ಟ್‌ನ ಟಿ. ಜಿ. ಶ್ರೀನಿಧಿ ಉಪಸ್ಥಿತರಿರಲಿದ್ದಾರೆ. ಲೋಕಾರ್ಪಣೆಯಾಗುತ್ತಿರುವ ‘ಬೆರಳ ತುದಿಯ ಬೆರಗು’ ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ.

  • 12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

    12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

    ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ.

    ಮಧ್ಯಮ ಶ್ರೇಣಿಯಿಂದ ಆರಂಭಗೊಂಡು ಹಿರಿಯ ಶ್ರೇಣಿ ಹೊಂದಿರುವ 10 – 12 ಸಾವಿರ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಲು ಮುಂದಾಗುತ್ತಿದ್ದೇವೆ ಎಂಬುದಾಗಿ ಕಾಗ್ನಿಜೆಂಟ್ ಕಂಪನಿಯ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಟಿಸಿದ್ದಾರೆ.

    ಕಾಗ್ನಿಜೆಂಟ್ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ ಎರಡನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಟಾಟಾ ಕನ್ಸಲ್ಟೆಂಟೆನ್ಸಿ ಸರ್ವಿಸಸ್ 4 ಲಕ್ಷ ಉದ್ಯೋಗಿಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್ ಕಾಗ್ನಿಜೆಂಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಫೇಸ್‍ಬುಕ್ ಕೆಲಸಕ್ಕೆ ನಿಯೋಜನೆಗೊಂಡಿದ್ದ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೇ ಓರ್ವ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್‍ಬುಕ್ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ.

    ಸಪ್ಟೆಂಬರ್ ನಲ್ಲಿ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಕಾಂಗ್ನಿಜೆಂಟ್ 497 ದಶಲಕ್ಷ ಡಾಲರ್(ಅಂದಾಜು 352 ಕೋಟಿ ರೂ.) ನಿವ್ವಳ ಆದಾಯ ಗಳಿಸಿತ್ತು. ಕಂಪನಿಯ ಆದಾಯ ಶೇ.4.5 ರಷ್ಟು ಏರಿಕೆಯಾಗಿ 4.25 ಶತಕೋಟಿ ಡಾಲರ್(ಅಂದಾಜು 30 ಸಾವಿರ ಕೋಟಿ) ಗಳಿಸಿತ್ತು. ಈ ಹಣಕಾಸು ವರ್ಷದಲ್ಲಿ ಕಂಪನಿ ಶೇ.4.6 – 4.9 ಬೆಳವಣಿಗೆ ಸಾಧಿಸುವ ಗುರಿಯನ್ನು ಹೊಂದಿದೆ.

    ಆದಾಯವನ್ನು ಹೆಚ್ಚಿಸಿ ವೆಚ್ಚವನ್ನು ತಗ್ಗಿಸಲು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಗ್ನಿಜೆಂಟ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

  • ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಬೆಂಗಳೂರು:ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಈಗ ಡಿಜಿಟಲ್ ಟ್ರಾನ್ಸ್ಫರ್ಮೆಶನ್ ವಿಚಾರದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

    ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಗ ಇರುವ ಪರಿಸರದಲ್ಲಿ ಕೌಶಲ್ಯ ಮತ್ತು ಮೂಲಭೂತ ಸೌಕರ್ಯಗಳ ಆಧಾರದಲ್ಲಿ ‘ದಿ ಎಕಾನಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್’ ಬಿಡುಗಡೆ ಮಾಡಿದ ವಿಶ್ವದ 45 ಮಹಾ ನಗರಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ.

    ಎರಡನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದ್ದರೆ, ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಕ್ರಮವಾಗಿ ಮುಂಬೈ ಮತ್ತು ದೆಹಲಿ ಪಡೆದುಕೊಂಡಿದೆ. ಚೀನಾದ ರಾಜಧಾನಿ ಬೀಜಿಂಗ್ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಉದ್ಯಮಶೀಲತೆ, ಆವಿಷ್ಕಾರ, ಕೌಶಲ್ಯ ಹೊಂದಿರುವ ಜನ, ಹೊಸ ತಂತ್ರಜ್ಞಾನ ಬೆಳವಣಿಗೆ, ಆರ್ಥಿಕ ವಾತಾವರಣ, ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸೌಕರ್ಯಗಳ ವಿಚಾರಗಳನ್ನು ಅಧ್ಯಯನಕ್ಕೆ ಪರಿಗಣಿಸಿ ನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.

    ಜೂನ್ ಮತ್ತು ಜುಲೈ ತಿಂಗಳಿನಲ್ಲಿ 45 ಮಹಾ ನಗರಗಳ 2,620 ಕಾರ್ಯನಿರ್ವಹಣಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

    ಪಟ್ಟಿಯಲ್ಲಿ ಕೊನೆಯ ಐದು ಸ್ಥಾನವನ್ನು ಅನುಕ್ರಮವಾಗಿ ಬರ್ಲಿನ್(ಜರ್ಮನಿ), ಯೋಕೋಹಾಮಾ(ಜಪಾನ್), ಟೋಕಿಯೋ(ಜಪಾನ್), ತೈಪೆ(ತೈವಾನ್), ರೋಟರ್ಡಮ್(ನೆದರ್‍ಲ್ಯಾಂಡ್) ಪಡೆದುಕೊಂಡಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ 9ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಸ್ಪೇನ್ ರಾಜಧಾನಿ ಮ್ಯಾಡ್ರಿಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ