Tag: ಮಾಹಿತಿ ಆಯೋಗ

  • ಮಾಹಿತಿ ನೀಡದ ತಹಶೀಲ್ದಾರ್​​ಗೆ 15 ಸಾವಿರ ದಂಡ

    ಮಾಹಿತಿ ನೀಡದ ತಹಶೀಲ್ದಾರ್​​ಗೆ 15 ಸಾವಿರ ದಂಡ

    ಮಂಡ್ಯ: ಆರ್.ಟಿ.ಐ ಮೂಲಕ ಸಲ್ಲಿಸಿದ್ದ ಅರ್ಜಿಗೆ ಎರಡೂವರೆ ವರ್ಷಗಳಾದರೂ ಮಾಹಿತಿ ನೀಡದ ಕಾರಣ ತಹಶೀಲ್ದಾರ್ ಗೀತಾ ಅವರಿಗೆ ಮಾಹಿತಿ ಹಕ್ಕು ಆಯೋಗ 15 ಸಾವಿರ ರೂಪಾಯಿ ದಂಡ ವಿಧಿಸಿದೆ.

    ಸದ್ಯ ಹೊಸಕೋಟೆಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಈ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ರು. ಈ ವೇಳೆ ಎನ್.ಶಿವರಾಮಂ ಎಂಬುವರು ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ದೇವೇಗೌಡ ಬಿನ್ ಕೆಂಚೇಗೌಡ ಅವರಿಗೆ ಮಂಜೂರು ಮಾಡಲಾಗಿದ್ದ ಜಮೀನಿನ ಸಾಗುವಳಿ ಚೀಟಿ ಮತ್ತು ಸಾಗುವಳಿ ಚೀಟಿ ವಿತರಣಾ ಸಹಿತ ನಕಲು ಪ್ರತಿ ನೀಡುವಂತೆ 2017ರ ಜೂನ್ 27 ರಂದು ಮಾಹಿತಿ ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು.

    ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ತಹಶೀಲ್ದಾರ್ ಯಾವುದೇ ಮಾಹಿತಿ ನೀಡದ ಕಾರಣ ಅರ್ಜಿದಾರರು ಈ ಬಗ್ಗೆ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮಾಹಿತಿ ಆಯೋಗದ ನೇತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಅರ್ಜಿದಾರರಿಗೆ ಮುಂದಿನ ದಿನಾಂಕದೊಳಗೆ ಮಾಹಿತಿ ನೀಡಬೇಕೆಂದು ಮಾಹಿತಿ ಆಯುಕ್ತರಾದ ಎಸ್.ಎಸ್.ಪಾಟೀಲ್ ತಹಶೀಲ್ದಾರ್ ಗೀತಾ ಅವರಿಗೆ ಆದೇಶಿಸಿದ್ದರು.

    ಗೀತಾ ಅವರು ಆಯೋಗ ನೀಡಿದ್ದ ದಿನಾಂಕದಂದು ಸಹ ಮಾಹಿಯನ್ನು ನೀಡಿರಲಿಲ್ಲ. ಇದಲ್ಲದೇ ತಹಶೀಲ್ದಾರ್ ಗೀತಾ ಅವರು ಆಯೋಗಕ್ಕೆ ಖುದ್ದಾಗಿ ಹಾಜರಾಗಬೇಕೆಂದು ತಿಳಿಸಿದ್ದರು. ಆದರೆ ಸೂಕ್ತ ಕಾರಣ ನೀಡದೇ ಗೀತಾ ಅವರು ಗೈರು ಹಾಜರಾಗಿ ಆಯೋಗದ ಆದೇಶವನ್ನು ಉಲ್ಲಂಘನೆ ಮಾಡಿದ್ದರು. ಹೀಗಾಗಿ ಮಾಹಿತಿ ಹಕ್ಕು ಆಯುಕ್ತರು ತಹಶೀಲ್ದಾರ್ ಗೀತಾಗೆ 15 ಸಾವಿರ ರೂ. ಸಾವಿರ ದಂಡವನ್ನು ವಿಧಿಸಿದ್ದಾರೆ. ಈ ದಂಡವನ್ನು ಅವರ ಪ್ರತಿ ತಿಂಗಳ ಸಂಬಳದಲ್ಲಿ ಮೂರು ಕಂತುಗಳಲ್ಲಿ 5 ಸಾವಿರ ರೂಪಾಯಿಯಂತೆ ಒಟ್ಟು 15 ಸಾವಿರ ರೂಪಾಯಿಗಳನ್ನು ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

  • ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಬೆಂಗಳೂರು: ಶಿಸ್ತಿನ ಪೊಲೀಸ್ ಇಲಾಖೆಯಲ್ಲೇ ಅಶಿಸ್ತು ತಾಂಡವವಾಡ್ತಿದೆ. ಪೊಲೀಸ್ ಮಹಾನಿರ್ದೇಶಕರಿಂದ ಹಿಡಿದು ಇನ್ಸ್‍ಪೆಕ್ಟರ್ ಮನೆವರೆಗೂ ಪೊಲೀಸ್ ಜೀತದಾಳುಗಳಿದ್ದಾರೆ. ಬೆಳಗ್ಗೆ ಕಸ ಹೊಡೆಯೋದ್ರಿಂದ ಹಿಡಿದು ಹೆಂಡತಿ ಮಕ್ಕಳ ಬಟ್ಟೆ ಒಗೆಯೋಕು ಪೊಲೀಸ್ರೇ ಬೇಕು. ಕೇವಲ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ಸಚಿವ ಕೆ.ಜೆ ಜಾರ್ಜ್ ಮನೆಯಲ್ಲಿಯೇ ಪೊಲೀಸ್ ಜೀತದಾಳುಗಳಿದ್ದಾರೆ.

    ಮಾಹಿತಿ ಆಯೋಗವೇ ಕೇಳಿದ ಮಾಹಿತಿಯಲ್ಲಿ 100ಕ್ಕೂ ಹೆಚ್ಚು ಆರ್ಡರ್ಲಿ ಇದ್ದಾರೆ ಅಂತ ಸ್ವತಃ ಗೃಹ ಇಲಾಖೆಯೇ ಒಪ್ಪಿಕೊಂಡಿದೆ. ಈ ಸಂಬಂಧ ಗೃಹ ಇಲಾಖೆಗೆ ಮಾಹಿತಿ ಆಯೋಗ ನೊಟೀಸ್ ನೀಡಿದೆ. ಮಾಹಿತಿ ಆಯೋಗದ ಮುಖ್ಯ ಆಯುಕ್ತರು ನೋಟಿಸ್ ನೀಡಿದ್ದು, ಸರ್ಕಾರದ ಆದೇಶ ಪಾಲನೆ ಮಾಡಿ. ಆದೇಶ ಅನುಷ್ಠಾನಗೊಳಿಸಿ ಒಂದು ತಿಂಗಳೊಳಗೆ ವಾಸ್ತವ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ.

    ಶಿಸ್ತು ಪಾಲಿಸಬೇಕಾದ ಇಲಾಖೆಯಲ್ಲಿ ಅಶಿಸ್ತು ಇದೆ. ಆರ್ಡರ್ಲಿ ರದ್ದು ಮಾಡಿ ಸರ್ಕಾರ ಆದೇಶಿಸಿದೆ. ಆದರೂ ಮೌಖಿಕ ಆದೇಶದ ಮೂಲಕ ಆರ್ಡರ್ಲಿ ಪದ್ದತಿ ಮುಂದುವರಿದಿದೆ. ಇದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಮಾಹಿತಿ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಇಂದಿನಿಂದಲೇ ರಾಜ್ಯಾದ್ಯಂತ ಆರ್ಡರ್ಲಿ ಇರಲ್ಲ ಅಂತ ಹೇಳಿದ್ರು. ಈಗಾಗಲೇ ರಾಜ್ಯದಲ್ಲಿ ಮೂರು ಸಾವಿರ ಆರ್ಡರ್ಲಿ ಇದ್ದಾರೆ. ಅದಕ್ಕೆ ಇರುವ ಅಧಿಕಾರಿಗಳಿಗೆ ಬೇರೆಯವರ ನೇಮಕ ಮಾಡಿಕೊಡಲಾಗುತ್ತೆ. ಅವರನ್ನೆಲ್ಲಾ ಇನ್ಮುಂದೆ ಮುಕ್ತಿಗೊಳಿಸುತ್ತೇವೆ. ಸದ್ಯ ಪ್ರೋಸಸ್ ನಡೆಯುತ್ತಿದ್ದು, ಸದ್ಯದಲ್ಲೇ ಎಲ್ಲಾ ಆರ್ಡರ್ಲಿ ಇರಲ್ಲ ಅಂದ್ರು.