Tag: ಮಾಹಾರಷ್ಟ್ರ

  • ‘ಮಹಾ’ ಬಹುಮತ ಸಾಬೀತು- ಉದ್ಧವ್ ಸರ್ಕಾರಕ್ಕೆ 169 ಶಾಸಕರ ಬೆಂಬಲ

    ‘ಮಹಾ’ ಬಹುಮತ ಸಾಬೀತು- ಉದ್ಧವ್ ಸರ್ಕಾರಕ್ಕೆ 169 ಶಾಸಕರ ಬೆಂಬಲ

    ಮುಂಬೈ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ನಂತರ ವಿಶ್ವಾಸ ಮತವೆಂಬ ಅಗ್ನಿ ಪರೀಕ್ಷೆಯನ್ನು ಮಹಾ ಮೈತ್ರಿ ಗೆದ್ದಿದೆ.

    ಮಹಾರಾಷ್ಟ್ರ ರಾಜಕಾರಣದ ಕುರಿತು ಇಡೀ ದೇಶವೇ ಚರ್ಚೆಯಲ್ಲಿ ಮುಳುಗಿತ್ತು. ಈ ಎಲ್ಲ ಚರ್ಚೆಗಳ ಮಧ್ಯೆ ಉದ್ಧವ್ ಠಾಕ್ರೆ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸದನದಲ್ಲಿಯೂ ಭಾರೀ ಗದ್ದಲ ಹಾಗೂ ಬಿಜೆಪಿಯ ಸಭಾತ್ಯಾಗದ ಮಧ್ಯೆ ಠಾಕ್ರೆ ವಿಶ್ವಾಸ ಮತ ಸಾಬೀತು ಪಡಿಸಿದ್ದಾರೆ. ಈ ಮೂಲಕ ಉದ್ಧವ್ ನೇತೃತ್ವದ ಮೈತ್ರಿ ಸರ್ಕಾರ ಅಗ್ನಿ ಪರೀಕ್ಷೆಯನ್ನು ಗೆದ್ದಂತಾಗಿದೆ.

    ಹಂಗಾಮಿ ಸ್ಪೀಕರ್ ದಿಲೀಪ್ ವಾಸ್ಲೆ ಪಾಟೀಲ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಹುಮತ ಸಾಬೀತುಪಡಿಸಿದರು. ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇನ್ನು 1 ಎಂಎನ್‍ಎಸ್, 2ಎಐಎಂಐಎಂ, 1 ಸಿಪಿಐಎಂ ಶಾಸಕರು ತಮ್ಮ ಬೆಂಬಲವನ್ನು ಸೂಚಿಸದೇ ತಟಸ್ಥವಾಗಿದ್ದರು.

    ಸ್ಪೀಕರ್ ಅವರನ್ನು ನಿಯಮಬದ್ಧವಾಗಿ ಆಯ್ಕೆ ಮಾಡಲಾಗಿಲ್ಲ, ಈ ರೀತಿಯ ಪರಿಸ್ಥಿತಿ ಹಿಂದೆಂದೂ ಆಗಿರಲಿಲ್ಲ. ಉದ್ಧವ್ ಠಾಕ್ರೆ ಸಹ ಅಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿತು. ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ. ಸ್ಪೀಕರ್ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದರು. ನಂತರ ಬಿಜೆಪಿಯ 105 ಶಾಸಕರು ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಸಭಾತ್ಯಾಗ ಮಾಡಿ ಹೊರ ನಡೆದರು.

    ಬಹುಮತ ಸಾಬೀತಿಗೆ 145 ಸ್ಥಾನಗಳ ಅಗತ್ಯವಿತ್ತು. ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಮೂರು ಪಕ್ಷದ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದ ಕಾರಣ ಸಹಜವಾಗಿಯೇ ಠಾಕ್ರೆಯವರು ಬಹುಮತ ಸಾಬೀತು ಪಡಿಸಿದರು. ಈ ಮೂಲಕ 105 ಸ್ಥಾನಗಳನ್ನು ಗಳಿಸಿದ್ದರೂ ಸಹ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತಾಯಿತು.

    ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ `ಮಹಾವಿಕಾಸ್ ಅಘಾಡಿ’ ಸರ್ಕಾರ ರಚನೆಯಾಗಿದೆ. ಮುಂಬೈನ ಶಿವಾಜಿ ಪಾರ್ಕಿನಲ್ಲಿ ಸಂಜೆ 6.30ಕ್ಕೆ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಿವಾಜಿ ಸಾಕ್ಷಿಯಾಗಿ, ಸಾವಿರಾರು ಶಿವಸೈನಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ಸುಮಾರು 40 ವರ್ಷಗಳ ಶಿವಸೇನೆಯ ರಾಜಕೀಯ ಇತಿಹಾಸದಲ್ಲಿ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿ ಉದ್ಧವ್ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ.

    ಉದ್ಧವ್ ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳ ಹಿರಿಯ, ಅನುಭವಸ್ಥರಾದ ಶಿವಸೇನೆಯ ಏಕನಾಥ್ ಶಿಂಧೆ, ಸುಭಾಶ್ ದೇಸಾಯಿ, ಎನ್‍ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ಬಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ದಲಿತ ನಾಯಕ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ಯಾರೊಬ್ಬರೂ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

  • ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ಧ – ಶಿವಸೇನೆ ಹೇಳಿಕೆ ಹಿಂದಿದೆ ಮಹಾ ಪ್ಲ್ಯಾನ್

    ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ಧ – ಶಿವಸೇನೆ ಹೇಳಿಕೆ ಹಿಂದಿದೆ ಮಹಾ ಪ್ಲ್ಯಾನ್

    ಮುಂಬೈ: ಮಹಾರಾಷ್ಟ್ರದಲ್ಲಿ ಯಾರು ಸರ್ಕಾರ ರಚನೆಗೆ ಮುಂದಾಗದೇ ಇದ್ದಲ್ಲಿ ನಾವು ಸರ್ಕಾರ ರಚನೆಗೆ ಮುಂದಾಗುತ್ತೇವೆ ಎಂದು ಶಿವಸೇನೆ ಹೇಳಿದೆ.

    ಶಿವಸೇನೆ ಮುಖಂಡ, ರಾಜ್ಯ ಸಭೆ ಸದಸ್ಯ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದು, ಯಾರು ಸರ್ಕಾರ ರಚನೆಗೆ ಕೈ ಹಾಕದೇ ಇದ್ದರೆ ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಲ್ಲೇ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

    ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ 15 ದಿನ ಕಳೆದರೂ ಇನ್ನೂ ಯಾವುದೇ ಪಕ್ಷ ಸರ್ಕಾರ ರಚಿಸುವ ಕುರಿತು ಹಕ್ಕು ಮಂಡಿಸದೇ ಇದ್ದ ಕಾರಣ ಬಿಜೆಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಹಕ್ಕು ಮಂಡಿಸಿ ಸರ್ಕಾರ ರಚಿಸಲು ಅವಕಾಶ ನೀಡಿದ್ದು ಸೋಮವಾರದೊಳಗೆ ಬಹುಮತ ಸಾಬೀತಿಗೆ ಸೂಚಿಸಲಾಗಿದೆ.

    ಈಗ ಶಿವಸೇನೆ ಸರ್ಕಾರ ರಚನೆಯ ಹೇಳಿಕೆ ನೀಡಿದ್ದು ಸ್ಫೋಟಕ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಯಾವುದೇ ಷರತ್ತು ವಿಧಿಸದೇ ಶಿವಸೇನೆಯನ್ನು ಬೆಂಬಲಿಸಲು ಮುಂದಾಗಿದೆ. ಈ ಸಂಬಂಧ ಎನ್‍ಸಿಪಿ ಜೊತೆ ಸೇರಿ ಬಾಹ್ಯ ಬೆಂಬಲ ನೀಡಲು ಮಾತುಕತೆ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿರುವುದು ಬಿಜೆಪಿ ಪಾಲಿಗೆ ಮುಳುವಾಗಿದೆ.

    ಶಿವಸೇನೆ ಪಟ್ಟು ಸಡಿಲಸದ ಪರಿಣಾಮ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ತನ್ನ 34 ಶಾಸಕರನ್ನು ರಾಜಸ್ಥಾನದಲ್ಲಿಟ್ಟಿದೆ.

    ಶುಕ್ರವಾರ ವಿಧಾನಸಭೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇಷ್ಟು ದಿನ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರಜೆಗಳಿಗೆ ಧನ್ಯವಾದ ಹೇಳಿದರು. ಜೊತೆಗೆ 5 ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ನಾವು ಮಹಾರಾಷ್ಟ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಈ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.

    ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. 50 -50 ಸೂತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿ ಮಾಡಿಕೊಂಡಿದ್ದರೂ ಚುನಾವಣಾ ಫಲಿತಾಂಶ ಬಂದ ದಿನವೇ ಶಿವಸೇನೆ ಎಲ್ಲ ಅವಕಾಶಗಳ ಬಾಗಿಲು ತೆರೆಯುತ್ತೇವೆ ಎಂದು ಹೇಳಿದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿ ಟೀಕಿಸಿದ್ದರು.

  • ಕ್ಲೈಮಾಕ್ಸ್ ತಲುಪಿದ ‘ಮಹಾ’ ಹೈಡ್ರಾಮ- ಬಿಜೆಪಿಗೆ ರಾಜ್ಯಪಾಲರು ಆಹ್ವಾನ

    ಕ್ಲೈಮಾಕ್ಸ್ ತಲುಪಿದ ‘ಮಹಾ’ ಹೈಡ್ರಾಮ- ಬಿಜೆಪಿಗೆ ರಾಜ್ಯಪಾಲರು ಆಹ್ವಾನ

    ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಹಗ್ಗಜಗ್ಗಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ನಡೆದು 15 ದಿನ ಕಳೆದರು ಇನ್ನೂ ಯಾವುದೇ ಪಕ್ಷ ಸರ್ಕಾರ ರಚಿಸುವ ಕುರಿತು ಹಕ್ಕು ಮಂಡಿಸದೇ ಇದ್ದ ಕಾರಣ ಬಿಜೆಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಹಕ್ಕು ಮಂಡಿಸಿ ಸರ್ಕಾರ ರಚಿಸಲು ಅವಕಾಶ ನೀಡಿದ್ದು ಸೋಮವಾರದೊಳಗೆ ಬಹುಮತ ಸಾಬೀತಿಗೆ ಸೂಚಿಸಲಾಗಿದೆ. ಇದು ಸಾಧ್ಯವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ.

    ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳು ತಾವು ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿವೆ. ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಆದರೆ, ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿರುವುದು ಬಿಜೆಪಿ ಪಾಲಿಗೆ ಮುಳುವಾಗಿದೆ.

    ಶುಕ್ರವಾರ ವಿಧಾನಸಭಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇಷ್ಟು ದಿನ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರಜೆಗಳಿಗೆ ಧನ್ಯವಾದ ಹೇಳಿದರು. ಜೊತೆಗೆ 5 ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ನಾವು ಮಹಾರಾಷ್ಟ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಈ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.

    ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. 50 -50 ಸೂತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿ ಮಾಡಿಕೊಂಡಿದ್ದರೂ ಚುನಾವಣಾ ಫಲಿತಾಂಶ ಬಂದ ದಿನವೇ ಶಿವಸೇನೆ ಎಲ್ಲ ಅವಕಾಶಗಳ ಬಾಗಿಲು ತೆರೆಯುತ್ತೇವೆ ಎಂದು ಹೇಳಿದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿ ಟೀಕಿಸಿದ್ದರು.