Tag: ಮಾಸ್ಟರ್ ಹಿರಣ್ಣಯ್ಯ

  • ಗಣೇಶ ಮಂದಿರ ವಾರ್ಡ್ ನ 165ನೇ ರಸ್ತೆಗೆ ಡಾ. ಮಾಸ್ಟರ್ ಹಿರಣ್ಣಯ್ಯ ಹೆಸರು

    ಗಣೇಶ ಮಂದಿರ ವಾರ್ಡ್ ನ 165ನೇ ರಸ್ತೆಗೆ ಡಾ. ಮಾಸ್ಟರ್ ಹಿರಣ್ಣಯ್ಯ ಹೆಸರು

    ಬೆಂಗಳೂರು: ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ನವರ ಹೆಸರನ್ನು ಗಣೇಶ ಮಂದಿರ ವಾರ್ಡ್ -165ರ ರಸ್ತೆಗೆ ಇಡಲಾಗಿದೆ. ರಸ್ತೆಯ ನಾಮಫಲಕ ಉದ್ಘಾಟನೆಯನ್ನು ಕಂದಾಯ ಸಚಿವ ಆರ್. ಅಶೋಕ್, ಗಣೇಶ ಮಂದಿರ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯೆ ಶ್ರೀಮತಿ ಲಕ್ಷ್ಮಿ ಉಮೇಶ್ ಮತ್ತು ಶ್ರೀಮತಿ ಶಾಂತಮ್ಮ ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ, ಬಿ.ಜೆ.ಪಿ ಮುಖಂಡರಾದ ಉಮೇಶ್ ಕಬ್ಬಾಳ್ ರವರು ಉದ್ಘಾಟನೆ ಮಾಡಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ರವರಿಗೆ ಕರ್ನಾಟಕದ ಜನರು ನಟ ರತ್ನಾಕರ ಎಂಬ ಬಿರುದು ನೀಡಿದ್ದರು. ಸಮಾಜದ ಅಂಕುಡೊಂಕುಗಳನ್ನು ತಮ್ಮ ನೇರ ಮಾತುಗಳಿಂದ ಟೀಕಿಸಿ ಸಮಾಜದ ಬದಲಾವಣೆ ತರುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದರು. ರಾಜಕೀಯ ಶುದ್ಧೀಕರಣ ಮಾಡಲು ಅವರ ನಾಟಕಗಳ ಮುಖಾಂತರ ರಾಜಕಾರಣಿಗಳಿಗೆ ಛಾಟಿ ಬೀಸುತ್ತಿದ್ದರು ಎಂದರು.

    ಮಾಸ್ಟರ್ ಹಿರಣ್ಣಯ್ಯರ ಜೊತೆಗೆ ಪ್ರೋ.ಜಸ್ಟೋರವರರ ಹೆಸರನ್ನೂ ರಸ್ತೆಗೆ ಇಡಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅದ್ಭುತ ತಂತ್ರಜ್ಞರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿದ ಮತ್ತು ನಮ್ಮ ಕ್ಷೇತ್ರದ ಮಹನೀಯರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಅವರ ಹೆಸರು ಅಜರಾಮರವಾಗಿ ಉಳಿಸಿ, ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಯವಂತೆ ಮಾಡುವುದು ನಮ್ಮ ಉದ್ದೇಶ ಎಂದು ಅಶೋಕ್ ಹೇಳಿದರು.

    ಶ್ರೀಮತಿ ಲಕ್ಷ್ಮಿ ಉಮೇಶ್ ಅವರು ಮಾತನಾಡಿ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಮಹನೀಯಗಳನ್ನು ಮರೆಯುತ್ತಿದ್ದಾರೆ. ಅವರ ಸಲ್ಲಿಸಿದ ಸೇವೆ ಮುಂದಿನ ಸಮಾಜಕ್ಕೆ ತಿಳಿಯಬೇಕು. ಅವರ ಸೇವೆ ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇದೇ ವೇಳೆ ಶ್ರೀಮತಿ ಶಾಂತಮ್ಮ ಹಿರಣ್ಣಯ್ಯರವರಿಗೆ, ಸಿಎ 35ನೇ ರ್ಯಾಂಕ್ ಪಡೆದ ಸೌಮ್ಯ ಮತ್ತು ಕೆಎಎಸ್ ಅಧಿಕಾರಿ ಸಂಜನಾ ಅವರನ್ನು ಸನ್ಮಾನಿಸಲಾಯಿತು.

  • ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಅನಂತದಲ್ಲಿ ಮಾಸ್ಟರ್ ಹಿರಣ್ಣಯ್ಯ ಲೀನ

    ಬೆಂಗಳೂರು: ಹಿರಿಯ ರಂಗಕರ್ಮಿ, ಚತುರ ಮಾತುಗಾರ ಮಾಸ್ಟರ್ ಹಿರಣ್ಣಯ್ಯ(85) ಅವರ ಅಂತ್ಯ ಸಂಸ್ಕಾರವು ಬ್ರಾಹ್ಮಣ ಸಂಪ್ರದಾಯದಂತೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಇಂದು ನೆರವೇರಿತು.

    ಹಿರಣ್ಣಯ್ಯ ಅವರ ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್ ಹಿರಣ್ಣಯ್ಯ ಮತ್ತು ಗುರುನಾಥ್ ಹಿರಣ್ಣಯ್ಯ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬಸ್ಥರು ಹಾಗೂ ಹಿರಣ್ಣಯ್ಯ ಅವರ ಕೆಲ ಆಪ್ತರ ಉಪಸ್ಥಿತಿಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು.

    ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯನವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬನಶಂಕರಿಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಸುಮಾರು 9.30ರ ಹೊತ್ತಿಗೆ ಕೊನೆಯುಸಿರೆಳೆದರು.

    ಹಿರಣಯ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ರಂಗಭೂಮಿ, ಸಿನಿಮಾ, ರಾಜಕೀಯ ನಾಯಕರು, ಹಿರಣ್ಣಯ್ಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಅವರ ನಿಧನಕ್ಕೆ ಕುಟುಂಬಸ್ಥರು, ಗಣ್ಯರು, ಆಪ್ತರು ಹಾಗೂ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

    ಕರ್ನಾಟಕದ ರಾಜಕಾರಣಿಗಳನ್ನು ಮಾತಿನ ಮೂಲಕವೇ ಹಿರಣಯ್ಯ ಅವರು ತಿವಿಯುತ್ತಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ಜೊತೆಗೆ ಕಲಾಗಜ ಸಿಂಹ ಬಿರುದು ಜೊತೆಗೆ ನಟ ರತ್ನಾಕರ ಬಿರುದು ಹಿರಣ್ಣಯ್ಯನವರಿಗೆ ಲಭಿಸಿತ್ತು.

    ಹಿರಣ್ಣಯ್ಯ ಅಗಲಿಕೆ ರಾಜಕಾರಣಿಗಳು ಸಹ ಕಂಬನಿ ಮಿಡಿದಿದ್ದಾರೆ. ರಂಗಭೂಮಿಗೆ ತುಂಬಲಾರದ ನಷ್ಟ ಎಂದ ರಾಜಕಾರಣಿಗಳು, ರಾಜಕಾರಣದ ಹುಳುಕುಗಳನ್ನು ವಿಡಂಬಿಸಿ ಹೇಳುತ್ತಿದ್ದ ಅವರ ಶೈಲಿ ಮನಮುಟ್ಟುವಂತ್ತಿತ್ತು ಅಂತ ನಾಯಕರು ಸ್ಮರಿಸಿಕೊಂಡಿದ್ದಾರೆ. ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪಿಎಂ ದೇವೇಗೌಡರು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದರು.

    ಕನ್ನಡ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಎಷ್ಟು ಜನಪ್ರಿಯರೋ ರಂಗಭೂಮಿಯಲ್ಲಿ ಅಷ್ಟೇ ಹೆಸರು ಮಾಡಿದ್ದವರು ಮಾಸ್ಟರ್ ಹಿರಣ್ಣಯ್ಯ. ರಂಗಭೂಮಿಯ ದೈತ್ಯ ಅಂತಲೇ ಹೆಸರಾಗಿದ್ದ ಹಿರಣ್ಣಯ್ಯ, ಸಮಾಜದ ಹುಳುಕನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸುವ ಮೂಲಕ ಟೀಕೆ-ಟಿಪ್ಪಣಿ ಮೂಲಕವೇ ಬದುಕನ್ನು ಕಟ್ಟಿಕೊಂಡವರು. ಸರ್ಕಾರವೇ ಆಗಲಿ, ರಾಜಕಾರಣಿಯೇ ಆಗಲಿ, ವ್ಯಕ್ತಿಯೇ ಆಗಲಿ, ವೇದಿಕೆಯಲ್ಲೇ ಟೀಕಿಸುತ್ತಿದ್ದರು.

    https://www.youtube.com/watch?v=ac2yUL65-10

  • ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿದೆ – ದರ್ಶನ್

    ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿದೆ – ದರ್ಶನ್

    ಬೆಂಗಳೂರು: ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ವಯೋಸಹಜ ಕಾಯಿಲೆಯಿಂದ ಇಂದು ವಿಧಿವಶರಾಗಿದ್ದು, ಸ್ಯಾಂಡಲ್‍ವುಡ್ ನಟ-ನಟಿಯವರು ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

    ನಟ ದರ್ಶನ್ ಅವರು ಹಿರಣ್ಣಯ್ಯ ಅವರ ಅಂತಿಮ ದರ್ಶನ ಮುಗಿಸಿ ವಾಪಸ್ ತೆರಳುವಾಗ ಗರಂ ಆಗಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಡಿ ಬಾಸ್ ಎಂದು ಹೊಗಳಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್ ಸುಮ್ಮನಿರು ಎಂದು ಅಭಿಮಾನಿ ವಿರುದ್ಧ ಗರಂ ಆಗಿದ್ದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್, ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವನು. ಸಮಾಜದ ಆಗು ಹೋಗುಗಳ ಬಗ್ಗೆ ನಾಟಕೀಯ ಶೈಲಿಯಲ್ಲಿ ಎಲ್ಲರಿಗೂ ತಿಳಿಸುತ್ತಿದ್ದರು. ಈ ಸಮಯದ ಅವರ ಬಗ್ಗೆ ಮಾತನಾಡುವ ಶಕ್ತಿಯಿಲ್ಲ ಎಂದು ದುಃಖದಿಂದ ಹೇಳಿದರು.

    “ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತದೆ” ಎಂದು ಟ್ವೀಟ್ ಮಾಡುವ ಮೂಲಕ ಹಿರಣ್ಣಯ್ಯ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=xN_gkfktoqY

  • ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಬೆಂಗಳೂರು: ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿ ಸೂಪರ್ ಹಿಟ್ ಆಗಿದ್ದ ಕ್ವೀನ್ ಚಿತ್ರ ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಅವತಾರವೆತ್ತುತ್ತಿದೆ. ಯಾವ ಕಥೆಯನ್ನಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರೋ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.

    ಚಿತ್ರೀಕರಣವನ್ನು ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಸುತ್ತಿದ್ದರೂ ರಮೇಶ್ ಅವರವಿಂದ್ ಅವರನ್ನು ಭಾರೀ ಚಿಂತೆಗೀಡು ಮಾಡಿದ್ದದ್ದು ವಿಶೇಷವಾದ ಒಂದು ಹಾಡು. ಮೂಲ ಚಿತ್ರ ಕ್ವೀನ್‍ನಲ್ಲಿ ಹಿಂದಿಯ ಹಳೆಯ ಹಾಡೊಂದನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿತ್ತು. ಆ ಹಾಡು ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿಯೂ ಕೂಡಾ ಈ ಹಾಡನ್ನು ಅದೇ ರೀತಿ ರೂಪಿಸೋ ಕನಸು ಹೊಂದಿದ್ದ ರಮೇಶ್ ಅವರನ್ನು ಬಹು ದಿನದಿಂದಲೂ ಯಾವ ಗೀತೆಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಗೊಂದಲ ಕಾಡುತ್ತಿತ್ತಂತೆ. ಕಡೆಗೂ ಅವರು ಇದಕ್ಕಾಗಿ ಪ್ರಸಿದ್ಧ ರಂಗಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಅದು ದೇವದಾಸಿ ನಾಟಕಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆ. ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂಬ ರಂಗಗೀತೆಯನ್ನು ರಮೇಶ್ ಅರವಿಂದ್ ಈ ಚಿತ್ರಕ್ಕೆ ಹೊಸಾ ಥರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕೆ ಕೇವಲ ಅರ್ಧ ದಿನದಲ್ಲಿಯೇ ಕೊರಿಯೋಗ್ರಫಿ ಮಾಡಿರೋ ಗಣೇಶ್ ಆಚಾರ್ಯ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಸದಾ ಹೊಸತೇನನ್ನೋ ಸೃಷ್ಟಿಸಲು ಹಂಬಲಿಸುವ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಕ್ಕೆ ರಂಗಗೀತೆಯೊಂದನ್ನು ಆರಿಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.