ಮಾಸ್ಕೋ: ರಷ್ಯಾದಲ್ಲಿ ಬೃಹತ್ ಶಾಪಿಂಗ್ ಮಾಲ್‍ವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಪರಿಣಾಮ 37 ಮಂದಿ ಸಜೀವ ದಹನವಾಗಿದ್ದು, 69 ಜನ ಕಾಣೆಯಾಗಿದ್ದಾರೆ.
ನಗರದ ವೆಸ್ಟರ್ನ್ ಸೈಬೀರಿಯಾದ ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ. ಈ ಅವಘಡದಿಂದ 37 ಮಂದಿ ಸಾವನ್ನಪ್ಪಿದ್ದು, 40 ಮಕ್ಕಳು ಸೇರಿದಂತೆ ಸುಮಾರು 69 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ತನಿಖಾ ಸಮಿತಿ ತಿಳಿಸಿದೆ.
ಭಾನುವಾರ ಮಧ್ಯಾಹ್ನ ಶಾಂಪಿಂಗ್ ಮಾಲ್ ನ ಮಲ್ಟಿಪ್ಲೆಕ್ಸ್ ಸಿನಿಮಾ ಮತ್ತು ಬೌಲಿಂಗ್ ಆ್ಯಲಿ ಗೇಮ್ ಬಳಿ ಅಪಾರ ಸಂಖ್ಯೆಯಲ್ಲಿ ಜನ ಜಂಗುಳಿ ಸೇರಿತ್ತು. ಮಾಲ್ ನ ಟಾಪ್ ಫ್ಲೋರ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ನಂತರ ಇಡೀ ಮಾಲ್‍ಗೆ ಹರಡಿಕೊಂಡಿದೆ. ನೂರಾರು ಗ್ರಾಹಕರು ಅಲ್ಲಿ ನೆರೆದಿದ್ದರು ಎಂದು ವರದಿಯಾಗಿದೆ.

ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಗಾಬರಿಯಿಂದ ಓಡಿದ್ದಾರೆ. ಆದ್ರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ 37 ಮಂದಿ ಸಜೀವ ದಹನವಾಗಿದ್ದಾರೆ. ಅವಘಡದಲ್ಲಿ ಸುಮಾರು 43 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ತಕ್ಷಣವೇ ರವಾನಿಸಲಾಗಿದೆ. ಶಾಪಿಂಗ್ ಸೆಂಟರ್ ನಿಂದ ದಟ್ಟವಾದ ಹೊಗೆ ಬರುತ್ತಿರುವ ಫೋಟೋಗಳನ್ನು ರಷ್ಯಾದ ಮಾಧ್ಯಮಗಳು ಬಿತ್ತರಿಸಿವೆ. ತಕ್ಷಣ ಸ್ಥಳಕ್ಕೆ ಸುಮಾರು 300 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ.
ಅತೀ ದೊಡ್ಡದಾದ ಈ ಶಾಪಿಂಗ್ ಮಾಲ್ ನಲ್ಲಿ ಹಲವು ಮಹಡಿಗಳಿದ್ದು, ಭಾನುವಾರ ಮಧ್ಯಾಹ್ನ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಶಾಪಿಂಗ್ ಸೆಂಟರ್ ನಲ್ಲಿ ಅಂದಾಜು ಎಷ್ಟು ಜನರಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ. ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಸಾವಿರಾರು ಸ್ಕ್ವೇರ್ ಮೀಟರ್ ಬೆಂಕಿಗಾಹುತಿಯಾಗಿದೆ. ಸಿನಿಮಾ ಹಾಲ್ ನ ಎರಡು ಮೇಲ್ಛಾವಣಿ ಕುಸಿದು ಬಿದ್ದಿದೆ. ಸುಮಾರು 120 ಮಂದಿಯನ್ನು ಸಿನಿಮಾ ಹಾಲ್ ನಿಂದ ರಕ್ಷಿಸಲಾಗಿದೆ ಎಂದು ರಕ್ಷಣಾ ತಂಡ ತಿಳಿಸಿದೆ.

ಈಗಾಗಲೇ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಕೆಲವರು ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ
2013 ರಲ್ಲಿ ನಿರ್ಮಾಣವಾಗಿರುವ ಈ ಮಾಲ್ 23,000 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಶಾಪಿಂಗ್ ಸೆಂಟರ್, ಬೌಲಿಂಗ್ ಕ್ಲಬ್, ಮಕ್ಕಳ ಆಟದ ಏರಿಯಾ, ಸಿನೆಮಾ ಹಾಲ್ ಜೊತೆಗೆ ಸಾಕುಪ್ರಾಣಿ ಸಂಗ್ರಹಾಲಯವೂ ಈ ಮಾಲ್ ನಲ್ಲಿದೆ. ಈ ಮಾಲ್ ಮಾಸ್ಕೋದಿಂದ 3000 ಕಿಮೀ ದೂರದಲ್ಲಿದೆ.


















