Tag: ಮಾಲ್ಗುಡಿ ಡೇಸ್

  • ಕಾಫಿನಾಡಲ್ಲಿ ವಿಜಯ ರಾಘವೇಂದ್ರ ‘ಮಾಲ್ಗುಡಿ ಡೇಸ್’ ಪ್ರಚಾರ

    ಕಾಫಿನಾಡಲ್ಲಿ ವಿಜಯ ರಾಘವೇಂದ್ರ ‘ಮಾಲ್ಗುಡಿ ಡೇಸ್’ ಪ್ರಚಾರ

    ಚಿಕ್ಕಮಗಳೂರು: ಮಾಲ್ಗುಡಿ ಡೇಸ್ ಚಿತ್ರ ವಿಭಿನ್ನವಾದ ಅನುಭವ ನೀಡಿದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ಚಿತ್ರಗಳಲ್ಲಿ ಯುವಕನ ಪಾತ್ರ ಮಾಡಿದ್ದೇನೆ. ಆದರೆ, 70 ವರ್ಷ ವಯಸ್ಸಿನ ಈ ಪಾತ್ರ ಹೊಸ ಅನುಭವ ನೀಡಿದೆ ಎಂದು ಚಿತ್ರದ ಸಾಹಿತಿ ಲಕ್ಷ್ಮಿ ನಾರಾಯಣ ಪಾತ್ರದ ಬಗೆಗಿನ ಅನುಭವವನ್ನ ಹಂಚಿಕೊಂಡಿದ್ದಾರೆ.

    ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಮಾಲ್ಗುಡಿ ಡೇಸ್ ಚಿತ್ರದ ಪಾತ್ರ ಸವಾಲಾಗಿತ್ತು. 70 ವರ್ಷ ವಯಸ್ಸಿನ ಹಾವ-ಭಾವವನ್ನ ನಿರ್ವಹಿಸಬೇಕಿತ್ತು. ಪಾತ್ರಕ್ಕೆ ತಕ್ಕಂತೆ ಇಂಗ್ಲೆಂಡ್‍ನಲ್ಲಿ ತರಬೇತಿ ಪಡೆದಿರೋ ಮೇಕಪ್ ಕಲಾವಿದ ರೋಷನ್ ಚೆನ್ನಾಗಿ ಮೇಕಪ್ ಮಾಡಿದ್ದಾರೆ. ಚಿತ್ರಕ್ಕೆ ಹೊಂದುವ ಮೇಕಪ್ ಮಾಡಲು 4 ಗಂಟೆ ಬೇಕಾಗುತ್ತಿತ್ತು. ತದನಂತರ ಶೂಟಿಂಗ್‍ನಲ್ಲಿ ಭಾಗವಹಿಸುತ್ತಿದ್ದೆ ಎಂದರು.

    ನಿರ್ದೇಶಕ ಕಿಶೋರ್ ಮಾಡಬಿದರೆ ಮಾತನಾಡಿ, ನಾನು ಈಗಾಗಲೇ ತುಳುವಿನಲ್ಲಿ ‘ಅಪ್ಪೆ ಟೀಚರ್’ ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದು ನನ್ನ ಎರಡನೇ ಚಿತ್ರವಾಗಿದೆ. ದಕ್ಷಿಣ ಕನ್ನಡದ ಕಥೆಯಾಗಿರೋ ಮಾಲ್ಗುಡಿ ಡೇಸ್, ಕಳಸ, ಹೊರನಾಡು, ತೀರ್ಥಹಳ್ಳಿ, ಶಿವಮೊಗ್ಗದಲ್ಲ ಚಿತ್ರೀಕರಣ ನಡೆಸಲಾಗಿದೆ ಎಂದರು.

    ಮಾಲ್ಗುಡಿ ಊರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಥೆ ಸಾಗಿದ್ದು, ಸಾಹಿತಿ ಆರ್.ಕೆ.ನಾರಾಯಣ ಬರೆದಿದ್ದ ಶಂಕರನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆಯೇ ಬೇರೆ. ಈ ಚಿತ್ರದಲ್ಲಿ ಬರುವ ಸಾಹಿತಿ ಲಕ್ಷ್ಮಿನಾರಾಯಣ ಮಾಲ್ಗುಡಿಯವರು ತಮ್ಮ ನಿವೃತ್ತಿಯ ನಂತರ ಏನು ಮಾಡುತ್ತಾರೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. 2019ರ ಫೆಬ್ರವರಿಯಿಂದ 3 ಹಂತದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೇ ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದರು.

    ಈ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀಷ್ಮಾ ಚಿತ್ರದ ನಾಯಕಿಯಾಗಿದ್ದಾರೆ. ಇವರೊಂದಿಗೆ ಸ್ಥಳಿಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಿಲ್ಲೆಯ ಕಡೂರಿನ ಶೃತಿ ಅಜ್ಜಂಪುರ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಮಾಲ್ಗುಡಿ ಡೇಸ್ ನಮ್ಮ ಜೀವನದ ಪ್ರತಿ ಹಂತವನ್ನು ನೆನಪಿಸುವ ಕಥೆಯಾಗಿದ್ದು, ರತ್ನಾಕರ್ ಕಾಮತ್ ನಿರ್ಮಾಪಕರಾದ್ರೆ, ಚಿತ್ರಕ್ಕೆ ಗಗನ್ ಬಡೇರಿಯಾರವರ ಸಂಗೀತವಿದೆ ಎಂದು ತಿಳಿಸಿದರು.

    ಇದಕ್ಕೂ ಮುನ್ನ ನಗರ ಎಂ.ಇ.ಎಸ್. ಕಾಲೇಜಿಗೆ ತೆರಳಿ ವಿದ್ಯಾರ್ಥಿಯರಿಗೆ ಚಿತ್ರದ ಬಗ್ಗೆ ಪ್ರಮೋಷನ್ ಮಾಡಿ, ಹಾಡು ಹೇಳಿ ರಂಜಿಸಿದ್ದರು.

  • ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡದ ಕಟ್ಟೆ ಪಂಚಾತಿಕೆ

    ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡದ ಕಟ್ಟೆ ಪಂಚಾತಿಕೆ

    ಉಡುಪಿ: ಮಾಲ್ಗುಡಿ ಡೇಸ್ ಚಿತ್ರದಲ್ಲಿ ಬ್ಯುಸಿ ಇರುವ ವಿಜಯ್ ರಾಘವೇಂದ್ರ ತಮ್ಮ ತಂಡದ ಜೊತೆ ಕಟ್ಟೆ ಪಂಚಾತಿಕೆ ಮಾಡಿದ್ದಾರೆ.

    ಉಡುಪಿ ನಗರದ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯು ಆಯೋಜಿಸಿದ್ದ ಕಟ್ಟೆ ಪಂಚಾತಿಕೆ ಮಾತುಕತೆ ಸರಣಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.

    ಭಾಷೆ, ಬಟ್ಟೆ, ಅನುಕೂಲತೆಗಳನ್ನು ಹೆಚ್ಚಿಸಿಕೊಂಡ ಕೂಡಲೇ ನಾವು ಆಧುನಿಕರಾಗುವುದಿಲ್ಲ. ಹಳೆಯದನ್ನೂ ಅನುಸರಿಸುತ್ತ ಇವತ್ತಿಗೂ ಬೇಕಾಗುವಂತೆ ಬದುಕುವುದೇ ಆದರ್ಶ ಜೀವನ. ಆಧುನಿಕತೆಯ ಬೇರು ಹಳತರಲ್ಲಿದೆ ಎಂದು ವಿಜಯ ರಾಘವೇಂದ್ರ ಹೇಳಿದರು. ದುಡ್ಡು ಮತ್ತು ಅಭಿರುಚಿಯ ಕುರಿತು ಅನೇಕರಲ್ಲಿ ಗೊಂದಲಗಳಿವೆ. ಹಣದ ಹಿಂದೆ ಹೋದಾಗ ಬುದ್ಧಿ ಕೆಲಸ ಮಾಡುತ್ತದೆಯೇ ವಿನಃ ಮನಸ್ಸು ಜೊತೆಗಿರುವುದಿಲ್ಲ. ನಮ್ಮ ಆಸಕ್ತಿಯ ಹಿಂದೆಯೇ ಬಿದ್ದಾಗ ಕಷ್ಟಗಳೂ ಕೇವಲವಾಗಿ ಬಿಡುತ್ತವೆ. ಎತ್ತರದ ಸಾಧನೆ ಸಾಧ್ಯ. ಸೋಲು ಬದುಕಿನ ಒಂದು ಭಾಗವಷ್ಟೇ ಎಂದು ವಿಜಯ ರಾಘವೇಂದ್ರ ಹೇಳಿದರು.

    ವಿದ್ಯಾರ್ಥಿಗಳ ಜೊತೆ ಚಿತ್ರದ ಬಗ್ಗೆ, ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ಮೆಲುಕು ಹಾಕಿಕೊಂಡರು. ಕಾರ್ಯಕ್ರಮ ಮುಗಿದ ಮೇಲೆ ರಾಘು ಜೊತೆ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ ಮಾಡಿ, ಎರಡು ಸ್ಟೆಪ್ ಹಾಕಿದರು.

    ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಲ್ಗುಡಿ ಡೇಸ್ ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ, ನಿರ್ಮಾಪಕ ರವಿಶಂಕರ್, ನಾಯಕಿ ಗ್ರೀಷ್ಮ ಜೊತೆಗಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಶ್ರೇಯಸ್ ಕೋಟ್ಯಾನ್ ಪಂಚಾತಿಕೆಯ ನಿರೂಪಣೆ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹಿಮಾ ಶೆಣೈ ವಂದಿಸಿದರು.

  • ಅಮೆಜಾನ್ ಪ್ರೈಮ್‍ನಲ್ಲಿ ಮಾಲ್ಗುಡಿ ಡೇಸ್ ನೋಡೋ ಅವಕಾಶ!

    ಅಮೆಜಾನ್ ಪ್ರೈಮ್‍ನಲ್ಲಿ ಮಾಲ್ಗುಡಿ ಡೇಸ್ ನೋಡೋ ಅವಕಾಶ!

    ಬೆಂಗಳೂರು: ಶಂಕರ್ ನಾಗ್ ಅವರ ಕನಸುಗಾರಿಕೆ ಮತ್ತು ಹೊಸತೇನನ್ನೋ ಸೃಷ್ಟಿಸುವ ಹಂಬಲಕ್ಕೆ ಸ್ಪಷ್ಟ ಸಾಕ್ಷಿಯಂತಿರೋದು ಮಾಲ್ಗುಡಿ ಡೇಸ್ ಧಾರಾವಾಹಿ. ಆರ್ ಕೆ ನಾರಾಯಣ್ ಕಾದಂಬರಿ ಆಧಾರಿತವಾದ ಈ ಧಾರಾವಾಹಿಯನ್ನು ಹಿಂದಿಯಲ್ಲಿ ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಮೂಲಕವೇ ಕರ್ನಾಟಕದ ನೆಲದ ಘಮಲನ್ನು ಆ ಕಾಲದಲ್ಲಿಯೇ ದೇಶೀಯ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿರುಗಿಸಿದ ಕೀರ್ತಿಯೂ ಮಾಲ್ಗುಡಿ ಡೇಸ್ ಮತ್ತು ಅದರ ಸೃಷ್ಟಿಕರ್ತ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಈ ಧಾರಾವಾಹಿಯೀಗ ಕನ್ನಡಕ್ಕೂ ಡಬ್ ಆಗಿದೆ. ಅಮೆಜಾನ್ ಪ್ರೈಮ್‍ನಲ್ಲದು ಈಗ ನೋಡಲು ಸಿಗುತ್ತಿದೆ.

    ಆ ಕಾಲದಲ್ಲಿಯೇ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ದೊಡ್ಡ ಮಟ್ಟದಲ್ಲಿಯೇ ಪ್ರಸಿದ್ಧಿ ಪಡೆದುಕೊಂಡಿತ್ತು. ತದ ನಂತರದಲ್ಲಿ ಈ ಧಾರಾವಾಹಿ ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂನಂಥಾ ಭಾಷೆಗಳಿಗೂ ಡಬ್ ಆಗಿತ್ತು. ಆದರೆ ದುರದೃಷ್ಟವೆಂಬಂತೆ ಬಹು ಕಾಲದವರೆಗೂ ಇದು ಕನ್ನಡ ಭಾಷೆಗೆ ಮಾತ್ರ ಡಬ್ ಆಗಲಿಲ್ಲ. ಇದೀಗ ಆ ಕೊರಗು ನೀಗಿದೆ. ಮಾಲ್ಗುಡಿ ಡೇಸ್ ಕನ್ನಡಕ್ಕೂ ಡಬ್ ಆಗಿ ಅಮೆಜಾನ್ ಪ್ರೈಮ್‍ಗೂ ಲಗ್ಗೆಯಿಟ್ಟಿದೆ.

    ಕನ್ನಡದ ಪ್ರತಿಭೆಗಳೇ ನಟಿಸಿ ನಿರ್ದೇಶನ ಮಾಡಿದ್ದ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಿ ನೋಡೋ ಅವಕಾಶ ಕಲ್ಪಿಸಿಕೊಟ್ಟಿರೋದು ಬನವಾಸಿ ಬಳಗ ಎಂಬ ಕನ್ನಡದ ಸಂಸ್ಥೆ. ಕನ್ನಡಿಗರ ಕಾತರವನ್ನು ಅರ್ಥ ಮಾಡಿಕೊಂಡಿರೋ ಈ ತಂಡದ ಸದಸ್ಯರು ತುಂಬಾ ಸಮಯ ಹಗಲಿರುಳೆನ್ನದೆ ಶ್ರಮ ವಹಿಸಿ ಇದನ್ನು ಸಾಧ್ಯವಾಗಿಸಿದ್ದಾರೆ. ಆಯಾ ಪಾತ್ರಗಳಿಗೆ ತಕ್ಕುದಾದ ಧ್ವನಿಯೊಂದಿಗೆ ಶಂಕರನ ಕನಸಿನ ಕೂಸಾದ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಈ ಮೂಲಕ ಕನ್ನಡಿಗರ ಪಾಲಿಗೆ ಮಹದಾನಂದ ನೀಡುವಂಥಾ ಕಾರ್ಯವನ್ನು ಬನವಾಸಿ ಬಳಗ ಮಾಡಿದೆ.

  • ಮಾಲ್ಗುಡಿ ಡೇಸ್ ಚಿತ್ರಕ್ಕೆ ಬಿಗ್ ಬಾಸ್ ಧನರಾಜ್ ಎಂಟ್ರಿ

    ಮಾಲ್ಗುಡಿ ಡೇಸ್ ಚಿತ್ರಕ್ಕೆ ಬಿಗ್ ಬಾಸ್ ಧನರಾಜ್ ಎಂಟ್ರಿ

    ಬೆಂಗಳೂರು:  ವಿಜಯ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಮಾಲ್ಗುಡಿ ಡೇಸ್’ ಚಿತ್ರ ಚಿತ್ರೀಕರಣಕ್ಕೂ ಮುಂಚೆಯೇ ಟೈಟಲ್ ನಿಂದ ಸದ್ದು ಮಾಡಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈಗ ಚಿತ್ರತಂಡ ತೀರ್ಥಹಳ್ಳಿ ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿದ್ದು, ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರಬಂದಿದೆ.

    ಬಿಗ್ ಬಾಸ್ 6ರ ಸ್ಪರ್ಧಿಯಾದ ಧನರಾಜ್ ತನ್ನ ಪ್ರಾಮಾಣಿಕ ಆಟ, ಎಲ್ಲರನ್ನು ನಗಿಸುವ ಗುಣದಿಂದ ಮನೆಮಾತಾಗಿದ್ದರು. ಬಿಗ್ ಬಾಸ್ ಅಂಚನ್ನು ತಲುಪಿದರೂ ಸ್ಪರ್ಧೆ ಗೆಲ್ಲದೆ ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಧನರಾಜ್ ಬಿಗ್ ಬಾಸ್ ನಂತರ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದ್ದದ್ದಂತೂ ನಿಜ. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ನಂತರ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿರುವ ಧನರಾಜ್ ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    ಮೂಲತಃ ಡಬ್ಬಿಂಗ್ ಆರ್ಟಿಸ್ಟ್ ಹಾಗು ಚಿತ್ರನಟರಾಗಿರುವ ಧನರಾಜ್ ಅವರಿಗೆ ಸಿನಿಮಾ ಹೊಸದಲ್ಲ. ಅವರ ಪಾತ್ರದ ಬಗ್ಗೆ ಸಿನಿಮಾ ನಿರ್ದೇಶಕರಾದ ಕಿಶೋರ್ ಮೂಡಬಿದ್ರೆಯವರನ್ನು ಕೇಳಿದಾಗ, ಸಿನಿಮಾದಲ್ಲಿ ಧನರಾಜ್ ಅವರದ್ದು ಪ್ರಮುಖ ಪಾತ್ರ. ಸಿನಿಮಾದ ಕತೆಯ ಸಾಗುವಿಕೆಯಲ್ಲಿ ಅವರ ಪಾತ್ರ ಬಹಳ ಗಮನ ಸೆಳೆಯುತ್ತದೆ ಎಂದಷ್ಟೇ ಹೇಳಿ ಕತೆಯ ಗುಟ್ಟನ್ನು ಬಿಟ್ಟುಕೊಡದೆ ಸುಮ್ಮನಾದರು. ಈಗಾಗಲೇ ಸತತ ಹತ್ತು ದಿನಗಳ ಕಾಲ ವಿಜಯ ರಾಘವೇಂದ್ರ ಮತ್ತಿತರ ನಟರೊಂದಿಗೆ ನಟಿಸುತ್ತಿರುವ ಧನರಾಜ್ ತೀರ್ಥಹಳ್ಳಿ ಸುತ್ತ ಮುತ್ತ ಚಿತ್ರೀಕರಣದಲ್ಲಿ ಮತ್ತಷ್ಟು ದಿನಗಳು ಬ್ಯುಸಿಯಾಗಿರಲಿದ್ದಾರೆ.

    ಕಿಶೋರ್ ಮೂಡಬಿದ್ರೆ ನಿರ್ದೇಶನದ, ಕೆ.ರತ್ನಾಕರ್ ಕಾಮತ್ ನಿರ್ಮಾಣದ ‘ಮಾಲ್ಗುಡಿ ಡೇಸ್’ ಚಿತ್ರ ಟೈಟಲ್ ಮತ್ತು ಪಾತ್ರವರ್ಗದಿಂದ ಸುದ್ದಿ ಮಾಡಿತ್ತು. ಈಗ ಬಿಗ್ ಬಾಸ್ ಖ್ಯಾತಿಯ ಧನರಾಜ್ ಮಾಲ್ಗುಡಿ ಡೇಸ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಅವರ ಪಾತ್ರವೇನು ಎನ್ನುವುದು ಬಿಡುಗಡೆಯ ನಂತರವಷ್ಟೇ ತಿಳಿಯಲಿದೆ.