Tag: ಮಾಲೂರು

  • ಮಾಲೂರು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಕಾಮಿಗೆ ಗಲ್ಲು

    ಮಾಲೂರು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಕಾಮಿಗೆ ಗಲ್ಲು

    ಕೋಲಾರ: ಜಿಲ್ಲೆಯ ಮಾಲೂರು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ ಆರೋಪಿಗೆ ಕೋಲಾರದ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಮಾಲೂರು ತಾಲೂಕು ಟೇಕಲ್ ಗ್ರಾಮದ ನಿವಾಸಿ ಸುರೇಶ್ ಬಾಬು (25) ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ಆರೋಪಿಯೊಬ್ಬನಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

    ಇಂದು ನಡೆದ ಕಲಾಪದಲ್ಲಿ ನ್ಯಾಯಾಧೀರಾದ ಬಿ.ಎಸ್.ರೇಖಾ ಅವರು, ಪ್ರಕರಣದ ಕುರಿತು 18 ದಿನಗಳಲ್ಲಿ ಮಾಲೂರು ಪೊಲೀಸರು 201 ಪುಟಗಳ ಚಾರ್ಜ್ ಶೀಟ್ ಪರಿಶೀಲಿಸಿ, 46 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿದರು. ಅವರ ಪೈಕಿ 33 ಮಂದಿ ಸಾಕ್ಷಿದಾರರ ಹೇಳಿಕೆಯನ್ನು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

    ಏನಿದು ಪ್ರಕರಣ?
    ಆಗಸ್ಟ್ 1 ರಂದು ಮಾಲೂರು ಪಟ್ಟಣದ ಶಾಲೆಯಿಂದ ಸಂಜೆ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗುತ್ತಿದ್ದರು. ಆಗ ರೈಲ್ವೇ ಅಂಡರ್ ಪಾಸ್ ಬಳಿಯ ರಸ್ತೆ ಪಕ್ಕದ ಪೊದೆಯಲ್ಲಿ ಅಡಗಿ ಕುಳಿತಿದ್ದ ಸುರೇಶ್ ಬಾಬು ವಿದ್ಯಾರ್ಥಿನಿಯೊಬ್ಬಳನ್ನು ಗದ್ದೆಗೆ ಏಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ, ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಳು. ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ವಿದ್ಯಾರ್ಥಿನಿ ಶವವಾಗಿ ಬಿದ್ದಿದ್ದಳು. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಪ್ರಕರಣ ಇಡೀ ಕೋಲಾರ ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಘಟನೆಯಿಂದ ಆತಂಕಗೊಂಡಿದ್ದ ಜಿಲ್ಲೆಯ ಜನರು, ಸಾವಿರಾರು ವಿದ್ಯಾರ್ಥಿಗಳು ಅಮಾಯಕ ವಿದ್ಯಾರ್ಥಿನಿಯನ್ನು ಕೊಂದ ಆರೋಪಿಯ ಬಂಧನಕ್ಕಾಗಿ ಆಗ್ರಹಿಸಿ ಬೃಹತ್ ಹೋರಾಟವನ್ನೇ ಮಾಡಿದ್ದರು. ಆರೋಪಿಯನ್ನು ಬಂಧಿಸುವವರೆಗೆ ಹೋರಾಟ ಕೈಬಿಡೋ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುಟ್‍ಪಾತ್ ತೆರವು ಕಾರ್ಯಾಚರಣೆಗೆ ಅಧ್ಯಕ್ಷ-ಸದಸ್ಯರ ನಡುವೆ ಮಾರಾಮಾರಿ

    ಪುಟ್‍ಪಾತ್ ತೆರವು ಕಾರ್ಯಾಚರಣೆಗೆ ಅಧ್ಯಕ್ಷ-ಸದಸ್ಯರ ನಡುವೆ ಮಾರಾಮಾರಿ

    ಕೋಲಾರ: ಪುಟ್‍ಪಾತ್ ತೆರವು ಕಾರ್ಯಾಚರಣೆ ವೇಳೆ ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರು ಮಾರಾಮಾರಿ ಹೊಡದಾಡಿಕೊಂಡ ಘಟನೆ ಜಿಲ್ಲೆ ಮಾಲೂರು ಪಟ್ಟಣದಲ್ಲಿ ನಡೆದಿದೆ.

    ಇಂದು ಮಾಲೂರು ಪುರಸಭೆ ಅಧ್ಯಕ್ಷ ರಾಮಮೂರ್ತಿ ಅವರ ಆದೇಶದಂತೆ ಫುಟ್‍ಪಾತ್ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಸದಸ್ಯರಾದ ಮುರಳಿ ಹಾಗೂ ಶ್ರೀನಿವಾಸ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

    ಅಧ್ಯಕ್ಷರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಾತಿನ ಚಕಮಕಿ ನಡೆಯಿತು. ಬಳಿಕ ಅಧ್ಯಕ್ಷರು ಹಾಗೂ ಸದಸ್ಯರು ಹೊಡೆದಾಡಿದರು. ಸಾರ್ವಜನಿಕರು ಜನಪ್ರತಿನಿಧಿಗಳ ಕಿತ್ತಾಟವನ್ನು ನೋಡುತ್ತ ನಿಂತಿದ್ದರು.

    ಘಟನೆಯ ಕುರಿತು ಮಾಹಿತಿ ಪಡೆದ ಮಾಲೂರು ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಶಾಂತಿ ಕಾಪಾಡಿದರು.

  • 2 ಅಡಿ ಎತ್ತರದ ವಧುವಿನ ಕೈ ಹಿಡಿದ 2.5 ಅಡಿ ಎತ್ತರದ ವರ!

    2 ಅಡಿ ಎತ್ತರದ ವಧುವಿನ ಕೈ ಹಿಡಿದ 2.5 ಅಡಿ ಎತ್ತರದ ವರ!

    ಕೋಲಾರ: ಅತಿ ಅಪರೂಪ ಎನ್ನುವಂತೆ ಕುಬ್ಜ ಜೋಡಿಯ ವಿವಾಹ ಸಮಾರಂಭ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗಡಿ ಜಡಗೇನಹಳ್ಳಿಯಲ್ಲಿ ನಡೆದಿದೆ.

    ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಅನ್ನೋದಕ್ಕೆ ಇಲ್ಲಿ ನಡೆದ ಅಪರೂಪದ ಕುಬ್ಜರ ಮದುವೆ ಸಾಕ್ಷಿಯಾಗಿದೆ. ಜಡಗೇನಹಳ್ಳಿ ಪುರಾಣ ಪ್ರಸಿದ್ದ ಕಾಲಭೈರವೇಶ್ವರ ದೇವಾಲಯದಲ್ಲಿಂದು ಗುರು-ಹಿರಿಯರ ಸಮ್ಮುಖದಲ್ಲಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಶವಂತಪುರದ ಅನಿಲ್ ಕುಮಾರ್ (28) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮೀ ಸತಿಪತಿಗಳಾಗಿದ್ದಾರೆ.

    2.5 ಅಡಿ ಎತ್ತರದ ವರ ಅನಿಲ್ ಕುಮಾರ್ ಹಾಗೂ 2 ಅಡಿ ಎತ್ತರದ ವಧು ವರಲಕ್ಷ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಇಬ್ಬರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು ಬಲು ಅಪರೂಪ ನಮ್ಮ ಜೋಡಿ ಅನ್ನೊ ಕುಬ್ಜರ ವಿವಾಹಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಕೂಡ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

  • ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ: ಹೆಸರು ಕೇಳಿದ ತಕ್ಷಣ ನೆನಪಾಗುವುದು ಚಿನ್ನದ ಗಣಿಗಳು. ಈ ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧವಾಗಿದ್ದು, ಈ ಹಿಂದೆ ಕೋಲಾರವನ್ನು ಕುವಲಾಲಪುರ ಎಂದು ಕರೆಯುತ್ತಿದ್ದರು.

    ಪ್ರಮುಖ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಲಾರ ಗಂಗರ ಆಳ್ವಿಕೆಯಲ್ಲಿ ರಾಜಧಾನಿಯಾಗಿತ್ತು. ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. 4 ರಿಂದ 19ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು, ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಗಂಗರ ಕಾಲದಲ್ಲಿ ನಿರ್ಮಾಣವಾದ ಹಲವು ದೇವಾಲಯಗಳು ಇಂದಿಗೂ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ ಕೋಲಾರ ನಗರದ ಹೃದಯ ಭಾಗದಲ್ಲಿರುವ ಕೋಲಾರಮ್ಮ ದೇವಾಲಯ ಹಾಗೂ ಸೋಮನಾಥ ದೇವಾಲಯ ಪ್ರಮುಖವಾದದ್ದು. ಉಳಿದಂತೆ ಅಂತರಗಂಗೆ ಬೆಟ್ಟ, ಕೋಟಿ ಲಿಂಗ, ಮುಳಬಾಗಿಲು ಅಂಜನೇಯಸ್ವಾಮಿ ದೇವಾಲಯ, ಚಿಕ್ಕ ತಿರುಪತಿ, ಬಂಗಾರ ತಿರುಪತಿ ಸ್ಥಳಗಳು ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿದೆ.

    ರಾಜಕೀಯವಾಗಿ ರಾಜ್ಯಕ್ಕೆ ಮೊದಲ ಸಿಎಂ ಕೆ ಚಂಗಲರಾಯರೆಡ್ಡಿ ಕೋಲಾರದವರು ಎಂಬ ಹೆಗ್ಗಳಿಯೂ ಪಡೆದಿದೆ. ಇನ್ನು 2008ರಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ವಿಭಜನೆ ಮಾಡಿ ಸ್ವತಂತ್ರ್ಯ ಜಿಲ್ಲೆಯಾಗಿ ಘೋಷಿಸಲಾಯಿತು. 2011 ರ ಜನಗಣತಿ ಪ್ರಕಾರ ಕೋಲಾರ ಜಿಲ್ಲೆ 1,536,401 ಜನಸಂಖ್ಯೆ ಹೊಂದಿದೆ.

    ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಕೋಲಾರ ತಾಲೂಕು ಕೇಂದ್ರಗಳಾಗಿವೆ. ಜಿಲ್ಲೆಯಲ್ಲಿ ಕುರುಬ, ಒಕ್ಕಲಿಗ, ಪರಿಶಿಷ್ಟ ಜಾತಿ ಸೇರಿದಂತೆ ಮುಸ್ಲಿಂ ಮತಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿ ಪ್ರಮುಖ ಚರ್ಚೆಯ ವಿಷಯಗಳಾಗಿದೆ.

    ಕೋಲಾರ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು, ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವರ್ತೂರ್ ಪ್ರಕಾಶ್ ಜಯಗಳಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳಲ್ಲಿ ವರ್ತೂರ್ ಪ್ರಕಾಶ್ ಸ್ವತಃ `ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸಿ ಕಣಕ್ಕೆ ಇಳಿದಿದ್ದಾರೆ.

    ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಕಣಕ್ಕೆ ಇಳಿದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಜೆಡಿಎಸ್ ನಿಂದ ಕೆ ಶ್ರೀನಿವಾಸ್ ಗೌಡ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿ ಯಿಂದ ಓಂ ಶಕ್ತಿ ಚಲಪತಿ ಕಣ್ಣಕ್ಕೆ ಇಳಿದಿದ್ದಾರೆ. 2013 ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್ 62,957 ಮತ ಹಾಗೂ ಜೆಡಿಎಸ್ ನ ಕೆ ಶ್ರೀನಿವಾಸ ಗೌಡ 50,366 ಮತ ಪಡೆದಿದ್ದರು.

    ಕ್ಷೇತ್ರದಲ್ಲಿ ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸದ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ ವರ್ತೂರ್ಪ್ರಕಾಶ್ ಅವರಿಗೆ ಜೆಡಿಎಸ್ ನ ಶ್ರೀನಿವಾಸಗೌಡ ಪ್ರಬಲ ಪೈಪೋಟಿ ಜೊತೆಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಡಿ.ಕೆ.ರವಿ ತಾಯಿ ಗೌರಮ್ಮ ಅವರು ಪರೀಕ್ಷೆ ಗಿಳಿದಿದ್ದಾರೆ.

    ಬಂಗಾರಪೇಟೆ ಕ್ಷೇತ್ರವು ಬೆಂಗಳೂರು ನಗರ ಸೇರಿದಂತೆ ಇತರೇ ಪ್ರದೇಶಗಳಿಗೆ ಹೊಂದಿರುವ ರೈಲ್ವೇ ಸಂಪರ್ಕದ ಹಿನ್ನೆಲೆ ಹೆಚ್ಚು ಹೆಸರು ಪಡೆದಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ್ದ ಬಂಗಾರಪೇಟೆ ಡಿ.ಕೆ.ರವಿ ಅವರ ಸಾವಿನ ಬಳಿಕ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಯೂ ಪ್ರಮುಖ ಚುನಾವಣಾ ವಿಷಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯ ಪಡೆದಿದ್ದ ಎಸ್‍.ಎನ್ ನಾರಾಯಣಸ್ವಾಮಿ 71,570 ಮತ ಪಡೆದಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಇಎಂ ನಾರಾಯಣಸ್ವಾಮಿ 43,193 ಮತ ಪಡೆದಿದ್ದರು. 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಎಂ ನಾರಾಯಣಸ್ವಾಮಿ ಜಯ ಗಳಿಸಿದ್ದರು. ಸದ್ಯ ಈ ಬಾರಿ ಎಂ. ನಾರಾಯಣಸ್ವಾಮಿಗೆ ಟಿಕೇಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದು ಜೆಡಿಎಸ್ ಬೆಂಬಲ ಸೂಚಿಸಿದ್ದಾರೆ. ಸಧ್ಯ ಜೆಡಿಎಸ್ ನ ಮಲ್ಲೇಶ್ ಬಾಬು ಹಾಗೂ ಬಿಜೆಪಿ ಬಿ.ಪಿ.ವೆಂಕಟಮುನಿಯಪ್ಪ ನಡುವೆ ಎರಡನೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

    ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕಣವಾಗಿರುವ ಶ್ರೀನಿವಾಸಪುರ ಕ್ಷೇತ್ರ ಪ್ರತಿ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕರನ್ನು ಸೋಲಿಸಿ ಎದುರಾಳಿ ಅಭ್ಯರ್ಥಿಗೆ ಜಯ ನೀಡುತ್ತ ಬಂದಿದೆ. ಸದ್ಯ ಹಾಲಿ ಶಾಸಕರಾಗಿರುವ ಹಾಗೂ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರಿಗೆ ಜೆಡಿಎಸ್ ನ ಜಿ.ಕೆ.ವೆಂಕಟಶಿವಾ ರೆಡ್ಡಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಬ್ಬರು ರಮೇಶ್ ಕುಮಾರ್ ಅವರು ಸ್ವಾಮಿ ಎಂದು ಹೆಸರು ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ ಅವರು ರೆಡ್ಡಿ ಎಂದೇ ಪರಿಚಿತರು.

    ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಪ್ರಮುಖ ಚರ್ಚೆಯ ವಿಷಯವಾಗಿ ಕಾಣುತ್ತಿದೆ. ಕೋಲಾರ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ಬದಲಾಗಿ ಕೆಸಿ ವ್ಯಾಲಿ ನೀರು ನೀಡುವ ನಿರ್ಧಾರವು ಪ್ರಮುಖ ವಿಷಯವಾಗಿದೆ. ಕ್ಷೇತ್ರದಲ್ಲಿ ರೆಡ್ಡಿ ಹಾಗೂ ಒಕ್ಕಲಿಗ ಮತಗಳ ಹೆಚ್ಚು ನಿರ್ಣಾಯವಾಗಿದೆ. ಕಳೆದ ಬಾರಿ ರಮೇಶ್ ಕುಮಾರ್ 83,426 ಮತ ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ 79,533 ಮತ ಪಡೆದಿದ್ದರು. ಇಬ್ಬರೆ ವ್ಯಕ್ತಿಗಳಾದ್ರು ಇಬ್ಬರ ಜಯಕ್ಕೆ ಕೆಲವೆ ಕೆಲ ಮತಗಳ ಅಂತರವಷ್ಟೆ ಕಾಯ್ದುಕೊಂಡೆ ಬಂದಿರುವುದು 40 ವರ್ಷಗಳ ತಾಜಕಾರಣಕ್ಕೆ ಸಾಕ್ಷಿ.

    ಬೆಂಗಳೂರಿಗೆ ಹೊಂದಿಕೊಂಡಿರುವ ಮಾಲೂರು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಉತ್ತಮ ಬೆಳವಣಿಗೆ ಪಡೆಯುತ್ತಿದೆ. ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ನ ಮಂಜುನಾಥ ಗೌಡರು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಧಾನ, ಧರ್ಮಗಳ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಕಳೆದ ಬಾರಿ ಮಂಜುನಾಥ್ ಅವರು 57,645 ಮತ ಪಡೆದಿದ್ದಾರೆ, ಕೃಷ್ಣಯ್ಯ ಶೆಟ್ಟಿ ಪಕ್ಷೇತರ ರಾಗಿ ಸ್ಪರ್ಧೆ ಮಾಡಿ 38,876 ಮತ ಪಡೆದು ಸೋಲುಂಡಿದ್ದರು. ಈ ಬಾರಿಯೂ ಇಬ್ಬರ ನಡುವೆ ನಾನೇನೂ ಕಡಿಮೆ ಇಲ್ಲವೆಂಬಂತೆ ಪೈಪೋಟಿ ಕಾಂಗ್ರೇಸ್ ನ ಅಭ್ಯರ್ಥಿ ಕೆ.ವೈ.ನಂಜೇಗೌಡ ಕಣದಲ್ಲಿದ್ದು, ಮೂವರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.

    ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೀಗಿ ಹಿಡಿತ ಹೊಂದಿರುವ ಏಕೈಕ ಕ್ಷೇತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಸಂಪಂಗಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಅವರ ತಾಯಿ ರಾಮಕ್ಕ ಗೆಲ್ಲಿಸಿಕೊಂಡ ಬಿಜೆಪಿ ಸಂಪಂಗಿ ಅವರಿಗೆ ಹೆಚ್ಚು ಪ್ರಭಾವ ಹೊಂದಿದ್ದು, ಕಳೆದ ಬಾರಿ ಅವರ ತಾಯಿ ರಾಮಕ್ಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆದರೆ ಈ ಬಾರಿಯೂ ಟಿಕೇಟ್ ಕೈತಪ್ಪಿದ ಬೆನ್ನಲ್ಲೆ ಸಂಪಂಗಿ ಮಗಳು ಆಶ್ವಿನಿ ಎನ್ ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.

    ಬೆಂಗಳೂರಿಗೆ ಉತ್ತಮ ರೈಲ್ವೇ ಸಂಪರ್ಕ ಹೊಂದಿರುವುದರಿಂದ, ಚಿನ್ನದ ಗಣಿ ಮುಚ್ಚಿದ ನಂತರ ಕ್ಷೇತ್ರ 25 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ರಾಜಧಾನಿಯನ್ನೇ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಕೆಜಿಎಫ್ ಗಣಿಗಳ ಪುನರ್ ಆರಂಭವೂ ಚರ್ಚೆಯ ವಿಷಯವಾಗಿದೆ. ಕ್ಷೇತ್ರದ ತಮಿಳು ಭಾಷೆ ಮಾತನಾಡುವ ಮತದಾರರು ಮುಖ್ಯ ಪಾತ್ರವಹಿಸುತ್ತಾರೆ. ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿ ನೀಡುತ್ತಿರುವ ಜೆಡಿಎಸ್ ಅಭ್ಯರ್ಥಿ ಭಕ್ತವತ್ಸಲಂ ಈ ಬಾರಿಯೂ ಕಣದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಕಾಂಗ್ರೆಸ್ ನಿಂದ ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಬಿಜೆಪಿ ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ, ಆರ್ ಪಿ ಐ ನಿಂದ ಮಾಜಿ ಶಾಸಕ ರಾಜೇಂದ್ರನ್, ಸಿಪಿಎಂ ನಿಂದ ತಂಗರಾಜ್ ಕಣದಲ್ಲಿದ್ದಾರೆ. ಕಳೆದ ಬಾರಿ ಹಾಲಿ ಶಾಸಕಿ ರಾಮಕ್ಕ 55,014 ಮತ ಹಾಗೂ ಜೆಡಿಎಸ್ ನಿಂದ ಭಕ್ತವತ್ಸಲಂ 28,992 ಮತ ಪಡೆದಿದ್ದರು.

    ಚುನಾವಣೆಗೂ ಮುನ್ನವೆ ಕಾಂಗ್ರೇಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರ ಆಗುವ ಮೂಲಕ ಕಾಂಗ್ರೇಸ್ ಗೆ ಮರ್ಮಾಗತ ಉಂಟಾಗಿತ್ತು, ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆಯೇ ರಾಜ್ಯ ಗಮನ ಸೆಳೆದಿದ್ದ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಮೀಸಲು ಕ್ಷೇತ್ರವಾಗಿರುವುದರಿಂದ ಕಳೆದ ಬಾರಿ ಜಯಗಳಿಸಿದ್ದ ಕೊತ್ತೂರು ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಆರೋಪದಲ್ಲಿ ಈ ಬಾರಿ ಸ್ಪರ್ಧೆ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ.

    ಆರ್ಥಿಕವಾಗಿ ಬಹಳ ಹಿಂದುಳಿದಿರುವ ಈ ಕ್ಷೇತ್ರವೂ ಅಭಿವೃದ್ಧಿಯ ವಿಚಾರದಲ್ಲಿಯೂ ಹಿಂದುಳಿದಿದೆ. ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಮತದಾರರು ಜೊತೆ ಮುಸ್ಲಿಂ ಮತಗಳು ಹೆಚ್ಚು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿ ಬಿಜೆಪಿಯಿಂದ ಅಮರೇಶ್ ಸ್ಪರ್ಧೆ ನಡೆಸಿದ್ದರೆ, ಜೆಡಿಎಸ್ ನಿಂದ ಸಮೃದ್ದಿ ಮಂಜುನಾಥ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕೋಲಾರ ಎಂಪಿ ಕೆ.ಎಚ್ ಮುನಿಯಪ್ಪ ಅವರ ದ್ವಿತೀಯ ಪುತ್ರಿ ಕೊನೆ ಗಳಿಗೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಯಾಗಲು ರಾಜಕೀಯ ಕುತಂತ್ರವೆ ನಡೆದಿತ್ತು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದರು. 2013 ರ ಚುನಾವಣೆಯಲ್ಲಿ ಮಂಜುನಾಥ್ 73,146 ಮತ ಹಾಗೂ ಜೆಡಿಎಸ್ ಮುನಿ ಆಂಜನಪ್ಪ ಅವರು 39,412 ಮತ ಪಡೆದಿದ್ದರು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿರುವ ಪವರ್ ಮಿನಿಸ್ಟರ್ ಡಿಕೆಶಿ ಹಾಗೂ ಪರಮೇಶ್ವರ ಅವರ ಆಪ್ತ ಎಚ್.ವೆಂಕಟೇಶ್ ಗೆ ಕಾಂಗ್ರೆಸ್ ಬೆಂಬಲ ನೀಡಲು ನಿರ್ಧರಿಸಿದೆ.

    ಒಟ್ಟಿನಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಜೆಡಿಎಸ್ ಮೊದಲ ಸ್ಥಾನ 3 ಅಥವಾ 4 ಸ್ಥಾನ, ಕಾಂಗ್ರೇಸ್ ಎರಡನೆ ಸ್ಥಾನ 2 ಅಥವಾ 3 ಹಾಗೂ ಬಿಜೆಪಿ ಮೂರನೆ ಸ್ಥಾನಕ್ಕೆ ಅಂದರೆ 1 ಸ್ಥಾನಕ್ಕೆ ತೃಪ್ತಿ ಪಡಬೇಕಿದೆ. ಈ ಮಧ್ಯೆ ಒಂದು ಪಕ್ಷೇತರ ಅಥವಾ ನಮ್ಮ ಕಾಂಗ್ರೇಸ್ ಗೆದ್ದರೆ ಅಚ್ಚರಿ ಏನಿಲ್ಲ.

  • ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಕೋಲಾರ: ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯ ಅಹವಾಲು ಸ್ವೀಕರಿಸಲು ಬಂದ ಶಾಸಕರೇ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ಹೊರ ವಲಯದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಆರಂಭವಾಗಿ ನಾಲ್ಕು ಗಂಟೆಗಳಾದರೂ ಯಾವ ಅಧಿಕಾರಿಗಳು, ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈ ವೇಳೆ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ರಸ್ತೆ ದುರಸ್ಥಿಗೊಳಿಸುವ ಭರವಸೆ ನೀಡಿದರು.

    ಆದರೆ ಶಾಸಕರ ಭರವಸೆಗೆ ತೃಪ್ತರಾಗದ ಪ್ರತಿಭಟನಾಕಾರರು ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ್ದರು.

    ಶಾಸಕರ ಉತ್ತರಕ್ಕೆ ತೃಪ್ತರಾಗದ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದರಿಂದ ಶಾಸಕ ಮಂಜುನಾಥ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೋಲಾರ ಕಾಂಗ್ರೆಸ್ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಲೂರು – ಹೊಸಕೋಟೆ ಮುಖ್ಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು.