Tag: ಮಾಲೀಕ

  • ವೀಲ್‍ಚೇರ್ ತಳ್ಳಲು ತನ್ನ ಮಾಲೀಕನಿಗೆ ಸಹಾಯ ಮಾಡ್ತು ಶ್ವಾನ

    ವೀಲ್‍ಚೇರ್ ತಳ್ಳಲು ತನ್ನ ಮಾಲೀಕನಿಗೆ ಸಹಾಯ ಮಾಡ್ತು ಶ್ವಾನ

    ಫಿಲಿಫೈನ್ಸ್: ಒಂದು ನಾಯಿ ತನ್ನನ್ನು ಸಾಕಿ ಸಲಹಿದ ಮಾಲೀಕನು ಕುಳಿತಿರುವ ವೀಲ್‍ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ನಾಯಿವೊಂದು ಫಿಲಿಪೈನ್ಸ್ ನ ಬೀದಿಯಲ್ಲಿ ತನ್ನ ಯಜಮಾನ ಕುಳಿತಿರುವ ವೀಲ್‍ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿರುತ್ತದೆ. ಆ ವೇಳೆ ಮಿಸಿಸ್ ಫೇತ್ ಎಲ್ ರೆವಿಲ್ಲಾ ಎಂಬ ಎಂಬಿಎ ವಿದ್ಯಾರ್ಥಿನಿ ಮೊಬೈಲ್‍ನಲ್ಲಿ ಸೆರೆಹಿಡಿದು ಜೂನ್ 30 ರಂದು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

    ತನ್ನ ಮಾಸ್ಟರ್ ನ ವೀಲ್‍ಚೇರ್ ತಳ್ಳಲು ನಾಯಿಯೊಂದು ಸಹಾಯ ಮಾಡುತ್ತಿರುವ ಈ ಅಸಾಮಾನ್ಯ ಸೃಷ್ಟಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಈ ಭಾವನಾತ್ಮಕ ದೃಶ್ಯವನ್ನು ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ ಎಂದು ವಿದ್ಯಾರ್ಥಿನಿ ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಡ್ಯಾನಿಲೋ ಅಲಾರ್ಕಾನ್ ವೀಲ್ ಚೇರ್‍ನಲ್ಲಿ ಕುಳಿತಿದ್ದ ನಾಯಿಯ ಮಾಲೀಕ. ಈತ ಕೆಲವು ವರ್ಷಗಳ ಹಿಂದೆ ಅಪಘಾತ ಸಂಭವಿಸಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರುತ್ತಾರೆ. ಡಿಗೊಂಗ್ ಎಂಬ ನಾಯಿ ಹುಟ್ಟಿನಿಂದಲೂ ಅವರೊಂದಿಗೆ ಇದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಡಿಗೊಂಗ್ ತನ್ನ ತಲೆಯ ಸಹಾಯದ ಮೂಲಕ ತನ್ನ ಮಾಲೀಕನ ವೀಲ್‍ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿತ್ತು. ಇದನ್ನು ನೋಡಿದ ರೆವಿಲ್ಲಾ, ಮನಕರಗಿ ಅವರಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದಾರೆ.

    https://www.facebook.com/princess121815/videos/1995965553769976/

  • ಡೀಸೆಲ್ ಬೆಲೆ ಹೆಚ್ಚಳ : ಶೀಘ್ರವೇ ಖಾಸಗಿ ಪ್ರವಾಸಿ ಟ್ಯಾಕ್ಸಿಗಳ ದರ ಏರಿಕೆ!

    ಡೀಸೆಲ್ ಬೆಲೆ ಹೆಚ್ಚಳ : ಶೀಘ್ರವೇ ಖಾಸಗಿ ಪ್ರವಾಸಿ ಟ್ಯಾಕ್ಸಿಗಳ ದರ ಏರಿಕೆ!

    ಬೆಂಗಳೂರು: ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ದರಗಳ ಮೇಲೆ ಸೆಸ್ ದರವನ್ನು ಹೆಚ್ಚಿಸಿದ್ದರ ಪರಿಣಾಮ ಖಾಸಗಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ದರ ಏರಿಕೆ ಮಾಡಲು ಮುಂದಾಗಿದ್ದಾರೆ.

    ತೈಲ ಕಂಪೆನಿಗಳು ದಿನ ನಿತ್ಯ ತೈಲ ದರ ಪರಿಷ್ಕರಣೆ ಮಾಡುತ್ತಿರುವುದಲ್ಲದೇ, ರಾಜ್ಯ ಸರ್ಕಾರವು ತನ್ನ ನೂತನ ಬಜೆಟ್ ನಲ್ಲಿ ಸೆಸ್ ದರವನ್ನು ಏರಿಕೆ ಮಾಡಿದೆ. ಇದರ ಜೊತೆಗೆ ಖಾಸಗಿ ಮೋಟರು ವಾಹನಗಳಿಗೆ ರಸ್ತೆ ತೆರಿಗೆಯನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಪ್ರವಾಸಿ ಟ್ಯಾಕ್ಸಿ ಹಾಗೂ ಕ್ಯಾಬ್ ಗಳು ದರ ಪರೀಷ್ಕರಣೆ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ.

    ಮುಂದಿನ ವಾರದಲ್ಲಿ ಸಭೆ ನಡೆಸಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಕರ್ನಾಟಕ ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳರವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಖಾಸಗಿ ಟ್ಯಾಕ್ಸಿ ಮಾಲೀಕರು ಹೆಚ್ಚುತ್ತಿರುವ ಹೊರೆಯನ್ನು ಕಡಿತಗೊಳಿಸಲು ಸಾರ್ವಜನಿಕರ ಮೇಲೆ ಹೊರೆ ಹೊರಿಸಲು ನಿರ್ಧರಿಸಿದ್ದಾರೆ. ಐಟಿ ಬಿಟಿ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವ ವಾಹನ ಸೇರಿದಂತೆ ಟೂರಿಸ್ಟ್ ವಾಹನಗಳದ ದರ 5% ರಿಂದ 10% ರಷ್ಟು ಏರಿಕೆಗೆ ಚಿಂತನೆ ಮಾಡಿದ್ದಾರೆ.

  • ಸೆಲ್ಫಿ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ  ಜಮೀನು ಮಾಲೀಕನ ಮೇಲೆಯೇ ಪ್ರವಾಸಿಗರಿಂದ ಹಲ್ಲೆ!

    ಸೆಲ್ಫಿ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ ಜಮೀನು ಮಾಲೀಕನ ಮೇಲೆಯೇ ಪ್ರವಾಸಿಗರಿಂದ ಹಲ್ಲೆ!

    ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ಜನ ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ನಡೆದಿದೆ.

    ಪ್ರಯಾಣದ ವೇಳೆ ರಸ್ತೆ ಬದಿ ಬೆಳೆದಿರುವ ಬೆಳೆಗಳ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಆದರೆ ಜಮೀನಿನಲ್ಲಿ ಬೆಳೆ ಹಾಳಾಗುತ್ತದೆ ಇಲ್ಲಿ ಸೆಲ್ಫಿ ತೆಗೆಯಬೇಡಿ ಎಂದಿದ್ದಕ್ಕೆ ಯುವಕರ ಗುಂಪೊಂದು ಜಮೀನು ಮಾಲೀಕನ ಮೇಲೆಯೇ ಹಲ್ಲೆ ನಡೆಸಿದೆ.

    ಬಸವಣ್ಣ ಹಲ್ಲೆಗೊಳಗಾದ ಜಮೀನಿನ ಮಾಲೀಕ. ಇವರ ಜಮೀನು ರಾಷ್ಟ್ರೀಯ ಹೆದ್ದಾರಿ 212 ಪಕ್ಕ ಇದೆ. ಇಂದು ಕೇರಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯುವಕರ ಗುಂಪೊಂದು ಸೂರ್ಯಕಾಂತಿ ಬೆಳೆಯ ನಡುವೆ ಸೆಲ್ಫಿ ತೆಗೆದುಕೊಳ್ಳಲು ಜಮೀನಿಗೆ ನುಗ್ಗಿದ್ದಾರೆ. ಈ ವೇಳೆ ಸೂರ್ಯಕಾಂತಿ ಬೆಳೆಯನ್ನು ತುಳಿದು ಹಾಳು ಮಾಡಿದ್ದಾರೆ.

    ಇದನ್ನು ನೋಡಿದ ರೈತ ಬಸವಣ್ಣ ಬೆಳೆ ಹಾಳಾಗುತ್ತದೆ ಇಲ್ಲಿ ಫೋಟೋ ತೆಗೆದುಕೊಳ್ಳಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಯುವಕರು ಬಸವಣ್ಣ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕೂಡಲೇ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬಂದು ಹಲ್ಲೆ ಮಾಡಿದ ಯುವಕರನ್ನು ಹಿಡಿದು ಥಳಿಸಿದ್ದಾರೆ.

    ಈ ವೇಳೆ ಮೂವರು ಯುವಕರು ಸಿಕ್ಕಿಹಾಕಿಕೊಂಡಿದ್ದು, ಉಳಿದ 7 ಮಂದಿ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ರಮವಾಗಿ ಜಮೀನಿಗೆ ನುಗ್ಗಿ ಬೆಳೆ ಹಾಳುಮಾಡಿದ್ದಲ್ಲದೆ ವಿರೋಧ ವ್ಯಕ್ತಪಡಿಸಿದ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಕಾರಣ ಮೂವರು ಯುವಕರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

  • ವಾಕಿಂಗ್ ಸ್ಟೈಲ್, ಹಾಕಿರೋ ಚಪ್ಪಲಿ ನೋಡಿಯೇ ಕಳ್ಳನನ್ನು ಗುರುತು ಹಿಡಿದ ಮಾಲೀಕ!

    ವಾಕಿಂಗ್ ಸ್ಟೈಲ್, ಹಾಕಿರೋ ಚಪ್ಪಲಿ ನೋಡಿಯೇ ಕಳ್ಳನನ್ನು ಗುರುತು ಹಿಡಿದ ಮಾಲೀಕ!

    ಬೆಂಗಳೂರು: ವಾಕಿಂಗ್ ಸ್ಟೈಲ್ ಹಾಗೂ ಹಾಕಿರೋ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನ ಹಿಡಿದಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.

    ಇದೇ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ ತನ್ನ ಕೈ ಚಳಕ ತೋರಿಸಿ 35,000 ರೂ. ಹಣ ಕಳ್ಳತನ ಮಾಡಿದ್ದಾನೆ. ಕಳ್ಳತನದ ದೃಶ್ಯವಾಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಸಿಸಿಟಿವಿ ಹಿಡಿದುಕೊಂಡು ಮಾಲೀಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಹೋದರೆ ಎಲೆಕ್ಷನ್ ಮುಗಿದ ಮೇಲೆ ಬಾ ಹೋಗು ಎಂದು ಪೊಲೀಸರು ಹೇಳಿ ವಾಪಸ್ ಕಳುಹಿಸಿದ್ದಾರೆ. ಅಯ್ಯೋ ಹೀಗಾಯ್ತಲ್ಲ ಎಂದು ಮಾಲೀಕ ಭರತ್ ಸಾಕಷ್ಟು ಸಲ ಕಳ್ಳನ ಕೈ ಚಳಕವನ್ನು ಸಿಸಿಟಿವಿಯಲ್ಲಿ ಗಮನಿಸಿದ್ದಾರೆ.

    ವಾರದ ಬಳಿಕ ಅದೇ ಕಳ್ಳ ಚಿಕ್ಕಪೇಟೆಯ ಮತ್ತೊಂದು ಬೀದಿಯಲ್ಲಿ ಕಾಣಿಸಿಕೊಂಡಿದ್ದಾನೆ. ಆತನ ವಾಕಿಂಗ್ ಸ್ಟೈಲ್, ಚಪ್ಪಲಿ, ಹೇರ್ ಸ್ಟೈಲ್, ಸಿಸಿಟಿಯಲ್ಲಿ ಸೆರೆಯಾಗಿದ್ದ ವಿಷುವಲ್ಸ್ ಸೇಮ್ ಟು ಸೇಮ್ ಇತ್ತು.

    ಮಾಲೀಕ ಭರತ್ ಕಳ್ಳನನ್ನು ಹಿಡಿಯೋಕೆ ಹೋದಾಗ ಓಡಲು ಶುರು ಮಾಡಿದ್ದಾನೆ. ಒಂದು ಕಿಲೋಮೀಟರ್ ವರೆಗೆ ಬೆನ್ನಟ್ಟಿ ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರೆ, ಸಿಟಿ ಮಾರ್ಕೆಟ್ ಪೊಲೀಸರು ಬಿಟ್ಟು ಕಳಿಸಿದ್ದಾರೆ.

    ಇದೀಗ ಡಿಸಿಪಿ ರವಿ ಚೆನ್ನಣ್ಣನವರ್ ಎಂಟ್ರಿಯಿಂದ ಎಫ್‍ಐಆರ್ ಮಾಡಿ ಶುಕ್ರವಾರ ಕಳ್ಳನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.

  • ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಬೆಂಗಳೂರು: ಸಂಬಳ ಹೆಚ್ಚಳ ಮಾಡಿ ಎಂದಿದ್ದ ನೌಕರರಿಗೆ ಮಾಲೀಕರೇ ಥಳಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಶಾಯಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲಿ ನಡೆದಿದೆ.

    ಗಾರ್ಮೆಂಟ್ಸ್ ನ 8 ಜನ ಮಾಲೀಕರು ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ನೌಕರರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಏಪ್ರಿಲ್ 2ರಂದು ಸಂಬಳ ಹೆಚ್ಚಿಸುವಂತೆ ನೌಕರರು ಮನವಿ ಮಾಡಿದ್ದರು. ಬುಧವಾರ ಮತ್ತೆ ಕೇಳಿದಾಗ ನೌಕರರು ಮತ್ತು ಮಾಲೀಕರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಾಲೀಕರು ನೌಕರರ ಮೇಲೆ ಹಲ್ಲೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಮ್ಮ ಎಂಬವರನ್ನು ಮಾದನಾಯಕನಹಳ್ಳಿಯ ಶಿವಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಬ್ಬಕ್ಕೆ ದುಡ್ಡು ಕೊಡದ್ದಕ್ಕೆ ಹೋಟೆಲ್‍ಗೆ ನುಗ್ಗಿ ದಾಂಧಲೆ- ಅಡ್ಡ ಬಂದ ಮಾಲೀಕನನ್ನೇ ಕೆಳಗೆ ಹಾಕಿ ತುಳಿದ್ರು

    ಹಬ್ಬಕ್ಕೆ ದುಡ್ಡು ಕೊಡದ್ದಕ್ಕೆ ಹೋಟೆಲ್‍ಗೆ ನುಗ್ಗಿ ದಾಂಧಲೆ- ಅಡ್ಡ ಬಂದ ಮಾಲೀಕನನ್ನೇ ಕೆಳಗೆ ಹಾಕಿ ತುಳಿದ್ರು

    ಬೆಂಗಳೂರು: ಹಬ್ಬದ ನೆಪದಲ್ಲಿ ವಸೂಲಿ ಮಾಡ್ತಿದ್ದ ಯುವಕರು ಕೇಳಿದಷ್ಟು ಹಣ ಕೊಡಲಿಲ್ಲವೆಂದು ಹೋಟೆಲ್‍ವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿ, ಮಾಲೀಕನ ಮೇಲೆ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಯುಗಾದಿ ಹಬ್ಬದ ಮರುದಿನ ಅಂದರೆ ಸೋಮವಾರ ಬೆಂಗಳೂರಿನ ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಇರೊ ಉಡುಪಿ ರುಚಿಯ ಹೋಟೆಲ್ ಮುಚ್ಚೋ ಸಮಯ. ಇನ್ನೇನು ಹೋಟೆಲ್ ಮುಚ್ಚಬೇಕು ಅನ್ನುವಷ್ಟರಲ್ಲಿ ಇಬ್ಬರು ಕುಡಿದುಕೊಂಡು ಹೋಟೆಲ್ ಒಳಗೆ ನುಗ್ಗಿದ್ದಾರೆ. ಸೀದಾ ಕಿಚನ್‍ಗೆ ಹೋದ ಆರೋಪಿಗಳು ಕಾರ್ಮಿಕರನ್ನ ಥಳಿಸಿದ್ದಾರೆ. ಇದೇನಾಗ್ತಿದೆ ಅಂತಾ ಮಾಲೀಕ ಪ್ರಕಾಶ್ ಅಡ್ಡ ಬಂದು ಗೂಂಡಾಗಳನ್ನ ಆಚೆ ತಳ್ಳೋದಕ್ಕೆ ಶುರು ಮಾಡಿದ್ದಾರೆ. ಈ ವೇಳೆ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಹೆಲ್ಮೆಟ್‍ನಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ನಂತರ ಏಳೆಂಟು ಜನ ಗೂಂಡಾಗಳು ಸೇರಿಕೊಂಡು ಮಾಲೀಕನನ್ನ ಹೋಟೆಲ್‍ನಿಂದ ಹೊರಗೆ ಎಳೆದೊಯ್ದು ಕೆಳಗೆ ಹಾಕಿ ತುಳಿದಿದ್ದಾರೆ. ಅಲ್ಲದೇ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ.

    ಇಷ್ಟಕ್ಕೇ ಸುಮ್ಮನಾಗದ ಗೂಂಡಾಗಳು, ಏನೋ ಹಬ್ಬಕ್ಕೆ ಕೇಳಿದಷ್ಟು ಹಣ ಕೊಡದೆ ಆಟವಾಡ್ತೀಯ. ಗಣೇಶನ ಹಬ್ಬದಲ್ಲೇ ನಿನಗೆ ಟಾರ್ಗೆಟ್ ಇಟ್ಟಿದ್ದೋ. ಇವತ್ತು ಸಿಕ್ಕಾಕೊಂಡಿದ್ದೀಯ ಅಂತಾ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಹೋಟೆಲ್‍ನಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೆಲಸದ ಹುಡುಗರ ಮೇಲೆ ಚೇರ್ ಎಸೆದು ಪುಂಡಾಟ ಮೆರೆದಿದ್ದಾರೆ.

    ಹಲ್ಲೆಗೊಳಗಾದ ಪ್ರಕಾಶ್‍ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ತಲೆಗೆ ಎಂಟು ಸ್ಟಿಚ್ ಹಾಕಲಾಗಿದೆ. ಕೊಲೆ ಯತ್ನ ಪ್ರಕರಣದಡಿ ಆರೋಪಿಗಳನ್ನ ಬಂಧಿಸಿಬೇಕಾದ ಮಹದೇವಪುರ ಪೊಲೀಸ್ರು ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಕಾಶ್ ಕುಟುಂಬಕ್ಕೆ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಬರಲಾರಂಭಿಸಿದೆ ಎನ್ನಲಾಗಿದೆ. ಕೇಸ್ ವಾಪಸ್ ಪಡೆಯದಿದ್ರೆ ಅದ್ಹೇಗೆ ಹೋಟೆಲ್ ನಡೆಸ್ತೀಯೊ ನೋಡ್ತೀವಿ ಅಂತಾ ಅವಾಜ್ ಹಾಕಿದ್ದಾರೆ.

  • ಮುದ್ದು ಗಿಳಿಯ ಸಾವು- ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಮಾಲೀಕ

    ಮುದ್ದು ಗಿಳಿಯ ಸಾವು- ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಮಾಲೀಕ

    ಲಕ್ನೋ: ಕುಟುಂಬಸ್ಥರು ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ನಡೆಸುವುದು ಸಂಪ್ರದಾಯದ ಒಂದು ಭಾಗ. ಆದ್ರೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ವ್ಯಕ್ತಿಯೊಬ್ಬರು ತನ್ನ ಸಾಕುಗಿಳಿಯ ಅಂತ್ಯಸಂಸ್ಕಾರವನ್ನ ನೆರವೇರಿಸಿರುವುದು ಸುದ್ದಿಯಾಗಿದೆ.

    ಪಂಜಕ್ ಕುಮಾರ್ ಮಿತ್ತಲ್ ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಿತ್ತಲ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಮಾರ್ಚ್ 5 ರಂದು ಸಾವನ್ನಪ್ಪಿದ್ದ ತನ್ನ ಮುದ್ದು ಗಿಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ತನ್ನ ಪ್ರೀತಿ ಹಾಗೂ ಸ್ಮರಣೆಯನ್ನ ನಿರೂಪಿಸಿದ್ದಾರೆ. ಅಮ್ರೋಹಾದ ಹಸನ್‍ಪುರ್ ನಿವಾಸಿಯಾಗಿರೋ ಮಿತ್ತಲ್, ಗಿಳಿಯ ಅಂತ್ಯಸಂಸ್ಕಾರದ ಭಾಗವಾಗಿ ಭಾನುವಾರದಂದು ಹವನ ಹಾಗೂ ಔತಣ ಕೂಡ ಏರ್ಪಡಿಸಿದ್ದರು.

    5 ವರ್ಷಗಳ ಹಿಂದೆ ಗಿಳಿಯ ಕಾಲಿಗೆ ಗಾಯವಾಗಿ ಅದು ಹಾರಾಡಲು ಸಾಧ್ಯವಿರದಿದ್ದಾಗ ನಾನದನ್ನು ದತ್ತು ತೆಗೆದುಕೊಂಡಿದ್ದೆ. ನನ್ನ ಮಗನಿಗಿಂತಲೂ ಹೆಚ್ಚಾಗಿ ಅದಕ್ಕೆ ಆರೈಕೆ ಮಾಡಿದ್ದೆ ಎಂದು ಮಿತ್ತಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ಮಿತ್ತಲ್ ಕುಟುಂಬಸ್ಥರು ಗಿಳಿಯ ಅವಶೇಷಗಳನ್ನು ಗಂಗಾ ನದಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಕ್ರಿಯೆ ನಡೆಸಿದ್ದಷ್ಟೇ ಅಲ್ಲದೆ ಪ್ರಾರ್ಥನೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ.

  • ಮಾಲೀಕ ಸತ್ತು 4 ತಿಂಗಳು ಕಳೆದ್ರೂ ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ ನಾಯಿ

    ಮಾಲೀಕ ಸತ್ತು 4 ತಿಂಗಳು ಕಳೆದ್ರೂ ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ ನಾಯಿ

    ಬ್ರೆಸಿಲಿಯಾ: ನಾಯಿಗಳ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮಾಲೀಕನ ಮೇಲೆ ನಾಯಿಗಳು ಎಷ್ಟು ಪ್ರೀತಿ ಇಟ್ಟಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. 4 ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ ಆಸ್ಪತ್ರೆಯಿಂದ ಹೋಗಲು ನಿರಾಕರಿಸಿ ನಾಯಿಯೊಂದು ಅಲ್ಲೇ ಕಾಲ ಕಳೆಯುತ್ತಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಬ್ರೆಜಿಲ್‍ನ ಬೀದಿಯಲ್ಲಿ ನಾಯಿಯ ಮಾಲೀಕರಾದ ನಿರಾಶ್ರಿತ ವ್ಯಕ್ತಿಯೊಬ್ಬರ ಮೇಲೆ ಕೊಲೆ ಯತ್ನ ನಡೆದಿತ್ತು. ಅವರನ್ನ ಆಸ್ಪತ್ರೆಗೆ ರವಾನಿಸುವಾಗ ನಾಯಿ ಕೂಡ ಆಂಬುಲೆನ್ಸ್ ಹಿಂದೆ ಓಡಿಬಂದಿತ್ತು. ಆದ್ರೆ ವ್ಯಕ್ತಿ ಸಾವನ್ನಪ್ಪಿದರೂ ಕೂಡ ನಾಯಿ ಮಾತ್ರ ಆಸ್ಪತ್ರೆ ಬಿಟ್ಟು ಹೋಗ್ತಿಲ್ಲ.

    ಸೇವಾ ಸಂಸ್ಥೆಯೊಂದು ನಾಯಿಗೆ ಬೇರೆಡೆ ಆಶ್ರಯ ಕಲ್ಪಿಸಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲವಾಗಿದೆ. ಹೊಸ ಮಾಲೀಕರ ಮನೆಯಿಂದಲೂ ನಾಯಿ ತಪ್ಪಿಸಿಕೊಂಡು ಬಂದು ತನ್ನ ಯಜಮಾನನಿಗಾಗಿ ಆಸ್ಪತ್ರೆ ಮುಂದೆ ಕಾಯುತ್ತಿದೆ.

    ಇಲ್ಲಿನ ನೋವೋ ಹಾರಿಜಾಂಟೆಯ ಸಾಂಟಾ ಕಾಸಾ ಆಸ್ಪತ್ರೆಯ ಹೊರಗಡೆ ಈ ನಾಯಿ 4 ತಿಂಗಳಿನಿಂದ ಕಾಯುತ್ತಿದೆ. ಸಾಂಟಾ ಕಾಸಾದ ಹಣಕಾಸು ನಿರ್ದೇಶಕರಾದ ಒಸ್ವಾಲ್ಡೋ ಪಲಾಟೋ ಸೊಬ್ರಿನ್ಹೋ ಅವರ ಪ್ರಕಾರ, ನಾಯಿಯ ಮಾಲೀಕರಾದ 59 ವರ್ಷದ ವ್ಯಕ್ತಿಗೆ ಚಾಕು ಇರಿದ ಬಳಿಕ ಅವರ ಜೊತೆಯಲ್ಲೇ ನಾಯಿ ಆಸ್ಪತ್ರೆಗೆ ಬಂದಿದೆ.

    ಈಗ ಅದು ಪ್ರತಿದಿನ ಆಸ್ಪತ್ರೆಯ ಹೊರಗೆ ಕುಳಿತುಕೊಳ್ಳುತ್ತದೆ. ಆಗಾಗ ಊಟ ಮತ್ತು ನೀರಿಗಾಗಿ ಮಾತ್ರ ಅತ್ತಿತ್ತ ಓಡಾಡುತ್ತದೆ. ಆದ್ರೆ ಯಾವಗ್ಲೂ ಕೊನೆಗೆ ಆಸ್ಪತ್ರೆಯ ಬಾಗಿಲ ಮುಂದೆ ಹಾಕಲಾಗಿರುವ ಹೊದಿಕೆ ಮೇಲೆ ಬಂದು ಕೂರುತ್ತದೆ ಎಂದು ಅವರು ಹೇಳಿದ್ದಾರೆ.

    ನಾಯಿಯನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಕೂಡ ಮರುಕಪಟ್ಟಿದ್ದಾರೆ. ಅದಕ್ಕಾಗಿ ಊಟ ಕೊಟ್ಟು, ಚಳಿಗೆ ಹೊದಿಕೆಯನ್ನೂ ತಂದು ಹಾಕಿದ್ದಾರೆ. ಈ ನಾಯಿ ತುಂಬಾ ಸಾಧು ಹಾಗೂ ಶಾಂತ ಸ್ವಭಾವದ್ದು ಎಂದು ಒಸ್ವಾಲ್ಡೋ ಹೇಳಿದ್ದಾರೆ.

    ಬೇರೆ ಕಡೆ ಆಶ್ರಯ ಕಲ್ಪಿಸಿದ ನಂತರವೂ ನಾಯಿ ಆಸ್ಪತ್ರೆ ಬಾಗಿಲ ಬಳಿ ಬಂದು ಕಾಯುತ್ತಿದ್ದುದನ್ನು ನೋಡಿ ಸಿಬ್ಬಂದಿಗಳು ಆಶ್ಚರ್ಯಪಟ್ಟಿದ್ದಾರೆ. ಆಸ್ಪತ್ರೆಗೆ ವಾಪಸ್ ಬರಲು ನಾಯಿ 3 ಕಿ.ಮೀ ಓಡಿದೆ. ಕ್ರಿಸ್ಟೀನ್ ಸಾರ್ಡೆಲ್ಲಾ ಎಂಬವರು ನಾಯಿಯ ಈ ನಿಷ್ಠೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರ ಸಮರ್ಪಣಾ ಭಾವ ನೋಡಿ ನನ್ನ ಮನಸ್ಸು ಕರಗಿತು ಎಂದು ಹೇಳಿದ್ದಾರೆ.

    ನಾಯಿ ಆಸ್ಪತ್ರೆಯ ಒಳಗೆ ಇಣುಕಿ ನೋಡುವುದನ್ನ ಕಂಡರೆ ಮಾಲೀಕ ಅದಕ್ಕಾಗಿ ಕಾಯುತ್ತಿದ್ದಾರೆ ಎಂಬಂತೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.

  • ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಪಾಟ್ನಾ: ಕೆಲಸದ ಮಾಲೀಕನ ಹೆಂಡತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಪಿಪ್ರಾ ಚೌಕ್‍ನ ಉಪಹಾರಗೃಹವೊಂದರಲ್ಲಿ ಕಳೆದ ರಾತ್ರಿ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರೋ 30 ವರ್ಷದ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿದ್ರಿಂದ ಈಗ ಆತ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಡಿಎಸ್‍ಪಿ ಬಿಕೆ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತ ವ್ಯಕ್ತಿ ಮೂಲತಃ ಸಮಷ್ಟಿಪುರದವನು ಎಂದು ವರದಿಯಾಗಿದೆ. ನಾನು ತೇಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರೌನಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಮಾಲೀಕನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಸಾಂದರ್ಭಿಕ ಚಿತ್ರ

    ಫೆಬ್ರವರಿ 6ರಂದು ಚಾಲಕ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಬಳಿಕ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು ಎಂದು ಡಿಎಸ್‍ಪಿ ಹೇಳಿದ್ದಾರೆ.

    ನಂತರ ಫೆಬ್ರವರಿ 16ರಂದು ಮಹಿಳೆ ತೇಗ್ರಾಗೆ ವಾಪಸ್ ಬಂದು ಸ್ಥಳೀಯ ಕೋರ್ಟ್‍ನಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗಿತ್ತು. ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಮಹಿಳೆಯ ಗಂಡನಿಗೆ ಹೇಳಿತ್ತು. ಮಹಿಳೆ ಇದ್ದಕ್ಕಿದ್ದಂತೆ ವಾಪಸ್ ಬಂದಿದ್ದೇಕೆ ಹಾಗೂ ಆಕೆ ಕೋರ್ಟ್‍ನಲ್ಲಿ ನೀಡಿದ ಹೇಳಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.

    ಕಳೆದ ಸಂಜೆ ಮಹಿಳೆಯ ಸಂಬಂಧಿ ಚಾಲಕನಿಗೆ ಕರೆ ಮಾಡಿದ್ದು, ಮಹಿಳೆ ನಿನ್ನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ. ತೇಗ್ರಾ ಪೊಲೀಸ್ ಠಾಣೆಗೆ ಬಂದು ಆಕೆಯನ್ನ ಕರೆದುಕೊಂಡು ಹೋಗು ಅಂತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಠಾಣೆಗೆ ಸುಮಾರು 1 ಕಿ.ಮೀ ದೂರದಲ್ಲೇ 20 ಜನರ ತಂಡ ಚಲಕನನ್ನು ತಡೆದಿದ್ದು, ಉಪಹಾರಗೃಹಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನ ಕಣ್ಣುಗಳಿಗೆ ಸಿರಿಂಜ್‍ನಿಂದ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

    ಬಳಿಕ ಚಾಲಕನನ್ನು ಭಗವಾನ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನಮಾನ್ ಚೌಕ್ ಬಳಿ ಎಸೆದು ಹೋಗಿದ್ದಾರೆ. ದಾರಿಹೋಕರೊಬ್ಬರು ಚಾಲಕನನ್ನ ಬೇಗುಸಾರೈನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಕ್ಲಿಕ್ ಆಯ್ತು ಸೂಪರ್ ಐಡಿಯಾ: 1 ದಿನದಲ್ಲಿ 4 ಪಟ್ಟು ಹೆಚ್ಚು ಆದಾಯಗಳಿಸಿದ ಮಾಂಸ ವ್ಯಾಪಾರಿ!

    ಕ್ಲಿಕ್ ಆಯ್ತು ಸೂಪರ್ ಐಡಿಯಾ: 1 ದಿನದಲ್ಲಿ 4 ಪಟ್ಟು ಹೆಚ್ಚು ಆದಾಯಗಳಿಸಿದ ಮಾಂಸ ವ್ಯಾಪಾರಿ!

    ತೈವಾನ್: ನಷ್ಟದಲ್ಲಿದ್ದ ಆಹಾರ ಮಳಿಗೆಗೆ ಮಾಲೀಕನೊಬ್ಬ ಹಾಟ್ ಮಾಡೆಲ್‍ನನ್ನು ಕರೆಸಿ ಒಂದೇ ದಿನದಲ್ಲಿ ನಾಲ್ಕು ಪಟ್ಟು ಹೆಚ್ಚು ಆದಾಯಗಳಿಸಿರುವ ಘಟನೆ ತೈವಾನ್ ನಲ್ಲಿ ನಡೆದಿದೆ.

    ಮಾಲೀಕ ತನ್ನ ಆಹಾರ ಮಳಿಗೆಯಲ್ಲಿ ಮಾಂಸವನ್ನು ಮಾರಾಟ ಮಾಡುತ್ತಿದ್ದನು. ಕೆಲವು ದಿನಗಳಿಂದ ಆತನ ಆಹಾರ ಮಳಿಗೆ ನಷ್ಟದಲ್ಲಿ ಸಾಗುತ್ತಿತ್ತು. ಆಗ ಮಾಲೀಕ ಉಪಾಯ ಮಾಡಿ ಒಂದು ದಿನಕ್ಕೆ ಮಾಡಲ್ ವಿವಿ ಎಂಬಾಕೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದ. ಮ್ಯಾನೇಜರ್ ಆಗಿ ನೇಮಿಸಿದ್ದೇ ತಡ ಒಂದೇ ದಿನದಲ್ಲಿ ನಾಲ್ಕು ಪಟ್ಟು ಹೆಚ್ಚು ಆದಾಯಗಳಿಸಿದ್ದಾನೆ.

    ಹೊಸದಾಗಿ ನೇಮಕವಾದ ವಿವಿಗೆ ಹಾಗೂ ಆಕೆಯ ವರ್ಚಸ್ಸಿಗೆ ನನ್ನ ಧನ್ಯವಾದಗಳು. ಆಹಾರ ಮಳಿಗೆ ಮುಂದೇ ಉದ್ದನೆಯ ಕ್ಯೂ ಕೂಡ ಇತ್ತು. ಶೀಘ್ರದಲ್ಲೇ ಆಹಾರದ ಅಂಗಡಿಯ ಲಾಭ ನಾಲ್ಕರಷ್ಟು ಹೆಚ್ಚಾಗಿತ್ತು ಎಂದು ಆಹಾರ ಮಳಿಗೆ ಮಾಲೀಕ ತಿಳಿಸಿದ್ದಾನೆ.

    ವಿವಿ ಮಾಂಸ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿ ಹೆಚ್ಚು ಶೇರ್ ಕೂಡ ಆಗಿದೆ. ಮಾಲೀಕನ ಬ್ಯುಸಿನೆಸ್‍ ನಲ್ಲಿ ಸಹಾಯ ಮಾಡಿದ ವಿವಿಗೆ ಹಚ್ಚು ಜನರು ಪ್ರಶಂಸೆ ವ್ಯಕ್ತಪಡಿಸಿದ್ದರು. ಮಾಲೀಕನಿಗೆ ಸಹಾಯ ಮಾಡಲು ವಿವಿ ಸ್ವಲ್ಪ ಹೊತ್ತು ತನ್ನ ಕೆಲಸದಿಂದ ದೂರಾಗಿ, ಆತನಿಗೆ ಸಹಾಯ ಮಾಡಿದ್ದಾಳೆ.

    ಮತ್ತೊಂದು ಸುದ್ದಿ ಏನೆಂದರೆ ಆಹಾರ ಮಳಿಗೆಯ ಹೊರಗಡೆ ಇದ್ದ ಕ್ಯೂನಲ್ಲಿ ಬರೀ ಪುರುಷರು ನಿಂತಿದ್ದರು ಎಂದು ವರದಿಯಾಗಿದೆ. ಈ ಸುದ್ದಿಗೆ ಕೆಲವು ಮಂದಿ ಆಕೆಯ ಆರ್ಕಷಣೆಯಿಂದ ಆಹಾರ ಮಳಿಗೆ ನಾಲ್ಕು ಪಟ್ಟು ಹೆಚ್ಚು ಆದಾಯಗಳಿಸಿತ್ತು ಎಂದು ಹೇಳಿದ್ದರೆ, ಇನ್ನೂ ಕೆಲವು ಮಂದಿ ಆಕೆಯ ಉಡುಪಿನಿಂದ ಆದಾಯ ಹೆಚ್ಚಿದೆ ಎಂದು ಪ್ರತಿಕ್ರಿಯಿಸಿದ್ದಾರೆ.