Tag: ಮಾಲೀಕ

  • ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಬೆಂಗಳೂರು: ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ ಎಂದು ಸಚಿವ ಜಮೀರ್ ಖಾನ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್ ಬಳಿ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.

    ಜಮೀರ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, ‘ಐಎಂಎ ಜ್ಯುವೆಲ್ಸ್ ಮಾಲೀಕ ಜನಾಬ್ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸಂದೇಶ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮಾಧ್ಯಮಗಳ ಮೂಲಕ ನಾನು ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಮನ್ಸೂರ್ ಖಾನ್ ಬನ್ನಿ ನೀವು ಭಯಪಡಬೇಡಿ. ನಿಮ್ಮೊಂದಿಗೆ ನಾವೇದ್ದೇವೆ, ಈ ಸರ್ಕಾರವಿದೆ. ಆಗಿದ್ದು ಆಗಿಹೋಯ್ತು. ನೀವು ಆಡಿಯೋದಲ್ಲಿ ಹೇಳಿರುವುದು ಸತ್ಯವಾದ್ರೆ ಮುಖಾಮುಖಿಯಾಗಿ ಕುಳಿತುಕೊಳ್ಳಿ, ನಿಮ್ಮ ಜೊತೆ ನಾವೇದ್ದೇವೆ. ನೀವು ಯಾರಿಗೆ ದುಡ್ಡು ಕೊಟ್ಟಿದ್ದೀರಾ ಅದನ್ನ ಹೇಳಿ. ಆ ದುಡ್ಡನ್ನು ರಿಕವರಿ ಮಾಡೋಣ ಅದನ್ನು ಬಡವರಿಗೆ ಹಂಚೋಣ. ನೀವು ಯಾವ ರಾಜಕಾರಣಿಗೆ ದುಡ್ಡು ಕೊಟ್ಟಿದ್ದೀರ ಎನ್ನುವುದ್ದನ್ನು ಹೇಳಿ. ಅದನ್ನು ರಿಕವರಿ ಮಾಡೋಣ, ಬಡವರ ದುಡ್ಡನ್ನು ಬಡವರಿಗೆ ಹಂಚೋಣ. ಮನ್ಸೂರ್ ಖಾನ್ ಬಂದು ಹೇಳಿದ್ರೆ ಎಲ್ಲಾ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

    https://twitter.com/BZZameerAhmed/status/1138504249271312390

  • ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ವಿಜಯಪುರ: ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಪರಿಣಾಮ ಬೇಕರಿ ಮಾಲೀಕ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಮಾಧವರಾವ್ ಚೌಧರಿ(35) ಮೃತ ದುರ್ದೈವಿ. ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ ಈ ಬೇಕರಿ ಇದ್ದು, ಮಾಧವರಾವ್ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬೇಕರಿಯೊಳಗಿದ್ದ ದೀಪದಿಂದ ಬೇಕರಿಯೊಳಗೆ ಬೆಂಕಿ ತಗುಲಿದೆ.

    ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾಧವರಾವ್ ರಾತ್ರಿ ಪೂಜೆ ಮಾಡಿ, ದೀಪ ಹಚ್ಚಿಟ್ಟು ತಾನೂ ಬೇಕರಿಯಲ್ಲೇ ಮಲಗಿದ್ದರು. ಬೇಕರಿ ಒಳಗಡೆ ಲಾಕ್ ಮಾಡಿ ಮಲಗಿದ್ದ ಮಾಧವರಾವ್ ಸಜೀವ ದಹನವಾಗಿದ್ದಾರೆ. ಬೆಳಗ್ಗಿನ ಜಾವ ಬೇಕರಿಯಿಂದ ಹೊಗೆ ಬರುತ್ತಿದ್ದುದನ್ನು ಕಂಡು ಸ್ಥಳೀಯರು ದೌಡಾಯಿಸಿದ್ದಾರೆ.

    ಬಳಿಕ ಸ್ಥಳೀಯರು ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಹೊರ ತೆಗೆದರು. ಆದರೆ ಅಷ್ಟರಲ್ಲೇ ಮಾಧವರಾವ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿ ಮಾಧವರಾವ್ ಈ ಅಂಗಡಿಯನ್ನು ಬಾಡಿಗೆ ಪಡೆದಿದ್ದರು.

    ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಅಹಮದಾಬಾದ್: ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನ ಬಿರು ಬಿಸಿಲಿನಿಂದ ಪಾರಾಗಲು ನಾನಾ ರೀತಿ ಸರ್ಕಸ್ ಮಾಡುತ್ತಿದ್ದಾರೆ. ಹೀಗಿಯೇ ಅಹಮ್ಮದಾಬಾದ್ ನಲ್ಲಿ ಕಾರು ಮಾಲೀಕರೊಬ್ಬರು ತನ್ನ ಕಾರಿಗೆ ಸೆಗಣಿ ಸಾರುವ ಮೂಲಕ ಕೂಲ್ ಕೂಲ್ ಆಗಿರಲು ಹೊಸ ಐಡಿಯಾ ಹುಡುಕಿದ್ದಾರೆ.

    ಈ ವಿಚಾರವನ್ನು ರೂಪೇಶ್ ಗೌರಂಗಾ ದಾಸ್ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಫೋಟೋ ಹಾಕಿ, ಇದೊಂದು ಒಳ್ಳೆಯ ಉಪಾಯವಾಗಿದ್ದು, ಇಂತಹದ್ದನ್ನು ನಾನು ಎಲ್ಲೂ ಕಂಡಿಲ್ಲ, ಕಾಣಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಈ ಫೋಟೋವನ್ನು ನಾನು ಅಹಮ್ಮದಾಬಾದ್‍ನಲ್ಲಿ ತೆಗೆದಿದ್ದೇನೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹೀಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾಲೀಕ ಸೆಗಣಿಯನ್ನು ತನ್ನ ಕಾರಿಗೆ ಸಾರಿದ್ದಾರೆ. ಈ ಮೂಲಕ ಕೂಲ್ ಆಗಿರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಕೇಂದ್ರ ಮುಂಬೈ ನೊಂದಾಯಿತ ಕಾರು ಇದಾಗಿದ್ದು, ರಾಮ್‍ನಿಕ್ ಲಾಲ್ ಶಾ ಕಾರು ಮಾಲೀಕ ಎಂಬುದಾಗಿ ತಿಳಿದುಬಂದಿದೆ. ರೂಪೇಶ್ ಕಾರು ಫೋಟೋ ಹಾಕುತ್ತಿದ್ದಂತೆಯೇ ಜನ ಹಲವು ಪ್ರಶ್ನೆಗಳು ಮುಂದಿಟ್ಟಿದ್ದಾರೆ. ಅಲ್ಲದೆ ಕೆಲವರು ಟೀಕಿಸಿ ಅಪಹಾಸ್ಯವನ್ನೂ ಮಾಡಿದ್ದಾರೆ.

    ಗ್ರಾಮೀಣ ಭಾರತದಲ್ಲಿ ಮನೆಯಂಗಳಕ್ಕೆ ಈಗಲೂ ಸಗಣಿ ಸಾರುತ್ತಿದ್ದಾರೆ. ಈ ಮೂಲಕ ಮನೆ ಹಾಗೂ ಸುತ್ತಲುತ್ತಲು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಾರು ಮಾಲೀಕ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ. ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

  • ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಬೆಂಗಳೂರು: ಸೀಬರ್ಡ್ ಟ್ರಾವೆಲ್ಸ್ ಮಾಲೀಕ ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೇ ತಿಂಗಳ 14ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟ್ರಾವೆಲ್ಸ್ ನವರ ದುರ್ವತೆಯನ್ನು ಪ್ರಶ್ನಿಸಲು ಪ್ರಯಾಣಿಕ ಭರತ್ ಕುಮಾರ್ ತೆರಳಿದಾಗ ಮಾಲೀಕ ನಾಗರಾಜ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಏನಿದು ಘಟನೆ?:
    ಪ್ರಯಾಣಿಕರು ಸೀಬರ್ಡ್ ಬಸ್ ನಲ್ಲಿ ಅಥಣಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದರು. ಈ ವೇಳೆ ತುಮಕೂರು ಬಳಿ ಬಸ್ ಅಪಘಾತಕ್ಕೆ ತುತ್ತಾಗಿತ್ತು. ಘಟನೆಯಿಂದ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ಬಹುತೇಕ ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಇದರಿಂದ ದಿಕ್ಕು ತೋಚದೆ ಪ್ರಯಾಣಿಕರು ಸಹಾಯಕ್ಕಾಗಿ ಬೆಂಗಳೂರಿನ ಸೀಬರ್ಡ್ ಟ್ರಾವೆಲ್ಸ್ ಗೆ ಕರೆ ಮಾಡಿದ್ದಾರೆ.

    ಆದರೆ ಟ್ರಾವೆಲ್ಸ್ ನವರು ಯಾವುದೇ ಸಹಾಯ ಮಾಡದೇ ಟ್ಯಾಕ್ಸಿ ಮಾಡಿಕೊಂಡು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಯಾಣಿಕರಿಗೆ ಗಾಯಗಳಾಗಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಯಾಣಿಕ ಭರತ್ ಕುಮಾರ್ ಎಂಬವರು ಟ್ರಾವೆಲ್ಸ್ ನವರ ದುರ್ವತನೆಯನ್ನು ಪ್ರಶ್ನಿಸೋದಕ್ಕೆ ಬೆಂಗಳೂರಿನ ಸೀಬರ್ಡ್ ಕಚೇರಿಗೆ ತೆರಳಿದ್ದಾರೆ. ಆಗ ಟ್ರಾವೆಲ್ಸ್ ಮಾಲೀಕ ನಾಗರಾಜ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

    ಈ ಹಿನ್ನೆಲೆಯಲ್ಲಿ ಭರತ್ ಸೀಬರ್ಡ್ ಟ್ರಾವೆಲ್ಸ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಮಗು ಸಮೇತ ನಡುರೋಡಲ್ಲೇ ಕಾರು ಮಾಲೀಕ ಪ್ರತಿಭಟನೆ!

    ಪತ್ನಿ, ಮಗು ಸಮೇತ ನಡುರೋಡಲ್ಲೇ ಕಾರು ಮಾಲೀಕ ಪ್ರತಿಭಟನೆ!

    – ಕೈ ಮುಗಿದು ಕ್ಷಮೆ ಕೇಳಿದ ಪೊಲೀಸರು

    ಧಾರವಾಡ: ನಡು ರಸ್ತೆಯಲ್ಲಿಯೇ ತನ್ನ ಪತ್ನಿ, ಪುಟ್ಟ ಮಗು ಸಮೇತ ಕಾರು ಮಾಲೀಕ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ಹೊರವಲಯದ ಕೆಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

    ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ವಾಹನ ದಾಖಲಾತಿ ತಪಾಸಣೆ ಹೆಸರಿನಲ್ಲಿ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ಅಲ್ಲದೆ ತನ್ನ ಪುಟ್ಟ ಮಗು, ಪತ್ನಿ ಸಮೇತ ನಡುರಸ್ತೆಯಲ್ಲೇ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ದಾಖಲಾತಿಗಳೆಲ್ಲ ಪರಿಶೀಲಿಸಿದ ಬಳಿಕವೂ ಪೊಲೀಸರು ಕಿರಿಕಿರಿ ಮಾಡಿದ್ದಾರೆ. ಇದರಿಂದ ನೊಂದ ಕಾರು ಮಾಲೀಕ ಪ್ರತಿಭಟನೆ ಮಾಡಿದ್ದಾರೆ. ಕೊನೆಗೆ ಪೊಲೀಸರು ಕೈ ಮುಗಿದು ಕ್ಷಮೆ ಕೇಳಿದ್ದಾರೆ.

    ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಹಣ ಕೇಳಿದ್ದರಿಂದ ಹೀಗಾಗಿದೆ ಎಂದು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಪೋಸ್ಟ್ ರವಾನೆ ಆಗುತ್ತಿದ್ದು, ನೆಟ್ಟಿಗರು ಧಾರವಾಡ ಪೊಲೀಸರಿಗೆ ಛೀಮಾರಿ ಹಾಕುತ್ತಿದ್ದಾರೆ.

  • ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಚೆನ್ನೈ: ನಾಯಿ ತನ್ನನ್ನು ಸಾಕಿದ ಮನೆಯವರಿಗೆ ಸದಾ ನಿಷ್ಠೆ, ಪ್ರಾಮಾಣಿಕವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮಿಳುನಾಡಿನ ತಂಜಾವೂರಿನಲ್ಲಿ ತನ್ನ ಮಾಲೀಕನ ಪ್ರಾಣ ಉಳಿಸಿ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

    ಈ ಘಟನೆ ತಂಜಾವೂರ್ ಜಿಲ್ಲೆಯ ವೆಂಗರಯಾನಕುಡಿಕಾಡುನಲ್ಲಿ ಶನಿವಾರ ಮುಂಜಾನೆ ನಡೆದಿದೆ. ನಾಡು ರಸ್ತೆ ನಿವಾಸಿ ರೈತ ನಟರಾಜನ್ (50) ಅವರು ತಮ್ಮ ಸಾಕು ನಾಯಿ ಪಪ್ಪಿಯೊಂದಿಗೆ ಮುಂಜಾನೆ ತೋಟಕ್ಕೆ ವಾಕಿಂಗ್ ಹೋಗಿದ್ದಾರೆ.

    ನಾನು ನನ್ನ ಪಪ್ಪಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ 5 ಅಡಿ ಉದ್ದದ ಹಾವು ನನ್ನ ಮುಂದೆ ಇತ್ತು. ಹಾವನ್ನು ನೋಡಿದ ನಾನು ಭಯದಿಂದ ನಿಂತುಕೊಂಡು ನಿಧಾನವಾಗಿ ಹಿಂದಕ್ಕೆ ಹಜ್ಜೆ ಹಾಕುತ್ತಿದ್ದೆ. ಆಗ ಅದು ನನಗೆ ಕಚ್ಚಲು ಮುಂದಾಯಿತು. ಅಷ್ಟರಲ್ಲಿ ನನ್ನ ಪಪ್ಪಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಸಾಯಿಸಿತು. ಆದರೆ ದಾಳಿ ವೇಳೆ ಹಾವು ಕೂಡ ಪಪ್ಪಿ ಮೇಲೆ ಅನೇಕ ಬಾರಿ ಕಚ್ಚಿತ್ತು. ಇದರಿಂದ ಪಪ್ಪಿ ಅಸ್ವಸ್ಥಗೊಂಡಿತ್ತು. ತಕ್ಷಣ ಪಪ್ಪಿಯನ್ನು ಎತ್ತಿಕೊಂಡು ನಾನು ಚಿಕಿತ್ಸೆಗಾಗಿ ಮನೆ ಕಡೆ ಓಡಿ ಹೋದೆ. ಆದರೆ ವೈದ್ಯರು ಬರುವಷ್ಟರಲ್ಲಿ ಪಪ್ಪಿ ಮೃತಪಟ್ಟಿತ್ತು ಎಂದು ನಟರಾಜನ್ ಹೇಳಿ ಕಣ್ಣೀರಾಕಿದ್ದಾರೆ.

    ನಟರಾಜನ್ ಸುಮಾರು ನಾಲ್ಕು ವರ್ಷದಿಂದ ಈ ನಾಯಿಯನ್ನು ಸಾಕುತ್ತಿದ್ದು, ಪಪ್ಪಿ ಅವರ ಕುಟುಂಬದಲ್ಲಿ ಒಬ್ಬನಾಗಿತ್ತು. ನಟರಾಜನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ನಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಎಲ್ಲೆ ಹೋದರು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

  • ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.

    ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.

    ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.

  • ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ದೇಶದ ಸಾಫ್ಟ್ ವೇರ್ ಹಬ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳೆಷ್ಟು ಸೇಫ್ ಎನ್ನುವ ಅನುಮಾನ ಮೂಡಿದೆ. ಏಕೆಂದರೆ ಕುಡಿಯೋಕೆ ಪಿಜಿಯಲ್ಲಿ ಜಾಗ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

    ನಗರದ ಬೊಮ್ಮನಹಳ್ಳಿಯಲ್ಲಿರುವ ಗ್ರೀನ್ ಹಿಲ್ಸ್ ಲೇಡಿಸ್ ಪಿಜಿ ಮುಂದೆ ನಡೆದಿದೆ. ಕಳೆದ ಏಪ್ರಿಲ್ 3ರಂದು, ತಡರಾತ್ರಿ 1 ಗಂಟೆ ಸುಮಾರಿಗೆ ಬಂದ ಐದಾರು ಜನರ ತಂಡ, ಪಿಜಿಯೊಳಗೆ ಎಣ್ಣೆ ಹೊಡೆಯೋಕೆ ಒಂದು ರೂಮ್ ಬೇಕು ಎಂದು ಮಾಲೀಕ ಅನಿಲ್ ಕುಮಾರ್‍ಗೆ ಕಾಲ್ ಮಾಡಿದರು.

    ಮನೆಯಿಂದ ಹೊರಗೆ ಬಂದ ಅನಿಲ್ ಇದು ಲೇಡಿಸ್ ಪಿಜಿ, ಇಲ್ಲಿ ಹಾಗೆಲ್ಲಾ ಒಳಗೆ ಬಿಡಲ್ಲ ಎಂದು ಹೇಳಿದರು. ಇದೇ ವಿಚಾರವಾಗಿ ಕೆಲಕಾಲ ಮಾತುಕತೆಯೂ ನಡೆಯಿತು. ಈ ಮಾತುಕತೆಯ ನಡುವೆ ಮಾಲೀಕ ಅನಿಲ್ ಕುಮಾರ್, ಮತ್ತೊಬ್ಬ ಮಾಲೀಕ ಭಾಸ್ಕರ್ ರೆಡ್ಡಿಗೆ ಬೊಮ್ಮನಹಳ್ಳಿ ಮಂಜು ಅಂಡ್ ಗ್ಯಾಂಗ್ ದೊಣ್ಣೆ ಹಾಗೂ ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಬೊಮ್ಮನಹಳ್ಳಿ ಸುತ್ತಮುತ್ತಲಿನ ಈ ಏರಿಯಾದಲ್ಲಿ ಸಿಕ್ಕಾಪಟ್ಟೆ ಪಿಜಿಗಳಿದ್ದು, ಇಲ್ಲಿನ ಕೆಲ ರೌಡಿಗಳು, ಎಲ್ಲಾ ಪಿಜಿಗಳಿಂದ ತಿಂಗಳಿಗೆ ಇಷ್ಟು ಹಣ ಎಂದು ಹಫ್ತಾ ವಸೂಲಿ ಮಾಡುತ್ತಾರೆ. ಈ ಹಣ ಕೊಡಲು ಪಿಜಿ ಮಾಲೀಕ ನಿರಾಕರಿಸಿದರು. ಇದೇ ಕಾರಣಕ್ಕೆ ಕುಡಿಯೋ ನೆಪ ಮಾಡ್ಕೊಂಡು ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಲೀಕ ಭಾಸ್ಕರ್ ರೆಡ್ಡಿ ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಬಂಡೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಾರ ಕಳೆದರೂ, ಇಲ್ಲಿಯವರೆಗೂ ಯಾರನ್ನು ಕೂಡ ಅರೆಸ್ಟ್ ಮಾಡಿಲ್ಲ. ಇಲ್ಲಿ ಹೀಗೆ ದಾಂಧಲೆ ಮೆರೆದ ಹುಡುಗರ ಕಡೆಗೆ ಸ್ಥಳೀಯ ಶಾಸಕರೊಬ್ಬರ ಬಲಗೈ ಬಂಟನ ಸಪೋರ್ಟ್ ಇದೆ. ಆ ಕಾರಣಕ್ಕೆ ಪೊಲೀಸರು, ಅರೆಸ್ಟ್ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

    ಹಲ್ಲೆಗೊಳಗಾದ ಇಬ್ಬರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬೆಂಗ್ಳೂರಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

    ಬೆಂಗ್ಳೂರಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

    ಬೆಂಗಳೂರು: ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಅನ್ನು ಯುವಕರು ಮುಚ್ಚಿಸಿದ್ದಾರೆ.

    ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಈ ಬೇಕರಿ ಇದೆ. ಈ ಬೇಕರಿಯ ಹೆಸರು ಕರಾಚಿ ಆಗಿದ್ದು, ಈ ಹೆಸರನ್ನು ತೆಗೆಯುವಂತೆ ಯುವಕರು ಗಲಾಟೆ ಮಾಡಿದ್ದಾರೆ.

    ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಇದು ನಮಗೆ ಇಷ್ಟವಾಗುತ್ತಿಲ್ಲ. ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ. ಆದರೆ ಕರಾಚಿ ಹೆಸರು ತೆಗೆಯಿರಿ ಎಂದು ಯುವಕರ ಗಲಾಟೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಾಲೀಕ ಖಾನ್ ಚೆಂದ್ ರಾಮಾನಿ ಯುವಕರ ಮಾತಿನಂತೆ ಕರಾಚಿ ಹೆಸರಿಗೆ ಪ್ಲೆಕ್ಸ್ ಕಟ್ಟಿ ಮುಚ್ಚಿದ್ದಾರೆ.

    1953ರಲ್ಲಿ ಈ ಬೇಕರಿ ಸ್ಥಾಪನೆಯಾಗಿದ್ದು, ಪಾಕಿಸ್ತಾನದ ರಾಜಧಾನಿ ಕರಾಚಿ ಹೆಸರಿನಲ್ಲಿ ಬೇಕರಿಯನ್ನು ನಡೆಸಲಾಗುತ್ತಿದೆ. ಇದೇ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಬೇಕರಿ ನಡೆಯುತ್ತಿದೆ. ಅಲ್ಲದೆ ಇಂದಿರಾನಗರ ಪೊಲೀಸರು ಬೇಕರಿಯಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಬೇರೆಯಾದ ವೇಳೆ ಖಾನ್ ಚೆಂದ್ ರಾಮಾನಿ ಪಾಕಿಸ್ತಾನದಿಂದ ಹೈದರಾಬಾದ್‍ಗೆ ಬಂದು ನೆಲೆಸಿದ್ದರು. ಹೈದರಾಬಾದ್‍ನಲ್ಲಿ ಮೊದಲ ಬಾರಿಗೆ ಕರಾಚಿ ಬೇಕರಿ ಓಪನ್ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಇಂದಿರಾ ನಗರ ಮತ್ತು ಮಹದೇವಪುರದಲ್ಲಿ ಬೇಕರಿ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಆಗ್ರಾ ಸೇರಿದಂತೆ ಹತ್ತಾರು ಬ್ರಾಂಚ್ ಗಳನ್ನು ಹೊಂದಿದ್ದಾರೆ.

    ಈ ಸಂಬಂಧ ಬೇಕರಿ ಮಾಲೀಕ ಖಾನ್ ಚೆಂದ್ ರಾಮಾನಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಯುವಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಚಿಕ್ಕಬಳ್ಳಾಪುರ: ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ವಿಚಾರದಲ್ಲಿ ಇಬ್ಬರು ಮಾಲೀಕರುಗಳ ನಡುವಿನ ಗಲಾಟೆ, ಗೊಂದಲ, ಮನಸ್ತಾಪದಿಂದ ಓರ್ವ ಮಾಲೀಕ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆಯಲ್ಲಿ ನಡೆದಿದೆ.

    ಅಮ್ಯೂಸ್‍ಮೆಂಟ್ ಪಾರ್ಕಿನ ಮಾಲೀಕ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ, ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಮಾಡುವುದರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ ಶ್ರೀನಿವಾಸ್ ಹಾಗೂ ಬೆಂಗಳೂರು ಮೂಲದ ರಾಜೇಶ್ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎಂದಿನಂತೆ ಈ ಬಾರಿ ಜಿಲ್ಲೆಯ ಚಿತ್ರಾವತಿ ಬಳಿ ಇರುವ ಶ್ರೀ ಸುಬ್ರಮ್ಮಣ್ಯಶ್ವರ ಜಾತ್ರೆಯಲ್ಲಿ ಸ್ಪರ್ಧೆಗಿಳಿದು ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದರು.

    ಆದರೆ ಒಂದೇ ಜಾಗದಲ್ಲಿ ಎರಡೆರಡು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ ಕಾರಣ ಇಬ್ಬರಿಗೂ ನಷ್ಟವಾಗಿದೆ. ಮತ್ತೊಂದೆಡೆ ರಾಜೇಶ್ ಕಡೆಯವರು ತನಗೆ ಪ್ರಾಣ ಬೆದರಿಕೆ ಹಾಕಿ ಪದೆ ಪದೆ ತನಗೆ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್ ಇಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳಿಯರು ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮತ್ತೊಂದೆಡೆ ಶ್ರೀನಿವಾಸ್ ಆರೋಪ ಅಲ್ಲಗಳೆದಿರುವ ರಾಜೇಶ, ತಾವು ಜಾತ್ರೆ ಆರಂಭವಾಗುವುದಕ್ಕೂ ಮುನ್ನ ಚಿತ್ರಾವತಿಯಲ್ಲಿ ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದೆ, ನಂತರ ಬಂದ ಶ್ರೀನಿವಾಸ್, ಹಠಕ್ಕೆ ಬಿದ್ದವರಂತೆ ತಮ್ಮ ಎದರುಗಡೆಯೇ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ್ದರು. ಅವರ ವ್ಯಾಪಾರ ಅವರದು ನಮ್ಮ ವ್ಯಾಪಾರ ನಮ್ಮದು, ಶ್ರೀನಿವಾಸ್ ಮೈತುಂಬ ಸಾಲ ಮಾಡಿಕೊಂಡು ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವುದೇ ಆತನ ಕಾಯಕ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮೊಬೈಲ್ ಕರೆಗೆ ರಾಜೇಶ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv