Tag: ಮಾಲೀಕರು

  • ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗಿ ನಗರದಲ್ಲಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಗುಡ್ಡಗಳು ಕುಸಿದು ಬೀಳುವ ಕಾರಣ ಶಿರಾಡಿ, ಸಂಪಾಜೆ ಘಾಟಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರ ಜೊತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೈಲವನ್ನು ತರಲು ಸಂಕಷ್ಟವಾಗಿದೆ.

    ಕಳೆದ 2-3 ದಿನಗಳಿಂದಲೂ ಬೆಂಗಳೂರಿನ ಖಾಸಗಿ ಬಂಕ್‍ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ನಗರದ ಖಾಸಗಿ ಬಂಕ್ ಗಳಾದ ಶೆಲ್, ಇಸ್ಸಾರ್ ಬಂಕ್ ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಬರೀ ಖಾಸಗಿ ಬಂಕ್‍ಗಳಿಗೆ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ಬಂಕ್‍ಗಳಿಗೆ ಬೇರೆ ಕಡೆಗಳಿಂದ ಪೂರೈಕೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಇಲ್ಲದ ಕಾರಣ ಮಾಲೀಕರು ಬಂಕ್ ಮುಚ್ಚಿದ್ದಾರೆ.

    ಇಂಡಿಯನ್, ಭಾರತ್ ಪೆಟ್ರೋಲ್ ಬಂಕ್ ಗಳಿಗೆ ಬೆಳಗಾವಿ, ಸಜ್ಜಾಪುರ ಭಾಗಗಳಿಂದ ಪೆಟ್ರೋಲ್ ಪೊರೈಕೆ ಆಗುತ್ತಿರುವುದರಿಂದ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.

    ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಮಂಗಳೂರಿನಿಂದ ಪೆಟ್ರೋಲ್ ತರಲು ಸಮಸ್ಯೆಯಾಗಿದೆ. ತೈಲ ಇಲ್ಲದ ಕಾರಣ ಬಂಕ್ ಗಳನ್ನು ಮುಚ್ಚಲಾಗಿದೆ ಎಂದು ಬಂಕ್ ಮಾಲೀಕರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಚಾರ್ಮಾಡಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಈಗ ಘನ ವಾಹನಗಳು ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ರಸ್ತೆಯಲ್ಲೂ ಈಗ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚರಿಸುತ್ತಿದ್ದು, ಆಗಾಗ ಜಾಮ್ ಆಗುತ್ತಿದೆ. ಭಾನುವಾರ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಚಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಕಾರ್ಯ ನಡೆದ ಪರಿಣಾಮ ರಾತ್ರಿ ಮತ್ತೆ ಈ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳರ ಕಾಟದಿಂದ ಮಾಲೀಕರ ನಿದ್ದೆಗೆಡಿಸುತ್ತಿರುವ ಲಾರಿಗಳು!

    ಕಳ್ಳರ ಕಾಟದಿಂದ ಮಾಲೀಕರ ನಿದ್ದೆಗೆಡಿಸುತ್ತಿರುವ ಲಾರಿಗಳು!

    ದಾವಣಗೆರೆ: ಕಳ್ಳರ ಕಾಟದಿಂದ ಜಿಲ್ಲೆಯಲ್ಲಿ ಲಾರಿ ಮಾಲೀಕರು ತಮ್ಮ ಲಾರಿಗಳನ್ನು ಮಾರಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

    ಬೆಳಗಾಗುವುದರೊಳಗೆ ಡೀಸೆಲ್, ಬ್ಯಾಟರಿ, ಟೈಯರ್ ಗಳು ಕಳ್ಳತನವಾಗುತ್ತಿದ್ದು, ಲಾರಿ ಮಾಲೀಕರ ನಿದ್ದೆಗೆಡಿಸಿದೆ. ನಗರದಲ್ಲಿ ಎಲ್ಲಿಯೂ ಲಾರಿ ಸ್ಟ್ಯಾಂಡ್ ಇಲ್ಲ. ಮಾಲೀಕರೇ ನಗರದ ಪುಪ್ಪಾಂಜಲಿ ಚಿತ್ರಮಂದಿರ ಬಳಿಯ ಬಿಲಾಲ್ ಕಾಂಪೌಂಡ್ ಹಿಂಭಾಗದ ಲೋಕಲ್ ಗೂಡ್ ಶೆಡ್‍ನಲ್ಲಿ ಲಾರಿ ನಿಲ್ದಾಣ ಮಾಡಿಕೊಂಡಿದ್ದಾರೆ.

    ಪ್ರತಿನಿತ್ಯ ಈ ಜಾಗದಲ್ಲಿ 150ಕ್ಕೂ ಹೆಚ್ಚು ಲಾರಿಗಳು ನಿಲ್ಲುತ್ತವೆ. ಬೆಳಗ್ಗೆ ಜನದಟ್ಟಣೆಯಿಂದ ಕೂಡಿದ ಈ ಪ್ರದೇಶ ರಾತ್ರಿಯಾಗುತ್ತಿದ್ದಂತೆ ನಿರ್ಜನವಾಗಿ ಬಿಡುತ್ತದೆ. ಇಲ್ಲಿ ಕಳವು ಮಾಡುವವರು ಎಷ್ಟು ನಿಸ್ಸೀಮರೆಂದರೆ ಕಬ್ಬಿಣದ ದೊಡ್ಡ ದೊಡ್ಡ ಬೀಗಗಳನ್ನೇ ತುಂಡು ಮಾಡಿ, ಕೆಲವೇ ನಿಮಿಷಗಳಲ್ಲಿ ಡೀಸೆಲ್ ಟ್ಯಾಂಕ್ ಖಾಲಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಬೆಲೆ ಬಾಳುವ ಬ್ಯಾಟರಿ, ಟೂಲ್ಕಿಟ್, ತಾಡಪಲ್ ಯಾವುದನ್ನೂ ಬಿಡುತ್ತಿಲ್ಲ.

    ಕಳೆದ ಹತ್ತು ದಿನಗಳಿಂದ ಕಳವು ಪ್ರಕರಣಗಳ ಸಂಖ್ಯೆ ಏರಿಕೆ ಆಗಿರುವುದು ಲಾರಿ ಮಾಲೀಕರ ನಿದ್ದೆಗೆಡಿಸಿದೆ. ಇಂಧನ ದರ ದುಬಾರಿ ಹೊತ್ತಲ್ಲಿ ದಿನವೂ ಒಂದಿಲ್ಲೊಂದು ಲಾರಿಯಲ್ಲಿ ಡೀಸೆಲ್ ಕಳ್ಳತನವಾಗುತ್ತಿದ್ದು, ಯಾವಾಗಲೂ ಟ್ಯಾಂಕ್ ಫುಲ್ ಮಾಡಿಸುತ್ತಿದ್ದ ಲಾರಿ ಮಾಲೀಕರು ಕಳವು ಪ್ರಕರಣ ಹೆಚ್ಚಿದ ಬಳಿಕ ಟ್ಯಾಂಕ್‍ನಲ್ಲಿ 15-20 ಲೀಟರ್ ಮಾತ್ರ ಹಾಕಿಸುತ್ತಿದ್ದು, ಅದನ್ನು ಕೂಡ ಕಳ್ಳರು ಬಿಡುತ್ತಿಲ್ಲ ಅಂತ ಮಾಲೀಕರು ಆರೋಪಿಸುತ್ತಿದ್ದಾರೆ.

    2013ರಲ್ಲಿ ಈ ಪ್ರದೇಶದಲ್ಲಿ ಎರಡು ಲಾರಿಗಳು ನಾಪತ್ತೆಯಾಗಿದ್ದು, ಅದರಲ್ಲೊಂದು ಪತ್ತೆಯಾದರೆ ಇನ್ನೊಂದರ ಸುಳಿವು ಇದುವರೆಗೂ ಸಿಕ್ಕಿಲ್ಲ. ಈಗಿರುವ ತಾತ್ಕಾಲಿಕ ನಿಲ್ದಾಣಕ್ಕೆ ಕಾಂಪೌಂಡ್ ಕಟ್ಟುವ ಜತೆಗೆ ಪೊಲೀಸ್ ಬೀಟ್ ಹೆಚ್ಚಿಸಬೇಕು ಎನ್ನುತ್ತಿದ್ದಾರೆ. ಲಾರಿ ಪಾರ್ಕಿಂಗ್‍ಗಾಗಿ ಕಳೆದ 15 ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು, ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಮಾಲೀಕರು ತಮ್ಮ ಅಳಲುತೋಡಿಕೊಂಡಿದ್ದಾರೆ.