Tag: ಮಾಲೀಕರು

  • ಅಂಗಡಿ ಮಾಲೀಕರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆ – ವಶಕ್ಕೆ ಪಡೆದು ಕೇಸ್ ಹಾಕಿ ಎಚ್ಚರಿಕೆ

    ಅಂಗಡಿ ಮಾಲೀಕರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆ – ವಶಕ್ಕೆ ಪಡೆದು ಕೇಸ್ ಹಾಕಿ ಎಚ್ಚರಿಕೆ

    ಹಾವೇರಿ: ಭಾರತ ಲಾಕ್‍ಡೌನ್ ನಿಯಮಕ್ಕೆ ಕ್ಯಾರೇ ಅನ್ನದೆ ಅಂಗಡಿಗಳನ್ನ ತೆರೆದವರಿಗೆ ಹಾವೇರಿಯಲ್ಲಿ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ, ಪ್ರಕರಣ ದಾಖಲಿಸುವ ಮೂಲಕ ಖಡಕ್ ಎಚ್ಚರಿಕೆ ನೀಡ್ತಿದ್ದಾರೆ.

    ಗುರುವಾರ ಮತ್ತು ಇಂದು ನಗರದ ಹಲವೆಡೆ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್, ಪೇಂಟಿಂಗ್, ರೇಡಿಯಂ, ಚಪ್ಪಲಿ ಸೇರಿದಂತೆ ಕೆಲವು ಅಂಗಡಿಗಳ ಬಾಗಿಲು ತೆರೆಯಲಾಗಿತ್ತು. ಇದನ್ನ ಕಂಡು ಗರಂ ಆದ ಪೊಲೀಸರು ಅಂಗಡಿಗಳ ಮಾಲೀಕರಿಗೆ ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸಿದ್ದಾರೆ.

    ಅಂಗಡಿಗಳ ಮುಂದೆ ನೆರೆದಿದ್ದವರು ಸಹ ಪೊಲೀಸರನ್ನ ಕಂಡು ಎದ್ನೋ ಬಿದ್ನೋ ಎಂದು ಓಡಿ ಹೋದರು. ನಂತರ ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು ರೂಲ್ಸ್ ಬ್ರೇಕ್ ಮಾಡಿ ಅಂಗಡಿಗಳ ಬಾಗಿಲು ತೆರೆದಿದ್ದವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನು ನಗರದ ಲಕ್ಕಿ ಸೂಪರ್ ಮಾರ್ಕೆಟ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಅಲ್ಲಿಯೂ ಸಹ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

    ಅಲ್ಲದೆ ಎಸ್‍ಪಿ ಕೆ.ಜಿ ದೇವರಾಜ್ ಅವರು ನಗರದಲ್ಲಿ ಸಂಚರಿಸಿ ಲಾಕ್‍ಡೌನ್ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ, ಉಲ್ಲಂಘನೆ ಮಾಡಿದವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

  • ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ಕುಟುಂಬ ಒಂದು ವೇಳೆ ಬಾಡಿಗೆ ಮನೆಯಲ್ಲಿದ್ದು, ಮನೆಯ ಮಾಲೀಕರು ಅವರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರೆ ಅಂತ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.

    ಬಾಡಿಗೆ ಮನೆಯಲ್ಲಿರುವ ಹೋಂ ಕ್ವಾರಂಟೈನ್‍ಗೆ ಒಳಗಾದವರಷ್ಟೇ ಅಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಕೋವಿಡ್-19ರ ನಿಯಂತ್ರಣದಲ್ಲಿ ಕಾರ್ಯನಿರತರೆಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಲಾಕ್‍ಡೌನ್‍ಗೆ ಸಹಕರಿಸುತ್ತಿದ್ದಾರೆ. ಮತ್ತಷ್ಟು ಸಹಕಾರದ ಅಗತ್ಯ ಪೊಲೀಸರಿಗೆ ಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ವರ್ತಕರು, ತರಕಾರಿ ಮಾರಾಟಗಾರರು ಮತ್ತಿತರರು ಅಗತ್ಯ ಸೇವೆಗಳಲ್ಲಿ ತೊಡಗಿದ್ದು ಅವರಿಗೆ ಓಡಾಡಲು ಅವಕಾಶ ನೀಡಿ ಪಾಸ್ ನೀಡಲಾಗುವುದು ಎಂದರು.

    ಹೋಂ ಕ್ವಾರಂಟೈನ್ ನಡಿ ಇರುವವರು ಹೊರಗೆ ಓಡಾಡುವಂತಿಲ್ಲ. ಒಂದು ವೇಳೆ ಅನುಮತಿ ಇಲ್ಲದೆ ಓಡಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಿನಸಿ, ಹಾಲು, ಔಷಧಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಪಾಡುವುದು ಅತ್ಯಗತ್ಯ ಎಂದು ತಿಳಿಸಿದರು.

  • ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಮಡಿಕೇರಿ: ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೊದಲೇ ಕೊಡಗಿನ ಹೋಂ ಸ್ಟೇಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ.

    ಹೌದು. ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿನ ಪ್ರವಾಸಿತಾಣಗಳನ್ನು ನೋಡಲು ಎಂಜಾಯ್ ಮಾಡಲು ದೇಶ ವಿದೇಶಗಳಿಂದ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದರು. ಇದೀಗ ಕೊರೊನಾ ವೈರಸ್ ಭೀತಿ ಪ್ರವಾಸಿಗರಿಗೂ ಕಾಡುತ್ತಿದ್ದು, ಮನೆಯಿಂದ ಹೋರಗೆ ಬರಲು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೇ ಕೊಡಗಿನ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದೆ.

    ಈ ಹಿನ್ನೆಲೆಯಲ್ಲಿ ಹೋಂ ಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ 1 ವಾದದಿಂದ ಬಂದ್ ಮಾಡಿದ್ದಾರೆ. ಹೋಂ ಸ್ಟೇಗೆ ಈಗಾಗಲೇ ಬುಕ್ ಮಾಡುವವರು ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‍ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಣೆ ಮಾಡುತ್ತಿದ್ದಾರೆ. ತಮ್ಮಗೆ ನಷ್ಟ ಆದ್ರೂ ಪರವಾಗಿಲ್ಲ ನಾಡಿನ ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ.

    ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಆದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು. ಆದರೆ ಈ ಕೊರೊನಾ ವೈರಸ್ ಭೀತಿ ರಾಜ್ಯವನ್ನು ಕಾಡುತ್ತಿದೆ. ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎಂದು ಕೊಡಗಿನಲ್ಲಿ ಸುಮಾರು 700ಕ್ಕೂ ಅಧಿಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಗ್ರಾಮಪಂಚಾಯ್ತಿ ಪಿಡಿಓಗಳು ಹೋಂ ಸ್ಟೇ ಮಾಲೀಕರಿಗೆ ಬಂದ್ ಮಾಡಲು ನೋಟಿಸ್ ಕೂಡ ನೀಡಲಾಗುತ್ತಿದೆ. ಇದರಿಂದ ಹೋಂ ಸ್ಟೇ ಉದ್ಯಮ ಹಾಗೂ ಸಿಬ್ಬಂದಿಗಳ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ.

  • ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡ್ಬೇಕು

    ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡ್ಬೇಕು

    – ಕ್ಲೀನ್ ಮಾಡದಿದ್ರೇ ಬೀಳುತ್ತೆ ಫೈನ್

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಡಾಗ್ಸ್ ಪ್ರಿಯರು. ಸಾಕು ನಾಯಿಗಳಿಗೆ ಸ್ವಂತ ಮಕ್ಕಳ ತರಾನೇ ಆಟ, ಊಟ ಹಾಕುತ್ತಾರೆ. ಜೊತೆಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಗೆ ವಾಕಿಂಗ್ ಕರೆದುಕೊಂಡು ಬರುತ್ತಾರೆ.

    ಹೀಗೆ ವಾಕಿಂಗ್‍ಗೆ ಬರೋ ನಾಯಿಗಳು, ಬೀದಿನಾಯಿಗಳ ಜೊತೆ ಸೇರಿಕೊಂಡು ಕಬ್ಬನ್ ಪಾರ್ಕಲ್ಲಿ ಹಾವಳಿಯನ್ನುಂಟು ಮಾಡಿವೆ. ಇದು ಕಬ್ಬನ್ ಪಾರ್ಕ್‍ನ ವಾಯುವಿಹಾರಿಗಳ ಕಿರಿಕಿರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಈ ನಾಯಿಗಳು ಮಾಡುವ ಗಲೀಜು ವಾಯುವಿಹಾರಿಗಳಿಗೆ ಬೇಸರ ಮೂಡಿಸಿದ್ದು, ಇದನ್ನ ತುಳಿದುಕೊಂಡೆ ಹೇಗೆ ಓಡಾಡುವುದು ಎಂದು ತೋಟಗಾರಿಕೆ ಇಲಾಖೆ ಮೊರೆ ಹೋಗಿದ್ದಾರೆ.

    ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ನಲ್ಲಿ ಇನ್ಮುಂದೆ ಡಾಗ್ ವಾಕಿಂಗ್ ಕರೆದುಕೊಂಡು ಬರುವ ನಾಯಿಗಳ ಮಾಲೀಕರೆ ನಾಯಿಗಳು ಮಾಡುವ ಗಲೀಜು ಕ್ಲೀನ್ ಮಾಡಬೇಕು ಎಂದು ಸೂಚಿಸಿದೆ. ಜೊತೆಗೆ ಡಾಗ್ ಜೊತೆ ವಾಕಿಂಗ್ ಬರುವ ಮಾಲೀಕರಿಗೆ ಒಂದು ಬಾಸ್ಕೆಟ್ ಅಥವಾ ಬ್ಯಾಗ್ ಕಡ್ಡಾಯ ತರುವಂತೆ ಆದೇಶಿಸಲು ಚಿಂತನೆ ನಡೆಸಿದೆ. ಜೊತೆಗೆ ಕ್ಲೀನ್ ಮಾಡದಿದ್ದರೆ ಫೈನ್ ಹಾಕಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

    ನಾಯಿಗಳ ಜೊತೆ ವಾಕಿಂಗ್ ಬಂದರೆ ಅದರ ಗಲೀಜು ಕ್ಲೀನ್ ಮಾಡಿ ಅಂದ್ರೆ ಹೇಗೆ? ಡಾಗ್ ಜೊತೆ ಪಾರ್ಕ್ ಗೆ ಬರುವಾಗ ಬಾಸ್ಕೆಟ್ ಬ್ಯಾಗ್ ತರಲು ಕಷ್ಟ ಆಗುತ್ತೆ ಎಂದು ನಾಯಿ ಮಾಲೀಕರು, ತೋಟಗಾರಿಕೆ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ಡಾಗಿ ಜೊತೆ ಔಟಿಂಗ್ ಹೋಗೋ ಮುನ್ನ ಹುಷಾರಾಗಿ. ತೋಟಗಾರಿಕೆ ಇಲಾಖೆಯ ಈ ರೂಲ್ಸ್ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತೆ ಎಂದು ಕಾದು ನೋಡಬೇಕಿದೆ.

  • ಪೌರತ್ವ ಕಾಯ್ದೆಯ ಜ್ವಾಲೆ – ಬಾಟಲಿಗಳಿಗೆ ಪೆಟ್ರೋಲ್ ಹಾಕದಂತೆ ಬಂಕ್ ಮಾಲೀಕರಿಗೆ ನೋಟಿಸ್

    ಪೌರತ್ವ ಕಾಯ್ದೆಯ ಜ್ವಾಲೆ – ಬಾಟಲಿಗಳಿಗೆ ಪೆಟ್ರೋಲ್ ಹಾಕದಂತೆ ಬಂಕ್ ಮಾಲೀಕರಿಗೆ ನೋಟಿಸ್

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಜ್ವಾಲೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದಿದೆ.

    ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಹಿಂಸಾತ್ಮಕ ಕೃತ್ಯಗಳು ನಡೆಯಬಾರದು, ನಗರದಲ್ಲಿ ಕಂಡ ಕಂಡಲ್ಲಿ ಟೈಯರ್ ಗೆ ಬೆಂಕಿ ಹಚ್ಚುವ ಕೃತ್ಯಗಳು ಜರುಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಬಾಟಲಿಗಳಿಗೆ, ಕ್ಯಾನ್ ಗಳಿಗೆ ಪೆಟ್ರೋಲ್ ಹಾಕದಂತೆ ಬಂಕ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಕ್ ಗಳಿಗೆ ಆ ವ್ಯಾಪ್ತಿಯ ಪೊಲೀಸರಿಂದ ನೋಟಿಸ್ ನೀಡಲಾಗಿದೆ.

    ನೋಟಿಸ್‍ಗೆ ಬೆಲೆ ನೀಡದೇ ಬಾಟಲಿ, ಕ್ಯಾನ್ ಗಳಲ್ಲಿ ಪೆಟ್ರೋಲ್, ಡಿಸೇಲ್ ಹಾಕಿದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳೋದಾಗಿ ಪೊಲೀಸರು ಬಂಕ್ ಮಾಲೀಕರಿಗೆ ಎಚ್ಚರಿಸಿದ್ದಾರೆ. ಆದರೂ ಕೆಲವು ಬಂಕ್‍ಗಳಲ್ಲಿ ನೋಟಿಸ್ ಗೆ ಕಿಮ್ಮತ್ತು ಕೊಡದೇ ಪೆಟ್ರೋಲ್, ಡೀಸೆಲ್ ನ್ನು ಕ್ಯಾನ್, ಬಾಟಲಿಗೆ ಹಾಕಲಾಗುತ್ತಿದೆ.

  • ಮಾಲೀಕತ್ವ ವಿವಾದ – ನ್ಯಾಯಾಲಯಕ್ಕೆ ಹಾಜರಾದ ಆಕಳು, ಕರು

    ಮಾಲೀಕತ್ವ ವಿವಾದ – ನ್ಯಾಯಾಲಯಕ್ಕೆ ಹಾಜರಾದ ಆಕಳು, ಕರು

    ಜೈಪುರ: ಮಾಲೀಕತ್ವದ ವಿಚಾರವಾಗಿ ಹಸು ಹಾಗೂ ಕರುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪ್ರಸಂಗವು ರಾಜಸ್ತಾನದ ಜೋಧ್‍ಪುರದಲ್ಲಿ ನಡೆದಿದೆ.

    ಏನಿದು ಪ್ರಕರಣ?:
    ಹಸು ಹಾಗೂ ಕರುವಿನ ಮಾಲೀಕತ್ವದ ವಿಚಾರವಾಗಿ ಪೊಲೀಸ್ ಪೇದೆ ಓಂ ಪ್ರಕಾಶ್ ಹಾಗೂ ಶಿಕ್ಷಕ ಶ್ಯಾಂ ಸಿಂಗ್ ಎಂಬವರ ನಡುವೆ ಜಗಳವಾಗಿತ್ತು. ಈ ಸಂಬಂಧ ಜೋಧ್‍ಪುರ್ ನಿಂದ 9 ಕಿ.ಮೀ. ದೂರದಲ್ಲಿರುವ ಮಾಂಡೋರ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 2018ರಲ್ಲಿ ದೂರು ದಾಖಲಾಗಿತ್ತು.

    ವಿಚಾರಣೆ ಹೇಗಿತ್ತು?:
    ನ್ಯಾಯಾಲಯದ ಆವರಣಕ್ಕೆ ಹಸು ಹಾಗೂ ಕರುವನ್ನು ಕರೆತಂದಾಗ ಅಲ್ಲಿಗೆ ನ್ಯಾಯಾಧೀಶರು ಆಗಮಿಸಿದರು. ಬಳಿಕ ದೂರುದಾರ ನೀಡಿದ್ದ ಇಬ್ಬರನ್ನೂ ಹಸು ಹಾಗೂ ಕರುವಿನ ಬಳಿ ನಿಲ್ಲುವಂತೆ ಸೂಚಿಸಿದರು. ಹಸು ಹಾಗೂ ಕರುವು ಯಾರ ಮೇಲೆ ಒಲವು ತೋರಿಸುತ್ತಿದೆ ಎನ್ನುವುದನ್ನು ಗಮನಿಸಲಾಯಿತು. ಈ ಮೂಲಕ ಮಾಲೀಕರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು.

    ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮದನ್ ಚೌಧರಿ ಅವರು, ಹಸು ಹಾಗೂ ದೂರುದಾರರ ನಡುವಿನ ಬಾಂಧವ್ಯ ಗಮನಿಸಿದರು. ಬಳಿಕ ದೂರುದಾರರ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದಾರೆ.

  • 500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ನೋಟಿಸ್!

    500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ನೋಟಿಸ್!

    ಮುಂಬೈ: ದುಬಾರಿ ಬೈಕ್, ಜಾಸ್ತಿ ಇಂಜಿನ್ ಸಾಮರ್ಥ್ಯ ಅಂತ ವೇಗವಾಗಿ ಹೋಗೋ ಬೈಕ್ ಮಾಲೀಕರಿಗೆ ಈಗ ಮುಂಬೈ ಪೊಲೀಸರು ಶಾಕ್ ಕೊಟ್ಟಿದ್ದಾರೆ. 500 ಸಿಸಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

    500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಇಂಜಿನ್ ಹೊಂದಿರುವ ಬೈಕ್ ತುಂಬಾ ವೇಗವಾಗಿ, ಜಾಸ್ತಿ ಶಬ್ದ ಮಾಡಿಕೊಂಡು ರಸ್ತೆ ಮೇಲೆ ಓಡಾಡುತ್ತವೆ. ಇದರಿಂದ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಅಂತ ಮುಂಬೈ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ವಿಕೆಂಡ್ ಬಂದ್ರೆ ಸಾಕು ಈ ಗೋಳು ಇನ್ನು ಜಾಸ್ತಿಯಾಗುತ್ತೆ. ಈ ಬೈಕ್‍ಗಳಿಂದ ವಾರವಿಡೀ ಕೆಲಸ ಮಾಡಿ ಸುಸ್ತಾಗಿರೋ ಜನರಿಗೆ ರಜೆ ಸಿಕ್ಕರು ನೆಮ್ಮದಿಯಿಲ್ಲ. ರಜಾ ದಿನಗಳಲ್ಲಿ ಬೈಕ್ ಓಡಾಟ ಹೆಚ್ಚಾಗಿರುವುದರಿಂದ ಪೊಲೀಸರಿಗೆ 10 ರಿಂದ 15 ಕರೆಗಳು ಬರುತ್ತಿದೆ. ಆದ್ದರಿಂದ ನವಿ ಮುಂಬೈನ ಪಾಮ್ ಬೀಚ್ ಬಳಿಯ ನಿವಾಸಿಗಳ ದೂರಿನ ಆಧಾರದ ಮೇಲೆ ಪೊಲೀಸರು 500 ಸಿಸಿಗಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ಕಳುಹಿಸಿದ್ದಾರೆ.

    ಪಾಮ್ ಬೀಚ್ ಪ್ರದೇಶದಲ್ಲಿ ವಿಕೆಂಡ್ ಬಂತು ಅಂದ್ರೆ 500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‍ಗಳ ಅಬ್ಬರ ಜೋರಾಗಿರುತ್ತೆ. ಅದರಲ್ಲೂ ರಾತ್ರಿ ವೇಳೆ ಇದರ ಆರ್ಭಟ ಹೆಚ್ಚು. ಈ ಬೈಕ್‍ಗಳ ಶಬ್ದದಿಂದ ಬೇಸತ್ತಿರುವ ಪಾಮ್ ಬೀಚ್ ಪ್ರದೇಶದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದರಿಂದ ವಿಕೆಂಡ್ ವೇಳೆ ಪೊಲೀಸರು ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪ್ಲಾನ್ ಮಾಡಿದ್ದರು.

    ಅತೀ ವೇಗದ ಬೈಕ್‍ಗಳಿಂದ ಪೊಲೀಸರಿಗೆ ನಿಯಮ ಉಲ್ಲಂಘಿಸುವ ರೈಡರ್ಸ್ ಗಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಆದರಿಂದ ಇದನ್ನು ತಡೆಗಟ್ಟಲು ಪಾಮ್ ಬೀಚ್ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಇರುವ 500ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ರವಾನಿಸಿದ್ದಾರೆ.

    ಅಷ್ಟೇ ಅಲ್ಲದೆ ಪಾಮ್ ಬೀಚ್ ಬಳಿ ಸ್ಪೀಡ್ ಟ್ರಾಕರ್ ಹಾಗೂ ಸಿಸಿಟಿವಿ ಅಳವಡಿಸಲಾಗಿದ್ದು, ರೂಲ್ಸ್ ಬ್ರೇಕ್ ಮಾಡುವ ಬೈಕ್ ರೈಡರ್ಸ್ ಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಈಗಾಗಲೇ ನೊಟೀಸ್ ನೀಡಿದವರ ಬೈಕ್ ಮಾಲೀಕರು ನಿಯಮ ಮೀರಿದರೆ ಅವರ ಲೈಸೆನ್ಸ್ ರದ್ದುಗೊಳಿಸಲಾಗುವುದು ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    – ರೈತರಿಗೆ ಹೆಚ್ಚುವರಿ ಸಿಗಲಿದೆ 300 ರೂ.

    ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿಟ್ಟ 50:50 ಸೂತ್ರಕ್ಕೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಬ್ಬು ಬೆಳೆದು ಕಣ್ಣೀರು ಸುರಿಸಿದ್ದ ರೈತರ ಕಣ್ಣೀರನ್ನು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.

    ಸಂಧಾನ ಸಭೆಯ ನಿರ್ಣಯ:
    ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.

    ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.

    ಬರೀ ರೈತರ ವಾದ ಕೇಳಿದರೆ ನಮ್ಮದೂ ಸಮಸ್ಯೆ ಇದೆ. ಅದನ್ನು ಸ್ವಲ್ಪ ಕೇಳಿ ಎಂದು ಮಾಲೀಕರು ತಮ್ಮ ವಾದವನ್ನು ಸಿಎಂ ಕುಮಾರಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ.

    ಸಕ್ಕರೆ ಸಾಹುಕಾರರ ವಾದವೇನು?: ಎಫ್.ಆರ್.ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕೆಜಿಗೆ 35 ರಷ್ಟಿತ್ತು, ಈಗ 27ಕ್ಕೆ ಇಳಿದಿದೆ. ಟನ್‍ಗೆ 2,900 ರೂ. ಒಪ್ಪಂದ ಆಗಿದ್ದೂ ಲಾಭ ಬಂದ ಸಂದರ್ಭದಲ್ಲಿ 3,400 ರೂ. ನೀಡಿದ್ದೇವೆ. ಕಂಪೆನಿಗಳಿಂದ ವಿದ್ಯುತ್ ಖರೀದಿಯಲ್ಲಿ ಸರ್ಕಾರ ಮೋಸ ಮಾಡಿದೆ. ಪ್ರತಿ ಯೂನಿಟ್‍ಗೆ 5.87 ರೂ. ಒಪ್ಪಂದ ಮಾಡಿಕೊಂಡಿತ್ತು, ಈಗ 3.87 ರೂ. ನೀಡುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಕಾರ್ಖಾನೆಗಳು ಉತ್ತಮ ದರದಲ್ಲಿ ವಿದ್ಯುತ್ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.

    ಬರಗಾಲದಿಂದ ಕೇವಲ 8ರಿಂದ 10 ಲಕ್ಷ ಟನ್ ಕಬ್ಬು ಅರೆಯುತ್ತಿದ್ದೇವೆ. ಇದಕ್ಕೂ ಮೊದಲು 30 ರಿಂದ 40 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಇಥೆನಾಲ್‍ಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟಿದೆ. ರಾಜ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲ. ನೆರೆ ರಾಜ್ಯಗಳು ಬಡ್ಡಿ ರಹಿತ ಸಾಲ ನೀಡಿ ಸಹಾಯಕ್ಕೆ ಬಂದಿವೆ, ರಾಜ್ಯದಲ್ಲಿ ಏನೂ ಆಗಿಲ್ಲ. 6-8 ತಿಂಗಳಾದ್ರೂ ಕಾರ್ಖಾನೆ ಖರೀದಿಸಿದ ವಿದ್ಯುತ್‍ಗೆ ಸರ್ಕಾರ ಹಣ ಪಾವತಿಸಿಲ್ಲ. 15 ದಿನದೊಳಗೆ ಪಾವತಿಸಿ ಅಂದರೆ ಹೇಗೆ? ಸರ್ಕಾರವೂ ಬಾಕಿಯನ್ನು 15 ದಿನದಲ್ಲಿ ಪಾವತಿಸಲಿ. 10 ತಿಂಗಳಾದರೂ ಹೈಲೆವೆಲ್ ಕಮಿಟಿ ಸಭೆ ನಡೆಸಿಲ್ಲ. ಕಾರ್ಖಾನೆಗಳಿಗೆ ಬೇಕಾದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಮಾಲೀಕರು ಸಿಎಂಗೆ ತಿಳಿಸಿದ್ದಾರೆ.

    ಸಭೆ ಬಳಿಕ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕ ಬಾಲಚಂದ್ರ ಜಾರಕಿಹೊಳಿ, ಮೇಜರ್ ಸಮಸ್ಯೆ ಬಾಗಲಕೋಟೆಯದ್ದು. ನಾವು ಎಫ್.ಆರ್.ಪಿಗಿಂತ ಹೆಚ್ಚು ದರ ಕೊಟ್ಟಿದ್ದೇವೆ. ನಮ್ಮದು ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕೆಲವರು ಬಾಕಿ ಪಾವತಿಗೆ ಸಮಯ ಕೇಳಿದ್ದಾರೆ. ಎಲ್ಲ ಸರಿ ಹೋಗುತ್ತೆ ಅಂದ್ರು. ಆದರೆ ಸಭೆಯಲ್ಲಿ ನಡೆದ ಚರ್ಚೆ ವಿಷಯದಲ್ಲಿ ಗೊಂದಲವಿದೆ. ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಬೆಳಗಾವಿಯಲ್ಲಿ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.

    ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಶಾಸಕರಾಗಿರುವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಆರ್.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಆನಂದ ನ್ಯಾಮಗೌಡ ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ಮಂಗಳೂರು: ನಗರದಲ್ಲಿ ಆಯೋಜಿಸಿರುವ ರಾಮ ಮಂದಿರ ಉದ್ದೇಶಿತ ಜನಜಾಗೃತಿ ಸಭೆಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ಜನಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ದಿಲ್‍ರಾಜ್ ಶೆಟ್ಟಿ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮನವಿಯಂತೆ ಉಚಿತ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿ ಸಂಘದ ಪದಾಧಿಕಾರಿಗಳಿಗೆ ಆದೇಶ ಪತ್ರ ಹೊರಡಿಸಿದ್ದರು.

    ಸಂಘದ ಲೆಟರ್ ಹೆಡ್‍ನಲ್ಲಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಅವರು ಕೂಡ ದಕ್ಷಿಣ ಕನ್ನಡ ನ್ಯೂಸ್ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಕಿಡಿಕಾರಿದ್ದಾರೆ. ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಲುವಾಗಿ ಕೇಂದ್ರ ಮೈದಾನ ಮಂಗಳೂರಿನಲ್ಲಿ ನಡೆಯುವ ಸಭೆಗೆ ಉಚಿತ ಬಸ್ ಒದಗಿಸಲಾಗಿದೆ. ಕೇಸರಿ ಶಾಲು ಧರಿಸಿ ಬರುವ ಪ್ರಯಾಣಿಕರಿಗೆ ಮಂಗಳೂರು – ಮೂಲ್ಕಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತ ಬಸ್ ಸೇವೆ ಒದಗಿಸಲಾಗುತ್ತಿದೆ. ಈ ಕುರಿತು ಕೆನರಾ ಬಸ್ ಮಾಲೀಕರು ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ವ್ಯಂಗ್ಯವಾಡಿದ್ದಾರೆ.

    ಮಾಲೀಕರಿಂದ ಸ್ಪಷ್ಟನೆ: ನಾವು ಪ್ರತಿ ಬಾರಿಯೂ ಉಚಿತ ಬಸ್ ವ್ಯವಸ್ಥೆ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಅಥವಾ ಜಿಲ್ಲಾಡಳಿತದ ಯಾವುದೇ ಕಾರ್ಯಕ್ರಮಕ್ಕೆ ಬಸ್ ಕೇಳಿದರೆ, ಉಚಿತವಾಗಿಯೇ ಕೊಡುತ್ತೇವೆ. ಆದರೆ ಈ ಬಾರಿ ದುಬಾರಿ ವೆಚ್ಚದ ಕಾರಣ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಸ್ಸಿನಲ್ಲಿ ಬರುವವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ ಅಷ್ಟೇ. ಬಸ್ ಅನ್ನು ಉಚಿತವಾಗಿ ಬಿಟ್ಟು ಕೊಟ್ಟಿಲ್ಲ ಎಂದು ದಿಲ್‍ರಾಜ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

    ಉಚಿತ ಬಸ್ ವ್ಯವಸ್ಥೆಯ ಕುರಿತು ಅರಿವಿಲ್ಲದ ಮಂದಿ ಹೇಳಿಕೆಯ ಪ್ರತಿಯನ್ನು ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ದಿನೇಶ್ ಅಮಿನ್ ಮಟ್ಟು ಕೂಡ ಇದೆ ಹೇಳಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಾಮ ಮಂದಿರ ವಿಚಾರ ಬಿಜೆಪಿ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿಯವರು ಬಸ್ ವ್ಯವಸ್ಥೆ ಮಾಡಿದ್ದಾರೆಂದು ಬಿಂಬಿಸಿ, ಟೀಕೆ ಮಾಡುತ್ತಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಎಂ ಜೊತೆಗಿನ ಕಬ್ಬು ಬೆಳೆಗಾರರ ಸಭೆ ಯಶಸ್ವಿ- ಎಫ್ಆರ್​ಪಿ ದರ ನೀಡುವಂತೆ ಸೂಚನೆ

    ಸಿಎಂ ಜೊತೆಗಿನ ಕಬ್ಬು ಬೆಳೆಗಾರರ ಸಭೆ ಯಶಸ್ವಿ- ಎಫ್ಆರ್​ಪಿ ದರ ನೀಡುವಂತೆ ಸೂಚನೆ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮುಖಂಡರ ಜೊತೆ ನಡೆಸಿದ ಕಬ್ಬಿನ ಬಿಲ್ ಬಾಕಿ ಕುರಿತ ಸಭೆ ಸಂಪೂರ್ಣ ಯಶಸ್ವಿಯಾಗಿದೆ.

    ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಏನೋ ಮಾತನಾಡಿದೇ ಅಂತ ಪ್ರತಿಭಟನೆ ನಡೆಯಿತು. ಇವತ್ತಿನ ಸಭೆಗೆ ರೈತರ ಮುಖಂಡರನ್ನು ಕರೆದು ಸುದೀರ್ಘವಾಗಿ ಮಾತನಾಡಿದ್ದೇನೆ. ಬೆಳಗ್ಗಿನಿಂದಲೂ ಮಾಧ್ಯಮಗಳಲ್ಲಿ ಕಬ್ಬು ಬೆಳಗಾರರಿಗೆ ಕಹಿಯೋ, ಸಿಹಿಯೋ ಅಂತ ಸುದ್ದಿ ಮಾಡಿದ್ದೀರಿ. ಆದರೂ ರೈತರು ಸರ್ಕಾರದ ಕೆಲವು ಸಲಹೆಗೆ ಒಪ್ಪಿಗೆ ನೀಡಿದ್ದಾರೆ. ನಾನು ರೈತರಿಗೆ ಅಭಾರಿಯಾಗಿದ್ದೇನೆಂದು ಹೇಳಿದ್ದಾರೆ.

    ಸಭೆಯಲ್ಲಿ ಕೆಲ ನಿರ್ಣಯ ಮಾಡಿದ್ದೇನೆ. ಸಮಸ್ಯೆ ಬಗ್ಗೆ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿದ್ದೇನೆ. ಇದಕ್ಕೆ ಮಾಲೀಕರು ಇನ್ನು ಒಪ್ಪಿಲ್ಲ. ಅವರ ಪ್ರತಿನಿಧಿಯೊಬ್ಬರು ಸಭೆಗೆ ಬಂದಿದ್ದರು. ಹೀಗಾಗಿ ಇದೇ 22ನೇ ತಾರೀಕಿನ ಒಳಗೆ, ಮಾಲೀಕರ ಸಭೆ ಮಾಡಲು ನಿರ್ಧಾರ ಮಾಡಿದ್ದೇನೆ.

    ತಮ್ಮ 13 ಸಮಸ್ಯೆಗಳ ಬಗ್ಗೆ ರೈತರು ಮಾಹಿತಿ ನೀಡಿದ್ದರು. ಇಳುವರಿಯಲ್ಲಿ ಕಡಿಮೆ ತೋರಿಸುವುದು, ತೂಕ ಕಡಿಮೆ ಮಾಡುವ ವಿಚಾರವನ್ನು ಸಹ ಪ್ರಸ್ತಾಪ ಮಾಡಿದ್ದಾರೆ. ಇಳುವಾರಿ ಸರಿಯಾಗಿ ತೋರಿಸಲು ಹೊಸ ಯಂತ್ರ ಖರೀದಿಗೆ ಸೂಚನೆ ನೀಡಿದ್ದೇನೆ. ಎಫ್ಆರ್​ಪಿ ದರವನ್ನೇ ಮಾಲೀಕರಿಗೆ ನೀಡಲು ಸೂಚನೆ ನೀಡಲಾಗಿದೆ. ದರ ನಿಗದಿ ಬಗ್ಗೆ ಆಯುಕ್ತರಿಗೆ ಅಧಿಕಾರ ನೀಡಿದ್ದೇನೆ. ಈ ಬಗ್ಗೆ ಮಾಲೀಕರ ಜೊತೆ ಚರ್ಚೆ ಮಾಡಿ ದರ ನಿಗದಿಗೆ ಮಾಡುವಂತೆ ತಿಳಿಸಿದ್ದೇನೆ.

    ಇದು ರೈತರ ಅಂತಿಮ ಸಭೆ ಅಲ್ಲ. ಹಂತ ಹಂತವಾಗಿ ಸಭೆ ಮಾಡುತ್ತೀನಿ. ಅಗತ್ಯ ಸಮಯದಲ್ಲಿ ಸಭೆಯನ್ನು ಕರೆಯುತ್ತೇನೆ. ರೈತ ಮುಖಂಡರು ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಅವರಿಗಾಗಿ ಮುಕ್ತ ಅವಕಾಶ ನೀಡಿದ್ದೇನೆ. ಕಳೆದ ವರ್ಷದ ಕಬ್ಬು ಮೊತ್ತ ಬಿಡುಗಡೆ ಮಾಡಲು, ಅಧಿಕಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಮಾಲೀಕರಿಗೂ ಸಹ ಈ ಬಗ್ಗೆ ಸೂಚನೆ ನೀಡಿ, ಎಲ್ಲಾ ಹಣವನ್ನು ನೀಡಲು ಸೂಚಿಸಿದ್ದೇನೆ.

    ಇದು ರೈತರ ಪರ ಸರ್ಕಾರವಾಗಿದೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಸರಿಯಾದ ಸಮಯಕ್ಕೆ ಕಟಾವು ಮಾಡಲು ಸರ್ಕಾರ ನೇರ ಜವಾಬ್ದಾರಿ ತೆಗೆದುಕೊಂಡಿದೆ. ರೈತರ ಸಲಹೆ ಸ್ವೀಕಾರ ಮಾಡಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿಯೂ ರೈತರ ಜೊತೆ ಸಭೆ ಮಾಡುತ್ತೇನೆ. ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡುತ್ತೇನೆ. ಅಲ್ಲದೇ ಭತ್ತ ಖರೀದಿ ವಿಚಾರವನ್ನು ಶುಕ್ರವಾರ ತೀರ್ಮಾನ ಮಾಡುತ್ತೇನೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದು, ಇದರ ಜೊತೆ ಈರುಳ್ಳಿಗೂ ಬೆಂಬಲ ಬೆಲೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

    ರೈತರೊಂದಿಗಿನ ಇಂದಿನ ಸಭೆ ಸುಸೂತ್ರವಾಗಿ ನಡೆದಿದೆ. ಯಾವುದೇ ಸಮಸ್ಯೆ ಇಲ್ಲದೇ ಶಾಂತ ರೀತಿಯಲ್ಲಿ ಸಭೆ ನಡೆದಿದೆ. 2,750 ಎಫ್ಆರ್​ಪಿ ದರವನ್ನು ನಿಗದಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಬಾಗಲಕೋಟೆ ಕಾರ್ಖಾನೆಗಳು 2,500 ರೂಪಾಯಿ ನೀಡಿಲ್ಲ. ಅದನ್ನು ತಕ್ಷಣ ಕೊಡಿಸಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಎಫ್ಆರ್​ಪಿಯಲ್ಲಿ 36 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಐದಾರು ವರ್ಷದಿಂದ 2,900 ಕೊಡುತ್ತೀವಿ ಎಂದು ಘೋಷಣೆ ಮಾಡಿ, ಇಲ್ಲಿಯವರೆಗೂ ಹಣ ನೀಡಿಲ್ಲ. ಆದ್ದರಿಂದ ಆ ಬ್ಯಾಲೆನ್ಸ್ ಹೆಚ್ಚಿದೆ.

    450 ಕೋಟಿ ರೂಪಾಯಿ ಬಾಕಿ ಇದೆ ಎಂದು ರೈತರು ಹೇಳುತ್ತಿದ್ದಾರೆ. ಈ ಬಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯನ್ನು ತರಸಿಕೊಳ್ಳಲು ಅಧಿಕಾರಿಗೆ ಹೇಳಿದ್ದೇನೆ. ಮುಂದಿನ ವರ್ಷದಿಂದ ಶಾಶ್ವತ ಪರಿಹಾರ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಹೇಳಿದರು.

    ಈಗಾಗಲೇ ಸಭೆಯ ಮಾಹಿತಿಯನ್ನು ಕಾರ್ಖಾನೆ ಮಾಲೀಕರಿಗೂ ಕಳುಹಿಸಿದ್ದೇನೆ. ಕೊಟ್ಟ ಮಾತಿಗೆ ಮಾಲೀಕರು ನಡೆದುಕೊಳ್ಳಬೇಕು. ಮಾಲೀಕರು ಸರ್ಕಾರದ ಸಭೆಗೆ ಗೈರಾದರೆ, ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದು ನಮಗೆ ಗೊತ್ತಿದೆ. ನಮ್ಮ ಬಳಿ ಅವರ ಕೀಗಳು ಇವೆ. ಸಕ್ಕರೆ ಕಾರ್ಖಾನೆಗಳ ನಿಯಂತ್ರಣ ವಿಧೇಯಕದ ಲೋಪದೋಷಗಳನ್ನು ಸರಿಪಡಿಸುತ್ತೇವೆಂದು ತಿಳಿಸಿದರು.

    ರೈತರ ಹೋರಾಟದ ಸಮಯದಲ್ಲಿ ಹಾಕಿದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಈ ಬಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೀನಿ. ಸೋಮವಾರದ ಹೋರಾಟ ಸೇರಿದಂತೆ ಎಲ್ಲಾ ಕೇಸುಗಳನ್ನು ತೆಗೆಯುವ ಕುರಿತು ಕ್ಯಾಬಿನೆಟ್ ನಲ್ಲಿಯೇ ನಿರ್ಧಾರ ಮಾಡುತ್ತೇನೆಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews