Tag: ಮಾರ್ಗಸೂಚಿ

  • ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ಸಂಚರಿಸುವುದಕ್ಕೆ ನಿರ್ಬಂಧ- ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

    ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ಸಂಚರಿಸುವುದಕ್ಕೆ ನಿರ್ಬಂಧ- ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 10ರಿಂದ 14 ದಿನ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಲಾಕ್‍ಡೌನ್ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ.

    ರಾಜ್ಯ ಸರ್ಕಾರವು ಕೋವಿಡ್ 19 ನಿಯಂತ್ರಣಕ್ಕಾಗಿ ಏಪ್ರಿಲ್ 26 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ ಇದೀಗ ಸೋಂಕು ಹರಡುವುದನ್ನು ತಡೆಗಟ್ಟಲು ಇನ್ನಷ್ಟು ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಹೊಸ ಮಾರ್ಗಸೂಚಿಯು ಮೇ 10ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ.

     ಮಾರ್ಗಸೂಚಿಯಲ್ಲಿ ಏನಿದೆ..?
    ಬಸ್, ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಸಂಚರಿಸಲಿವೆ. ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಈ ಮಾರ್ಗಸೂಚಿಯಲ್ಲಿ ಅನುಮತಿಸಿದ ಸಂದರ್ಭಗಳನ್ನು ಹೊರತು ಪಡಿಸಿ, ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಹಾಗೂ ಇತರ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಶಾಲೆ, ಕಾಲೇಜುಗಳು, ಶಿಕ್ಷಣ ಅಥವಾ ಕೋಚಿಂಗ್ ಸಂಸ್ಥೆಗಳ ತರಗತಿಗಳು ನಡೆಯುವುದಿಲ್ಲ.

    ಹೋಟೆಲ್‍ಗಳು, ರೆಸ್ಟೋರೆಂಟ್ ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು. ಸಿನೆಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್ನೇಸಿಯಂಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್ ಗಳು, ಕ್ಲಬ್ ಗಳು, ಥಿಯೇಟರ್ ಗಳು, ಬಾರ್ ಗಳು ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ.

    ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ. ಎಲ್ಲ ಧಾರ್ಮಿಕ ಸ್ಥಳಗಳು ಅಥವಾ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿವೆ. ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶ ನೀಡಲಾಗುವುದು. ಎಲ್ಲ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು.

    ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ. ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತೆರೆಯಲು ಅನುಮತಿಸಿದೆ. ಹಾಲಿನ ಬೂತ್ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶವಿದೆ.

    ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು. ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ.

    ಐಟಿ ಮತ್ತು ಐಟಿಇಎಸ್ ಕಂಪೆನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದ್ದು, ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಸ್ಥಳದಲ್ಲಿಯೇ ಕಾರ್ಮಿಕರು ಅಥವಾ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು ಅಥವಾ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು.

    ಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದು. ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕಗಳಿಗೆ ಅನುಮತಿ ನೀಡಲಾಗುವುದು. ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗುವುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲ್ಗೊಳ್ಳಲು ಅವಕಾಶ, ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಅವಕಾಶ ನೀಡಲಾಗಿದೆ.

  • ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಶ್ರಮಪಡುತ್ತಿದೆ. ಇಂದು ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ.

    ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಅನ್ವಯ ಬಸ್, ಮೋಟಾರು ಕ್ಯಾಬ್, ಟೆಂಪೋ ಟ್ರಾವೆಲರ್ ವಾಹನಗಳಿಗೆ ಅನುಮತಿ ನೀಡಿರುವ ಆಸನಕ್ಕಿಂತ ಹೆಚ್ವಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಾಹನಗಳಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ವಾಹನಗಳು ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಕೆಎಸ್‍ಆರ್‍ಟಿಸಿಯ 2, ಬೇಂದ್ರೆ ನಗರ ಸಾರಿಗೆಯ 3, ಬಿಆರ್‍ಟಿಎಸ್ ಕಂಪನಿಯ 2, ಪಿಎಸ್‍ಎ 1 ಬಸ್ ಹಾಗೂ 3 ಮೋಟಾರು ಕ್ಯಾಬ್‍ಗಳು ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿ ಒಟ್ಟು 14 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಬೇಂದ್ರೆ ನಗರ ಸಾರಿಗೆಯ ಬಸ್ ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

  • ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ, ಸ್ಟಾರ್ ಹೋಟೆಲ್‍ಗಳಲ್ಲಿ ಬೆಡ್ ವ್ಯವಸ್ಥೆ: ಸುಧಾಕರ್

    ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ, ಸ್ಟಾರ್ ಹೋಟೆಲ್‍ಗಳಲ್ಲಿ ಬೆಡ್ ವ್ಯವಸ್ಥೆ: ಸುಧಾಕರ್

    – ಚಿಕಿತ್ಸೆ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿ
    – ಇಂದಿನಿಂದ ಮತ್ತೆ ಟಫ್ ರೂಲ್ಸ್, ವಿವಾಹಕ್ಕೆ ಸೇರುವ ಜನರ ಸಂಖ್ಯೆ ಮತ್ತಷ್ಟು ಇಳಿಕೆ
    – ಹೊರಾಂಗಣ ಸಮಾರಂಭ 200, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ

    ಬೆಂಗಳೂರು: ಕೊರೊನಾ ಪ್ರಕರಣಗಳು ಹೈ ಸ್ಪೀಡ್‍ನಲ್ಲಿ ಹೆಚ್ಚಳವಾಗುತ್ತಿದ್ದರೂ ಸರ್ಕಾರ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಕಡಿವಾಣ ಹಾಕಿ ಕೈ ತೊಳೆದುಕೊಳ್ಳಲಾಗಿದೆ.

    ಕೊರೊನಾ ನಿಯಂತ್ರಣದ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯರ ಕೊರತೆ ಆಗದಂತೆ 6 ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವಾರ್ಡ್ ಗೆ ಇನ್ನೊಂದು ಆಂಬುಲೆನ್ಸ್ ಹೆಚ್ಚಳ, ಚಿಕಿತ್ಸೆ ಉಚಿತ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಲಭ್ಯತೆ ಹೆಚ್ಚಳ ಮಾಡುತ್ತೇವೆ, ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಯೂನಿಟ್ ಸ್ಥಾಪನೆ, ಕೇಂದ್ರಕ್ಕೂ ಕೋರಿಕೆ ಸಲ್ಲಿಸಲಿದ್ದೇವೆ, ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಖಾಸಗಿ ಆಸ್ಪತ್ರೆಗಳ ಬೆಡ್ ಮೇಲುಸ್ತುವಾರಿಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಒಟ್ಟು 5 ಸಾವಿರ ಬೆಡ್ ಗಳ ನ್ನು ಸಿದ್ಧ ಮಾಡುತ್ತೇವೆ. ಓರ್ವ ಐಎಎಸ್, ಓರ್ವ ಐಪಿಎಸ್, ಓರ್ವ ನೋಡಲ್ ಅಧಿಕಾರಿ ಮತ್ತು ಇನ್ನೊಬ್ಬರು ಒಟ್ಟು 4 ಜನ ಇರುತ್ತಾರೆ. ಹಾಸಿಗೆ ಹೆಚ್ಚಳಕ್ಕೆ ಸಹ ಕ್ರಮ ವಹಿಸಲಾಗಿದೆ. ಖಾಸಗಿ ಸ್ಟಾರ್ ಹೋಟೆಲ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ತುರ್ತು ಅಗತ್ಯ ಇದ್ದವರಿಗೆ ಬಳಕೆಗೆ ನೀಡಲಾಗುವುದು ಎಂದು ತಿಳಿಸಿದರು.

    ಅನಗತ್ಯ ಗುಂಪು ಸೇರಲು ನಿಷೇಧವಿದೆ, ವಿವಾಹ ಸಮಾರಂಭಗಳಿಗೆ ನಿಯಮಿತ ಅವಕಾಶ ನೀಡಲಾಗಿದೆ. ಒಳಾಂಗಣ 100, ಹೊರಾಂಗಣ 200 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಜನಸಂದಣಿ ಇಳಿಕೆಗೆ ಆದೇಶ ನೀಡಲಾಗಿದೆ. ಈ ಹಿಂದೆ ವಿವಾಹ ಸಮಾರಂಭಗಳಲ್ಲಿ ಒಳಾಂಗಣದಲ್ಲಿ 200 ಮತ್ತು ಹೊರಾಂಗಣದಲ್ಲಿ 500 ಜನ ಭಾಗವಹಿಸಬಹುದಿತ್ತು. ಈ ಪ್ರಮಾಣವನ್ನು ಇದೀಗ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.

    ಏಪ್ರಿಲ್ 18 ರಂದು ಮತ್ತೆ ಸಭೆ ಕರೆಯಲಾಗಿದೆ, ಸಭೆಯ ಸಲಹೆ, ಸೂಚನೆ ಪಡೆದು ಸೂಕ್ತ ಘೋಷಣೆಯನ್ನು ಸಿಎಂ ಮಾಡುತ್ತಾರೆ. ಅಂದು ಸಚಿವರ ಸಭೆ ಕೂಡ ಕರೆಯಲಾಗಿದೆ, ಸಚಿವರ ಅಭಿಪ್ರಾಯ ಪಡೆದು, ವಿಶೇಷವಾಗಿ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನತೆಯ ಸಹಕಾರ ಅಗತ್ಯವಾಗಿದ್ದು, ಪ್ಯಾನಿಕ್ ಆಗೋದು ಬೇಡ, ಎಲ್ಲ ಸೌಲಭ್ಯವನ್ನು ಸರ್ಕಾರ ಮಾಡುತ್ತದೆ. ಹೆಚ್ಚು ಲಕ್ಷಣಗಳಿರುವವರು ಮಾತ್ರ ಆಸ್ಪತ್ರೆ ಬಳಸುವಂತೆ ಆದೇಶಿಸುತ್ತೇವೆ ಎಂದರು.

  • ಇಫ್ತಾರ್ ಕೂಟ ಇಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ಓಪನ್- ರಂಜಾನ್‍ಗೆ ಸರ್ಕಾರದಿಂದ ಮಾರ್ಗಸೂಚಿ

    ಇಫ್ತಾರ್ ಕೂಟ ಇಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ಓಪನ್- ರಂಜಾನ್‍ಗೆ ಸರ್ಕಾರದಿಂದ ಮಾರ್ಗಸೂಚಿ

    ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಭೆ, ಸಮಾರಂಭಗಳು ಹಾಗೂ ಹಬ್ಬಗಳ ಆಚರಣೆಗೆ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಅದರಂತೆ ಇದೀಗ ರಂಜಾನ್ ಆಚರಣೆಗೂ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇಫ್ತಾರ್ ಕೂಟ ನಡೆಸುವಂತಿಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ತೆರೆಯುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಿದೆ.

    ರಂಜಾನ್ ಮಾಸ ಆರಂಭ ಹಿನ್ನೆಲೆ ತಿಂಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕಂಟೈನ್ಮೆಂಟ್ ವಲಯದಲ್ಲಿರುವ ಮಸೀದಿಗಳು ಬಂದ್ ಮಾಡುವಂತೆ ಸೂಚಿಸಿದ್ದು, ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಮಸೀದಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

    ಇಫ್ತಾರ್ ಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್ ಮಾಡಬಹುದಾಗಿದೆ. ಆದರೆ ಪ್ರಾರ್ಥನೆ ಕೂಗುವ ಐದು ನಿಮಿಷಗಳ ಮುನ್ನ ಮಸೀದಿ ತೆರೆಯಬೇಕು. ಅಲ್ಲದೆ ನಮಾಜ್ ಮಾಡಲು ಸ್ವಂತ ಚಾದರ್ ತರಬೇಕು, ವಝೂ ಮನೆಯಲ್ಲೇ ಮಾಡಿಕೊಂಡು ಬರಬೇಕು, ನಮಾಜ್ ವೇಳೆ ಕನಿಷ್ಟ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಎರಡು ಮೀಟರ್ ಅಂತರಕ್ಕೆ ಮಸೀದಿಗಳಲ್ಲಿ ಮಾರ್ಕಿಂಗ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಅಗತ್ಯವಿದ್ದರೆ ಜುಮ್ಮಾ ನಮಾಜ್ ನ ಸಮಯದಲ್ಲಿ ಮೂರು ಪಾಳಿ ಮಾಡಿಕೊಳ್ಳಬಹುದಾಗಿದ್ದು, ಮಧ್ಯಾಹ್ನ 12.45 – 1.15, 1.30-2 ಮತ್ತು 2.30-3 ಗಂಟೆಯವರೆಗೆ ಒಟ್ಟು ಮೂರು ಪಾಳಿಯಲ್ಲಿ ಜುಮ್ಮಾ ನಮಾಜ್ ಮಾಡಲು ಅವಕಾಶ ನೀಡಲಾಗಿದೆ.

    ಉಪವಾಸ ಬಿಡುವಾಗ ಸಹ ಮಸೀದಿಗೆ ಆಹಾರ ವಸ್ತು ತರಬಾರದು, ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಸೀದಿಗೆ ಬರುವಾಗ ಸರದಿ ಅನುಸಿರಿಸಬೇಕು, ಮಾಸ್ಕ್ ಕಡ್ಡಾಯ, ಪ್ರತಿ ಹೊತ್ತಿನ ನಮಾಜ್ ಬಳಿಕ ಸ್ಯಾನಿಟೈಸರ್ ಅಳವಡಿಕೆ ಕಡ್ಡಾಯವಾಗಿದೆ. ಅಲ್ಲದೆ 60 ವರ್ಷದ ಮೇಲ್ಪಟ್ಟವರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ಮಸೀದಿಗೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

  • ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ -ಏನು ಇರುತ್ತೆ? ಏನು ಇರಲ್ಲ?

    ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ -ಏನು ಇರುತ್ತೆ? ಏನು ಇರಲ್ಲ?

    ಬೆಂಗಳೂರು: 7 ಜಿಲ್ಲೆಗಳ 8 ನಗರದಲ್ಲಿ ನೈಟ್ ಕರ್ಫ್ಯೂ ಶನಿವಾರ ರಾತ್ರಿಯಿಂದ ಜಾರಿಯಾಗಲಿದ್ದು ರಾಜ್ಯ ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಏ.10 ರಿಂದ ಏ.20ರವರೆಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರಗಿ, ತುಮಕೂರಿನಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಯಾವುದಕ್ಕೆ ಅನುಮತಿ ನೀಡಲಾಗಿದೆ ಎಂಬುದನ್ನು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60, ಭಾರತೀಯ ದಂಡ ಸಂಹಿತೆ(ಐಪಿಸಿ) ಹಾಗೂ ಅನ್ವಯವಾಗುವ ಇತರ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಅನಾರೋಗ್ಯದಿಂದ ಬಳಲುವರರಿಗೆ, ಅವರ ಸಹಾಯಕರಿಗೆ ಸಂಚಾರಕ್ಕೆ ಅವಕಾಶ.
    – ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು / ಕಂಪನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು.
    – ವೈದ್ಯಕೀಯ ಮತ್ತು ತುರ್ತು ಚಟುವಟಿಕೆಗಳಿಗೆ ಅವಕಾಶ.
    – ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್.


    – ಅವಶ್ಯಕ ಸೇವೆ ಒದಗಿಸುವ ವಾಹನಗಳು, ಸರಕು ಸಾಗಣೆ ವಾಹನಗಳು, ಹೋಂ ಡೆಲಿವರಿ ವಾಹನಗಳು, ಇ ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ.
    – ಬಸ್ಸು, ರೈಲು, ವಿಮಾನಗಳ ದೂರ ಪ್ರಯಾಣಕ್ಕೆ ಅವಕಾಶ.
    – ಬಸ್ ನಿಲ್ದಾಣ, ರೈಲು ನಿಕ್ದಾಣ, ವಿಮಾನ ನಿಲ್ದಾಣಗಳಿಗೆ ಹೋಗಲು ಅಧಿಕೃತ ಟಿಕೆಟ್‍ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಬಳಕೆಗೆ ಅವಕಾಶ

  • ಕೊರೊನಾ ನಿಯಮ ಪಾಲಿಸದಿದ್ದರೆ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆ

    ಕೊರೊನಾ ನಿಯಮ ಪಾಲಿಸದಿದ್ದರೆ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆ

    ಧಾರವಾಡ: ಕೊಚಿಂಗ್ ಸೆಂಟರ್, ಪಿಜಿ ಕೇಂದ್ರ, ನಿರಂತರ ಲೈಬ್ರರಿ ಮಾಲೀಕರ ಸಭೆಯಲ್ಲಿ ಕೊರೊನಾ ನಿಯಮ ಪಾಲಿಸದೇ ಇದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.

    ಕರ್ನಾಟಕ ಸರ್ಕಾರ ಕೋವಿಡ್ 19ರ 2ನೇ ಅಲೆ ತಡೆಯುವ ಕ್ರಮವಾಗಿ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕಿದೆ. ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಈ ನಿಯಮಗಳ ಪಾಲನೆ ಆಗುತ್ತಿಲ್ಲ.

    ಪಾಲಿಕೆ ಹಾಗೂ ಪೆÇಲೀಸ್ ಇಲಾಖೆಯಿಂದ ವರದಿ ಪಡೆದು ಅಂತಹ ಕೇಂದ್ರಗಳ ಲೈಸನ್ಸ್ ರದ್ದುಪಡಿಸಿ, ಅದರ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಪಿ.ಜಿ ಕೇಂದ್ರಗಳ ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳ ಮಾಲೀಕರ ಹಾಗೂ ನಿರ್ವಾಹಕರ ಸಭೆ ಜರುಗಿಸಿ, ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಗಳ ಪಾಲನೆಗಾಗಿ ಎಲ್ಲ ವಾಣಿಜ್ಯ ಕೇಂದ್ರಗಳಿಗೆ ಹಾಗೂ ಅಂಗಡಿ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಲಾಗಿದೆ.

    ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಪ್ರತಿದಿನ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುತ್ತಿದ್ದಾರೆ ಮತ್ತು ಎಚ್ಚರಿಕೆಯ ನೋಟಿಸ್ ನೀಡುತ್ತಿದ್ದಾರೆ. ಆದರೂ ಕೆಲವು ಕೇಂದ್ರದವರು ಉದಾಸೀನತೆ ಮತ್ತು ನಿರ್ಲಕ್ಷ ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದರು.

  • ಸರ್ಕಾರದ ಥಿಯೇಟರ್ ಮಿತಿ ನೀತಿಗೆ ಪವರ್ ಸ್ಟಾರ್ ಆಕ್ಷೇಪ

    ಸರ್ಕಾರದ ಥಿಯೇಟರ್ ಮಿತಿ ನೀತಿಗೆ ಪವರ್ ಸ್ಟಾರ್ ಆಕ್ಷೇಪ

    ಬೆಂಗಳೂರು: ಚಿತ್ರ ಮಂದಿರಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ದಯವಿಟ್ಟು ಶೇ.100ಕ್ಕೆ ಅವಕಾಶ ಮಾಡಿಕೊಡಿ. ಚುನಾವಣಾ ರ‍್ಯಾಲಿ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ ಆದರೆ ಸಿನಿಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ನಟ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೇಳಿಕೊಂಡಿದ್ದಾರೆ.

    ಫೇಸ್ಬುಕ್ ಲೈವ್‍ನಲ್ಲಿ ಮಾತನಾಡಿರುವ ಅವರು, ಹೆಚ್ಚು ಜನ ಕುಟುಂಬ ಸಮೇತರಾಗಿ ಚಿತ್ರ ಮಂದಿಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ಶೇ.100 ಭರ್ತಿಗೆ ಅವಕಾಶ ನೀಡಬೇಕು. ಇದರಿಂದ ನಮಗೆ ತುಂಬಾ ಕಷ್ಟವಾಗುತ್ತದೆ ಎಂದು ಅಪ್ಪು ಮನವಿ ಮಾಡಿದ್ದಾರೆ.

    ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಅರ್ಹರೆಲ್ಲರೂ ಕೊರೊನಾ ವ್ಯಾಕ್ಸಿನ್ ಪಡೆಯಿರಿ ಈ ಮೂಲಕ ಸುರಕ್ಷಿತವಾಗಿರಿ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಪೈರಸಿಯನ್ನು ದೂರವಿಡಿ, ನೀವೇ ಪವರ್ ಆಫ್ ಯೂತ್ ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಅಭಿಮಾನಿಯ ವಿಶೇಷ ಸ್ವಾಗತ

    ತುಂಬಾ ಪ್ರೀತಿಯಿಂದ ಯುವರತ್ನ ಚಿತ್ರವನ್ನು ಒಪ್ಪಿಕೊಂಡಿದ್ದೀರಿ, ಯಶಸ್ವಿಗೊಳಿಸಿದ್ದೀರಿ. ಹಬ್ಬದ ರೀತಿಯಲ್ಲಿ ಸಿನಿಮಾವನ್ನು ಸ್ವೀಕರಿಸಿ, ಸಂಭ್ರಮಿಸಿದ ರೀತಿ, ಪ್ರೀತಿ, ವಿಶ್ವಾಸಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ ಎಂದು ಅಪ್ಪು ಭಾವುಕರಾಗಿದ್ದಾರೆ.

    ಪ್ರತಿ ಜಿಲ್ಲೆಯಲ್ಲೂ ಹೆಚ್ಚು ಜನ ಆಗಮಿಸಿ ಸಿನಿಮಾ ನೋಡುತ್ತಿದ್ದಾರೆ. ಸುರಕ್ಷಿತವಾಗಿ, ಚಿತ್ರ ಮಂದಿರಗಳಲ್ಲಿ ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಕ್ಕಾಗಿಯೇ ಎಲ್ಲರೂ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಕೇವಲ ಒಂದು ದಿನ ಕಳೆದಿದೆ. ಇದೀಗ ಇದ್ದಕ್ಕಿಂತೆ ಈ ನಿರ್ಧಾರ ಕೈಗೊಳ್ಳುವುದರಿಂದ ತುಂಬಾ ನಷ್ಟವಾಗುತ್ತದೆ. ಸಾಮಾಜಿಕ ಕಾಳಜಿ ಇರುವ, ಉತ್ತಮ ಸಂದೇಶ ಹೊಂದಿರುವ ಸಿನಿಮಾ ಇದಾಗಿದೆ ಎಂದು ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಆನಂದರಾಮ್ ಲೈವ್‍ನಲ್ಲಿ ಹೇಳಿದ್ದಾರೆ.

    ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ನಿರ್ಧಾರ ಕೈಗೊಂಡಿದ್ದಕ್ಕೆ ಆಘಾತವಾಗಿದೆ, ತುಂಬಾ ಕಷ್ಟದ ಪರಿಸ್ಥಿತಿ ಇದು. ಸಾರ್ವಜನಿಕರು ಇಷ್ಟಪಟ್ಟು ಸಿನಿಮಾ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಿರ್ಧಾರ ಕೈಗೊಳ್ಳಬಾರದು, ಪ್ರೇಕ್ಷಕರ ಬೆಂಬಲದ ಜೊತೆಗೆ ಸರ್ಕಾರದ ಬೆಂಬಲವೂ ಅಗತ್ಯವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಬಂದು ನೋಡಿದಾಗಲೇ ಸಿನಿಮಾ ಯಶಸ್ವಿಯಾಗಲು ಸಾಧ್ಯ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ಸಂತೋಷ್ ಕೇಳಿಕೊಂಡಿದ್ದಾರೆ.

  • ರಾಜ್ಯಗಳು ಸ್ಥಳೀಯವಾಗಿ ನಿರ್ಬಂಧ ಹೇರಬಹುದು – ಕೇಂದ್ರದಿಂದ ಹೊಸ ಕೋವಿಡ್ ಮಾರ್ಗಸೂಚಿ

    ರಾಜ್ಯಗಳು ಸ್ಥಳೀಯವಾಗಿ ನಿರ್ಬಂಧ ಹೇರಬಹುದು – ಕೇಂದ್ರದಿಂದ ಹೊಸ ಕೋವಿಡ್ ಮಾರ್ಗಸೂಚಿ

    ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಜಿಲ್ಲಾ, ಸಣ್ಣ ನಗರಗಳ ಮಟ್ಟದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮ ಹಾಗೂ ನಿರ್ಬಂಧಗಳ ಬಗ್ಗೆ ತಿಳಿಸಿದೆ.

    ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಕೊರೊನಾ ಮಾರ್ಗಸೂಚಿಗಳು, ಕಂಟೈನ್ಮೆಂಟ್ ಝೋನ್, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದೆ. ಟೆಸ್ಟ್, ಟ್ರ್ಯಾಕ್, ಟ್ರೀಟ್ ಪದ್ಧತಿಯನ್ನು ತಪ್ಪದೇ ಪಾಲಿಸುವಂತೆ ತಿಳಿಸಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆ ವಹಿಸಬೇಕು ಎಂದು ಒತ್ತಿ ಹೇಳಿದೆ.

    ಅಂತರಾಜ್ಯ ಹಾಗೂ ಅಂತರ್ ಜಿಲ್ಲೆಯ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಅಲ್ಲದೆ ಪಕ್ಕದ ದೇಶಗಳೊಂದಿಗೂ ವ್ಯಾಪಾರ, ವ್ಯವಹಾರಕ್ಕೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಒಪ್ಪಿಗೆ, ಅನುಮತಿ, ಇ-ಪರ್ಮಿಟ್ ಬೇಕಿಲ್ಲ. ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಳೆದ 5 ತಿಂಗಳಿಂದ ಕೊರೊನಾ ನಿಯಂತ್ರಣದಲ್ಲಿತ್ತು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿತ್ತು ಎಂದು ಸಚಿವಾಲಯ ತಿಳಿಸಿದೆ.

    ಇದೀಗ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದನ್ನು ದೇಶದ ಕೆಲ ಭಾಗಗಳಲ್ಲಿ ನೋಡಿದ್ದೇವೆ. ಹೀಗಾಗಿ ಟೆಸ್ಟ್, ಟ್ರ್ಯಾಕ್, ಟ್ರೀಟ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನೋಡಬೇಕಿದೆ. ಅಲ್ಲದೆ ಲಸಿಕೆ ಪ್ರಕ್ರಿಯೆಯನ್ನು ಸಹ ಚುರುಕುಗೊಳಿಸಬೇಕಿದ್ದು, ಅರ್ಹ ಎಲ್ಲರಿಗೂ ಲಸಿಕೆ ನೀಡುವ ಕಾರ್ಯವಾಗಬೇಕಿದೆ ಎಂದು ಆರೋಗ್ಯ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

    ಹೊಸ ಮಾರ್ಗಸೂಚಿ ಪ್ರಕಾರ, ಆರ್‍ಟಿ-ಪಿಸಿಆರ್ ಟೆಸ್ಟ್ ಪ್ರಮಾಣ ಕಡಿಮೆ ಇರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಬೇಕು. ನಿಗದಿಪಡಿಸಿರುವುದರಲ್ಲಿ ಶೇ.70 ಅಥವಾ ಅದಕ್ಕೂ ಹೆಚ್ಚು ತಲುಪಬೇಕು. ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಶೀಘ್ರ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಅಲ್ಲದೆ ಕೆಲಸದ ಸ್ಥಳಗಳಲ್ಲಿ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದು ಎಚ್ಚರಿಸಲಾಗಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಗಳು ಎಚ್ಚರ ವಹಿಸಬೇಕು. ನಿಯಮ ಪಾಲಿಸದಿದ್ದಲ್ಲಿ ಮುಲಾಜಿಲ್ಲದೆ ದಂಡ ವಿಧಿಸಬೇಕು. ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ, ಪರಿಸ್ಥಿತಿ ಹದಗೆಟ್ಟಿದೆ ಎಂದಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರಡಳಿತ ಪ್ರದೇಶಗಳು ಸ್ಥಳೀಯವಾಗಿ ನಿರ್ಬಂಧ ಹೇರಬಹುದಾಗಿದೆ ಎಂದು ಗೃಹ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

    ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಕೊರೊನಾ ಲಿಂಕ್ ಕತ್ತರಿಸಲು ಲಸಿಕೆ ಅಗತ್ಯವಾಗಿದೆ. ಅರ್ಹ ಎಲ್ಲರಿಗೂ ಲಸಿಕೆ ಸಿಗುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ಆದಷ್ಟು ಬೇಕ ಲಸಿಕೆ ನೀಡಬೇಕು ಎಂದು ತಿಳಿಸಿದೆ.

  • ಕೊರೊನಾ ಸ್ಫೋಟ – ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್

    ಕೊರೊನಾ ಸ್ಫೋಟ – ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್

    – 103 ಮಂದಿಗೆ ಕೊರೊನಾ
    – ಬಿಳೇಕಳ್ಳಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಮಾತ್ರ ನಿಯಮ

    ಬೆಂಗಳೂರು: ಒಂದೇ ಅಪಾರ್ಟ್‍ಮೆಂಟ್‍ನಲ್ಲಿದ್ದ 103 ಮಂದಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಹೊಸ ನಿಯಮ ಜಾರಿ ಮಾಡಿದೆ.

    ಫೆ.6 ರಂದು 40 ಜನ ಬೊಮ್ಮನಹಳ್ಳಿ ಬಿಳೇಕಳ್ಳಿಯ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಡೆಹ್ರಾಡೂನ್‍ನಿಂದ ಬಂದವರು ಭಾಗಿಯಾಗಿದ್ದರು.

    ಅಪಾರ್ಟ್‍ಮೆಂಟ್‍ನಲ್ಲಿ 435 ಫ್ಲ್ಯಾಟ್‍ಗಳಿವೆ. 1052 ಮಂದಿ ಟೆಸ್ಟ್ ಕೊರೋನಾ ಪರೀಕ್ಷೆ ಮಾಡಲಾಗಿದೆ. ಈವರೆಗೂ 103 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಹೊಸ ರೂಲ್ಸ್ ಮಾಡಿದೆ.

    ಅಪಾರ್ಟ್‍ಮೆಂಟ್‍ಗೆ ಹೊರಗಿನವರು ಪ್ರವೇಶ ಮಾಡುವಂತಿಲ್ಲ. ಹೋಂ ಕ್ವಾರಂಟೈನ್ ಅವಧಿ ಮುಗಿಸಿಯೇ ನಿವಾಸಿಗಳು ಹೊರಗೆ ಬರಬೇಕು. ಅಪಾರ್ಟ್‍ಮೆಂಟ್ ಒಳಗಡೆ ಯಾವುದೇ ಪಾರ್ಟಿಗಳು, ಸಭೆ ಮಾಡುವಂತಿಲ್ಲ. ತಂತ್ರಜ್ಞಾನ ಬಳಸಿ ಮೀಟಿಂಗ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಸೊಂಕು ಹರಡಿದ ಅಪಾರ್ಟ್ ಮೆಂಟ್ ಕಾಮನ್ ಏರಿಯಾ ಬಳಕೆಗೂ ಹಲವು ನಿಬರ್ಂಧಗಳನ್ನು ಹೇರಲಾಗಿದೆ.

    50 ವರ್ಷ ಮೇಲ್ಪಟ್ಟವರು 96 ಜನರಿಗೆ ಕೊರೋನಾ ಪಾಸಿಟಿವ್ ಹಾಗೂ ಡಯಾಬಿಟಿಕ್ ಇರುವ 43 ಮಂದಿಗೂ ಬಂದಿದೆ ಎಂದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.

    ಜ್ವರ, ಕೆಮ್ಮು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಂತೆ ಅಪಾರ್ಟ್‍ಮೆಂಟ್‍ನಿಂದ ಕರೆ ಬಂದಿತ್ತು. ಕರೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಬಂದಿರುವುದು ದೃಢಪಟ್ಟಿದೆ. ಒಟ್ಟು 2 ಸಾವಿರ ಮಂದಿ ಅಪಾರ್ಟ್‍ಮೆಂಟ್‍ನಲ್ಲಿಲ್ಲಿದ್ದಾರೆ.

    ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್‍ನ ನಿವಾಸಿಗಳಿಗೆ ಆರೋಗ್ಯ ಸಿಬ್ಬಂದಿ ಸೋಮವಾರದಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 103 ಮಂದಿಗೆ ಸೋಂಕು ಇರುವುದು ತಿಳಿದುಬಂದಿದೆ.

  • ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಪ್ರಾರಂಭ

    ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಪ್ರಾರಂಭ

    ಬೆಂಗಳೂರು: ಡಿಸೆಂಬರ್ 1ರಿಂದ ರಾಜ್ಯದಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

    ಕೊರೊನಾ ಕಾರಣದಿಂದ ಬಾಗಿಲು ಮುಚ್ಚಿದ್ದ ರಾಜ್ಯದ ವೈದ್ಯಕೀಯ ಕಾಲೇಜುಗಳು ಮತ್ತೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಮೆಡಿಕಲ್, ಡೆಂಟಲ್, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಎಲ್ಲಾ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳನ್ನು ಡಿಸೆಂಬರ್ 1ರಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

    ಮಾರ್ಗಸೂಚಿ ಏನಿದೆ?
    * ನಿತ್ಯ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಕಡ್ಡಾಯ.
    * ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    * ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು.
    * ತರಗತಿ ಮುಗಿದ ಬಳಿಕ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.
    * ಪ್ರತಿ ಕ್ಯಾಂಪಸ್‍ಗಳಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭಿಸಬೇಕು.

    * ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.
    * ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದ ಬಗ್ಗೆ ಅಗತ್ಯ ಜಾಗೃತಿ ಮೂಡಿಸಬೇಕು.
    * ಕನಿಷ್ಠ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು.
    * ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಶುಚಿತ್ವ ಕಾಪಾಡಬೇಕು.
    * ವಾಹನ ವ್ಯವಸ್ಥೆ ಇರೋ ಕಾಲೇಜುಗಳು ನಿತ್ಯ ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು.

    * ಶೈಕ್ಷಣಿಕ ವರ್ಷ ತಡವಾಗಿರೋದ್ರಿಂದ ಶನಿವಾರ ಪೂರ್ತಿ ತರಗತಿ, ರಜೆಗಳಿಗೆ ಬ್ರೇಕ್ ಹಾಕಲು ನಿರ್ಧಾರ.
    * ಶನಿವಾರ-ಭಾನುವಾರ ಆನ್‍ಲೈನ್ ತರಗತಿಗೆ ಹೆಚ್ಚು ಒತ್ತು ನೀಡುವುದು.
    * ಶಿಫ್ಟ್ ಪ್ರಕಾರ ತರಗತಿ ನಡೆಸಲು ನಿರ್ಧಾರ.
    * ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಲು ಅವಕಾಶ.
    * ಮಾರ್ಗಸೂಚಿ ಅನುಷ್ಠಾನಕ್ಕೆ ಪ್ರಾಂಶುಪಾಲರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ.