Tag: ಮಾರ್ಗಸೂಚಿಗಳು

  • ಕ್ಲಬ್‍ಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ- ಎಣ್ಣೆ ಇಲ್ಲದೆ ಮೋಜು ಮಾಡಬಹುದು

    ಕ್ಲಬ್‍ಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ- ಎಣ್ಣೆ ಇಲ್ಲದೆ ಮೋಜು ಮಾಡಬಹುದು

    – ಚಿತ್ರ ಮಂದಿರ, ಈಜುಕೊಳ, ಮನೋರಂಜನಾ ಸ್ಥಳಗಳಿಗೆ ನಿರ್ಬಂಧ
    – ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಸಾಮಾಜಿಕ ಕಬ್‍ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲ ನಿರ್ಬಂಧಗಳನ್ನು ಹೇರಿದೆ.

    ಅಂತರಾಜ್ಯ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸಬೇಕಾದರೆ ಪಾಲಿಸಬೇಕಾದ ಕೊರೊನಾ ನಿಯಮಗಳಲ್ಲಿ ಸಹ ರಾಜ್ಯಸರ್ಕಾರ ಸಡಿಲಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಕ್ಲಬ್‍ಗಳನ್ನು ತೆರೆಯಲು ಸಹ ಅನುಮತಿ ನೀಡಿದೆ. ಕ್ಲಬ್ ಗಳಲ್ಲಿ ಮೇಜಿನ ಮೇಲೆ ಆಹಾರ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಕ್ಲಬ್ ಗಳಲ್ಲಿ ಮದ್ಯ ಸರಬರಾಜನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಸೋಟ್ರ್ಸ್ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಸಹ ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ಸರ್ಕಾರ ತಿಳಿಸಿದೆ. ಯಾವುದೇ ಕ್ರೀಡಾ ಚಟುವಟಿಕೆಗೆ ಪ್ರೇಕ್ಷರು ಭಾಗವಹಿಸುವಂತಿಲ್ಲ ಎಂದು ಹೇಳಲಾಗಿದೆ.

    ಈಜುಕೊಳ, ಮನೋರಂಜನಾ ಸ್ಥಳಗಳು, ಉದ್ಯಾನವನ, ಚಿತ್ರಮಂದಿರಗಳು, ಬಾರ್ ಗಳು, ಸಭಾಂಗಣ, ಅಸೆಂಬ್ಲಿ ಹಾಲ್‍ಗಳಿಗೆ ಹೇರಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ. ಅಲ್ಲದೆ ಸಾಮಾಜಿಕ, ರಾಜಕೀಯ , ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರೆ ಬೃಹತ್ ಸಭೆಗಳ ನಿರ್ಬಂಧವನ್ನು ಸಹ ಮುಂದುವರಿಸಲಾಗಿದೆ.

  • ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    – ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕೋರಿದ ಆಡಳಿತ ಮಂಡಳಿ

    ಬೆಂಗಳೂರು: ಜೂನ್ 8ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಈಗಾಗಲೇ ಹಲವು ಪ್ರತಿಷ್ಠಿತ ದೇವಸ್ಥಾನಗಳ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಆದರೆ ಇಸ್ಕಾನ್ ಜೂನ್ 15ರ ವರೆಗೆ ಸಮಯಾವಕಾಶ ಕೋರಿದೆ.

    ಸಿಲಿಕಾನ್ ಸಿಟಿಯ ಇಸ್ಕಾನ್ ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಆಡಳಿತ ಮಂಡಳಿ ದೇವಸ್ಥಾನ ತೆರೆಯಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ. ದೇವಸ್ಥಾನದ ಬಾಗಿಲು ತೆರೆಯಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಆದರೆ ಭಕ್ತರ ಆಗಮನಕ್ಕುಣವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ತಡವಾದರೂ ಪರವಾಗಿಲ್ಲ ಸೂಕ್ತ ಭದ್ರತೆ, ವ್ಯವಸ್ಥೆ ಮಾಡಿಕೊಂಡೇ ಬಾಗಿಲು ತೆರೆಯಲು ನಿರ್ಧರಿಸಿದೆ.

    ಇಸ್ಕಾನ್‍ಗೆ ಪ್ರತಿದಿನ 12 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಇಷ್ಟೊಂದು ಜನರಿಗೆ ಸಾಮಾಜಿಕ ಅಂತರ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ದೇವಾಲಯದ ಸಿದ್ಧತೆಗಾಗಿ ಸ್ವಲ್ಪ ಹೆಚ್ಚಿನ ಸಮಯ ಬೇಕು ಎಂದು ಇಸ್ಕಾನ್‍ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

    ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಎಲ್ಲ ದೇವಾಲಯಗಳು ಸರ್ಕಾರದ ನಿಯಮದಂತೆ ಸೋಮವಾರದಿಂದ ಬಾಗಿಲು ತೆರೆಯಲಿವೆ. ಸರ್ಕಾರದ ಮಾರ್ಗಸೂಚಿಯಂತೆ ದೇವರ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

  • ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    – ರಾಜ್ಯ ಸರ್ಕಾರಗಳಿಗೆ  ವರದಿ ಸಲ್ಲಿಸಲು ಸೂಚನೆ
    – ಪೋಷಕರು, ಶಿಕ್ಷಣ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ವರದಿ ತಯಾರಿ

    ನವದೆಹಲಿ: ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ ನಂತರ ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪಿಸಿದೆ.

    ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದು ಸವಾಲಿನ ಸಂಗತಿಯಾಗಿದ್ದು, ಈ ಕುರಿತು ಜುಲೈ ಬಳಿಕ ನಿರ್ಧಾರ ಕೈಗೊಳ್ಳಳಾಗುವುದು ಎಂದು ತಿಳಿಸಿದೆ. ಶಾಲೆ, ಕಾಲೇಜು, ಶಿಕ್ಷಣ, ತರಬೇತಿ, ಕೋಚಿಂಗ್ ಸೆಂಟರ್‍ ಗಳನ್ನು ತೆರೆಯುವ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

    ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಹ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ನೀಡುವ ಪ್ರತಿಕ್ರಿಯೆ, ಸಲಹೆಯನ್ನು ಪಡೆಯಬೇಕು. ಇದರ ಆಧಾರದ ಮೇಲೆ ಶಾಲೆಗಳನ್ನು ತೆರೆಯುವುದರ ಬಗ್ಗೆ ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

    ರಾಜ್ಯಗಳು ಸಲ್ಲಿಸುವ ವರದಿ ಆಧಾರದ ಮೇಲೆ ಕೇಂದ್ರ ಸಚಿವರು, ಸಂಬಂಧಪಟ್ಟ ಇಲಾಖೆಗಳು ಹಾಗೂ ಸ್ಟೇಕ್‍ಹೋಲ್ಡರ್ಸ್ ಗಳೊಂದಿಗೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೊರೊನಾ ವೈರಸ್ ಹರಡುವ ಕುರಿತು ಚರ್ಚಿಸಲಾಗುವುದು. ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್‍ಒಪಿ) ಸಿದ್ಧಪಡಿಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.