Tag: ಮಾರ್ಗ

  • ಶಾರ್ಟ್‌ಕಟ್‌ನಲ್ಲಿ ಹೋಗೋಣ- ಮಂಡ್ಯ ಎಸ್‍ಪಿಗೆ ಗದರಿದ ಸಿಎಂ

    ಶಾರ್ಟ್‌ಕಟ್‌ನಲ್ಲಿ ಹೋಗೋಣ- ಮಂಡ್ಯ ಎಸ್‍ಪಿಗೆ ಗದರಿದ ಸಿಎಂ

    ಮಂಡ್ಯ: ಮುಖ್ಯಮಂತ್ರಿಯಾದ ನಂತರ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರು ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ ಎಂದು ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜ್‍ಗೆ ಗದರಿದ್ದಾರೆ.

    ಪೊಲೀಸರು ತೂಬಿನಕೆರೆಯಿಂದ ಬೆಂಗಳೂರು ಮೈಸೂರು ರಸ್ತೆ ಮೂಲಕ ಕೆ.ಆರ್.ಪೇಟೆ ರಸ್ತೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಪ್ರಯಾಣಕ್ಕೆ ಮಾರ್ಗವನ್ನು ನಿಗದಿ ಮಾಡಿದ್ದರು. ಆಗ ಯಡಿಯೂರಪ್ಪ ಅವರು, ಬೂಕನಕೆರೆಗೆ ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ ಎಂದು ಮಂಡ್ಯ ಎಸ್‍ಪಿ ಶಿವಪ್ರಕಾಶ್ ಅವರಿಗೆ ಗದರಿದ್ದಾರೆ.

    ನಂತರ ಯಡಿಯೂರಪ್ಪ ಅವರನ್ನು ಹೆಲಿಪ್ಯಾಡ್‍ನಿಂದ ಪಾಂಡವಪುರ ಮಾರ್ಗವಾಗಿ ಕೆ.ಆರ್ ಪೇಟೆ ರಸ್ತೆ ಮೂಲಕ ಬೂಕನಕೆರೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಹತ್ತಿರ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ ಎಂದು ಸಿಎಂ ಬಿಎಸ್‍ವೈ ಹೋಗಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸ್ವಗ್ರಾಮ ಬೂಕನಕೆರೆ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣವಿದ್ದು, ಗ್ರಾಮವನ್ನು ತಳಿರು ತೋರಣದಿಂದ ಅಲಂಕಾರ ಮಾಡಲಾಗಿದೆ. ಬೂಕನಕೆರೆ ಗ್ರಾಮಕ್ಕೆ ಆಗಮಿಸಿದ ನಂತರ ಯಡಿಯೂರಪ್ಪ ಗ್ರಾಮದೇವತೆ ಗೋಗಾಲಮ್ಮ ದೇವರ ದರ್ಶನ ಪಡೆಯಲಿದ್ದಾರೆ. ಹೀಗಾಗಿ ದೇವಸ್ಥಾನದ ಮುಂದೆ ಹಸಿರು ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲಾಗಿದೆ.

    ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವಾಲಯದ ಬಳಿ ಮತ್ತು ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

  • ಝೀರೋ ಟ್ರಾಫಿಕ್ ಮೂಲಕ ಹುತಾತ್ಮ ಗುರು ಪಾರ್ಥಿವ ಶರೀರ ರವಾನೆ – ಯಾವ ಮಾರ್ಗದಲ್ಲಿ ಸಂಚಾರ?

    ಝೀರೋ ಟ್ರಾಫಿಕ್ ಮೂಲಕ ಹುತಾತ್ಮ ಗುರು ಪಾರ್ಥಿವ ಶರೀರ ರವಾನೆ – ಯಾವ ಮಾರ್ಗದಲ್ಲಿ ಸಂಚಾರ?

    ಬೆಂಗಳೂರು: ಹುತಾತ್ಮ ಯೋಧ ಗುರು ಕುಟುಂಬದ ಒತ್ತಾಯಕ್ಕೆ ಮಣಿದ ಸರ್ಕಾರ ವಿಶೇಷ ವಿಮಾನದ ಮೂಲಕ ಗುರು ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ತಲುಪಲಿದೆ.

    ತಿರುಚ್ಚಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬೆಳಗ್ಗೆ ಸುಮಾರು 11.45ಕ್ಕೆ ಎಚ್‍ಎಲ್‍ಎ ವಿಮಾನ ನಿಲ್ದಾಣಕ್ಕೆ ಬರುವ ಸಾಧ್ಯತೆ ಇದೆ. ಮೊದಲು ದೆಹಲಿಯಿಂದ ತಿರುಚ್ಚಿ, ಮಧುರೈ, ಕ್ಯಾಲಿಕಟ್‍ಗೆ ತೆರಳಿ ಬೆಂಗಳೂರಿಗೆ ಬರಬೇಕಿತ್ತು. ಆದರೆ ಕುಟುಂಬಸ್ಥರ ಒತ್ತಾಯಕ್ಕೆ ವಿಶೇಷ ವಿಮಾನದ ಮೂಲಕ ತಿರುಚ್ಚಿಯಿಂದ ಬೆಂಗಳೂರಿಗೆ ಪಾರ್ಥಿವ ಶರೀರ ತಲುಪುತ್ತದೆ ಎಂದು ಮಂಡ್ಯ ಜಿಲ್ಲಾಡಳಿತದಿಂದ ಮಾಹಿತಿ ತಿಳಿದು ಬಂದಿದೆ.

    ಮಾರ್ಗ: ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಗುರು ಯೋಧ ಪಾರ್ಥಿವ ಶರೀರ ಬಂದು ಅಲ್ಲಿಂದ ಎಡಕ್ಕೆ ತಿರುವು ಓಲ್ಡ್ ಏರ್‌ಪೋರ್ಟ್ ರಸ್ತೆ ಮೂಲಕ ಮಣಿಪಾಲ್ ಸೆಂಟರ್, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಕಬ್ಬನ್ ರಸ್ತೆ ಮೂಲಕ ಹಡ್ಸನ್ ಸರ್ಕಲ್ ಎಂಟ್ರಿಯಾಗುತ್ತದೆ. ಅಲ್ಲಿಂದ ಟೌನ್ ಹಾಲ್ ಬಳಿ ಬಲಕ್ಕೆ ತಿರುಗಿ ಬಾಲಗಂಗಾಧರ ಸ್ವಾಮಿ ಫ್ಲೈ ಓವರ್ ಮೇಲೆ ಹತ್ತಿ, ದೀಪಾಂಜಲಿನಗರ, ಆರ್.ಆರ್.ನಗರ, ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು (ಶಿವಪುರ) ಬಳಿ ಎಡಕ್ಕೆ ತಿರುಗಿ ಕೆ.ಎಂ ದೊಡ್ಡಿಗೆ ತಲುಪಲಿದೆ.

    ಯೋಧನ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯರ ಆಗಮನ ಹಿನ್ನೆಲೆಯಲ್ಲಿ ಮದ್ದೂರಿನ ಸಮೀಪ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮದ್ದೂರಿನ ಹುಲಿಗೆರೆಪುರ ಗ್ರಾಮದ ಬಳಿಯಿರುವ ಹೆಲಿಪ್ಯಾಡ್‍ಗೆ ನೀರು ಸಿಂಪಡಿಸಿ ಜಿಲ್ಲಾಡಳಿತ ಸಜ್ಜುಗೊಳಿಸುತ್ತಿದೆ.

    ಝೀರೋ ಟ್ರಾಫಿಕ್:
    ವಿಐಪಿ ರಸ್ತೆ ಮುಖಾಂತರ ಗುರು ಪಾರ್ಥಿವ ಶರೀರ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಹೆಚ್‍ಎಎಲ್ ಏರ್‌ಪೋರ್ಟ್ ನಿಂದ ಎಂಜಿ ರಸ್ತೆ ಮೂಲಕ ಮೂವ್ ಆಗುತ್ತದೆ. ಹೆಚ್‍ಎಎಲ್ ಮೂಲಕ ದೊಮ್ಮಲೂರು – ಟ್ರಿನಿಟಿ ಜಂಕ್ಷನ್ – ಎಂಜಿ ರಸ್ತೆ – ಟೌನ್ ಹಾಲ್ – ಮೈಸೂರು ರಸ್ತೆ, ನಾಯಂಡಹಳ್ಳಿ ಪ್ಲೇಓರ್ ಮೂಲಕ ಕೆಂಗೇರಿ, ಬಿಡಿದಿ, ರಾಮನಗರ, ಮಂಡ್ಯ, ಝೀರೋ ಟ್ರಾಫಿಕ್ ಮೂಲಕ ಪಾರ್ಥಿವ ರವಾನೆಗೆ ಸಿದ್ಧತೆ ಮಾಡಿಕೊಂಡಿಕೊಳ್ಳಲಾಗಿದೆ ಎಂದು ಟ್ರಾಫಿಕ್ ಈಸ್ಟ್ ಡಿಸಿಪಿ ಹೇಳಿದ್ದಾರೆ.

    ನಗರದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಇನ್ನೂ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆಗಮಿಸಿದ್ದಾರೆ. ಇತ್ತ ಹೆಚ್‍ಎಎಲ್ ಪೊಲೀಸರು ವಿಮಾನ ನಿಲ್ದಾಣದ ಸುತ್ತ ಬಂದೋಬಸ್ತ್ ಮಾಡಿದ್ದು, ಈಗಾಗಲೇ ಯಲಹಂಕದ ಏರ್ ಬೇಸ್ ನಲ್ಲಿ ಸೇನಾ ವಾಹನ ಸಿದ್ಧವಾಗಿದ್ದು, ಎಚ್‍ಎಎಲ್ ಗೆ ಆಗಮಿಸುತ್ತಿದೆ.

    https://www.youtube.com/watch?v=SZDaoFTiQg4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಯಾತ್ರೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 9 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಬರಲಿದೆ. ಬಳಿಕ ಕಂಠೀರವ ಸ್ಟುಡಿಯೋದವರೆಗೆ ಮೆರವಣಿಗೆ ಮೂಲಕ ಅಂತಿಮ ಯಾತ್ರೆ ನಡೆಯಲಿದೆ.

    ಅಂಬಿ ಅಂತಿಮ ಯಾನ:
    * ಬೆಳಗ್ಗೆ 9 ಗಂಟೆ – ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ
    * ಬೆಳಗ್ಗೆ 10 ಗಂಟೆ – ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಅಂಬಿ ಹೊತ್ತ ಹೆಲಿಕಾಪ್ಟರ್
    * ಬೆಳಗ್ಗೆ 10.15 ಗಂಟೆ – ಹೆಚ್‍ಎಎಲ್‍ನಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಶಿಫ್ಟ್ (ಸಾರ್ವಜನಿಕ ದರ್ಶನ ಇರಲ್ಲ)
    * ಬೆಳಗ್ಗೆ 11 ಗಂಟೆ – ಕಂಠೀರವ ಸ್ಟೇಡಿಯಂನಿಂದ ತೆರೆದ ವಾಹನದಲ್ಲಿ ಅಂಬಿ ಅಂತಿಮ ಯಾನ ಆರಂಭ
    * ಮಧ್ಯಾಹ್ನ 1 ಗಂಟೆ – ಕಂಠೀರವ ಸ್ಟುಡಿಯೋಗೆ ಅಂಬರೀಶ್ ಪಾರ್ಥಿವ ಶರೀರ ರವಾನೆ
    * ಮಧ್ಯಾಹ್ನ 2 ಗಂಟೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಣ್ಣಾವ್ರ ಸ್ಮಾರಕದ ಪಕ್ಕದಲ್ಲಿ ಅಂಬಿ ಅಂತ್ಯಕ್ರಿಯೆ


    ಅಂತಿಮ ಯಾನದ ಮಾರ್ಗ
    ಕಂಠೀರವ ಕ್ರೀಡಾಂಗಣದಿಂದ ಹೊರಡುವ ಮೆರವಣಿಗೆ ಕೆಜಿ ರೋಡ್ ಮೂಲಕ ಸಾಗಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪಿಎಸ್, ಪೊಲೀಸ್ ಕಾರ್ನರ್, ಮೈಸೂರ್ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಪ್ಯಾಲೇಸ್ ರೋಡ್ ಮೂಲಕ ಸಾಗಲಿದೆ. ಬಳಿಕ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಹೈಗ್ರೌಂಡ್ಸ್ ಪಿಎಸ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್, ಬಿಎಚ್‍ಇಐ ಮೂಲಕ ಯಶವಂತಪುರ ಫ್ಲೈಓವರ್ ಮೇಲೇರಿ ಮೆಟ್ರೋ ಬಳಿ ಬಲ ತಿರುವು ಪಡೆದು ಆರ್‍ಎಂಸಿ ಯಾರ್ಡ್ ಪಿಎಸ್ ಮಾರ್ಗವಾಗಿ ಗೊರುಗುಂಟೆಪಾಳ್ಯ ಸಿಗ್ನಲ್ ಬಳಿ ಎಡ ತಿರುವು ಪಡೆದು ಸಿಎಂಟಿಐ ಮಾರ್ಗ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.

    ಮಾರ್ಗ ಬದಲಾವಣೆ:
    ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಅಂತಿಮ ಯಾತ್ರೆಯನ್ನು ಮೊದಲು ರಾಜಭವನ, ಕಸ್ತೂರ್ ಬಾ ರಸ್ತೆ ಮೂಲಕ ಕರೆತರಲು ಯೋಜನೆ ರೂಪಿಸಿಲಾಗಿತ್ತು. ಆದರೆ ಟ್ರಾಫಿಕ್ ಜಾಮ್ ಹಾಗೂ ಗಣ್ಯ ವ್ಯಕ್ತಿಗಳ ಸಂಚಾರ ಪ್ರಯುಕ್ತ ಈ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

    ಔಟರ್ ರಿಂಗ್ ರಸ್ತೆಯ ಸುಮನಹಳ್ಳಿ ಜಂಕ್ಷನ್ ನಿಂದ ಗೊರಗುರಂಟೆಪಾಳ್ಯ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಸುಮನಹಳ್ಳಿಯಿಂದ ಮಾಗಡಿ ರಸ್ತೆ, ಕಾಮಾಕ್ಷಿ ಪಾಳ್ಯ, ಕಾರ್ಡ್ ರಸ್ತೆ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಗೊರಗುಂಟೆಪಾಳ್ಯದಿಂದ ಎಂಇಎ ಜಂಕ್ಷನ್, ಆರೆಂಸಿ ಯಾರ್ಡ್ ನಿಂದ ಸೋಪ್ ಫ್ಯಾಕ್ಟರಿ ಮೂಲಕ ಸುಮನಹಳ್ಳಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಿಎಎಲ್ ರಸ್ತೆ, ಗಂಗಮ್ಮ ಸರ್ಕಲ್ ನಿಂದ ತುಮಕೂರು ರಸ್ತೆಗೆ ಹೋಗಲು ಅವಕಾಶ ನೀಡಲಾಗಿದೆ.

    ಇಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಆರಂಭವಾಗುವ ಮೆರವಣಿಗೆಯಿಂದ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುವ ಲಕ್ಷಣಗಳು ಇದ್ದು, ಏರ್ ಪೋರ್ಟ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟನೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸೋದು ಉತ್ತಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಮೈಸೂರು: ದಸರಾ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಮತ್ತು ಕೆಆರ್ ಎಸ್ ಸೇರಿದಂತೆ ಸುತ್ತಮುತ್ತ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.

    ಇಂದಿನಿಂದ ಮೈಸೂರಿನ ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ರಾತ್ರಿ 11 ಗಂಟೆವರೆಗೆ ಪಾಂಡವಪುರ ತಾಲೂಕಿನ ಕಟ್ಟೇರಿ ಕಡೆಯಿಂದ ಕೆಆರ್‍ಎಸ್ ಮಾರ್ಗವಾಗಿ ಬರುವ ಎಲ್ಲ ಸರಕು ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.

    ಈ ವಾಹನಗಳು ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು ಕಡೆಗೆ ಅಥವಾ ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.

    ಅಕ್ಟೋಬರ್ 17 ರಿಂದ 21ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರಗೆ ಮೈಸೂರು ಕಡೆಯಿಂದ ಬೃಂದಾವನ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

    ಬೃಂದಾವನ ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಅಣೆಕಟ್ಟೆ ಬಳಿಯಿರುವ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ತ್ ಬ್ಯಾಂಕ್ ಕಟ್ಟೇರಿ, ಎಲೆಕೆರೆ ಹ್ಯಾಂಡ್‍ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರೆ ಕಡೆಗಳಿಗೆ ಏಕಮುಖವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv