Tag: ಮಾರಿಕಾಂಬ ದೇವಿ ಜಾತ್ರೆ

  • ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಕಾರವಾರ: ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾರ್ಚ್ 3ರಿಂದ 11ರ ವರೆಗೆ ಜಾತ್ರೆ ನಡೆಯಲಿದೆ.

    ಪ್ರತಿ ದಿನ ಜಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಲು ಎಲ್ಲಾ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಶಿರಸಿಯಲ್ಲಿ 400 ಪೊಲೀಸರು, 10 ಸಿಪಿಐ, 3 ಮಂದಿ ಡಿವೈಎಸ್‍ಪಿ, 30 ಪಿಎಸ್‍ಐ, 8 ಡಿಎಆರ್ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿದೆ.

    ಈ ಬಾರಿ ವಾಹನ ಸಂಚಾರ ಸುಗಮವಾಗಲು ಹಾಗೂ ಬರುವ ಭಕ್ತರಿಗೆ ಟ್ರಾಫಿಕ್ ಬಗ್ಗೆ ಮಾಹಿತಿ ನೀಡಲು ಶಿರಸಿ ಪೊಲೀಸ್ ಎಂಬ ವೆಬ್ ಸೈಟ್ ಸಹ ಮಾಡಲಾಗಿದ್ದು, ಇದರ ಮೂಲಕ ಎಲ್ಲಾ ಮಾಹಿತಿಯನ್ನು ಜನರು ಪಡೆಯಬಹುದಾಗಿದೆ. ಜಾತ್ರೆಯಲ್ಲಿ ಮಹಿಳೆಯರ ರಕ್ಷಣೆಗೆ ಒಬವ್ವ ಪಡೆ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ಪುಂಡ ಪೋಕರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಜಾತ್ರೆಯಲ್ಲಿ ದ್ರೋಣ್ ಕ್ಯಾಮೆರಾದ ಮೂಲಕವೂ ಹದ್ದಿನ ಕಣ್ಣು ಇಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್.ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಹರಾಜಿನಲ್ಲಿ 1 ಕೋಟಿ ರೂ. ದಾಟಿದ ಜಾತ್ರಾ ಹಂಗಾಮಿ ಮಳಿಗೆ
    ರಾಜ್ಯದ ಅತೀ ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರಿಕಾಂಬ ದೇವಸ್ಥಾನದಿಂದ ಸುತ್ತಮುತ್ತಲೂ ಹಂಗಾಮಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಈ ಬಾರಿ ಹಂಗಾಮಿ ವಾಣಿಜ್ಯ ಮಳಿಗೆಗಳು ಒಂದೇ ದಿನದಲ್ಲಿ 1.9 ಕೋಟಿ ರೂ.ಗೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ. ಇದಲ್ಲದೇ ಇನ್ನೂ ಮಳಿಗೆಗಳ ಹರಾಜು ಪ್ರಕ್ರಿಯೆಗಳಿದ್ದು, ಕನಿಷ್ಟ ಎರಡು ಕೋಟಿ ರೂ. ದಾಟುವ ನಿರೀಕ್ಷೆಯಿದೆ.