Tag: ಮಾರಾಮಾರಿ

  • ಕಾಂಗ್ರೆಸ್ ಶಾಸಕರ ಎದುರೇ ಚಪ್ಪಲಿ ಹಿಡಿದು ಕಾರ್ಯಕರ್ತರ ಮಾರಾಮಾರಿ

    ಕಾಂಗ್ರೆಸ್ ಶಾಸಕರ ಎದುರೇ ಚಪ್ಪಲಿ ಹಿಡಿದು ಕಾರ್ಯಕರ್ತರ ಮಾರಾಮಾರಿ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿತ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗೆಗ್ಗಿಲರಾಳ್ಳಹಳ್ಳಿಯಲ್ಲಿ ನಡೆದಿದೆ.

    ಸೋಮೇನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆ ರಜನಿ ಮಂಜುನಾಥರೆಡ್ಡಿ ಹಾಗೂ ತಾಲೂಕು ಪಂಚಾಯತಿ ಅಧ್ಯಕ್ಷೆ ವರಲಕ್ಷ್ಮೀ ಕೃಷ್ಣೇಗೌಡರ ಬಣಗಳ ನಡುವೆ ಮಾರಾಮಾರಿ ನಡೆದಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಇಂದು ಗೆಗ್ಗಿಲರಾಳ್ಳಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ವಾಪಾಸಾಗುತ್ತಿದ್ದರು.

    ಸೋಮೇನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆ ರಜನಿ ಹಾಗೂ ಆಕೆಯ ಪತಿ ಮಂಜುನಾಥ್ ಶಾಸಕರನ್ನು ಅಡ್ಡ ಹಾಕಿ, ಸರ್ ಮಂಗಳವಾರ ಗುಡಿಬಂಡೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸೋಮೇನಹಳ್ಳಿ ಗ್ರಾಮಪಂಚಾಯತಿಯ ಗೆಗ್ಗಿಲರಾಳ್ಳಹಳ್ಳಿ ಗ್ರಾಮದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿಕೆ ನೀಡಿದ್ದೀರಿ? ನೀವು ಶಾಸಕರಾಗಿದ್ದಾಗಲೇ ತಾನೇ ಆ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಅದು ಹೇಗೆ ಅವ್ಯವಹಾರ ಆಗಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರಂತೆ.

    ಇದೇ ವೇಳೆ ತಾಲೂಕು ಪಂಚಾಯತಿ ಅಧ್ಯಕ್ಷೆ ವರಲಕ್ಷ್ಮೀ ಪತಿ ಕೃಷ್ಣೇಗೌಡ ಕೂಡ ನಮಗೆ ಈ ಹಿಂದೆ ತಾಲೂಕು ಪಂಚಾಯತಿ ಅನುದಾನದಲ್ಲಿ ಮಾಡಿದ ಕಾಮಗಾರಿಗಳ ಹಣ ಬಿಡುಗಡೆ ಮಾಡಿಸಲಿಲ್ಲ ಎಂದು ಕೃಷ್ಣೇಗೌಡರ ವಿರುದ್ಧ ಶಾಸಕರಿಗೆ ದೂರು ನೀಡಿದ್ದರಂತೆ. ಇದರಿಂದ ಕೆರೆಳಿದ ಕೃಷ್ಣೇಗೌಡ ಬಣದವರು ಏನು ಶಾಸಕರನ್ನೇ ಅಡ್ಡ ಹಾಕಿ ಪ್ರಶ್ನೆ ಮಾಡ್ತೀರಿ ಎಂದು ವಾಗ್ವಾದ ನಡೆಸಿದ್ದಾರೆ.

    ಗೆಗ್ಗಿಲರಾಳ್ಳಹಳ್ಳಿ ಗ್ರಾಮದವರೇ ಆದ ಶಾಸಕರ ಬೆಂಬಲಿತ ಒಂದೇ ಗ್ರಾಮದವರ ಎರಡು ಬಣಗಳ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬ ರಜನಿಯವರಿಗೆ ಚಪ್ಪಲಿ ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಕೆರಳಿದ ರಜನಿ ಕಡೆಯವರು ಹಾಗೂ ವಿರೋಧಿ ಗುಂಪಿನವರು ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಶಾಸಕ ಸುಬ್ಬಾರೆಡ್ಡಿ ಹಾಗೂ ಇತರೆ ಜನಪ್ರತಿನಿಧಿಗಳು ಹಾಗೂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • ಕೈ, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮಾಜಿ ಶಾಸಕ ಬೆಂಬಲಿಗರಿಂದ ದೌರ್ಜನ್ಯದ ಆರೋಪ

    ಕೈ, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮಾಜಿ ಶಾಸಕ ಬೆಂಬಲಿಗರಿಂದ ದೌರ್ಜನ್ಯದ ಆರೋಪ

    ಚಿತ್ರದುರ್ಗ: ಬಿಜೆಪಿ ಬೆಂಬಲಿಸಿದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಸುಧಾಕರ್ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ನಾಗಾನಾಯ್ಕನಹಟ್ಟಿಯಲ್ಲಿ ನಡೆದಿದೆ.

    ಹಿರಿಯೂರು ನಗರಸಭೆ ಚುನಾವಣೆಯ ನಾಮಪತ್ರ ಪರಿಶೀಲನೆ ಕಾರ್ಯ ಮುಗಿದಿದ್ದು, ಚುನಾವಣಾ ರಣಕಣ ರಂಗೇರಿದೆ. ಹೀಗಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನವೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.

    29ನೇ ವಾರ್ಡ್‍ನಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿರುವುದನ್ನು ಗಮನಿಸಿರುವ ಮಾಜಿ ಶಾಸಕ ಸುಧಾಕರ್ ಬೆಂಬಲಿಗ, ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ್ ಸಹೋದರ ಹಾಗೂ ಕೈ ಅಭ್ಯರ್ಥಿ ರವಿಚಂದ್ರ ನಾಯ್ಕ್ ಗೆ ಹಿನ್ನಡೆಯಾಗುವುದೆಂಬ ಭೀತಿ ಹುಟ್ಟಿದೆ. ಹೀಗಾಗಿ ತಮ್ಮ ಬೆಂಬಲಿಗರೊಂದಿಗೆ ಭಾನುವಾರ ತಡರಾತ್ರಿ ನಾಗಾನಾಯ್ಕ್ ನಟ್ಟಿಯಲ್ಲಿರುವ ಬಿಜೆಪಿ ಕಾರ್ಯಕರ್ತ ಸಂತೋಷ್‍ನಾಯ್ಕ್ ರ ಮನೆಗೆ ನುಗ್ಗಿ ಬಿಜೆಪಿ ಬೆಂಬಲಿಸದಂತೆ ಧಮ್ಕಿ ಹಾಕಿ ದಾಂಧಲೆ ಎಬ್ಬಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ವೇಳೆ ಎರಡು ಗುಂಪಿನ ನಡುವೆ ಪರಸ್ಪರ ಮಾತಿನ ಚಕಮಕಿ ಹಾಗೂ ಮಾರಾಮಾರಿ ನಡೆದಿದೆ. ಸಂತೋಷ್ ನಾಯ್ಕ್ ಅವರ ಕುಟುಂಬದ ನಾಲ್ವರು ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಸಂತೋಷ್ ನಾಯ್ಕ್ ಗೆ ತಲೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.

    ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಗರಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವುದು ಮತದಾರರಲ್ಲಿ ಆತಂಕ ಸೃಷ್ಟಿಸಿದೆ.

  • ಪಬ್ಲಿಕ್ ಟಿವಿ ವರದಿಗಾರನಿಗೆ ಇಕ್ಬಾಲ್ ಅನ್ಸಾರಿ ಆಪ್ತನಿಂದ ಕೊಲೆ ಬೆದರಿಕೆ!

    ಪಬ್ಲಿಕ್ ಟಿವಿ ವರದಿಗಾರನಿಗೆ ಇಕ್ಬಾಲ್ ಅನ್ಸಾರಿ ಆಪ್ತನಿಂದ ಕೊಲೆ ಬೆದರಿಕೆ!

    ಕೊಪ್ಪಳ: ಶಾಸಕ ಮುಂದೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾರಾಮಾರಿ ನಡೆಸಿದ್ದು, ಈ ಬಗ್ಗೆ ವರದಿ ಮಾಡಲು ತೆರಳಿದ್ದ ವರದಿಗಾರನಿಗೆ ಇಕ್ಬಾಲ್ ಅನ್ಸಾರಿ ಆಪ್ತ ಕೊಲೆ ಬೆದರಿಕೆ ಹಾಕಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಗಂಗಾವತಿಯ ಜಯನಗರದಲ್ಲಿ ಬಿಜೆಪಿಯ ಮಹಾಲಿಂಗಪ್ಪ ಬೈಕ್ ಅಲ್ಲಿ ಬರುತ್ತಿರುವಾಗ ಅಡ್ಡಗಟ್ಟಿದ ಕಾಂಗ್ರೆಸ್ ಪಕ್ಷದ ಕೊತ್ವಾಲ್ ನಾಗರಾಜ್ ಮತ್ತು ಸುರೇಶ್ ಕುಮಾರ್ 20 ಜನರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ.

    ಈ ವೇಳೆ ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ಘಟನಾ ಸ್ಥಳಕ್ಕೆ ಬಂದರೂ ಕ್ಯಾರೆ ಮಾಡದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರ ಮುಂದೆಯೇ ಚಪ್ಪಲಿ ಹಿಡಿದು ಬಡಿದಾಡಿದ್ದಾರೆ. ಘಟನೆಯ ಸುದ್ದಿ ತಿಳಿದು ಅಲ್ಲೇ ಇದ್ದ ಮಾಜಿ ಎಂಪಿ ಈಗಿನ ಕಾಂಗ್ರೆಸ್ ಪಕ್ಷದ ಮುಖಂಡ ಶಿವರಾಮೇಗೌಡ ಸ್ಥಳಕ್ಕೆ ಆಗಮಿಸಿ ಮೂಕವಿಸ್ಮಿತರಾದರು.

    ಘಟನೆಗೆ ಕಾರಣವೇನು?
    ಕೆಲವು ದಿನಗಳ ಹಿಂದೆ ಗಂಗಾವತಿಗೆ ಪೇಜಾವರ ಶ್ರೀಗಳು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಲಿಂಗಾಯತರು ಮತ್ತು ಬಿಜೆಪಿಯ ಮಾಜಿ ಎಂಪಿ ಸಂಗಣ್ಣ ಕರಡಿ ಆಗಮಿಸಿದ್ದರು. ಪೇಜಾವರ ಶ್ರೀಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲರು ಈ ಸಾರಿ ಬಿಜೆಪಿಗೆ ವೋಟ್ ಹಾಕಿರುವುದಾಗಿ ಹೇಳಿದ್ದಾರೆ. ಇದನ್ನು ಖಂಡಿಸಿದ ಬಿಜೆಪಿಯ ಲಿಂಗಾಯತರು, ಇವರು ಹೇಳುತ್ತಿರುವುದು ಸುಳ್ಳು ಇವರು ಕಾಂಗ್ರೆಸ್‍ಗೆ ವೋಟ್ ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳ ಎದುರೇ ಮಾತಿನ ಚಕಮಕಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ಸೇಡನ್ನು ಇಟ್ಟುಕೊಂಡು ಸೋಮವಾರ ರಾತ್ರಿ ಮಾರಾಮಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಸೋಮವಾರ ಎರಡೂ ಪಕ್ಷಗಳ ನಡುವೆ ನಡೆದ ಮಾರಾಮಾರಿಯ ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಕಾಂಗ್ರೆಸ್ ಪಕ್ಷದ ಕೊತ್ವಾಲ್ ನಾಗರಾಜ್, ವಿಡಿಯೋ ಮಾಡದಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆ ಕೊತ್ವಾಲ್ ಗಂಗಾವತಿ ಕೋರ್ಟ್ ಆವರಣದಲ್ಲಿ ವರದಿಗಾರನ ಮೇಲೆ ಹಲ್ಲೆ ನಡೆಸಿದ್ದರು. ಪರಿಸ್ಥಿತಿ ಹತೋಟಿ ಮೀರಿ ಹೊಗುತ್ತಿರುವಾಗ ಸ್ಥಳಕ್ಕೆ ಆಗಮಿಸಿದ ಗಂಗಾವತಿ ನಗರ ಠಾಣೆ ಪೊಲೀಸರು ಎಲ್ಲರನ್ನು ಮನೆಗೆ ಕಳುಹಿಸಿ ವಾತಾವರಣ ತಿಳಿಗೊಳಿಸಿದರು.

  • ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಬೆಳಗಾವಿ: ಜಮೀನಿಗಾಗಿ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ನಡೆದಿದೆ.

    ಮಾಯಪ್ಪ ಪಾಯಪ್ಪಗೋಳ ಹಾಗೂ ರಾಮ ಪಾಯಪ್ಪಗೋಳ ಕುಟುಂಬದ ಸುಮಾರು 15ಕ್ಕೂ ಹೆಚ್ಚು ಮಂದಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    https://www.youtube.com/watch?v=EZPfOAIfFEY

  • ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಉಪನ್ಯಾಸಕರೆದುರೇ ವಿದ್ಯಾರ್ಥಿಗಳ ಮಾರಾಮಾರಿ

    ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಉಪನ್ಯಾಸಕರೆದುರೇ ವಿದ್ಯಾರ್ಥಿಗಳ ಮಾರಾಮಾರಿ

    ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕರ ಎದುರೇ ಹೊಡೆದಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಕೊಪ್ಪಾ ಡಿಗ್ರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ವಿದ್ಯಾರ್ಥಿಗಳ ಮಾರಾಮಾರಿ ನಡೆದಿದೆ. ಕಾರ್ಯಕ್ರಮದಲ್ಲಿ ಕುಣಿಯುವಾಗ ಮೈ-ಕೈ ತಾಗಿದ್ದಕ್ಕೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.

    ಉಪನ್ಯಾಸಕರ ಎದುರೇ ವಿದ್ಯಾರ್ಥಿಗಳ ಹೊಡೆದಾಟ ನಡೆದಿದ್ದು, ಬಿಡಿಸಲು ಹೋದ ಕೆಲ ಉಪನ್ಯಾಸಕರಿಗೂ ಧರ್ಮದೇಟು ಬಿದ್ದಿದೆ. ವಿದ್ಯಾರ್ಥಿಗಳು ಹೊಡೆದಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

  • ಕ್ಷುಲ್ಲಕ ಕಾರಣಕ್ಕೆ ಬಾರ್ ಮುಂದೆ ಹೊಡೆದಾಡಿಕೊಂಡ ಕುಡುಕರ ಗುಂಪು

    ಕ್ಷುಲ್ಲಕ ಕಾರಣಕ್ಕೆ ಬಾರ್ ಮುಂದೆ ಹೊಡೆದಾಡಿಕೊಂಡ ಕುಡುಕರ ಗುಂಪು

    ಹುಬ್ಬಳಿ: ಕುಡಿದ ಮತ್ತಿನಲ್ಲಿ ಕುಡುಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ತಡರಾತ್ರಿ ನಗರದ ಕೇಶ್ವಾಪುರದ ಕಿಂಗ್ಸ್ ಬಾರ್ ಬಳಿ ನಡೆದಿದೆ.

    ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎಣ್ಣೆ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೂ ಸ್ಥಳಿಯರು ಜಗಳ ಬಿಡಿಸಲಿಲ್ಲ. ಕೊನೆಗೂ ಹೊಡೆದಾಡಿಕೊಂಡ ಗುಂಪುಗಳ ಸದಸ್ಯರು ತಾವೇ ಹೊರಟು ಹೋಗಿದ್ದಾರೆ.

    ಈ ಎರಡು ಗುಂಪಿನ ಯುವಕರ ಹೊಡೆದಾಟವನ್ನು ಸ್ಥಳಿಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆದರೆ ಹೊಡೆದಾಡಿಕೊಂಡವರ ಹೆಸರು ತಿಳಿದು ಬಂದಿಲ್ಲ. ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

  • ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಚಿತ್ರದುರ್ಗ: ಹಳೆ ದ್ವೇಷ ವೈಷಮ್ಯ ಹಿನ್ನಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರವಲಯದ ಬಬ್ಬೂರು ಬೋವಿ ಕಾಲೋನಿಯಲ್ಲಿ ನಡೆದಿದೆ.

    ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಎರಡು ಕಾರುಗಳ ಗಾಜು ಜಖಂ ಆಗಿದೆ. ಗಲಾಟೆಯನ್ನು ನೋಡಲು ಬಂದ ಮಹಿಳೆಯ ಮೇಲೆ ಅಕಸ್ಮಾತ್ ಆಗಿ ಕಲ್ಲು ಬಂದು ಬಿದಿದ್ದು, ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಎರಡು ತಿಂಗಳ ಭ್ರೂಣ ಹತ್ಯೆಯಾಗಿ ಗರ್ಭಪಾತವಾಗಿದೆ.

    ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಮಣಿ, ಮಂಜುನಾಥ್, ಹರೀಶ್ ನನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

     

  • ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಗೆ 10ಕ್ಕೂ ಹೆಚ್ಚು ಮಂದಿಯಿಂದ ಥಳಿತ!

    ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಗೆ 10ಕ್ಕೂ ಹೆಚ್ಚು ಮಂದಿಯಿಂದ ಥಳಿತ!

    – ಥಳಿತದಿಂದ ಕುಸಿದ ಮಹಿಳೆಯ ಕೂದಲನ್ನೇ ಹಿಡಿದು ಎಳೆದಾಡಿದ್ರು

    ಬೆಳಗಾವಿ: ಆಸ್ತಿ ವಿಚಾರವಾಗಿ ಮಹಿಳೆಯ ಮೇಲೆ ಸಂಬಂಧಿಕರು ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಮಾರಾಮಾರಿ ನಡೆಸಿದ ಘಟನೆ ಇಂದು ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಮಂಗಳ ನಾಯಕ್ ಎಂಬವರೇ ಸಂಬಂಧಿಕರಿಂದ ಥಳಿತಕ್ಕೊಳಕ್ಕಾದ ಮಹಿಳೆ.

    ಏನಿದು ಪ್ರಕರಣ?: ಮಂಗಳ ನಾಯಕ್ ತಮ್ಮ ಅಕ್ಕನ ಮಗ ಭರತ್ ಜೊತೆ ಚಿಕ್ಕೋಡಿ ಪಟ್ಟಣದ ತಹಶೀಲ್ದಾರ್ ಕೋರ್ಟ್ ನಲ್ಲಿ ಪ್ರಕರಣವೊಂದರ ವಿಚಾರಣೆಗೆ ಬಂದಿದ್ದು, ವಾಪಾಸ್ಸು ಮನೆಗೆ ಹೋಗುತ್ತಿದ್ದರು. ಈ ವೇಳೆ 10ಕ್ಕೂ ಹೆಚ್ಚು ಜನರ ತಂಡದಿಂದ ಮಂಗಳ ಮತ್ತು ಭರತ ಮೇಲೆ ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಹಲ್ಲೆ ನಡೆದಿದೆ. ಅಲ್ಲದೇ ಸಂಬಂಧಿಕರು ಮಂಗಳ ನಾಯಕ ಅವರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಬಳಿಕ ಚಪ್ಪಲಿಯಿಂದ ಹೊಡೆದಾಡಿದ್ದಾರೆ.

    ಮಾಹಿತಿ ಪಡೆದ ಪೊಲಿಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆಯೇ ಹಲ್ಲೆ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಹಲ್ಲೆ ನಡೆಸಿದವರು ಕೂಡ ನಿಪ್ಪಾಣಿ ನಗರದವರು ಎಂದು ಹೇಳಲಾಗುತ್ತಿದೆ. ಹೊಡೆದಾಟದ ವೇಳೆ ಮೂರ್ಛೆ ಹೋಗಿದ್ದ ಮಂಗಳಗೆ ಸ್ಥಳೀಯರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vJSPrfa-Lyk