Tag: ಮಾರಾಠಿ ಸಿನಿಮಾ

  • ಕೊರೊನಾಗೆ ಹಿರಿಯ ನಟಿ ಆಶಾಲತಾ ನಿಧನ

    ಕೊರೊನಾಗೆ ಹಿರಿಯ ನಟಿ ಆಶಾಲತಾ ನಿಧನ

    -ಶೂಟಿಂಗ್ ವೇಳೆ ತಗುಲಿದ ಸೋಂಕು

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಮರಾಠಿ ಚಿತ್ರರಂಗದ, ರಂಗಭೂಮಿ ಕಲಾವಿದೆ ಆಶಾಲತಾ ವಾಬ್ಗಾಂವ್‍ಕರ್ ಅವರನ್ನು ಬಲಿ ಪಡೆದುಕೊಂಡಿದೆ. 79 ವರ್ಷದ ಆಶಾಲತಾ ಅವರಿಗೆ ಚಿತ್ರೀಕರಣದ ವೇಳೆ ಸೋಂಕು ತಗುಲಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಶಾಲತಾ ವಿಧಿವಶರಾಗಿದ್ದಾರೆ.

    ಗೋವಾ ಮೂಲದವರಾದ ಆಶಾಲತಾ ಅವರು ಮರಾಠಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ತಮ್ಮ ಸಹಜ ನಟನೆಯ ಮೂಲಕ ಆಶಾಲತಾ ಚಿರಪರಿಚಿತರಾಗಿದ್ದರು. ನಟಿ ರೇಣುಕಾ ಶಾಹಾನೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಇಂದು ಅತ್ಯಂತ ದುಃಖಮಯವಾದ ದಿನ. ಕೋವಿಡ್ 19 ಸೋಂಕು ಸುಂದರ ಮತ್ತು ಸರಳ ಜೀವಿಯನ್ನ ನಮ್ಮಿಂದ ಕಸಿದುಕೊಂಡಿದೆ. ಅತ್ಯಂತ ದಯಾಳು, ಮಹಾ ನಟಿ, ಕರುಣಾಮಯಿ ಎಲ್ಲರನ್ನು ಪ್ರೀತಿಯಿಂದ ಆಶಾಲತಾ ಅಮ್ಮ ಇಂದು ನಮ್ಮೊಂದಿಗಿಲ್ಲ. ಆಶಾಲತಾ ಅಮ್ಮ ನನ್ನನ್ನು ಸದಾ ಬೇಬಿ ಎಂದು ಕರೆಯುವ ಮೂಲಕ ಆರ್ಶೀವಾದ ನೀಡುತ್ತಿದ್ದರು. ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಎಂದು ರೇಣುಕಾ ಶಾಹಾನೆ ಬರೆದುಕೊಂಡಿದ್ದಾರೆ.

    ಗೋವಾ ಮೂಲದ ನಟಿ ಆಶಾಲತಾ ವಾಬ್ಗಾಂವ್‍ಕರ್ ನಿಧನ ರಂಗಭೂಮಿಗೆ ತುಂಬಲಾರದ ದೊಡ್ಡ ನಷ್ಟವಾಗಿದೆ. ಆಶಾಲತಾರ ನಿಧನ ಮುಂದಿನ ಪೀಳಿಗೆ ಕಲಾವಿದರಿಗೆ ಮಾದರಿಯಾಗಲಿದೆ ಎಂದು ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸಂತಾಪ ಸೂಚಿಸಿದ್ದಾರೆ.

    ಆಶಾಲತಾ ಅವರು ಕೊಂಕಣಿ ಮತ್ತು ಮರಾಠಿ ನಾಟಕಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಸುಮಾರು ನೂರಕ್ಕೂ ಹೆಚ್ಚು ಮರಾಠಿ ಸಿನಿಮಾಗಳಲ್ಲಿ ಆಶಾಲತಾ ಅವರು ನಟಿಸಿದ್ದಾರೆ. ನಿರ್ದೇಶಕ ಬಸು ಚಟರ್ಜಿ ‘ಅಪನೇ ಪ್ಯಾರ್’ ಸಿನಿಮಾ ಮೂಲಕ ಅಶಾಲತಾರನ್ನು ಬಾಲಿವುಡ್ ಗೆ ಪರಿಚಯಿಸಿದ್ದರು. ನಂತರ ಅಂಕುಶ್, ಯಾದೋಂ ಕೀ ಕಸಮ್, ನಮಕ್ ಹಲಾಲ್, ವೋ ಸಾಥ್ ದಿನ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.