Tag: ಮಾರಮ್ಮ ದೇವಾಲಯ

  • ಮೈಸೂರು| 11 ವರ್ಷಗಳ ನಂತರ ಮಾರಮ್ಮ ದೇವಸ್ಥಾನದ ಬಾಗಿಲು ಓಪನ್

    ಮೈಸೂರು| 11 ವರ್ಷಗಳ ನಂತರ ಮಾರಮ್ಮ ದೇವಸ್ಥಾನದ ಬಾಗಿಲು ಓಪನ್

    – ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿ ಮುಚ್ಚಿದ್ದ ದೇಗುಲ

    ಮೈಸೂರು: ಇಲ್ಲಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದ (Maramma Temple) ಬಾಗಿಲನ್ನು 11 ವರ್ಷಗಳ ನಂತರ ತೆರೆಯಲಾಗಿದೆ.

    11 ವರ್ಷಗಳ ಹಿಂದೆ ದಲಿತರ (Dalits) ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿ ಮಾರಮ್ಮನ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

    ಗ್ರಾಮದಲ್ಲಿ 11 ವರ್ಷಗಳ ನಂತರ ಸಂತಸ ಮನೆ ಮಾಡಿದೆ. ಎಲ್ಲಾ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯದ ಬಾಗಿಲನ್ನು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ.  ಇದನ್ನೂ ಓದಿ: ಹೆಂಡತಿ, ಮಾವನ ಕಿರುಕುಳಕ್ಕೆ ಹೆಡ್‌ಕಾನ್‌ಸ್ಟೇಬಲ್ ಬಲಿ – ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

  • ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯ: ಒಬ್ಬ ಆರ್ಚಕನಾಗಬೇಕೆಂದರೆ ಆತನಿಗೆ ಮಂತ್ರ, ಸ್ತೋತ್ರ, ಶಾಸ್ತ್ರಗಳ ಬಗ್ಗೆ ಜ್ಞಾನವಿರಬೇಕು. ಆಚಾರ- ವಿಚಾರ ಆಚರಣೆ ಸಾಮಾನ್ಯವಾಗಿ ತಿಳಿದಿರಬೇಕು. ಅಲ್ಲದೆ ದೇವಸ್ಥಾನಕ್ಕೆ ಯಾರು ಆರ್ಚಕನಾಗಬೇಕೆಂಬುವುದನ್ನು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಆದರೆ ಮಂಡ್ಯ ಜಿಲ್ಲೆಯ ದೇವಸ್ಥಾನವೊಂದರಲ್ಲಿ ತನಗೆ ಯಾರು ಪೂಜೆ ಮಾಡಬೇಕೆಂಬುವುದನ್ನು ಸ್ವತಃ ದೇವರೇ ಪರೋಕ್ಷವಾಗಿ ನಿರ್ಧರಿಸುವ ಮೂಲಕ ಪವಾಡ ಸೃಷ್ಟಿಸಿದೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಈರೇಗೌಡನದೊಡ್ಡಿಯಲ್ಲಿ ಕಾಲಬೈರವೇಶ್ವರಸ್ವಾಮಿಯ ಬಸಪ್ಪ ಅಲ್ಲಿನ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸುವ ಮೂಲಕ ಬಸವವೊಂದು ಪವಾಡ ಮಾಡಿದೆ. ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಯಾರನ್ನು ಅರ್ಚಕನಾಗಿ ನೇಮಿಸುವುದು ಎಂದು ಗ್ರಾಮಸ್ಥರು ಗೊಂದಲದಲ್ಲಿದ್ದರು. ಈ ಕುರಿತ ಗೊಂದಲ ಬಗೆ ಹರಿಸಲು ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಸ್ಥರು ಕರೆತಂದಿದ್ದಾರೆ. ಈರೇಗೌಡನದೊಡ್ಡಿಯ ಕೃಷ್ಣ ಎಂಬವರನ್ನು ಅರ್ಚಕರನಾಗಿ ಬಸಪ್ಪ ಆಯ್ಕೆ ಮಾಡಿದೆ. ಮೊದಲಿಗೆ ಬಸಪ್ಪನ ಆಯ್ಕೆಯನ್ನು ಕೃಷ್ಣ ತಿರಸ್ಕರಿಸಿದ್ದಾರೆ.

    ನನಗೆ ಸಾಕಷ್ಟು ಕಷ್ಟಗಳು ಇವೆ, ನಾನು ಅರ್ಚಕ ಆಗಲ್ಲ ಎಂದು ಕೃಷ್ಣ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಬಸಪ್ಪ ತನ್ನ ಕೊಂಬುಗಳಿಂದ ತಿವಿಯುವ ಮೂಲಕ ಕೃಷ್ಣನಿಗೆ ತಕ್ಕ ಪಾಠ ಕಲಿಸಿದೆ. ನಂತರ ಬಸಪ್ಪನ ತೀರ್ಪನ್ನು ಕೃಷ್ಣ ಹಾಗೂ ಗ್ರಾಮಸ್ಥರು ಒಪ್ಪಿಕೊಂಡರು. ಬಳಿಕ ಕೃಷ್ಣನನ್ನು ಗ್ರಾಮ ಕಲ್ಯಾಣಿಗೆ ಮುಳುಗಿಸಿ ಸ್ನಾನ ಮಾಡಿದ ಬಳಿಕ ಕೃಷ್ಣನನ್ನು ಅರ್ಚಕನಾಗಿ ನೇಮಕ ಮಾಡಲಾಗಿದೆ.

  • ಚಿನ್ನಪ್ಪಿ ಮೈಮೇಲೆ ಮಾರಮ್ಮ-ಬಯಲಾಯ್ತು ಮತ್ತಷ್ಟು ಸತ್ಯ!

    ಚಿನ್ನಪ್ಪಿ ಮೈಮೇಲೆ ಮಾರಮ್ಮ-ಬಯಲಾಯ್ತು ಮತ್ತಷ್ಟು ಸತ್ಯ!

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ದೇವಾಲಯದ ಟ್ರಸ್ಟಿ ಚಿನ್ನಪ್ಪಿ ಮೈ ಮೇಲೆ ಮಾರಮ್ಮ ದೇವಿ ಬಂದಿದ್ದು, ಆರೋಪಿಗಳು ನಾಲ್ವರು ಅಲ್ಲ, ಆರು ಜನ ಎಂದು ಹೇಳಿರುವುದಾಗಿ ಬಿಸಿ ಬಿಸಿ ಚರ್ಚೆ ಸುಳ್ವಾಡಿಯಲ್ಲಿ ಆರಂಭಗೊಂಡಿದೆ.

    ಶನಿವಾರ ಹುಣ್ಣಿಮೆ ಆಗಿದ್ದರಿಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿದ್ದ ಚಿನ್ನಪ್ಪಿ ಮೈಮೇಲೆ ಮಾರಮ್ಮ ದೇವಿಯ ಆಹ್ವಾನೆಯಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಭಕ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಎಷ್ಟು ಜನ ಕೇಳಿದರು. ಆಗ ಚಿನ್ನಪ್ಪಿ ಯಾವುದೇ ಮಾತುಗಳನ್ನಾಡದೇ ಬರೀ ಕೈ ಬೆರಳುಗಳನ್ನು ತೋರಿಸಿದ್ದಾರೆ. ಅಲ್ಲದೇ ಈ ಬೆನ್ನಲ್ಲೇ ಚಿನ್ನಪ್ಪಿ ದೇವಾಲಯದ ಸುತ್ತ ಇರುವ ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಉರುಳಾಡಿದ್ದಾರೆ. ಉರುಳುವ ವೇಳೆ ಮೈಕೈ ಪರಚಿ ರಕ್ತ ಸುರಿದಿದೆ.

    ಒಟ್ಟಿನಲ್ಲಿ ಇದೀಗ ಭಕ್ತರು ಕೇಳಿದ ಪ್ರಶ್ನೆಗೆ ಮೊದಲು ನಾಲ್ಕು ಬೆರಳು ತೋರಿಸಿ, ನಂತರ ಎರಡು ಬೆರಳು ತೋರಿಸುವ ಮೂಲಕ ಪ್ರಕರಣದಲ್ಲಿ ಆರು ಜನರ ಕೈವಾಡವಿದೆ ಎಂಬ ಸೂಚನೆಯನ್ನೇ ಮಾರಮ್ಮ ದೇವಿ ಚಿನ್ನಪ್ಪಿ ಮೂಲಕ ಹೇಳಿಸಿದ್ದಾರೆ ಎಂಬುವುದು ಜನರ ನಂಬಿಕೆಯಾಗಿದೆ. ಚಿನ್ನಪ್ಪಿ ಮೈಮೇಲೆ ತಾಯಿ ಪ್ರತಿ ಹುಣ್ಣಿಮೆ ದಿನದಂದು ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಈ ಹಿಂದೆಯೂ ಚಿನ್ನಪ್ಪಿ ಮೈ ಮೇಲೆ ಮಾರಮ್ಮ ತಾಯಿ ಬಂದಿದ್ದಳು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸುಳ್ವಾಡಿ ವಿಷ ಪ್ರಸಾದ ದುರಂತ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ ಆಗಿದ್ದು, ಇನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ 40 ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಪ್ರಮುಖ ಆರೋಪಿಗಳಾದ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52), ಅಂಬಿಕಾ (35), ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಮಹದೇವಸ್ವಾಮಿ (46), ದೊಡ್ಡಯ್ಯತಂಬಡಿ (35) ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿಗಳನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ಮಂದಿಯ ಕುತಂತ್ರಕ್ಕೆ 15 ಮಂದಿ ಬಲಿ – ವಿಷ ಪ್ರಸಾದ ಸ್ಫೋಟಕ ಸತ್ಯ ರಿವೀಲ್

    5 ಮಂದಿಯ ಕುತಂತ್ರಕ್ಕೆ 15 ಮಂದಿ ಬಲಿ – ವಿಷ ಪ್ರಸಾದ ಸ್ಫೋಟಕ ಸತ್ಯ ರಿವೀಲ್

    – ದೇವಾಲಯದ ಆದಾಯದ ಮೇಲೆ ಕಣ್ಣಿಟ್ಟಿದ್ದ ಸ್ವಾಮೀಜಿ
    – ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಲು ಕುತಂತ್ರ
    – ಸಮೀಪದ ನಾಗರಕೊಯೀಲು ದೇವಾಲಯದ ಅರ್ಚಕನಿಂದ ವಿಷ ಮಿಶ್ರಣ
    – ವಿಷ ಉಣಿಸಿ ದೇವಾಲಯ ವಶಕ್ಕೆ ಮುಂದಾದ ಸ್ವಾಮೀಜಿ ಬಣ

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಮ್ಮಡಿ ಮಹದೇವ ಸ್ವಾಮೀಜಿಯೇ ಸುಪಾರಿ ನೀಡಿದ ಶಾಕಿಂಗ್ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ತನ್ನ ಸಂಚನ್ನು ಕಾರ್ಯಗತಗೊಳಿಸಲು ಮಾರಮ್ಮ ದೇವಾಲಯದ ಪಕ್ಕದ ಗ್ರಾಮದಲ್ಲಿದ್ದ ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ಮಹದೇವ ಸ್ವಾಮೀಜಿ ಸುಪಾರಿ ನೀಡಿದ್ದು, ಆತ ಪ್ರಸಾದದಲ್ಲಿ ವಿಷ ಬೆರೆಸಿದ್ದಾನೆ. ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ವಿಚಾರವನ್ನು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸುಪಾರಿಗೆ ಕಾರಣ ಏನು?
    ಸುಳ್ವಾಡಿ ದೇವಾಲಯದ ಟ್ರಸ್ಟ್ ನಲ್ಲಿ ಎರಡು ಬಣಗಳಿತ್ತು. ಟ್ರಸ್ಟ್ ಅಧ್ಯಕ್ಷರಾಗಿ ಇಮ್ಮಡಿ ಮಹದೇವಸ್ವಾಮೀಜಿ, ಸದಸ್ಯ ವಿ.ಮಾದಯ್ಯ, ವ್ಯವಸ್ಥಾಪಕ ಮಾದೇಶ್ ಒಂದು ಬಣವಾಗಿದ್ದರೆ, ಖಜಾಂಚಿ ನೀಲಕಂಠ ಶಿವಾಚಾರ್ಯ, ಉಪಾಧ್ಯಕ್ಷ ಪಿ.ಗುರುಮಲ್ಲಪ್ಪ, ಕಾರ್ಯದರ್ಶಿ ಶಶಿಬಿಂಬ, ಸದಸ್ಯರಾದ ಚಿನ್ನಪ್ಪಿ, ಪಿ.ಶಿವಣ್ಣ, ಎಚ್.ಲೋಕೇಶ್, ಎನ್.ಕೇಶವಮೂರ್ತಿ ಮತ್ತೊಂದು ಬಣವಾಗಿತ್ತು.

    ಮಾರಮ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಲಕ್ಷಾಂತರ ಆದಾಯ ಬರತೊಡಗಿತ್ತು. ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣಕಾಸನ್ನು ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಇದು ಇನ್ನೊಂದು ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದರು.

    ಗೋಪುರ ನಿರ್ಮಾಣ:
    ಇತ್ತೀಚೆಗೆ ಟ್ರಸ್ಟಿ ಚಿನ್ನಪ್ಪಿ ಮತ್ತಿತರರು ಸ್ವಾಮೀಜಿಯ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದ್ದರು. ಎಲ್ಲಾ ವ್ಯವಹಾರಕ್ಕೂ ಲೆಕ್ಕಪತ್ರ ಇಡುವಂತೆ ನೋಡಿಕೊಂಡಿದ್ದರು. ಆಡಿಟ್ ಸಹ ಮಾಡಿಸುತ್ತಿದ್ದರು. ಇದು ಇಮ್ಮಡಿ ಸ್ವಾಮೀಜಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಈಗಾಗಲೇ ಟ್ರಸ್ಟ್ ನಲ್ಲಿ 34 ಲಕ್ಷ ರೂ. ಗೂ ಹೆಚ್ಚು ಹಣ ಇತ್ತು. ಈ ಹಣದ ಜೊತೆಗೆ ಮಾರಮ್ಮ ದೇವಸ್ಥಾನಕ್ಕೆ ಗೋಪುರ ನಿರ್ಮಾಣಕ್ಕೆ ಸ್ವಾಮೀಜಿ ಬಣ ಮುಂದಾಗಿತ್ತು. ಸುಮಾರು ಒಂದೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗೋಪುರ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಭಕ್ತರಿಂದ ಧನವನ್ನು ಸಂಗ್ರಹಿಸಿ ಗೋಪುರ ಕಟ್ಟಲು ಸ್ವಾಮೀಜಿ ಬಣ ಮುಂದಾಗಿತ್ತು.

    ಟ್ರಸ್ಟ್ ನಲ್ಲಿ ಒಂದೂವರೆ ಕೋಟಿ ರೂ. ಹಣವಿಲ್ಲ. ಹೀಗಾಗಿ ಗೋಪುರ ನಿರ್ಮಾಣ ಮುಂದೂಡುವಂತೆ ಇನ್ನೊಂದು ಬಣ ಹೇಳಿತ್ತು. ಆದರೆ ಇದಕ್ಕೆ ಸ್ವಾಮೀಜಿ ಒಪ್ಪದೇ ತಾವೇ ಗೋಪುರ ನಿರ್ಮಾಣಕ್ಕೆ ಪ್ಲಾನ್ ಹಾಕಿಸಿದ್ದರು. ತಮಗೆ ಬೇಕಾದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲು ಮುಂದಾಗಿದ್ದರು. ಆದರೆ ಇದಕ್ಕೆ ಒಪ್ಪದ ಟ್ರಸ್ಟಿ ಚಿನ್ನಪ್ಪಿ ಗೋಪುರ ನಿರ್ಮಾಣ ಕಾರ್ಯವನ್ನು ತಾವೇ ಕೈಗೆತ್ತಿಕೊಳ್ಳಲು ತೀರ್ಮಾನಿಸಿ ಡಿಸೆಂಬರ್ 14 ರಂದು ಶಂಕುಸ್ಥಾಪನೆ ನೆರವೇರಿಸಲು ಸಮಾರಂಭ ನಿಗದಿ ಮಾಡಿದ್ದರು.

    ಈ ಶಂಕುಸ್ಥಾಪನೆ ಸಮಾರಂಭಕ್ಕೆ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ ಹಾಗೂ ಮಲೆಮಹದೇಶ್ವರ ಬೆಟ್ಟ ಸಾಲೂರು ಮಠದ ಹಿರಿಯ ಶ್ರೀ ಪಟ್ಟದಗುರುಸ್ವಾಮಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಅಂದು ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಇಮ್ಮಡಿ ಸ್ವಾಮೀಜಿ ಬರಲೇ ಇಲ್ಲ. ಆದರೆ ಹಿರಿಯ ಶ್ರೀಗಳು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಆಗಮಿಸಿ ಭಾಗವಹಿಸಿದ್ದರು. ತಮ್ಮ ಮಾತನ್ನು ಕೇಳದೆ ತಾವೇ ಗೋಪುರ ನಿರ್ಮಾಣ ಮಾಡಲು ಮುಂದಾದ ಚಿನ್ನಪ್ಪಿ ಮತ್ತಿತ್ತರ ಬಗ್ಗೆ ಇಮ್ಮಡಿ ಸ್ವಾಮೀಜಿ ಒಳಗೊಳಗೆ ಕುದಿಯತೊಡಗಿದ್ದರು.

    ಸ್ವಾಮೀಜಿಯಿಂದ ಸುಪಾರಿ:
    ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದರು.

    ಸ್ವಾಮೀಜಿ ಮತ್ತು ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು). ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ನೀಡಿ ಹೇಗಾದರೂ ಮಾಡಿ ಪ್ರಸಾದಕ್ಕೆ ಬೆರೆಸುವಂತೆ ಸುಪಾರಿ ನೀಡಿದರು.

    ಈ ಮೂವರ ಅಣತಿಯಂತೆ ದೊಡ್ಡಯ್ಯ ಶಂಕುಸ್ಥಾಪನೆ ಸಮಾರಂಭದ ದಿನ ಎಲ್ಲರ ಕಣ್ತಪ್ಪಿಸಿ ರೈಸ್ ಪ್ರಸಾದಕ್ಕೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದ. ಈ ವಿಷಯ ಅರಿಯದ ಚಿನ್ನಪ್ಪಿ ಹಾಗೂ ಇತರರು ಶಂಕುಸ್ಥಾಪನೆ ಸಮಾರಂಭಕ್ಕೆ ಬಂದಿದ್ದ ಭಕ್ತರಿಗೆ ವಿಷಮಿಶ್ರಿತ ಪ್ರಸಾದ ವಿತರಿಸಿದರು. ನೋಡುನೋಡುತ್ತಿದ್ದಂತೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಒಬ್ಬೊಬ್ಬರಾಗಿ ಸಾವನ್ನಪ್ಪತೊಡಗಿದರು. ಒಟ್ಟಿನಲ್ಲಿ 5 ಮಂದಿಯ ಕುತಂತ್ರಕ್ಕೆ 15 ಮಂದಿ ಅಮಾಯಕರು ಬಲಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv