Tag: ಮಾರಮ್ಮ ದೇವಸ್ಥಾನ

  • ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    – ಸಾಲೂರು ಮಠದ ಹಿರಿಯ ಸ್ವಾಮಿಯನ್ನು ಜೈಲಿಗಟ್ಟಲು ಪ್ಲಾನ್
    – ಕರ್ಪೂರ ಜಾಸ್ತಿಯಾಗಿದೆ ಪ್ರಸಾದ ತಿನ್ನಿ ಎಂದಿದ್ದ ಮಾದೇಶ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಸ್ವಾಮಿ ಹಾಗೂ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವುದು ವಿಚಾರಣೆ ವೇಳೆ ಬೆಳಕಿದೆ ಬಂದಿದೆ.

    ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ಅಂಬಿಕಾ ಮಹದೇವಸ್ವಾಮಿಯನ್ನು ಭೇಟಿಯಾಗಲು ಆಗಾಗ ಪತಿ ಮಾದೇಶ ಜೊತೆಗೆ ಸಾಲೂರು ಮಠಕ್ಕೆ ಬರುತ್ತಿದ್ದಳು. ಹೀಗಾಗಿ ಒಂದೇ ಗ್ರಾಮದವರಾಗಿದ್ದ ಸ್ವಾಮೀಜಿ ಹಾಗೂ ಅಂಬಿಕಾ ನಡುವೆ ಅನೈತಿಕ ಸಂಬಂಧವಿತ್ತು. ಇತ್ತ ಮಹದೇವಸ್ವಾಮಿ ಮಾರಮ್ಮ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಅಂಬಿಕಾ ಸಹಾಯ ಪಡೆದಿದ್ದಾನೆ.

    ವಿಷ ಹಾಕಿದ್ದು ಯಾಕೆ?
    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ವಿಷ ಬೆರೆಸಿದ್ದು ಹೇಗೆ?:
    ಮಹದೇಸ್ವಾಮಿ ಜೊತೆಗೆ ಪ್ಲಾನ್ ರೂಪಿಸಿದ್ದ ಅಂಬಿಕಾ ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿಗೆ ಸುಳ್ಳು ಹೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು. ಈ ಕೀಟನಾಶಕವನ್ನು ಅಂಬಿಕಾ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯನಿಗೆ ನೀಡಿದ್ದಳು.

    ದೇವಸ್ಥಾನ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಸಾದ ತಯಾರಿಸುತ್ತಿದ್ದ ಅಡುಗೆಯವರ್ನು ಮಾದೇಶ ಬೇರೆ ಕಡೆಗೆ ಕಳುಹಿಸಿದ್ದ. ಈ ವೇಳೆ ಅಲ್ಲಿಗೆ ಬಂದಿದ್ದ ದೊಡ್ಡಯ್ಯ ತಂಬಡಿ ವಿಷ ಬೆರೆಸಿ ಪರಾರಿಯಾಗಿದ್ದಾನೆ. ಆದರೆ ಈ ಪ್ರಸಾದವನ್ನು ಭಕ್ತರಿಗೆ ಕೊಟ್ಟರೇ ಹೊರತು ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳು ಸೇವಿಸಲಿಲ್ಲ. ಬದಲಾಗಿ ತಮ್ಮ ಮನೆಯಿಂದ ತಂದಿದ್ದ ಇಡ್ಲಿ ಹಾಗೂ ಪೊಂಗಲ್ ಅನ್ನು ಪೂಜೆಯ ಬಳಿಕ ಸೇವಿಸಿದ್ದಾರೆ.

    ಕರ್ಪೂರ ಜಾಸ್ತಿಯಾಗಿದೆ ಎಂದಿದ್ದ:
    ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಸಾದ ತಯಾರಿಸಲಾಗಿತ್ತು. ಈ ಪ್ರಸಾದದಿಂದ ವಾಸನೆ ಬರುತ್ತಿದೆ ಎಂದು ಕೆಲವರು ದೂರುತ್ತಿದ್ದಂತೆ, ಕರ್ಪೂರ ಜಾಸ್ತಿಯಾಗಿದೆ ತಿನ್ನಿ ಏನು ಆಗಲ್ಲ ಎಂದು ಆರೋಪಿ ಮಾದೇಶ ಭಕ್ತರಿಗೆ ಒತ್ತಾಯಿಸಿದ್ದ ವಿಚಾರ ಪ್ರಕಟವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹದೇವ ಸ್ವಾಮಿಯೇ ಸುಳ್ವಾಡಿಯ ವಿಷ ಸರ್ಪ -ಸ್ವಾಮಿಯ ಸಂಚನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ

    ಮಹದೇವ ಸ್ವಾಮಿಯೇ ಸುಳ್ವಾಡಿಯ ವಿಷ ಸರ್ಪ -ಸ್ವಾಮಿಯ ಸಂಚನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ

    ಚಾಮರಾಜನಗರ: ಕಿಚ್‍ಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇಮ್ಮಡಿ ಮಹದೇವ ಸ್ವಾಮೀಜಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ಶರತ್ ಚಂದ್ರ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಆರೋಪಿಗಳು:
    1. ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52) @ ದೇವಣ್ಣಬುದ್ದಿ ವೀರಬಸಪ್ಪ
    2. ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಗ್ರಾಮದ (ಸ್ವಂತ ಸ್ಥಳ ಶ್ಯಾಗ) ಅಂಬಿಕಾ ಮಾದೇಶ ಮದೇವಸ್ವಾಮಿ (35)
    3. ಸುಳ್ವಾಡಿ ಕಿಚ್ಚುಗುತ್ತ್ ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಮಹದೇವಸ್ವಾಮಿ (46) @ ಶ್ಯಾಗ ಮಾದೇಶ
    4. ಈ ಹಿಂದೆ ನಾಗರಕಲ್ಲಿನ ಅರ್ಚಕನಾಗಿದ್ದ ಸುಳ್ವಾಡಿ ಗ್ರಾಮ ದೊಡ್ಡಯ್ಯತಂಬಡಿ (35) @ ದೊಡ್ಡಯ್ಯ ಬಿನ್ ಕಾಳತಂಬಡಿ

    ಘಟನೆ ವಿವರ:
    ಮಾರಮ್ಮ ದೇವಾಲಯಕ್ಕೆ ಅಧಿಕ ಹಣ ಬರುತ್ತಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಟ್ರಸ್ಟ್ ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸ್ತಾರೆ. ಇಮ್ಮಡಿ ಮಹದೇವ ಸ್ವಾಮೀಜಿ ತಮಗೆ ಇಷ್ಟವಿಲ್ಲದಿದ್ದರೂ ಸದಸ್ಯರ ಒತ್ತಾಯದ ಮೇರೆಗೆ ಟ್ರಸ್ಟ್ ಅಂತಾ ನೋಂದಾಯಿಸಿಕೊಳ್ತಾರೆ. ಟ್ರಸ್ಟ್ ರಚನೆಯಾದ ಮೇಲೆ ಸ್ವಾಮೀಜಿ ಹಣಕಾಸಿನ ಸರಬರಾಜು ನಿಂತು ಹೋಗುತ್ತದೆ. ಒಂದು ಚೆಕ್ ಪಾಸ್ ಆಗಬೇಕಾದ್ರೆ ಮೂರು ಜನರ ಸಹಿ ಆಗಬೇಕು. ಹೀಗಾಗಿ ಇತರೆ ಸದಸ್ಯರ ಮೇಲೆ ಸ್ವಾಮೀಜಿ ಅಸಮಾಧಾನ ಹೊಂದಿರುತ್ತಾನೆ.

    ಟ್ರಸ್ಟ್ ರಚನೆಯಾದ ಮೇಲೆ ಸದಸ್ಯರೆಲ್ಲರೂ ನಮ್ಮಲ್ಲಿ ಸಾಕಷ್ಟು ಹಣವಿದೆ. ದೇವಸ್ಥಾನಕ್ಕೆ ಗೋಪುರ ನಿರ್ಮಿಸೋಣ ಎಂಬ ವಾದವನ್ನು ಸ್ವಾಮೀಜಿ ಮುಂದೆ ಮಂಡಿಸ್ತಾರೆ. ಮಹದೇವ ಸ್ವಾಮೀಜಿ ತಮಿಳುನಾಡಿಗೆ ತೆರಳಿ ಒಂದೂವರೆ ಕೋಟಿಗೆ ಪ್ಲಾನ್ ಮಾಡಿಸಿಕೊಂಡು ಬರುತ್ತಾರೆ. ದೊಡ್ಡ ಪ್ರಾಜೆಕ್ಟ್ ಬೇಡ, 75 ಲಕ್ಷ ರೂ. ವೆಚ್ಚದಲ್ಲಿ ಸರಳವಾದ ಗೋಪುರ ನಿರ್ಮಿಸೋಣ ಎಂದು ಟ್ರಸ್ಟ್ ಸದಸ್ಯರು ಸಲಹೆ ನೀಡುತ್ತಾರೆ. ಪ್ಲಾನ್ ವಿರೋಧ ವ್ಯಕ್ತವಾಗುತ್ತಲೇ ಸ್ವಾಮೀಜಿ ಕೋಪಗೊಳ್ಳುತ್ತಾರೆ.

    ಸ್ವಾಮೀಜಿಯ ವಿರೋಧದ ನಡುವೆಯೇ ಟ್ರಸ್ಟ್ ನ ಕೆಲ ಸದಸ್ಯರು ಸೇರಿ ಡಿಸೆಂಬರ್ 14ರಂದು ಗೋಪುರದ ಶಂಕುಸ್ಥಾಪನೆ ಪೂಜೆ ನಡೆಸಲು ನಿರ್ಧರಿಸುತ್ತಾರೆ. ಈ ಸಂಬಂಧ ಸಾಲೂರು ಮಠದ ಹಿರಿಯ ಸ್ವಾಮೀಜಿಗಳು (ಗುರು ಸ್ವಾಮಿ) ಸೇರಿದಂತೆ ಹಲವು ಗಣ್ಯರಿಗೆ ಅಹ್ವಾನಿಸಲಾಗಿರುತ್ತದೆ. ಈ ವೇಳೆ ಮಹದೇವ ಸ್ವಾಮೀಜಿ ಮೇಲ್ನೋಟಕ್ಕೆ ಬರುತ್ತೇನೆ ಅಂತಾ ಒಪ್ಪಿಗೆ ಸೂಚಿಸಿರುತ್ತಾನೆ. ಗುದ್ದಲಿ ಪೂಜೆಯ ದಿನ ಮಹದೇವ ಸ್ವಾಮೀಜಿ ಗೈರಾಗುವ ಮೂಲಕ ಅಸಮಾಧಾನವನ್ನು ಹೊರಹಾಕುತ್ತಾನೆ.

    ತಮ್ಮ ಸಲಹೆ ಪಡೆಯದೇ ಗೋಪುರ ನಿರ್ಮಾಣಕ್ಕೆ ಮುಂದಾದ ಟ್ರಸ್ಟ್ ಸದಸ್ಯರಿಗೆ ಪಾಠ ಕಲಿಸಲು ಮಹದೇವ ಸ್ವಾಮೀಜಿ ಸಂಚು ರೂಪಿಸುತ್ತಾನೆ. ಇದರ ಪರಿಣಾಮವಾಗಿ ಇಮ್ಮಡಿ ಮಹದೇವ ಸ್ವಾಮಿಯು ನೇಮಕ ಮಾಡಿದ್ದ ದೇವಸ್ಥಾನದ ವ್ಯವಸ್ಥಾಪಕನಾದ ಮಾದೇಶ ಮತ್ತು ಆತನ ಪತ್ನಿ ಅಂಬಿಕಳನ್ನು ಭೇಟಿಯಾಗ್ತಾನೆ. ಅಂಬಿಕ ತನ್ನ ಸಂಬಂಧಿಯಾದ ಕೃಷಿ ಅಧಿಕಾರಿಯಿಂದ ಸುಳ್ಳು ಹೇಳಿ ಎರಡು ಕ್ರಿಮಿನಾಶಕ ಬಾಟಲುಗಳನ್ನು ಪಡೆದುಕೊಳ್ಳುತ್ತಾಳೆ. ಡಿಸೆಂಬರ್ 14ರಂದು ಅಂಬಿಕ ಒಂದು ಬಾಟೆಲ್ ಚಿನ್ನಪ್ಪಿಯನ್ನು ದ್ವೇಷಿಸುತ್ತಿದ್ದ ದೊಡ್ಡಯ್ಯನಿಗೆ ಕೊಡುತ್ತಾಳೆ. ದೊಡ್ಡಯ್ಯ ಮತ್ತು ಮಾದೇಶ ಇಬ್ಬರು ಸೇರಿ ಸಮಯ ಸಾಧಿಸಿ ಪ್ರಸಾದದಲ್ಲಿ ವಿಷ ಬೆರೆಸಿರುತ್ತಾರೆ. ಈ ವಿಷಯ ಅರಿಯದ ದೇವಸ್ಥಾನದ ಅಡುಗೆಯವರು ಪೂಜೆ ಕಾರ್ಯಕ್ರಮದ ನಂತರ ಪ್ರಸಾದವನ್ನು ಭಕ್ತರಿಗೆ ವಿತರಿಸಿದ್ದರಿಂದ ಈ ಅವಘಡ ನಡೆದಿದೆ.

    ಟ್ರಸ್ಟ್ ಸದಸ್ಯರಿಗೆ ಬೇರೆ ಊಟ:
    ಡಿಸೆಂಬರ್ 14ರಂದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಟ್ರಸ್ಟ್ ಸದಸ್ಯರಿಗಾಗಿ ಇಡ್ಲಿ, ಪೊಂಗಲ್ ಸೇರಿದಂತೆ ಬೇರೆ ಊಟವನ್ನು ತರಿಸಲಾಗಿರುತ್ತದೆ. ಹಾಗಾಗಿ ಯಾರು ರೈಸ್ ಬಾತ್ ಸೇವನೆ ಮಾಡಿರುವುದಿಲ್ಲ. ಚಿನ್ನಪ್ಪಿ ಗುದ್ದಲಿ ಪೂಜೆಗೆ ಬರುವ ಭಕ್ತಾದಿಗಳಿಗಾಗಿ ರೈಸ್ ಮಾಡಲು ಟ್ರಸ್ಟ್ ಮೆಂಬರ್ ಚಿನ್ನಪ್ಪಿ ಅಡುಗೆ ಭಟ್ಟನಿಗೆ ಹೇಳಿರುತ್ತಾನೆ. ಈರಣ್ಣ, ಲೋಕೇಶ್ ಮತ್ತು ಪುಟ್ಟಸ್ವಾಮಿ ಮೂವರು ಸೇರಿ ಗುದ್ದಲಿ ಪೂಜೆಯಂದು ಅಡುಗೆ ಮಾಡಿರುತ್ತಾರೆ.

    ಈ ಘಟನೆಯಿಂದಾಗಿ ಈವೆರೆಗೆ ಒಬ್ಬ ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 15 ಜನರು ಅಸುನೀಗಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸಿರುತ್ತಿದೆ.

    ತನಿಖೆಯ ವಿವರ:
    ವಿಷ ಪ್ರಸಾದ ಸೇವನೆ ಬಳಿಕ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಅಪರ ಪೊಲೀಸ್ ಅಧೀಕ್ಷಕರರಾದ ಶ್ರೀಮತಿ ಗೀತಪ್ರಸನ್ನ ಹಾಗೂ ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟಮಾದಯ್ಯ, ಜಿಲ್ಲಾಡಳಿತದ ಸಹಕಾರದೊಂದಿಗೆ ಮುತುವರ್ಜಿ ವಹಿಸಿ ಯಾವುದೇ ಕಾನೂನು ವ್ಯವಸ್ಥೆಗೆ ಭಂಗವಾಗುವಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತಾರೆ. ರೈಸ್ ಬಾತ್‍ನಲ್ಲಿ ವಿಷವನ್ನು ಬೆರೆಸಿದ್ದ ಆಸಾಮಿಗಳನ್ನು ಪತ್ತೆ ಮಾಡುವ ಸಲುವಾಗಿ ಕೊಳ್ಳೇಗಾಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಮಾದಯ್ಯ ರವರ ನೇತೃತ್ವದ 5 ವಿವಿಧ ತಂಡಗಳನ್ನು ರಚಿಸಿದರು. ತನಿಖೆ ಕೈಗೊಂಡಿದ್ದ 05 ತಂಡಗಳು ಕೌಶಲ್ಯದಿಂದ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಲಭ್ಯವಿದ್ದ ಮಾಹಿತಿಯನ್ನು ವಿಶ್ಲೇಶಿಸಿ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರ ತಂಡದ ನೆರವನ್ನು ಬಳಸಿಕೊಂಡು ಈ ಘೋರ ನರಹತ್ಯೆ ನಡೆಸಿರುವ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ಡಿಸೆಂಬರ್ 19 ರಂದು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿ- ಸ್ಥಳೀಯರ ಒತ್ತಾಯ

    ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿ- ಸ್ಥಳೀಯರ ಒತ್ತಾಯ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಹಾಕಿದ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗ್ರಾಮಸ್ಥರು, ರಾಮಾಪುರದಲ್ಲಿ ಗಾಂಜಾ ಪ್ರಕರಣದಲ್ಲಿ ದೊಡ್ಡಯ್ಯ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದ. ಆ ದೊಡ್ಡಯ್ಯನನ್ನು ಮಾರಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿರೋ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ ಬಿಡುಗಡೆಗೊಳಿಸಿ ಟ್ರಸ್ಟಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

    ಕಳೆದ 3 ತಿಂಗಳ ಹಿಂದೆ ಸ್ವಾಮೀಜಿ ಸಂಗಮೇಶ ಎನ್ನುವವರಿಗೆ ಕಪಾಳ ಮೋಕ್ಷವನ್ನು ಮಾಡಿದ್ದರು. ಪುಣ್ಯದ ಕೆಲಸ ಮಾಡಬೇಕು ಅಂತ ಹೇಳಿ ದೇವಸ್ಥಾನದ ಗೋಪುರ ಮಾಡುವಾಗ ಎಲ್ಲಿ ನನ್ನ ಹೆಸರು ತಪ್ಪಿ ಹೋಗುತ್ತೋ? ನನ್ನನ್ನು ಬಿಟ್ಟು ಗೋಪುರ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಕಡೆಯಿಂದಲೇ ಆಗಬೇಕು ಎಂದು ಅದರಲ್ಲಿ ಬರುತ್ತಿರುವ ಆದಾಯವೆಲ್ಲಾ ನಮ್ಮ ನಮಗೆ ಸೇರಬೇಕು ಎನ್ನುವ ಉದ್ದೇಶಕ್ಕಾಗಿ ಈ ರೀತಿಯ ಪಿತೂರಿ ನಡೆಸಿದ್ದಾರೆ ಅಂತ ಆರೋಪಿಸಿದ್ದಾರೆ.

    ಸ್ವಾಮೀಜಿ, ದೇವಸ್ಥಾನದ ಅಂದ್ರೆ ಜನರಿಗೆ ಅಪಾರವಾದ ಗೌರವವಿದೆ. ಅದ್ರಲ್ಲೂ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಅಂದ್ರೆ ಬಹಳ ಪ್ರಸಿದ್ಧಿ ಇದೆ. ಆದ್ರೆ ಇಂತಹ ಸ್ವಾಮೀಜಿಗಳಿಂದ ಇಡೀ ಸ್ವಾಮೀಜಿ ಕುಲಕ್ಕೆ ಎಲ್ಲಾ ದೇವಸ್ಥಾನಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣ ಸಂಬಂಧ ಸಿಕ್ಕಿಬಿದ್ದವರನ್ನು ಹೆಚ್ಚು ದಿನ ಬಿಡದೆ ಪೊಲೀಸರು ತನಿಖೆ ಮಾಡಿದ ಕೂಡಲೇ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

    ಮುಗ್ಧ ಜನರು ಸ್ವಾಮೀಜಿಗಳನ್ನು ನಂಬುತ್ತಾರೆ. ಇಂತಹವರು ಇರೋದಕ್ಕಿಂತ ಸಾಯೋದೇ ಮುಲು, ಇವರಿಗೆಲ್ಲ ಕಠಿಣ ಶಿಕ್ಷೆ ವಿಧಿಸಬೇಕು. ಗಲ್ಲು ಶಿಕ್ಷೆಯೇ ನೀಡಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಈಗಾಗಲೇ ಮೃತಪಟ್ಟವರ ಕುಟುಂಬದವರು ಎಷ್ಟು ಸಂಕಟವನ್ನು ಅನುಭವಿಸುತ್ತಿದ್ದಾರೆಯೋ, ಅದು ಅವರಿಗೆ ಅರಿವಾಗಬೇಕು ಅಂತಾದ್ರೆ ಈ ಕ್ಷಣಿಕವೇ ಒಂದು ತಿಂಗಳೊಳಗಡೆ ಗಲ್ಲು ಶಿಕ್ಷೆ ಆಗಬೇಕು. ಇನ್ನೊಬ್ಬರು ಮತ್ತೆ ಇಂತಹ ನೀಚ ಕೃತ್ಯ ಎಸಗಬಾರದು ಅಂತ ಆರೋಪಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಸ್ವಾಮೀಜಿಯಿಂದ ಸುಪಾರಿ:
    ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದರು.

    ಸ್ವಾಮೀಜಿ ಮತ್ತು ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು) ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ನೀಡಿ ಹೇಗಾದರೂ ಮಾಡಿ ಪ್ರಸಾದಕ್ಕೆ ಬೆರೆಸುವಂತೆ ಸುಪಾರಿ ನೀಡಿದರು.

    ಈ ಮೂವರ ಅಣತಿಯಂತೆ ದೊಡ್ಡಯ್ಯ ಶಂಕುಸ್ಥಾಪನೆ ಸಮಾರಂಭದ ದಿನ ಎಲ್ಲರ ಕಣ್ತಪ್ಪಿಸಿ ರೈಸ್ ಪ್ರಸಾದಕ್ಕೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದ. ಈ ವಿಷಯ ಅರಿಯದ ಚಿನ್ನಪ್ಪಿ ಹಾಗೂ ಇತರರು ಶಂಕುಸ್ಥಾಪನೆ ಸಮಾರಂಭಕ್ಕೆ ಬಂದಿದ್ದ ಭಕ್ತರಿಗೆ ವಿಷಮಿಶ್ರಿತ ಪ್ರಸಾದ ವಿತರಿಸಿದ್ದಾರೆ. ನೋಡುನೋಡುತ್ತಿದ್ದಂತೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಒಬ್ಬೊಬ್ಬರಾಗಿ ಸಾವನ್ನಪ್ಪತೊಡಗಿದರು. ಒಟ್ಟಿನಲ್ಲಿ 5 ಮಂದಿಯ ಕುತಂತ್ರಕ್ಕೆ 15 ಮಂದಿ ಅಮಾಯಕರು ಬಲಿಯಾಗಿದ್ದಾರೆ.

    https://www.youtube.com/watch?v=GJDDFeVaJcg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ಮೈಸೂರು: ಚಾಮರಾಜನಗರದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಘಟನೆ ಸಂಬಂಧ ಪುಟ್ಟಸ್ವಾಮಿ ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಚಾಮರಾಜನಗರ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೋ ಎಂಬ ಅನುಮಾನವೊಂದು ಮೂಡಿದೆ. ಯಾಕಂದ್ರೆ ತಾನು ಪ್ರಸಾದ ತಿಂದಿದ್ದೇನೆ ಎಂದು ಆಸ್ಪತ್ರೆಯಲ್ಲಿ ಪುಟ್ಟಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯ ವೈದ್ಯರ ಬಳಿ ಪುಟ್ಟಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ವೈದ್ಯರು ಪುಟ್ಟಸ್ವಾಮಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರುವ ಕಾರಣ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ಮಾರಮ್ಮನ ಮೇಲಾಣೆ…ಮಾದಪ್ಪನ ಮೇಲಾಣೆ.. ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳ ಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ. ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರು ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ಧಿಯನ್ನು ಇತ್ತೀಚೆಗೆ ನೋಡಿಯೇ ಇಲ್ಲ. ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಅಂದ್ರೂ ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.  ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಅಂಗವಿಕಲ ಮಗ್ಳನ್ನೇ ಕೊಲೆಗೈದ್ನಾ..?
    ಪುಟ್ಟಸ್ವಾಮಿ ಸುಳ್ವಾಡಿಯ ಮಾರಮ್ಮನ ದೇವಾಸ್ವಾನದಲ್ಲಿ ರೈಸ್‍ಬತ್ ಪ್ರಸಾದ ತಯಾರಿಸಿದ್ದನು. ಈ ಪ್ರಸಾದ ತಿಂದು ಆತನ 12 ವರ್ಷದ ಮಗಳು ಅನಿತಾ ಮೃತಪಟ್ಟಿದ್ದಳು. ಆದ್ರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ.

    ಒಟ್ಟಿನಲ್ಲಿ ಅಂಗವಿಕಲೆ ಮಗಳು ಪುಟ್ಟಸ್ವಾಮಿಗೆ ಭಾರವಾಗಿತ್ತು. ಹೀಗಾಗಿ ಅಡುಗೆ ಭಟ್ಟನೇ ವಿಷ ಹಾಕಿದ್ದಾನೆ ಅನ್ನೋ ಅನುಮಾನ ಪೊಲೀಸರಲ್ಲಿ ಬಲವಾಗಿ ಮೂಡಿದೆ.

    https://www.youtube.com/watch?v=gE3_7jm0p4M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ದುರಂತ-ನಾನೇ ವಿಷ ಹಾಕಿದ್ದು ತಪ್ಪೊಪ್ಪಿಕೊಂಡ ಮಹಿಳೆ

    ವಿಷ ಪ್ರಸಾದ ದುರಂತ-ನಾನೇ ವಿಷ ಹಾಕಿದ್ದು ತಪ್ಪೊಪ್ಪಿಕೊಂಡ ಮಹಿಳೆ

    ಮಂಡ್ಯ: ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಎಂಬವನ ಪತ್ನಿ ಅಂಬಿಕಾ ಮಹಿಳೆ ನಾನೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಎರಡು ದಿನಗಳ ಹಿಂದೆ ಅಂಬಿಕಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆ ಮೇರೆಗೆ ಪ್ರಸಾದದಲ್ಲಿ ವಿಷ ಹಾಕಿದ್ದೇನೆ ಎಂದು ಹೇಳಿದ್ದಾಳಂತೆ. ಇಂದು ರಾತ್ರಿ ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ಪೂಜಾರಿ ಮಹದೇವ ಮತ್ತಿತ್ತರ ಬಂಧನ ಸಾಧ್ಯತೆಗಳಿವೆ.

    ಎಲ್ಲ ಆರೋಪಿಗಳನ್ನು ಇಂದು ರಾತ್ರಿ ಅಥವಾ ನಾಳೆ ಕೊಳ್ಳೇಗಾಲ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ. ಇಂದು ರಾತ್ರಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಕೊಳ್ಳೇಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

    https://www.youtube.com/watch?v=tUDagrYdR_g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

    ನನ್ನ ಹೊಟ್ಟೆಗೆ ವಿಷ ಪ್ರಸಾದ ಸೇರಿದೆ ಅಂತ ಗೊತ್ತಿದ್ರೂ ನನ್ನ ಮಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದೆ. ಆದ್ರೆ ಕೊನೆಗೂ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೇ ಆಕೆಯ ಅಂತ್ಯಕ್ರಿಯೆಗೆ ಹೋಗುವ ಅವಕಾಶವನ್ನೂ ದೇವರು ನನಗೆ ನೀಡಿಲ್ಲ ಅಂತ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದಾರೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ನಾನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಮಗಳು ನನ್ನ ನೋಡಲು ಬಂದಿದ್ದಳು. ಬೆಳಗ್ಗೆ ಗುದ್ದಲಿ ಪೂಜೆ ಇತ್ತು. ಆದ್ದರಿಂದ ಅಡುಗೆಗೆ ಸ್ವಲ್ಪ ಸಹಾಯ ಮಾಡಿದೆ. ಅಡುಗೆ ಆದ ಬಳಿಕ ನನ್ನ ಮಗಳು ಊಟ ಮಾಡಿದ್ದಾಳೆ. ಅವಳ ಊಟದಲ್ಲಿ ಅರ್ಧ ಉಳಿದಿತ್ತು. ಆವಾಗ ಆಕೆ ಅಪ್ಪ ನನಗೆ ಬೇಡ ನನಗೆ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳಿದಳು. ನಾನೂ ಊಟ ಮಾಡಿದೆ ಅಂತ ಪುಟ್ಟಸ್ವಾಮಿ ಹೇಳಿದ್ರು.

    ಸ್ವಲ್ಪ ಹೊತ್ತು ಬಳಿಕ ನನ್ನ ಮಗಳು ಬಿದ್ದು ಒದ್ದಾಡುತ್ತಿದ್ದಳು. ಮಗಳು ಯಾಕೆ ಬಿದ್ದು ಒದ್ದಾಡುತ್ತಿದ್ದಾಳೆ ಅಂತ ಊರಿನ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಬೇರೆ ಕಡೆ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಅಂದ್ರು. ಆದ್ರೆ ನಾನು ಬರುವಾಗಲೇ ಅಂಬುಲೆನ್ಸ್ ಹೊರಟಿತ್ತು. ಹೀಗಾಗಿ ನಾನು ಬೈಕಿನಲ್ಲಿ ಆಕೆಯನ್ನು ಸುಳ್ವಾಡಿಯಿಂದ 15 ಕಿ.ಮೀ ದೂರದಲ್ಲಿರುವ ರಾಮಾಪುರಕ್ಕೆ ಕರೆದುಕೊಂಡು ಬಂದೆ ಅಂತ ತಮ್ಮ ದುಃಖ ತೋಡಿಕೊಂಡರು.

    ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದಾಗ ನನ್ನ ಹೊಟ್ಟೆಯೂ ತೊಳೆಸಿದಂತೆ ಆಗುತ್ತಿತ್ತು. ಆದ್ರೆ ಮೊದಲು ನನ್ನ ಮಗಳು ಚೆನ್ನಾಗಿರಬೇಕು. ನನಗೆ ಏನಾದ್ರೂ ಪರವಾಗಿಲ್ಲ. ಹೀಗಾಗಿ ಫಸ್ಟ್ ಮಗಳನ್ನು ತೋರಿಸಿ ಆಮೇಲೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಅಂತ ಯೋಚಿಸಿದೆ. ಅದುವರೆಗೂ ನನ್ನ ಬಗ್ಗೆ ಯಾರ ಜೊತೆನೂ ಹೇಳಿಕೊಂಡಿಲ್ಲ. ಎಲ್ಲರ ಬಳಿಯೂ ನಾನು ಚೆನ್ನಾಗಿದ್ದೇನೆ ಅಂತಾನೇ ಹೇಳುತ್ತಾ ಬಂದೆ. ಆದ್ರೆ ಹೊಟ್ಟೆ ತೊಳೆಸುತ್ತಾ ಇತ್ತು. ವಾಂತಿ ಬರುವಂತೆ ಆಗುತ್ತಿತ್ತು. ನನ್ನ ಚಲನವಲನ ಕಂಡು ಸ್ಥಳೀಯರು ನೀನು ಮೊದಲು ಗಾಡಿ ಹತ್ತು ಅಂತ ಹೇಳುತ್ತಿದ್ದರು. ಆವಾಗ ನಾನು, ನನ್ನ ಮಗಳೇ ಹಿಂಗೆ ಇರುವಾಗ ನಾನು ಫಸ್ಟ್ ಗಾಡಿ ಹತ್ತಿ ಏನು ಮಾಡಲಿ ಅಂತ ಪ್ರಶ್ನಿಸಿದೆ. ನನಗೆ ಆಗಲೇ ತುಂಬಾ ಬೇಜಾರಾಗುತ್ತಿತ್ತು ಅಂತ ದುಃಖಿತರಾದ್ರು.

    ಕೊನೆಗೆ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು. ಆಕೆ ತೀರಿಕೊಂಡ ನಂತರ ನಾನು ಸತ್ತು ಹೋಗುತ್ತೆನೋ ಅಂತ ನನಗೂ ಹೊಟ್ಟೆ ತೊಳೆಸುತ್ತೆ, ವಾಂತಿ ಬಂದಂಗೆ ಆಗುತ್ತಿದೆ ಅಂತ ಹೇಳಿಕೊಂಡೆ. ಆಮೇಲೆ ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿ ಗದ್ಗದಿತರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ಕೇಸ್ – ರಾತ್ರಿ ಅಡ್ಮಿಟ್, ಬೆಳಗ್ಗೆ ಡಿಸ್ಚಾರ್ಜ್ ಕಿರಿಯ ಸ್ವಾಮೀಜಿ ನಡೆ ಬಗ್ಗೆ ಮೂಡಿದೆ ಅನುಮಾನ

    ವಿಷ ಪ್ರಸಾದ ಕೇಸ್ – ರಾತ್ರಿ ಅಡ್ಮಿಟ್, ಬೆಳಗ್ಗೆ ಡಿಸ್ಚಾರ್ಜ್ ಕಿರಿಯ ಸ್ವಾಮೀಜಿ ನಡೆ ಬಗ್ಗೆ ಮೂಡಿದೆ ಅನುಮಾನ

    ಮೈಸೂರು: ಜಿಲ್ಲೆಯ ಹನೂರು ತಾಲೂಕಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಭಕ್ತರನ್ನು ಬಲಿಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಲ್ಲಿನ ಕಿರಿಯ ಸ್ವಾಮೀಜಿಯೊಬ್ಬರ ನಡೆಯ ಬಗ್ಗೆ ಅನುಮಾನ ಮೂಡಿದೆ.

    ಹೌದು. ಇಮ್ಮಡಿ ಮಹದೇವ ಸ್ವಾಮೀಜಿಯವರು ವಿಷ ಪ್ರಸಾದ ದುರಂತದ ಬಳಿಕ ಸೋಮವಾರ ರಾತ್ರೋ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ರಕ್ತದೊತ್ತಡ ಇತ್ತು ಅಂತ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸ್ವಾಮೀಜಿ, ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಸ್ವಾಮೀಜಿಯವರು ಆಸ್ಪತ್ರೆಯಿಂದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ವಾಪಸ್ ಆಗಿದ್ದಾರೆ. ಇದೀಗ ಸ್ವಾಮೀಜಿಯವರ ಈ ನಡೆ ಅಲ್ಲಿನ ಜನಸಾಮಾನ್ಯರಲ್ಲಿ ಅನುಮಾನ ಉಂಟು ಮಾಡಿದೆ.

    ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವ ಸ್ವಾಮೀಜಿಯವರು ಮಾರಮ್ಮ ದೇವಸ್ಥಾನದ ಪ್ರತಿ ಸಣ್ಣ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದರು. ಆದ್ರೆ ದುರಂತ ನಡೆದ ಕಾರ್ಯಕ್ರಮದಂದು ನಾನು ಬರಲ್ಲ. ನೀವೇ ಕಾರ್ಯಕ್ರಮ ಮಾಡಿ ಅಂತ ಹೇಳಿ ಗೈರಾಗಿದ್ದರು.

    ಜಿಟಿಡಿ ಹೇಳಿದ್ದೇನು..?
    ವರ್ಷಕ್ಕೆ ಬರೋಬ್ಬರೀ 80 ಲಕ್ಷ ರೂಪಾಯಿ ಆದಾಯ ದೇವಸ್ಥಾನಕ್ಕೆ ಬರುತ್ತಿತ್ತು. 1.5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದಲ್ಲಿ ಗೋಪುರ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವಿಚಾರದಲ್ಲಿ ಸ್ವಾಮೀಜಿ ಮತ್ತು ದೇವಸ್ಥಾನದ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಇತ್ತು. ದುರಂತದ ದಿನ ನಡೆದಿದ್ದ ಗುದ್ದಲಿ ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದರು ಎಂದು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದರು.

    ಗೋಪುರ ಗುದ್ದಲಿ ಪೂಜೆಗೆ ಕಿರಿಯ ಸ್ವಾಮೀಜಿ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಬಂದಿರಲಿಲ್ಲ. ಸಾಲೂರು ಮಠದ ಕಿರಿಯ ಸ್ವಾಮೀಜಿ ಚಿನ್ನಪ್ಪಿ ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಕ್ಕೂ ಬರುತ್ತಿದ್ದರು. ಆದ್ರೆ ಅಂದು ಅವರು ಕೂಡ ಅಂದು ಬಂದಿರಲಿಲ್ಲ. ಹೀಗಾಗಿ ಹಿರಿಯ ಸ್ವಾಮೀಜಿ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನಡೆದಿತ್ತು. ಆದರೆ ಪೂಜೆ ನಡೆದ ಬಳಿಕ ಹಿರಿಯ ಸ್ವಾಮೀಜಿಯೂ ಪ್ರಸಾದ ಸ್ವೀಕರಿಸದೇ ಹೋಗಿದ್ದರು ಎಂದು ತಿಳಿದುಬಂದಿತ್ತು.

    ಸ್ಥಳೀಯರು ಹೇಳಿದ್ದೇನು..?
    ಇಮ್ಮಡಿ ಮಹಾದೇವಸ್ವಾಮಿ ಮತ್ತು ಸಾಲೂರು ಮಠದ ಕಿರಿಯ ಸ್ವಾಮೀಜಿ ಬೇರೆ ಬೇರೆಯಾಗಿದ್ದು, ಆದರೆ ಸಾಲೂರು ಮಠಕ್ಕೂ ಈ ದೇವಾಲಕ್ಕೂ ಯಾವುದೇ ಸಂಬಂಧ ಇಲ್ಲ. ಇಮ್ಮಡಿ ಮಹಾದೇವಸ್ವಾಮಿ ದೋಣಿಕೆರೆ ಮಠದವರಾಗಿದ್ದಾರೆ. ಈ ದೋಣಿಕೆರೆ ಮಠಕ್ಕೂ ಮಾರಮ್ಮ ದೇವಾಲಯಕ್ಕೂ ಸಂಬಂಧ ಇದೆ. ಈ ಹಿಂದೆ ದೋಣಿಕೆರೆ ಮಠದ ಅರ್ಚಕರು ಮಾರಮ್ಮನ ಪೂಜೆ ಮಾಡುತ್ತಿದ್ದರು. ಆದರೆ 50 ವರ್ಷಗಳ ಹಿಂದೆ ನಾವು ಪೂಜೆ ಮಾಡಲ್ಲ ಎಂದು ಹೊರಟು ಹೋಗಿರುತ್ತಾರೆ. ಬಳಿಕ ಸ್ಥಳೀಯರು, ಚಿನ್ನಪ್ಪಿ ಹಾಗೂ ಇತರರು ಸೇರಿ ಒಂದು ಟ್ರಸ್ಟ್ ಮಾಡಿ ಅವರೇ ಪೂಜೆ ಮಾಡಿಕೊಂಡು ಬರುತ್ತಿದ್ದರು. ಹೀಗೆ ಪೂಜೆ ಮಾಡಲು ಶುರು ಮಾಡಿದಾಗ ದೇವಾಲಯಕ್ಕೆ ಆದಾಯ ಹೆಚ್ಚಾಗಿತ್ತು. ನಂತರ ಮತ್ತೆ ದೋಣಿಕೆರೆ ಅರ್ಚಕರು ಬಂದು ನಾವೇ ಪೂಜೆ ಮಾಡುತ್ತೇವೆ ಬಿಟ್ಟುಕೊಡಿ ಎಂದು ಕೇಳಿದ್ದರು. ಆಗ ಸ್ಥಳೀಯರು ಇಲ್ಲ ನಾವೇ ಪೂಜೆ ಮಾಡುತ್ತಿದ್ದೇವೆ. ನೀವು ಒಂದು ವಾರಕ್ಕೆ ಬಂದು ಪೂಜೆ ಮಾಡಿ ಅಂತ ಹೇಳಿದ್ದರು. ಈ ವಿಚಾರಕ್ಕೆ ಆಗಾಗ ಮಾತುಕತೆ ನಡೆಯುತ್ತಿತ್ತು ಎಂದು ಇಲ್ಲಿನ ಜನರು ಹೇಳಿದ್ದಾರೆ.

    https://www.youtube.com/watch?v=y44ngMg3714

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುರುಕುಗೊಂಡ ಪ್ರಸಾದ ದುರಂತದ ತನಿಖೆ- ರೋಗರ್ ಕೀಟನಾಶಕ ಬೆರೆಸಿರುವ ಶಂಕೆ

    ಚುರುಕುಗೊಂಡ ಪ್ರಸಾದ ದುರಂತದ ತನಿಖೆ- ರೋಗರ್ ಕೀಟನಾಶಕ ಬೆರೆಸಿರುವ ಶಂಕೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೂಳಿಸಿದ್ದಾರೆ.

    ಟೊಮೆಟೋ ಬಾತ್‍ಗೆ ಬಳಸಿದ ಅಕ್ಕಿ ಮತ್ತಿತ್ತರ ಸಾಮಾಗ್ರಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಕ್ಕಿ ತಂದಿದ್ದು ಎಲ್ಲಿಂದ, ತಂದವರು ಯಾರು..? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ.

    ಶನಿವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ಶರತ್ಚಂದ್ರ, ಸತತ 5 ಗಂಟೆಗಳ ಕಾಲ ದೇವಸ್ಥಾನದ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ದೇವಸ್ಥಾನ ಧರ್ಮಾಧಿಕಾರಿ ಚಿನ್ನಪ್ಪಿ, ಮ್ಯಾನೇಜರ್ ಮಾದೇಶ್‍ರನ್ನು ಕರೆದೊಯ್ದು ಸ್ಥಳ ಮಹಜರು ಮಾಡುವ ವೇಳೆಯೂ ಸ್ಥಳದಲ್ಲೇ ಉಪಸ್ಥಿತರಿದ್ದರು.

    ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರಿಗೆ ಆಟ್ರೋಪೈನ್ ಸಲ್ಫಟ್ ಔಷಧ ನೀಡಲಾಗುತ್ತಿದೆ. ಸಾಮಾನ್ಯವಾಗಿ ಈ ಔಷಧವನ್ನು ಆರ್ಗನೋ ಪಾಸ್ಪರಸ್ ರಾಸಾಯನಿಕ ಸೇವಿಸಿದವರಿಗೆ ನೀಡಲಾಗುತ್ತದೆ. ಈ ರಾಸಾಯನಿಕ ರೋಗರ್ ಎಂಬ ಕೀಟನಾಶಕದಲ್ಲಿ ಮಾತ್ರ ಬಳಸಲಾಗುತ್ತೆ. ಹೀಗಾಗಿ ಪ್ರಸಾದದಲ್ಲಿ ರೋಗರ್ ಕೀಟನಾಶಕವನ್ನೇ ಬೆರೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಇಂದು ಸಂಜೆ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರಲಿದ್ದು, ಪ್ರಸಾದಕ್ಕೆ ಏನು ಬೆರೆಸಲಾಗಿತ್ತು ಮತ್ತು ಯಾವ ಪ್ರಮಾಣದಲ್ಲಿ ಬೆರೆಸಲಾಗಿತ್ತು ಅನ್ನೋದು ಸ್ಪಷ್ಟವಾಗಲಿದೆ.

    https://www.youtube.com/watch?v=beiR3uvrY9Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾರಮ್ಮನ ಪ್ರಸಾದ ದುರಂತ- ಮೈಸೂರಿನ ಆಸ್ಪತ್ರೆಗಳಲ್ಲಿ 104 ಮಂದಿ ಪರದಾಟ

    ಮಾರಮ್ಮನ ಪ್ರಸಾದ ದುರಂತ- ಮೈಸೂರಿನ ಆಸ್ಪತ್ರೆಗಳಲ್ಲಿ 104 ಮಂದಿ ಪರದಾಟ

    – 15 ಮಂದಿ ಸ್ಥಿತಿ ಚಿಂತಾಜನಕ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಿಚ್ಚುಗುತ್ ಮಾರಮ್ಮನ ಸನ್ನಿಧಿಯಲ್ಲಿ ಪ್ರಸಾದ ದುರಂತ ನಡೆದು 2 ದಿನ ಕಳೆದೋಗಿದೆ. ಪ್ರಕಾಶ್ ಎಂಬವರ ಸಾವಿನೊಂದಿಗೆ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 15 ಜನ ಇನ್ನೂ ವೆಂಟಿಲೇಟರ್ ನಲ್ಲಿ ಸಾವು- ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.

    ಅಸ್ವಸ್ಥಗೊಂಡಿರೋ 104 ಜನ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಮಕ್ಕಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. ಕಾವೇರಿ ಆಸ್ಪತ್ರೆಯಲ್ಲಿ 14, ಕೆ.ಆರ್.ಆಸ್ಪತ್ರೆಯಲ್ಲಿ 24, ಅಪೋಲೋ ಆಸ್ಪತ್ರೆಯಲ್ಲಿ 14, ಜೆಎಸ್‍ಎಸ್ ಆಸ್ಪತ್ರೆಯಲ್ಲಿ 13 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶನಿವಾರ ರಾತ್ರಿ ಮುಜರಾಯಿ ಸಚಿವ ರಾಜಶೇಖರ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಬಳಿಕ ಮಾತನಾಡಿ, ಈ ದೇವಸ್ಥಾನ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಮುಜರಾಯಿ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲೂ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಅಂದ್ರು.

    https://www.youtube.com/watch?v=_8ddjfF9ZqM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತ್ನಿ ಜೀವ ಉಳಿಸಲು ಬರುವಾಗ ಪತಿ ಸಾವು – ಮುಗಿಲು ಮುಟ್ಟಿದೆ ಮಕ್ಕಳ ಗೋಳು!

    ಪತ್ನಿ ಜೀವ ಉಳಿಸಲು ಬರುವಾಗ ಪತಿ ಸಾವು – ಮುಗಿಲು ಮುಟ್ಟಿದೆ ಮಕ್ಕಳ ಗೋಳು!

    – ಕೆಪಿ ನಾಗರಾಜ್
    ಮೈಸೂರು: ಪ್ರಸಾದ ತಿಂದು ನರಳಾಡುತ್ತಿದ್ದ ಪತ್ನಿಯನ್ನು ಬದುಕಿಸಿಕೊಳ್ಳಲು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಪತಿ ದಾರಿ ಮಧ್ಯೆ ತೀವ್ರವಾಗಿ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಅಪ್ಪನನ್ನು ಕಳೆದುಕೊಂಡ ಮಕ್ಕಳು ಅಮ್ಮನನ್ನಾದರೂ ಉಳಿಸಿಕೊಡಿ ಎಂದು ರೋಧಿಸುತ್ತಿರುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿವೆ.

    ಏನಾಗಿತ್ತು?: ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೋನಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದಾರೆ. ಇದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದಾರೆ. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದಾರೆ. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೋನಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದಾರೆ.

    ಆದರೆ ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆಆರ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಕರೆ ತಂದೆವು.

    ಆದರೆ ಇಲ್ಲಿಗೆ ಬಂದು 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದರು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ.

    ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದ್ಸೋರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ.

    ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಗೋಗರೆದಳು ಪ್ರಿಯಾ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಅಮ್ಮ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ನಂಬಿದ ದೇವರು ಕೈ ಬಿಡಲ್ಲ ಎಂಬ ಆಶಯದೊಂದಿಗೆ ಮಕ್ಕಳು ಪ್ರಾರ್ಥಿಸುತ್ತಿದ್ದಾರೆ ‘ದೇವರೇ ನಮ್ಮಮ್ಮನ ಉಳಿಸಿಕೊಡಿ…!’.

    https://www.youtube.com/watch?v=IeYaHG3q9I4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv