Tag: ಮಾರಮ್ಮ ದೇವಸ್ಥಾನ

  • ಮಾರಮ್ಮನ ಪ್ರಸಾದ ಸೇವನೆಯಿಂದ 70 ಜನ ಅಸ್ವಸ್ಥ

    ಮಾರಮ್ಮನ ಪ್ರಸಾದ ಸೇವನೆಯಿಂದ 70 ಜನ ಅಸ್ವಸ್ಥ

    ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ಟಿಕಾಣಿ ಹೂಡಿ ಅಸ್ವಸ್ಥರಿಗೆ ಚಿಕಿತ್ಸೆ ನೀಡ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಲಿಂಗಪಟ್ಟಣ ಗ್ರಾಮದ ಡಾ.ಮಲ್ಲೇಶ್ ಗ್ರಾಮದೇವತೆ ಮಾರಮ್ಮನ ಹರಕೆ ತೀರಿಸಲು ಪೂಜೆ ಹಮ್ಮಿಕೊಂಡಿದ್ದರು. ಇಂದು ತಮ್ಮನ ಮದುವೆಯಿದ್ದ ಕಾರಣ ನೆನ್ನೆಯೇ ದೇವರಿಗೆ ಪ್ರಬಾಳೆ ಉಡುಗೊರೆ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮಲ್ಲೇಶ್, 200ಜನರಿಗೆ ಪುಳಿಯೊಗೊರೆ ಪ್ರಸಾದ ಮಾಡಿಸಿದ್ದಾರೆ. ಪೂಜೆ ಬಳಿಕ ಅರ್ಚಕರು ಪ್ರಸಾದ ಹಂಚಿಸಿದ್ದು. ಗ್ರಾಮದ 60ಕ್ಕೂ ಹೆಚ್ಚು ಜನ ಪ್ರಸಾದ ಸ್ವೀಕರಿಸಿದ್ದಾರೆ. 10 ರಿಂದ 60 ವರ್ಷದ ವರೆಗಿನವರು ಪ್ರಸಾದ ಸೇವಿಸಿದ್ದು, ರಾತ್ರಿ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ-ಭೇದಿ ಶುರುವಾಗಿದೆ. ತಕ್ಷಣವೇ 25ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಸ್ವಸ್ಥರೆಲ್ಲರೂ ಒಂದೇ ಗ್ರಾಮದವರಾಗಿದ್ದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ತಕ್ಷಣವೇ ಗ್ರಾಮದಲ್ಲಿ ಕ್ಯಾಂಪ್ ಹಾಕಿದೆ. ಬಳಿಕ ಪ್ರಸಾದ ಸ್ವೀಕರಿಸಿದವರೆಲ್ಲರನ್ನು ತಪಾಸಣೆಗೊಳಪಡಿಸಿದ್ದು. ಎಲ್ಲರಿಗೂ ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಐವರನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಪ್ರಸಾದದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ. ಫುಡ್ ಪಾಯ್ಸನ್ ನಿಂದ ಈ ಘಟನೆ ನಡೆದಿರಬಹುದು ಎಂದು ಡಿಎಚ್‍ಒ ಹೇಳಿದ್ದಾರೆ.

    ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದು. ಘಟನೆಯಿಂದ ಆತಂಕಗೊಂಡಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಮಂಡ್ಯ ಎಸ್‍ಪಿ ಪರಶುರಾಮ್, ಯಾರಾದರೂ ಈ ಬಗ್ಗೆ ದೂರು ನೀಡಿದರೆ ತನಿಖೆ ಮಾಡೋದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಫುಡ್‍ಪಾಯ್ಸನ್ ಎನಿಸಿದ್ದು. ಪ್ರಸಾದದ ಸ್ಯಾಂಪಲ್ ಟೆಸ್ಟ್ ಬಂದ ಬಳಿಕವೇ ಅಸಲಿ ಕಾರಣ ಹೊರಬೀಳಬೇಕಿದೆ.

  • 22 ತಿಂಗಳ ಬಳಿಕ ಭಕ್ತರಿಗೆ ಸುಳ್ವಾಡಿ ಮಾರಮ್ಮನ ದರ್ಶನ

    22 ತಿಂಗಳ ಬಳಿಕ ಭಕ್ತರಿಗೆ ಸುಳ್ವಾಡಿ ಮಾರಮ್ಮನ ದರ್ಶನ

    ಚಾಮರಾಜನಗರ: ವಿಷಪ್ರಸಾದ ದುರಂತದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಾಲಯ 22 ತಿಂಗಳ ನಂತರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

    2018ರ ಡಿಸೆಂಬರ್ 14 ರಂದು ಈ ದೇವಾಲಯದಲ್ಲಿ ನಡೆದ ವಿಷಪ್ರಸಾದ ಘಟನೆಯಲ್ಲಿ 17 ಮಂದಿ ಮೃತಪಟ್ಟು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಂದಿನಿಂದ ದೇಗುಲಕ್ಕೆ ಬೀಗ ಜಡಿದು ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಮಾರಮ್ಮನ ದರ್ಶನ ಪಡೆಯಲು ಚಾತಕ ಪಕ್ಷಿಗಳಂತೆ ಕಾದಿದ್ದ ಭಕ್ತ ಸಮೂಹದಲ್ಲಿ ಸಂತಸ ಮನೆ ಮಾಡಿದೆ.

    ಜಿಲ್ಲೆಯ ಹನೂರು ತಾಲೂಕು ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ, ಅಪಾರ ಭಕ್ತ ಸಮೂಹವಿದೆ. ಕಿಚ್ ಗುತ್ ಮಾರಮ್ಮ ನಂಬಿದವರನ್ನು ಕೈಬಿಡುವುದಿಲ್ಲ. ಕಿಚ್ ಗುತ್ ಮಾರಮ್ಮನಿಗೆ ಹರಕೆ ಹೊತ್ತರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.

    ಖಾಸಗಿ ಟ್ರಸ್ಟ್ ಒಡೆತನದಲ್ಲಿದ್ದ ಈ ದೇಗುಲಕ್ಕೆ ಅಪಾರ ಪ್ರಮಾಣದ ಆದಾಯವೂ ಹರಿದುಬರುತ್ತಿತ್ತು. ಟ್ರಸ್ಟ್ ನಲ್ಲಿ ಅದಿಪತ್ಯ ಸ್ಥಾಪಿಸುವ ಹುನ್ನಾರ ನಡೆಸಿದ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗೂ ಇತರ ಮೂವರು ಸೇರಿ ಟ್ರಸ್ಟ್ ನ ಇತರ ಸದಸ್ಯರಿಗೆ ಕೆಟ್ಟ ಹೆಸರು ತರಲು ಯೋಜನೆ ರೂಪಿಸಿದ್ದರು. ದೇಗುಲದ ಗೋಪುರ ನಿರ್ಮಾಣ ಶಂಕುಸ್ಥಾಪನಾ ಸಮಾರಂಭದಲ್ಲಿ ದೇವರ ಪ್ರಸಾದಕ್ಕೆ ವಿಷಬೆರೆಸಿದ್ದರು. ಇದನ್ನು ಅರಿಯದೆ ಪ್ರಸಾದ ಸೇವಿಸಿದ ಮುಗ್ಧ ಭಕ್ತರ ಪೈಕಿ 17 ಮಂದಿ ಮೃತಪಟ್ಟು, 120ಕ್ಕು ಹೆಚ್ಚು ಮಂದಿ ಅಸ್ವಸ್ಥರಾದ ಘೋರ ದುರಂತವೇ ನಡೆದುಹೋಗಿತ್ತು.

    2018ರ ಡಿಸೆಂಬರ್ 14 ರಂದು ಈ ದುರ್ಘಟನೆ ನಡೆದು ಅಂದಿನಿಂದ ಈ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ನಂತರ ಮುಜರಾಯಿ ಇಲಾಖೆ ಈ ದೇವಾಲಯವನ್ನು ತನ್ನ ವಶಕ್ಕೆ ಪಡೆದಿತ್ತು. ಇಷ್ಟೆಲ್ಲಾ ಆದರು ಈ ಭಾಗದ ಜನರಿಗೆ ಕಿಚ್ ಗುತ್ ಮಾರಮ್ಮನ ಮೇಲೆ ಭಕ್ತಿ ಒಂದಿನಿತು ಕಡಿಮೆಯಾಗಲಿಲ್ಲ. ದೇಗುಲವನ್ನು ತೆರೆದು ದರ್ಶನಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರು. ಭಕ್ತರ ಬೇಡಿಕೆ ಮೇರೆಗೆ ದೇವಾಲಯವನ್ನು ತೆರೆಯಲು ನಿರ್ಧರಿಸಿದ ದೇವಾಲಯ ಕಳೆದ ಮೂರು ದಿನಗಳಿಂದ ಇಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಿ ಇಂದು ಪೂರ್ಣಾಹುತಿ, ದೇವಾಲಯ ಸಂಪ್ರೋಕ್ಷಣೆ ಪ್ರಾಯಶ್ಚಿತ್ತ ಮತ್ತು ಕುಂಭಾಭಿಷೇಕ ನಡೆಸಿ ಬೆಳಿಗ್ಗೆ 11.20 ರಿಂದ 12.15ರೊಳಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ದೇಗುಲದ ಬಾಗಿಲು ತೆರೆದು ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು.

    ದೇವಿಯ ದರ್ಶನಕ್ಕೆ ಜಾತಕ ಪಕ್ಷಿಗಳಂತೆ ಕಳೆದ ಇಪ್ಪತ್ತೆರಡು ತಿಂಗಳಿಂದ ಕಾದಿದ್ದ ಭಕ್ತರು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಕೋವಿಡ್-19 ಹಿನ್ನೆಲೆಯಲ್ಲಿ ಭಕ್ತರನ್ನು ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ನಿಲ್ಲಿಸಿ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ ದೇಗುಲದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

    ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಮೊದಲ ದಿನವೇ ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಈ ಹಿಂದೆ ನಡೆಯುತ್ತಿದ್ದ ಪ್ರಾಣಿಬಲಿ ಹಾಗು ಪರು ನಿಷೇಧಸಿಲಾಗಿದೆ. ಭಕ್ತರು ದೇವರ ದರ್ಶನ ಪಡೆದು ಸಹಪಂಕ್ತಿ ಭೋಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಕೊರೊನಾ ಹಿನ್ನಲೆಯಲ್ಲಿ ತಮಿಳುನಾಡಿನ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇನ್ನೊಂದೆಡೆ ಜಿಲ್ಲಾಡಳಿತ ದೇವಾಲಯ ತೆರೆಯಲು ತೋರಿದ ಆಸಕ್ತಿಯನ್ನು ಸಂತ್ರಸ್ಥರಿಗೆ ನ್ಯಾಯ ಕೊಡಿಸುವುದಕ್ಕು ತೋರಬೇಕು,ವಿಷಪ್ರಸಾದ ದುರಂತದ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಬೇಕು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಸಂತ್ರಸ್ಥರಿಗೆ ಸರ್ಕಾರ ನೀಡಿರುವ ತಲಾ ಎರಡು ಎಕರೆ ಜಮೀನು, ನಿವೇಶನದ ಭರವಸೆ ಈಡೇರಿಸಬೇಕು ನೀಡಬೇಕು ಎಂಬುದು ಸಂತ್ರಸ್ಥರ ಆಗ್ರಹವಾಗಿದೆ.

  • ಬಂಧನದಿಂದ ಹೊರಬರಲಿದ್ದಾಳೆ ಕಿಚ್ಚುಗುತ್ ಮಾರಮ್ಮ!

    ಬಂಧನದಿಂದ ಹೊರಬರಲಿದ್ದಾಳೆ ಕಿಚ್ಚುಗುತ್ ಮಾರಮ್ಮ!

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ಸದ್ಯದಲ್ಲೇ ತೆರೆಯಲಾಗುವುದು ಎಂದು ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ತಿಳಿಸಿದರು.

    ನಗರದ ಬಿಇಓ ಕಚೇರಿ ಆವರಣದಲ್ಲಿರುವ ಕೆ.ಜಿ.ಬಿ.ವಿ. ಹೆಣ್ಣು ಮಕ್ಕಳ ವಸತಿ ನಿಲಯವನ್ನು ಉದ್ಘಾಟಿಸಿ ಮಾತಾಡಿದ ಅವರು, ದೇವಸ್ಥಾನದ ಬಾಗಿಲು ತೆರೆಸುವಂತೆ ಹಲವು ದಿನಗಳಿಂದ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಸದ್ಯದಲ್ಲೇ ಅರ್ಚಕರನ್ನು ಕರೆತಂದು ದೇವರಿಗೆ ಪೂಜೆ ಪ್ರಾರಂಭಿಸಲಾಗುವುದು ಎಂದರು.

    ಕಹಿ ಘಟನೆ- ಇಂದಿಗೆ ಒಂದು ವರ್ಷದ ಹಿಂದೆ ನಡೆದ ವಿಷ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ಸಂಭ್ರಮದ ವಾರ್ಷಿಕೋತ್ಸವ ಇದಲ್ಲ. ಇದೊಂದು ಕಹಿ ಅನುಭವ ಎಂದು ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

    ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದ ಕುಟುಂಬಗಳಿಗೆ ಮತ್ತು ಅಸ್ವಸ್ಥರಾಗಿದ್ದವರಿಗೆ ಪರಿಹಾರ ನೀಡಲಾಗಿದೆ. ಇತ್ತೀಚಿಗೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ವೇಳೆ ಸುಳ್ವಾಡಿ ಸಂತ್ರಸ್ತರ ಸಭೆ ನಡೆಸಿ ಸಮಸ್ಯೆ ಆಲಿಸಿದರು. ಪರಿಹಾರದ ಪಟ್ಟಿಯಲ್ಲಿ ಕೈಬಿಟ್ಟಿದ್ದ ಹೆಸರುಗಳನ್ನು ಮತ್ತೆ ಸೇರಿಸಲು ತಿಳಿಸಿದ್ದೇನೆ. ಜಮೀನು ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

    ವಿಷ ಪ್ರಸಾದ ತಿಂದು ಇಂದಿಗೂ ಅನಾರೋಗ್ಯದಿಂದ ಬಳಲುತ್ತಿರುವ ಜನರು ಕೂಲಿ ಮಾಡಲಾಗುತ್ತಿಲ್ಲ. ಕೆಲವರನ್ನು ಕೆಲಸಕ್ಕೆ ಕರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದಿಂದ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

  • ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಚಾಮರಾಜನಗರ: ಸುಳ್ವಾಡಿ ವಿಷ ದುರಂತದ ಪ್ರಕರಣದ ಹಿನ್ನೆಲೆಯಲ್ಲಿ ದೇವರ ದರ್ಶನ ಸಿಗದೇ ಭಕ್ತರು ದೇವಸ್ಥಾನದ ಆವರಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಕಳೆದ 20 ದಿನಗಳಿಂದ ಮಾರಮ್ಮ ದೇವಸ್ಥಾನ ಬಂದ್ ಆಗಿದ್ದು, ಯಾವುದೇ ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ನೀಡುತ್ತಿಲ್ಲ. ಇಷ್ಟು ದಿನ ಸಾವಿರಾರು ಭಕ್ತರು ನಿನ್ನ ಅಂಗಳದಲ್ಲಿ ತುಂಬಿ ತುಳುಕುತ್ತಿದ್ದರು. ನಿನ್ನ ಪ್ರಸಾದಕ್ಕೆ ವಿಷ ಹಾಕಿ ನಿನಗೆ ಕೆಟ್ಟ ಹೆಸರು ತಂದರಲ್ಲವ್ವಾ ತಾಯಿ. ವಿಷ ಹಾಕುವಾಗಲೇ ಆ ವಿಷ ನುಂಗಿ ಅವರಿಗೆ ಕಚ್ಚಬಾರದಿತ್ತಾ ತಾಯಿ ಎಂದು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತೆ ಕಣ್ಣೀರಿಡುತ್ತಿದ್ದಾರೆ.

    ಇತ್ತ ಸುಳ್ವಾಡಿಗೆ ಮುಜರಾಯಿ ಸಚಿವ ಪರಮೇಶ್ವರ್ ನಾಯಕ್ ಭೇಟಿ ನೀಡಿ, ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಶೀಘ್ರದಲ್ಲೇ ತೀರ್ಮಾನ ಮಾಡಲಗುವುದು. ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ದೇವಸ್ಥಾನದ ಟ್ರಸ್ಟಿಗಳು ಪತ್ರ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಸಹಮತವೂ ಇದೆ. ಇದೆಲ್ಲವನ್ನು ಕ್ರೋಢೀಕರಿಸಿ ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಕೈಗೊಳ್ಳತ್ತದೆ. ರಾಜ್ಯದ ಇತರ ದೇವಸ್ಥಾನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    -ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಸಂಬಂಧವಿಲ್ಲ-ಹಿರಿಯ ಶ್ರೀಗಳು

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವ ಸ್ವಾಮೀಜಿ ನೋಡಿಕೊಳ್ಳುತ್ತಿದ್ದ ಆಸ್ತಿ ಇದೀಗ ಏನ್ ಆಗುತ್ತೆ ಅನ್ನೋದು ಭಕ್ತರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಮಠದ ಹಿರಿಯ ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ.

    ಸುಳ್ವಾಡಿ ವಿಷ ದುರಂತ ನಡೆದು ಇವತ್ತಿಗೆ 12ನೇ ದಿನ. ವಿಷ ಪ್ರಸಾದ ತಿಂದು ಇದುವರೆಗೂ ಬರೋಬ್ಬರಿ 17 ಜನರು ಸಾವ್ನಪ್ಪಿದ್ದಾರೆ. ಅಸ್ವಸ್ಥರಾದವ್ರು ದಿನ ಬಿಟ್ಟು ದಿನ ಒಬ್ಬೊಬ್ಬರು ಸಾವನ್ನಪ್ಪುತ್ತಿದ್ದಾರೆ. ವಿಷವಿಕ್ಕಿದ ನಾಲ್ವರು ಪೊಲೀಸ್ ಅತಿಥಿಯಾಗಿದ್ದಾರೆ. ಇದರ ನಡುವೆ ಮಲೆಮಹದೇಶ್ವರ ಬೆಟ್ಟದಲ್ಲಿರುವ ಪ್ರತಿಷ್ಠಿತ ಸಾಲೂರು ಮಠದಲ್ಲೀಗ ನೀರವ ಮೌನ ಆವರಿಸಿದೆ.

    ಸಾಲೂರು ಮಠದ ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮ, ವಸತಿ ನಿಲಯಗಳು, ಅನಾಥಾಶ್ರಮ, ತೋಟ ಸೇರಿದಂತೆ ಇನ್ನಿತರ ಆಸ್ತಿಗಳು ಮಠದ ಹೆಸರಿನಲ್ಲಿ ಇವೆ. ಈ ಆಸ್ತಿಯನ್ನು, ಸಾಲೂರು ಮಠದ ಬಹುತೇಕ ವ್ಯವಹಾರವನ್ನು ಇಮ್ಮಡಿ ಮಹದೇವ ಸ್ವಾಮೀಜಿ ಇಷ್ಟು ದಿನ ನೋಡಿಕೊಳ್ತಿದ್ರು. ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಇಮ್ಮಡಿ ಮಹದೇವಸ್ವಾಮೀಜಿ ನಂತರ ಇದನ್ನ ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ.

    ಇನ್ನೊಂದೆಡೆ ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ. ಇಮ್ಮಡಿ ಮಹದೇವ ಸ್ವಾಮೀಜಿ ಅಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿ ಈ ಕೃತ್ಯ ಎಸಗಿ ಜೈಲಿಗೆ ಹೋಗಿದ್ದಾರೆ. ಇಷ್ಟು ದಿನ ಮಠದ ವ್ಯವಹಾರವನ್ನು ಅವರು ನೋಡಿಕೊಳ್ಳುತ್ತಿದ್ದರು. ಇದೀಗ ಈ ಬಗ್ಗೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುವುದು. ಮಾದಪ್ಪನೇ ಇಮ್ಮಡಿ ಮಹದೇವ ಸ್ವಾಮೀಜಿಗೆ ದಾರಿ ತೋರಿಸಿದ್ದಾನೆ ಎಂದು ಹಿರಿಯ ಶ್ರೀಗಳು ಹೇಳಿದ್ದಾರೆ.

    ಒಟ್ಟಾರೆ ತನ್ನ ಸ್ವಾರ್ಥಕ್ಕೆ ನರರೂಪದ ರಾಕ್ಷಸನಾಗಿದ್ದ ಸ್ವಾಮೀಜಿಯಿಂದಾಗಿ ಇಡೀ ಮಠಕ್ಕೆ ಕಳಂಕ ಬಂದಿದ್ದು, ಮಠದ ಆಸ್ತಿ ವಿಚಾರದಲ್ಲೂ ಕೂಡ ಭಕ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಆದ್ರೆ ಹಿರಿಯ ಸ್ವಾಮೀಜಿ ಮಠದ ಆಡಳಿತವನ್ನು ತಾವೇ ಸಮರ್ಥವಾಗಿ ನಡೆಸುತ್ತೇನೆ ಎಂದಿರೊದು ಭಕ್ತರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದು, ಇದೀಗ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಹೌದು. ಸ್ಥಳೀಯ ನಿವಾಸಿ ಸೌಂದರ್ಯ ಅವರು ಮಾರಮ್ಮ ದೇವಿಗೆ ಹರಕೆ ಹೊತ್ತ ಬಳಿಕ ಗರ್ಭಿಣಿಯಾಗಿದ್ದು, 3 ತಿಂಗಳು ಆಗಿತ್ತು. ಆದ್ರೆ ಇದೀಗ ಅದೇ ತಾಯಿಯ ಸನ್ನಿಧಿಯಲ್ಲಿ ವಿಷ ಪ್ರಸಾದ ಸೇವಿಸಿದ್ದರಿಂದ ಅವರಿಗೆ ಗರ್ಭಪಾತವಾಗಿದೆ. ಈ ಮೂಲಕ ಮಾರಮ್ಮ ದೇವಿ ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡಿದ್ದಾಳೆ ಅಂತ ಸೌಂದರ್ಯ ಕಣ್ಣೀರು ಹಾಕುತ್ತಿದ್ದಾರೆ.

    ಹರಕೆ ಏನಿತ್ತು?
    ನಾನು ಗರ್ಭಿಣಿಯಾದ್ರೆ ಪ್ರತಿ ವಾರ ಸನ್ನಿಧಿಗೆ ಬರುತ್ತೇನೆ ಎಂದು ಸೌಂದರ್ಯ ಹರಕೆ ಹೊತ್ತಿದ್ದರು. ಅಂತೆಯೇ ಅವರು ಪ್ರತೀ ವಾರ ಮಾರಮ್ಮನ ಸನ್ನಿಧಿಗೆ ಬರುತ್ತಿದ್ದರು. ಹೀಗೆ ಡಿಸೆಂಬರ್ 14ರಂದು ಸೌಂದರ್ಯ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅಲ್ಲಿ ಕೊಟ್ಟ ಪ್ರಸಾದವನ್ನು ಸ್ವೀಕರಿಸಿದ್ದರು. ಹೀಗಾಗಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡ ಅವರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ ಸೌಂದರ್ಯ ವಿಷ ಪ್ರಸಾದ ಸೇವಿಸಿದ್ದರಿಂದ ಹೊಟ್ಟೆಯಲ್ಲಿನ ಭ್ರೂಣ ಸಾವನ್ನಪ್ಪಿದ್ದು, ಅವರಿಗೆ ಗರ್ಭಪಾತವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಡಿಸೆಂಬರ್ 14 ರಂದು ದೇವಸ್ಥಾನದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಹೀಗಾಗಿ ಭಕ್ತರೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಟೊಮೆಟೋ ಬಾತನ್ನು ಅಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗಿತ್ತು. ಆದ್ರೆ ಈ ಪ್ರಸಾದದಲ್ಲಿ ವಿಷ ಬೆರೆಸಲಾಗಿದ್ದು, ತಿಂದವರೆಲ್ಲ ಆಸ್ಪತ್ರೆಗೆ ಸೇರಿದ್ದರು. ಅದರಲ್ಲಿ 17 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಉಳಿದವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಮಿ ಸ್ವಾಮಿಯ ಮತ್ತೊಂದು ಕರಾಳ ಮುಖ ಬಯಲು-ಕೇಳಿದ್ರೆ ನೀವು ಶಾಕ್ ಆಗ್ತೀರಿ

    ಕಾಮಿ ಸ್ವಾಮಿಯ ಮತ್ತೊಂದು ಕರಾಳ ಮುಖ ಬಯಲು-ಕೇಳಿದ್ರೆ ನೀವು ಶಾಕ್ ಆಗ್ತೀರಿ

    – ರಂಗಿನಾಟ ಬೇಡ ಮಗ ಅಂದ್ರು ತಾಯಿ ಮಾತನ್ನ ಧಿಕ್ಕರಿಸಿದ್ದ ಸ್ವಾಮಿ

    ಚಾಮರಾಜನಗರ: ಕಚ್‍ಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣದಲ್ಲಿ ಬಂಧಿತನಾಗಿರುವ ಎ1 ಆರೋಪಿ ಕಾಮಿ ಸ್ವಾಮಿ ಮಹದೇವನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಹೆಣ್ಣು, ಹೊನ್ನು ಮತ್ತು ಮಣ್ಣಿನ ಮೇಲೆ ಕಣ್ಣು ಹಾಕಿದ್ದ ಮಹದೇವ ಸ್ವಾಮಿ ತಮಿಳುನಾಡಿಗೆ ರಹಸ್ಯವಾಗಿ ಗೋ ಮಾಂಸ ಮಾರಾಟ ಮಾಡ್ತಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

    ಸ್ವತಃ ಮಹದೇವ ಸ್ವಾಮಿ ಮುಂದೆ ನಿಂತು ಬಡ ರೈತರಿಂದ ಗೋವುಗಳನ್ನು ಖರೀದಿಸುತ್ತಿದ್ದನಂತೆ. ಗೋವುಗಳನ್ನು ಖರೀದಿಸಿ ಅವುಗಳನ್ನು ಕಡಿದು ತಮಿಳುನಾಡಿಗೆ ಮಾಂಸ ರವಾನೆ ಮಾಡುವಷ್ಟು ಕೀಳುಮಟ್ಟದ ಕೆಲಸಕ್ಕೆ ಮಹದೇವ ಸ್ವಾಮಿ ಇಳಿದಿದ್ದನು. ಗೋ ಪೂಜೆ ಮಾಡುತ್ತಲೇ ಹಣದ ದುರಾಸೆಗಾಗಿ ಅವುಗಳ ಮಾಂಸ ಮಾರುತ್ತಿದ್ದ ಎಂದು ಸಾಲೂರು ಮಠದ ಭಕ್ತ ರಾಜೇಶ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

    ಇನ್ನು ಮಹದೇವ ಸ್ವಾಮಿ ತಾಯಿಗೆ ಮಗನ ಎಲ್ಲ ರಂಗಿನಾಟಗಳ ಬಗ್ಗೆ ಮಾಹಿತಿ ಇತ್ತು. ಮಗ ನೀಚ ಕೆಲಸಗಳನ್ನು ಬಿಟ್ಟು ಮಾದಪ್ಪ(ಮಲೆ ಮಹದೇಶ್ವರ)ನ ಸೇವೆ ಮಾಡಿಕೊಂಡು ಚೆನ್ನಾಗಿರು. ಮಠದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ್ರೆ ಆ ಮಾದಪ್ಪ ಸುಮ್ಮನೆ ಬಿಡಲ್ಲ ಎಂದು ಹೆತ್ತ ತಾಯಿ ಹಲವು ಬಾರಿ ಮಗನಿಗೆ ಬುದ್ಧಿ ಹೇಳಿದ್ದರೂ ಸ್ವಾಮಿ ಮಾತ್ರ ತನ್ನ ನಡುವಳಿಕೆಯನ್ನು ಬದಲಿಸಿಕೊಳ್ಳಲಿಲ್ಲ ಎಂದು ರಾಜೇಶ್ ಹೇಳಿದ್ದಾರೆ.

    ವಿಷ ಪ್ರಸಾದ ದುರಂತ ಪ್ರಕರಣ ಸಂಬಂಧ ಸುಳ್ವಾಡಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಪ್ಪ ಅಪ್ಪನನ್ನು ಕಳೆದುಕೊಂಡ ಯುವತಿ ರಾಣಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ತಂದೆ-ತಾಯಿಗೆ ವಿಷ ಹಾಕಿದವರಿಗೆ ಕ್ರೂರ ಶಿಕ್ಷೆಯಾಗಬೇಕು. ನಮ್ಮ ತಂದೆ ತಾಯಿ ಯಾವ ರೀತಿ ನರಳಿ ನರಳಿ ಸತ್ತರೋ ಹಾಗೆ ಅವರೂ ಸಾಯಬೇಕು ಎಂದು ಹಿಡಿಶಾಪ ಹಾಕಿದ್ದಾರೆ.

    ನಮ್ಮಂತೆ ಹಲವಾರು ಕುಟಂಬಗಳು ಅನಾಥವಾಗಿವೆ. ಆರೋಪಿಗಳ ಕುಟುಂಬಗಳಿಗೂ ಇದೇ ರೀತಿ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಶ್ರದ್ಧಾಂಜಲಿ ಸಭೆಯಲ್ಲಿ ಎಂಜಿ ದೊಡ್ಡಿ, ಬಿದರಹಳ್ಳಿ, ಗೋಡೆಸ್ಟ್ ನಗರ, ವಡ್ಡರದೊಡ್ಡಿ, ದೊಡ್ಡಾಣೆ, ಮಾರ್ಟಳ್ಳಿ, ಸುಳ್ವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಚಾಮರಾಜನಗರ: ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ಇಮ್ಮಡಿ ಮಹದೇವ ಸ್ವಾಮೀಜಿ ಅಲಿಯಾಸ್ ಚಿಕ್ಕ ಬುದ್ದಿಯ ರಂಗಿನಾಟ ಬೆಳಕಿಗೆ ಬರುತ್ತಿವೆ. ಹೊರಗೆ ಕಾವಿ ಧರಿಸಿದ್ದ ಮಹದೇವ ಒಳಗಡೆ ಯಾರಿಗೂ ತಿಳಿಯದಂತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಹಾನಿ ಹೊರ ಬಂದಿದೆ.

    ಮಹದೇವ ಸ್ವಾಮೀಜಿ ರಸಿಕರ ರಾಜನಾಗಿದ್ದು ಐವರು ಮಹಿಳೆಯರ ಸಹವಾಸ ಹೊಂದಿದ್ದನಂತೆ. ಸುಂದರಿಯರನ್ನು ಮಾತ್ರ ಮಠಕ್ಕೆ ಬಿಡು ಎಂದು ಮಹದೇವ ತನ್ನ ಆಪ್ತರಿಗೆ ಸೂಚನೆ ನೀಡಿದ್ದನಂತೆ. ವಾರಕ್ಕೆ ಎರಡ್ಮೂರು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದ ಮಹಿಳೆಯರನ್ನೇ ಸ್ವಾಮೀಜಿ ಟಾರ್ಗೆಟ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಸಾಲೂರು ಮಠದ ಪಕ್ಕದ ಗ್ರಾಮದ ಮಂಜುಳಾ ಎಂಬ ಮಹಿಳೆ ವಾರಕ್ಕೆ ಎರಡು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದಳಂತೆ. ಸರ್ಕಾರಿ ಶಾಲೆಯ ಟೀಚರ್ ಮಹದೇವಮ್ಮ ಭಾನುವಾರ ಮಿಸ್ ಮಾಡುತ್ತಿರಲಿಲ್ಲ. ಒಂದು ವೇಳೆ ಇವರಿಬ್ಬರು ಮಠಕ್ಕೆ ಬರದಿದ್ದರೆ ಮಹದೇವನೇ ಫೋನ್ ಮಾಡಿ ಕರೆಸುತ್ತಿದ್ದನಂತೆ. ಸರ್ಕಾರಿ ರಜೆ ಬಂದರೆ ಸಾಕು ಟೀಚರ್ ಮಿಸ್ ಮಾಡ್ದೆ ಮಠಕ್ಕೆ ಹಾಜರಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹದೇವ ಸ್ವಾಮೀಜಿ ಪ್ರಕರಣದಲ್ಲಿ ಬಂಧಿತಳಾಗಿರುವ ಎ2 ಆರೋಪಿ ಅಂಬಿಕಾಳೊಂದಿಗೂ ಅಕ್ರಮ ಸಂಬಂಧ ಹೊಂದಿದ್ದ.

    ವಿಷ ಪ್ರಸಾದ ಪ್ರಕರಣದಲ್ಲಿ ಈವೆರೆಗೆ ಒಬ್ಬ ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 15 ಜನ ಮೃತಪಟ್ಟಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    – ಕಾಲ್ ರೆಕಾರ್ಡ್ ನೀಡಿದ್ದ ಕೃಷಿ ಅಧಿಕಾರಿ
    – ಕೃಷಿ ಅಧಿಕಾರಿಯ ಜೊತೆ ರೇಗಾಡಿದ್ದ ಅಂಬಿಕಾ

    ಚಾಮರಾಜನಗರ: ಕೃಷಿ ಅಧಿಕಾರಿಯೊಬ್ಬರು ನೀಡಿದ ಫೋನ್ ಕಾಲ್ ಮಾಹಿತಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಕರಣವನ್ನು ಬಯಲು ಮಾಡಲು ಸಹಾಯವಾಗಿದೆ.

    ಕೃಷಿ ಅಧಿಕಾರಿ ಶಿವಣ್ಣ ಅವರು ಮೊಬೈಲ್ ಮೂಲಕ ಆರೋಪಿ ಅಂಬಿಕಾ ಜೊತೆಗೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ದುರಂತ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪೊಲೀಸರಿಗೆ ಕಾಲ್ ರೆಕಾರ್ಡ್ ನೀಡಿದ ಪರಿಣಾಮ ಎಲ್ಲ ಆರೋಪಿಗಳ ಬಂಧನ ಕೆಲಸ ಸುಲಭವಾಗಿದೆ.

    ಸಂದೇಹ ಬಂದಿದ್ದು ಹೇಗೆ?
    ಸುಳ್ವಾಡಿ ದೇವಾಲಯದ ಪ್ರಸಾದ ಸೇವಿಸಿದವರ ದೇಹದಲ್ಲಿ ಮನೋಕ್ರೋಟೋಫೋಸ್ ಅಂಶ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಶಿವಣ್ಣ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ದಿನಗಳ ಹಿಂದೆ ಅಂಬಿಕಾ ನನ್ನ ಬಳಿ ಗಿಡಗಳಿಗೆ ರೋಗ ಬಂದಿದೆ ಎಂದು ಹೇಳಿ ಈ ಕೀಟನಾಶಕವನ್ನು ತೆಗೆದುಕೊಂಡು ಹೋಗಿದ್ದಳು. ಈ ರಾಸಾಯನಿಕ ಪ್ರಸಾದದಲ್ಲಿ ಸೇರಿದ್ದು ಹೇಗೆ ಎಂದು ಶಿವಣ್ಣ ತಲೆಕೆಡಿಸಿಕೊಂಡಿದ್ದಾರೆ.

    ಅನುಮಾನ ಬಂದ ಹಿನ್ನೆಲೆಯಲ್ಲಿ ನಾನು ಕೊಟ್ಟ ಔಷಧಿಯೇ ಈ ಅನಾಹುಕ್ಕೆ ಕಾರಣವಾಯಿತೇ ಎಂದು ಶಿವಣ್ಣ ಅವರು ಫೋನ್ ಮಾಡಿ ಅಂಬಿಕಾಳನ್ನು ಕೇಳಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದ ಅಂಬಿಕಾ ನೀವು ಕೊಟ್ಟ ಔಷಧಿಯನ್ನು ಗಿಡಕ್ಕೆ ಬಳಸಿದ್ದೇನೆ. ನಾವೇನೂ ವಿಷ ಹಾಕುವವರು ಅಂತಾ ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿ ಅಂಬಿಕಾ ರೇಗಾಡಿದ್ದಾಳೆ. ಪ್ರಕರಣದ ಕುರಿತು ಬಾಯಿ ಬಿಡಿಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಶಿವಣ್ಣ ಆಕೆಯ ಜೊತೆಗೆ ಮಾತನಾಡಿದ್ದನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಾಯ ಮಾಡಿದ್ದಾರೆ.

    ಅಂಬಿಕಾಗೆ ವಿಷ ಪಡೆದಿದ್ದ ಹೇಗೆ?:
    ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಇಮ್ಮಡಿ ಮಹದೇಸ್ವಾಮಿ ಹೊಂದಿದ್ದ. ಈ ನಿಟ್ಟಿನಲ್ಲಿ ತನ್ನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಂಬಿಕಾ ಸಹಾಯ ಕೂಡ ಪಡೆದಿದ್ದ. ಮಾರಮ್ಮ ದೇವಿ ಶಂಕುಸ್ಥಾಪನೆ ದಿನದಂದು ಪ್ರಸಾದಕ್ಕೆ ವಿಷ ಬೆರೆಸಲು ಪ್ಲಾನ್ ರೂಪಿಸಿದ್ದ ಅಂಬಿಕಾ, ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಶಿವಣ್ಣ ಅವರ ಬಳಿ ಕ್ರಿಮಿನಾಶಕ ಕೊಡಿ ಎಂದು ಕೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು.

    ಅಂಬಿಕಾ ಖತರ್ನಾಕ್ ಪ್ಲಾನ್:
    ಪ್ರಸಾದ ಮುಗಿದಿದೆ ಎಂದು ಪತಿ ಮಾದೇಶ್ ಫೋನ್ ಮಾಡಿ ಹೇಳಿದ ಮೇಲೆ ಅಂಬಿಕಾ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನಕ್ಕೆ ಹೋದ ತಕ್ಷಣ ಕೆಲಸ ಸರಿಯಾಗಿ ಆಗಿದೆಯಾ ಅಂತ ಅಡುಗೆ ಮನೆ ಹೋಗಿ ಪರಿಶೀಲನೆ ಮಾಡಿದ್ದಳು. ತಾನು ಅಂದುಕೊಂಡಂತೆ ಕೆಲಸ ಮುಗಿದಿದೆ ಎನ್ನುವುದು ಖಚಿತ ಪಡೆಸಿಕೊಂಡು ದೇವರ ಬಳಿ ಹೋಗಿ ತೀರ್ಥವನ್ನು ಕೂಡ ಪಡೆದಿರಲಿಲ್ಲ. ಈ ವೇಳೆ ದೇವಾಲಯದಲ್ಲಿಯೇ ಅರ್ಚಕ ದೊಡ್ಡಯ್ಯನಿಗೆ ಎರಡು ಸಾವಿರ ರೂ. ನೀಡಿದ್ದಾಳೆ.

    https://www.youtube.com/watch?v=9QOHKI5h4z8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಐದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಕುಟುಂಬಸ್ಥರ ಜೊತೆ ಸೇರಿ ಕಣ್ಣೀರಿಟ್ಟು ಇನ್ನೂ ಮುಂದೆ ನಾನು ದೇವಸ್ಥಾನದ ವಿಚಾರಕ್ಕೆ ಹೋಗುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪದಡಿ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಿದ್ದರು. ಈಗ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಹಾಗೂ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಚಿನ್ನಪ್ಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

    ಕುಟುಂಬದ ಸದಸ್ಯರನ್ನು ಸೇರುತ್ತಿದ್ದಂತೆ ಚಿನ್ನಪ್ಪಿ ಕಣ್ಣೀರು ಸುರಿಸಲು ಆರಂಭಿಸಿದರು. ದೇವಸ್ಥಾನದ ವಿಚಾರಕ್ಕೆ ನಾನು ಹಾಗೂ ನೀವು ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಚಿನ್ನಪ್ಪಿ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಈ ಮೂಲಕ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಧರ್ಮಾಧಿಕಾರಿ ಸ್ಥಾನದಿಂದ ಚಿನ್ನಪ್ಪಿ ಹಿಂದೆ ಸರಿಯಲಿದ್ದಾರೆ.

    ಅಕ್ರಮ ಸಂಬಂಧ ಹೊಂದಿದ್ದ ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಸಾಲೂರು ಮಠ ಹಾಗೂ ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv