ಹಾಸನ: ಗಾರ್ಡನ್ ಸ್ವಚ್ಛಗೊಳಿಸು ಎಂದು ಹೇಳಿದಕ್ಕೆ ಸಹಾಯಕನೋರ್ವ ಸೆಸ್ಕಾಂ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನದ ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.
ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಆದರೆ ಈ ಚಿಕ್ಕ ವಿಷಯಕ್ಕೆ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.
ಗಲಾಟೆಯಲ್ಲಿ ಸ್ವಾತಿ ಅವರ ಕುತ್ತಿಗೆ, ತಲೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಯ ಭೂಗತ ಲೋಕವೊಂದು ಸದ್ದು ಮಾಡುತ್ತಲೇ ಇರುತ್ತದೆ. ಕೆಲವೊಮ್ಮೆ ರೌಡಿಗಳು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಾರೆ. ಕೊನೆಗೆ ಪೊಲೀಸರು ರೌಡಿಗಳ ಮೇಲೆ ಗುಂಡು ಹಾರಿಸಿ ಬಂಧಿಸುತ್ತಾರೆ. ಈ ಎಲ್ಲ ರೌಡಿಗಳಿಗೆ ಮಾರಕಾಸ್ತ್ರಗಳು ಎಲ್ಲಿ ಸಿಗುತ್ತವೆ ಎಂಬುದನ್ನು ಪತ್ತೆ ಹಚ್ಚಲು ಪಬ್ಲಿಕ್ ಟಿವಿ ತಂಡ ಪ್ರಾಣದ ಹಂಗು ತೊರೆದು `ಡೆಡ್ಲಿ ವೆಪನ್ ಅಡ್ಡಾ’ಗೆ ಎಂಟ್ರಿ ಕೊಟ್ಟಿತು. ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ಕ್ಯಾಮೆರಾದಲ್ಲಿ ಕಂಡಿದ್ದು ಮಾತ್ರ ಬೆಚ್ಚಿ ಬೀಳುವ ದೃಶ್ಯಗಳು.
ಡೆಡ್ಲಿ ವೆಪನ್‍ಗಳ ಮಾರಾಟ ಮಾಡುವ ಸ್ಥಳದ ಬಗ್ಗೆ ಖಚಿತ ಸುಳಿವು ಸಿಕ್ಕ ತಕ್ಷಣ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್ ಟೀಂ ಪ್ರಾಣದ ಹಂಗು ತೊರೆದು ಫೀಲ್ಡಿಗೆ ಇಳಿದಿತ್ತು. ಯಶವಂತಪುರ ರೈಲು ನಿಲ್ದಾಣದ ಹಿಂಭಾಗದಲ್ಲಿರುವ ಸ್ಲಂಗೆ ಸ್ಟಿಂಗ್ ಟೀಂ ಮೊದಲು ಎಂಟ್ರಿ ಕೊಟ್ಟಿತ್ತು. ಅಲ್ಲಿ ಎದುರಾಗಿದ್ದು ಓರ್ವ ಪಂಜಾಬಿ ವ್ಯಕ್ತಿ. ನೋಡೋದಕ್ಕೆ ಅಮಾಯಕನಂತೆ ಕಂಡರೂ ಇವನು ಮೋಸ್ಟ್ ಡೆಡ್ಲಿಯೆಸ್ಟ್ ಪರ್ಸನ್. ಈತನ ಕಂಕುಳಲ್ಲೇ ಇರುವ ಬ್ಯಾಗ್‍ನಲ್ಲಿ ಮಾರಕಾಸ್ತ್ರಗಳು ಬೆಚ್ಚಗೆ, ತಣ್ಣಗೆ ಮಲಗಿರುತ್ತವೆ.
ಮಾರಕಾಸ್ತ್ರಗಳ ಖರೀದಿಗೆ ಬಂದಿದ್ದೇವೆ ಎಂದು ಪರಿಚಯ ಮಾಡಿಕೊಂಡ ತಂಡ, ಆತನೊಂದಿಗೆ ವ್ಯವಹಾರಕ್ಕೆ ಇಳಿಯಿತು. ನಮ್ಮನ್ನು ಖರೀದಿದಾರರು ಎಂದು ನಂಬಿದ ವ್ಯಕ್ತಿ ತನ್ನ ಬ್ಯಾಗ್‍ನಲ್ಲಿದ್ದ ಮಾರಕಾಸ್ತ್ರಗಳನ್ನು ತೋರಿಸಲು ಆರಂಭಿಸಿದರು. ಇನ್ನು ಚೆನ್ನಾಗಿರೋದು ಬೇಕಾ ಎಂದು ಪಕ್ಕದಲ್ಲಿಯೇ ಇದ್ದ ಚಿಕ್ಕ ಗುಡಿಸಲಿಗೆ ಕರೆದುಕೊಂಡು ವಿವಿಧ ರೀತಿಯ ಆಯುಧಗಳನ್ನು ತೋರಿಸ ತೊಡಗಿದನು. ಆತನೊಂದಿಗೆ ತಂಡದ ಸದಸ್ಯ ನಡೆಸಿರುವ ಸಂಭಾಷಣೆ ಈ ಕೆಳಗಿನಂತಿದೆ.
ಪ್ರತಿನಿಧಿ – ಏನ್ ಹೇಳ್ತಿರಾ? 400 ರಿಂದ 500 ರೂ. ಬೆಲೆನಾ? ವ್ಯಾಪಾರಿ – ಅಣ್ಣಾ ಇದು ತೆಂಗಿನಕಾಯಿ ಒಡೆಯೋ ಮಚ್ಚಲ್ಲ… ಪ್ರತಿನಿಧಿ – ಬೇರೆಯವರು ಆರ್ಡರ್ ಕೊಟ್ಟಿದ್ರಂತೆ.. ತಗೊಂಡು ಹೋಗಿಲ್ಲ.. ಈಗ ನಮಗೆ ಸಿಕ್ತಾ ಇದೆ.. ವ್ಯಾಪಾರಿ- 500 ರೂ. ಕೊಟ್ಟಿದ್ರು.. ಮತ್ತೆ ಬಂದಿಲ್ಲ ..10 ಸಾವಿರ ಕೊಟ್ರು ಈ ಲಾಂಗ್ ಸಿಗಲ್ಲ. ಆರ್ಡರ್ ಕೊಟ್ಟಿದ್ದು, ಬೇಡ ಅಂದ್ರು ಅದಕ್ಕೆ ನನ್ನ ಹತ್ರ ಉಳಿಯಿತು.. ಪ್ರತಿನಿಧಿ – ಎಷ್ಟು ಕೆ.ಜಿ ಐತೆ ಇದು.. ವ್ಯಾಪಾರಿ – 1 ಕೆ.ಜಿ ಇದೆ.. ಪ್ರತಿನಿಧಿ – ಕಬ್ಬಿಣನಾ ? ವ್ಯಾಪಾರಿ – ಇಲ್ಲ ಕಬ್ಬಿಣ ಎರಡು ಕೆ.ಜಿ ತಗೊಂಡ್ರು ವೆಸ್ಟ್.. ಕಬ್ಬಿಣದ ಬದಲು ಸ್ಟೀಲ್ ನಲ್ಲಿ ಮಾಡಿದ್ದೀನಿ….
ಮಾತು ಆರಂಭಿಸುತ್ತಿದ್ದಂತೆ ಅಡ್ವಾನ್ಸ್ ಕೊಡಿ, ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಡುತ್ತೇನೆ ಎಂದು ಹಣ ಕೊಡಿ ಎಂದು ಹಿಂದೆ ಬರುತ್ತಾರೆ. ಆದರೆ ತಂಡ ಸಬೂಬು ಹೇಳಿ ಡೆಡ್ಲಿ ವೆಪನ್ ಅಡ್ಡಾದಿಂದ ಹೊರ ಬಂದಿತ್ತು. ಈ ವ್ಯಕ್ತಿ ಮಾರಾಟ ಮಾಡುವ ಸ್ಥಳದಲ್ಲಿ ಚಿಕ್ಕ ಮಕ್ಕಳೆಲ್ಲ ಓಡಾಡಿಕೊಂಡಿರುತ್ತಾರೆ. ಮಕ್ಕಳೆದರು ಈ ರೀತಿಯ ವ್ಯವಹಾರಗಳು ನಡೆಯುತ್ತಿರುತ್ತವೆ. ಅಲ್ಲಿಂದ ಹಿಂದಿರುಗಿದ ಸ್ಟಿಂಗ್ ಆಪರೇಷನ್ ತಂಡಕ್ಕೆ ಇದೇ ವ್ಯಕ್ತಿ ನಗರದ ರಾಮಯ್ಯ ರಸ್ತೆಯ ನೇತಾಜಿ ಸರ್ಕಲ್ ನಲ್ಲಿ ಮಾರಕಾಸ್ತ್ರಗಳು ತುಂಬಿರುವ ಬ್ಯಾಗ್ ನೊಂದಿಗೆ ಸಿಕ್ಕಿದ. ಈ ವೇಳೆ ತಂಡದ ಪ್ರತಿನಿಧಿ ಆತನೊಂದಿಗೆ ಮಾತಿಗೆ ಇಳಿದಾಗ ನಡೆದ ಸಂಭಾಷಣೆ ಹೇಗಿತ್ತು.
ಪ್ರತಿನಿಧಿ – ಏಯ್ ಇದು ಮಚ್ಚು…? ವ್ಯಾಪಾರಿ – ಹೇಳು ಕಮ್ಮಿ ಮಾಡಿ ಕೊಡ್ತಿನಿ ಪ್ರತಿನಿಧಿ – 550 ರೂ.. ? ವ್ಯಾಪಾರಿ – ಇದು ಡ್ಯಾಗರ್ ತರಹ ಪ್ರತಿನಿಧಿ – ಬೇರೆ ತರಹ ಇಲ್ವಾ..? ವ್ಯಾಪಾರಿ – ಇಲ್ಲ ಖಾಲಿ ಆಗೋಯ್ತು.. ನೋಡು ನೀನು ಪ್ರತಿನಿಧಿ – ಏನಿಕ್ಕೆ ಯೂಸ್..? ವ್ಯಾಪಾರಿ – ಏನ್ ಗುರು ನಿಮಗೆ ಗೊತ್ತಿಲ್ವಾ..? ನಾವ್ ಬೇರೆ ಹೇಳಬೇಕಾ..? ಪ್ರತಿನಿಧಿ – ತುಕ್ಕು ಹಿಡಿದಿದೆ.. ವ್ಯಾಪಾರಿ – ಇಲ್ಲ ತುಕ್ಕು ಹಿಡಿದಿಲ್ಲ.. ಪ್ರತಿನಿಧಿ – ಉದ್ದ ಬರಲ್ವಾ..? ವ್ಯಾಪಾರಿ – ಅದಲ್ಲೆ ಬರಲ್ಲಾ..!
ಯಾರ ಭಯವಿಲ್ಲದೆ ನಡುರಸ್ತೆಯಲ್ಲಿಯೇ ವ್ಯಾಪಾರಕ್ಕೆ ಇಳಿಯುತ್ತಾನೆ. ರೌಡಿಗಳ ಈ ಮಾರಕಾಸ್ತ್ರಗಳ ವ್ಯವಹಾರವೇನು ರಹಸ್ಯವಾಗಿಲ್ಲ. ಜನನಿಬಿಡ ಪ್ರದೇಶದಲ್ಲಿಯೇ ಈ ವ್ಯಕ್ತಿ ರಾಜಾರೋಷವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಾನೆ. ಆದಷ್ಟು ಬೇಗ ಬೆಂಗಳೂರು ಪೊಲೀಸರು ಮಾರಕಾಸ್ತ್ರಗಳ ವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.
ಬೆಳಗಾವಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬೈಲೂರು ಗ್ರಾಮದ ಬಳಿ ನಡೆದಿದೆ.
ಸಂತಿ ಬಸ್ತವಾಡ ಗ್ರಾಮದ ನಿವಾಸಿ ನಾಗಪ್ಪಾ ಜಿಡ್ಡನ್ನವರ(45) ಕೊಲೆಯಾಗಿರುವ ಬಿಜೆಪಿ ನಾಯಕ. ನಾಗಪ್ಪಾ ಸಂತಿ ಬಸ್ತವಾಡ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಗುರುವಾರ ತಡರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಬೆಳಗಾವಿಯ ಬೈಲೂರು ಗ್ರಾಮದ ಬಳಿ ನಾಗಪ್ಪ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ರಸ್ತೆ ಬದಿ ಬೀಸಾಡಿದ್ದಾರೆ ಎಂದು ಶಂಕಿಸಲಾಗಿದೆ.
ನಾಗಪ್ಪ ಅವರನ್ನು ಕೊಲೆ ಮಾಡಿದ ಆರೋಪಿಗಳ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಕೊಲೆ ಮಾಡಲು ನಿಖರ ಕಾರಣಗಳು ಏನೆಂದು ಲಭ್ಯವಾಗಿಲ್ಲ. ಆದರೆ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗದಗ: ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಭಯದಿಂದ ಆರೋಪಿಯೂ ನೇಣಿಗೆ ಶರಣಾದ ಭಯಾನಕ ಘಟನೆ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಜಕ್ಕಲಿ ಗ್ರಾಮದ ನಿವಾಸಿ ವಿಕಾಸ್ ದೊಡ್ಡಮೇಟಿ(18) ಕೊಲೆಯಾದ ವಿದ್ಯಾರ್ಥಿ. ಈತನನ್ನು ಅದೇ ಗ್ರಾಮದ ಶೌಕತ್ ಅಲಿ ಕೊಲೆ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಿಯುಸಿ ಮುಗಿಸಿರುವ ವಿಕಾಸ್ ಸೋಮವಾರದಂದು ಸಿಇಟಿ ಪರೀಕ್ಷೆ ಬರೆಯಲು ಸಜ್ಜಾಗಿದ್ದನು. ಆದರೆ ದುರಾದೃಷ್ಟವಶಾತ್ ಕೊಲೆಯಾಗಿದ್ದಾನೆ.
ಇಂದು ಬೆಳಗ್ಗಿನ ಜಾವ ಬಹಿರ್ದೆಸೆಗೆ ತೆರಳಿದ ವೇಳೆ ವಿಕಾಸ್ ಹಾಗೂ ಶೌಕತ್ ಅಲಿ ನಡುವೆ ಜಗಳ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ವಿಕಾಸ್ ಮೇಲೆ ಕೊಡಲಿಯಿಂದ ಶೌಕತ್ ಅಲಿ ಹಲ್ಲೆ ಮಾಡಿದ್ದಾನೆ. ಇದರಿಂದ ವಿಕಾಸ್ ಕುತ್ತಿಗೆಗೆ ಬಲವಾಗಿ ಹೊಡೆತ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡಿದ ನಂತರ ಶೌಕತ್, ಭಯದಿಂದ ತಾನೂ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ನರೇಗಲ್ ಹಾಗೂ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೌಕತ್ ಅಲಿ ಮಾನಸಿಕ ಅಸ್ವಸ್ಥನೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ನರೇಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಪಾರ್ಟಿ ಬಳಿಕ ಮಾರಕಾಸ್ತ್ರಗಳಿಂದ ಅಪರಿಚಿತ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆಗೈದು ಆತನ ಬೆರಳುಗಳನ್ನು ಕತ್ತರಿಸಿ ಕೊಂಡೊಯ್ದಿರುವ ಭಯಾನಕ ಘಟನೆ ನಗರದ ಅಲಾರವಾಡ ಬ್ರಿಡ್ಜ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಹಂತಕರು ಮೊದಲು ಅಪರಿಚಿತ ವ್ಯಕ್ತಿಯ ತಲೆಗೆ ಮಾರಾಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಆತನ ಎಡಗೈನ ಮೂರು ಬೆರಳುಗಳನ್ನು ಕಟ್ ಮಾಡಿ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿರುವ ಗ್ಲಾಸ್‍ಗಳು ಪತ್ತೆಯಾಗಿದ್ದು, ಹೊಸ ವರ್ಷ ಬರುವ ಸಂತಸದಲ್ಲಿ ಮೃತನ ಜೊತೆ ಪಾರ್ಟಿ ಮಾಡಿ ಬಳಿಕ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಂತಕರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗುವುದು. ಮೃತ ವ್ಯಕ್ತಿಯ ಗುರುತು ಇನ್ನೂ ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ: ಕುಡಿದ ಮತ್ತಿನಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.
ನಗುವನಹಳ್ಳಿ ಗ್ರಾಮದ ನಿವಾಸಿ ಹರೀಶ್ ಮೃತ ದುರ್ದೈವಿ. ಗುರು ಕೊಲೆ ಮಾಡಿದ ಆರೋಪಿ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ನಗುವನಹಳ್ಳಿ ಗ್ರಾಮದ ಯುವಕರ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಗುರು ಮಚ್ಚುನಿಂದ ಹರೀಶ್ ಹಾಗೂ ಆನಂದ್ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ ಆನಂದನಿಗೆ ತೀವ್ರವಾದ ಗಾಯವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ನಡೆಸಿದ ಗುರು ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೈಸೂರು: ಹಾಡಹಗಲೇ ದುಷ್ಕರ್ಮಿಗಳ ತಂಡ ಯುವಕನೊಬ್ಬನನ್ನು ಅಪಹರಣ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.
ಸಾರ್ವಜನಿಕರ ಎದುರೇ ಮಾರಕಾಸ್ತ್ರ ಝಳಪಿಸಿದ ಗ್ಯಾಂಗ್ ಇನ್ನೋವಾ ಕಾರಲ್ಲಿ ಯುವಕನನ್ನು ಕಿಡ್ನಾಪ್ ಮಾಡಿದೆ. ರಾಜೀವ ನಗರದಲ್ಲಿ ಕೆಎ02, ಡಿ 233 ನಂಬರ್‍ನ ಕಾರಲ್ಲಿ ಬಂದ ಖದೀಮರು ಟೀ ಅಂಗಡಿ ಮುಂದೆ ನಿಂತಿದ್ದ ಯುವಕನನ್ನು ಅಪಹರಿಸಿದ್ದಾರೆ.
ಈ ವೇಳೆ ಗುಂಪಿನಿಂದ ತಪ್ಪಿಸಿಕೊಳ್ಳಲು ಯುವಕ ಯತ್ನಿಸಿದ್ದು, ಬೆನ್ನು ಹತ್ತಿ ಆತನ್ನನು ಹಿಡಿದು ಕಾರಿಗೆ ಹಾಕಿಕೊಂಡು ತಂಡ ಅಲ್ಲಿಂದ ಪರಾರಿಯಾಗಿದೆ. ಹಣಕಾಸು ವಿಷಯಕ್ಕೆ ಕಿಡ್ನಾಪ್ ಆಗಿರಬಹುದೆಂದು ಶಂಕಿಸಲಾಗಿದೆ. ಆದ್ರೆ ಯುವಕ ಯಾರು ಅನ್ನೋದು ಇನ್ನೂ ಖಚಿತವಾಗಿಲ್ಲ.
ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ಮಾಹಿತಿ ನೀಡಲು ಹೆದರುತ್ತಿದ್ದಾರೆ. ಪೊಲೀಸರು ಯುವಕನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಈ ಪುಂಡರ ಹಾವಳಿ ತಡೆಯೋದೇ ಪೊಲೀಸರಿಗೊಂದು ಸವಾಲಾಗಿ ಪರಿಣಮಿಸಿದೆ. ಬುಧವಾರ ತಡರಾತ್ರಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರಿನ ಕಾಲೋನಿಯಲ್ಲಿ ಪುಂಡರು ತಮ್ಮ ಆಟಾಟೋಪ ಮೆರೆದಿದ್ದಾರೆ.
ಮೂರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಕಾರು, ಆಟೋಗಳ ಮೇಲೆ ಲಾಂಗು ಮಚ್ಚಿನಿಂದ ಮನಸೋ ಇಚ್ಚೆ ಬೀಸಿ ಗಾಜನ್ನ ಪುಡಿಗೈದಿದ್ದಾರೆ. ಅಷ್ಟೇ ಅಲ್ಲದೆ ದಾರಿಹೋಕರ ಮೇಲೂ ಲಾಂಗುಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ನೂತನ್ ಗೌಡ ಎಂಬವರ ಮೇಲೂ ಲಾಂಗು ಬೀಸಿ ಗಂಭೀರ ರೀತಿಯಲ್ಲಿ ಗಾಯಗೊಳಿಸಿದ್ದಾರೆ. ಅದೇ ರೀತಿ ಗಂಭೀರ ಗಾಯಗೊಂಡಿರುವ ಆನಂದ್ ಎಂಬವರು ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಈಗಾಗಲೇ ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಸದ್ಯ ಆರೋಪಿಗಳ ಪತ್ತೆಗಾಗಿ ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.
ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಘಟನೆ ಕಲಬುರಗಿ ತಾಲೂಕಿನ ನಂದೂರ(ಬಿ) ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಮೃತ ಯುವಕನನ್ನು ಮಂಜುನಾಥ್ ಮಾಶಾಳ ಎಂಬುವುದಾಗಿ ಗುರುತಿಸಲಾಗಿದ್ದು, ಅದೇ ಗ್ರಾಮದವನು ಎನ್ನಲಾಗಿದೆ.
ಕೊಲೆಯಾದ ಯುವಕನ ಮೇಲೆ ಕೂಡ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳಿವೆ ಎಂಬುವುದಾಗಿ ಪೊಲಿಸರು ತಿಳಿಸಿದ್ದಾರೆ. ಆದ್ರೆ ಈ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಸದ್ಯ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.