Tag: ಮಾಯಾಂಕ್ ಅಗರ್ವಾಲ್

  • 100 ಪ್ಲಸ್ ಸ್ಟ್ರೈಕ್ ರೇಟ್, 13 ಶತಕ – ಗಿಲ್, ಶಾ ಹಿಂದಿಕ್ಕಿ ಮಾಯಾಂಕ್ ವಿಂಡೀಸ್ ಸರಣಿಗೆ ಆಯ್ಕೆ

    100 ಪ್ಲಸ್ ಸ್ಟ್ರೈಕ್ ರೇಟ್, 13 ಶತಕ – ಗಿಲ್, ಶಾ ಹಿಂದಿಕ್ಕಿ ಮಾಯಾಂಕ್ ವಿಂಡೀಸ್ ಸರಣಿಗೆ ಆಯ್ಕೆ

    ಮುಂಬೈ: ಡಿಸೆಂಬರ್ 15 ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯದ ಏಕದಿನ ಸರಣಿಗೆ ಭಾರತ ತಂಡಕ್ಕೆ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರು ಆಯ್ಕೆಯಾಗಿದ್ದಾರೆ.

    ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ, ಅವರ ಬದಲಿಗೆ ಬಿಸಿಸಿಐ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ವಿಡೀಸ್ ವಿರುದ್ಧದ ಟಿ-20 ಸರಣಿಗೂ ಶಿಖರ್ ಧವನ್ ಅವರ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು.

    ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಓಪನರ್ ಆಗಿರುವ ಮಾಯಾಂಕ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಧವನ್ ಅವರ ಬದಲಿಗೆ ಏಕದಿನ ಸರಣಿಗೆ ಆಯ್ಕೆಯಲ್ಲಿ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ನಡುವೆ ಪೈಪೋಟಿ ಇತ್ತು. ಈ ಮೂವರಲ್ಲಿ ಬಿಸಿಸಿಐ ಕೊನೆಯದಾಗಿ ಮಾಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ.

    ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಾಯಾಂಕ್ ಅಗರ್ವಾಲ್ ಏಕದಿನ ಮಾದರಿಯಲ್ಲಿ ಒಳ್ಳೆಯ ಲಯದಲ್ಲಿ ಇದ್ದಾರೆ. ಲಿಸ್ಟ್ ಎ ಪಂದ್ಯಗಳಲ್ಲಿ 101.57 ಸ್ಟ್ರೈಕ್ ರೇಟ್, 50 ಸರಾಸರಿಯಲ್ಲಿ 13 ಶತಕಗಳನ್ನು ಸಿಡಿಸಿದ್ದಾರೆ. ಈ ಕಾರಣದಿಂದ ಮಾಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಧವನ್ ಅವರ ಬದಲಿಗೆ ಆಯ್ಕೆ ಮಾಡಿದೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಸರಣಿಯನ್ನು ಆಡುತ್ತಿರವ ಇಂಡಿಯಾ ಮೂರು ಪಂದ್ಯದ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇಂದು ಮುಂಬೈನ ವಾಖೆಂಡೆ ಮೈದಾನದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇದಾದ ನಂತರ ಡಿಸೆಂಬರ್ 15 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಚೆನ್ನೈ (ಡಿಸೆಂಬರ್ 15), ವಿಶಾಖಪಟ್ಟಣಂ (ಡಿಸೆಂಬರ್ 18) ಮತ್ತು ಕಟಕ್ (ಡಿಸೆಂಬರ್ 22) ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.

    ಭಾರತದ ಏಕದಿನ ತಂಡ
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

  • ವಿಶ್ವಕಪ್‍ನಿಂದ ವಿಜಯ್ ಶಂಕರ್ ಔಟ್ – ಕನ್ನಡಿಗ ಮಯಾಂಕ್ ಆಯ್ಕೆ ಸಾಧ್ಯತೆ

    ವಿಶ್ವಕಪ್‍ನಿಂದ ವಿಜಯ್ ಶಂಕರ್ ಔಟ್ – ಕನ್ನಡಿಗ ಮಯಾಂಕ್ ಆಯ್ಕೆ ಸಾಧ್ಯತೆ

    ನವದೆಹಲಿ: ವಿಶ್ವಕಪ್‍ನಲ್ಲಿ ಭಾರತಕ್ಕೆ ಸಾಲು ಸಾಲು ಗಾಯದ ಸಮಸ್ಯೆ ಕಾಡುತ್ತಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯದ ಸಮಸ್ಯೆಯಿಂದ ಹೊರಹೋಗಿದ್ದರು. ಈಗ ಭಾರತಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು ಆಲ್‍ರೌಂಡರ್ ವಿಜಯ್ ಶಂಕರ್ ಕೂಡ ಹೊರಹೋಗಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್  ಅಗರ್ವಾಲ್‍ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ನೆಟ್‍ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿತ್ತು. ನಂತರ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ಮತ್ತೆ ಆ ಗಾಯದ ಸಮಸ್ಯೆ ಹೆಚ್ಚು ಉಲ್ಬಣವಾಗಿರುವ ಕಾರಣ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.

    ಈಗ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿತ್ತು. ಇದರಿಂದ ಈಗ ಅವರ ಗಾಯದ ಪರಿಸ್ಥಿತಿ ಉತ್ತಮವಾಗಿಲ್ಲ ಮತ್ತು ಅವರು ಮುಂದಿನ ಪಂದ್ಯಗಳನ್ನು ಆಡಲು ಆಗುವುದಿಲ್ಲ. ಅವರನ್ನು ಭಾರತಕ್ಕೆ ವಾಪಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ.

    ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಿಜಯ್ ಶಂಕರ್ ಅವರು ಪಾಕಿಸ್ತಾನ ವಿರುದ್ಧದ ತನ್ನ ಮೊದಲ ಪಂದ್ಯದ ಮೊದಲನೇ ಎಸೆತದಲ್ಲಿ ವಿಕೆಟ್ ಕಿತ್ತು ಮಿಂಚಿದ್ದರು. ವಿಶ್ವಕಪ್‍ನಲ್ಲಿ ಭಾರತದ ಪರ ಎರಡು ಪಂದ್ಯಗಳನ್ನು ಆಡಿದ ವಿಜಯ್ ಶಂಕರ್ 58 ರನ್ ಗಳಿಸಿ 2 ವಿಕೆಟ್ ಪಡೆದಿದ್ದರು.

    ಈಗ ವಿಜಯ್ ಶಂಕರ್ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ರಿಷಬ್ ಪಂತ್ ವಿಫಲವಾದರೆ ಕೆ.ಎಲ್ ರಾಹುಲ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಿ ಮಯಾಂಕ್  ಅಗರ್ವಾಲ್ ಅವರನ್ನು ಆರಂಭಿಕನಾಗಿ ಆಡಿಸಲು ಟೀಂ ಇಂಡಿಯಾ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಆಲ್‍ರೌಂಡರ್ ವಿಜಯ್ ಶಂಕರ್ ಅವರು ಕಾಲಿನ ಬೆರಳಿಗೆ ಪೆಟ್ಟಗಿದೆ ಅವರ ಬದಲು ರಿಷಬ್ ಪಂತ್ ಅವರನ್ನು ಆಡಿಸಲಾಗುತ್ತಿದೆ ಎಂದು ಹೇಳಿದ್ದರು. ಈಗ ವಿಶ್ವಕಪ್‍ನಿಂದಲೇ ಹೊರಹೋಗಿರುವ ವಿಜಯ್ ಶಂಕರ್ ಅವರ ಬದಲು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಟೀಂ ಇಂಡಿಯಾದಲ್ಲಿ ಕನ್ನಡಿಗ ಮಾಯಾಂಕ್‍ಗೆ ಸ್ಥಾನ ಖಚಿತ!

    ಟೀಂ ಇಂಡಿಯಾದಲ್ಲಿ ಕನ್ನಡಿಗ ಮಾಯಾಂಕ್‍ಗೆ ಸ್ಥಾನ ಖಚಿತ!

    ಮುಂಬೈ: ದೇಶಿಯ ಕ್ರಿಕೆಟ್‍ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಬಿಸಿಸಿಐ ಆಯ್ಕೆ ಸಮಿತಿ ನಿರ್ಲಕ್ಷ್ಯದಿಂದ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ವಿಫಲವಾಗಿದ್ದ ಕನ್ನಡಿಗ ಮಾಯಾಂಕ್ ಅಗರ್ವಾಲ್ ತಂಡದಲ್ಲಿ ಸ್ಥಾನ ಪಡೆಯವುದು ಬಹುತೇಕ ಖಚಿತವಾಗಿದೆ.

    ಮಾಯಾಂಕ್‍ರ ಪ್ರದರ್ಶನವನ್ನು ನಿರಂತವಾಗಿ ಗಮನಿಸುತ್ತಿದ್ದು, ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಬ್ಯಾಟಿಂಗ್ ಸಾಮರ್ಥ್ಯವನ್ನು ಕಾಯ್ದುಕೊಂಡಿದ್ದಾರೆ. ಆಸೀಸ್ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲೂ ಅರ್ಧ ಶತಕ ಸಿಡಿಸಿದ್ದಾರೆ. ಇದರ ಹೊರತಾಗಿಯೂ ಅಗರ್ವಾಲ್ ಟೀಂ ಇಂಡಿಯಾ ಕ್ಯಾಪ್ ಧರಿಸದಿರುವುದು ಕ್ರಿಕೆಟ್ ವಿಶ್ಲೇಷಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ನಿರಾಸೆ ತಂದಿದೆ. ಶೀಘ್ರವೇ ತಂಡಕ್ಕೆ ಮಾಯಾಂಕ್ ಸೇರ್ಪಡೆಯಾಗಲಿದ್ದಾರೆ ಎಂದು ಪ್ರಸಾದ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಈಗಾಗಲೇ ಟೀಂ ಇಂಡಿಯಾ ಮುಖ್ಯ ಕೋಚ್ ಹಾಗೂ ಕರ್ನಾಟಕ ತಂಡದ ಕೋಚ್ ಗಳಿಗೆ ಅಗರ್ವಾಲ್ ಬ್ಯಾಟಿಂಗ್ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಹೆಚ್ಚಿನ ಅವಕಾಶಗಳನ್ನು ನೀಡಲು ತಿಳಿದ್ದೇವೆ ಎಂದು ಪ್ರಸಾದ್ ಹೇಳಿದ್ದಾರೆ.

    ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮಾಯಾಂಕ್ 105.46 ಸರಾಸರಿಯಲ್ಲಿ 1160 ರನ್ ಸಿಡಿಸಿದ್ದಾರೆ. ಇದರಲ್ಲಿ ಐದು ಶತಕಗಳು ಸೇರಿದೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಮಾಯಾಂಕ್ 3 ಶತಕ ಸಿಡಿಸಿದ್ದರು. 2018 ಐಪಿಎಲ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ್ದರೂ ಇಂಡಿಯಾ ಎ ತಂಡ ಇಂಗ್ಲೆಂಡ್ ವಿರುದ್ಧ ಆಡಿದ್ದ ಟೂರ್ನಿಯಲ್ಲಿ ಮತ್ತೆ ಮಿಂಚಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 220 ರನ್ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv